ಶನಿವಾರ, ಡಿಸೆಂಬರ್ 7, 2019
16 °C

ವಸ್ತುವಿಷಯವಿದ್ದರೆ ಸಿನಿಮಾ ಓಡುತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಸ್ತುವಿಷಯವಿದ್ದರೆ ಸಿನಿಮಾ ಓಡುತ್ತೆ

ಬೆಂಗಳೂರು: ‘ವಸ್ತುವಿಷಯ ಚೆನ್ನಾಗಿದ್ದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ಪ್ರದರ್ಶನ ಕಾಣುತ್ತದೆ’ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಕರ್ನಾಟಕ ಚಲನಚಿತ್ರಅಕಾಡೆಮಿಯು ನಗರದ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಮಂಗಳವಾರ ಆಯೋಜಿಸಿದ್ದ ‘ಒಂದು ಮೊಟ್ಟೆಯ ಕಥೆ: ಚಿತ್ರ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಪ್ಪತ್ತು ವರ್ಷಗಳ ಹಿಂದೆ, ನನ್ನ ಅಮೆರಿಕಾ–ಅಮೆರಿಕಾ ಸಿನಿಮಾವನ್ನು ಸಣ್ಣ ಚಿತ್ರಮಂದಿರದಲ್ಲಿ ಮೊದಲು ಬಿಡುಗಡೆ ಮಾಡಿದೆ. ಅದು ಬಹಳ ದಿನ ಪ್ರದರ್ಶನ ಕಾಣುವುದಿಲ್ಲ ಎಂದು ಕೆಲವರು ಹೇಳಿದ್ದರು. ವಸ್ತುವಿಷಯದಿಂದಾಗಿಯೇ ಅದು ಚಿತ್ರಮಂದಿರದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿತು’ ಎಂದು ನೆನಪು ಹಂಚಿಕೊಂಡರು.

ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ‘ಹಿಂದೆ ಅತ್ಯುತ್ತಮ ಸಿನಿಮಾ ನಿರ್ಮಿಸುವ ಸಂಸ್ಥೆಗಳಿದ್ದವು. ಇಂದು, ಪವನ್‌ ಕುಮಾರ್‌ ಅಂತವರು ಉತ್ತಮ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಬೇಕಿದೆ’ ಎಂದರು.

‘ಜನರ ಬಾಯಿಮಾತಿನ ಪ್ರಚಾರದಿಂದ ಸಿನಿಮಾಗಳು ಯಶಸ್ವಿಯಾಗುತ್ತಿವೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಂದಾಗಲೇ ಕನ್ನಡ ಚಿತ್ರೋದ್ಯಮ ಬೆಳೆಯುತ್ತದೆ’ ಎಂಬ ಆಶಯ ವ್ಯಕ್ತಪಡಿಸಿದರು.

ಚಿತ್ರನಿರ್ಮಾಪಕ ಪವನ್‌ ಕುಮಾರ್‌, ‘ಚಿತ್ರದ ಕಥಾವಸ್ತುವಿನ ಮೇಲೆ ಆತ್ಮವಿಶ್ವಾಸವಿತ್ತು. ಚಿತ್ರ ಬಿಡುಗಡೆ ಮುನ್ನ, ಜನ ಇಷ್ಟಪಡುತ್ತಾರೆಯೇ ಎಂಬ ಅನುಮಾನವಿತ್ತು. ಈಗ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)