ವಿಠಲಾಪುರ ಕೆರೆಯಲ್ಲಿ ನಿಂತ ಮಳೆ ನೀರು

7

ವಿಠಲಾಪುರ ಕೆರೆಯಲ್ಲಿ ನಿಂತ ಮಳೆ ನೀರು

Published:
Updated:
ವಿಠಲಾಪುರ ಕೆರೆಯಲ್ಲಿ ನಿಂತ ಮಳೆ ನೀರು

ಕುಷ್ಟಗಿ: ತಾಲ್ಲೂಕಿನ ವಿಠಲಾಪುರ ಕೆರೆಯನ್ನು  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಪುನಶ್ಚೇತನಗೊಳಿಸಲಾಗಿದೆ. ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗಿದ್ದು, ಗ್ರಾಮಸ್ಥರು ಹರ್ಷಗೊಂಡಿದ್ದಾರೆ.

ಸುಮಾರು 40 ಎಕರೆ ವಿಸ್ತೀರ್ಣದ ಕೆರೆ ಇದಾಗಿದ್ದು, ಸಣ್ಣ ನೀರಾವರಿ ಇಲಾಖೆಯಡಿ ಇದೆ. ಹಲವು ವರ್ಷಗಳಿಂದ ಹೂಳು ತೆಗೆಯದ ಕಾರಣ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತಿರಲಿಲ್ಲ. ಹೀಗಾಗಿ, ಕೆರೆ ಇದ್ದೂ ಪ್ರಯೋಜನಕ್ಕೆ ಬಾರದಂತಾಗಿತ್ತು.

ಸದ್ಯ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೆರೆಯಲ್ಲಿದ್ದ ಶೇ 90ರಷ್ಟು ಹೂಳು ತೆಗೆಯಲಾಗಿದ್ದು,  ಒಂದೇ ಮಳೆಗೆ ಕೆರೆಯಲ್ಲಿ ಶೇ 30ರಷ್ಟು ನೀರು ಸಂಗ್ರಹವಾಗಿದೆ. 

ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಲ ಸಂರಕ್ಷಣೆ ಕೆಲಸಕ್ಕೂ ಮುಂದಾಗಿದೆ.

‘ನಮ್ಮೂರು ನಮ್ಮ ಕೆರೆ’ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ₹ 10 ಲಕ್ಷ ವೆಚ್ಚದಲ್ಲಿ  ಈ ಕೆರೆಯ ಹೂಳೆತ್ತುವ ಕೆಲಸ ಕೈಗೆತ್ತಿಕೊಂಡು,  ಕೋಡಿ ದುರಸ್ತಿ, ಕೆರೆ ಏರಿಯ ಸುತ್ತ ಸ್ವಚ್ಛಗೊಳಿಸಿ ವಿವಿಧ ಸಸಿ ನೆಡುವ ಕೆಲಸವನ್ನೂ ಮಾಡಿದೆ.

‘ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನಮ್ಮೂರ ಕೆರೆ ಹೂಳು, ಮುಳ್ಳುಕಂಟಿ, ಕುರುಚಲು ಗಿಡಗಳಿಂದ ಆವೃತವಾಗಿತ್ತು. ಆದರೆ, ಈಗ ಆ ಚಿತ್ರಣ ಬದಲಾಗಿದೆ’ ಎಂದು ಗ್ರಾಮಸ್ಥರು ಹೇಳಿದರು.

ಧರ್ಮಸ್ಥಳ ಸಂಸ್ಥೆ ಸಿಬ್ಬಂದಿ ಹಾಗೂ ಗ್ರಾಮದ ಜನರ ಅವಿರತ ಶ್ರಮದಿಂದ ಈ ವರ್ಷದ ಮಾರ್ಚ್‌ 18ರಂದು ಆರಂಭಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಜೂನ್‌ 22ರವರೆಗೆ (96 ದಿನ) ನಡೆಯಿತು. ಕೆಲವು ರೈತರು ಫಲವತ್ತಾದ ಹೂಳನ್ನು ತಮ್ಮ ಹೊಲಗಳಿಗೆ ಹಾಕಿದ್ದಾರೆ.  

‘ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿದರೆ ಸುಮಾರು ಮೂರು ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಇದರಿಂದ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬಹುದು. ಜತೆಗೆ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನಾಯಕ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆ ಹಸ್ತಾಂತರ:  ಕೆರೆಯನ್ನು ಮಂಗಳವಾರ (ಜುಲೈ 18) ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.

* * 

ಗ್ರಾಮಸ್ಥರ ಸಹಕಾರದಿಂದ ಕೆರೆಯ ಹೂಳು ತೆಗೆಯಲಾಗಿದೆ. ಉತ್ತಮ ಮಳೆಯಾಗಿ ಕೆರೆ ಭರ್ತಿಯಾದರೆ ರೈತರಿಗೆ ಅನುಕೂಲವಾಗಲಿದೆ

ವಿನಾಯಕ ನಾಯಕ, ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry