ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು–ಕೊರತೆ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ವಾಹನ ಸಂಚಾರ ಸುಗಮಗೊಳಿಸಿ

ನಾಗರಬಾವಿ ಕಡೆಯಿಂದ ಹಳೆಯ ರಿಂಗ್ ರಸ್ತೆಗೆ (ಕೆಂಗೇರಿ-ಮಾಗಡಿ ರಸ್ತೆ) ಬರುವ ವಾಹನಗಳು ಕೆಂಗುಂಟೆ ಸಿಗ್ನಲ್ ಹತ್ತಿರ ಜಾಮ್ ಆಗುತ್ತಿದ್ದೆ. ಮೆಟ್ರೋ ಹೋಟೆಲ್ ನಿಂದ ಹಿಡಿದು ಟ್ರಾಫಿಕ್ ಸಿಗ್ನಲ್‌ವರೆಗೂ ಪಾದಚಾರಿಗಳ ಜಾಗವನ್ನು ತಿಂಡಿ ತಿನಸುಗಳ ಗಾಡಿ, ಅಂಗಡಿಗಳು, ಮೀನು ಮಾರಾಟ ಕೇಂದ್ರ, ಚಾಪೆ ಹೆಣಿಯುವವರು ಆಕ್ರಮಿಸಿಕೊಂಡಿದ್ದಾರೆ. ಇದರ ಮಧ್ಯೆ ಸಾರ್ವಜನಿಕ ಶೌಚಾಲಯವೂ ಸೇರಿಕೊಂಡು ಜನ ದಟ್ಟಣೆ ಹೆಚ್ಚಿದೆ.

ಅಂಬೇಡ್ಕರ್ ಕಾಲೇಜ್ ಕಡೆ ಸಂಚರಿಸುವ ಬಿಎಂಟಿಸಿ ಬಸ್ಸುಗಳು ಇದನ್ನೇ ಕೊನೆಯ ನಿಲ್ದಾಣ ಮಾಡಿಕೊಂಡಿವೆ. ಮತ್ತು ಬಸ್ಸುಗಳು 'ಯು' ತಿರುವು ಮಾಡುವುದರಿಂದ ಇನ್ನಷ್ಟು ಸಮಸ್ಯೆಯಾಗುತ್ತಿದೆ. ಇದರ ಬದಲಾಗಿ ಅಂಬೇಡ್ಕರ್ ಕಾಲೇಜು ಎದುರು ತಿರುವು ತೆಗೆದುಕೊಳ್ಳುವಂತೆ ಮಾಡಿದರೆ ವಾಹನ ದಟ್ಟಣೆ ಕಮ್ಮಿಯಾಗಲಿದೆ. ಅತಿಯಾದ ಸಂದಣಿಯಿಂದಾಗಿ ವಾಹನ ಸವಾರರಿಗೆ ಸಮಯ ವ್ಯರ್ಥ್ಯವಾಗುತ್ತಿದೆ. ಆದ್ದರಿಂದ ಈ ಜಂಕ್ಷನ್‌ನಲ್ಲಿ ಶೀಘ್ರವಾಗಿ ವಾಹನ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕಾಗಿ ಮನವಿ.

***

ಓಡಾಡಲು ದಾರಿ ಇರಲಿ
ಈಗ ಹೊಸಕೆರೆಹಳ್ಳಿ ಕ್ರಾಸ್ ಎನ್‌ಸಿಇಆರ್‌ಟಿ ಮುಂದಿನ ರಿಂಗ್ ರಸ್ತೆಯ ಅಂಡರ್‌ಪಾಸ್ ಕಾಮಗಾರಿ ಕೆಲವು ದಿನಗಳಿಂದ ಸ್ಥಗಿತಕೊಂಡಿದೆ. ಇಲ್ಲಿ ಕಾಮಗಾರಿ ನಡೆಯುತ್ತಿದ್ದಿದ್ದರಿಂದ ಪಕ್ಕದಲ್ಲಿದ್ದ ದಾರಿಯನ್ನೇ ಸಾರ್ವಜನಿಕರು ಓಡಾಡಲು ಬಳಸುತ್ತಿದ್ದರು.

ಆದರೆ ಈಗ ಆ ಜಾಗದಲ್ಲಿ ದಿನವೂ ಕೆಡವಿದ ಮನೆಗಳ ವಸ್ತುಗಳನ್ನು ಹಾಕುತ್ತಿರುವ ಕಾರಣ ಇರುವ ದಾರಿಯೂ ಬಂದ್ ಆಗಿದೆ. ದಯವಿಟ್ಟು ಕಾಮಗಾರಿ ಮೇಲ್ವಿಚಾರಣೆ ನಡೆಸುವ ಇಂಜಿನಿಯರ್‌ಗಳು ಪರಿಶೀಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
ಸತ್ಯಬೋಧ, ಹೊಸಕೆರೆಹಳ್ಳಿ ಬಡಾವಣೆ

***

ಕುಸಿದಿರುವ ಅಪಾಯಕಾರಿ ಮೋರಿ

ಬೆಂಗಳೂರು ದಕ್ಷಿಣ ಕ್ಷೇತ್ರದ ಬೊಮ್ಮನಹಳ್ಳಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ, ವಸಂತಪುರ ವಾರ್ಡ್ 197 ರಲ್ಲಿ ಕೋಣನಕುಂಟೆ ಕ್ರಾಸ್-ಉತ್ತರಹಳ್ಳಿ ಮುಖ್ಯ ರಸ್ತೆಯಿಂದ ವಸಂತವಲ್ಲಭ ನಗರ ಬಡಾವಣೆಯನ್ನು ಸಂಪರ್ಕಿಸುವ ರಸ್ತೆಯ ಮೋರಿ ಕುಸಿದು ಬಹಳ ದಿನಗಳಾಗಿವೆ. ಇದನ್ನು ನಿರ್ಮಿಸಿದ ಕೆಲವೇ ದಿನಗಳಲ್ಲಿ ಇದು ಹಾಳಾಗಿದೆ.

ಮೊದಲು ಒಂದೇ ಕಡೆ ಸುಮಾರು 4 ಅಡಿ ಅಗಲದಷ್ಟು ಕುಸಿದಿದ್ದ ಮೋರಿಯಲ್ಲಿ, ಈಗ ಮತ್ತೆ ಇನ್ನೊಂದು ಕಡೆ 2 ಅಡಿಗಳಷ್ಟು ಬಾಯಿ ತೆರೆದಿದೆ. ಪಕ್ಕದಲ್ಲೇ ಕಾವೇರಿ ನೀರಿನ ಬೃಹತ್ ಕೊಳವೆ ಇರುವುದರಿಂದ ಇದನ್ನು ಪೈಪ್-ಲೈನ್ ಸ್ಟಾಪ್ ಎಂದು ಗುರುತಿಸುತ್ತಾರೆ.

ಈ ಕುಸಿದ ಮೋರಿಯಲ್ಲಿ ಅನೇಕ ಬೈಕು ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಕಾರಿನ ಚಕ್ರಗಳು ಇಳಿಬಿದ್ದು ಸಿಕ್ಕಿ ಒದ್ದಾಡಿದ್ದಾರೆ. ಪಾಪ ಯಾರೊ ಗುಂಡಿಗೆ ಕೈಗೆ ಸಿಕ್ಕಿದ್ದನ್ನೆಲ್ಲಾ ತುಂಬಿ ಮುಚ್ಚಲು ಪ್ರಯತ್ನಿಸಿದ್ದಾರೆ. ಈ ಪ್ರದೇಶದ ಸಿಟಿ ಇಂಜನಿಯರಿಂಗ್ ಕಾಲೇಜು, ಇಸ್ಕಾನ್ ಇತ್ಯಾದಿ ಕಡೆ ವಾಹನ ತಿರುಗಿಸುವವರಿಗೆ ಅಪಾಯ ತಪ್ಪಿದ್ದಲ್ಲ. ಸದಾ ಗಿಜಿಗುಡುವ ವಾಹನಗಳಿಂದ ತುಂಬಿರುವ ಇಂತಹ ಮುಖ್ಯರಸ್ತೆಯಲ್ಲಿನ ದೋಷ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಯದಿರುವುದು ಆಶ್ಚರ್ಯ. ಇದನ್ನು ಮೊದಲು ಸರಿಪಡಿಸಿ ಎಂದು ವಿನಂತಿ.
ಎನ್.ಗಿರೀಶ್ ಬಾಬು, ವಸಂತವಲ್ಲಭನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT