7

ಕಡಿಮೆ ಬೆಲೆಗೆ ಒಂದು ಸ್ಮಾರ್ಟ್‌ಫೋನ್

ಯು.ಬಿ. ಪವನಜ
Published:
Updated:
ಕಡಿಮೆ ಬೆಲೆಗೆ ಒಂದು ಸ್ಮಾರ್ಟ್‌ಫೋನ್

ಸ್ಯಾನ್‌ಸುಯಿ 1947ರಲ್ಲಿ ಜಪಾನ್ ದೇಶದಲ್ಲಿ ಅಸ್ತಿತ್ವಕ್ಕೆ ಬಂದ ಎಲೆಕ್ಟ್ರಾನಿಕ್ಸ್ ಕಂಪೆನಿ. ಈ ಕಂಪೆನಿ 1977ರಲ್ಲಿ ಭಾರತಕ್ಕೆ ಕಾಲಿಟ್ಟಿತು. ಪ್ರಮುಖವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಈ ಕಂಪೆನಿ ಇಂತಹ ಬಹುತೇಕ ಕಂಪೆನಿಗಳಂತೆ ತಾನೂ ಮೊಬೈಲ್ ಫೋನ್ ಕ್ಷೇತ್ರಕ್ಕೆ ಅಡಿಯಿಟ್ಟಿತು. ಸರಳ ಫೋನ್‌ಗಳ ಜೊತೆ ಸ್ಮಾರ್ಟ್‌ಫೋನ್‌ಗಳನ್ನೂ ತಯಾರಿಸುತ್ತಿದೆ. ಈ ಕಂಪೆನಿಯ ಫೋನ್‌ಗಳು ಬಡವರನ್ನು ಉದ್ದೇಶಿಸಿ ತಯಾರಿಸಿದಂತಿವೆ. ಅತಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡುತ್ತಿದೆ. ಅಂತಹ ಒಂದು ಸ್ಮಾರ್ಟ್‌ಫೋನ್ ಸಾನ್‌ಸುಯಿ ಹೊರೈಝೊನ್ 2 (Sansui Horizon 2) ನಮ್ಮ ಈ ವಾರದ ಗ್ಯಾಜೆಟ್.

ಈ ಫೋನಿನ ವಿಮರ್ಶೆ ಮಾಡುವ ಮೊದಲು ಹಲವು ಸಲ ನಾನು ಬರೆದುದನ್ನೇ ಇನ್ನೊಮ್ಮೆ ಬರೆಯಬೇಕಾಗಿದೆ. ಯಾವುದೇ ಉತ್ಪನ್ನ ಚೆನ್ನಾಗಿದೆಯೇ ಇಲ್ಲವೇ ಎನ್ನುವುದಕ್ಕಿಂತಲೂ ನಾವು ನೀಡುವ ಹಣಕ್ಕೆ ಅದು ತಕ್ಕುದಾಗಿದೆಯೇ ಇಲ್ಲವೇ ಎಂಬುದರ ಕಡೆ ಹೆಚ್ಚಿನ ಗಮನ ನೀಡಬೇಕು. ಇದು ಕಡಿಮೆ ಬೆಲೆಯ ಫೋನ್. ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಮತ್ತು ಅವಕೆಂಪು (infrared) ಕಿರಣ ಸೂಸುವ ಕಿಂಡಿ ಇವೆ.

ಕೆಳಭಾಗದಲ್ಲಿ ಎಡ ಮೂಲೆಯಲ್ಲಿ ಮೈಕ್ರೊಎಸ್‌ಡಿ ಕಿಂಡಿ ಇದೆ. ಪರದೆಯ ಕೆಳಭಾಗದಲ್ಲಿ ಬಹುತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿರುವಂತೆ ಮೂರು ಸಾಫ್ಟ್‌ಬಟನ್‌ಗಳಿವೆ. ಹಿಂಭಾಗ ಸ್ವಲ್ಪ ದೊರಗಾಗಿದೆ. ಹಿಂಭಾಗದ ಮೇಲ್ಭಾಗದ ಮೂಲೆಯಲ್ಲಿ ಕ್ಯಾಮೆರಾ ಮತ್ತು ಅದರ ಪಕ್ಕದಲ್ಲಿ ಫ್ಲಾಶ್ ಇವೆ. ಪ್ಲಾಸ್ಟಿಕ್ ದೇಹವಿದೆ. ಹಿಂಬದಿಯ ಕವಚ ತೆಗೆಯಬಹುದು. ಕವಚ ತೆಗೆದಾಗ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಹಾಕುವ ಜಾಗ ಕಂಡುಬರುತ್ತದೆ. ಬ್ಯಾಟರಿ ತೆಗೆಯಬಹುದು ಮತ್ತು ಬದಲಾಯಿಸಬಹುದು. ದೇಹ ಗಟ್ಟಿಯಾಗಿಲ್ಲ. ತೂಕ ಎಷ್ಟು ಎಂಬ ಮಾಹಿತಿ ಎಲ್ಲೂ ದೊರೆಯಲಿಲ್ಲ. ತೂಕ ಕಡಿಮೆಯದು ಎಂಬುದು ಕೈಯಲ್ಲಿ ಹಿಡಿದಾಗ ಅನುಭವಕ್ಕೆ ಬರುತ್ತದೆ. ಒಟ್ಟಿನಲ್ಲಿ ನೋಡಿದಾಗ ಮತ್ತು ಕೈಯಲ್ಲಿ ಹಿಡಿದಾಗ ಕಡಿಮೆ ಬೆಲೆಯ ಫೋನ್ ಎಂಬುದು ಕೂಡಲೆ ಅನುಭವಕ್ಕೆ ಬರುತ್ತದೆ.

ಎರಡು ಸಿಮ್ ಕಾರ್ಡ್‌ ಹಾಕುವ ಸೌಲಭ್ಯ ಇದೆ. ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಲು ಪ್ರತ್ಯೇಕ ಜಾಗ ಇದೆ. ಅಂದರೆ ಎರಡು ಸಿಮ್ ಮತ್ತು ಮೈಕ್ರೊಎಸ್‌ಡಿ ಕಾರ್ಡ್‌ಗಳನ್ನೂ ಜೊತೆಯಾಗಿ ಬಳಸಬಹುದು. ಯುಎಸ್‌ಬಿ ಓಟಿಜಿ ಸವಲತ್ತು ಕೂಡ ಇದೆ. ಮೈಕ್ರೊಎಸ್‌ಡಿ ಕಾರ್ಡ್‌ ಅನ್ನು ಪ್ರಾಥಮಿಕ ಮೆಮೊರಿ ಎಂದು ಆಯ್ಕೆ ಮಾಡಿಕೊಳ್ಳುವ ಸವಲತ್ತೂ ಇದೆ. ಅಂದರೆ ಕಡಿಮೆ ಮೆಮೊರಿಯ ಫೋನ್ ಆಗಿದ್ದರೂ ಅದನ್ನು ಹೆಚ್ಚಿಸುವ ಸವಲತ್ತುಗಳಿವೆ ಎಂದು ತೃಪ್ತಿಪಟ್ಟುಕೊಳ್ಳಬಹುದು.

ನಾಲ್ಕು ಹೃದಯಗಳ ಪ್ರೊಸೆಸರ್ ಜೊತೆಗೆ ಗ್ರಾಫಿಕ್ಸ್‌ಗೆ ಪ್ರತ್ಯೇಕ ಪ್ರೊಸೆಸರ್ ಇರುವುದರಿಂದ ಕೆಲಸ ಮಾಡುವ ವೇಗ ಸುಮಾರಾಗಿದೆ ಎನ್ನಬಹುದು. ಈಗಾಗಲೇ ತಿಳಿಸಿದಂತೆ ಇದು ಕಡಿಮೆ ಬೆಲೆಯ ಫೋನ್. ಒಂದು ಕಿರುತಂತ್ರಾಂಶದಿಂದ (ಆ್ಯಪ್) ಇನ್ನೊಂದು ಕಿರುತಂತ್ರಾಂಶಕ್ಕೆ ವೇಗವಾಗಿ ಬದಲಾಯಿಸಲು ಸ್ವಲ್ಪ ಕಷ್ಟ. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಅನುಭವವೂ ಖುಷಿ ನೀಡುವುದಿಲ್ಲ. ಪರದೆಯ ಗುಣಮಟ್ಟ ಕಡಿಮೆ ಇದೆ. ಐಕಾನ್‌ಗಳನ್ನು ವೇಗವಾಗಿ ಸರಿಸಲು ಆಗುವುದಿಲ್ಲ. ಕೆಲವೊಮ್ಮೆ ಇದು ಟಚ್‌ಸ್ಕ್ರೀನ್ ಅಲ್ಲ, ಒತ್ತುಸ್ಕ್ರೀನ್ ಎಂಬ ಭಾವನೆ ಬರುತ್ತದೆ. ಆಟಗಳನ್ನು ಆಡುವ ಅನುಭವವೂ ಅಷ್ಟಕ್ಕಷ್ಟೆ. ಮೂರು ಆಯಾಮಗಳ ಆಟಗಳನ್ನು ಆಡುವ ಅನುಭವ ಅಷ್ಟೇನೂ ತೃಪ್ತಿದಾಯಕವಾಗಿಲ್ಲ.

ಇದರ ಆಡಿಯೊ ಅಟಕ್ಕಷ್ಟೆ. ಹಾಗೆಂದು ಹೇಳಿ ಅತಿ ಕಳಪೆಯಾಗಿಯೂ ಇಲ್ಲ. ಇಯರ್‌ಫೋನ್ ನೀಡಿಲ್ಲ. ಎಫ್‌ಎಂ ರೇಡಿಯೊ ಇದೆ. ಬಹುತೇಕ ವಿಡಿಯೊಗಳು ಪ್ಲೇ ಆಗುತ್ತವೆ. ಹೈಡೆಫಿನಿಶನ್ ವಿಡಿಯೊ ಕೂಡ ಚೆನ್ನಾಗಿ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಅಗುವುದಿಲ್ಲ. ವಿಡಿಯೊ ಚೆನ್ನಾಗಿ ಪ್ಲೇ ಆಗುತ್ತದಾದರೂ ಆಡಿಯೊ ಅಷ್ಟಕ್ಕಷ್ಟೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಆಟ ಆಡುವಾಗಲೂ ಅನುಭವಕ್ಕೆ ಬರುತ್ತದೆ. ಕ್ಯಾಮೆರಾ ವಿಭಾಗದಲ್ಲಿ ಇದು ಸಂಪೂರ್ಣ ಫೇಲು. ಹೆಸರಿಗೆ 8 ಮೆಗಾಪಿಕ್ಸೆಲ್‌ನ ಕ್ಯಾಮೆರಾ ಇದೆ. ಹಗಲು ಹೊತ್ತಿನಲ್ಲಿ ಪ್ರಕೃತಿ ದೃಶ್ಯಗಳ ಫೋಟೊ ಒಂದು ಮಟ್ಟಿಗೆ ಪರವಾಗಿಲ್ಲ ಎನ್ನುವಂತಿವೆ. ಹತ್ತಿರದ ವಸ್ತುಗಳ, ಉದಾಹರಣೆಗೆ ಹೂವುಗಳ, ಫೋಟೊಗಳು ತೃಪ್ತಿದಾಯಕವಾಗಿಲ್ಲ. ಕಡಿಮೆ ಬೆಳಕಿನ ಫೋಟೊಗಳಂತೂ ಏನೇನೂ ಚೆನ್ನಾಗಿಲ್ಲ. ಸ್ವಂತೀ ಕೂಡ ಚೆನ್ನಾಗಿಲ್ಲ.

ಬ್ಯಾಟರಿ ಶಕ್ತಿ ಕಡಿಮೆಯಾಯಿತು ಎಂದೇ ಹೇಳಬಹುದು. ಒಂದು ದಿನ ಪೂರ್ತಿ ಬಾಳಿಕೆ ಬರುವುದಿಲ್ಲ. ಕನ್ನಡದ ಯೂಸರ್ ಇಂಟರ್‌ಫೇಸ್ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಕಡಿಮೆ ಬೆಲೆಯ, ನೀಡುವ ಹಣಕ್ಕೆ ಅಲ್ಲಿಂದಲ್ಲಿಗೆ ತೃಪ್ತಿ ನೀಡಬಹುದಾದ ಫೋನ್ ಎನ್ನಬಹುದು.

***

ವಾರದ ಆಪ್ (app)

ಡೆಸ್ಮೋಸ್ ಗ್ರಾಫಿಂಗ್ ಕ್ಯಾಲ್ಕುಲೇಟರ್ (Desmos Graphing Calculator): ನೀವು ವಿಜ್ಞಾನ ಮತ್ತು ಗಣಿತ ವಿದ್ಯಾರ್ಥಿ ಆಗಿದ್ದರೆ ನಿಮಗೆ ಗಣಿತದ ಸೂತ್ರಗಳ ಗ್ರಾಫ್ ಚಿತ್ರಿಸಿ ಗೊತ್ತಿರುತ್ತದೆ. ಕೆಲವು ಕ್ಲಿಷ್ಟ ಸಮೀಕರಣಗಳ ಗ್ರಾಫ್ ಮಾಡುವುದು ತುಂಬ ಕಷ್ಟದ ಕೆಲಸ ಹಾಗೂ ಸಮಯವನ್ನು ಬೇಡುತ್ತದೆ. ಬೇರೆ ಬೇರೆ ಸಮೀಕರಣಗಳನ್ನು ಚಿತ್ರಿಸುವುದು ಮಾತ್ರವಲ್ಲ ಅವುಗಳಲ್ಲಿರುವ ಬದಲಿಕಗಳ ಬೆಲೆಗಳನ್ನು ಹೆಚ್ಚು ಕಡಿಮೆ ಮಾಡಿ ಚಿತ್ರಿಸುವುದು ಒಂದು ರೀತಿಯಲ್ಲಿ ಮನಸ್ಸಿಗೆ ಉಲ್ಲಾಸದಾಯಕ.

ನೀವು ಗಣಿತಪ್ರಿಯರಾಗಿದ್ದರೆ ಮಾತ್ರ ನಿಮಗಿದು ಮನೋಲ್ಲಾಸದಾಯಕ ಕೆಲಸ. ನೀವೇನು ಗಣಿತಪ್ರಿರಯರಾಗಿರಬಹುದು. ಆದರೆ ಪ್ರತಿ ಸಮೀಕರಣದ ಗ್ರಾಫ್ ಕೂಡ ಯಾವ ರೀತಿ ಕಾಣಿಸುತ್ತದೆ ಎಂದು ತಿಳಿಯಲು ಪ್ರತಿಯೊಂದನ್ನೂ ಚಿತ್ರಿಸಿ ನೋಡಬೇಕೇ? ಹಾಗಿದ್ದರೆ ನಿಮಗೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ ದೊರೆಯುವ ಈ Desmos Graphing Calculator ಹೆಸರಿನ ಕಿರುತಂತ್ರಾಂಶ (ಆ್ಯಪ್) ಬೇಕು. ಇದನ್ನು bit.ly/gadgetloka287 ಜಾಲತಾಣಕ್ಕೆ ಭೇಟಿ ನೀಡಿಯೂ ಪಡೆಯಬಹುದು. ಇದು ನಿಜಕ್ಕೂ ಒಂದು ಅತ್ಯುತ್ತಮ ಕಿರುತಂತ್ರಾಂಶ.

***

ಗ್ಯಾಜೆಟ್ ಸುದ್ದಿ

ಜೇನುಕುಟುಂಬದ ಆರೋಗ್ಯ ವಿಶ್ಲೇಷಣೆ: ಪ್ರಪಂಚದಾದ್ಯಂತ ಜೇನುಕುಟುಂಬಗಳ ವಿನಾಶ ದೊಡ್ಡ ಸುದ್ದಿಯಲ್ಲಿದೆ. ನಮ್ಮೂರಲ್ಲೂ ಜೇನುಕುಟುಂಬಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಜೇನು ಕೃಷಿ ಮಾಡುತ್ತಿರುವವರಿಗೆ ತಿಳಿದರುವ ಸಂಗತಿ. ವಿಜ್ಞಾನಿಗಳು ಈ ಸಮಸ್ಯೆಯ ಕಾರಣವನ್ನರಿಯಲು ತುಂಬ ಪ್ರಯತ್ನಿಸುತ್ತಿದ್ದಾರೆ. ಗ್ಯಾಜೆಟ್ ಮೂಲಕ ಕಾರಣ ಪತ್ತೆಹಚ್ಚಲು ಇಬ್ಬರು ಹೊರಟಿದ್ದಾರೆ. ಚಿಕ್ಕ ಪೆಟ್ಟಿಗೆಯೊಂದನ್ನು ಅವರು ಆವಿಷ್ಕರಿಸಿದ್ದಾರೆ. ಅದನ್ನು ಜೇನು ಪೆಟ್ಟಿಗೆಯೊಳಗೆ ಅಥವಾ ಮೇಲೆ ಇಡಬೇಕು.

ಅದು ಜೇನುಹುಳಗಳು ಮಾಡುವ ಧ್ವನಿಯನ್ನು ರೆಕಾರ್ಡ್‌ ಮಾಡಿಕೊಂಡು ಸ್ಮಾರ್ಟ್‌ಫೋನಿನಲ್ಲಿರುವ ಕಿರುತಂತ್ರಾಂಶಕ್ಕೆ ವರ್ಗಾಯಿಸುತ್ತದೆ. ಸಾವಿರಾರು ಪೆಟ್ಟಿಗೆಗಳಿಂದ ಹೀಗೆ ಸಂಗ್ರಹಿಸಿದ ಧ್ವನಿಗಳನ್ನು ಮತ್ತು ಆ ಪೆಟ್ಟಿಗೆಗಳಲ್ಲಿ ಯಾವೆಲ್ಲ ಕುಟುಂಬಗಳು ಆರೋಗ್ಯವಾಗಿ ಉಳಿದಿವೆ, ಯಾವುವು ವಿನಾಶದತ್ತ ಸಾಗುತ್ತಿವೆ ಎಂಬೆಲ್ಲ ಮಾಹಿತಿಗಳನ್ನು ವಿಶ್ಲೇಷಿಸಿ ಮುಂದಕ್ಕೆ ಯಾವ ಕುಟುಂಬ ವಿನಾಶದತ್ತ ಸಾಗಬಹುದು ಎಂಬ ಪೂರ್ವಸೂಚನೆಯನ್ನು ನೀಡುವುದು ಈ ಸಂಶೋಧನೆಯ ಉದ್ದೇಶ. ಇದನ್ನು ಮುಕ್ತ ಜ್ಞಾನ ಮತ್ತು ಗುಂಪುಗುತ್ತಿಗೆಯ ಮೂಲಕ ಸಾಧಿಸಲು ಅವರು ಹೊರಟಿದ್ದಾರೆ.

***

ಗ್ಯಾಜೆಟ್ ತರ್ಲೆ

ಒಬ್ಬಾತನ ಕೈಯಲ್ಲಿ ಐಫೋನ್ ಇತ್ತು. ಪಕ್ಕದಲ್ಲಿದ್ದವನ ಕೈಯಲ್ಲಿ ನೋಕಿಯಾ 3310 ಫೋನ್ ಇತ್ತು. ಐಫೋನ್ ಇದ್ದಾತ ನೋಕಿಯಾ ಫೋನ್ ಇದ್ದವನೊಡನೆ ಹೇಳಿದ –‘ನೀನ್ಯಾಕೆ ಒಂದು ಉತ್ತಮ ಐಫೋನ್ ತೆಗೆದುಕೊಳ್ಳಬಾರದು?

ನೋಕಿಯಾ ಫೋನಿನಾತ ಐಫೋನಿನವನಿಗೆ ಪಂಥಾಹ್ವಾನವಿತ್ತ - ’ನನ್ನ ಫೋನಿನಲ್ಲಿ ನಾನು ಏನು ಮಾಡಬಹುದೋ ಅದನ್ನು ನಿನ್ನ ಐಫೋನಿನಲ್ಲಿ ಮಾಡಲು ಸಾದ್ಯವಿಲ್ಲವಾದರೆ ನೀನು ನನಗೆ ನಿನ್ನ ಐಫೋನಿನ ಬೆಲೆಯಷ್ಟು ಹಣ ನೀಡುವಿಯಾ?’

‘ಖಂಡಿತ

ನೋಕಿಯಾ ಫೋನಿನವ ಆರಾಮವಾಗಿ ತನ್ನ ಫೋನನ್ನು ಮೇಜಿನಿಂದ ಕೆಳಗೆ ಬೀಳಿಸಿದ!

***

ಗ್ಯಾಜೆಟ್ ಸಲಹೆ

ಸಂಜಯ ಕುಮಾರರ ಪ್ರಶ್ನೆ: ನಿಮ್ಮ ಅಂಕಣದಲ್ಲಿ ಶಿಯೋಮಿ ಎಂಐ ಮ್ಯಾಕ್ಸ್ ಪ್ರೈಮ್ (Mi Max Prime) ಫೋನಿನ ವಿಮರ್ಶೆಯನ್ನು ನಾನು ಓದಿಲ್ಲ. ಯಾಕೆಂದರೆ ನನಗೆ ನಿಮ್ಮ ಕೆಲವು ಸಂಚಿಕೆಯನ್ನು ಓದಲು ಆಗಿಲ್ಲ ಮತ್ತು ನೀವು ಅದರ ವಿಮರ್ಶೆಯನ್ನು ಮಾಡರುವಿರೋ ಇಲ್ಲವೋ ನನಗೆ ತಿಳಿದಿಲ್ಲ . ನೀವು ಆ ಫೋನಿನ ವಿಮರ್ಶೆ ಮಾಡಿದ್ದರೆ ಯಾವ ದಿನಾಂಕದಂದು ಮಾಡಿರುವಿರಿ ದಯವಿಟ್ಟು ನನಗೆ ತಿಳಿಸಿ .

ಉ: ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry