7
ಸರ್ಕಾರ ಮತ್ತು ಸೇನೆ ನಡುವೆ ಮತ್ತೊಂದು ಕಾಳಗಕ್ಕೆ ಕಾರಣವಾದ ಷರೀಫ್‌ ವಿರುದ್ಧದ ವಿಚಾರಣೆ

ಪಾಕಿಸ್ತಾನದ ಒಂದು ತನಿಖೆಯ ಸುತ್ತ...

Published:
Updated:
ಪಾಕಿಸ್ತಾನದ ಒಂದು ತನಿಖೆಯ ಸುತ್ತ...

–ಸಿರಿಲ್‌ ಅಲ್ಮೇಡಾ

ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರು ಜೂನ್‌ 24ರಂದು ಲಂಡನ್‌ನಲ್ಲಿ ಸಿಟ್ಟು ಮತ್ತು ಆಕ್ರೋಶದಿಂದ ಮಾಧ್ಯಮಗೋಷ್ಠಿಯೊಂದನ್ನು ನಡೆಸಿದ್ದರು. ಅದರ ಹಿಂದಿನ ದಿನ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳ ಶಿಯಾ ಕೇರಿಗಳಲ್ಲಿ ಎರಡು ಬಾಂಬ್‌ ಸ್ಫೋಟಿಸಿ ಹತ್ತಕ್ಕೂ ಹೆಚ್ಚು ಜನರನ್ನು ಉಗ್ರರು ಕೊಂದಿದ್ದರು. ಆದರೆ ಐಷಾರಾಮಿ ಪಾರ್ಕ್‌ಲೇನ್‌ ಕಟ್ಟಡದ ಮುಂದೆ ನಿಂತು ಮಾತಾಡಿದ ಷರೀಫ್‌ ಅವರು ಈ ಬಾಂಬ್‌ ಸ್ಫೋಟದ ಬಗ್ಗೆ ಮಾತನಾಡುವ ಬದಲು ತಮ್ಮ ಕುಟುಂಬದ ಆಸ್ತಿಯ ಬಗ್ಗೆ ನಡೆಯುತ್ತಿರುವ ವಿವಾದಾತ್ಮಕ ತನಿಖೆಯ ಬಗ್ಗೆ ಮಾತನಾಡಿದರು.

ಅದಕ್ಕೂ ಒಂಬತ್ತು ದಿನಗಳ ಮೊದಲು ತನಿಖಾಧಿಕಾರಿಗಳ ಮುಂದೆ ಷರೀಫ್‌ ಹಾಜರಾಗಿದ್ದರು. ಅದರ ಬಳಿಕ ಅವರು ನಡೆಸಿದ ಮೊದಲ ಮಾಧ್ಯಮ ಗೋಷ್ಠಿ ಅದಾಗಿತ್ತು. ಕುಟುಂಬದ ಜತೆ ರಜೆ ಕಳೆಯಲು ಲಂಡನ್‌ಗೆ ಭೇಟಿ ನೀಡಿದ್ದ ಷರೀಫ್‌ ಅವರು ಈದ್‌ ವಾರಾಂತ್ಯದ ಸಂಭ್ರಮದ ಮನಸ್ಥಿತಿಯಲ್ಲಿ ಇರಲಿಲ್ಲ. ಹಲವು ಜನರನ್ನು ಬಲಿ ತೆಗೆದುಕೊಂಡ ಬಾಂಬ್‌ ಸ್ಫೋಟ ಕೂಡ ರಾಜಕೀಯದಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಲಿಲ್ಲ.

ದ್ವೇಷ ಸಾಧನೆಗಾಗಿ ತಮ್ಮ ವಿರುದ್ಧ ಭ್ರಷ್ಟಾಚಾರ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ತಮ್ಮ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ  ಪ್ರತಿಸ್ಪರ್ಧಿ ರಾಜಕಾರಣಿ ಇಮ್ರಾನ್‌ ಖಾನ್‌ ಅವರನ್ನು ಟೀಕಿಸಿದರು. ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪಾಕಿಸ್ತಾನದ ಸೇನೆ ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಇತರ ರಾಜಕಾರಣಿಗಳು ತಮಗೆ ಬೇಕಿರುವಾಗಲೆಲ್ಲ ಹೇಳಿದ್ದ ರೀತಿಯಲ್ಲಿಯೇ ಷರೀಫ್‌ ಅವರೂ ಹೇಳಿದರು.

ಹೈಡ್‌ ಪಾರ್ಕ್‌ನ ಪ್ರಸಿದ್ಧ ಸ್ಪೀಕರ್ಸ್‌ ಲೇನ್‌ನಲ್ಲಿರುವ ಪಾರ್ಕ್‌ ಲೇನ್‌ನಲ್ಲಿ ಷರೀಫ್‌ ಕುಟುಂಬ ಹೊಂದಿರುವ ಅಪಾರ್ಟ್‌ಮೆಂಟೇ ಅವರ ಎಲ್ಲ ಸಮಸ್ಯೆಗಳ ಮೂಲ. ಯಾವಾಗಲಾದರೊಮ್ಮೆ ಬಳಸುವ ಈ ಕಟ್ಟಡದ ಮುಂದೆ ನಿಂತೇ ಷರೀಫ್‌ ಮಾತನಾಡಿದರು. ಲಂಡನ್‌ ಅಪಾರ್ಟ್‌ಮೆಂಟ್‌ ಎಂದೇ ಪಾಕಿಸ್ತಾನದಲ್ಲಿ ಪ್ರಸಿದ್ಧವಾಗಿರುವ ಈ ಮನೆಯನ್ನು ಷರೀಫ್‌ ಅವರ ಕುಟುಂಬ ಮೂರು ದಶಕಗಳಿಂದ ಬಳಸುತ್ತಿದೆ. ಇದು ಭ್ರಷ್ಟಾಚಾರಕ್ಕೆ ಸಿಕ್ಕ ಪ್ರತಿಫಲ ಎಂದು ಷರೀಫ್‌ ವಿರೋಧಿಗಳು ದಶಕಗಳಿಂದ ಆರೋಪಿಸುತ್ತಾ ಬಂದಿದ್ದಾರೆ.

ಸೇನಾ ಗುಪ್ತಚರ ಸಂಸ್ಥೆಗಳ ಪ್ರತಿನಿಧಿಗಳೂ ಇದ್ದ ತನಿಖಾ ತಂಡ ಈ ತಿಂಗಳ 10ರಂದು ಪ್ರಧಾನಿ ಮತ್ತು ಅವರ ಮಕ್ಕಳ ವಿರುದ್ಧ ಆಘಾತಕಾರಿ ವರದಿಯೊಂದನ್ನು ನೀಡಿದೆ. ಲಂಡನ್‌ ಅಪಾರ್ಟ್‌ಮೆಂಟ್‌ ತಮ್ಮ ಸ್ವಾಧೀನಕ್ಕೆ ಹೇಗೆ ಬಂತು ಎಂಬ ಷರೀಫ್‌ ಅವರ ವಿವರಣೆಯನ್ನು ತನಿಖಾ ತಂಡ ತಿರಸ್ಕರಿಸಿದೆ. ಅವರ ಘೋಷಿತ ಆದಾಯದ ವ್ಯಾಪ್ತಿಯಲ್ಲಿ ಈ ಮನೆ ಬರುವುದಿಲ್ಲ ಎಂದು ತಂಡ ಹೇಳಿದೆ.

ಷರೀಫ್‌ ಅವರ ರಾಜಕೀಯ ಉತ್ತರಾಧಿಕಾರಿಯಾಗುವ ಸಾಧ್ಯತೆ ಇರುವ ಮಗಳು ಮರಿಯಮ್‌ ಹುಸಿ ದಾಖಲೆಗಳನ್ನು ನೀಡಿದ್ದಾರೆ. ಮನೆಯ ನಿಜವಾದ ಮಾಲೀಕರು ಯಾರು ಎಂಬುದನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ತಂಡ ಹೇಳಿದೆ. ಈ ದಾಖಲೆಗಳನ್ನು ಟೈಪ್‌ ಮಾಡಲು ಕ್ಯಾಲಿಬರಿ ಎಂಬ ಫಾಂಟ್‌ ಬಳಸಲಾಗಿದೆ. ಆದರೆ ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳುತ್ತಿರುವ ದಿನಾಂಕಕ್ಕಿಂತ ಬಹಳ ಕಾಲದ ನಂತರ ಈ ಫಾಂಟ್‌ ಅನ್ನು ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಹೀಗೆ ಮರಿಯಮ್‌ ಅವರ ಮೋಸ ಬಯಲಾಯಿತು.

ಷರೀಫ್‌ ಅವರ ರಾಜಕೀಯ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಅವರ ಮಗಳ ರಾಜಕೀಯ ಭವಿಷ್ಯಕ್ಕೂ ದೊಡ್ಡ ಕಂಟಕ ಎದುರಾಗಿದೆ. ಆದರೆ ಪ್ರಧಾನಿ ಮತ್ತು ಅವರ ನೇತೃತ್ವದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌– ನವಾಜ್‌ (ಪಿಎಂಎಲ್‌–ಎನ್‌) ಪಕ್ಷ ಹೋರಾಟದ ಕೆಚ್ಚು ತೋರುತ್ತಿದೆ.

ನ್ಯಾಯಾಲಯದ ಆದೇಶದಂತೆ ನಡೆಯುತ್ತಿರುವ ತನಿಖೆಯನ್ನು ಷರೀಫ್‌ ಅವರ ಬೆಂಬಲಿಗರು ಖಂಡಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಂಎಲ್‌–ಎನ್‌ ಗೆಲ್ಲುವುದಕ್ಕೆ ಅವಕಾಶ ಇದೆ. ಹಾಗಾಗಿ ಅದಕ್ಕೂ ಮೊದಲೇ ಷರೀಫ್‌ ಅವರನ್ನು ಉಚ್ಚಾಟಿಸುವ ಕಾರ್ಯತಂತ್ರ ಇದು ಎಂದು ಅವರು ಹೇಳುತ್ತಿದ್ದಾರೆ.

ಪಾಕಿಸ್ತಾನದ ಇತಿಹಾಸದಲ್ಲಿ ಯಾವ ಪ್ರಧಾನಿಯೂ  ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿಲ್ಲ. ಷರೀಫ್‌ ಅವರದ್ದು ಇದು ಮೂರನೇ ಪ್ರಯತ್ನ– ಈ ಮೈಲುಗಲ್ಲು ತಲುಪಲು ಅವರಿಗೆ ಇನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಷ್ಟೇ ಬೇಕಿದೆ. ಇದಕ್ಕೆ ಹತ್ತಿರ ಹತ್ತಿರವಾಗುತ್ತಿದ್ದಂತೆಯೇ ಅವರ ಮೇಲಿನ ಒತ್ತಡ ಹೆಚ್ಚುತ್ತಲೇ ಸಾಗಲಿದೆ ಎಂದು ಪ್ರಜಾತಂತ್ರ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರು ಎಚ್ಚರಿಸಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ವಕೀಲೆ ಅಸ್ಮಾ ಜಹಾಂಗೀರ್‌ ಅವರು ಇತ್ತೀಚೆಗೆ ಹೀಗೆ ಟ್ವೀಟ್‌ ಮಾಡಿದ್ದಾರೆ: ‘ಪಾಕಿಸ್ತಾನದ ಹೊರಗಿನವರಿಗಾಗಿ ಅನುವಾದ: ಪಾಕಿಸ್ತಾನದಲ್ಲಿ ರಾಜಕೀಯ, ಪ್ರಜಾತಾಂತ್ರಿಕ ಮತ್ತು ಸಾಂವಿಧಾನಿಕ ಆದೇಶಗಳು ಸೇನೆಯ ಹಿತಾಸಕ್ತಿಯ ಮುಂದೆ ಶರಣಾಗುತ್ತವೆ’.

ಲಂಡನ್‌ ಅಪಾರ್ಟ್‌ಮೆಂಟ್‌ ಬಗೆಗಿನ ತನಿಖೆಯನ್ನು ತಡೆಯುವುದಕ್ಕಾಗಿ ಷರೀಫ್‌ ಅವರ ಕುಟುಂಬ ದಶಕಗಳಿಂದ  ಬೇರೆ ಬೇರೆ ವಿವರಣೆಗಳನ್ನು ನೀಡುತ್ತಾ ಬಂದಿದೆ. ಕುಟುಂಬವು ಮನೆಯ ಮಾಲೀಕತ್ವವನ್ನು ದೃಢಪಡಿಸಿದ ನಂತರವಷ್ಟೇ ಈ ಬಗೆಗಿನ ಊಹಾಪೋಹಗಳು ಕೊನೆಯಾದವು. ಕಳೆದ ವರ್ಷ ಸೋರಿಕೆಯಾದ ಪನಾಮ ದಾಖಲೆಗಳಲ್ಲಿಯೂ ಷರೀಫ್‌ ಅವರ ಮಕ್ಕಳ ಹೆಸರುಗಳು ಇದ್ದವು. ಆಗ ಬಹಿರಂಗವಾದ ಮಾಹಿತಿಗಳು ಹಿಂದೆ ಷರೀಫ್‌ ನೀಡಿದ ವಿವರಣೆಗಳಿಗೆ ವ್ಯತಿರಿಕ್ತವಾಗಿದ್ದವು. ಹಾಗಾಗಿ ಅದು ಪಾಕಿಸ್ತಾನದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ, ಭ್ರಷ್ಟಾಚಾರದ ತನಿಖೆ ಆರಂಭದಿಂದಲೇ ವಿವಾದಗಳ ಕೇಂದ್ರ ಬಿಂದುವಾಗಿದೆ. ತನಿಖಾ ತಂಡದಲ್ಲಿ ಸೇನೆಯ ಪ್ರತಿನಿಧಿಗಳನ್ನು ಸೇರಿಸುವ ಕ್ರಮ ಇಲ್ಲವೇ ಇಲ್ಲ. ಹಾಗಾಗಿ ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸರ್ಕಾರ ಮತ್ತು ತನಿಖಾಧಿಕಾರಿಗಳ  ನಡುವೆ ವಾಕ್ಸಮರದಂತಹ ವಿಚಿತ್ರ ವಿದ್ಯಮಾನವೂ ನಡೆಯಿತು.

ಪ್ರಧಾನಿಯ ನಿಯಂತ್ರಣದಲ್ಲಿರುವ ಗುಪ್ತಚರ ಇಲಾಖೆ ತಮ್ಮ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂದು ತನಿಖಾ ತಂಡದಲ್ಲಿದ್ದ ಕೆಲವು ಅಧಿಕಾರಿಗಳು ಆರೋಪಿಸಿದರು. ಸೇನೆಯ ನಿಯಂತ್ರಣದಲ್ಲಿರುವ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಸೇನಾ ಗುಪ್ತಚರ ಸೇವಾಸಂಸ್ಥೆಗಳು ತನಿಖೆಗೆ ರಹಸ್ಯವಾಗಿ ನೆರವಾಗುತ್ತಿವೆ ಎಂದು ಸರ್ಕಾರ ಹೇಳಿತು.

ಪಾಕಿಸ್ತಾನದ ಸರ್ಕಾರ ಮತ್ತು ಸೇನೆಯ ನಡುವೆ ಸದಾ ಇರುವ ಒಡಕು ಈ ಕೆಸರೆರಚಾಟಕ್ಕೆ ಕಾರಣ. ಪಾಕಿಸ್ತಾನದ ಸೇನೆ ಕೆಲವೊಂದು ಸಂದರ್ಭದಲ್ಲಿ ಅಲ್ಲಿನ ಸರ್ಕಾರಕ್ಕಿಂತ ಪ್ರಭಾವಿಯಾಗಿರುತ್ತದೆ. ಅಂತಹ ಸೇನೆಯ ಜತೆಗೆ ತಿಂಗಳುಗಟ್ಟಲೆ ನಡೆದ ಗುದ್ದಾಟವನ್ನು ಷರೀಫ್‌ ಈಗಷ್ಟೇ ಮುಗಿಸಿದ್ದಾರೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ವೈರತ್ವವೂ ಇದೆ. ಭಾರತದ ಜತೆ ಸಂಬಂಧವನ್ನು ಸಹಜಸ್ಥಿತಿಗೆ ತರುವ ಷರೀಫ್‌ ಅವರ ಪ್ರಯತ್ನವನ್ನು ಸೇನೆ ವಿರೋಧಿಸುತ್ತಿದೆ. ಅಲ್ಲದೆ, ಸೇನೆ ಹೊಂದಿರುವ ವಿಶೇಷ ಅಧಿಕಾರ ಮತ್ತು ದೇಶದೊಳಗೆ ಇರುವ ಮಹತ್ವವನ್ನು ಇಲ್ಲವಾಗಿಸಲು ಷರೀಫ್‌ ಬಯಸಿದ್ದಾರೆ ಎಂಬ ಗುಮಾನಿಯನ್ನು ಸೇನೆ ಹೊಂದಿದೆ.

ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಮಹತ್ವದ ನಿರ್ಧಾರಗಳಿಂದ ತಮ್ಮನ್ನು ದೂರ ಇರಿಸಲಾಗುತ್ತಿದೆ ಎಂಬ ಬಗ್ಗೆ ಷರೀಫ್‌ ಸಿಡಿಮಿಡಿಗೊಂಡಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ತಮ್ಮ ಸರ್ಕಾರವನ್ನು ವಜಾ ಮಾಡಲು ಸೇನೆ ಪ್ರಯತ್ನಿಸುತ್ತಿದೆ ಎಂಬ ಭೀತಿಯೂ ಷರೀಫ್‌ ಅವರಲ್ಲಿದೆ.

ತಮ್ಮ ಮುಖ್ಯ ರಾಜಕೀಯ ವೈರಿ ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರ ಬಗ್ಗೆ ಷರೀಫ್‌ಗೆ ಸಿಟ್ಟು ಇದೆ. ಷರೀಫ್‌ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿ ಅವರ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೇ ಕಳೆದ ನಾಲ್ಕು ವರ್ಷಗಳ ಹೆಚ್ಚಿನ ಸಮಯವನ್ನು ಇಮ್ರಾನ್‌ ವಿನಿಯೋಗಿಸಿದ್ದಾರೆ.

ಪನಾಮ ದಾಖಲೆ ಸೋರಿಕೆಯಾದ ಕೂಡಲೇ ಅದನ್ನು ಕೈಗೆತ್ತಿಕೊಂಡ ಇಮ್ರಾನ್‌, ತಮ್ಮ ಬೆಂಬಲಿಗರೊಂದಿಗೆ ಇಸ್ಲಾಮಾಬಾದ್‌ನಲ್ಲಿ ಭಾರಿ ಪ್ರತಿಭಟನಾ ರ್‍ಯಾಲಿ ನಡೆಸಿದರು. ಈ ಹೋರಾಟದಿಂದಾಗಿಯೇ ಸುಪ್ರೀಂ ಕೋರ್ಟ್‌ ಮನಸ್ಸಿಲ್ಲದ ಮನಸ್ಸಿನಿಂದ ಪನಾಮ ದಾಖಲೆ ಸೋರಿಕೆಯ ವಿಚಾರಣೆ ಕೈಗೆತ್ತಿಕೊಳ್ಳಬೇಕಾಯಿತು. ನಂತರ ಹಲವು ಬೆಳವಣಿಗೆಗಳು ನಡೆದವು. ಷರೀಫ್‌ ಮತ್ತು ಅವರ ಮಕ್ಕಳ ವಿರುದ್ಧ ತನಿಖಾಧಿಕಾರಿಗಳು ನೀಡಿರುವ ಆಘಾತಕಾರಿ ವರದಿ ಈ ಸರಣಿಯಲ್ಲಿ ತೀರಾ ಇತ್ತೀಚಿನದು.

ಷರೀಫ್‌ ಅವರ ಭ್ರಷ್ಟಾಚಾರವನ್ನೇ ಮುಂದಿಟ್ಟುಕೊಂಡು ರಾಜಕೀಯ ಅವಕಾಶವಾದದ ಆಟ ಆಡುತ್ತಿದ್ದಾರೆ ಎಂದು ಕಾಣಿಸದಂತೆ ಇಮ್ರಾನ್‌ ವರ್ತಿಸುತ್ತಿದ್ದಾರೆ. ‘ಲಂಡನ್‌ ಅಪಾರ್ಟ್‌ಮೆಂಟನ್ನು ಕಾನೂನುಬದ್ಧವಾಗಿ ಪಡೆದುಕೊಂಡಿದ್ದರೆ ಅದಕ್ಕೆ ಕೊಟ್ಟ ಹಣದ ವಿವರಗಳನ್ನು ಯಾಕೆ ಬಹಿರಂಗಪಡಿಸಬಾರದು’ ಎಂದಷ್ಟೇ ಅವರು ಪ್ರಶ್ನಿಸುತ್ತಿದ್ದಾರೆ. ಏನಾಗಿರಬಹುದು ಎಂಬುದನ್ನು ನೀವೇ ಊಹಿಸಿ ಎಂದು ಜನರಿಗೆ ಅವರು ಸೂಚಿಸುತ್ತಿದ್ದಾರೆ.

ಹಣ ಎಲ್ಲಿಂದ ಬಂತು ಎಂಬುದನ್ನು ಸಾರ್ವಜನಿಕವಾಗಿ ಹೇಳುವುದು ಷರೀಫ್‌ ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಇಮ್ರಾನ್‌ ಅವರ ಪ್ರಶ್ನೆಗೆ ಇರುವ ಹೆಚ್ಚು ಸಮರ್ಪಕ ಎಂದು ಕಾಣಿಸುವ ಉತ್ತರ ಅನಿಸುತ್ತದೆ.

ಶ್ರೀಮಂತರು ತೆರಿಗೆ ತಪ್ಪಿಸಿಕೊಳ್ಳುತ್ತಾರೆ. ದೇಶದಿಂದ ಹೊರಗೆ ಮತ್ತು ದೇಶದ ಒಳಕ್ಕೆ ಹಣ ಸಾಗಾಟವಾಗುತ್ತದೆ. ಕಾನೂನುಗಳನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತದೆ. ಆದರೆ ಶ್ರೀಮಂತರು ಮತ್ತು ರಾಜಕೀಯ ಸಂಪರ್ಕಗಳನ್ನು ಹೊಂದಿರುವವರಿಗೆ ಈ ಬಗ್ಗೆ ಯಾವ ಪ್ರಶ್ನೆಯನ್ನೂ ಕೇಳಲಾಗುವುದಿಲ್ಲ. ಇತರ ಯಾರೂ ಮಾಡದ ಯಾವ ತಪ್ಪನ್ನು ಷರೀಫ್‌ ಕುಟುಂಬ ಮಾಡಿದೆ? ಅವರ ಕುಟುಂಬವನ್ನು ಮಾತ್ರ ಯಾಕೆ ಗುರಿಯಾಗಿಸಲಾಗುತ್ತಿದೆ?

ಇದಕ್ಕೆ ಕನಿಷ್ಠ ಮೂರು ಕಾರಣಗಳಿವೆ: ಷರೀಫ್‌ ಅವರಿಗೆ ಸೇನೆಯನ್ನು ಕಂಡರಾಗದು (ಸೇನೆಗೆ ಅವರ ಬಗ್ಗೆಯೂ ಅದೇ ಭಾವನೆ ಇದೆ). ಮುಂದಿನ ಚುನಾವಣೆಯಲ್ಲಿಯೂ ಷರೀಫ್‌ ಅವರಿಗೆ ಗೆಲ್ಲುವ ಅವಕಾಶ ಹೆಚ್ಚು. ಲಂಡನ್‌ ಅಪಾರ್ಟ್‌ಮೆಂಟ್‌ಗಳಂತಹ ಆಸ್ತಿಗಳ ಬಗ್ಗೆ ಹೊಂದಿರುವ ಮೋಹ, ಅವುಗಳೇ ತಮ್ಮ ರಾಜಕೀಯ ಅವಸಾನಕ್ಕೆ ಕಾರಣವಾಗಬಹುದು ಎಂಬುದರತ್ತ ಷರೀಫ್‌ ಕುರುಡಾಗುವಂತೆ ಮಾಡಿದೆ.

ಷರೀಫ್‌ ಅವರ ಭವಿಷ್ಯ ಈಗ ಅವರ ಕೈಯಲ್ಲಿ ಇಲ್ಲ. ಸರ್ಕಾರ ಮತ್ತು ಪಕ್ಷ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿವೆ. ಆದರೆ ಈಗ ಅಂತಿಮ ನಿರ್ಧಾರ ಕೈಗೊಳ್ಳಬೇಕಿರುವುದು ಸುಪ್ರೀಂ ಕೋರ್ಟ್‌. ಮುಂದಿನ ಸುತ್ತಿನ ವಿಚಾರಣೆ ಆರಂಭವಾಗಿದೆ. ಏಕಕಾಲಕ್ಕೆ ಗೊಂದಲಕಾರಿಯಂತೆ ಮತ್ತು ಚಿರಪರಿಚಿತ ಎಂಬಂತೆ ಕಾಣುವ ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಹೀಗೆ ಮುಂದುವರಿಯುತ್ತಿದೆ.

–ಲೇಖಕ ಪಾಕಿಸ್ತಾನದ ದಿನಪತ್ರಿಕೆ ಡಾನ್‌ನ ಸಹಾಯಕ ಸಂಪಾದಕ ದಿ ನ್ಯೂಯಾರ್ಕ್‌ ಟೈಮ್ಸ್‌

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry