ದೈತ್ಯ ದೇಹಿಯ ವೇದಾಂತವು...

7

ದೈತ್ಯ ದೇಹಿಯ ವೇದಾಂತವು...

Published:
Updated:
ದೈತ್ಯ ದೇಹಿಯ ವೇದಾಂತವು...

ಮೈಕಟ್ಟು ಹಾಗಿದ್ದರೂ ಅವರ ಮಾತು ಸಕ್ಕರೆ ಸುರಿಯುವಂತಿತ್ತು! ‘ನೋವು ತಿನ್ನಬೇಕು, ದೇಹದಾರ್ಡ್ಯ ಪಟುಗಳಾಗಿ ಹೆಸರು ಮಾಡಬೇಕಾದರೆ ದೇಹ ದಂಡಿಸಿ, ನೋವು ತಿನ್ನಿ ಅದನ್ನು ಆಸ್ವಾದಿಸಿ’ ಎಂದು ನಗುತ್ತಾ ಸಲಹೆ ನೀಡಿದರು. ಅವರನ್ನು ನೋಡಲು ಮುಗಿಬಿದ್ದಿದ್ದ ದೇಹದಾರ್ಡ್ಯ ಪಟುಗಳ ಮುಖದಲ್ಲಿ ಅಚ್ಚರಿಯ ಎಳೆ ಕಾಣುತ್ತಿತ್ತು. ಭಾರಿ ದೇಹ, ಕಪ್ಪು ಮುಖ, ಮುಖದ ಮೇಲೊಂದು ಗೀರು... ಮೊದಲ ನೋಟಕ್ಕೇ ಭಯಂಕರವಾಗಿ ಕಾಣುವ ಇವರು ಏನಪ್ಪಾ ಇಷ್ಟು ಸೌಮ್ಯವಾಗಿ ಮಾತನಾಡುತ್ತಿದ್ದಾರೆ ಎಂಬುದು ಅವರ ಅಚ್ಚರಿಗೆ ಕಾರಣವಾಗಿತ್ತು.

ಮೂರು ಬಾರಿ ‘ಮಿಸ್ಟರ್ ಒಲಿಂಪಿಯಾ’ ಎನಿಸಿಕೊಂಡಿರುವ ಕಾಯ್ ಗ್ರೀನ್‌ ಕಪ್ಪು ಬಣ್ಣದ ಟಿ ಶರ್ಟ್, ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ಆದರೆ ಉಬ್ಬಿದ ಖಂಡಗಳನ್ನು ಮರೆಮಾಚಲು ಆ ಉಡುಪು ಸೋತಿತ್ತು. ಹುರಿಗೊಳಿಸಿದ ದೇಹದ ಮಾಟ ಟೀಶರ್ಟ್‌ ಒಳಗಿನಿಂದಲೇ ಕಿಚಾಯಿಸುವಂತೆ ಕಾಣುತ್ತಿದ್ದವು.

ಬಿ3 ಜಿಮ್‌ ಉದ್ಘಾಟನೆ ನಂತರ ಅಲ್ಲಿನ ಪರಿಕರ, ಯಂತ್ರೋಪಕರಣಗಳನ್ನು ಪರೀಕ್ಷಿಸಲು ಮುಂದಾದರು ದೈತ್ಯದೇಹಿ ಗ್ರೀನ್‌. ಭಾರ ಎತ್ತುವ ರೀತಿ ಮತ್ತು ಎತ್ತುವಾಗ ಆಗುತ್ತಿದ್ದ ನೋವನ್ನು ಅವರು ಸುಖಿಸುತ್ತಿದ್ದರು. ಅದು, ಅಲ್ಲಿ ನೆರೆದಿದ್ದ ಯುವ ಬಾಡಿ ಬಬಿಲ್ಡರ್‌ಗಳಿಗೆ ಪ್ರಾಯೋಗಿಕ ಪಾಠವೇ ಆಯ್ತು. ಭಾರ ಎತ್ತುವಾಗಲಂತೂ ಮಾಂಸ ಖಂಡಗಳು ಉಡುಪು ಕಿತ್ತುಕೊಂಡು ಹೊರಬರುತ್ತವೇನೋ ಎನ್ನುವಷ್ಟು ಉಬ್ಬಿಕೊಳ್ಳುತ್ತಿದ್ದವು. ಜಿಮ್‌ನ ಬಹುತೇಕ ಉಪಕರಣಗಳನ್ನು ಬಳಸಿ ವ್ಯಾಯಾಮ ಮಾಡಿದ ಗ್ರೀನ್‌ ಕೊನೆಗೆ ಹೇಳಿದ್ದು ‘ಬೆವರು ಹರಿಸುವುದು ನನ್ನ ಮೆಚ್ಚಿನ ಹವ್ಯಾಸ’ ಎಂದು.

ಕಾರ್ಯಕ್ರಮ ನಿರೂಪಕ, ಯುವಕರನ್ನುದ್ದೇಶಿಸಿ ಮಾತನಾಡುವಂತೆ ವಿನಂತಿಸಿದರು. ‘ಯಾರಾದರೂ ನಿಮಗೆ ಪ್ರೇರಣೆ ನೀಡುವವರೆಗೆ ಕಾಯಬೇಡಿ, ನಾನು ನನ್ನ ಅನುಭವಗಳನ್ನಷ್ಟೆ ನಿಮಗೆ ಹೇಳಬಲ್ಲೆ. ಅದರಿಂದ ಪ್ರೇರಿತರಾಗುವುದು ನಿಮ್ಮ ವೈಯಕ್ತಿಕ ಆಯ್ಕೆ, ಮನಸ್ಸಿನಲ್ಲಿ ಸಾಧಿಸುವ ಭಾವ ಜಾಗೃತವಾಗದೇ ನಾನಲ್ಲ ಭಗವಂತನೇ ಬಂದು ಮಾತನಾಡಿದರೂ ಉಪಯೋಗವಿಲ್ಲ’ ಎಂದರು.

ಅದುವರೆಗೆ ಅಷ್ಟೊಂದು ಭಾರವನ್ನು ಹೂ ಎತ್ತಿದಷ್ಟು ಸಲೀಸಾಗಿ ಎತ್ತಿ ಬಿಸಾಕಿದ ಗ್ರೀನ್‌, ಮೈಕು ಕೈಗೆ ಕೊಟ್ಟಾಗ ಪಕ್ಕಾ ವೇದಾಂತಿಯಂತೆ, ಅದ್ಭುತ ಭಾಷಣಕಾರನರಂತೆ ಬದಲಾಗಿಬಿಟ್ಟರು!

‘ನೀವು ಕನ್ನಡಿಯ ಮುಂದೆ ನಿಂತಾಗ ಒಬ್ಬ ವ್ಯಕ್ತಿ ಕಾಣುತ್ತಾನಲ್ಲ, ಅವನು ಯಾವಾಗಲೂ ನಗುತ್ತಿರುವಂತೆ ನೋಡಿಕೊಳ್ಳಿ, ಅವನ ಸಂತೋಷಕ್ಕಾಗಿ ದುಡಿಯಿರಿ, ಬೇರೆಯವರ ಸಂತೋಷದಲ್ಲಿ ಅವನ ಸಂತೋಷ ಹುಡುಕಿರಿ’ ಎಂದು, ಥೇಟ್ ವೇದಾಂತಿಯಂತೆ ಮಾತನಾಡುತ್ತಾ ಹೋದರು. ಸ್ವತಃ ಚಿತ್ರಕಾರರೂ ಆಗಿರುವ ಗ್ರೀನ್‌, ದೇಹದಾರ್ಡ್ಯದ ಬಗೆಗಿಂತಲೂ ವ್ಯಕ್ತಿತ್ವ ವಿಕಸನ, ಸಾಮಾಜಿಕ ಕಳಕಳಿಯ ಬಗ್ಗೆಯೇ ಹೆಚ್ಚು ಮಾತನಾಡಿದರು. ಅವೆಲ್ಲವೂ ವೇದಾಂತಿಯೊಬ್ಬನ ಮಾತಿನಂತಿತ್ತು. ಜಿಮ್‌ನಲ್ಲಿ ಗ್ರೀನ್‌ ಅಭಿಮಾನಿಗಳಯ ಕಿಕ್ಕಿರಿದು ತುಂಬಿದ್ದರೂ ಅವರು ಮಾತನಾಡುವಾಗ ಸೂಜಿ ಬಿದ್ದರೂ ಕೇಳಿಸುವಂತಹ ಮೌನವಿತ್ತು.

ಮಾತು ಮುಗಿಯುತ್ತಿದ್ದಂತೆ ಚಪ್ಪಾಳೆಗಳ ಮಹಾಪೂರ. ನಂತರದ್ದು ಸೆಲ್ಫಿಗಳ ಸರದಿ. ಆ ನೂಕುನುಗ್ಗಲಿನ ನಡುವೆಯೂ ಸುಮಾರು ಒಂದು ಗಂಟೆ ನಗುತ್ತಲೆ ಕ್ಯಾಮರಾಗಳಿಗೆ ಪೋಸು ಕೊಟ್ಟರು ಕಾಯ್‌ ಗ್ರೀನ್‌. ಶಕ್ತಿವಂತರಿಗೆ ತಾಳ್ಮೆ ಕಡಿಮೆ ಎಂಬ ಮಾತನ್ನು ಅವರು ಸುಳ್ಳಾಗಿಸಿದರು. ಜಿಮ್ ಸಂಸ್ಥಾಪಕರಾದ ವೇಣುಗೋಪಾಲ್ ಮತ್ತು ರಾಜಗೋಪಾಲ್ ಅವರು ಕಾಯ್‌ ಗ್ರೀನ್‌ ಅವರಿಗೆ ಹಾರ ಹಾಕಿ, ರೇಷ್ಮೆ ಶಾಲು ಹೊದಿಸಿ ಕೃತಜ್ಞತೆ ಸಲ್ಲಿಸಿದರು.

*

ಕಾಯ್ ಗ್ರೀನ್‌ ಬಗ್ಗೆ ಒಂದಿಷ್ಟು

1975 ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಹುಟ್ಟಿದ ಗ್ರೀನ್‌, 16ರ ವಯಸ್ಸಿನಿಂದಲೇ ದೇಹದಾರ್ಡ್ಯ ಪ್ರಾರಂಭಿಸಿದರು. 2011ರಲ್ಲಿ ಮಿಸ್ಟರ್ ನ್ಯೂಯಾರ್ಕ್‌ ಎನಿಸಿಕೊಂಡರು. ನಂತರ 2011ರಲ್ಲಿ ನ್ಯೂಯಾರ್ಕ್‌ ಪ್ರೋ ಚಾಂಪಿಯನ್ ಶಿಪ್ ಗೆದ್ದುಕೊಂಡರು ನಂತರ 2012 ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಬಾಡಿ ಬಿಲ್ಡಿಂಗ್ ಆ್ಯಂಡ್ ಫಿಟ್‌ನೆಸ್ (ಐಎಫ್‌ಬಿಎಫ್) ನಡೆಸುವ ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದುಕೊಂಡರು. ನಂತರ 2013 ಮತ್ತು 2014ರಲ್ಲಿ ಮಿಸ್ಟರ್ ಒಲಂಪಿಯಾದಲ್ಲಿ ಪ್ರಥಮ ಸ್ಥಾನಗಳಿಸಿ ವಿಖ್ಯಾತಿಗಳಿಸಿದರು.

ಪ್ರೇರಣಾದಯಕ ಭಾಷಣಕಾರರಾಗಿಯೂ ಹೆಸರವಾಸಿಯಾಗಿರುವ ಗ್ರೀನ್‌ ದೇಶ–ವಿದೇಶಗಳಲ್ಲಿ ಭಾಷಣಗಳನ್ನು ಮಾಡುತ್ತಾ ಯುವಕರನ್ನು ಉತ್ತೇಜಿಸುವ ಕೆಲಸದಲ್ಲಿಯೂ ನಿರತರಾಗಿದ್ದಾರೆ. ಇದೀಗ ಕೆಲವು ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿರುವ ಗ್ರೀನ್‌ ಅತ್ಯುತ್ತಮ ಚಿತ್ರಕಲಾವಿದರೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry