ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈದಿಗಳಿಗೆ ಮನೋರಂಜನೆ’

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕಿಕ್ಕಿರಿದಿದೆ. 3X6 ಜಾಗಕ್ಕೆ ಹೊಡೆದಾಡಬೇಕಾದ ಸ್ಥಿತಿ ಇರುವಾಗ ಅಲ್ಲಿ ಕೈದಿಯ ಮನಪರಿವರ್ತನೆ ಹೇಗಾಗುತ್ತದೆ. ಕೆಲವರಿಗೆ ಜೈಲಿನ ವಾತಾವರಣ ಹೊಸದು ಎನಿಸುವುದಿಲ್ಲ. ಅಂಥವರು ಐದಾರು ವರ್ಷ ಸೆರೆವಾಸದಲ್ಲಿದ್ದರೂ ಕಿಂಚಿತ್ತೂ ಪರಿವರ್ತನೆ ಆಗಿರುವುದಿಲ್ಲ. ಇವರಲ್ಲೇ ಕೆಲವರು ಹೋರಾಟಗಾರರೂ ಇರುತ್ತಾರೆ. ಅಲ್ಲೇ ಒಕ್ಕೂಟ, ಸಂಘಟನೆಗಳನ್ನು ಕಟ್ಟಿಕೊಂಡು ಓಡಾಡುತ್ತಾರೆ. ಕೆಲ ಕಾರಾಗೃಹಗಳಲ್ಲಿ ಧರ್ಮಗಳ ಆಧಾರದ ಮೇಲೆ ಬ್ಯಾರಕ್‌ಗಳು ವಿಂಗಡಣೆಯಾಗಿರುತ್ತವೆ.

ಇಂಥ ಪರಿಸ್ಥಿತಿಯಲ್ಲಿರುವ ಕೈದಿಗಳಿಗೆ ‘ಡಿಜಿಪಿ–ಡಿಐಜಿ ಕಲಹ’ ಒಂದು ರೀತಿಯ ಮನೋರಂಜನೆ. ಒಂದು ಹೊತ್ತು ಊಟ ಬಿಡುತ್ತಾರೆ, ಯಾರದ್ದೋ ವಿರುದ್ಧ ಘೋಷಣೆ ಕೂಗುತ್ತಾರೆ. ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸಿದರೂ ಅವರಿಗೇನೂ ಬೇಸರವಿಲ್ಲ. 
–ಕುಚ್ಚಣ್ಣ ಶ್ರೀನಿವಾಸನ್, ನಿವೃತ್ತ ಡಿಜಿಪಿ

‘ಸಾಮಾಜಿಕ ಜಾಲತಾಣಗಳಿಂದ ಸರ್ಕಾರಿ ಕೆಲಸ ಆಗದು’
ಕಾರಾಗೃಹದಲ್ಲಿ ಅವ್ಯವಹಾರ  ನಡೆದದ್ದು ನಿಜವೇ ಆಗಿದ್ದರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ತೆಗದುಕೊಳ್ಳಬೇಕು. ಆದರೆ, ಎಲ್ಲ ಇಲಾಖೆಗಳಲ್ಲೂ ಅಧಿಕಾರಿಗಳಿಗೆ ಕರ್ತವ್ಯ, ಅಧಿಕಾರ ಹಾಗೂ ಜವಾಬ್ದಾರಿಗಳಿವೆ. ಈ ಮೂರು ಅಂಶಗಳ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಿ ಕೆಲಸ ಮಾಡಲು ಆಗುವುದಿಲ್ಲ. ಎಲ್ಲ ಅಧಿಕಾರಿಗಳು ಜಾಲತಾಣಗಳ ಮೂಲಕ ಕೆಲಸ ಮಾಡುವುದಾದರೆ ಸರ್ಕಾರ ಏನಾಗಬೇಕು? 

ಬಂದಿಖಾನೆ ಎಂಬುದು ಅತ್ಯಂತ ಸೂಕ್ಷ್ಮ ಇಲಾಖೆ. ಅಲ್ಲಿ ಅಧಿಕಾರ ನಡೆಸುವವರೂ ಅಷ್ಟೇ ಸೂಕ್ಷ್ಮವಾಗಿರಬೇಕು. ಡಿಐಜಿ ಎಂದರೆ ಇಲಾಖೆಯಲ್ಲೇ 2ನೇ ಹಿರಿಯ ಅಧಿಕಾರಿ. ಅವರು ತುಂಬ ರಚನಾತ್ಮಕವಾಗಿ ಕೆಲಸ ಮಾಡಬೇಕು.
–ಎಸ್‌.ಟಿ.ರಮೇಶ್, ನಿವೃತ್ತ ಡಿಜಿಪಿ

‘ಪುನರ್ವಸತಿ ಕೇಂದ್ರವಾಗಿಯೇ ಉಳಿಯಲಿ’
ಕಾರಾಗೃಹ ಇಲಾಖೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆಯಬೇಕೆಂಬ ನಿರ್ಧಾರ ಒಳ್ಳೆಯದು. ಆದರೆ, ಅವರು ಹೋದ ಮಾರ್ಗ ಸರಿಯಲ್ಲ. ಇಲಾಖೆಯಲ್ಲಿ  ಶಿಸ್ತು ಪಾಲಿಸಬೇಕಾಗುತ್ತದೆ. ಅದನ್ನು ಮೀರಿ ನಡೆದ ಕಾರಣಕ್ಕೆ ಹಲವರ ಕೆಂಗಣ್ಣಿಗೆ ಅವರು ಗುರಿಯಾಗಬಹುದು.

ಇನ್ನು ಸುಧಾರಣೆ ವಿಷಯಕ್ಕೆ ಬಂದರೆ, ಜೈಲು ಎನ್ನುವುದು ಪುನರ್ವಸತಿ ಕೇಂದ್ರವಾಗಬೇಕು. ಶಿಕ್ಷಣ ಕೇಂದ್ರವಾಗಬೇಕು. ಅಪರಾಧ ಮನೋಭಾವ ತೊಡೆದುಹಾಕುವ ತಾಣವಾಗಬೇಕು. ನಾನು ಸೇವೆಯಲ್ಲಿದ್ದಾಗ ಮನಪರಿವರ್ತನೆ ಮಾಡಿಕೊಂಡ 250 ರೌಡಿಗಳ ಹೆಸರುಗಳನ್ನು ರೌಡಿಪಟ್ಟಿಯಿಂದ ತೆಗೆಸಿದ್ದೆ. ಆ ನಂತರ ಅವರೆಲ್ಲ ನ್ಯಾಯಯುತ ಕೆಲಸಗಳಲ್ಲೇ ತಮ್ಮನ್ನು ತೊಡಗಿಸಿಕೊಂಡರು. ಇಂಥ ಕೆಲಸ ಈಗಲೂ ಆಗಬೇಕು.

ಹೊಟ್ಟೆಪಾಡಿಗೆ ತಿಂಡಿ ಕದ್ದು ಜೈಲು ಸೇರಿದವನಿಗೆ, ಅಲ್ಲಿ ದೊಡ್ಡ ಕಳ್ಳ ಗುರುವಾಗಿ ಸಿಕ್ಕಿಬಿಡುತ್ತಾನೆ. ನಂತರ ಆತನ ಗ್ಯಾಂಗನ್ನೇ ಸೇರಿ ದೊಡ್ಡ ಕೃತ್ಯಗಳಿಗೆ ಕೈ ಹಾಕುತ್ತಾನೆ. ಹೀಗಾದರೆ, ಜೈಲು ಎಂಬುದು ಅಪರಾಧಿಗಳನ್ನು ಸೃಷ್ಟಿಸುವ ವಿಶ್ವವಿದ್ಯಾಲಯ ಆಗಿಬಿಡುತ್ತದೆ.
–ಎಚ್.ಟಿ. ಸಾಂಗ್ಲಿಯಾನ, ನಿವೃತ್ತ ಡಿಜಿಪಿ

‘ಕೈದಿಗಳ ಜಗಳದಲ್ಲಿ ಅಧಿಕಾರಿಗಳ ಹಿತಾಸಕ್ತಿ’

ಡಿಐಜಿ ರೂಪಾ ಅವರು ಮೇಲಧಿಕಾರಿ ವಿರುದ್ಧ ವರದಿ ಸಲ್ಲಿಸಿದ್ದರ ಹಿಂದಿರುವ ಉದ್ದೇಶ ತಿಳಿಯಬೇಕು. ಸಾಕ್ಷ್ಯಗಳಿರುವ ಎಂಟು ಆರೋಪಗಳನ್ನು ಅವರು ವರದಿಯಲ್ಲಿ ತಂದಿರುವುದನ್ನು ಒಪ್ಪಬಹುದು. ಆದರೆ, ಶಶಿಕಲಾ ಅವರಿಂದ ಡಿಜಿಪಿ ಲಂಚ ಪಡೆದಿದ್ದಾರೆ ಎಂಬುದಕ್ಕೆ ಪುರಾವೆ ಇಲ್ಲವೆಂದು ಹೇಳಿ, ಆ ಅಂಶವನ್ನೂ ವರದಿಯಲ್ಲಿ ಹೇಳಿದ್ದು ಸರಿಯಲ್ಲ. ಅದನ್ನು ಜಗಜ್ಜಾಹೀರು ಮಾಡಿದ್ದು ಇನ್ನೂ ದೊಡ್ಡ ತಪ್ಪು. ಇದು ಅಧಿಕಾರಿಗಳ ನಡುವೆ ನಡೆದ ಆಂತರಿಕ ಕಲಹ ಮಾತ್ರವಲ್ಲ. ಜೈಲಿನಲ್ಲಿ ಕೈದಿ ಬಣಗಳ ನಡುವೆ ನಡೆದ ಗಲಾಟೆಯ ಹಿಂದೆಯೂ ಇವರ ಸ್ವ–ಹಿತಾಸಕ್ತಿ ಇರುವ ಸಾಧ್ಯತೆಯಿದೆ. ಅವರ ಬೆಂಬಲವಿಲ್ಲದೆ, ಕೈದಿಗಳು ಬಾಲ ಅಲ್ಲಾಡಿಸುವುದಿಲ್ಲ.

–ಪಿ.ಕೋದಂಡರಾಮಯ್ಯ, ನಿವೃತ್ತ ಪೊಲೀಸ್ ಕಮಿಷನರ್, ಬೆಂಗಳೂರು

‘ಜೈಲು ಸಿಬ್ಬಂದಿಗೆ ಪ್ರೋತ್ಸಾಹ ಸಿಗಬೇಕು’

ಪೊಲೀಸರಿಗೆ ಸಿಕ್ಕಷ್ಟು ವೇತನ ಹಾಗೂ ಸ್ಥಾನಮಾನ ಜೈಲು ಸಿಬ್ಬಂದಿಗೆ ಸಿಗುವುದಿಲ್ಲ. ಈ ತಾರತಮ್ಯದಿಂದಾಗಿ ಸಿಬ್ಬಂದಿ ಕೆಲಸ ಮಾಡಲು ನಿರುತ್ಸಾಹ ತೋರುತ್ತಿದ್ದಾರೆ. ಇಲಾಖೆಯಲ್ಲಿ ಅಗತ್ಯ ಸಂಖ್ಯೆಯ ಸಿಬ್ಬಂದಿಗೆ ಮಂಜೂರಾತಿ ದೊರೆಯದೇ ಇರುವುದು, ನೇಮಕವಾದ ಸಿಬ್ಬಂದಿಯೂ ಸೇವೆಗೆ ಪೂರ್ಣವಾಗಿ ಲಭ್ಯವಾಗದೇ ಇರುವುದೂ ಸಮಸ್ಯೆಗಳಿಗೆ ಕಾರಣ ಎನ್ನಬಹುದು. ಅತಿ ಭದ್ರತೆಯುಳ್ಳ ದೆಹಲಿಯ ತಿಹಾರ್‌ ಜೈಲೊಂದರಲ್ಲೇ ಮೂರು ಸಾವಿರ ಪೊಲೀಸರು ಭದ್ರತೆಗಿದ್ದಾರೆ. ಅದೊಂದು ಜೈಲಿನಲ್ಲಿರುವಷ್ಟು ಸಿಬ್ಬಂದಿ, ನಮ್ಮ ರಾಜ್ಯದ ಅಷ್ಟೂ ಜೈಲುಗಳಲ್ಲಿಲ್ಲ.

–ಕಮಲ್ ಪಂತ್, ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT