ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ

7

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ

Published:
Updated:
ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ

ಬೆಂಗಳೂರು: ‘ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳು, ಗುಜರಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒಳಚರಂಡಿ ಸಮಸ್ಯೆ ಹೆಚ್ಚಾಗಿದೆ.’

ಚಿಕ್ಕಪೇಟೆ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ನಗರದ ಹಖ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ– ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ ನಾಗರಿಕರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಿವು.

ಸಾರ್ವಜನಿಕರ ದೂರುಗಳನ್ನು ಆಲಿಸಿದ ಶಾಸಕ ಆರ್‌.ವಿ.ದೇವರಾಜ್‌ ಹಾಗೂ ಕ್ಷೇತ್ರದ ಐದು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಅವೆನ್ಯೂ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗ ಸ್ಲ್ಯಾಬ್‌ ಮುರಿದಿದ್ದರಿಂದ ಕುಸಿದು ಬಿದ್ದೆ. ಇದರಿಂದ ನನ್ನ ಕಾಲಿಗೆ ಗಾಯವಾಗಿ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಒಂದು ಬೆರಳನ್ನು ಕಳೆದುಕೊಂಡಿದ್ದೇನೆ. ಕಳಪೆ ಕಾಮಗಾರಿಯೇ ಘಟನೆಗೆ ಕಾರಣ’ ಎಂದು ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ಶರವಣ ದೂರಿದರು.

ಇದಕ್ಕೆ ಉತ್ತರಿಸಿದ ಪಾಲಿಕೆ ಸದಸ್ಯೆ ಪ್ರತಿಭಾ ಅವರ ಪತಿ ಧನರಾಜ್‌, ‘ಘಟನೆ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಹೋಗಿ ಪಾದಚಾರಿ ಮಾರ್ಗವನ್ನು ದುರಸ್ತಿ ಮಾಡಿಸಿದ್ದೇನೆ’ ಎಂದರು. ಇದರಿಂದ ಕೆರಳಿದ ಶರವಣ, ‘ಘಟನೆ ನಡೆದ ಬಳಿಕ ನೀವು ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ, ನಾನು ಕಾಲಿನ ಬೆರಳನ್ನು ಕಳೆದುಕೊಂಡಿದ್ದೇನೆ. ಇದಕ್ಕೆ ಯಾರು ಹೊಣೆ. ಗುಣಮಟ್ಟದ ಕಾಮಗಾರಿ ನಡೆಸಿದ್ದಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜ್‌, ‘ಚಿಕಿತ್ಸಾ ವೆಚ್ಚದ ಬಿಲ್‌ಗಳನ್ನು ತಂದುಕೊಡಿ. ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ’ ಎಂದರು.

ವಿಲ್ಸನ್‌ ಗಾರ್ಡನ್‌ನ ಎಚ್‌.ಎಸ್‌. ಸತ್ಯಮೂರ್ತಿ, ‘8ನೇ ಅಡ್ಡರಸ್ತೆಯಿಂದ  ಬಿಟಿಎಸ್‌ ರಸ್ತೆಯವರೆಗಿನ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಚರಂಡಿಗೆ  ಹಾಕಿರುವ ಸ್ಲ್ಯಾಬ್‌ಗಳು ಕ್ರಮಬದ್ಧವಾಗಿಲ್ಲ. ಲೋಕೋಪಯೋಗಿ ಇಲಾಖೆ ವಸತಿಗೃಹದ ಬಳಿ ಬೀಳುವ ಸ್ಥಿತಿಯಲ್ಲಿರುವ ಅತ್ತಿ ಮರವನ್ನು ತೆರವುಗೊಳಿಸಬೇಕು. ಬಡಾವಣೆಯಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಾಗಿದ್ದು, ರಸ್ತೆಗಳಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ದೇವರಾಜ್‌, ‘ವಿಲ್ಸನ್‌ ಗಾರ್ಡನ್‌ನಲ್ಲಿ 50 ವರ್ಷಗಳಿಂದ ಸರಿಯಾದ ಒಳಚರಂಡಿ ವ್ಯವಸ್ಥೆ ಮಾಡಿಲ್ಲ.  ಈಗ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುತ್ತಿದ್ದೇವೆ. ಒಳಚರಂಡಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ₹4 ಕೋಟಿ  ವೆಚ್ಚ ಮಾಡಲಾಗುತ್ತಿದೆ.  ಅತ್ತಿ ಮರವನ್ನು ತೆರವುಗೊಳಿಸುತ್ತೇವೆ’ ಎಂದರು.

ವಿಲ್ಸನ್‌ ಗಾರ್ಡನ್‌ ಸಂಚಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಚಂದ್ರಕಲಾ, ‘ರಸ್ತೆಯಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್‌ ಮಾಡುತ್ತಿದ್ದೇವೆ’ ಎಂದು ಉತ್ತರಿಸಿದರು.

ವಿಲ್ಸನ್‌ ಗಾರ್ಡನ್‌ನ ಶ್ರೀನಿವಾಸ್‌, ‘ಹೊಂಬೇಗೌಡನಗರದ ಮೈದಾನದ ಗೇಟ್‌ ಸರಿಯಿಲ್ಲ. ಚಿತಾಗಾರದಲ್ಲಿ ಸ್ವಚ್ಛತೆ ಇಲ್ಲ’ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ದೇವರಾಜ್‌, ‘ಚಿತಾಗಾರವನ್ನು ₹1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದೇವೆ. ರೆಡ್‌ಫೀಲ್ಡ್‌ಗೆ ₹1.5 ಕೋಟಿ ಅನುದಾನ ಮೀಸಲಿಡಲಾಗಿದೆ. 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದರು.

ಅಲ್‌– ಅಮೀನ್‌ ಕಾಲೇಜಿನ ಫಕೀರಾ ಖಾನಂ ಮಾತನಾಡಿ, ‘ಕಾಲೇಜಿನ ಬಳಿ ಇರುವ ವಿದ್ಯುತ್‌ ಪರಿವರ್ತಕವನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗ ಸರಿ ಇಲ್ಲ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ’ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ದೇವರಾಜ್‌, ‘ಕಾಲೇಜಿನವರೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಶೌಚಾಲಯ ನಿರ್ಮಿಸುತ್ತೇವೆ’ ಎಂದರು.

ಸುಂಕೇನಹಳ್ಳಿಯ ಹೇಮಲತಾ, ‘ಚಾಮರಾಜಪೇಟೆಯ ಕಡೆಯಿಂದ ಬರುವ ಕೊಳಚೆ ನೀರು ಬಡಾವಣೆಯ 5ನೇ ಅಡ್ಡರಸ್ತೆ ಭಾಗದಲ್ಲಿ ನಿಲ್ಲುತ್ತದೆ. ಇದರಿಂದ ಸಮಸ್ಯೆ ಆಗುತ್ತಿದೆ’ ಎಂದು ಮನವಿ ಮಾಡಿದರು.

‘ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗುತ್ತಿದೆ. ಕೊಳಚೆ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ದೇವರಾಜ್‌ ಉತ್ತರಿಸಿದರು.

‘ಕಾರ್ಯಾಚರಣೆಗೆ ನಮ್ಮ ಹುಡುಗರನ್ನೂ ಕಳುಹಿಸುವೆ’: ‘ಮೋತಿನಗರದ ಉರ್ದು ಶಾಲೆ ಬಳಿ ಹಳೆಯ ಕಾರು, ಲಾರಿಗಳನ್ನು ನಿಲ್ಲಿಸಲಾಗುತ್ತಿದೆ’ ಎಂದು ಎಂ.ಯು.ಖಾನ್‌ ದೂರಿದರು.

ಇದಕ್ಕೆ ಉತ್ತರಿಸಿದ ಧನರಾಜ್‌, ‘ರಸ್ತೆಯಲ್ಲೇ ವೆಲ್ಡಿಂಗ್‌ ಮಾಡುತ್ತಾರೆ. ರಿಪೇರಿಗೆ ಬರುವ ವಾಹನಗಳನ್ನು ರಸ್ತೆಗಳಲ್ಲೇ ನಿಲ್ಲಿಸುತ್ತಾರೆ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ದೇವರಾಜ್‌,  ‘ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ಜಪ್ತಿ ಮಾಡಿ, ಹರಾಜು ಹಾಕಬೇಕು. ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವ ಅಂಗಡಿಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬೇಕು. ಕಾರ್ಯಾಚರಣೆಗೆ ಬಿಬಿಎಂಪಿಯ ಐದಾರು ಅಧಿಕಾರಿಗಳು ಹೋದರೆ, ವಾಪಸ್‌ ಬರಲು ಕಷ್ಟವಾಗುತ್ತದೆ. ಹೀಗಾಗಿ ಪೊಲೀಸ್‌ ಜತೆ ಹೋಗಿ. ಬೇಕಿದ್ದರೆ ನಮ್ಮ ಹುಡುಗರನ್ನೂ ಕಳುಹಿಸಿಕೊಡುತ್ತೇನೆ’ ಎಂದರು.

ವಾಣಿಜ್ಯ ಚಟುವಟಿಕೆಯಿಂದ ತೊಂದರೆ: ‘ಜನವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ.  ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ವಾಣಿಜ್ಯ ಪರವಾನಗಿ ನೀಡುವಾಗ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅನುಮತಿ ನೀಡಬೇಕು’ ಎಂದು ಜಯನಗರ 1ನೇ ಬ್ಲಾಕ್‌ನ ಡಾ.ರಘುನಾಥ್‌ ಒತ್ತಾಯಿಸಿದರು.

‘ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆದಿರುವವರಿಗೆ ನೋಟಿಸ್‌ ನೀಡಿದ್ದೇವೆ. ಕೆಲವರು ಮುಚ್ಚಿದ್ದರೆ, ಮತ್ತೆ ಕೆಲವರು ಕೋರ್ಟ್‌ ಮೊರೆ ಹೋಗಿದ್ದಾರೆ’ ಎಂದು ಆರೋಗ್ಯ ಅಧಿಕಾರಿ ಭಾಗ್ಯಲಕ್ಷ್ಮಿ ಉತ್ತರಿಸಿದರು.

‘ನಾಯಿಗಳಿಗಾಗಿ ಎರಡು ಎಕರೆ ಜಾಗ ನೀಡಿ ’

‘ನಾಯಿಗಳನ್ನು ಹಿಡಿದುಕೊಂಡು ಬಂದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ, ವಾಪಸ್‌್ ಬಿಡಲಾಗುತ್ತಿದೆ. ಅದರಿಂದಲೇ ಅವು  ವ್ಯಗ್ರವಾಗಿ ವರ್ತಿಸುತ್ತಿವೆ. ಒಂದು ವಾರ್ಡ್‌ನಲ್ಲಿ ನಾಯಿಗಳಿಗಾಗಿಯೇ  ಎರಡು ಎಕರೆ ಪ್ರದೇಶ ನೀಡಿದರೆ, ಸಮಸ್ಯೆ ಬಗೆಹರಿಯಬಹುದು’ ಎಂದು ದೇವರಾಜ್‌ ಹೇಳಿದರು.

‘ಜೈನ್‌ ಕಾಲೇಜು ಪರವಾನಗಿ ರದ್ದುಪಡಿಸಿ’

‘ನಮ್ಮ ಮನೆ ಬಳಿಗೆ ಜೈನ್‌ ಕಾಲೇಜಿನ ವಿದ್ಯಾರ್ಥಿಗಳು ಬಂದು ರಾತ್ರಿಯವರೆಗೂ ಮಾತನಾಡುತ್ತಾ ಕುಳಿತಿರುತ್ತಾರೆ. ವಯಸ್ಸಾದವರೇ ಹೆಚ್ಚಾಗಿರುವ ನಮ್ಮ ಪ್ರದೇಶದಲ್ಲಿ ಇದರಿಂದ ಬಹಳಷ್ಟು ಸಮಸ್ಯೆ ಆಗುತ್ತಿದೆ. ಇದಕ್ಕೆ ಪರಿಹಾರ ನೀಡಬೇಕು’ ಎಂದು ವಿಶ್ವೇಶ್ವರಪುರ ವಾರ್ಡ್‌ ನಿವಾಸಿ ಶ್ರೀನಿವಾಸ್‌ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಶಾಸಕ, ‘ಜೈನ್‌ ಕಾಲೇಜಿನಲ್ಲಿ ಮೈದಾನ, ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲ. ಹೀಗಾಗಿ ಕಾಲೇಜಿಗೆ ನೋಟಿಸ್‌ ನೀಡಬೇಕು. ಕಾಲೇಜಿನ ಪರವಾನಗಿಯನ್ನೂ ರದ್ದುಪಡಿಸಬೇಕು’ ಎಂದು ಸೂಚಿಸಿದರು.

ವೇದಿಕೆಯಿಂದ ಕೆಳಗಿಳಿಯುವಂತೆ ಪಾಲಿಕೆ ಸದಸ್ಯೆ ಪತಿಗೆ ತಾಕೀತು

ಬೆಂಗಳೂರು: ‘ಜನಸ್ಪಂದನ– ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ನಿವಾಸಿಗಳು ಕೇಳುವ ಪ್ರತಿ ಪ್ರಶ್ನೆಗೆ ಪಾಲಿಕೆ ಸದಸ್ಯೆ ಪ್ರತಿಭಾ ಅವರ ಪತಿ ಧನರಾಜ್‌ ಉತ್ತರಿಸುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ‘ಪ್ರತಿಭಾ ಅವರೇ ಉತ್ತರಿಸಬೇಕು. ನಿಮಗೆ ಉತ್ತರಿಸುವ ಅಧಿಕಾರ ಕೊಟ್ಟವರು ಯಾರು? ವೇದಿಕೆಯಿಂದ ಕೆಳಗಿಳಿಯಿರಿ’ ಎಂದು ಒತ್ತಾಯಿಸಿದರು. ಇದರಿಂದ ಇರುಸುಮುರುಸಿಗೆ ಒಳಗಾದ ಧನರಾಜ್‌, ‘ನಾನು ಪಾಲಿಕೆ ಮಾಜಿ ಸದಸ್ಯ’ ಎಂದರು.

‘ಮಾಜಿ ಸದಸ್ಯರಾದ ಮೇಲೆ ನೀವ್ಯಾಕೆ ಉತ್ತರ ಕೊಡುತ್ತೀರಿ. ಹಾಲಿ ಸದಸ್ಯರೇ ಉತ್ತರಿಸಲಿ’ ಎಂದು ಪಟ್ಟುಹಿಡಿದರು. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಗಲಿಬಿಲಿಗೊಂಡ ಪ್ರತಿಭಾ, ‘ನಿಮ್ಮ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ’ ಎಂದು ಹೇಳಿದರು.

ಅದೇ ರೀತಿಯ ಪ್ರಶ್ನೆ ಮಾಜಿ ಶಾಸಕ ಹೇಮಚಂದ್ರ ಸಾಗರ್‌ ಅವರಿಗೂ ಎದುರಾಯಿತು. ಇದಕ್ಕೆ ಉತ್ತರಿಸಿದ ಹೇಮಚಂದ್ರ ಸಾಗರ್‌, ‘ನಾನು ವೇದಿಕೆ ಮೇಲೆ ಕುಳಿತಿರುವುದು ಶಿಷ್ಟಾಚಾರದ ಪ್ರಕಾರ ತಪ್ಪು. ಆದರೆ, ಆರ್‌.ವಿ.ದೇವರಾಜ್‌ ಬಲವಂತ ಮಾಡಿದ್ದರಿಂದ ವೇದಿಕೆಗೆ ಬಂದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜ್‌, ‘ಹೇಮಚಂದ್ರ ಅವರು ಮಾಜಿ ಶಾಸಕರು. ಅವರ ತಂದೆ ದಯಾನಂದ ಸಾಗರ್‌ ಅವರು ರಾಜಕೀಯ ಧುರೀಣರಾಗಿದ್ದರು. ನಾನು, ಹೇಮಚಂದ್ರ ಸೋದರರಂತೆ. ಕ್ಷೇತ್ರದ ಸಮಸ್ಯೆಗಳಿಗೆ ಅವರೂ ಸ್ಪಂದಿಸುತ್ತಿದ್ದಾರೆ’ ಎಂದರು.

ಕ್ಷೇತ್ರದಲ್ಲಿ ಕೈಗೊಂಡಿರುವ ಯೋಜನೆಗಳು

ಚಿಕ್ಕಪೇಟೆ ಕ್ಷೇತ್ರದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ವಿವರಿಸಿದ ದೇವರಾಜ್‌, ‘₹150 ಕೋಟಿ ವೆಚ್ಚದಲ್ಲಿ ಕಲಾಸಿಪಾಳ್ಯ ಬಸ್‌ ನಿಲ್ದಾಣ ನಿರ್ಮಾಣ, ₹39 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ, ₹9 ಕೋಟಿ ವೆಚ್ಚದಲ್ಲಿ ಕೆಂಪಾಂಬುಧಿ ಕೆರೆ ಅಭಿವೃದ್ಧಿ,  ಕೊಳೆಗೇರಿ ಪ್ರದೇಶಗಳಲ್ಲಿ 1,000 ಮನೆಗಳಿಗೆ ₹5 ಲಕ್ಷ ವಿತರಣೆ, ಜೆ.ಸಿ. ರಸ್ತೆಯಲ್ಲಿ ₹135 ಕೋಟಿ ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗುತ್ತದೆ’ ಎಂದು ಹೇಳಿದರು.

‘ವಿಮಾನ ನಿಲ್ದಾಣ ಪ್ರಾಧಿಕಾರ ಆಸ್ತಿ ತೆರಿಗೆ ಪಾವತಿಸಬೇಕು’

ಬೆಂಗಳೂರು: ‘ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ)  ವಾಣಿಜ್ಯ ಚಟುವಟಿಕೆ ಹೊಂದಿದ ಸಾರ್ವಜನಿಕ ಸಂಸ್ಥೆಯಾಗಿದೆ. ಆದ್ದರಿಂದ ಇದನ್ನು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ.

1997ರ ಸಾಲಿನ ಆಸ್ತಿ ತೆರಿಗೆ ಹಾಗೂ ದಂಡದ ಮೊತ್ತ ₹ 8.20 ಕೋಟಿ ಪಾವತಿಸುವಂತೆ ಬಿಬಿಎಂಪಿ ವಿಮಾನ ನಿಲ್ದಾಣ ಪ್ರಾಧಕಾರಕ್ಕೆ ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಬಿಬಿಎಂಪಿ ಈ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿದೆ.

‘ವಿಮಾನ ನಿಲ್ದಾಣ ಪ್ರಾಧಿಕಾರದ ಜಾಗ ಮತ್ತು ಕಟ್ಟಡ ಬಿಬಿಎಂಪಿಗೆ ಸೇರಿದೆ. ಎಎಐ ಇದನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸಿಕೊಳ್ಳುತ್ತಿದೆ. ಆದ್ದರಿಂದ ಇದನ್ನು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ’ ಎಂಬುದು ಬಿಬಿಎಂಪಿ ಸ್ಪಷ್ಟನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry