7

ಹಣದ ಸುರಕ್ಷತೆ: ವಿಶೇಷ ಎಚ್ಚರಿಕೆ ಅಗತ್ಯ

ಕೆ. ಜಿ. ಕೃಪಾಲ್
Published:
Updated:
ಹಣದ ಸುರಕ್ಷತೆ: ವಿಶೇಷ ಎಚ್ಚರಿಕೆ ಅಗತ್ಯ

ಪೇಟೆಯಲ್ಲಿ ಷೇರಿನ ದರಗಳು ಸೂತ್ರ ಹರಿದ ಗಾಳಿಪಟದಂತೆ ಬೇಕಾಬಿಟ್ಟಿ ಏರಿಳಿತ ಪ್ರದರ್ಶಿಸುತ್ತಿರುವುದು ವಹಿವಾಟುದಾರರಲ್ಲಿ ಪೇಟೆಯ ಬಗೆಗಿನ ನಂಬಿಕೆ ಕ್ಷೀಣಿಸುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.

ಈ ವಾರದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ  ಕಂಪೆನಿಗಳಾದ ಲಕ್ಷ್ಮಿ ಎಲೆಕ್ಟ್ರಿಕ್ ಕಂಟ್ರೋಲ್, ಅಲೆಂಬಿಕ್ ಫಾರ್ಮಾ , ವಾಟೆಕ್ ವಾಬಾಗ್, ಬಾಲಾಜಿ ಟೆಲಿಫಿಲಂಸ್‌ಗಳಲ್ಲದೆ ಚೆನ್ನೈ ಪೆಟ್ರೋಲಿಯಂ, ಸನ್ ಫಾರ್ಮಾ,  ಹ್ಯಾವೆಲ್ಸ್ ಇಂಡಿಯಾ,  ಐಡಿಯಾ, ಆಯಿಲ್ ಇಂಡಿಯಾ, ಇನ್ಫೊಸಿಸ್,  ಟಿಸಿಎಸ್‌ನಂತಹ ಕಂಪೆನಿಗಳು ಸಹ ಹೆಚ್ಚು ಏರುಪೇರು ಪ್ರದರ್ಶಿಸಿವೆ.  ಬೆಲೆ ಕುಸಿದಿರುವಾಗ ವೈವಿಧ್ಯಮಯ ಕಾರಣಗಳಿಂದ ಏರಿಕೆ ಕಾಣುವುದು, ಬೆಲೆ ಏರಿಕೆಯಲ್ಲಿದ್ದಾಗ ವಿಭಿನ್ನ ಕಾರಣಗಳಿಂದ ಕುಸಿತಕ್ಕೊಳಪಡಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು,  ವ್ಯಾಲ್ಯೂ ಪಿಕ್- ಪ್ರಾಫಿಟ್ ಬುಕ್ ಪದ್ಧತಿಯು ಹೆಚ್ಚು ಫಲಕಾರಿ.

ಷೇರುಪೇಟೆಯಲ್ಲಿ  ವಹಿವಾಟುದಾರರಿಗೆ ದಿಢೀರ್ ಹಣ ಮಾಡಿಕೊಳ್ಳಬೇಕೆಂಬ ಹಂಬಲ ಹೆಚ್ಚಾದಂತಿದೆ. ಈ ವಾತಾವರಣದಲ್ಲಿ ಹೂಡಿಕೆದಾರರು ವಿಶೇಷವಾದ ಎಚ್ಚರಿಕೆಯಿಂದ ತಮ್ಮ ಹಣ ಸುರಕ್ಷತೆ ಬಗ್ಗೆ ಯೋಚಿಸಬೇಕಾಗಿದೆ.  ಬಿಎಸ್ಇ 500 ರ ಭಾಗವಾದ ಲಾ ಒಪಾಲಾ ಆರ್‌ಜಿ ಲಿ.,ಕಂಪೆನಿಯು ಒಂದು ತಿಂಗಳಲ್ಲಿ ₹565 ರ ಸಮೀಪದಿಂದ ₹440 ರ ಸಮೀಪಕ್ಕೆ ಕುಸಿದು ನಂತರ ₹544 ರವರೆಗೂ ಜಿಗಿತ ಕಂಡು ₹510 ರ ಸಮೀಪ ವಾರಾಂತ್ಯ ಕಂಡಿತು.  ಈ ರೀತಿಯ ಭಾರಿ ಏರಿಳಿತಗಳಿಗೆ ಕಂಪೆನಿಯಲ್ಲಿ,  ಆಗಸ್ಟ್ ತಿಂಗಳಲ್ಲಿ ನಡೆಯಬಹುದಾದ ವಾರ್ಷಿಕ ಸಾಮಾನ್ಯ ಸಭೆ ಮತ್ತು ಲಾಭಾಂಶ ವಿತರಣೆಗೆ ನಿಗದಿತ ದಿನಾಂಕ ಪ್ರಕಟಿಸಿದ್ದು ಬಿಟ್ಟರೆ,  ಯಾವುದೇ ರೀತಿಯ ಆಂತರಿಕ ಬದಲಾವಣೆಗಳು ಇದ್ದಿರಲಿಲ್ಲ. ಇದು  ಕೇವಲ ವಹಿವಾಟುದಾರರ ಕೃತ್ಯವಾಗಿದೆ.

ಶುಕ್ರವಾರ ದಿವೀಸ್ ಲ್ಯಾಬೊರೇಟರೀಸ್ ಷೇರಿನ ಏರಿಳಿತವು ಸಹ ವಿಸ್ಮಯಕಾರಿಯಾಗಿದೆ. ದಿನದ ಆರಂಭದಲ್ಲಿ ₹768 ರಲ್ಲಿದ್ದು  ಮಧ್ಯಾಹ್ನದ ವೇಳೆಯಲ್ಲಿ ಷೇರಿನ ಬೆಲೆಯೂ ₹708 ರ ಸಮೀಪಕ್ಕೆ ಕುಸಿದು ₹721 ರಲ್ಲಿ ವಾರಾಂತ್ಯ ಕಂಡಿದೆ.  ಒಂದೇ  ದಿನ ವಾರದ ಗರಿಷ್ಠದಿಂದ ವಾರದ ಕನಿಷ್ಠ ಬೆಲೆಗೆ ಕುಸಿತ ಕಂಡಿತ್ತು. ಈ ಷೇರಿನ ಬೆಲೆಯೂ   ಹದಿನೈದು ದಿನಗಳಲ್ಲಿ ₹816 ರ ಗರಿಷ್ಠದಿಂದ ₹708 ರ ಕನಿಷ್ಠದವರೆಗೂ ಏರಿಳಿತ ಪ್ರದರ್ಶಿಸಿರುವುದು,  ಶನಿವಾರ ಕಂಪೆನಿಯು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ಕಾರಣದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ವಹಿವಾಟುದಾರರು ಲಾಭದ ನಗದೀಕರಣಕ್ಕೆ ಮುಂದಾಗಿರಬಹುದು.

ರಿಲಯನ್ಸ್ ಇಂಡಸ್ಟ್ರೀಸ್ ಲಿ.  ಕಂಪೆನಿ 2009 ರಲ್ಲಿ ಬೋನಸ್ ಷೇರು ವಿತರಿಸಿದ ಸಂದರ್ಭದಲ್ಲಿ ₹2,000 ದ ಸಮೀಪದಲ್ಲಿದ್ದು, ಬೋನಸ್ ಷೇರಿನ ವಿತರಣೆ ನಂತರದಲ್ಲಿ ಅಂದರೆ  ಸುಮಾರು  ಎಂಟು ವರ್ಷವಾದರೂ, ಈಗ ಮತ್ತೊಮ್ಮೆ ಬೋನಸ್ ಷೇರು ಪ್ರಕಟಿಸಿದಾಗಲೂ,  ಆಗಿನ ಗರಿಷ್ಟ ಮಟ್ಟಕ್ಕೆ ತಲುಪಿದೆ.  ಇದು ಪೇಟೆಯ ಸಹಜಗುಣ.

ಜಯಂತ್ ಆಗ್ರೋ ಆರ್ಗ್ಯಾನಿಕ್ಸ್ ಲಿಮಿಟೆಡ್  ಕಂಪೆನಿಯ ₹5 ರ ಮುಖಬೆಲೆಯ ಷೇರಿನ ಬೆಲೆಯು ಸರಿಯಾಗಿ ಕಳೆದ ವರ್ಷ ಜುಲೈ 22 ರಂದು ₹266 ರ ಸಮೀಪವಿದ್ದು  ಷೇರಿನ ಬೆಲೆಯು ಅಲ್ಲಿಂದ ಪುಟಿದೆದ್ದು  ವಾರ್ಷಿಕ ಗರಿಷ್ಠ ₹1,050 ರವರೆಗೂ  ತಲುಪಿ,  ಕಂಪೆನಿ ವಿತರಿಸಲಿರುವ ಬೋನಸ್ ಷೇರಿಗೆ ನಿಗದಿತ ದಿನ ಗೊತ್ತುಪಡಿಸಿದ ಕಾರಣ ₹1,004 ರ ಸಮೀಪವಿದೆ.  ಇಷ್ಟು ರಭಸವಾದ ಏರಿಕೆ ಕಂಡಿರುವ ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಎಷ್ಟರಮಟ್ಟಿಗೆ ಬೆಳವಣಿಗೆ ಕಾಣಬಲ್ಲದು ಎಂಬುದನ್ನು ಭವಿಷ್ಯವೇ ತಿಳಿಸುವುದು. 

ಷೇರುಪೇಟೆಯ ಸಂವೇದನಾ ರೀತಿಯು ಎಷ್ಟು ವಿಚಿತ್ರವಾಗಿದೆ ಎಂಬುದಕ್ಕೆ ಮಂಗಳವಾರ  ವೃತ್ತಿಪರರಿಂದ ನಿರ್ವಹಿಸಲ್ಪಡುತ್ತಿರುವ, ಪ್ರವರ್ತಕರೇ ಇಲ್ಲದಂತಹ ಕಂಪೆನಿ ಐಟಿಸಿ ಲಿ., ಕಂಪೆನಿ  ಭಾರಿ ಕುಸಿತ ದಾಖಲಿಸಿದೆ.  ಇಂದಿನ ದಿನಗಳಲ್ಲಿ ವಹಿವಾಟುದಾರರ ನಿರ್ಧಾರಗಳೇ ಹೆಚ್ಚು ಪ್ರಭಾವಿಯಾಗಿದ್ದು, ಕಂಪೆನಿಗಳ ಸಾಧನೆಯು ಮರೆಯಾಗಿದೆ.  ಇದಕ್ಕೆ ಕಾರಣ ಪೇಟೆಯತ್ತ ಹರಿದುಬರುತ್ತಿರುವ ಹಣದ ಒಳಹರಿವು  ಎಂಬುದು ನಿರ್ವಿವಾದ.  ಪೇಟೆ ಸಂಪೂರ್ಣವಾಗಿ ವ್ಯಾವಹಾರಿಕವಾಗಿ ವರ್ತಿಸುತ್ತಿದೆ.   

ಈ ಕಂಪೆನಿಯ  ಷೇರಿನ ಬೆಲೆ ಕಳೆದ ಮೂರು ತಿಂಗಳಲ್ಲಿ ₹280 ರ ಸಮೀಪದಿಂದ ₹350 ನ್ನು ದಾಟಿ ಮಂಗಳವಾರ ಮತ್ತೆ ₹280 ರ ಸಮೀಪಕ್ಕೆ ಮರಳಿದೆ ಅಷ್ಟೇ. ಇದಕ್ಕೆ ಕಾರಣಗಳು ನಗಣ್ಯವಾಗಿವೆ.    ಐಟಿಸಿ ಷೇರಿನ ಬೆಲೆ ₹41 ರಷ್ಟು ಕುಸಿತವು ಸಂವೇದಿ ಸೂಚ್ಯಂಕವನ್ನೂ 368 ಅಂಶ ಕುಸಿಯುವಂತೆ ಮಾಡಿತ್ತು. 

ಶುಕ್ರವಾರ ಚಟುವಟಿಕೆಯಿಂದ ವಿಜೃಂಭಿಸಿದ ಮತ್ತೊಂದು ಕಂಪೆನಿ ಎಂದರೆ  ಬಿಎಸ್ಇ 500 ರ ಭಾಗವಾದ   ಸ್ಟರ್ಲೈಟ್  ಟೆಕ್ನಾಲಜಿಸ್ ಲಿಮಿಟೆಡ್.  ಈ ಕಂಪೆನಿಯ ಷೇರು ಕಳೆದ ಸೆಪ್ಟೆಂಬರ್‌ನಲ್ಲಿ ₹74 ರ ಸಮೀಪವಿದ್ದು ಶುಕ್ರವಾರ  ವಾರ್ಷಿಕ ಗರಿಷ್ಠ ₹245 ನ್ನು ತಲುಪಿ ಅಲ್ಪಾವಧಿಯಲ್ಲೇ ಅಧಿಕ ಲಾಭ ಗಳಿಸಿಕೊಟ್ಟಿದೆ.  ಆಶ್ಚರ್ಯಕರ ವಿಚಾರವೆಂದರೆ ಕಳೆದ ಒಂದೇ ವಾರದಲ್ಲಿ ಷೇರಿನ ಬೆಲೆಯು ₹158 ರ ಸಮೀಪದಿಂದ ₹245 ರವರೆಗೂ ಏರಿಳಿತ ಪ್ರದರ್ಶಿಸಿದ್ದಲ್ಲದೆ, ಒಂದೇ ದಿನ ₹201 ರಿಂದ ₹245 ರವರೆಗೂ ಏರಿಳಿತ ಪ್ರದರ್ಶಿಸಿದೆ.

ಶುಕ್ರವಾರ ರಿಲಯನ್ಸ್ ಇಂಡಸ್ಟ್ರೀಸ್ ನ ವಾರ್ಷಿಕ ಸಭೆಯಲ್ಲಿ ಜಿಯೊ ಯೋಜನೆಗಳ ಬಗ್ಗೆ ಕಂಪೆನಿ ಅಧ್ಯಕ್ಷ ವಿವರಿಸುತ್ತಿದ್ದಾಗ, ಸಮಾನಾಂತರವಾಗಿ ಭಾರ್ತಿ ಏರ್ ಟೆಲ್ ಮತ್ತು ಐಡಿಯಾ ಷೇರಿನ ಬೆಲೆಗಳು ಡೋಲಾಯಮಾನವಾಗಿ ಸೂಕ್ಷ್ಮತೆ ಪ್ರದರ್ಶಿಸಿದವು.

ಒಟ್ಟಾರೆ, ಈ ವಾರ ಸಂವೇದಿ ಸೂಚ್ಯಂಕವು ಕೇವಲ 8 ಅಂಶಗಳ ಏರಿಕೆ ಕಂಡರೆ, ಮಧ್ಯಮ ಶ್ರೇಣಿಯ ಸೂಚ್ಯಂಕವು 1 ಅಂಶ ಇಳಿಕೆ ಕಂಡಿದೆ.  ಕೆಳಮಧ್ಯಮ ಶ್ರೇಣಿ ಸೂಚ್ಯಂಕವು ಗಮನಾರ್ಹವಾದ 84 ಅಂಶಗಳ ಏರಿಕೆ ಕಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ₹1,900 ಕೋಟಿ  ಹೂಡಿಕೆ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,286 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿವೆ.  ವಾರಾಂತ್ಯದ ದಿನ ಪೇಟೆಯ ಬಂಡವಾಳ ಮೌಲ್ಯ ₹131.41  ಲಕ್ಷ ಕೋಟಿಯಲ್ಲಿತ್ತು. ಇದು ಸಾರ್ವಕಾಲಿಕ ಗರಿಷ್ಠವಾಗಿದೆ. 

ಲಾಭಾಂಶ:  ಎಸಿಸಿ ಪ್ರತಿ ಷೇರಿಗೆ ₹11,  ಕ್ರಿಸಿಲ್ ₹6 (ಮು. ಬೆ ₹1), ಸನೋಫಿ ಇಂಡಿಯಾ  ಪ್ರತಿ ಷೇರಿಗೆ ₹18.

ಬೋನಸ್ ಷೇರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯು 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಜಯಂತ್  ಆಗ್ರೊ ಆರ್ಗ್ಯಾನಿಕ್ಸ್ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಆಗಸ್ಟ್ 2 ನಿಗದಿತ ದಿನ.

ಮುಖಬೆಲೆ ಸೀಳಿಕೆ:

* ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಕಂಪೆನಿಯು ಆಗಸ್ಟ್ 11 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

* ಅಟ್ಲಾಸ್  ಸೈಕಲ್ಸ್ (ಹರಿಯಾಣ) ಕನ್ಪಿಯು ಆಗಸ್ಟ್ 4 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

* ಎಲ್ ಪ್ರೊ ಇಂಟರ್ ನ್ಯಾಷನಲ್ ಕಂಪೆನಿ ಈ ತಿಂಗಳ 25 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

*

ವಾರದ ವಿಶೇಷ

ಕ್ಯಾಷ್‌ ಬ್ಯಾಕ್ ಯೋಜನೆ 


ಇತ್ತೀಚಿನ ದಿನಗಳಲ್ಲಿ ರಿಯಾಯಿತಿ ಮಾರಾಟ, ಕ್ಯಾಷ್‌ ಬ್ಯಾಕ್ ಆಫರ್ ನಂತಹ ಯೋಜನೆಗಳಿಂದ ಗ್ರಾಹಕರನ್ನು ಆಕರ್ಷಿಸುವ ಪದ್ಧತಿ ಹೆಚ್ಚು ಜನಸ್ಪಂದನವನ್ನು ಪಡೆಯುತ್ತಿದೆ.  ಆದರೆ, ಷೇರುಪೇಟೆಯಲ್ಲಿ  ‘ಕ್ಯಾಷ್‌ ಬ್ಯಾಕ್ ಯೋಜನೆ’ ಒಂದು ರೀತಿ ವೈಶಿಷ್ಟತೆಯಿಂದ ಕೂಡಿದೆ.

ಉದಾಹರಣೆಗೆ ಮಂಗಳವಾರ ಐಟಿ ಸಿ ಷೇರಿನ ಬೆಲೆಯು ಅಗಾಧವಾದ ಕುಸಿತ ಅಂದರೆ ₹40 ಕ್ಕೂ ಹೆಚ್ಚಿನ ಇಳಿಕೆ ಕಂಡಿದೆ.   ವಿಶೇಷವೆಂದರೆ ಈ ಷೇರಿನ ಬೆಲೆಯು ಕಳೆದ ಮೂರು ತಿಂಗಳಲ್ಲಿ ₹280 ರ ಸಮೀಪದಲ್ಲಿದ್ದು  ಈ ತಿಂಗಳ ಮೊದಲವಾರದಲ್ಲಿ ₹353 ರವರೆಗೂ ಜಿಗಿದು ಈ ವಾರ ₹280 ರ ಸಮೀಪಕ್ಕೆ ಮರಳಿದೆ.  

ಈ ಹಿಂದೆ ಕೊಂಡಿದ್ದವರು ₹350 ರ ಸಮೀಪದಲ್ಲಿ ಮಾರಾಟ ಮಾಡಿದ್ದಲ್ಲಿ ಅವರಿಗೆ ಅಗಾಧವಾದ ಕ್ಯಾಷ್‌ ಬ್ಯಾಕ್ ಲಭಿಸುತ್ತಿತ್ತು.  ಮೂರು ತಿಂಗಳಲ್ಲಿ  ಏರಿಕೆ ಕಾಣಲು  ಜಿಎಸ್‌ಟಿ ಕಾರಣ. ಉತ್ತಮ ಲಾಭ ಗಳಿಸಲು ಅವಕಾಶವಿದೆ ಎಂಬುದು  ಕಾರಣವಾದರೆ,  ಇಳಿಕೆಗೂ ಅದೇ ಅಂಶ ಕಾರಣವಾಯಿತು. 

ಈ ಸಮಯದ ಅಂತರದಲ್ಲಿ ಅಂದು ಷೇರು ಹೊಂದಿದವರು ಷೇರಿನ ಬೆಲೆ ವಾರ್ಷಿಕ ಗರಿಷ್ಠಕ್ಕೆ ತಲುಪಿದಾಗ ಮಾರಾಟ ಮಾಡಿದ್ದಲ್ಲಿ, ಲಾಭದ ನಗದೀಕರಣದೊಂದಿಗೆ ಈ ವಾರ ಮತ್ತೆ ಅದೇ ಬೆಲೆಯಲ್ಲಿಯೇ ಕೊಂಡು,  ಈ ಚಟುವಟಿಕೆಯಿಂದ ಪ್ರತಿ ಷೇರಿಗೆ  ಗರಿಷ್ಟ ₹70ರಷ್ಟು  ಉತ್ತಮವಾದ ಕ್ಯಾಷ್‌ ಬ್ಯಾಕ್   ಪಡೆಯುವ  ಅವಕಾಶವನ್ನು ಪೇಟೆ  ಒದಗಿಸಿತ್ತು.  ಈ ಕಂಪೆನಿಯ ಎಜಿಎಂ ಈ ತಿಂಗಳ 27ರಂದು ನಡೆಯಲಿದ್ದು ಷೇರಿನ ಬೆಲೆ ಚೇತರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ.

ಇದೆ ರೀತಿ ಕೇರ್ ರೇಟಿಂಗ್ಸ್ ಷೇರು ಒಂದೇ ತಿಂಗಳಲ್ಲಿ ₹1,400 ರ ಸಮೀಪದಿಂದ ₹1,400 ರವರೆಗೂ ಏರಿಕೆ ಕಂಡು ಮತ್ತೆ ₹1,600 ರ ಸಮೀಪಕ್ಕೆ ಇಳಿದಿದೆ. ಪೇಟೆಗಳು ಗರಿಷ್ಠದಲ್ಲಿರುವ ಈ ಸಮಯದಲ್ಲಿ ದಿಢೀರನೆ ಮೇಲಕ್ಕೆ ಚಿಮ್ಮುವ ಷೇರಿನ ದರಗಳಲ್ಲಿ ಮಾರಾಟ ಮಾಡಿಕೊಂಡು ಲಾಭ ಮಾಡಿಕೊಂಡಲ್ಲಿ ಹೂಡಿಕೆ ಸುರಕ್ಷಿತವಾಗಿರಲಿದೆ.ಮೊ: 9886313380 (ಸಂಜೆ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry