7

ಎರಡು ಧ್ರುವಗಳತ್ತ ಎರಡು ತಾರೆಗಳು

ನಾಗೇಶ ಹೆಗಡೆ
Published:
Updated:
ಎರಡು ಧ್ರುವಗಳತ್ತ ಎರಡು ತಾರೆಗಳು

ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಎರಡೂ ನಮ್ಮ ದೇಶದಲ್ಲಿ ಬೆಳೆಯಬೇಕೆಂದು ಜೀವನವಿಡೀ ಶ್ರಮಿಸಿದ ಪ್ರೊ. ಯಶ್‌ಪಾಲ್ ಅವರ ನಿಧನದ ವಾರ್ತೆ ಮೊನ್ನೆ ಟಿವಿ ವಾರ್ತೆಗಳಲ್ಲಿ ಬರುತ್ತಿತ್ತು. ಅದೇ ಸಂದರ್ಭದಲ್ಲಿ ಎನ್‌ಡಿಟಿವಿ ವಾಹಿನಿಯಲ್ಲಿ ಇನ್ನೊಂದು ದೃಶ್ಯಾವಳಿ ಪ್ರಸಾರವಾಗುತ್ತಿತ್ತು: ಹೆರಿಗೆ ಸಮಯದಲ್ಲಿ ತಾಯಿ ಮಕ್ಕಳ ಆರೋಗ್ಯ ಚೆನ್ನಾಗಿರಲೆಂದು ಹೈದರಾಬಾದ್‌ನ ಗಾಂಧೀ ಆಸ್ಪತ್ರೆಯ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಹರಿ ಅನುಪಮಾ ಅವರು ಮಹಾಮೃತ್ಯುಂಜಯ ಹೋಮವನ್ನು ಆಸ್ಪತ್ರೆಯಲ್ಲೇ ಹಮ್ಮಿಕೊಂಡು ಯಜ್ಞಕುಂಡದ ಎದುರು ಸಮಿತ್ತುಗಳನ್ನು ಬೆಂಕಿಗೆ ಎಸೆಯುತ್ತ ಕೂತಿದ್ದರು.

ಅತ್ತ ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ಕೇವಲ ಐದು ರೂಪಾಯಿ ಶುಲ್ಕ ನೀಡಿದರೆ ರೋಗಿಯ ಹಣೆಬರಹವನ್ನು ಹೇಳಬಲ್ಲ ಜ್ಯೋತಿಷಿಗಳಿಗೆ ಸರ್ಕಾರವೇ ಜಾಗ ನೀಡಿ ಕೂರಿಸಿದ ಸುದ್ದಿ ಬರುತ್ತಿತ್ತು. ಅಂದಹಾಗೆ, ಖರಗಪುರದ ಐಐಟಿಯಲ್ಲಿ ವಾಸ್ತುಶಾಸ್ತ್ರದ ಪಾಠ ಆರಂಭವಾಗುತ್ತಿದೆ. ಅಗಲಿದ ಗಣ್ಯ ವಿಜ್ಞಾನಿಗಳಿಬ್ಬರ ಬಗ್ಗೆ ಶ್ರದ್ಧಾಂಜಲಿ ಟಿಪ್ಪಣಿ ಹೀಗೆ ಆರಂಭವಾಗಬೇಕಿತ್ತೆ?

ವಿಕ್ರಮ್ ಸಾರಾಭಾಯಿಯವರ ಕನಸನ್ನು ನನಸು ಮಾಡಹೊರಟ ಇಬ್ಬರು ವಿಜ್ಞಾನಿಗಳು- ಇಬ್ಬರೂ ಭೌತವಿಜ್ಞಾನಿಗಳು, ಇಬ್ಬರೂ ಪದ್ಮವಿಭೂಷಣ ಸಮ್ಮಾನಿತರು- 36 ಗಂಟೆಗಳ ಅಂತರದಲ್ಲಿ ಗತಿಸಿದರು. ಪ್ರೊ. ಯು.ಆರ್. ರಾವ್ ಮತ್ತು ಪ್ರೊ. ಯಶ್‌ಪಾಲ್ ಇಬ್ಬರೂ ಅಮೆರಿಕದಲ್ಲಿ ಉನ್ನತ ಅಧ್ಯಯನ ಮಾಡಿ ಬಂದವರು. ಇಬ್ಬರೂ ಅಹ್ಮದಾಬಾದ್‌ನ ಭೌತವಿಜ್ಞಾನ ಕೇಂದ್ರದಲ್ಲಿ ಹೊಸ ಸಂಶೋಧನ ಕ್ಷೇತ್ರಕ್ಕೆ ಕಾಲಿಟ್ಟವರು. ನಂತರದ ಅವರಿಬ್ಬರ ಕಾರ್ಯಕ್ಷೇತ್ರಗಳು ಬಾಹ್ಯಾಕಾಶಕ್ಕೆ ಸಂಬಂಧಿಸಿದ್ದೇ ಆದರೂ ಪರಸ್ಪರ ವಿರುದ್ಧ ದಿಕ್ಕಿಗೆ ವಿಸ್ತರಿಸಿಕೊಂಡವು. ಯು.ಆರ್. ರಾವ್ ರಾಕೆಟ್‌ಗಳತ್ತ ಮುಖ ಮಾಡಿದರೆ, ಯಶ್‌ಪಾಲ್ ವಿಜ್ಞಾನ ಶಿಕ್ಷಣವನ್ನು ಸುಧಾರಿಸುವತ್ತ ಗಮನ ಹರಿಸಿದರು.

ಯಶ್‌ಪಾಲ್ ಬಾಹ್ಯಾಕಾಶ ಕ್ಷೇತ್ರಕ್ಕೆ ಐದು ವರ್ಷ ಮೊದಲು ಕಾಲಿಟ್ಟರು. 1970ರ ಆರಂಭದಲ್ಲಿ ಅಮೆರಿಕ ಮತ್ತು ಸೋವಿಯತ್ ಸಂಘ ಎರಡೂ ಬಾಹ್ಯಾಕಾಶ ಪೈಪೋಟಿಯಲ್ಲಿ ತೊಡಗಿದ್ದವು. ಉಪಗ್ರಹಗಳನ್ನು ಸಂಪರ್ಕದ ಸಾಧನವಾಗಿ ಬಳಸುವ ಕೆಲಸ ಬೇರೆ ಯಾವ ದೇಶಗಳಲ್ಲೂ ಆರಂಭವಾಗಿರಲಿಲ್ಲ. ಭಾರತಕ್ಕೆ ಉಪಗ್ರಹ ಸೇವೆಯನ್ನು ಎರವಲು ನೀಡಲು ಅಮೆರಿಕ ಮುಂದೆ ಬಂತು. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲೆಂದು ಅಹ್ಮದಾಬಾದ್‌ನಲ್ಲಿ ‘ಸ್ಪೇಸ್ ಅಪ್ಲಿಕೇಶನ್ ಸೆಂಟರ್’ ಆರಂಭವಾಯಿತು.

ದೂರದರ್ಶನ ಪ್ರಸಾರಕ್ಕೆ ಬಳಸಲು ಸಾಧ್ಯವಾಗುವುದಾದರೆ ಭಾರತದ ಹಳ್ಳಿಹಳ್ಳಿಗಳಿಗೂ ಜ್ಞಾನ ಪ್ರಸಾರಕ್ಕೆ ಅದು ಬಹುಮುಖ್ಯ ಸಾಧನ ಆದೀತೆಂದು ಯಶ್‌ಪಾಲ್ ಸೂಚಿಸಿದರು. ಈ ವಿಚಾರ ಅಂದಿನ ಮಟ್ಟಿಗೆ ಜಗತ್ತಿಗೇ ಹೊಸದಾಗಿತ್ತು. ಅಮೆರಿಕ ದೊಡ್ಡ ಮನಸ್ಸು ಮಾಡಿ ತನ್ನ ಉಪಗ್ರಹವನ್ನು ಸ್ವಲ್ಪ ಈಚೆ ಸರಿಸಿ ಭಾರತದ ಟಿವಿ ಕಾರ್ಯಕ್ರಮಗಳ ಪ್ರಸಾರಕ್ಕೆಂದೇ ಒಂದು ಟ್ರಾನ್ಸ್‌ಪಾಂಡರನ್ನು (ಕನ್ನಡಿ ಎಂದಿಟ್ಟುಕೊಳ್ಳಿ) ಭಾಗಶಃ ಮೀಸಲಾಗಿಡಲು ನಿರ್ಧರಿಸಿತು.

ಅಂದಿನ ದಿನಗಳಲ್ಲಿ ಭಾರತದಲ್ಲಿ ಟಿವಿ ಎಂದರೆ ದಿಲ್ಲಿ, ಕೋಲ್ಕತಾ ಮತ್ತು ಮುಂಬೈಯಲ್ಲಿ ಅದೂ ದಿನಕ್ಕೆ ಒಂದೆರಡು ಗಂಟೆಗಳ ಕಾಲ ಕಪ್ಪು ಬಿಳುಪು ಕಾರ್ಯಕ್ರಮಗಳ ಬಿತ್ತರಣೆ ಆಗುತ್ತಿತ್ತು. ಇಡೀ ದೇಶದ ಪ್ರತಿ ಹಳ್ಳಿಗೂ, ವಿಶೇಷವಾಗಿ ಶಾಲೆಗಳಿಗೆ ವಿಜ್ಞಾನ ಶಿಕ್ಷಣ ನೀಡುವ ಹಾಗೂ ಪಂಚಾಯ್ತಿ ಕಟ್ಟೆಗಳಲ್ಲಿ ಮೂಢ ನಂಬಿಕೆಗಳ ನಿವಾರಣೆಗೆ ಕಾರ್ಯಕ್ರಮಗಳನ್ನು ರೂಪಿಸುವ ಹಾಗೂ ಸೂಕ್ತ ಸವಲತ್ತು (ಹಾರ್ಡ್‌ವೇರ್) ಒದಗಿಸುವ ಹೊಣೆಗಾರಿಕೆ ಯಶ್‌ಪಾಲ್ ತಂಡದವರ ಹೆಗಲ ಮೇಲೆಯೇ ಬಿತ್ತು.

ಟಿವಿಯಲ್ಲಿ ಬಿತ್ತರಣೆಗೆಂದು ಕಾರ್ಯಕ್ರಮಗಳನ್ನು ರೂಪಿಸಲೆಂದು ಹೈದರಾಬಾದ್‌ನಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಯಿತು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಿಂದ ಬಂದವರಿಗೆ ಟಿವಿಗಾಗಿ ಶೈಕ್ಷಣಿಕ ಸಾಕ್ಷ್ಯಚಿತ್ರಗಳ ನಿರ್ಮಾಣದ ತರಬೇತಿ ಆರಂಭವಾಯಿತು. ಇತ್ತ ಹಳ್ಳಿಗಳಿಗೆ ಹೋಗಿ ನೋಡಿದರೆ ಅಲ್ಲಿ ಶಾಲೆಗಳೇ ಅಪರೂಪ; ವಿಜ್ಞಾನ ಬೋಧನೆಗೆ ಲ್ಯಾಬ್ ಹಾಗಿರಲಿ, ಕೆಲವೆಡೆ ಕಪಾಟೂ ಇಲ್ಲ, ಕರಿಹಲಗೆಯೂ ಇಲ್ಲ. ವಿದ್ಯುತ್ ಇಲ್ಲ.

ಮಕ್ಕಳಿಗಾಗಿ ವಿಜ್ಞಾನ ಪಾಠಗಳನ್ನು ನಿರೂಪಿಸುವ ಸವಾಲು ಇವರಿಗೆ ಎದುರಾಯಿತು. ಯಾವುದೇ ಪರಿಕರಗಳಿಲ್ಲದೆಯೂ ಮಕ್ಕಳು ಬೆಳೆಯುತ್ತಿರುವ ಪರಿಸರದ ಉದಾಹರಣೆಗಳಲ್ಲೇ ವಿಜ್ಞಾನ ಮತ್ತು ವೈಜ್ಞಾನಿಕ ತತ್ವಗಳನ್ನು ತೋರಿಸಿ ವೈಜ್ಞಾನಿಕ ಮನೋಭಾವವನ್ನು ಬಿತ್ತುವ ಹೊಸ ಪಠ್ಯಕ್ರಮಗಳನ್ನು ರೂಪಿಸುವ ಹೊಣೆಯನ್ನು ಯಶ್‌ಪಾಲ್ ಹೊತ್ತರು. ಅವನ್ನೆಲ್ಲ ಪ್ರಸಾರ ಮಾಡಲು ಅಮೆರಿಕದ ಉಪಗ್ರಹಗಳನ್ನು ಅವಲಂಬಿಸುವ ಬದಲು ಭಾರತದ್ದೇ ಉಪಗ್ರಹವನ್ನು ರೂಪಿಸುವ ಹೊಣೆ ಯು.ಆರ್. ರಾವ್ ಪಾಲಿಗೆ ಬಂತು. ಒಂದೇ ಸಂಸ್ಥೆಯ ಒಂದು ಕಡೆ ‘ಆರ್ಯಭಟ’ ಉಪಗ್ರಹದ ನೀಲನಕ್ಷೆ ಸಿದ್ಧವಾಗುತ್ತಿದ್ದಾಗ ಇನ್ನೊಂದು ಕಡೆ ಅದರ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸುವ ವಿಧಿ ವಿಧಾನಗಳ ನಕ್ಷೆ ಸಿದ್ಧವಾಗತೊಡಗಿತ್ತು.

ಮುಂದಿನ ಕತೆಯನ್ನು ಮತ್ತೆ ಹೇಳಬೇಕಾಗಿಲ್ಲ. ಇಬ್ಬರೂ ಮೇಲೇರುತ್ತ, ಭಾರತದ ಪ್ರತಿಭೆಗಳನ್ನು ಹುಡುಕಿ ಮೇಲೆತ್ತುತ್ತ ಹೋದರು. ಉಪಗ್ರಹ ತಯಾರಾದರೆ ಸಾಲದು, ಅದನ್ನು ಮೇಲಕ್ಕೆ ಎತ್ತಿ ಕೂರಿಸಲು ನಮ್ಮದೇ ರಾಕೆಟ್ಟನ್ನು ರೂಪಿಸುವತ್ತ ಯು.ಆರ್. ರಾವ್ ನೇತೃತ್ವದ ತಂಡ ಸಜ್ಜಾಗುತ್ತಿತ್ತು. ಮಕ್ಕಳ ಪಾಠಕ್ರಮ ಬದಲಾದರೆ ಸಾಲದು, ಬೋಧನಾ ಕ್ರಮ ಕೂಡ ಬದಲಾಗಬೇಕು, ಅಜ್ಞಾನ ನೀಗಿದರೆ ಸಾಲದು, ಸಮಾಜದಲ್ಲಿ ಹಾಸು ಹೊಕ್ಕಾಗಿ

ರುವ ಮೌಢ್ಯಗಳ ನಿವಾರಣೆಗೂ ಕ್ರಮ ಕೈಗೊಳ್ಳಬೇಕು ಎಂದು ಯಶ್‌ಪಾಲ್ ತಮ್ಮನ್ನು ತೊಡಗಿಸಿಕೊಂಡರು. ವಿಜ್ಞಾನ ಶಿಕ್ಷಣಕ್ಕೆಂದೇ ಸಂಶೋಧನ ಸಂಸ್ಥೆಗಳನ್ನು ಕಟ್ಟಿದರು. ಮಕ್ಕಳಿಗೆ ವಿಜ್ಞಾನ ಬೋಧಿಸುವ ಸರ್ಕಾರೇತರ ಸಂಘಟನೆಗಳನ್ನು ಪ್ರೋತ್ಸಾಹಿಸಿದರು.

ಕಾಲೇಜಿಗೆ ಪ್ರವೇಶಿಸುತ್ತಿರುವವರಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳನ್ನು, ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣದ ಕೊಂಡಿಕೇಂದ್ರಗಳನ್ನು ಪ್ರಾರಂಭಿಸಿದರು. ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ವಿಶ್ವಸಂಸ್ಥೆ ಆಯೋಜಿಸಿದ್ದ ಜಾಗತಿಕ ಮೇಳಕ್ಕೆ ಮಹಾ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು.

ಯುಜಿಸಿ, ವಿಜ್ಞಾನ ತಂತ್ರಜ್ಞಾನ ಇಲಾಖೆ, ಯೋಜನಾ ಆಯೋಗಗಳಲ್ಲಿ ಛಾಪು ಮೂಡಿಸಿದರು. ಬಾಹ್ಯಾಕಾಶ ಯಾತ್ರಿಗಳ ಹಾಗೆ ಮಕ್ಕಳೂ ತೂಕರಹಿತ ಸ್ಥಿತಿಯಲ್ಲಿ ಶಿಕ್ಷಣ ಪಡೆಯುವುದು ಹೇಗೆಂಬ ಬಗ್ಗೆ ‘ಲರ್ನಿಂಗ್ ವಿದೌಟ್ ಬರ್ಡನ್’ ವರದಿ ತಯಾರಿಸಿದರು. ಉನ್ನತ ಶಿಕ್ಷಣದಲ್ಲಿ ಸುಧಾರಣೆಯ ಸೂತ್ರಗಳನ್ನು ನಿರೂಪಿಸಿದರು. ದೂರದರ್ಶನಕ್ಕೆಂದು ಗಿರೀಶ ಕಾರ್ನಾಡ್ ರೂಪಿಸಿದ ಜನಪ್ರಿಯ ‘ಟರ್ನಿಂಗ್ ಪಾಯಿಂಟ್’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿಜ್ಞಾನದ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ಸರಳ, ರಂಜನೀಯ ಶೈಲಿಯಲ್ಲಿ ನಡೆಸಿಕೊಟ್ಟರು.

ಯಶ್‌ಪಾಲ್ ನಿವೃತ್ತಿಯ ನಂತರ ಇನ್ನೂ ಹೆಚ್ಚಿನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಜನ ವಿಜ್ಞಾನ ಜಾಥಾ’ ಮೂಲಕ ದೇಶದ ಮೂಲೆ ಮೂಲೆಗೆ ವಿಜ್ಞಾನ ಸಂದೇಶವನ್ನು ತಲುಪಿಸಬಲ್ಲ ಐದು ಕೋಟಿ ಸಂವಹನಕಾರರ ಗುಂಪುಗಳನ್ನು ಸಂಘಟಿಸಿದರು. ಎಲ್ಲೇ ಸೂರ್ಯಗ್ರಹಣ ನಡೆಯಲಿ, ಅದೊಂದು ವಿಜ್ಞಾನದ ಹಬ್ಬವೆಂಬಂತೆ, ಮೂಢ ನಂಬಿಕೆಗಳ ನಿವಾರಣೆಗೆ ಒದಗಿದ ಸುಸಂದರ್ಭವೆಂಬಂತೆ ಮೇಳ ನಡೆಸುತ್ತಿದ್ದರು. ಮಕ್ಕಳು ಹುಟ್ಟುತ್ತಲೇ ವಿಜ್ಞಾನಿಗಳಾಗಿರುತ್ತಾರೆ. ಅನ್ವೇಷಣೆಯ ಬುದ್ಧಿಯನ್ನು ಮೊಂಡು ಮಾಡುವಂತೆ ನಾವು ನಂಬಿಕೆಗಳನ್ನು ಹೇರುತ್ತ ಹೋಗುತ್ತೇವೆ ಎನ್ನುತ್ತಿದ್ದರು.

ಶಾಲಾ ಮಕ್ಕಳಲ್ಲಿ ಪಾಠಗಳನ್ನು ತುರುಕುವ ಬದಲು ಅವರಲ್ಲಿ ಜ್ಞಾನದ ಹಸಿವನ್ನು ಸೃಷ್ಟಿಸುವುದೇ ಶಿಕ್ಷಣದ ಉದ್ದೇಶವಾಗಬೇಕು; ಈ ಟ್ಯೂಶನ್ ಕೇಂದ್ರಗಳು, ನೂರಕ್ಕೆ ನೂರು ಅಂಕ ಪಡೆಯಬೇಕೆಂಬ ಈ ಹಪಾಹಪಿ ಇವನ್ನೆಲ್ಲ ಕೊನೆಗಾಣಿಸಬೇಕು ಎಂಬುದನ್ನು ಅವರು ಒತ್ತಿ ಹೇಳುತ್ತಿದ್ದರು. ಪ್ರಶ್ನೆಗಳನ್ನು ಕೇಳುವ ವಿದ್ಯಾರ್ಥಿ ಮತ್ತು ಉತ್ತರಕ್ಕಾಗಿ ತಡಕಾಡುವ ಗುರುವಿನ ಮಧ್ಯೆ ಜ್ಞಾನ- ವಿಜ್ಞಾನ ವಿಕಸಿತವಾಗಬೇಕು ಎನ್ನುತ್ತಿದ್ದರು. ಜನರಲ್ಲಿ ಅರಿವು ಮೂಡಿಸುವ ಬದಲು ಮಾಧ್ಯಮಗಳಲ್ಲಿ ಮೂಢ ನಂಬಿಕೆಗಳಿಗೇ ನೀರೆರೆಯುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ, ಅದನ್ನು ಪ್ರತಿರೋಧಿಸದೆ ಲ್ಯಾಬ್‌ಗಳಲ್ಲಿ ತಲೆಮರೆಸಿ ಕೂತ ವಿಜ್ಞಾನಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ವ್ಯಂಗ್ಯ ಏನೆಂದರೆ, ಹೈದರಾಬಾದಿನ ಆಸ್ಪತ್ರೆಯ ಹೋಮಕುಂಡದ ಎದುರು ಜಮಾಯಿಸಿದಷ್ಟು ಜನರೂ ಯಶ್‌ಪಾಲರ ದೇಹವನ್ನಿಟ್ಟ ಚಿತಾಗೃಹದ ಬಳಿ ಇರಲಿಲ್ಲ. ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಫಲಜ್ಯೋತಿಷವನ್ನು ಬೋಧಿಸಬೇಕೆಂದು ಯುಜಿಸಿ ಫರ್ಮಾನು ಹೊರಡಿಸಿದಾಗ ಅದನ್ನು ವಿರೋಧಿಸಲು ಯಶ್‌ಪಾಲ್ ಹೊರಟರೆ ಆಗಲೂ ಅವರಿಗೆ ವಿಜ್ಞಾನಿಗಳ ಬೆಂಬಲ ಬೆರಳೆಣಿಕೆಯಷ್ಟೇ ಇತ್ತು. ಆದರೆ ಸಮಾಧಾನದ ಸಂಗತಿ ಏನೆಂದರೆ ವೈಜ್ಞಾನಿಕ ಮನೋಭಾವವನ್ನು ಮತ್ತೆ ಜಾಗೃತಿಗೊಳಿಸಲೆಂದು ಕಳೆದ ಒಂದು ತಿಂಗಳಿಂದ ವಿಚಾರವಾದಿಗಳು ಸಂಘಟಿತರಾಗುತ್ತಿದ್ದಾರೆ.

ಅಮೆರಿಕದಲ್ಲಿ ಟ್ರಂಪ್ ಮಹಾಶಯ ವಿಜ್ಞಾನವನ್ನು ಮೂಲೆಗೆ ತಳ್ಳುತ್ತ, ವಿಜ್ಞಾನಿಗಳನ್ನು ಲೇವಡಿ ಮಾಡುತ್ತ ದಾಪುಗಾಲು ಹಾಕುತ್ತಿದ್ದಾಗ ಅಲ್ಲಿನ ವಿಚಾರವಂತರೆಲ್ಲ ಪ್ರತಿಭಟಿಸಿದರು. ಕಳೆದ ಏಪ್ರಿಲ್ 22ರಂದು 600ಕ್ಕೂ ಹೆಚ್ಚು ನಗರಗಳಲ್ಲಿ ವಿಜ್ಞಾನ ಜಾಗೃತಿ ಅಭಿಯಾನ ನಡೆಯಿತು. ಅದನ್ನು ಬೆಂಬಲಿಸಿ ಯುರೋಪ್, ಪೂರ್ವ ಏಷ್ಯದ ದೇಶಗಳಲ್ಲೂ ವಿಜ್ಞಾನ ಜಾತ್ರೆ ನಡೆಯುತ್ತಿದ್ದಾಗ ನಮ್ಮವರೆಲ್ಲ ಮೌನವಾಗಿದ್ದರು. ಈಗ ಅಮೆರಿಕದ ಪ್ರಭುಗಳ ಧೋರಣೆಯೇ ನಮ್ಮಲ್ಲೂ ಕಾಣುತ್ತಿರುವಾಗ ವಿಜ್ಞಾನಿಗಳನ್ನು ತಟ್ಟಿ ಎಬ್ಬಿಸಿ ಮೆರವಣಿಗೆ ಹೊರಡಿಸುವ ಸಿದ್ಧತೆ ನಡೆದಿದೆ. ಆಗಸ್ಟ್ 9ರಂದು ನಮ್ಮ ದೇಶದ ವಿವಿಧ ನಗರಗಳಲ್ಲಿ ‘ವಿಜ್ಞಾನ ಜಾಥಾ’ವನ್ನು ಆಯೋಜಿಲಾಗಿದೆ.

ಕಾರಣ ಏನೆಂದರೆ, ಮತ್ತೆ ಸನಾತನ ರೂಢ ನಂಬಿಕೆಗಳನ್ನು ಪುರಸ್ಕರಿಸುವ ಯೋಜನೆಗಳು ಒಂದೊಂದಾಗಿ ಬರತೊಡಗಿವೆ. ಪಂಚಗವ್ಯ ಕುರಿತು ಹೆಚ್ಚಿನ ಸಂಶೋಧನೆಗೆಂದು 19 ಸದಸ್ಯರ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸಲಾಗಿದೆ. ಅದಕ್ಕೆಂದು ಐಐಟಿ ದಿಲ್ಲಿ ಸೇರಿದಂತೆ ವಿವಿಧ ಲ್ಯಾಬ್‌ಗಳಿಗೆ ನೂರು ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ. ಎಲ್ಲ ರಾಷ್ಟ್ರೀಯ ಲ್ಯಾಬ್‌ಗಳಲ್ಲಿ ಸಂಸ್ಕೃತ ವಿಭಾಗವನ್ನು ತೆರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಖರಗಪುರ ಐಐಟಿಯಲ್ಲಿ ವಿದ್ಯಾರ್ಥಿಗಳಿಗೆ ನವಗ್ರಹ ಮಂಡಲ, ಪೂಜಾಗೃಹ ವಿನ್ಯಾಸವನ್ನು ಕಲಿಸುತ್ತಾರಂತೆ (ಅಲ್ಲಿಂದ ಪ್ರಕಟವಾಗುವ ಸಂಶೋಧನ ಪತ್ರಿಕೆಯಲ್ಲಿ ಪ್ರೊ. ಜಯ್ ಸೆನ್ ಎಂಬಾತ ಬರೆದ ಪ್ರಕಾರ ಮನೆಯ ಎದುರು ಹನುಮಾನ ಅಥವಾ ಗಣಪನ ವಿಗ್ರಹ ಇಟ್ಟರೆ ಒಳ್ಳೆಯದಾಗುತ್ತದಂತೆ). ಲ್ಯಾಬ್‌ಗಳು ತಮ್ಮ ಸಂಶೋಧನೆಗಳನ್ನು ಖಾಸಗಿಯವರಿಗೆ ಮಾರಿ ತಮ್ಮ ಸಂಬಳವನ್ನು ಗಳಿಸುವಂತೆ ಸೂಚಿಸಲಾಗಿದೆ. ಪುಣೆಯ ವಿಜ್ಞಾನ ಶಿಕ್ಷಣ ಕೇಂದ್ರಕ್ಕೆ, ಎನ್‌ಐಟಿ ಮತ್ತು ಕೆಲವು ಐಐಟಿಗಳಿಗೆ ಅನುದಾನ ಕಡಿತ ಮಾಡಲಾಗಿದೆ.

ಹವಾಮಾನ ಬದಲಾವಣೆಯ ಸಂಕಟಗಳ ನಿವಾರಣೆಗೆಂದು ಮೀಸಲಾಗಿರುವ ಹಣವನ್ನು ರಾಜ್ಯಗಳ ಜಿಎಸ್‌ಟಿ ನಷ್ಟ ಪರಿಹಾರಕ್ಕೆ ವ್ಯಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ (ಟ್ರಂಪ್ ಸರ್ಕಾರವೂ ಹೀಗೇ ಇದೇ ಬಾಬಿನ ಹಣವನ್ನು ಬೇರೆಡೆ ಹೊರಳಿಸಿದೆ). ವಿಜ್ಞಾನಿಗಳ ಪ್ರತಿರೋಧವನ್ನು ಲೆಕ್ಕಿಸದೆ ಕುಲಾಂತರಿ ಸಾಸಿವೆಯನ್ನು ಹೊಲಕ್ಕೆ ನುಗ್ಗಿಸುವ ಸಿದ್ಧತೆ ನಡೆದಿದೆ. ಕರ್ನಾಟಕದಲ್ಲಿ ನೋಡಿದರೆ ವಿಜ್ಞಾನಿಗಳ ಅಭಿಪ್ರಾಯವನ್ನೂ ಕೇಳದೇ ಪಾತಾಳಗಂಗೆಯಂತೆ, ಮೋಡಬಿತ್ತನೆಯಂತೆ. ಮಳೆಕೊಯ್ಲು, ಬರನಿವಾರಣೆ ಕ್ರಮಗಳತ್ತ ಪ್ರಜೆಗಳನ್ನು ಪ್ರೇರೇಪಿಸುವ ಬದಲು ಇನ್ನೇನೇನೋ ಜಟಾಪಟಿ ಎಬ್ಬಿಸಿ ಜನಮನವನ್ನು ಚದುರಿಸುವ ಚಟುವಟಿಕೆ.

ಸಹಜವಾಗಿ ಕೇಂದ್ರ ಸರ್ಕಾರದ ಆದ್ಯತೆಗಳ ಬಗ್ಗೆ ಚಿಂತಕರ, ವಿಜ್ಞಾನಿಗಳ ವಲಯದಲ್ಲಿ ಆತಂಕಗಳೆದ್ದಿವೆ. ಆಗಸ್ಟ್ 9ರ ವಿಜ್ಞಾನ ಜಾಥಾಕ್ಕೆ ಆದಷ್ಟು ಹೆಚ್ಚು ಗಣ್ಯ ವಿಜ್ಞಾನಿಗಳನ್ನು, ವಿದ್ಯಾರ್ಥಿಗಳನ್ನು ಹೊರಡಿಸಲು ಬ್ರೆಕ್‌ಥ್ರೂ ಸಂಘಟನೆಯ ಸದಸ್ಯರು ಮುಂಬೈ, ಕೋಲ್ಕತಾ, ಪುಣೆ, ತಿರುವನಂತಪುರಂ, ಬೆಂಗಳೂರುಗಳಲ್ಲಿ ಲ್ಯಾಬ್‌ಗಳ, ವಿಶ್ವವಿದ್ಯಾಲಯಗಳ ಬಾಗಿಲನ್ನು ತಟ್ಟುತ್ತಿದ್ದಾರೆ. ದೇಶದ ಕೆಲವಷ್ಟು ಗಣ್ಯ ವಿಜ್ಞಾನಿಗಳು ಅಂದು ಬೀದಿಗೆ ಬರುವುದಾಗಿ ಆಶ್ವಾಸನೆ ನೀಡಿದ್ದಾರೆ. ನೋಡಬೇಕು, ಇನ್ನುಳಿದ ವಿಜ್ಞಾನಿಗಳು ಬರುತ್ತಾರೊ, ಅಥವಾ ಜಾಥಾ ಯಶಸ್ಸಿಗಾಗಿ ಕೂತಲ್ಲೇ ಕಾಯಾ ವಾಚಾ ಪ್ರಾರ್ಥಿಸಿ ತಲೆ ಬಗ್ಗಿಸಿ ಕೂರುತ್ತಾರೊ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry