ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು ಸಂಚಾರ ಆರಂಭಿಸಲು ಒತ್ತಾಯ

ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ ಮೆಟ್ರೊ ಮಾರ್ಗದ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡ್ಡಿ
Last Updated 26 ಜುಲೈ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ಮಾರ್ಗದ ಕಾಮಗಾರಿಯಿಂದ ಐಟಿಪಿಎಲ್‌ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾದರೆ ಕೈಗಾರಿಕೆಗಳ ಹಾಗೂ ವಾಣಿಜ್ಯ ಸಂಸ್ಥೆಗಳ ನೌಕರರಿಗೆ  ಸಮಸ್ಯೆ ಉಂಟಾಗಲಿದೆ. ಇದನ್ನು ತಪ್ಪಿಸಲು  ಈ ಪ್ರದೇಶಕ್ಕೆ  ಉಪನಗರ (ಸಬ್‌ಅರ್ಬನ್‌) ರೈಲಿನ ವ್ಯವಸ್ಥೆ ಕಲ್ಪಿಸಬೇಕು ಎಂದು ವೈಟ್‌ಫೀಲ್ಡ್‌ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಸ್ಥೆ (ವಾಸಿಯಾ) ಒತ್ತಾಯಿಸಿದೆ.

ಕಾಮಗಾರಿಯಿಂದ ಉಂಟಾಗಬಹುದಾದ ಸಂಭಾವ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಸ್ಥೆಯ ಪದಾಧಿಕಾರಿಗಳು ಬುಧವಾರ ಸಭೆ ನಡೆಸಿದರು.   

ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವುದನ್ನು ತಪ್ಪಿಸಬೇಕು. ಇದನ್ನು ಖಾತರಿಪಡಿಸಲು   ನೋಡೆಲ್‌ ಅಧಿಕಾರಿಯನ್ನು
ನೇಮಿಸಬೇಕು ಎಂದು   ವಾಸಿಯಾ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದರು. 

‘ಐಟಿಪಿಎಲ್‌  ಮುಖ್ಯ ರಸ್ತೆಯಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚು ಇದೆ.  ದಟ್ಟಣೆಯ ಅವಧಿಯಲ್ಲಿ ವೈಟ್‌ಫೀಲ್ಡ್‌– ಕೆ.ಆರ್‌.ಪುರದ ನಡುವೆ ಪ್ರಯಾಣಿಸಲು 2 ಗಂಟೆ ತಗಲುತ್ತಿದೆ. ಮೆಟ್ರೊ ಕಾಮಗಾರಿಯಿಂದ ಸಮಸ್ಯೆ ಬಿಗಡಾಯಿಸುವುದಿಲ್ಲ ಎಂದು ಖಾತರಿಪಡಿಸಲು ಸರ್ಕಾರ ಐಎಎಸ್‌ ಅಧಿಕಾರಿಯೊಬ್ಬರನ್ನು ನೋಡೆಲ್‌ ಅಧಿಕಾರಿಯನ್ನಾಗಿ ನೇಮಿಸಬೇಕು’ ಎಂದು ಉಪಾಧ್ಯಕ್ಷ ಎಂ.ಆರ್‌.ಕೋರಿ ಹೇಳಿದರು.

ವೈಟ್‌ಫೀಲ್ಡ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪಾಂಡುರಂಗ ರಾವ್‌, ‘ಕಾಮಗಾರಿಗಾಗಿ ಐಟಿಪಿಎಲ್‌ ಮುಖ್ಯ ರಸ್ತೆಯ ಅರ್ಧಭಾಗವನ್ನು ಬಿಎಂಆರ್‌ಸಿಎಲ್‌ ಬಳಸಿಕೊಳ್ಳಲಿದೆ. ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ರೈಲು ನಿಲ್ದಾಣದ ನಡುವೆ ಜೋಡಿ ಮಾರ್ಗ ನಿರ್ಮಿಸಬೇಕು. ನಗರದ ಕೇಂದ್ರ ಪ್ರದೇಶದಿಂದ ವೈಟ್‌ಫೀಲ್ಡ್‌ಗೆ ಸಬ್‌ಅರ್ಬನ್‌ ರೈಲು ಸಂಪರ್ಕ ಕಲ್ಪಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಈ ಬಗ್ಗೆ ರೈಲ್ವೆ ಇಲಾಖೆಗೆ ಒತ್ತಡ ಹೇರಬೇಕು’ ಎಂದರು.

ವಾಸಿಯಾ ಸದಸ್ಯ  ಸಂದೀಪ್‌ ಮಿತ್ತಲ್‌, ‘ಗ್ರಾಫೈಟ್‌ ಇಂಡಿಯಾ ಕಚೇರಿ ಬಳಿ  ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ರಸ್ತೆಯನ್ನು ಅಗೆದಿದ್ದಾರೆ. ಈ ವೇಳೆ ಅಗತ್ಯ ಕೊಳವೆ ಮಾರ್ಗಗಳನ್ನು ತುಂಡರಿಸಲಾಗಿದೆ.  ಅವುಗಳನ್ನು  ಮತ್ತೆ ಜೋಡಿಸುವಂತೆ ಗುತ್ತಿಗೆದಾರನನ್ನು ಗೋಗರೆದೆ. ಆದರೂ ಇದಕ್ಕೆ ಅವರು ಈ ಕೆಲಸಕ್ಕೆ ಮೂರು ದಿನ ತೆಗೆದುಕೊಂಡರು’ ಎಂದು ಅಳಲು ತೋಡಿಕೊಂಡರು.

‘ಈ ಹಿಂದೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಬಿಎಂಆರ್‌ಸಿಎಲ್‌ ವಿಫಲವಾಗಿದೆ. ಹೊಸ ಮಾರ್ಗವನ್ನು ನಿರ್ಮಿಸುತ್ತೇವೆ ಎಂದು ಅವರು ಮೊದಲು ಹೇಳಿದ್ದರು. ಈಗ ಇರುವ ರಸ್ತೆಯನ್ನೇ 2 ಮೀಟರ್‌ನಷ್ಟು ವಿಸ್ತರಣೆ ಮಾಡುತ್ತಿದ್ದಾರೆ. ಇದು ಏನೇನೂ ಸಾಲದು’ ಎಂದು ದೂರಿದರು.

‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಅವರು ಈ ಸಭೆಯಲ್ಲಿ ಭಾಗವಹಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ಅವರು ಸಮಾರಂಭಕ್ಕೆ ಹಾಜರಾಗಿಲ್ಲ’ ಎಂದು ವಾಸಿಯಾ ಸದಸ್ಯರು ಮಾಧ್ಯಮಗಳ ಜೊತೆ ಅಳಲು ತೋಡಿಕೊಂಡರು.

‘15.5 ಕಿ.ಮೀ ಉದ್ದದ ಈ ಮೆಟ್ರೊ ಮಾರ್ಗದ ಬಹುಪಾಲು ಐಟಿಪಿಎಲ್‌ ಮುಖ್ಯ ರಸ್ತೆ  ಪಕ್ಕದಲ್ಲೇ    ಹಾದುಹೋಗಲಿದೆ.   2020ರ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT