ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಆರೋಪವೇ ನಿತೀಶ್ ನಿರ್ಧಾರಕ್ಕೆ ಕಾರಣ: ಲಾಲೂ

Last Updated 27 ಜುಲೈ 2017, 6:09 IST
ಅಕ್ಷರ ಗಾತ್ರ

ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎ ಜತೆ ಕೈಜೋಡಿಸುವ ಮೂಲಕ ಬಿಹಾರದ ಜನತೆಗೆ ಮೋಸ ಮಾಡಿದ್ದಾರೆ. ಇದಕ್ಕೆ ಅವರ ವಿರುದ್ಧ ಇರುವ ಕೊಲೆ ಆರೋಪವೇ ಕಾರಣ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1991ರ ಲೋಕಸಭೆ ಚುನಾವಣೆ ಸಂದರ್ಭ ಪಟ್ನಾದ ಪಾಂಡರಕ್ ಮತಗಟ್ಟೆ ಬಳಿ ಸಿತಾರಾಮ್ ಸಿಂಗ್ ಎಂಬುವವರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ನಿತೀಶ್ ಕುಮಾರ್ ಸಹ ಆರೋಪಿಯಾಗಿದ್ದಾರೆ. ಶಾಸನಸಭೆ ಚುನಾವಣೆಗೆ ಅಫಿಡವಿಟ್ ಸಲ್ಲಿಸುವ ಸಂದರ್ಭದಲ್ಲಿ ಈ ವಿಷಯವನ್ನು ನಿತೀಶ್ ಕುಮಾರ್ ಉಲ್ಲೇಖಿಸಿದ್ದರು. 2009ರಲ್ಲಿ ಬಾರ್ಹ್‌ನಲ್ಲಿರುವ ವಿಚಾರಣಾ ನ್ಯಾಯಾಲಯ ನಿತೀಶ್ ವಿರುದ್ಧದ ಆರೋಪದ ವಿಚಾರಣೆ ಕೈಗೆತ್ತಿಕೊಂಡಿತ್ತು. ಪ್ರಕರಣ ಸದ್ಯ ಪಟ್ನಾ ಹೈಕೋರ್ಟ್‌ನಲ್ಲಿದೆ. ಈ ವಿಷಯ ಮುನ್ನೆಲೆಗೆ ಬರುವುದರಿಂದ ತಪ್ಪಿಸಿಕೊಳ್ಳಲು ಮತ್ತು ಖುಲಾಸೆಯಾಗುವ ಸಲುವಾಗಿ ಪ್ರಯತ್ನ ನಡೆಸಲು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮೇಲಿನ ಭ್ರಷ್ಟಾಚಾರ ಆರೋಪವನ್ನೇ ನಿತೀಶ್ ದೊಡ್ಡದು ಮಾಡಿದ್ದಾರೆ. ಎನ್‌ಡಿಎ ಜತೆ ಕೈಜೋಡಿಸಿದ್ದಾರೆ’ ಎಂದು ಲಾಲೂ ಆರೋಪಿಸಿದ್ದಾರೆ.

‘ತಾವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 302ರ ಆರೋಪಿ ಎಂಬುದು ನಿತೀಶ್‌ ಅವರಿಗೆ ಗೊತ್ತಿದೆ. ದೇಶದ ಒಬ್ಬ ಮುಖ್ಯಮಂತ್ರಿ ಕೊಲೆ ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ’ ಎಂದು ಲಾಲೂ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT