3

ವಿಶ್ವವಿದ್ಯಾಲಯಕ್ಕೆ ವಿದ್ವಾಂಸರು ಬೇಡವಾದರೇ?

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ವಿಶ್ವವಿದ್ಯಾಲಯಕ್ಕೆ ವಿದ್ವಾಂಸರು ಬೇಡವಾದರೇ?

ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಎರಡು ವಿಚಾರಗಳನ್ನು ಇಂದಿನ ಅಂಕಣದಲ್ಲಿ ಚರ್ಚಿಸುತ್ತೇನೆ. ನನ್ನ ಮೊದಲನೆಯ ನಿದರ್ಶನ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ (ಜೆ.ಎನ್.ಯು) ಸಂಬಂಧಿಸಿದ್ದು. ಅಲ್ಲಿನ ಕುಲಪತಿಗಳಾದ ಪ್ರೊ. ಜಗದೀಶ್ ಕುಮಾರ್ ಅವರು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲು ಒಂದು ಸೈನ್ಯದ ಟ್ಯಾಂಕನ್ನು ಕೊಡಿಸುವಂತೆ ವಿದೇಶಾಂಗ ಖಾತೆಯ ರಾಜ್ಯ ಸಚಿವರಾದ ಜನರಲ್ ವಿ.ಕೆ. ಸಿಂಗ್‌ರನ್ನು ಕೋರಿದ್ದಾರೆ. ಜನರಲ್ ಸಿಂಗ್ ಅವರು 2010ರ ಮಾರ್ಚ್‌ ತಿಂಗಳಿಂದ  2012ರ ಮೇ ತಿಂಗಳವರೆಗೆ ಭಾರತೀಯ ಸೈನ್ಯದ ಮುಖ್ಯಸ್ಥರು ಕೂಡ ಆಗಿದ್ದವರು.ಪ್ರೊ. ಕುಮಾರ್ ಅವರು ಈ ಬೇಡಿಕೆಯನ್ನು ಮುಂದಿಟ್ಟದ್ದು ಕಾರ್ಗಿಲ್ ವಿಜಯ ದಿವಸವನ್ನು ಜೆ.ಎನ್.ಯು. ಆವರಣದಲ್ಲಿ ಆಚರಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ. ಇದರಲ್ಲಿ ಜನರಲ್ ಸಿಂಗ್ ಅವರೊಡನೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಸಹ ಭಾಗವಹಿಸಿದ್ದರು. ಭದ್ರತಾ ಪಡೆಗಳ ಬಗ್ಗೆ ಎಲ್ಲಾದರೂ ಟೀಕೆ ಕೇಳಿಬಂದೊಡನೆ ಗಂಭೀರ್ ಉಗ್ರವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಈ ರಾಷ್ಟ್ರಭಕ್ತ ತಮ್ಮ ಕ್ರೀಡೆಯಾದ ಕ್ರಿಕೆಟಿನೊಳಗಿನ ಭ್ರಷ್ಟತೆ, ಸ್ವಜನಪಕ್ಷಪಾತಗಳ ಬಗ್ಗೆ ಒಮ್ಮೆಯೂ ದನಿಯೆತ್ತಿಲ್ಲ ಎನ್ನುವುದನ್ನು ಮರೆಯುವಂತಿಲ್ಲ.ಜೆ.ಎನ್.ಯು.ನಲ್ಲಿ ಸೈನ್ಯದ ಟ್ಯಾಂಕನ್ನು ಇಡಬೇಕೆನ್ನುವ ವಿಚಾರವನ್ನು ಪ್ರೊ. ಕುಮಾರ್ ಅವರಿಗಿಂತಲೂ ಮೊದಲು ಪ್ರಸ್ತಾಪಿಸಿದವರ ದೊಡ್ಡ ಪಟ್ಟಿಯೇ ಇದೆ. ಇವರೆಲ್ಲರ ಚಿಂತನೆ- ತರ್ಕಗಳನ್ನು ಪ್ರೊ. ಕುಮಾರ್ ಕೂಡ ಈಗ ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಆವರಣದೊಳಗೆ ಪ್ರದರ್ಶಿತವಾಗುವ ಸೈನ್ಯದ ಟ್ಯಾಂಕ್, ಭಾರತೀಯ ಭದ್ರತಾ ಪಡೆಗಳು ತಮ್ಮ ದೇಶಕ್ಕಾಗಿ ಪ್ರದರ್ಶಿಸುವ ಶೌರ್ಯ ಮತ್ತು ಮಾಡುವ ತ್ಯಾಗಗಳನ್ನು ವಿದ್ಯಾರ್ಥಿಗಳಿಗೆ ನೆನಪಿಸುತ್ತದೆ ಎಂದು ಪ್ರೊ. ಕುಮಾರ್ ವಾದಿಸಿದರು.

ಜೆ.ಎನ್.ಯು.ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ಇಂತಹ ಮಾತುಗಳನ್ನಾಡಿದಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ತೋಚುವುದಿಲ್ಲ.ಆದರೆ ಇದು ನಿಜವಾಗಿಯೂ ಬಾಲಿಶವಾದ ಮತ್ತು ಬೌದ್ಧಿಕ ಅಪ್ರಬುದ್ಧತೆಯ ಹೇಳಿಕೆ ಎನ್ನದೆ ವಿಧಿಯಿಲ್ಲ. ಇದಕ್ಕೆ ಕಾರಣ ಕೂಡ ಸರಳವಾದುದು. ತಾವು ಕುಲಪತಿಗಳಾಗಿರುವ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೌದ್ಧಿಕ ಚರ್ಚೆ, ಚಿಂತನೆ ಮತ್ತು ಸಂಶೋಧನೆಗಳ ಗುಣಮಟ್ಟಗಳ ಪ್ರಾಥಮಿಕ ಅರಿವು ಸಹ ಪ್ರೊ. ಕುಮಾರ್ ಅವರಿಗಿಲ್ಲ ಎನ್ನಬೇಕಾಗುತ್ತದೆ. ನನಗೆ ಗೊತ್ತಿರುವ ಜೆ.ಎನ್.ಯು.ನ ವಿದ್ಯಾರ್ಥಿಗಳು ಅತ್ಯಂತ ಕ್ಲಿಷ್ಟವಾದ ಸಾಮಾಜಿಕ ಸಿದ್ಧಾಂತಗಳು, ತಾತ್ವಿಕ ದರ್ಶನಗಳು ಮತ್ತು ಐತಿಹಾಸಿಕ ಗ್ರಹಿಕೆಗಳನ್ನು ಅರಗಿಸಿ ಜೀರ್ಣಿಸಿಕೊಳ್ಳಬಲ್ಲವರು. ಇದು ಎಡಪಂಥ, ಮುಕ್ತಚಿಂತನೆ ಮತ್ತು ಬಲಪಂಥಗಳಿಗೆ ಸೇರಿದ ವಿದ್ಯಾರ್ಥಿಗಳೆಲ್ಲರಿಗೂ ಅನ್ವಯಿಸುವ ಮಾತು. ಅಲ್ಲಿನ ವಿದ್ಯಾರ್ಥಿ ಸಂಘದ ಚುನಾವಣೆಗಳ  ಸಂದರ್ಭದಲ್ಲಿ ಅಭ್ಯರ್ಥಿಗಳ ನಡುವಣ ಚರ್ಚೆಗಮನಿಸಿ. ನಮ್ಮ ಕಾಲದ ಬಹುಮುಖ್ಯ ತಾತ್ವಿಕ ಪ್ರಶ್ನೆಗಳು, ಚಿಂತಕರು ಮತ್ತು ಅವರ ವಿಚಾರಗಳ ಮೇಲೆ ಪರಸ್ಪರರಿಗೆ ಪ್ರಶ್ನೆ ಕೇಳುವ ಮೂಲಕ ತಮ್ಮನ್ನು ಪರೀಕ್ಷಿಸಿಕೊಳ್ಳಬಲ್ಲವರು. ನನ್ನ ಮಾತಿಗೆ ಆಧಾರ ಬೇಕೆಂದರೆ ಯುಟ್ಯೂಬಿನಲ್ಲಿರುವ ವಿಡಿಯೊಗಳನ್ನು ಪರೀಕ್ಷಿಸಿ.ಹೀಗೆ ಸಂಕೀರ್ಣ ವಿಚಾರಗಳನ್ನು ತರಗತಿಯೊಳಗೆ ಮತ್ತು ವಿಶ್ವವಿದ್ಯಾಲಯದ ಆವರಣದೊಳಗೆ ಚರ್ಚಿಸುವ ಶಕ್ತಿಯಿರುವ ವಿದ್ಯಾರ್ಥಿಗಳಿಗೆ ಸೈನ್ಯದ ಟ್ಯಾಂಕೊಂದನ್ನು ಪ್ರದರ್ಶಿಸುವ ಮೂಲಕ ದೇಶಭಕ್ತಿಯನ್ನು ಉಕ್ಕಿಸಬಯಸುವ ಕುಲಪತಿಯೊಬ್ಬರಿಗೆ ನಾವೇನು ಹೇಳಬೇಕು? ಜೆ.ಎನ್.ಯು.ನ ವಿದ್ಯಾರ್ಥಿಗಳು ತಮ್ಮ ರಾಷ್ಟ್ರ ಏನು ಮಾಡಿದರೂ ಸರಿ ಎನ್ನುವ ಕುರುಡು ನಂಬಿಕೆಯನ್ನು ಹೊಂದಿರುವವರಲ್ಲ. ತಮ್ಮ ದೇಶದ ಹುಳುಕುಗಳನ್ನು ಗುರುತಿಸಿ, ಸರಿಪಡಿಸಿಕೊಳ್ಳಲು ಶ್ರಮಿಸುವುದೇ ರಾಷ್ಟ್ರಪ್ರೇಮವನ್ನು ತೋರಿಸುವ ರೀತಿ ಎನ್ನುವವರು. ಹಾಗಾಗಿಯೇ ರಾಷ್ಟ್ರೀಯತೆಯ ಬಗ್ಗೆ ಪ್ರೊ. ಕುಮಾರ್ ಅವರಿಗೆ ನಿಲುಕದ ಮಟ್ಟದ ಚರ್ಚೆಯೊಂದನ್ನು ಕನ್ಹಯ್ಯ ಕುಮಾರ್ ಆದಿಯಾಗಿ ಹಲವಾರು ಜೆ.ಎನ್.ಯು. ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರ ಜೊತೆಗೂಡಿ ಕಳೆದ ವರ್ಷ ಪ್ರಾರಂಭಿಸಿದರು.ಈ ಚರ್ಚೆಯ ಕೇಂದ್ರದಲ್ಲಿರುವುದು ಸಾಮಾಜಿಕ ವಾಸ್ತವವನ್ನು ಸರಿಯಾಗಿ ಗ್ರಹಿಸಬೇಕೆನ್ನುವ ಉತ್ಕಟ ಹಟ ಮತ್ತು ಬೌದ್ಧಿಕ ಕುತೂಹಲ. ಹಾಗಾಗಿಯೇ ಭಾರತೀಯ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವವರು ತಮ್ಮಂತಹ ಹಿನ್ನೆಲೆಯಿಂದ ಬಂದಂತಹ ಸಾಮಾನ್ಯ ಭಾರತೀಯರು, ಇವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶದ ಗಡಿ ಮತ್ತು ಆಂತರಿಕ ಭದ್ರತೆಯನ್ನು ಕಾಪಾಡುತ್ತಾರೆ ಎನ್ನುವುದನ್ನು ಜೆ.ಎನ್.ಯು. ವಿದ್ಯಾರ್ಥಿಗಳು ಮೊದಲು ಗುರುತಿಸಿದರು. ಆದರೆ ಎರಡು ಅಂಶಗಳನ್ನು ಅವರು ಮರೆಯಲಿಲ್ಲ. ಒಂದು, ಭದ್ರತಾ ಪಡೆಗಳಿಂದಲೂ ಆಗಾಗ್ಗೆ ದೌರ್ಜನ್ಯಗಳಾಗುತ್ತವೆ. ಎರಡು, ನಮ್ಮ ಸರ್ಕಾರಗಳು, ಅವುಗಳು ಯಾವುದೇ ಪಕ್ಷದ ಸರ್ಕಾರವಾಗಿರಲಿ, ಭದ್ರತಾ ಪಡೆಗಳನ್ನು ದಮನಕಾರಿ ಉದ್ದೇಶಕ್ಕಾಗಿಯೂ ಕೆಲವೊಮ್ಮೆ ಬಳಸುತ್ತವೆ. ಹಾಗಾಗಿ ಪ್ರಭುತ್ವದ ಚಟುವಟಿಕೆಗಳ ಬಗ್ಗೆ ನಾವು ಎಚ್ಚರವಾಗಿರಬೇಕು.ಈ ಎರಡು ಅಂಶಗಳ ಸತ್ಯಾಸತ್ಯತೆಯನ್ನು ಅರಿಯಲು ದೂರದ ಕಾಶ್ಮೀರಕ್ಕೋ ಇಲ್ಲವೇ ಈಶಾನ್ಯ ಭಾಗದ ರಾಜ್ಯವೊಂದಕ್ಕೋ ಹೋಗುವ ಅವಶ್ಯಕತೆಯಿಲ್ಲ. ಇಲ್ಲೇ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ಹೋರಾಟದ ಸಂದರ್ಭದಲ್ಲಿ ನಮ್ಮವರೇ ಆದ ಪೋಲಿಸರ ನಡವಳಿಕೆಯನ್ನು ನೆನಪಿಸಿಕೊಳ್ಳಿ.ಪ್ರೊ. ಜಗದೀಶ್ ಕುಮಾರ್ ಅವರು ಸಮಾಜ ವಿಜ್ಞಾನಿಯಲ್ಲ, ನಿಜ. ಅವರ ಪರಿಣತಿಯ ವಿಷಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್. ತಮ್ಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಅವರು, ಎರಡು ದಶಕ ಐಐಟಿ ದೆಹಲಿಯಲ್ಲಿ ಬೋಧನೆ ಮಾಡಿರುವ ಅನುಭವ ಉಳ್ಳವರು. ಆದರೂ ಅಧ್ಯಾಪಕನೊಬ್ಬನ ಸೈದ್ಧಾಂತಿಕ ಹಿನ್ನೆಲೆ ಹಾಗೂ ಪರಿಣತಿಯ ವಿಷಯಗಳು ಯಾವುದೇ ಇದ್ದರೂ,  ವಿಚಾರಗಳ ಸಂವಹನ ಹೇಗೆ ನಡೆಯುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಏನು ಹೇಳಿಕೊಡಬೇಕು ಎನ್ನುವ ಪ್ರಾಥಮಿಕ ತಿಳಿವಳಿಕೆ ಇರಬೇಕು.  ಇಂಥ ಅರಿವು ಜೆ.ಎನ್.ಯು.ನ ಕುಲಪತಿಗಳಿಗಿಲ್ಲವೆಂದು ವಿಷಾದದಿಂದ ಹೇಳಬೇಕಾಗುತ್ತದೆ.ದೂರದ ದೆಹಲಿಯಿಂದ ಹತ್ತಿರದ ದಾವಣಗೆರೆಗೆ ಬರೋಣ. ಇಂದು ನಾನು ಚರ್ಚಿಸಬಯಸುವ ಎರಡನೆಯ ವಿದ್ಯಮಾನ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಈಗ ನಡೆಯುತ್ತಿರುವ ಬೋಧಕವರ್ಗದ ನೇಮಕಾತಿಗೆ ಸಂಬಂಧಿಸಿದುದು. ಈ ವಿಶ್ವವಿದ್ಯಾಲಯವು 2009ರಲ್ಲಿಯೇ ಸ್ಥಾಪಿತವಾಗಿದ್ದರೂ ಇದುವರೆಗೆ ಅಧ್ಯಾಪಕರ ನೇಮಕಾತಿಯು ಸರಿಯಾಗಿ ನಡೆಯದೆ, ಅತಿಥಿ ಉಪನ್ಯಾಸಕರನ್ನು ಬಳಸುತ್ತಲೇ ಕಾಲಹಾಕಿದೆ. ಕಡೆಗೂ ಈಗ ಬೋಧಕ ಮತ್ತು ಬೋಧಕೇತರರ ನೇಮಕಾತಿಯ ಪ್ರಕ್ರಿಯೆ ಪ್ರಾರಂಭವಾಗಿದೆ.

ಬೋಧಕ ವೃಂದದ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪ್ರಕ್ರಿಯೆಯ ಒಂದು ಅಂಶ ನನ್ನ ಗಮನ ಸೆಳೆಯಿತು. ಅದೇನೆಂದರೆ ಎಲ್ಲ ಶ್ರೇಣಿಯ ಬೋಧಕರ ಆಯ್ಕೆಗೆ ಪೂರ್ವಭಾವಿಯಾಗಿ ಲಿಖಿತ ಪರೀಕ್ಷೆಯೊಂದನ್ನು ಮಾಡುವ ಪ್ರಸ್ತಾವನೆಯೊಂದಿದೆ.ಇದು ಕೇವಲ ವೃತ್ತಿಜೀವನದ ಪ್ರಾರಂಭದಲ್ಲಿರುವ ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ಮಾತ್ರ ಸೀಮಿತವಾದುದಲ್ಲ. ಬದಲಿಗೆ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕರ  ಹುದ್ದೆಗಳಿಗೂ ಅನ್ವಯವಾಗುವಂತಹುದು. ಈ ಲಿಖಿತ ಪರೀಕ್ಷೆಯು 100 ಅಂಕಗಳ ಬಹುಆಯ್ಕೆ ಉತ್ತರಗಳಿರುವ ಪ್ರಶ್ನೆಗಳನ್ನು ಹೊಂದಿರುತ್ತದೆ ಹಾಗೂ ವಿಷಯಜ್ಞಾನ ಮತ್ತು ಯೋಗ್ಯತೆಯನ್ನು ಪರೀಕ್ಷಿಸುವ ಉದ್ದೇಶವನ್ನು ಹೊಂದಿದೆ. ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ಸಂಶೋಧನಾ ಸಾಧನೆಗಳ ಜೊತೆಗೆ ಈ ಲಿಖಿತ ಪರೀಕ್ಷೆಯಲ್ಲಿನ ಅಂಕಗಳು ಸಹ ಸೇರುತ್ತವೆ.ಇದು ತಲೆ ಪರಚಿಕೊಳ್ಳುವ ಮತ್ತೊಂದು ಕ್ಷಣ. ಸಹಾಯಕ ಪ್ರಾಧ್ಯಾಪಕ ಹುದ್ದೆಯ ಅಭ್ಯರ್ಥಿಗಳು ಸಹ ಇಂತಹುದೇ ಆದ ಯುಜಿಸಿಯ ರಾಷ್ಟ್ರೀಯ ಬೋಧಕರ ಅರ್ಹತಾ ಪರೀಕ್ಷೆಯಲ್ಲಿ  (ಎನ್.ಇ.ಟಿ) ಉತ್ತೀರ್ಣರಾಗಿರಬೇಕು ಎನ್ನುವ ನಿಯಮವಿದೆ. ಮತ್ತೊಮ್ಮೆ ಅದೇ ರೀತಿಯ ಪರೀಕ್ಷೆ ಏಕೆ? ಒಂದು ವೇಳೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದರೂ, ಅರ್ಹರ ಪಟ್ಟಿಯನ್ನು ಸಿದ್ಧಪಡಿಸುವುದು ಅಷ್ಟೇನೂ ಕಷ್ಟದ ವಿಚಾರವಲ್ಲ. ಹಾಗೆ ನೋಡುವುದಾದರೆ ಈಗ ನಡೆಯುವ ಎನ್.ಇ.ಟಿ, ಎಸ್.ಎಲ್.ಇ.ಟಿ. ಪರೀಕ್ಷೆಗಳು ಸಹ ವಸ್ತುನಿಷ್ಠತೆಯನ್ನು ಹುಡುಕುತ್ತ, ಈ ಪರೀಕ್ಷೆಗಳನ್ನು ಏಕೆ ನಡೆಸಲು ಮೊದಲು ಉದ್ದೇಶಿಸಲಾಯಿತು ಎನ್ನುವುದನ್ನು ಮರೆತಿವೆ. 1980–90ರ ದಶಕಗಳಲ್ಲಿ ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಪರೀಕ್ಷೆಗಳು ಹೊಂದಿದ್ದವು.

ಬಹುಆಯ್ಕೆಯ ಪರೀಕ್ಷೆಗಳು ವಸ್ತುನಿಷ್ಠತೆಯ ಭ್ರಮೆಯನ್ನು ಹುಟ್ಟಿಸುತ್ತಿವೆಯೇ ಹೊರತು ನಿಜವಾದ ಅರ್ಥದಲ್ಲಿ ವಿಶ್ವವಿದ್ಯಾಲಯದ ಬೋಧನೆಗೆ ಅಗತ್ಯವಿರುವ ಅರ್ಹತೆಗಳೇನು ಎನ್ನುವುದನ್ನೇ ಮರೆಯುತ್ತಿವೆ. ಅದಕ್ಕಿಂತ ಮುಖ್ಯವಾಗಿ ಮೇಲಿನ ಶ್ರೇಣಿಯ ಬೋಧಕ ವೃಂದದವರ ಅರ್ಹತೆಯನ್ನು ಅಳೆಯಲು 100 ಅಂಕಗಳ ಬಹುಆಯ್ಕೆಯ ಪರೀಕ್ಷೆಯೊಂದು ಎಷ್ಟರಮಟ್ಟಿಗೆ ಉಪಯುಕ್ತವಾದುದು ಎನ್ನುವ ಪ್ರಶ್ನೆಯನ್ನು ಕೇಳಲೇಬೇಕು. ಈ ಪರೀಕ್ಷೆಯಲ್ಲಿ ಒಂದು ವಾಕ್ಯವನ್ನು ಬಾಯಿಯಿಂದ ಹೇಳಬೇಕಿಲ್ಲ, ಒಂದು ವಾಕ್ಯವನ್ನು ಬರೆಯಬೇಕಿಲ್ಲ. ಇಂತಹ ಪರೀಕ್ಷೆಯನ್ನು ಪ್ರಾಧ್ಯಾಪಕರ ಆಯ್ಕೆಗೆ ಬಳಸುವ ಹಿಂದಿರುವ ಶೈಕ್ಷಣಿಕ ತರ್ಕವಾದರೂ ಏನು? ಇದರಿಂದ ಅಭ್ಯರ್ಥಿಯ ವಿಷಯಜ್ಞಾನ, ಸಂಶೋಧನೆ ಮತ್ತು ಬೋಧನಾಕ್ಷಮತೆಗಳು ಹೇಗೆ ಅಳೆಯುತ್ತೇವೆ? ಹೀಗೆ ನೇಮಕಾತಿಯಂತಹ ಪ್ರಾಥಮಿಕ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿಯೇ ನಪಾಸಾಗುವ ವಿಶ್ವವಿದ್ಯಾಲಯಗಳು ವೈಚಾರಿಕತೆ, ಹೊಸ ಚಿಂತನೆ ಮತ್ತು ಸಂಶೋಧನೆಗಳ ಕೇಂದ್ರಗಳಾಗಿ ಹೇಗೆ ಹೊರಹೊಮ್ಮಬಲ್ಲವು?ಇತ್ತೀಚಿನ ದಿನಗಳಲ್ಲಿ ನೇಮಕಾತಿಯ ಸುತ್ತಣ ವಿವಾದಗಳನ್ನು ಹಾಗೂ ಅವುಗಳಿಗೆ ಸೂಚಿತವಾಗುತ್ತಿರುವ ಪರಿಹಾರಗಳನ್ನು ಗಮನಿಸಿದಾಗ, ನಿಜವಾದ ಅರ್ಹತೆಯನ್ನು ಅಳೆಯುವ ಯಾವ ಮಾನದಂಡಗಳೂ ಇಲ್ಲಿ ಅನ್ವಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಂದಿನ  ಭಾರತೀಯ  ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳೆರಡರಲ್ಲಿಯೂ ಸ್ವತಂತ್ರವಾಗಿ ವಿಚಾರ ಮಾಡಬಲ್ಲ, ವಿಷಯಜ್ಞಾನವಿರುವ, ಬೋಧನೆ-ಸಂಶೋಧನೆಗಳಿಗೆ ಬದ್ಧರಾಗಿರುವ ವಿದ್ವಾಂಸರ ಅಗತ್ಯವಿಲ್ಲ. ಈ ವ್ಯವಸ್ಥೆ ನಿರೀಕ್ಷಿಸುತ್ತಿರುವುದು ಬಯೊಮೆಟ್ರಿಕ್ ಹಾಜರಾತಿಯಲ್ಲಿ ತಮ್ಮ ಹೆಬ್ಬೆಟ್ಟನ್ನು ಒತ್ತಿ, ಮೇಲಿನವರು ಹೇಳಿದ ಕೆಲಸವನ್ನು ಮಾಡುತ್ತ ಯಾವುದೇ ಸ್ವತಂತ್ರ ಚಿಂತನೆಯಲ್ಲಿ ತೊಡಗಿಸಿಕೊಳ್ಳದ ಗುಮಾಸ್ತ ಮನಸ್ಥಿತಿಯ ಅಧ್ಯಾಪಕರನ್ನು ಮಾತ್ರ. ದಾವಣಗೆರೆಯಲ್ಲಿ ಮತ್ತು ಎಲ್ಲೆಡೆ ಹೀಗಾಗದಂತೆ ಎಚ್ಚರ ವಹಿಸಬೇಕಾದ ತುರ್ತು ನಮ್ಮ ಮುಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry