7
ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ

ಕ್ಯಾಮೆರಾ, ಕ್ಯಾಸ್ಟಿಂಗ್‍ ಕೌಚ್‍... ಕಟ್‍ ಕಟ್‍...

Published:
Updated:
ಕ್ಯಾಮೆರಾ, ಕ್ಯಾಸ್ಟಿಂಗ್‍ ಕೌಚ್‍... ಕಟ್‍ ಕಟ್‍...

ಕಥೆ ಹೇಳುವೆ ನನ್ನ ಕಥೆ ಹೇಳುವೆ...’ ಎನ್ನುವುದು ‘ನಾಗರಹಾವು’ ಸಿನಿಮಾದ ಅಲಮೇಲುವಿನ ಕಣ್ಣೀರಿನ ಹಾಡು. ವೇಶ್ಯಾವಾಟಿಕೆಗೆ ತುತ್ತಾದ ಅಲಮೇಲು ತನ್ನ ಬದುಕಿನ ದುರಂತವನ್ನು ಹಾಡಿನಲ್ಲಿ ನಿವೇದಿಸಿಕೊಳ್ಳುತ್ತಾಳೆ. ಈ ನತದೃಷ್ಟ ಹೆಣ್ಣನ್ನು ರೂಪಕದಂತೆ ನೋಡುವುದಾದರೆ – ತೆರೆಯಾಚೆಗೂ ಅಲಮೇಲುವಿನ ಹತ್ತಾರು ತುಣುಕುಗಳು ಕಾಣಿಸುತ್ತವೆ.

ತೆರೆಯ ಮೇಲಿನ ಕಥೆಗಳು ಹೆಣ್ಣಿನ ಮಮತೆ, ಮಾತೃತ್ವ, ಔದಾರ್ಯದ ಹಂತದಿಂದ ಸೌಂದರ್ಯದ ನೆಲೆಗೆ ಬಂದು ನಿಂತಿರುವ ದಿನಗಳಿವು. ಹಾಡು, ಕುಣಿತ, ಹೊಡೆದಾಟಗಳಂತೆ ಹೆಣ್ಣಿನ ಚೆಲುವು ಕೂಡ ಚಿತ್ರೋದ್ಯಮದ ಪಾಲಿಗೆ ಯಶಸ್ಸಿನ ಸೂತ್ರಗಳಲ್ಲೊಂದು. ತೆರೆಯ ಮೇಲೆ ಮಾತ್ರವಲ್ಲ, ಪರದೆಯಾಚೆಗೂ ಚಿತ್ರೋದ್ಯಮದ ಪಾಲಿಗೆ ಹೆಣ್ಣು ಭೋಗದ ವಸ್ತುವೇ. ಯಾವ ಭಾಷೆಯ ಚಿತ್ರರಂಗದ ಒಳಸುಳಿಗಳನ್ನು ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಅಲಮೇಲುವಿನ ಅಕ್ಕ ತಂಗಿಯರು ಕಾಣಿಸುತ್ತಾರೆ.

ಹೆಣ್ಣಿನ ಬಗ್ಗೆ ಚಿತ್ರೋದ್ಯಮ ಹೊಂದಿರುವ ಧೋರಣೆಗೆ ಮಲಯಾಳ ಚಿತ್ರರಂಗದ ದಿಲೀಪ್‌ ಪ್ರಕರಣ ಅತ್ಯುತ್ತಮ ಉದಾಹರಣೆ. ಸಹನಟಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಚಿನ ಆರೋಪದಲ್ಲಿ ದಿಲೀಪ್ ಹೆಸರು ಕೇಳಿಬಂದಾಗ ಅವರನ್ನು ಶಂಕಿಸಿದವರು ಕಡಿಮೆ.ಅತ್ಯಾಚಾರ ಘಟನೆಯಲ್ಲಿ ಯಾವ ಪಿತೂರಿಯೂ ಇಲ್ಲ ಎಂದು ಕೇರಳದ ಮುಖ್ಯಮಂತ್ರಿಯೇ ಹೇಳಿದ್ದರು. ಕಲಾವಿದರ ಸಂಘ ಕೂಡ ಮೌನವಾಗಿತ್ತು. ಆದರೆ ಕೇರಳೀಯ ಸಿನಿಮಾದಲ್ಲಿ ದುಡಿಯುತ್ತಿರುವ ಕಲಾವಿದೆಯರು, ತಂತ್ರಜ್ಞೆಯರು ‘ವಿಮೆನ್‌ ಇನ್‌ ಸಿನಿಮಾ ಕಲೆಕ್ಟಿವ್‌’ ಎನ್ನುವ ಸಂಘಟನೆ ರೂಪಿಸಿಕೊಂಡು ಧ್ವನಿಯೆತ್ತಿದರು. ಅದರಿಂದಾಗಿಯೇ ದಿಲೀಪ್‌ ಬಗ್ಗೆ ಪೊಲೀಸ್‌ ತನಿಖೆ ಚುರುಕಾಯಿತು, ಚಿತ್ರರಂಗ ಕಠಿಣ ನಿಲುವು ತಳೆಯಿತು. ಕನ್ನಡ ಚಿತ್ರರಂಗದಲ್ಲೂ ಹೆಣ್ಣುಮಕ್ಕಳ ಶೋಷಣೆಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತವೆ. ಆದರೆ, ಆ ಸಂಕಟಗಳಿಗೆ ಧ್ವನಿಯಾಗುವ ಸಂಘಟನೆಯೊಂದು ಇಲ್ಲಿಲ್ಲ. ಸಂಘಟನೆಯ ಮಾತಿರಲಿ, ನಮ್ಮಲ್ಲಿ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳಲೇ ಅನೇಕರು ತಯಾರಿಲ್ಲ. ‘ನಮ್ಮಲ್ಲೇನೂ ಸಮಸ್ಯೆ ಇಲ್ಲ’ ಎನ್ನುವುದು ಚಿತ್ರೋದ್ಯಮದ ಬಹುತೇಕ ಮಂದಿ ಮಾತಿಗೆ ಆರಂಭದಲ್ಲೇ ಬರೆಯುವ ಮುನ್ನುಡಿ.ಕನ್ನಡ ಚಿತ್ರೋದ್ಯಮದಲ್ಲಿ ಹೆಣ್ಣಿಗೆ ಘನತೆಯ ಸ್ಥಾನವಿದೆ ಎನ್ನುವುದಕ್ಕೆ ವಾಸ್ತವ ಪೂರಕವಾಗಿಯೇನೂ ಇಲ್ಲ. ಸಿನಿಮಾದಲ್ಲಿ ನಟನೆಯ ಅವಕಾಶ ನೀಡು

ವುದಕ್ಕೆ ಪ್ರತಿಫಲವಾಗಿ ಹಾಸಿಗೆಗೆ ಬರುವಂತೆ ನಿರ್ಮಾಪಕರೊಬ್ಬರ ಪರವಾಗಿ ಏಜೆಂಟನೊಬ್ಬ ಆಹ್ವಾನ ನೀಡಿದ್ದನ್ನು ಕರಾವಳಿಯ ತರುಣಿಯೊಬ್ಬಳು ಕಳೆದ ವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಳು. ಆ ಏಜೆಂಟ್‌ನೊಂದಿಗೆ ನಡೆದ ‘ಫೇಸ್‌ಬುಕ್‌ ಚಾಟ್‌’ನ ಸ್ಕ್ರೀನ್‌ಷಾಟ್‌ಗಳನ್ನೂ ಲಗತ್ತಿಸಿದ್ದಳು. ಸಿನಿಮಾ ಹೆಸರಿನಲ್ಲಿ ನಡೆಯುವ ಇಂಥ ದಂಧೆಯ ಬಗ್ಗೆ ನೂರಾರು ಸಹೃದಯರು ಧ್ವನಿಯೆತ್ತಿದ್ದರು; ಪೊಲೀಸ್‌ ದೂರು ನೀಡುವಂತೆ ಆ ಯುವತಿಗೆ ಸಲಹೆ ನೀಡಿದ್ದರು. ಮತ್ತೊಬ್ಬ ಹುಡುಗಿ ತಾನು ಕೂಡ ಇಂತಹುದೇ ಅನುಭವಕ್ಕೆ ಒಳಗಾದುದನ್ನು ಹೇಳಿಕೊಂಡಿದ್ದಳು. ಆದರೆ, ಸ್ವಲ್ಪ ಸಮಯದಲ್ಲೇ ಫೇಸ್‌ಬುಕ್‌ ಪುಟಗಳಿಂದ ಆರೋಪದ ವಿವರಗಳು ಇದ್ದಕ್ಕಿದ್ದಂತೆ ಮಾಯವಾದವು. ‘ನಾವು ಕಲಾವಿದರು, ವ್ಯಭಿಚಾರಿಗಳಲ್ಲ’ ಎಂದು ನಿರ್ಮಾಪಕನ ದಲ್ಲಾಳಿಗೆ ಮುಖಕ್ಕೆ ಹೊಡೆದಂತೆ ಹೇಳಿದ ಯುವನಟಿಯರು ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದರು. ಈ ಬದಲಾವಣೆ ಯಾಕಾಗಿ? ಉತ್ತರಗಳು ಊಹೆಗೆ ನಿಲುಕುವಂತೆಯೇ ಇವೆ.

ಕಳೆದ ವರ್ಷ ಪ್ರಿಯಾಂಕ ಜೈನ್‌ ಎನ್ನುವ ಮುಂಬೈ ಮೂಲದ ನಟಿ, ಕನ್ನಡ ಚಿತ್ರರಂಗದಲ್ಲಿನ ‘ಕ್ಯಾಸ್ಟಿಂಗ್‌ ಕೌಚ್‌’ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು. ‘ಗೋಲಿಸೋಡಾ’ ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿರುವ ಆಕೆ – ಕ್ಯಾಸ್ಟಿಂಗ್‌ ಕೌಚ್‌ ಕಾರಣದಿಂದಾಗಿಯೇ ಮೂರು ಅವಕಾಶಗಳನ್ನು ನಿರಾಕರಿಸಿದ್ದಾರಂತೆ. ‘ಮುಂಬಯಿಯಿಂದ ಬರುವ ನಟಿಯರು ಎಲ್ಲದಕ್ಕೂ ಸಿದ್ಧ ಎನ್ನುವ ಮನೋಭಾವ ಇಲ್ಲಿನ ನಿರ್ಮಾಪಕ, ನಿರ್ದೇಶಕ ಹಾಗೂ ನಟರಲ್ಲಿದೆ’ ಎನ್ನುವುದು ಪ್ರಿಯಾಂಕರ ಆರೋಪ. ಇದಕ್ಕೆ ಪೂರಕ ಎನ್ನುವಂತೆ, ಟೀವಿ ವಾಹಿನಿಯೊಂದು ತನ್ನ ಸ್ಟಿಂಗ್‌ ಆಪರೇಷನ್‌ನಲ್ಲಿ ಕನ್ನಡದ ನಿರ್ದೇಶಕರಿಬ್ಬರ ಲಂಪಟತನವನ್ನು ಬಯಲುಮಾಡಿತ್ತು. ‘ಪ್ರೀತಿ ಮಾಯೆ ಹುಷಾರು’ ಸಿನಿಮಾದ ನಿರ್ಮಾಪಕ ವೀರೇಶ್‍ ಎನ್ನುವವರು ಯುವ ನಟಿಯೊಬ್ಬಳ ಕುಟುಂಬದವರಿಂದ ಹಲ್ಲೆಗೊಳಗಾಗಿದ್ದರು. ನಿರ್ಮಾಪಕರು ತಮ್ಮ ಮೈ–ಕೈ ಮುಟ್ಟಿದರೆಂದು ನಟಿಯೊಬ್ಬಳು ಆರೋಪಿಸಿದ್ದು ತೀರಾ ಇತ್ತೀಚಿನ ಸುದ್ದಿ. ಹೀಗೆ ಲೈಂಗಿಕ ಶೋಷಣೆಯ ಹಲವು ಉದಾಹರಣೆಗಳನ್ನು ನೆನಪಿಸಿಕೊಳ್ಳಬಹುದು. ಆದರೆ, ಯಾವ ಪ್ರಕರಣದಲ್ಲೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ.ಏನಿದು ಕ್ಯಾಸ್ಟಿಂಗ್ ಕೌಚ್?

ಸಿನಿಮಾದಲ್ಲಿ ಅವಕಾಶ ನೀಡಲಿಕ್ಕಾಗಿ ಕಲಾವಿದೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ಚಿತ್ರರಂಗದ ಪರಿಭಾಷೆಯಲ್ಲಿ ‘ಕ್ಯಾಸ್ಟಿಂಗ್‍ ಕೌಚ್‍’ ಎಂದು ಹೆಸರು. ಅಪರೂಪದ ಸಂದರ್ಭಗಳಲ್ಲಿ ನಟರು ಕೂಡ ಕ್ಯಾಸ್ಟಿಂಗ್‍ ಕೌಚ್‍ ಉಪಟಳ ಅನುಭವಿಸಿರುವುದಿದೆ. ಆಶಿಕ್‍ ಬಿಸ್ಟ್‍ ಎನ್ನುವ ಬಾಲಿವುಡ್‍ ನಟ, ತನ್ನನ್ನು ಹಾಸಿಗೆಗೆ ಕರೆದ ನಿರ್ಮಾಪಕರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ. ಆಶಿಕ್‌ಗೆ ಮಾಡೆಲಿಂಗ್‌ನಲ್ಲೂ ಇದೇ ಅನುಭವ ಎದುರಾಗಿತ್ತಂತೆ.ಬಾಲಿವುಡ್‌ನಲ್ಲಂತೂ ಕ್ಯಾಸ್ಟಿಂಗ್‍ ಕೌಚ್‌ಗೆ ದಶಕಗಳ ಪರಂಪರೆಯಿದೆ. ‘ಅವಕಾಶಗಳನ್ನು ಹುಡುಕಿಕೊಂಡು ಬರುವ ಯುವನಟಿಯರಿಗೆ ಆಮಿಷ ಒಡ್ಡುವ ಪದ್ಧತಿ ಅರವತ್ತರ ದಶಕದಿಂದಲೂ ಭಾರತೀಯ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ’ ಎಂದು ನಟ ಶಶಿ ಕಪೂರ್‍ ಹೇಳಿದ್ದರು. ನಿರ್ಮಾಪಕರೊಬ್ಬರ ಗಾಳದಿಂದ ತಾವು ಪಾರಾದ ಬಗೆಯನ್ನು ನಟಿ ಸುಚಿತ್ರಾ ಕೃಷ್ಣಮೂರ್ತಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು. ಪ್ರೀತಿ ಜೈನ್‍ ಎನ್ನುವ ನಟಿ ನಿರ್ದೇಶಕ ಮಧುರ್‍ ಭಂಡಾರ್ಕರ್‍ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಹೊರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ‘ಇಂಡಿಯಾಸ್‍ ಮೋಸ್ಟ್‍ ವಾಂಟೆಡ್‍’ ಎನ್ನುವ ಟೀವಿ ಷೋ (2005) ಬಾಲಿವುಡ್‌ನ ಜನಪ್ರಿಯ ತಾರೆಗಳ ಲೈಂಗಿಕ ಹಗರಣಗಳನ್ನು ಬಯಲು ಮಾಡಿತ್ತು.

ಚೀನೀ ನಟಿ ಝಂಗ್‍ ಯು ತಾವು ಪಡೆದ ಅವಕಾಶಗಳಿಗಾಗಿ ಮಾಡಿಕೊಳ್ಳಬೇಕಾದ ಹೊಂದಾಣಿಕೆಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ‘ಯುಟ್ಯೂಬ್‌’ಗೆ ಅಪ್‍ಲೋಡ್‍ ಮಾಡಿದ್ದುದು ಕೂಡ ದೊಡ್ಡ ಸುದ್ದಿಯಾಗಿತ್ತು. ಉದ್ಯೋಗದ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಲೈಂಗಿಕ ಶೋಷಣೆ ಚಿತ್ರೋದ್ಯಮಕ್ಕೆ ಸೀಮಿತವಲ್ಲವಾದರೂ, ಮನರಂಜನೆ ಕೇಂದ್ರವಾಗುಳ್ಳ ದೃಶ್ಯಮಾಧ್ಯಮದಲ್ಲಿ ಈ ಶೋಷಣೆ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಎಷ್ಟರಮಟ್ಟಿಗಿದೆಯೆಂದರೆ, ಸಿನಿಮಾ ನಟಿಯಾಗುವುದು ಘನತೆಯ ವೃತ್ತಿಯಲ್ಲ ಎಂದು ಸಮಾಜ ಭಾವಿಸುವಷ್ಟು ಹಾಗೂ ನಟಿಯರನ್ನು ಚಿತ್ರರಸಿಕರು ಅನುಮಾನದ ಕಣ್ಣುಗಳಿಂದಲೇ ನೋಡುವಷ್ಟು.‘ವಾಸ್ತವದಲ್ಲಿ ಚಿತ್ರರಂಗ ಶುದ್ಧವಾಗಿಯೇ ಇದೆ. ಆದರೆ, ಕೆಲವು ಮಹಿಳೆಯರು ಗಲೀಜು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ’ ಎಂದು ‘ಕ್ಯಾಸ್ಟಿಂಗ್‍ ಕೌಚ್’ ಬಗ್ಗೆ ಕೇರಳದ ಸಂಸದ ಇನ್ನೋಸೆಂಟ್‍ ಇತ್ತೀಚೆಗೆ ಹೇಳಿದ್ದರು. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಹೀಗೆ ಮುಗ್ಧತೆಯನ್ನು ಆರೋಪಿಸಿಕೊಳ್ಳುವುದಾದರೆ, ಜನಸಾಮಾನ್ಯರು ಪೂರ್ವಗ್ರಹಕ್ಕೆ ಒಳಗಾಗುವುದರಲ್ಲಿ ಆಶ್ಚರ್ಯವೇನು?ಉದ್ಯಮ ಮೂಕಪ್ರೇಕ್ಷಕ

ಚಿತ್ರೋದ್ಯಮದಲ್ಲಿ ಹೆಣ್ಣುಮಕ್ಕಳ ಶೋಷಣೆಯನ್ನು ತಡೆಗಟ್ಟುವುದು ಹೇಗೆ? ಈ ಪ್ರಶ್ನೆಗೆ ಕನ್ನಡ ಸಿನಿಮಾ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‍ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ‘‘ನಮ್ಮಲ್ಲಿ ದೊಡ್ಡ ಹಗರಣಗಳೇನೂ ಇದುವರೆಗೆ ವರದಿಯಾಗಿಲ್ಲ. ಕ್ಯಾಸ್ಟಿಂಗ್‍ ಕೌಚ್‍ ಇದೆ ಎನ್ನುವುದನ್ನು ಕೇಳಿ ಬಲ್ಲೆನೇ ಹೊರತು ನನಗೆ ನೇರವಾಗಿ ಗೊತ್ತಿಲ್ಲ. ಸಿನಿಮಾ ಬಗ್ಗೆ ಗಂಭೀರವಾಗಿ ಯೋಚಿಸುವವರು ಇಂಥ ಅಡ್ಡದಾರಿ ಹಿಡಿಯುವುದಿಲ್ಲ. ಚಿತ್ರರಂಗಕ್ಕೆ ಹೊರಗಿನಿಂದ ಬರುವವರಿಂದ ಉದ್ಯಮಕ್ಕೆ ಕೆಟ್ಟ ಹೆಸರು’’ ಎನ್ನುವುದು ಅವರ ಅನಿಸಿಕೆ.‘‘ಸಿನಿಮಾ ಉದ್ಯಮ ಮುಕ್ತವಾದುದು. ಇದು ಯಾರ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಇಲ್ಲಿಗೆ ಯಾರು ಬೇಕಾದರೂ ಬರಬಹುದು. ಈಗ ಇರುವ ವ್ಯವಸ್ಥೆಯನ್ನೇ ನಿಭಾಯಿಸಿಕೊಂಡು ಬರುವುದು ಕಷ್ಟವಾಗಿದೆ. ‘ದಂಡುಪಾಳ್ಯ’ ಚಿತ್ರಕ್ಕೆ ಸಂಬಂಧಿಸಿದಂತೆ ಸಂಜನಾ ಅವರ ಬೆತ್ತಲೆ ವಿಡಿಯೊ ಲೀಕ್‍ ಪ್ರಕರಣವನ್ನೇ ನೋಡಿ. ಈಗ ಪ್ರಕರಣ ಸೈಬರ್‍ ಪೊಲೀಸ್‍ ಅಂಗಳದಲ್ಲಿದೆ. ಅಲ್ಲಿಗೆ ಪ್ರಕರಣ ಚಿತ್ರೋದ್ಯಮದ ಕೈ ದಾಟಿದಂತಾಯಿತು’’ ಎನ್ನುವ ನಾಗೇಂದ್ರ ಪ್ರಸಾದ್‌ರ ಮಾತುಗಳಲ್ಲಿ ಈ ಸಮಸ್ಯೆ ಬಗೆಹರಿಸಬೇಕಾದ ವ್ಯವಸ್ಥೆ ಬೇರೆಯೇ ಇದೆ ಎನ್ನುವ ಇಂಗಿತವಿದೆ.ವೃತ್ತಿಪರರಲ್ಲದ ವ್ಯಕ್ತಿಗಳ ಅಪಸವ್ಯಗಳ ಬಗ್ಗೆ ನಿರ್ದೇಶಕಿ ಸುಮನ್‍ ಕಿತ್ತೂರು ಕೂಡ ಬೆಟ್ಟುಮಾಡುತ್ತಾರೆ. “ಮೊದಲಿಗೆ ವೃತ್ತಿಪರ ಸಿನಿಮಾ ನಿರ್ಮಾಣ ಸಂಸ್ಥೆಗಳಿದ್ದವು. ಆಗ ಸಿನಿಮಾ ನಿರ್ಮಾಣಕ್ಕೊಂದು ಸಾಂಸ್ಥಿಕ ಚೌಕಟ್ಟಿತ್ತು. ವೃತ್ತಿಪರ ನಿರ್ಮಾಪಕರು ಕಡಿಮೆಯಾಗಿ, ಸಾಂಸ್ಥಿಕ ವಾತಾವರಣ ಕ್ಷೀಣಿಸಿದಂತೆಲ್ಲ ಸಮಸ್ಯೆಗಳು ಹೆಚ್ಚಾಗುತ್ತವೆ’’ ಎನ್ನುತ್ತಾರೆ. ಪ್ರತಿಕೂಲ ಸನ್ನಿವೇಶದಲ್ಲೂ ಹೆಣ್ಣುಮಕ್ಕಳು ಈಗ ಹೆಚ್ಚು ಸ್ಟ್ರಾಂಗ್‍ ಆಗಿದ್ದಾರೆ ಎನ್ನುವ ಸಂತೋಷ ಅವರದು.‘ಚಿತ್ರರಂಗದಲ್ಲಿ ದುಡಿಯುವ ಮಹಿಳೆಯರಿಗೆ ಒಂದು ವೇದಿಕೆ ಬೇಕಾಗಿದೆ. ಕಲಾವಿದೆಯರು ಮಾತ್ರವಲ್ಲದೆ – ಸಿನಿಮಾದಲ್ಲಿ ಕೆಲಸ ಮಾಡುವ ಕಟ್ಟಕಡೆಯ ಹೆಣ್ಣುಮಗಳನ್ನೂ ಉದ್ದೇಶಿತ ವೇದಿಕೆ ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ಜಯಂತಿ, ಭಾರತಿ ವಿಷ್ಣುವರ್ಧನ್‍, ಹರಿಣಿ ಅವರಂಥ (ನೃತ್ಯ ಸಂಯೋಜಕಿ) ಹಿರಿಯರು ಗಮನಹರಿಸಬೇಕಾಗಿದೆ. ಸಿನಿಮಾಕ್ಕೆ ಪೂರಕವಾಗಿ ಕೆಲಸ ಮಾಡುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನೂ ಈ ವೇದಿಕೆ ಪ್ರತಿನಿಧಿಸುವಂತಾದರೆ ಒಳ್ಳೆಯದು. ಲೈಂಗಿಕ ಶೋಷಣೆ ಮಾತ್ರವಲ್ಲ, ಸಿನಿಮಾ ನಿರ್ಮಾಣ ಸಂದರ್ಭದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆ–ಮನಸ್ತಾಪಗಳ ಚರ್ಚೆಗೂ ಇದು ವೇದಿಕೆಯಾಗಬೇಕು’ ಎಂದು ಸುಮನ್‍ ಹೇಳುತ್ತಾರೆ.‘ಕ್ಯಾಸ್ಟಿಂಗ್‍ ಕೌಚ್’ ಸಮಸ್ಯೆಯನ್ನು ನೈತಿಕತೆಯ ಕೊರತೆಯ ರೂಪದಲ್ಲಿ ನಿರ್ದೇಶಕ ಜಯತೀರ್ಥ ಕಾಣುತ್ತಾರೆ. ಕಲಾವಿದೆಯರು ಗೌರವವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವುದು ಚಿತ್ರೋದ್ಯಮದ ಎಲ್ಲರ ಕರ್ತವ್ಯ ಎನ್ನುವ ಅವರು, ಇತ್ತೀಚಿನ ದಿನಗಳಲ್ಲಿ ಪ್ರೌಢ ಮನೋಭಾವದ ಕಲಾವಿದೆಯರು ಉದ್ಯಮಕ್ಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ.ವೃತ್ತಿಪರತೆಯ ಕೊರತೆ ಹಿರಿಯ ನಟಿ–ನಿರ್ಮಾಪಕಿ ಜಯಮಾಲಾ ಅವರ ಅನುಭವಕ್ಕೂ ಬಂದಿದೆ. ‘ಪ್ರತಿ ಸಿನಿಮಾಕ್ಕೂ ನಾವು ಅಗ್ರಿಮೆಂಟ್‍ ಮಾಡಿಕೊಳ್ಳುತ್ತಿದ್ದೆವು. ಸಂಭಾವನೆ, ಕೆಲಸದ ಸ್ವರೂಪ, ಕೆಲಸದ ಸಮಯವನ್ನು ಅಗ್ರಿಮೆಂಟ್‍ ಒಳಗೊಂಡಿರುತ್ತಿತ್ತು. ಈಗ ಇಂಥ ಶಿಸ್ತೇ ಇಲ್ಲವಾಗಿದೆ’ ಎನ್ನುವ ವಿಷಾದ ಅವರದು. ಕೇರಳದ ‘ವಿಮೆನ್‌ ಇನ್‌ ಸಿನಿಮಾ ಕಲೆಕ್ಟಿವ್‌’ ಸಂಘಟನೆಯ ಬಗ್ಗೆ ಸಂತೋಷ ವ್ಯಕ್ತಪಡಿಸುವ ಅವರು – ‘ಮಲಯಾಳ ಚಿತ್ರರಂಗ ಭಾರತೀಯ ಚಿತ್ರೋದ್ಯಮಕ್ಕೆ ಎಲ್ಲ ರೀತಿಯಿಂದಲೂ ಮಾದರಿ. ಹೆಣ್ಣುಮಕ್ಕಳ ಒಕ್ಕೂಟದ ವಿಷಯದಲ್ಲೂ ಅವರೀಗ ಮಾದರಿ ಹಾಕಿಕೊಟ್ಟಿದ್ದಾರೆ’ ಎನ್ನುತ್ತಾರೆ.ಶೋಷಣೆಗೆ ಹಲವು ಮುಖ

“ಕ್ಯಾಸ್ಟಿಂಗ್‍ ಕೌಚ್‍ ಹಗರಣಗಳಲ್ಲಿ ಹೆಚ್ಚು ಕೇಳಿಸುವುದು ನಿರ್ಮಾಪಕ, ನಿರ್ದೇಶಕ, ನಾಯಕ ನಟರ ಹೆಸರುಗಳು. ಆದರೆ, ಪ್ರಭಾವಿ ಪೋಷಕ ನಟರು – ವಿಶೇಷವಾಗಿ ಹಾಸ್ಯನಟರು ಹೆಣ್ಣುಮಕ್ಕಳನ್ನು ಗೋಳು ಹೊಯ್ದುಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ತೆರೆಯ ಮೇಲಿನ ಅಪಹಾಸ್ಯವನ್ನು ಅವರು ಶೂಟಿಂಗ್‍ ಸಂದರ್ಭದಲ್ಲಿ ಕಲಾವಿದೆಯರ ಮೇಲೂ ತೋರಿಸುತ್ತಾರೆ. ನಾಯಕ ನಟರಿಗಿಂತಲೂ ಇಂಥವರ ಉಪಟಳವೇ ಹೆಚ್ಚು. ಛಾಯಾಗ್ರಾಹಕ, ವಸ್ತ್ರವಿನ್ಯಾಸಕರಂಥ ತಂತ್ರಜ್ಞರು ಕೂಡ ಕಲಾವಿದೆಯರ ‘ಸೌಂದರ್ಯ ಸಮೀಕ್ಷೆ’ ನಡೆಸುತ್ತಾರೆ’’ ಎಂದು ಲೈಂಗಿಕ ಶೋಷಣೆಯ ಮತ್ತೊಂದು ಮಜಲನ್ನು ನಿರ್ದೇಶಕರೊಬ್ಬರು ಹೇಳುತ್ತಾರೆ.ತಮ್ಮ ಹೆಸರು ಬಹಿರಂಗಪಡಿಸಲು ಬಯಸದ ಅವರು, ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಯ ಹಲವು ರೂಪಗಳನ್ನು ವಿವರಿಸುತ್ತಾರೆ. ಅವರು ಹೇಳುವ ಪ್ರಕಾರ, ವಿದೇಶದಲ್ಲಿ ಹಾಡು ಚಿತ್ರೀಕರಣ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಾಯಕ–ನಾಯಕಿ ನಡುವಣ ಒಡಂಬಡಿಕೆಯೇ ಆಗಿರುತ್ತದೆ. ತವರಿನಲ್ಲಿ ರಿಸ್ಕ್‍ ತೆಗೆದುಕೊಳ್ಳಲು ಬಯಸದ ನಾಯಕನಟರು, ವಿದೇಶದಲ್ಲಿ ಗರಿಗೆದರಿಕೊಳ್ಳುತ್ತಾರೆ.ಐಟಂ ಸಾಂಗ್‍ ನೃತ್ಯಗಾರ್ತಿಯರದು ಮತ್ತೊಂದು ಕಥೆ. ‘ಪರಭಾಷೆಗಳಿಂದ ಕರೆತರುವ ನೃತ್ಯಾಂಗನೆಯರು ಅದಕೂ ಇದಕೂ ಬಳಕೆಯಾಗುತ್ತಾರೆ. ಕೆಲವು ಡಾನ್ಸರ್‌ಗಳು ಉಪಕಾರಪ್ರಜ್ಞೆಯ ಭಾವದಲ್ಲೂ ನಿರ್ಮಾಪಕ-ನಿರ್ದೇಶಕರ ಕಾಮನೆಗಳನ್ನು ಪೂರೈಸುವುದಿದೆ’ ಎನ್ನುತ್ತಾರೆ. ತನ್ನ ಜೊತೆ ನಟಿಸುವ ನಾಯಕಿಯರನ್ನು ಹುರಿದು ಮುಕ್ಕುವುದರಲ್ಲಿ ಹೆಸರಾದ ನಟನೊಬ್ಬನ ಜೊತೆ ನಟಿಸಲು ಅವಕಾಶ ತಪ್ಪಿಸಿಕೊಳ್ಳಲು ನಾಯಕಿಯರೂ ಪಡುವ ಪಾಡನ್ನೂ ಈ ನಿರ್ದೇಶಕರು ರಸವತ್ತಾಗಿ ಬಣ್ಣಿಸುತ್ತಾರೆ.

ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಚಾಲಾಕಿಗಳೂ ಇದ್ದಾರೆ. ತನ್ನಿಂದ ಬಾಧೆಗೊಳಗಾದ ಹೆಣ್ಣುಮಗಳೊಬ್ಬಳನ್ನು ಈಗ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿ ಕೊಟ್ಟು ಸಲಹಬೇಕಾದ ಅನಿವಾರ್ಯತೆಗೆ ಗಂಡುಗಲಿಯೊಬ್ಬರು ಒಳಗಾಗಿರುವ ಉದಾಹರಣೆಯೂ ಕನ್ನಡ ಚಿತ್ರರಂಗದಲ್ಲಿದೆ. ಹೀಗೆ ಶೋಷಕರನ್ನು ಒತ್ತಡಕ್ಕೆ ಸಿಲುಕಿಸುವ ದಿಟ್ಟೆಯರು, ಜಾಣೆಯರು ತೀರಾ ಅಪರೂಪ.ತಾರೆಗಳು ಮಾತನಾಡಬೇಕು…

“ಕ್ಯಾಸ್ಟಿಂಗ್‍ ಕೌಚ್‍ ಎಲ್ಲ ಭಾಷೆಗಳ ಚಿತ್ರರಂಗದಲ್ಲೂ ಇದೆ; ಕನ್ನಡದಲ್ಲೂ ಇದೆ’’ ಎಂದು ಹೇಳುವ ನಿರ್ದೇಶಕ ಪಿ.ಎಚ್‍. ವಿಶ್ವನಾಥ್, ‘‘ಮಲಯಾಳಂ ಚಿತ್ರರಂಗದ ಮಹಿಳೆಯರ ಒಗ್ಗಟ್ಟು ಅದ್ಭುತವಾದುದು’’ ಎನ್ನುತ್ತಾರೆ.“ನಮ್ಮಲ್ಲಿ ಬಾಧಿತರು ಮಾತ್ರ ಮಾತನಾಡುತ್ತಾರೆ. ಅದು ಸಾಲದು. ಜನಪ್ರಿಯರು ಹಾಗೂ ಹಿರಿಯರು ಮಾತನಾಡಬೇಕು. ಅನ್ಯಾಯಕ್ಕೆ ಒಳಗಾದವರ ಬಗ್ಗೆ ಧ್ವನಿ ಎತ್ತಬೇಕು. ಆಗ ಆ ಮಾತಿಗೆ ಬಲ ಬರುತ್ತದೆ. ಶೋಷಣೆಗೆ ಒಳಗಾದವರು ಸಂಘಟನೆ ಮಾಡಿದಾಗ ಅದನ್ನು ಅನುಮಾನದಿಂದ ನೋಡುವವರು ಇರುತ್ತಾರೆ. ಇತರರು ಮಾಡಿದಾಗ ಅದಕ್ಕೆ ಹೆಚ್ಚು ಬಲ ಬರುತ್ತದೆ’’ ಎನ್ನುವ ವಿಶ್ವನಾಥ್‍, ತಾರೆಗಳು ಹೊಂದಿರಬೇಕಾದ ನೈತಿಕ ಜವಾಬ್ದಾರಿಯನ್ನು ಸೂಚ್ಯವಾಗಿ ಪ್ರಸ್ತಾಪಿಸುತ್ತಾರೆ.“ಚಿತ್ರತಂಡದಲ್ಲಿನ ಹೆಣ್ಣುಮಕ್ಕಳ ಗೌರವವನ್ನು ರಕ್ಷಿಸುವುದು ನಿರ್ಮಾಪಕ, ನಿರ್ದೇಶಕರ ಕರ್ತವ್ಯ. ನಮ್ಮಿಂದ ಮಾತ್ರವಲ್ಲದೆ, ಇತರರಿಂದಲೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ’’ ಎನ್ನುವ ವಿಶ್ವನಾಥ್‍, ಇದಕ್ಕೆ ಉದಾಹರಣೆಯಾಗಿ ಪುಟ್ಟಣ್ಣ ಕಣಗಾಲರನ್ನು ನೆನಪಿಸಿಕೊಳ್ಳುತ್ತಾರೆ. ‘ರಂಗನಾಯಕಿ’ ಸಿನಿಮಾದ ‘ಈ ಜಗದಂಬೆ’ ಎನ್ನುವ ಜಾತ್ರೆಯ ಹಾಡಿನ ಚಿತ್ರೀಕರಣ ದೇವನಹಳ್ಳಿ ಮತ್ತು ನಂದಿ ಪರಿಸರದಲ್ಲಿ ನಡೆದಾಗ ಸಾವಿರಾರು ಜನರ ಗುಂಪು ಸೇರಿತ್ತಂತೆ. ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಕೆಲವು ಹುಡುಗಿಯರನ್ನು ಹುಡುಗರ ಗುಂಪೊಂದು ಕೆಣಕಿದೆ. ಆಗ ಪುಂಡರ ವಿರುದ್ಧ ಪುಟ್ಟಣ್ಣ ಕಟುವಾಗಿ ನಡೆದುಕೊಂಡಿದ್ದು ನಮಗೆಲ್ಲ ಮಾದರಿ ಎನ್ನುತ್ತಾರೆ.ಆಪರೇಷನ್ ಕಿರುತೆರೆ!

‘ಕ್ಯಾಸ್ಟಿಂಗ್‍ ಕೌಚ್‍’ ಬಗ್ಗೆ ಮಾತನಾಡುವ ಚಿತ್ರರಂಗದ ಬಹುತೇಕರು ಹೇಳುವ ಮಾತು – “ನಮ್ಮಲ್ಲೇ ವಾಸಿ. ನೀವು ಟೀವಿ ಕಲಾವಿದರ ಕಥೆ ಕೇಳಬೇಕು. ಅಲ್ಲಿನ ಕರ್ಮ(ಕಾಮ)ಕಾಂಡಗಳು ಒಂದೆರಡಲ್ಲ’’.“ನಮ್ಮ ಧಾರಾವಾಹಿಗಳು ಮಹಿಳಾಪ್ರಧಾನವಾದವು, ಹೆಣ್ಣಿನ ಚಾರಿತ್ರ್ಯಕ್ಕೆ ಒತ್ತು ನೀಡುವಂತಹವು. ಕಿರುತೆರೆಯ ಕೌಟುಂಬಿಕ ಕಥನಗಳಿಗೆ ಹೆಣ್ಣಿನ ಅಳಲು–ಕಣ್ಣೀರು ಪ್ರಮುಖ ಬಂಡವಾಳ. ಆದರೆ, ಈ ತಲ್ಲಣವನ್ನು ಕಲಾವಿದೆಯರು ನಿಜಜೀವನದಲ್ಲೂ ಅನುಭವಿಸುತ್ತಿದ್ದಾರೆ” ಎನ್ನುವ ನಿರ್ದೇಶಕಿಯೊಬ್ಬರು, ಕಿರುತೆರೆಯಲ್ಲಿನ ಕ್ಯಾಸ್ಟಿಂಗ್‍ ಕೌಚ್‍ ವಿರಾಟಸ್ವರೂಪದ ಬಗ್ಗೆ ಗಮನಸೆಳೆಯುತ್ತಾರೆ.ಕ್ಯಾಸ್ಟಿಂಗ್‍ ಕೌಚ್‍ ಎನ್ನುವುದು ಮಹಿಳೆಯರ ಲೈಂಗಿಕ ಶೋಷಣೆಯ ರೂಪದಲ್ಲಿ ನೋಡುವುದು ಸಮಸ್ಯೆಯ ಒಂದು ಮುಖವನ್ನು ಚಿತ್ರಿಸಿದಂತಾಗುತ್ತದೆ. ಮಹಿಳೆಯನ್ನು ಅಂಕೆಯಲ್ಲಿ ಇರಿಸಿಕೊಳ್ಳುವ ಪುರುಷ ಮನಸ್ಥಿತಿ ಇಲ್ಲಿ ಕೆಲಸಮಾಡುತ್ತಿರುತ್ತದೆ. ಈ ಮನೋಧರ್ಮವೇ ‘ಇದು ಹೊಸತೇನಲ್ಲ, ಅಸಹಜವೂ ಅಲ್ಲ’ ಎನ್ನುವಂಥ ಬೀಸು–ಸಲೀಸು ಮಾತುಗಳ ಹಿನ್ನೆಲೆಯಲ್ಲಿರುತ್ತದೆ. ಅವಕಾಶಗಳಿಗಾಗಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ‘ಒಪ್ಪಿತ ಸಂಬಂಧ’ ಎಂದು ಬಿಂಬಿಸುವವರೂ ಇದ್ದಾರೆ. ಪ್ರಶ್ನೆ ಇರುವುದು ಮನೋಧರ್ಮದ ಕುರಿತು, ‘ಒಪ್ಪಿತ’ ಎನ್ನುವ ಸ್ಥಿತಿಗೆ ಹೆಣ್ಣುಮಕ್ಕಳನ್ನು ದೂಡುವ ಪ್ರವೃತ್ತಿಯ ಬಗ್ಗೆ. ಹೀಗೆ ಬರೆಯುತ್ತಿರುವ ಸಂದರ್ಭದಲ್ಲೇ, ಸಾಮಾಜಿಕ ಜಾಲತಾಣದಲ್ಲಿನ ಲೈಂಗಿಕ ಚೇಷ್ಟೆಗಳ ಕುರಿತು ಕಿರುತೆರೆ ನಟಿ–ನಿರೂಪಕಿ ಕಾವ್ಯಾ ಶಾಸ್ತ್ರಿ ಧ್ವನಿಯೆತ್ತಿದ್ದಾರೆ. ಅವರ ಮಾತುಗಳಲ್ಲಿನ ವೇದನೆಯನ್ನು ಗಮನಿಸಿದರೆ, ಇಡೀ ಸಮಾಜವೇ ಕ್ಯಾಸ್ಟಿಂಗ್‍ ಕೌಚ್‌ನ ಭಾಗವಾಗಿದೆಯೇನೋ ಎನ್ನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry