ಗುರುವಾರ , ಆಗಸ್ಟ್ 22, 2019
27 °C

ಕೆದಿಲಾಯ ಕಂಡ ಗ್ರಾಮ ಭಾರತ!

Published:
Updated:
ಕೆದಿಲಾಯ ಕಂಡ ಗ್ರಾಮ ಭಾರತ!

ಮಧ್ಯರಾತ್ರಿಯೇ ಕತ್ತಲೆ ಹೆಚ್ಚು. ಆದರೆ, ಇದು ಬೆಳಕಾಗುವ ಸೂಚನೆ ಕೂಡ ಹೌದು. ಹಾಗೆಯೇ ನಮ್ಮ ದೇಶದ ಹಳ್ಳಿಗಳಲ್ಲಿ ಈಗ ಸಮಸ್ಯೆಗಳ ಬೆಟ್ಟವೇ ಇದೆ. ಇದು ಕರಗುವ ಮುನ್ಸೂಚನೆಯೂ ಕಾಣುತ್ತಿದೆ’.

2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಹೊರಟು ದೇಶದ 2350 ಹಳ್ಳಿಗಳಲ್ಲಿ ಸಂಚರಿಸಿ 2017ರ ಜುಲೈ 9ಕ್ಕೆ ಕನ್ಯಾಕುಮಾರಿಯಲ್ಲಿಯೇ ತಮ್ಮ ‘ಭಾರತ ಪರಿಕ್ರಮ ಯಾತ್ರೆ’ ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಸೀತಾರಾಮ ಕೆದಿಲಾಯ ಅವರ ಸ್ಪಷ್ಟ ಅಭಿಮತ ಇದು.

ಅವರು ಒಟ್ಟಾರೆ 1,797 ದಿನಗಳಲ್ಲಿ 23,100 ಕಿ.ಮೀ ದೂರ ಪಾದಯಾತ್ರೆ ನಡೆಸಿದ್ದಾರೆ. 25 ರಾಜ್ಯಗಳಲ್ಲಿ ಸುತ್ತಾಡಿದ್ದಾರೆ. ನಮ್ಮ ಪಕ್ಕದ ನೇಪಾಳ, ಭೂತಾನ್‌, ಬಾಂಗ್ಲಾ ಗಡಿಗಳಲ್ಲಿಯೂ ಸಂಚರಿಸಿರುವ ಅವರು ಜಾತಿ, ಮತ, ಪಂಥಗಳನ್ನು ಬಿಟ್ಟು ಎಲ್ಲರ ಮನೆಗಳಲ್ಲಿಯೂ ತಂಗಿದ್ದಾರೆ. ಭಿಕ್ಷೆ ಬೇಡಿ ಊಟ ಮಾಡಿದ್ದಾರೆ. ತಾವು ಹೋದ ಮನೆಮನೆಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಉಪನ್ಯಾಸ ಮಾಡಿದ್ದಾರೆ. ಯುವಕರು, ಮಹಿಳೆಯರು, ಪುರುಷರು, ಮಕ್ಕಳು ಹೀಗೆ ಎಲ್ಲರ ಜೊತೆ ಒಂದಾಗಿ ದೇಶ ಕಟ್ಟುವ ಕಾಯಕದಲ್ಲಿ ತೊಡಗುವಂತೆ ಮನವಿ ಮಾಡಿಕೊಂಡಿದ್ದಾರೆ.

ವೃದ್ಧಾಶ್ರಮಗಳಾಗುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಬೆಳಕು ಹರಿಯುತ್ತದೆ ಎಂಬ ನಿಮ್ಮ ನಂಬಿಕೆಗೆ ಬಲವಾದ ಕಾರಣ ಏನು ಎಂದು ಪ್ರಶ್ನೆ ಮಾಡಿದರೆ ‘ಐಟಿ, ಬಿಟಿ, ಐಐಟಿಗಳನ್ನು ಬಿಟ್ಟು ಸಾವಿರ ಸಾವಿರ ಮಂದಿ ಯುವಕರು ಕೃಷಿಯತ್ತ ಮುಖ ಮಾಡಿರುವುದೇ ನನ್ನ ಸಂತೋಷಕ್ಕೆ, ನನ್ನ ವಿಶ್ವಾಸಕ್ಕೆ ಕಾರಣ’ ಎನ್ನುತ್ತಾರೆ ಅವರು. ನಾವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದು ಆಗಿಯೇ ಆಗುತ್ತದೆ ಎನ್ನುವುದು ಅವರ ನಂಬಿಕೆ.

ಐದು ವರ್ಷ ದೇಶವನ್ನು ಸುತ್ತಾಡಿದ ಅವರು ಅನುಭವದ ಮೂಟೆಯನ್ನೇ ಹೊತ್ತಿದ್ದಾರೆ. ಅವರನ್ನು ಮಾತನಾಡಿಸಿದಾಗ ತಮ್ಮ ಬುತ್ತಿಯಿಂದ ಅದನ್ನು ಬಿಚ್ಚಿಡುತ್ತ ಹೋದರು.

ಪ್ರ: ಭಾರತ ಪರಿಕ್ರಮ ಯಾತ್ರೆಯ ಉದ್ದೇಶ ಏನು?

ಏನೂ ಉದ್ದೇಶ ಇರಲಿಲ್ಲ. ಉದ್ದೇಶ ಇಟ್ಟುಕೊಂಡರೆ ನಿರೀಕ್ಷೆ ಇರುತ್ತದೆ. ನಿರೀಕ್ಷೆ ಇದ್ದರೆ ನಿರಾಸೆ ಆಗುತ್ತದೆ. ಉದ್ದೇಶ ಇಟ್ಟುಕೊಳ್ಳದೇ ಒಳ್ಳೆಯ ಕೆಲಸ ಮಾಡುವುದು ನನ್ನ ಬಯಕೆ. ನಡೆಯುವುದು ಒಳ್ಳೆಯ ಕೆಲಸ. ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ವ್ಯಕ್ತಿಯ ಆರೋಗ್ಯ ಸುಧಾರಿಸಿದರೆ ಕುಟುಂಬದ ಆರೋಗ್ಯವೂ ಸುಧಾರಿಸುತ್ತದೆ. ಕುಟುಂಬದ ಆರೋಗ್ಯ ಸುಧಾರಿಸಿದರೆ ಗ್ರಾಮದ ಆರೋಗ್ಯ ಸುಧಾರಿಸುತ್ತದೆ. ಗ್ರಾಮ ಸುಧಾರಿಸಿದರೆ ದೇಶವೂ ಸುಧಾರಿಸುತ್ತದೆ. ಎಲ್ಲಿ ಆರೋಗ್ಯ ಇರುತ್ತದೆಯೋ ಅಲ್ಲಿ ಆನಂದ ಇರುತ್ತದೆ. ಅದಕ್ಕೆ ನಡಿಗೆಯನ್ನು ಆಯ್ಕೆ ಮಾಡಿಕೊಂಡೆ.

ಮನುಷ್ಯ ಆರೋಗ್ಯವಾಗಿರಬೇಕು ಎಂದರೆ ದೇಹದಲ್ಲಿರುವ ಪಂಚಭೂತಗಳೂ ಆರೋಗ್ಯವಾಗಿರಬೇಕು. ಪಂಚಭೂತಗಳು ಆರೋಗ್ಯವಾಗಿರಬೇಕು ಎಂದರೆ ಪ್ರಕೃತಿ ಆರೋಗ್ಯವಾಗಿರಬೇಕು. ಈಗ ನೆಲ, ಜಲ, ಕಾಡು ಸೇರಿ ಪ್ರಕೃತಿ ಹಾಳಾಗಿದೆ. ಇದಕ್ಕೆ ಪ್ರಕೃತಿಯ ಒಂದು ಭಾಗವಾಗಿರುವ ಮನುಷ್ಯನೇ ಕಾರಣ. ಪ್ರಕೃತಿಯನ್ನು ಹಾಳು ಮಾಡುವ ಶಕ್ತಿ ಇರುವುದು ಅವನಿಗೆ ಮಾತ್ರ. ಪ್ರಕೃತಿಯಲ್ಲಿ ಇರುವ ಬೇರೆ ಯಾವುದೇ ಜೀವಿಗಳು ಪ್ರಕೃತಿಯನ್ನು ಹಾಳು ಮಾಡುವುದಿಲ್ಲ. ಪ್ರಕೃತಿಯನ್ನು ರಕ್ಷಿಸುವ ಶಕ್ತಿ ಇರುವುದೂ ಮನುಷ್ಯನಿಗೆ ಮಾತ್ರ. ವಿಕಾಸದ ಹೆಸರಿನಲ್ಲಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಅದರಿಂದ ಕೋಪಗೊಂಡ ಪ್ರಕೃತಿ ಮನುಷ್ಯನನ್ನು ನಾಶ ಮಾಡಲು ಹೊರಟಿದೆ. ಈಗ ಮನುಷ್ಯ ಪ್ರಕೃತಿಯ ಮುಂದೆ ವಿನಯದಿಂದ ಬಾಗಬೇಕಿದೆ. ಪ್ರಕೃತಿಗಾಗಿ ಪ್ರಕೃತಿಯಂತೆ ಬದುಕುವುದನ್ನು ಕಲಿಯಬೇಕಿದೆ. ಇದನ್ನು ಮನುಷ್ಯ ಮರೆತಿದ್ದಾನೆ. ಇದಕ್ಕೆ ಮನುಷ್ಯನ ಆರೋಗ್ಯವೇ ಕಾರಣ. ಮನುಷ್ಯ ಅತಿ ಆಸೆಗೆ ಒಳಗಾಗಿ ಭೂಮಿ, ನೀರನ್ನೂ ವಿಷಮಯ ಮಾಡಿದ್ದಾನೆ. ಇದರಿಂದ ಬೆಳೆದ ಆಹಾರ ತಿಂದು ಮನುಷ್ಯನ ಬುದ್ಧಿಯೂ ಕಲುಷಿತವಾಯಿತು. ಕಲುಷಿತ ಬುದ್ಧಿ ಎಲ್ಲವನ್ನೂ ಕಲುಷಿತಗೊಳಿಸಿದೆ. ಎಲ್ಲವೂ ಸರಿಯಾಗಿರಬೇಕು ಎಂದರೆ ಮನುಷ್ಯ ಆರೋಗ್ಯವಾಗಿರಬೇಕು. ಹಾಗಾದರೆ ಆರೋಗ್ಯ ಎಲ್ಲಿದೆ? ಈಗಲೂ ಸ್ವಲ್ಪವಾದರೂ ಆರೋಗ್ಯ ಉಳಿದಿರುವುದು ಹಳ್ಳಿಗಳಲ್ಲಿ. ಹಳ್ಳಿಯ ಜನರ ಮನಸ್ಸು ಇನ್ನೂ ಸಂಪೂರ್ಣವಾಗಿ ಕಲುಷಿತವಾಗಿಲ್ಲ. ಅದಕ್ಕೇ ನಾನು ಹಳ್ಳಿಗಳಿಗೆ ಹೋದೆ. ಅಲ್ಲಿಯ ಆರೋಗ್ಯ ಕಂಡು ನನ್ನ ಆರೋಗ್ಯವೂ ಸುಧಾರಿಸಿತು. ಈ ಐದು ವರ್ಷಗಳಲ್ಲಿ ಒಮ್ಮೆಯೂ ವೈದ್ಯರ ಬಳಿಗೆ ಹೋಗಲಿಲ್ಲ.

ಪ್ರ: ನಿಜವಾಗಿಯೂ ಹಳ್ಳಿಯ ಆರೋಗ್ಯ ಅಷ್ಟು ಚೆನ್ನಾಗಿದೆಯಾ?

ಇಲ್ಲ, ಆರೋಗ್ಯ ಕೆಡುತ್ತಿದೆ. ಆದರೆ ಅದನ್ನು ಸುಧಾರಿಸಬಹುದು. ಹಳ್ಳಿಯ ಜನ ಹಸನ್ಮುಖಿಯಾಗಿದ್ದರೆ ಜಗತ್ತೇ ಹಸನ್ಮುಖಿಯಾಗಿರುತ್ತದೆ. ಅವರು ಅಳುತ್ತಿದ್ದರೆ ಜಗತ್ತು ಅಳುತ್ತದೆ. ಅವರು ಸುಧಾರಣೆಗೆ ಸಿದ್ಧರಿದ್ದಾರೆ.

ಪ್ರ: ಅವರು ಸುಧಾರಿ ಪ್ರಕೃತಿಯನ್ನು ರಕ್ಷಿಸುವ ಶಕ್ತಿ ಇರುವುದೂ ಮನುಷ್ಯನಿಗೆ ಮಾತ್ರ. ವಿಕಾಸದ ಹೆಸರಿನಲ್ಲಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಅದರಿಂದ ಕೋಪಗೊಂಡ ಪ್ರಕೃತಿ ಮನುಷ್ಯನನ್ನು ನಾಶ ಮಾಡಲು ಹೊರಟಿದೆ. ಈಗ ಮನುಷ್ಯ ಪ್ರಕೃತಿಯ ಮುಂದೆ ವಿನಯದಿಂದ ಬಾಗಬೇಕಿದೆ. ಸಲು ಸಿದ್ಧರಿದ್ದಾರೆ ಎಂದು ನಿಮಗೆ ಅನ್ನಿಸಲು ಕಾರಣ ಏನು?

ಅಯ್ಯೋ ಅದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ನಾನು ಪಶ್ಚಿಮ ಬಂಗಾಳದಲ್ಲಿ ಸಂಚರಿಸುತ್ತಿದ್ದಾಗ ಒಂದು ಗ್ರಾಮಕ್ಕೆ ಹೋಗಿದ್ದೆ. ಅಲ್ಲಿಯ ಯುವಕರನ್ನು ಸೇರಿಸಿ ಒಂದು ಸಭೆ ಮಾಡಿದೆ. ಗ್ರಾಮದ ಸುಧಾರಣೆಯ ಜವಾಬ್ದಾರಿಯನ್ನು ಒಬ್ಬ ಯುವಕನಿಗೆ ಒಪ್ಪಿಸಿದೆ. ಆ ಯುವಕ ಮತ್ತು ಅವನ ಪತ್ನಿ ರಾತ್ರಿ ನನ್ನ ಬಳಿಗೆ ಬಂದು ‘ಗುರೂಜಿ, ನಾವು ಇಲ್ಲಿಗೆ ಬರುವಾಗ ದೇವರ ಮುಂದೆ ಪ್ರಮಾಣ ಮಾಡಿ ಬಂದಿದ್ದೇವೆ. ನಾವು ಇನ್ನು ಮುಂದೆ ನಕ್ಸಲೀಯ ಚಳವಳಿಯಲ್ಲಿ ಭಾಗಿಯಾಗುವುದಿಲ್ಲ. ನೀವು ಇಂದು ಸಭೆ ನಡೆಸಿದಾಗ ಬಂದವರೆಲ್ಲಾ ನಕ್ಸಲೀಯ ಚಳವಳಿಯ ಕಾರ್ಯಕರ್ತರೇ ಆಗಿದ್ದರು. ಅವರನ್ನೆಲ್ಲಾ ನಕ್ಸಲೀಯ ಚಳವಳಿಯಿಂದ ಹೊರಕ್ಕೆ ಬರುವಂತೆ ಪ್ರೇರೇಪಿಸುತ್ತೇವೆ’ ಎಂದರು. ಹಾಗೆ ಮಾಡಿ ಎಂದು ನಾನು ಅವರಿಗೆ ಹೇಳಿರಲಿಲ್ಲ. ಆದರೆ ಬದಲಾವಣೆಯ ಬೆಳಕು ಅವರ ಹೃದಯದಲ್ಲಿಯೇ ಹುಟ್ಟಿಕೊಂಡಿತ್ತು. ಅದೇ ರೀತಿ ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ನಾಯಕರೊಬ್ಬರು ನನ್ನ ತೊಡೆಯ ಮೇಲೆ ತಲೆ ಇಟ್ಟು ‘ನನ್ನನ್ನು ಕ್ಷಮಿಸಿ’ ಎಂದು ಹೇಳುತ್ತಾ ಅಳುತ್ತಿದ್ದರು. ಅಸ್ಸಾಂನಲ್ಲಿ ಒಬ್ಬರ ಮನೆಯಲ್ಲಿ ನಾನು ಉಳಿದುಕೊಂಡಿದ್ದೆ. ಅವರಿಗೂ ಅವರ ಪಕ್ಕದ ಮನೆಯವರಿಗೂ ಸುಮಾರು 25 ವರ್ಷಗಳಿಂದ ಮಾತುಕತೆ ಇರಲಿಲ್ಲ. ಬದ್ಧ ದ್ವೇಷ. ಆದರೆ ನಮ್ಮ ಯಾತ್ರೆ ಬಂದಿದ್ದರಿಂದ ಅವರನ್ನೂ ಕರೆಯಬೇಕು ಎಂದು ನಾನು ಉಳಿದುಕೊಂಡಿದ್ದ ಮನೆಯ ಯಜಮಾನನಿಗೆ ಅನ್ನಿಸಿತು. ಅದಕ್ಕೇ ಅವರು ಪಕ್ಕದ ಮನೆಯ ಯಜಮಾನನ್ನು ಕಂಡು ನಾನು ಬಂದಿರುವ ವಿಷಯ ತಿಳಿಸಿ ತಮ್ಮಲ್ಲಿಗೆ ಬರಲು ವಿನಂತಿಸಿಕೊಂಡರು. ಅದಕ್ಕೆ ಪಕ್ಕದ ಮನೆಯಾತ ‘ನಮ್ಮ ಮನೆಯಲ್ಲಿಯೇ ದೊಡ್ಡ ಹಜಾರ ಇದೆ. ಇಲ್ಲಿಯೇ ಸಭೆ ಮಾಡೋಣ’ ಎಂದು ಹೇಳಿ ಅಲ್ಲಿಯೇ ಸಭೆ ನಡೆಸಿದೆವು. ಅದೊಂದು ಹಬ್ಬದ ವಾತಾವರಣ ಸೃಷ್ಟಿಸಿತು. ಇವೆಲ್ಲ ನಿಮಗೆ ಸುಧಾರಣೆಯ ಹಾದಿ ಅನ್ನಿಸುವುದಿಲ್ಲವೇ? 

ಪ್ರ: ಗ್ರಾಮೀಣ ಭಾರತದ ನಿಜವಾದ ಸಮಸ್ಯೆ ಏನು? ನಿಮಗೆ ಏನೇನು ಕಂಡಿತು?

ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಲ್ಲಿ ಮುಖ್ಯವಾದ ಸಮಸ್ಯೆ ಎಂದರೆ ಹಳ್ಳಿ ಜನರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿವೆ. ಆದರೆ ಅವು ಹಳ್ಳಿಗರಿಗೆ ಸಿಗದಂತೆ ಮಾಡಲು ಸಾಕಷ್ಟು ಶಕ್ತಿಗಳು ಕೆಲಸ ಮಾಡುತ್ತಿವೆ. ಈ ಶಕ್ತಿಗಳನ್ನು ಬಗ್ಗುಬಡಿಯಬೇಕು. ನಾನು ತಿರುಗಾಡಿದ ಕೆಲವು ಪ್ರದೇಶಗಳಲ್ಲಿ ನೀರು ಅಧಿಕವಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ನೀರೇ ಇಲ್ಲ. ಅಧಿಕವಾಗಿರುವ ಪ್ರದೇಶಗಳಿಂದ ನೀರನ್ನು ಇಲ್ಲದ ಪ್ರದೇಶಕ್ಕೆ ತಲುಪಿಸುವ ವ್ಯವಸ್ಥೆಯಾಗಬೇಕು. ಎಲ್ಲ ಕೈಗಾರಿಕೆಗಳೂ ಹಳ್ಳಿಗಳಿಂದ ದೂರದಲ್ಲಿವೆ. ಅದಕ್ಕೇ ಹಳ್ಳಿಗರು ಗ್ರಾಮ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಗಾಂಧಿ ಕನಸಿನ ಭಾರತ ಅಂದರೆ ಪ್ರಾಚೀನ ಭಾರತದ ಪದ್ಧತಿ ಜಾರಿಗೆ ಬರಬೇಕು.

ಪ್ರ: ಪ್ರಾಚೀನ ಭಾರತದ ಪದ್ಧತಿ ಎಂದರೆ ಏನು?

ಪ್ರಾಚೀನ ಭಾರತದಲ್ಲಿ ಎಲ್ಲವೂ ಹಳ್ಳಿ ಕೇಂದ್ರಿತವಾಗಿದ್ದವು. ಬಟ್ಟೆ, ಆಹಾರ ಧಾನ್ಯ ಎಲ್ಲವೂ ಹಳ್ಳಿಗಳಲ್ಲೇ ತಯಾರಾಗುತ್ತಿದ್ದವು. ಪಟ್ಟಣ ಮತ್ತು ನಗರಗಳು ಹಳ್ಳಿಗಳನ್ನು ಅವಲಂಬಿಸಿದ್ದವು. ಶಿಕ್ಷಣ ಕೂಡ ಹಳ್ಳಿ ಕೇಂದ್ರಿತವಾಗಿತ್ತು. ಮಹಾರಾಜನ ಮಗನಾದರೂ ವಿದ್ಯಾಭ್ಯಾಸಕ್ಕೆ ಹಳ್ಳಿಗೇ ಬರುತ್ತಿದ್ದ. ಈಗ ಎಲ್ಲವೂ ತಿರುವುಮುರುವಾಗಿದೆ. ಎಲ್ಲವೂ ನಗರ ಕೇಂದ್ರಿತವಾಗಿದೆ. ಈಗ ಎಲ್ಲರೂ ಹಳ್ಳಿಗಳತ್ತ ಮುಖಮಾಡಬೇಕಿದೆ.

ಪ್ರ: ಹಳ್ಳಿಗಳಲ್ಲಿ ಸಾಮಾಜಿಕ ಸಾಮರಸ್ಯ ಇದೆಯೇ?

ರಾಜಕೀಯ ಕಾರಣಕ್ಕಾಗಿ ಹಳ್ಳಿಗಳ ಸಾಮಾಜಿಕ ಸಾಮರಸ್ಯ ಕೆಡುತ್ತಿದೆ. ಇದಕ್ಕೆ ಮನೋಸ್ಥಿತಿ ಕಾರಣ. ಇದನ್ನು ಬದಲಾಯಿಸಲು ಸಾಧ್ಯ. ಹಳ್ಳಿಗಳು ಹಾಳಾಗಲು ಇನ್ನೊಂದು ಬಹುಮುಖ್ಯ ಕಾರಣ ದುರ್ವ್ಯಸನ. ಇದನ್ನು ತಪ್ಪಿಸಲು ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜನರ ದುರ್ವ್ಯಸನದಿಂದ ಬರುವ ಹಣ ನಮಗೆ ಬೇಡ ಎಂಬ ಗಟ್ಟಿ ನಿರ್ಧಾರ ಮಾಡಬೇಕು.

ಪ್ರ: ಗ್ರಾಮಗಳಲ್ಲಿ ಕುಟುಂಬ ವ್ಯವಸ್ಥೆ ಹೇಗಿದೆ?

ನಮ್ಮ ಎಲ್ಲ ಸಮಸ್ಯೆಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆ ಕಾರಣ. ಅದು ಹದಗೆಡಲು ಅವಿಭಕ್ತ ಕುಟುಂಬಗಳು ಇಲ್ಲದೇ ಇರುವುದೂ ಕಾರಣ. ಅವಿಭಕ್ತ ಕುಟುಂಬಗಳು ಶಿಕ್ಷಣ ವ್ಯವಸ್ಥೆಯೂ ಆಗಿದ್ದವು. ಕಲಿಯುವವನಿಗೆ ತಾನು ಕಲಿಯುತ್ತಿದ್ದೇನೆ ಎನ್ನುವುದು ಗೊತ್ತಿರಲಿಲ್ಲ. ಕಲಿಸುವವನಿಗೂ ತಾನು ಕಲಿಸುತ್ತಿದ್ದೇನೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಅವಿಭಕ್ತ ಕುಟುಂಬಗಳು ಜೀವನ ಶೈಲಿಯನ್ನು ಕಲಿಸುತ್ತಿದ್ದವು. ಈಗ ಮನೆ ಚಿಕ್ಕದಾಗಿದೆ. ಮನಸ್ಸೂ ಚಿಕ್ಕದಾಗಿದೆ. ನಾವು ಎಂಬ ಭಾವ ಹೋಗಿ ನಾನು ಎಂಬ ಭಾವ ಬಂದುಬಿಟ್ಟಿದೆ. ಚಿಕ್ಕ ಚಿಕ್ಕ ಮನಸ್ಸುಗಳು ಸೇರಿ ದೊಡ್ಡ ಕಾರ್ಯ ಮಾಡಲು ಆಗುವುದಿಲ್ಲ. ಎಷ್ಟೇ ನಾನು ನಾನು ಸೇರಿದರೂ ಅದು ನಾವು ಆಗುವುದಿಲ್ಲ. ಇಡೀ ಭಾರತವೇ ಒಂದು ಅವಿಭಕ್ತ ಕುಟುಂಬ ಆಗಬೇಕು ಎನ್ನುವುದು ನನ್ನ ಬಯಕೆ. ಎಲ್ಲ ಹಳ್ಳಿಗಳೂ ಕೂಡು ಕುಟುಂಬವಾಗಬೇಕು. ಆ ಮೂಲಕ ಇಡೀ ಭಾರತ ಒಂದಾಗಬೇಕು. ಅದರಿಂದ ವಸುಧೈವ ಕುಟುಂಬಕಂ ಎನ್ನುವುದು ಸಾಕಾರವಾಗಬೇಕು. ಭಾರತ ಯಾರ ಮೇಲೂ ಯುದ್ಧ ಮಾಡಿದ ಉದಾಹರಣೆ ಇಲ್ಲ. ಇದಕ್ಕೆ ಮುಖ್ಯ ಕಾರಣ ಎಲ್ಲರೂ ನಮ್ಮವರೆ ಎಂಬ ಭಾವ. ವಿಶ್ವ ಪರಿವಾರವನ್ನು ಮುನ್ನಡೆಸುವ ಸಾಮರ್ಥ್ಯ ಭಾರತಕ್ಕೆ ಇದೆ. ಭಾರತ ಯಾವಾಗಲೂ ಜೋಡಿಸುವ ಕೆಲಸ ಮಾಡುತ್ತದೆ.

ಪ್ರ: ಯಾತ್ರೆಯ ಸಂದರ್ಭದಲ್ಲಿ ನೀವು ಉಳಿದುಕೊಳ್ಳಲು ಮನೆಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಿರಿ?

ಯಾವ ಮನೆಯನ್ನೂ ನಾನು ಆಯ್ಕೆ ಮಾಡುತ್ತಿರಲಿಲ್ಲ. ಯಾತ್ರಾ ಸಮಿತಿಯವರು ಆಯ್ಕೆ ಮಾಡುತ್ತಿದ್ದರು. ಆದರೆ ಗ್ರಾಮದ ಯಾರಾದರೊಬ್ಬರ ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಅವರು ಕೊಟ್ಟಿದ್ದನ್ನು ತಿನ್ನಬೇಕು ಎಂದು ಇತ್ತು. ಭಾರತದ ಮನೆಗಳೇ ದೇವಸ್ಥಾನ, ಅವೇ ಆಶ್ರಮ. ಮನೆಯೇ ಮೊದಲ ಪಾಠಶಾಲೆ ಎನ್ನುವುದು ಮತ್ತೆ ಜ್ಞಾಪಕಕ್ಕೆ ಬರಬೇಕು. ನಾನು ಉಳಿದುಕೊಳ್ಳಲು ಜಾತಿ, ಮತ, ಪಂಥದ ಹಂಗಿರಲಿಲ್ಲ.

ಪ್ರ: ಇಷ್ಟೊಂದು ಸುದೀರ್ಘವಾದ ಪಾದಯಾತ್ರೆ ನಡೆಸಿ ಸಾಕಷ್ಟು ಅಧ್ಯಯನ ಮಾಡಿದ್ದೀರಿ. ಇದರ ವರದಿಯನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ನೀಡುತ್ತೀರಾ?

ಪ್ರತಿ ರಾಜ್ಯದ ತಿರುಗಾಟ ಮುಗಿದ ತಕ್ಷಣ ಆಯಾ ರಾಜ್ಯದ ಹಳ್ಳಿಗಳು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯದ ಬಗ್ಗೆ ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿಳಿಸಿದ್ದೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಒಬ್ಬರನ್ನು ಬಿಟ್ಟು ಉಳಿದ ಯಾರೂ ಉತ್ತರ ಬರೆದಿಲ್ಲ. ಈಗ ಕೇಂದ್ರ ಸರ್ಕಾರಕ್ಕೂ ಉತ್ತರ ಬರೆಯುವ ಉದ್ದೇಶ ಇದೆ.

ಪ್ರ: ಹಾಗಾದರೆ ಸೀತಾರಾಮ ಕೆದಿಲಾಯ ಅವರ ಯಾತ್ರೆಯಿಂದ ಏನು ಲಾಭ ಆದ ಹಾಗಾಯಿತು?

ಮೊದಲನೆಯದಾಗಿ ಇದು ಸೀತಾರಾಮ ಕೆದಿಲಾಯ ಅವರ ಯಾತ್ರೆ ಅಲ್ಲ. ನಾನು ಯಾತ್ರೆ ಮಾಡಿಲ್ಲ. ಭಾರತವೇ ಯಾತ್ರೆ ಮಾಡಿತು. ಇದರಿಂದ ನಾನು ಸ್ವಚ್ಛವಾದೆ. ನನ್ನಲ್ಲಿ ಇರುವ ಕೊಳೆಗಳೆಲ್ಲಾ ತೊಳೆದು ಹೋದವು. ಇದಕ್ಕಿಂತ ದೊಡ್ಡ ಉಪಯೋಗ ಇನ್ನೇನು ಬೇಕು?

ಮುಸ್ಲಿಮರೂ ಸ್ವಾಗತಿಸಿದರು!

ನಮ್ಮ ಯಾತ್ರೆಯನ್ನು ಮುಸ್ಲಿಂ ಜನಾಂಗದವರೂ ಸ್ವಾಗತಿಸಿದರು. ಕನ್ಯಾಕುಮಾರಿಯಿಂದ ಹೊರಟ ಯಾತ್ರೆ ಕೇರಳದ ಮಣಪ್ಪುರಂ ಜಿಲ್ಲೆಯ ಗ್ರಾಮವೊಂದಕ್ಕೆ ಬಂದಾಗ ಅಲ್ಲಿನ ಮಸೀದಿಯ ಮೌಲ್ವಿಗಳು ಬಂದು ಸ್ವಾಗತಿಸಿದರು. ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಅದೇ ರೀತಿ ಕೇರಳ ಮುಸ್ಲಿಂ ಲೀಗ್ ಕಾರ್ಯದರ್ಶಿಯೊಬ್ಬರು ತಮ್ಮ ಮನೆಗೇ ನಮ್ಮನ್ನು ಆಹ್ವಾನಿಸಿದರು. ಅಲ್ಲಿಯೇ ನಾವು ಸಭೆ ನಡೆಸಿದೆವು. ನಮ್ಮ ಯಾತ್ರೆ ಮುಂದೆ ಹೋದ ನಂತರ ಅಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ವಿವಾದವಾಯಿತು. ಜಿಲ್ಲಾಧಿಕಾರಿ ಮೆರವಣಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದರು. ನಮ್ಮ ಕಾರ್ಯಕರ್ತರು ಮುಸ್ಲಿಂ ಲೀಗ್ ಮುಖಂಡರೊಂದಿಗೆ ಮಾತನಾಡಿದಾಗ ತಕ್ಷಣವೇ ಅವರು ಜಿಲ್ಲಾಧಿಕಾರಿಗೆ ನಿಷೇಧ ಆದೇಶ ವಾಪಸು ಪಡೆಯುವಂತೆ ಹೇಳಿದರು. ಇದು ಯಾತ್ರೆಯ ಫಲ.

ದಕ್ಷಿಣ ಕನ್ನಡದ ಕೋಣಾಜೆಯಲ್ಲಿ ಮುಸ್ಲಿಮರು ನಮ್ಮ ಜೊತೆ ನಡಿಗೆಯಲ್ಲಿ ಭಾಗಿಯಾಗಿದ್ದರು. ಕುಂದಾಪುರದಲ್ಲಿ 150ಕ್ಕೂ ಹೆಚ್ಚು ಮುಸ್ಲಿಂ ಜನಾಂಗದವರು ನಮ್ಮ ಜೊತೆ ಬಂದರು. ಈಗ ನಾನು ಯಾತ್ರೆ ಮುಗಿಸಿ ಬಂದ ನಂತರ ಸಾಕಷ್ಟು ಮುಸ್ಲಿಂ ಮುಖಂಡರು ಮತ್ತೆ ನನ್ನನ್ನು ಕರೆಯುತ್ತಿದ್ದಾರೆ.

ಎಲ್ಲ ಮುಸ್ಲಿಮರೂ ದೇಶ ವಿರೋಧಿಗಳಲ್ಲ. ಶೇ 5ರಷ್ಟು ಮಂದಿ ಉಗ್ರಗಾಮಿಗಳು ಇರಬಹುದು. ಅವರ ಬೆದರಿಕೆಗೆ ಮಣಿದು ಉಳಿದವರು ತೆಪ್ಪಗಿದ್ದಾರೆ. ‘ನೀವು ಯಾಕೆ ಸುಮ್ಮನಿದ್ದೀರಿ’ ಎಂದು ಕೇಳಿದರೆ ‘ನಮಗೆ ಭಯ’ ಎಂದು ಅವರು ಹೇಳುತ್ತಾರೆ. ಅವರಿಗೆ ಬೆಂಬಲ ಕೊಡುವವರು ಬೇಕು. ಪಾಕಿಸ್ತಾನದಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿರುವವರು ಯಾರು? ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ನಡುವೆ ಮುಸ್ಲಿಮರು ಇರುವುದರಿಂದ ಅವರು ಸುಖವಾಗಿದ್ದಾರೆ. ಸುರಕ್ಷಿತವಾಗಿದ್ದಾರೆ. ಭಾರತವೂ ಮುಸ್ಲಿಂ ರಾಷ್ಟ್ರವಾದರೆ ಮುಸ್ಲಿಮರನ್ನು ಅವರ ಜನರೇ ಹೊಡೆದು ಕೊಲ್ಲುತ್ತಾರೆ. ಅದಕ್ಕಾಗಿ ಒಳ್ಳೆಯ ಮುಸ್ಲಿಮರೆಲ್ಲಾ ಒಂದಾಗಬೇಕು. ಕೆಟ್ಟವರ ಕಪಿಮುಷ್ಟಿಯಲ್ಲಿರುವ ಮುಸ್ಲಿಂ ಧರ್ಮವನ್ನು ಆಚೆಗೆ ತರಬೇಕು.

=======

‘ಆಹ್‌ ಸ್ವಾದ’

ಸಂಬಂಧಿಕರ ಮದುವೆಗೊ ಯಾವುದೇ ಊರಿಗೆ ಹೋಗಿರುತ್ತೀರಿ. ಹೋದರೆ ಅಲ್ಲಿ ಯಾವುದನ್ನು ಮಿಸ್‌ ಮಾಡಿಕೊಳ್ಳದೆ ಬರಬಹುದು? ಸ್ಥಳವನ್ನು ಆಸ್ವಾದಿಸುವುದೆಂದರೆ ಅಲ್ಲಿನ ವಿಶಿಷ್ಟ ಸ್ವಾದವನ್ನು ಸವಿಯುವುದು ಸಹ. ಇನ್ನೆಲ್ಲೂ ಸಿಗದ ಅಲ್ಲಿನ ಅಪರೂಪದ ತಿನಿಸನ್ನು ತಿಂದು, ಕೆಲವೊಮ್ಮೆ ನಮ್ಮವರಿಗಾಗಿ ಕೊಂಡು ತರಬಹುದು. ಇಂತಹ ತಿನಿದಾಣಗಳ ಕುರಿತು ಚಿಕ್ಕ ಬರಹ ಅಲ್ಲಿನ ವಾತಾವರಣದ ಅನೂಹ್ಯ ಗ್ರಹಿಕೆ ಬರೆದು ’ಆಹ್‌ ಸ್ವಾದ’ ಅಂಕಣಕ್ಕೆ ಕಳಿಸಿ.

Post Comments (+)