7

ನಾಲಿಗೆಗೆ ಖುಷಿ ಕೊಟ್ಟ ಮ್ಯಾಂಚೊ ಸೂಪ್‌

Published:
Updated:
ನಾಲಿಗೆಗೆ ಖುಷಿ ಕೊಟ್ಟ ಮ್ಯಾಂಚೊ ಸೂಪ್‌

ಹುಳಿ, ಖಾರ ಹದವಾಗಿ ಬೆರೆತ ಮ್ಯಾಂಚೊ ಸೂಪ್‌ ನಾಲಿಗೆಗೆ ತಾಗುತ್ತಿದ್ದಂತೆ ಹಸಿದ ಹೊಟ್ಟೆ ಮತ್ತಷ್ಟು ಚುರುಗುಟ್ಟಲು ಶುರುವಾಯಿತು. ಅದ್ಭುತ ರುಚಿಯ ಸೂಪ್‌ ಈ ಹೋಟೆಲ್‌ನ ಮತ್ತಷ್ಟು ಖಾದ್ಯಗಳನ್ನು ಸವಿಯಲು ಪ್ರೇರಣೆ ನೀಡಿತು.

ಬಾಣಸವಾಡಿಯ ಇಂಚರ ಹೋಟೆಲ್‌ಗೆ ಹೋದವರಿಗೆ ಈ ಅನುಭವ ಆಗುವುದು ಸಹಜ. ಕುರಿ, ಮೀನು, ಕೋಳಿ ಖಾದ್ಯಗಳಲ್ಲಿ ಇಲ್ಲಿ ಹಲವು ಆಯ್ಕೆಗಳಿವೆ. ಕಬಾಬ್‌, ಸೀಗಡಿ, ನಾಟಿ ಕೋಳಿ, ಮೀನು, ಹೈದರಾಬಾದ್‌ ದಮ್‌ ಬಿರಿಯಾನಿ... ಹೀಗೆ ಬಗೆಬಗೆ ಬಿರಿಯಾನಿಗಳ ಸ್ವಾದವನ್ನು ಇಲ್ಲಿ ಸವಿಯಬಹುದು.

ಆರ್ಡರ್‌ ಮಾಡಿದ 20 ನಿಮಿಷದಲ್ಲಿ ಘಮ ಘಮಿಸುವ ದಮ್ ಬಿರಿಯಾನಿಯನ್ನು ಮುಂದೆ ತಂದಿಟ್ಟರು ವೇಟರ್‌. ಯಾಕೆ ಇಷ್ಟು ಹೊತ್ತು ಎಂದರೆ, ‘ನಾವು ಫ್ರೆಶ್‌ ಆಗಿ ತಯಾರಿಸುತ್ತೇವೆ’ ಎಂಬುದು ಅವರ ಉತ್ತರವಾಗಿತ್ತು. ಬಿರಿಯಾನಿ ಮೇಲೊಂದಿಷ್ಟು ನಿಂಬೆ ರಸ ಹಿಂಡಿ ಜೊತೆಗೊಂದಿಷ್ಟು ಈರುಳ್ಳಿ ಸಲಾಡ್‌ ಸೇರಿಸಿ ಬಿರಿಯಾನಿ ಸವಿದಾಗ ‘ಆಹಾ’ ಅನಿಸಿತು.

ಇನ್ನೇನು ಆರ್ಡರ್‌ ಮಾಡುವುದು ಎಂದುಕೊಳ್ಳುವಾಗಲೇ ವೇಟರ್‌, ‘ಚಿಕನ್‌ ಲೆಮನ್‌ ತೆಗೆದುಕೊಳ್ಳಿ’ ಎಂದು ಮನಸ್ಸೋದಿದಂತೆ ಹೇಳಿದರು. ಸರಿ ರುಚಿ ನೋಡುವಾ ಎಂದು ತರುವಂತೆ ತಿಳಿಸಿದೆ. ಸ್ವಲ್ವ ಹುಳಿ ಎನಿಸಿದರೂ, ಚಿಕನ್‌ ಜೊತೆಗೆ ಹಾಕಿದ್ದ ಕ್ಯಾಪ್ಸಿಕಮ್‌ ರುಚಿ ನಾಲಿಗೆಗೆ ಹಿಡಿಸಿತು.

ಮುಂದೆ ಚಿಕನ್‌ ಟಿಕ್ಕಾ ಆರ್ಡರ್‌ ಮಾಡಿದೆ. ಮಸಾಲೆ ಭರಿತ ಚಿಕನ್‌ ಅನ್ನು ಬಾಣಲೆಯಲ್ಲಿ ಹುರಿದ ಘಮ ಮೂಗಿಗೆ ಬಡಿಯುತ್ತಿದ್ದಂತೆ ಅದರ ಸ್ವಾದವೂ ಅದ್ಭುತವಾಗಿರಬಹುದು ಎಂದು ಊಹಿಸಿದೆ. ನಿಜಕ್ಕೂ ವಾವ್‌ ಎನ್ನುವಂತಹ ರುಚಿ. ಇಷ್ಟು ತಿನ್ನುತ್ತಲೇ ಹೊಟ್ಟೆ ತುಂಬಿತು. ’ಚಿಕನ್‌ ಲ್ಯಾಂಬ್ ಕೂಡ ತುಂಬಾ ಚೆನ್ನಾಗಿರುತ್ತದೆ. ನಮ್ಮ ಸಿಗ್ನೇಚರ್‌ ತಿನಿಸದು. ಮಟನ್‌, ಪನ್ನೀರ್‌ ಕೂಡ ಇದೆ ರುಚಿ ನೋಡಿ’ ಎಂದು ವೇಟರ್ ಹೇಳಿದರು. ಹೊಟ್ಟೆಯಲ್ಲಿ ಜಾಗವಿರದ ಕಾರಣ, ’ಇನ್ನೊಮ್ಮೆ ಖಂಡಿತ ಅದರ ರುಚಿ ನೋಡುತ್ತೇನೆ’ ಎಂದೆ.

ಇಲ್ಲಿ ಕರಾವಳಿ ಸೊಗಡಿನ ಖಾದ್ಯದ ಸೊಗಡನ್ನು ಸವಿಯಬಹುದು. ‘ಪ್ರಾನ್ಸ್‌ ಸೂಪ್‌ ಮತ್ತು ಸೀಸನಲ್‌ ಮೀನಿನ ಖಾದ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕ ವೆಂಕಟೇಶ್‌ ಗೌಡ.

‘ಇಪ್ಪತ್ತೈದು ವರ್ಷಗಳಿಂದ ಹೋಟೆಲ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಐದು ವರ್ಷದ ಹಿಂದೆ  ಇಲ್ಲಿ ಹೋಟೆಲ್‌ ಆರಂಭಿಸಿದೆ. ಇದಕ್ಕೂ ಮೊದಲು ಮುಂಬಯಿಯಲ್ಲಿ ಬೇರೆಯವರ ಹೋಟೆಲ್‌ನಲ್ಲಿ ಕೆಲಸಕ್ಕೆ ಇದ್ದೆ’ ಎಂದು ಹೋಟೆಲ್‌ ಪ್ರಾರಂಭದ ಕಥೆ ಹೇಳುತ್ತಲೇ, ‘ನಾವು ಶುಚಿಯ ಜೊತೆಗೆ ರುಚಿಗೂ ಪ್ರಾಮುಖ್ಯ ನೀಡುತ್ತೇವೆ’ ಎನ್ನುವುದನ್ನು ಹೇಳಲು ಅವರು ಮರೆಯಲಿಲ್ಲ.

ವೆಂಕಟೇಶ್‌ ಗೌಡ ಮನೆಯಲ್ಲಿ ಅಡುಗೆ ಮಾಡುವುದನ್ನೇ ನೋಡಿ ಪಾಕಶಾಸ್ತ್ರದಲ್ಲಿ ಪರಿಣತಿ ಪಡೆದವರು. ಪ್ರಯೋಗಕ್ಕೆಂದು ಮಾಡಿದ ತಿನಿಸಿಗೆ ಮನೆಯವರಿಂದ ಮೆಚ್ಚುಗೆ ವ್ಯಕ್ತವಾಗಿದ್ದೇ ಇವರು ಈ ಉದ್ಯಮಕ್ಕೆ ಬರಲು ಕಾರಣವಾಯಿತು.

ಇಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ಖಾದ್ಯಗಳು ದೊರಕುತ್ತವೆ. ಆಯಾ ಪ್ರದೇಶದ ತಿನಿಸುಗಳನ್ನು ಅಲ್ಲಿಯ ಬಾಣಸಿಗರೇ ಮಾಡುವುದರಿಂದ ರುಚಿಯಲ್ಲಿ ವ್ಯತ್ಯಾಸವಾಗುವುದಿಲ್ಲ ಎನ್ನುವುದು ಇವರ ಅಭಿಪ್ರಾಯ. ಇಲ್ಲಿ ಒಟ್ಟು ಐದು ಮಂದಿ ಬಾಣಸಿಗರಿದ್ದಾರೆ. ಮೀರ್‌, ಆಶೀಶ್‌, ಮಕ್ಬುಲ್‌,  ಮಿಥು ಉತ್ತರ ಭಾರತದ ಖಾದ್ಯಗಳ ಉಸ್ತುವಾರಿ ನೋಡಿಕೊಂಡರೆ, ರಘು ದಕ್ಷಿಣ ಭಾರತದ ಖಾದ್ಯಗಳನ್ನು ತಯಾರಿಸುತ್ತಾರೆ.

ಫುಡ್‌ ಆ್ಯಪ್‌ ಜೊಮೊಟೊದಲ್ಲಿಯೂ ಆರ್ಡರ್‌ ಮಾಡಬಹುದು. 3 ಕಿ.ಮೀ ಒಳಗೆ 200 ರೂಪಾಯಿಗೂ ಹೆಚ್ಚು ಆರ್ಡರ್‌ ಮಾಡಿದರೆ ಹೋಟೆಲ್‌ನವರೇ ಮನೆಗೆ ತಂದು ಕೊಡುತ್ತಾರೆ.

ರೆಸ್ಟೊರೆಂಟ್‌: ಇಂಚರ

ವಿಶೇಷ: ಮೀನು, ಚಿಕನ್ ಲಾಂಬ

ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 11.30

ಸ್ಥಳ: ವಿಜಯಬ್ಯಾಂಕ್‌ ಕಾಲೊನಿ, ನಂದಿ ಟೊಯೊಟಾ ಎದುರು, ‌‌ಬಾಣಸವಾಡಿ

ಮಾಹಿತಿಗೆ:  080 40937198, 41179777

ಇಬ್ಬರಿಗೆ:₹ 500

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry