7

ಬಿಜೆಪಿಗೆ ರಾಜಕೀಯ ಪ್ರತಿರೋಧ ಒಡ್ಡಿದ ಕರ್ನಾಟಕ

Published:
Updated:
ಬಿಜೆಪಿಗೆ ರಾಜಕೀಯ ಪ್ರತಿರೋಧ ಒಡ್ಡಿದ ಕರ್ನಾಟಕ

ಒಂದಾದ ನಂತರ ಒಂದು ರಾಜ್ಯವನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲಿ, ಕಾಂಗ್ರೆಸ್ ಪಕ್ಷದಿಂದ ಪ್ರತಿಕ್ರಿಯೆಯ ರೂಪದಲ್ಲಿ ಭೀತಿಯೇ ವ್ಯಕ್ತವಾಗುತ್ತಿದೆ. ನಿತೀಶ್ ಕುಮಾರ್ ಅವರು ಒಲವು ಬದಲಿಸುತ್ತಾರೆ ಎಂಬುದು ಮೊದಲೇ ಗೊತ್ತಿತ್ತು ಎಂದು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಹೀಗಿದ್ದರೂ ಬಿಹಾರ ರಾಜ್ಯ ಕೈಜಾರಿತು. ಮೊದಲೇ ಗೊತ್ತಿದ್ದಿದ್ದರೆ, ಅವರು ಅಸಹಾಯಕರಾಗಿದ್ದು ಏಕೆ? ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಕಾಂಗ್ರೆಸ್ ಪಕ್ಷ ಗೋವಾ ರಾಜ್ಯವನ್ನೂ ಇದೇ ರೀತಿಯಲ್ಲಿ ಕಳೆದುಕೊಂಡಿತು. ಹೆಚ್ಚಿನ ಸ್ಥಾನಗಳನ್ನು ಗೆದ್ದು ಉತ್ತಮ ಸ್ಥಿತಿಯಲ್ಲಿ ಇದ್ದರೂ, ಕಾಂಗ್ರೆಸ್ ಪಕ್ಷ ಕಾಯುತ್ತ ಕುಳಿತಿತ್ತು. ಕಾಯುತ್ತಿದ್ದುದಾದರೂ ಹೇಗೆ? ಬಿಜೆಪಿಯಂತಹ ಬುದ್ಧಿವಂತ, ಚೈತನ್ಯವಂತ ಹಾಗೂ ಹಸಿದ ಪಕ್ಷದ ಎದುರು ಕಾಂಗ್ರೆಸ್ ಕಾಯುತ್ತ ಕುಳಿತಿತ್ತು. ಇದು ತೀರಾ ಕೆಟ್ಟ ನಿರ್ಧಾರವಾಗಿತ್ತು.

ಗುಜರಾತಿನಲ್ಲಿ ಶಂಕರ ಸಿಂಹ ವಾಘೆಲಾ ಅವರು ಪಕ್ಷ ತೊರೆದ ನಂತರ, ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಗೊಂದಲಗಳು ಸೃಷ್ಟಿಯಾಗಿವೆ. ಆರು  ಶಾಸಕರು ಕಾಂಗ್ರೆಸ್ ತೊರೆದಿದ್ದಾರೆ. ಇದು ಅಹ್ಮದ್ ಪಟೇಲ್  ರಾಜ್ಯಸಭೆಗೆ ಆಯ್ಕೆಯಾಗುವುದರ ಮೇಲೆ ಪರಿಣಾಮ ಉಂಟುಮಾಡಲಿದೆ. ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಪಕ್ಷವು ತನ್ನ ಇತರ ಎಲ್ಲ ಶಾಸಕರನ್ನೂ ಅನುಮಾನದಿಂದ ಕಾಣುತ್ತಿದೆ. ಅವರನ್ನು ತನ್ನ ಕೈಯಲ್ಲಿರುವ ಕೆಲವೇ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ. ಒಂದು ವಿಶೇಷವೆಂದರೆ, ಬಿಜೆಪಿಯು ನಿಜಕ್ಕೂ ಕಳಪೆ ಸಾಧನೆ ತೋರುತ್ತಿರುವ ರಾಜ್ಯಗಳಲ್ಲಿ ಈಗ ಗುಜರಾತ್ ಕೂಡ ಸೇರಿದೆ. ಈ ಮಾತನ್ನು ಗುಜರಾತಿಗಳೇ ಹೇಳುತ್ತಿದ್ದಾರೆ. ಹಾಗೆ ನೋಡಿದರೆ, ತನ್ನ ಜನಪ್ರಿಯತೆ ಕಳೆದುಹೋಗುತ್ತಿದೆ ಎಂಬ ಆತಂಕ ಬಿಜೆಪಿಗೆ ಬರಬೇಕಿತ್ತು.ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗುಜರಾತಿನಲ್ಲಿ ಈ ಕೆಳಗೆ ಉಲ್ಲೇಖಿಸಿದ ಪ್ರತಿಭಟನೆಗಳು ನಡೆದಿವೆ. ಇವುಗಳಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದಾರೆ: ಮೀಸಲಾತಿಗೆ ಒತ್ತಾಯಿಸಿ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದ ಚಳವಳಿ, ಅಲ್ಪೇಶ್ ಠಾಕೂರ್ ನೇತೃತ್ವದಲ್ಲಿ ಒಬಿಸಿ ಕ್ಷತ್ರಿಯರು  ನಡೆಸಿದ ಚಳವಳಿ, ಊನಾ ಘಟನೆಯ ನಂತರ ದಲಿತರು ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ, ನೋಟು ರದ್ದತಿಯ ನಂತರ ವಜ್ರದ ವ್ಯಾಪಾರಿಗಳು ಹಾಗೂ ಜವಳಿ ಕೆಲಸಗಾರರಲ್ಲಿ ವ್ಯಕ್ತವಾದ ಆಕ್ರೋಶ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ನಂತರ ಲಕ್ಷಾಂತರ ವ್ಯಾಪಾರಿಗಳು ಸೂರತ್‌ನಲ್ಲಿ ನಡೆಸಿದ ಪ್ರತಿಭಟನೆ.

ಈ ಎಲ್ಲ ಪ್ರತಿಭಟನೆಗಳಿಗೆ ನೇರ ಕಾರಣ ಆಗಿದ್ದು ಬಿಜೆಪಿಯ ನೀತಿಗಳೇ ಆದರೂ, ಇವು ಕಾಂಗ್ರೆಸ್ಸಿನ ನಾಯಕತ್ವ ಇಲ್ಲದೆಯೇ ನಡೆದಿವೆ. ಈ ಪ್ರತಿಭಟನೆಗಳು ಮೇಲೆ ಹೆಸರಿಸಿದ ಮೂವರು ಯುವನಾಯಕರನ್ನು ಸೃಷ್ಟಿಸಿವೆ. ರಾಜಕೀಯ ವಿಚಾರಗಳನ್ನು ಇಟ್ಟುಕೊಂಡು ಜನರನ್ನು ಸಂಘಟಿಸುವುದು ಹೇಗೆ ಎಂಬುದನ್ನು ಕಾಂಗ್ರೆಸ್ ಮರೆತುಬಿಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ಇದು ತೀರಾ ವಿಚಿತ್ರ ಎಂದು ಅನಿಸುತ್ತಿದೆ. ಏಕೆಂದರೆ ಮಹಾತ್ಮ ಗಾಂಧಿ ಆಯೋಜಿಸಿದ್ದ ಅತ್ಯಂತ ಯಶಸ್ವಿ ಸತ್ಯಾಗ್ರಹಗಳಲ್ಲಿ ಒಂದಾದ ಬರ್ದೋಲಿ ಸತ್ಯಾಗ್ರಹ ನಡೆದಿದ್ದು ಗುಜರಾತಿನಲ್ಲಿ.

ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಶೇಕಡ 30ರಷ್ಟಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯುತ್ತ ಬಂದಿದೆ. ಆದರೆ ಜಯ ಹಾಗೂ ಅಪಜಯದ ನಡುವಿನ ವ್ಯತ್ಯಾಸವಾದ ಶೇಕಡ 3 ಅಥವಾ 4ರಷ್ಟು ಹೆಚ್ಚುವರಿ ಮತಗಳನ್ನು ಪಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಯಾವುದಾದರೂ ವಿಚಾರದ ಆಧಾರದಲ್ಲಿ ಜನರನ್ನು ಸಂಘಟಿಸಿ, ಅದನ್ನು ರಾಜಕೀಯವಾಗಿ ಲಾಭವಾಗಿ ಪರಿವರ್ತಿಸಿಕೊಂಡರೆ ಕಾಂಗ್ರೆಸ್ಸಿಗೆ ಹೆಚ್ಚುವರಿಯಾಗಿ ಶೇಕಡ 3 ಅಥವಾ 4ರಷ್ಟು ಮತಗಳನ್ನು ಪಡೆಯಲು ಸಾಧ್ಯ. ಇಷ್ಟೆಲ್ಲ ಪ್ರತಿಭಟನೆಗಳು ನಡೆಯುತ್ತಿದ್ದರೂ ಜನರನ್ನು ಸಂಘಟಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗದ ಕಾರಣದಿಂದಾಗಿ ಗುಜರಾತಿನಲ್ಲಿ ಬಿಜೆಪಿ ಆರಾಮವಾಗಿದೆ.

ಬಿಜೆಪಿಯನ್ನು ಅದಮ್ಯ ಪಕ್ಷವೆಂಬಂತೆ ಕಾಣಲಾಗುತ್ತಿದೆ. ಆದರೆ ಪ್ರಜಾತಂತ್ರ ರಾಜಕಾರಣದಲ್ಲಿ ಯಾವ ಪಕ್ಷವೂ ಹಾಗಿರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ರಕ್ಷಣಾತ್ಮಕವಾಗಿ ಇರಬೇಕಾದ ಸ್ಥಿತಿಯಲ್ಲಿದೆ. ಹಿಂದುತ್ವವಾದಿ ಪಕ್ಷವನ್ನು ತುದಿಗಾಲಿನಲ್ಲಿ ನಿಲ್ಲಿಸಲು, ಪರಿಸ್ಥಿತಿಯ ಲಾಭ ಪಡೆದುಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ರಾಜಕಾರಣ ಅನುಸರಿಸುವ ತಂತ್ರವನ್ನು ತಾವೂ ಅನುಸರಿಸಿದ್ದಾರೆ. ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಹಿಂದಿ ವಿರೋಧಿ ಅಭಿಯಾನವೊಂದನ್ನು ಬಳಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ ಸಂಘಟನೆಯು ಹಿಂದಿಗೆ ಪ್ರಾಶಸ್ತ್ಯ ನೀಡುವ ಕಾರಣ, ಈ ವಿಚಾರದಲ್ಲಿ ಬಿಜೆಪಿ ಪ್ರಬಲ ಪ್ರತಿರೋಧ ನೀಡಲು ಆಗುತ್ತಿಲ್ಲ. ಬಿಜೆಪಿಯ ರಾಜ್ಯ ಘಟಕವು ಮೌನವಾಗಿ ಇರಬೇಕು ಅಥವಾ ರಾಜಕೀಯ ನಷ್ಟ ಅನುಭವಿಸಬೇಕು.

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎನ್ನುವ ಆ ಸಮುದಾಯದ ಆಂತರಿಕ ಬೇಡಿಕೆ ಇನ್ನೊಂದು ವಿಚಾರ. ಲಿಂಗಾಯತರು ಬಯಸಿದರೆ, ಪ್ರತ್ಯೇಕ ಧರ್ಮದ ಸ್ಥಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಹಜವಾದ ಹೇಳಿಕೆಯಂತೆ ಕಾಣುವ ಇದು ವಿವಾದ ಸೃಷ್ಟಿಸಿದೆ. ಲಿಂಗಾಯತ ಸಮುದಾಯವು ಬಿಜೆಪಿಯನ್ನು ಬೆಂಬಲಿಸುತ್ತಿರುವುದೇ (ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು) ಈಗ ಬಿಜೆಪಿಯ ಸಮಸ್ಯೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲಾರವು. ಈ ವಿಚಾರದಲ್ಲಿ ಕೂಡ ಪಕ್ಷ ಮೌನವಾಗಿ ಕುಳಿತುಕೊಳ್ಳಬೇಕು ಅಥವಾ ನಷ್ಟ ಅನುಭವಿಸಬೇಕು.ಸಿದ್ದರಾಮಯ್ಯ ಅವರು ‘ಕರ್ನಾಟಕಕ್ಕೆ ಪ್ರತ್ಯೇಕವಾದ ಧ್ವಜ’ ಎಂಬ ಉಪ-ರಾಷ್ಟ್ರೀಯವಾದಿ ವಿಚಾರ ಬಳಸಿಕೊಂಡು ಬಿಜೆಪಿಯ ರಾಷ್ಟ್ರೀಯತೆ ಅಸ್ತ್ರವನ್ನು ಕಿತ್ತುಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ರಾಜಕೀಯ ಸವಾಲು ಒಡ್ಡಲು ಸಾಧ್ಯವಿದೆ ಎಂಬುದನ್ನು ಇವೆಲ್ಲವೂ ಹೇಳುತ್ತಿವೆ. ಸಂಕಷ್ಟದ ಸಮಯದಲ್ಲಿ ಭಾರತದ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನು ಹೇಗೆ ಒಗ್ಗೂಡಿಸಬಹುದು? ಭಾರತದ ಅತ್ಯಂತ ಚುರುಕಿನ ರಾಜಕಾರಣಿಗಳಲ್ಲಿ ಒಬ್ಬರಿಂದ ಕಾಂಗ್ರೆಸ್ ಪಕ್ಷವು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.ತಮಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ವ್ಯಕ್ತಪಡಿಸಿದ ಕೋಪವು ನಿಜವಾದದ್ದೋ ಅಲ್ಲವೋ ಎಂಬುದಕ್ಕಿಂತಲೂ ಅವರು ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದಾರೆ ಎಂಬುದನ್ನು ಗಮನಿಸಬೇಕು. ಮಾಯಾವತಿ ಅವರು ಮತ್ತೆ ತಳಮಟ್ಟಕ್ಕೆ ಹೋಗಿ, ತಾವು ಕಳೆದುಕೊಂಡಿರುವ ಬೆಂಬಲವನ್ನು ಗಳಿಸಲು ಯತ್ನಿಸುತ್ತಾರೆ ಎಂಬುದು ಇದರ ಅರ್ಥ. ಏಕೀಕೃತ ದಲಿತ ಅಸ್ಮಿತೆಯನ್ನು ಜಾತಿ ಹಾಗೂ ಉಪಜಾತಿಗಳಾಗಿ ಒಡೆದು, ಮಾಯಾವತಿ ಅವರು ನಿರ್ಲಕ್ಷಿಸಿದ್ದ ದಲಿತ ಸಮೂಹಗಳ ಬೆಂಬಲದ ಮೂಲಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಯಶಸ್ಸು ಸಾಧಿಸಿತು ಎಂಬುದನ್ನು ಅಲ್ಲಿನ ರಾಜಕೀಯ ಬಲ್ಲವರು ಹೇಳುತ್ತಾರೆ. ಬಹುಕೋನಗಳ ರಾಜಕೀಯ ಹೋರಾಟದಲ್ಲಿ ಮಾಯಾವತಿ ಅವರ ಪಕ್ಷವು ಅಂದಾಜು ಶೇಕಡ 20ರಿಂದ 25ರಷ್ಟು ಮತಗಳನ್ನು ಪಡೆಯುತ್ತಿದೆ. ಬಹುಕೋನಗಳ ಹೋರಾಟದಲ್ಲಿ, ಈ ಪ್ರಮಾಣದ ಮತಗಳನ್ನು ಪಡೆಯುವ ರಾಜಕೀಯ ಪಕ್ಷಗಳು ಗೆಲುವು ಸಾಧಿಸುವ ಅವಕಾಶ ಹೊಂದಿರುತ್ತವೆ.

ಆದರೆ ಜಾತಿ ಮೈತ್ರಿಕೂಟ ಕಟ್ಟುವಅಮಿತ್ ಷಾ ಅವರ ತಾಕತ್ತಿನ ಕಾರಣದಿಂದಾಗಿ ಬಿಜೆಪಿಗೆ ಸಮಾಜವಾದಿ ಪಕ್ಷ (ಈ ಪಕ್ಷ ಶೇಕಡ 29ರಷ್ಟು ಮತಗಳಿಗೆ ತೃಪ್ತಿಪಟ್ಟಿದೆ) ಹಾಗೂ ಬಿಎಸ್‌ಪಿಗಿಂತ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯವಾಗಿದೆ. ಜನರನ್ನು ಸಂಘಟಿಸುವುದು ಮಾತ್ರವೇ ಈ ಚಿತ್ರಣ ಬದಲು ಮಾಡಲು ಇರುವ ಮಾರ್ಗ. ಇದು ಮಾಯಾವತಿ ಅವರಿಗೆ ತಿಳಿದಿದೆ. ಈ ದಿಕ್ಕೆಟ್ಟ ಸಂದರ್ಭ ಮುಗಿದ ನಂತರ ಕಾಂಗ್ರೆಸ್ ಪಕ್ಷವು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು, ಜನರನ್ನು ಸಂಘಟಿಸುವುದು ಹೇಗೆ ಎಂಬುದನ್ನು ಆಲೋಚಿಸಬೇಕು.(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry