ಗುರುವಾರ , ಮೇ 26, 2022
23 °C

ಸೊಳ್ಳೆಗಳೇಕೆ ಕೆಲವರನ್ನೇ ಹೆಚ್ಚು ಕಚ್ಚುತ್ತವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊಳ್ಳೆಗಳೇಕೆ ಕೆಲವರನ್ನೇ ಹೆಚ್ಚು ಕಚ್ಚುತ್ತವೆ?

ಸೊಳ್ಳೆಗಳು ಕೆಲವರನ್ನು ಮಾತ್ರ ಹೆಚ್ಚಾಗಿ ಕಚ್ಚುವುದಲ್ಲದೆ, ಇನ್ನು ಕೆಲವರತ್ತ ಅಷ್ಟೊಂದು ಆಕರ್ಷಣೆಗೆ ಒಳಗಾಗುವುದಿಲ್ಲ. ಇದಕ್ಕೆ ಅಚ್ಚರಿಯ ಕಾರಣವನ್ನು ಅಮೆರಿಕದ ಸಂಶೋಧಕರು ಪತ್ತೆ ಮಾಡಿದ್ದಾರೆ. 10 ಜನರಲ್ಲಿ ಒಬ್ಬರು ಮಾತ್ರ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತಾರೆ ಎಂದು ಫ್ಲೊರಿಡಾದ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರಾಧ್ಯಾಪಕ ಜೆರ್ರಿ ಬಟ್ಲರ್ ತಿಳಿಸಿದ್ದಾರೆ. ಸೊಳ್ಳೆಗಳು ಆಹಾರದ ಉದ್ದೇಶಕ್ಕಾಗಿ ರಕ್ತ ಹೀರುವುದಿಲ್ಲ.

ಬದಲಾಗಿ ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೋಟೀನ್‌ಗಳನ್ನು ಪಡೆಯುವುದಕ್ಕಾಗಿ ರಕ್ತ ಹೀರುತ್ತವೆ ಎಂದು ಅವರು ತಮ್ಮ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಶೇಕಡ 85ರಷ್ಟು ಜನರ ಬಗ್ಗೆ ಅವರ ವಂಶವಾಹಿಗಳಿಂದಾಗಿ ಸೊಳ್ಳೆಗಳು ಆಕರ್ಷಿತಗೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಸಂಶೋಧನೆ ಪ್ರಕಾರ, ಸೊಳ್ಳೆಗಳಿಂದ ಹೆಚ್ಚು ಕಡಿತಕ್ಕೊಳಗಾಗುವವರು:

ಒ’ ಗುಂಪಿನ ರಕ್ತ:
ಕೆಲವು ರಕ್ತದ ಮಾದರಿಗಳು ಹೆಚ್ಚು ಸಿಹಿ ಅಂಶವನ್ನು ಹೊಂದಿರುತ್ತವೆ. ಒ ಗುಂಪಿನ ರಕ್ತವುಳ್ಳವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಶೇಕಡ 83ರಷ್ಟು ಹೆಚ್ಚು. ಬಿ ಗುಂಪಿನ ರಕ್ತದವರತ್ತ ಆಕರ್ಷಿತವಾಗುವ ಸಾಧ್ಯತೆ ಸಾಮಾನ್ಯವಾಗಿದ್ದರೆ ಎ ಗುಂಪಿನ ರಕ್ತ ಇರುವವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ಸಂಶೋಧನೆಯಿಂದ ತಿಳಿದುಕೊಳ್ಳಲಾಗಿದೆ.

ಸ್ಥೂಲಕಾಯ: ಸ್ಥೂಲಕಾಯದವರಾದರೆ ಸೊಳ್ಳೆ ಕಚ್ಚುವ ಸಾಧ್ಯತೆ ಹೆಚ್ಚು! ವ್ಯಕ್ತಿ ಹೊರಸೂಸುವ ಇಂಗಾಲದ ಡೈಆಕ್ಸೈಡ್‌ನ ಪರಿಮಳದ ಸಹಾಯದಿಂದ 50 ಮೀಟರ್‌ ದೂರದಿಂದಲೇ ಸೊಳ್ಳೆಯು ಜನರನ್ನು ಪತ್ತೆಮಾಡುತ್ತದೆ. ಸ್ಥೂಲಕಾಯದವರು ಹೆಚ್ಚು ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಗರ್ಭಿಣಿಯರು: ಆಫ್ರಿಕಾದಲ್ಲಿ ನಡೆಸಲಾಗಿರುವ ಅಧ್ಯಯನದ ಪ್ರಕಾರ, ಗರ್ಭಿಣಿಯರು ಸೊಳ್ಳೆಗಳನ್ನು ಆಕರ್ಷಿಸುವ ಸಾಧ್ಯತೆ ಸಾಮಾನ್ಯರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಯಾಕೆಂದರೆ, ಗರ್ಭಿಣಿಯರೂ ಸಹ ಹೆಚ್ಚು ಇಂಗಾಲದ ಡೈಆಕ್ಸೈಡ್‌ ಹೊರಸೂಸುತ್ತಾರೆ ಎನ್ನಲಾಗಿದೆ.

ವ್ಯಾಯಾಮನಿರತರು: ವ್ಯಾಯಾಮನಿರತರನ್ನು ಸೊಳ್ಳೆಗಳು ಕಚ್ಚುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ. ಬೆವರಿದಾಗ ಶರೀರದಿಂದ ಹೊರಹೊಮ್ಮುವ ಲ್ಯಾಕ್ಟಿಕ್ ಆಮ್ಲ ಇದಕ್ಕೆ ಕಾರಣವಾಗಿದೆ.

ಮದ್ಯಪಾನ ಮಾಡಿದ್ದರೆ ಹೆಚ್ಚು!: ಮದ್ಯಪಾನ ಮಾಡಿದ ಸಂದರ್ಭದಲ್ಲಿ ಸೊಳ್ಳೆಗಳು ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ. ಶರೀರ ಬಿಸಿಯಾಗುವುದರಿಂದ ಸೊಳ್ಳೆಗಳಿಗೆ ನಮ್ಮನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ.

ಕೆಂಪು ಅಥವಾ ಕಡು ಬಣ್ಣದ ಬಟ್ಟೆ ಧರಿಸಿದ್ದರೂ ಸೊಳ್ಳೆಗಳು ಬೇಗನೆ ಆಕರ್ಷಿತವಾಗುತ್ತವೆ. ಅಲ್ಲದೆ, ಶರೀರದಲ್ಲಾಗುವ ರಾಸಾಯನಿಕ ಪ್ರಕ್ರಿಯೆಗಳೂ ಸೊಳ್ಳೆಗಳು ಜನರನ್ನು ಆಕರ್ಷಿಸಲು ಕಾರಣವಾಗುತ್ತವೆ ಎಂದು ಸಂಶೋಧನಾ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.