7

ಅತ್ಯುತ್ತಮವೀ ಫೋನ್

ಯು.ಬಿ. ಪವನಜ
Published:
Updated:
ಅತ್ಯುತ್ತಮವೀ ಫೋನ್

ಅಮೆರಿಕ ದೇಶದಲ್ಲಿ ಹೊಸ ಐಫೋನ್ ಬಿಡುಗಡೆಯಾಗುತ್ತಿದೆ ಎಂದಾಗ ಜನ ಅದನ್ನು ಕೊಳ್ಳಲು ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲುಗಳಲ್ಲಿ ಗಂಟೆಗಟ್ಟಲೆ ನಿಲ್ಲುತ್ತಾರೆ. ಭಾರತದಲ್ಲಿ ಒಂದು ಫೋನಿಗೋಸ್ಕರ ಜನ ಹೀಗೆ ಗಂಟೆಗಟ್ಟಲೆ ಸಾಲು ನಿಲ್ಲುವಂತೆ ಮಾಡಿದ್ದು ಒನ್‌ಪ್ಲಸ್5 ಫೋನ್.

ಇದು ತನಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಲ್ಲ ಫೋನ್‌ಗಳೂ ಉತ್ತಮ ಮತ್ತು ಅತ್ಯುತ್ತಮ ಅನ್ನಬಹುದಾದ ಫೋನ್‌ಗಳನ್ನು ತಯಾರಿಸಿದ ವಿಶಿಷ್ಟ ಕಂಪೆನಿ ಒನ್‌ಪ್ಲಸ್. ಈ ಕಂಪೆನಿ ಕೆಲವೇ ಫೋನ್‌ಗಳನ್ನು ತಯಾರಿಸಿದೆ. ಆದರೆ ತಯಾರಿಸಿದ ಎಲ್ಲ ಫೋನ್‌ಗಳೂ ಉತ್ತಮವಾಗಿವೆ ಹಾಗೂ ಈ ಮೂಲಕ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಈಗ ಹೊಸದಾಗಿ ಬಂದಿರುವ ಒನ್‌ಪ್ಲಸ್ 5 (Oneplus 5) ನಮ್ಮ ಈ ವಾರದ ಗ್ಯಾಜೆಟ್.

ಒನ್‌ಪ್ಲಸ್ 1, 2 ಮತ್ತು 3 ಫೋನ್‌ಗಳ ಬಗ್ಗೆ ಬರೆಯುವಾಗ ಘಟಾನುಘಟಿಗಳನ್ನು ಮಣ್ಣುಮುಕ್ಕಿಸಬಲ್ಲ (flagship killer) ಫೋನ್ ಎಂದು ಬರೆಯಲಾಗಿತ್ತು. ಒನ್‌ಪ್ಲಸ್ 5 ಬಗ್ಗೆ ಬರೆಯುವಾಗ ಇದುವೇ ಘಟಾನುಘಟಿ (flagship) ಎನ್ನಬಹುದು. ಯಾಕೆಂದರೆ ಒನ್‌ಪ್ಲಸ್ ಮಾರುಕಟ್ಟೆಯಲ್ಲಿ ತನ್ನದೇ ಪ್ರತ್ಯೇಕ ಸ್ಥಾನವನ್ನು ಪಡೆದಿದೆ. ಅತ್ಯುತ್ತಮವಾದ ಗುಣವೈಶಿಷ್ಟ್ಯಗಳನ್ನು ಒಳಗೊಂಡ ಆದರೆ ಅಧಿಕ ಹಣ ನೀಡಬೇಕಾದ ಅಗತ್ಯವಿಲ್ಲದ ಫೋನ್ ಎಂದು ಒನ್‌ಪ್ಲಸ್ 5 ರ ಬಗ್ಗೆ ಧಾರಾಳವಾಗಿ ಬರೆಯಬಹುದು. ಇದರ ಕಾರ್ಯಕ್ಷಮತೆಯನ್ನು ಮೇಲ್ದರ್ಜೆಯ ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8, ಐಫೋನ್ 7, ಗೂಗಲ್‌ ಪಿಕ್ಸೆಲ್ ಫೋನ್‌ಗಳ ಜೊತೆ ಹೋಲಿಸಬಹುದು. ಆದರೆ ಇದರ ಬೆಲೆ ಆ ಫೋನ್‌ಗಳ ಬೆಲೆಯ ಅರ್ಧದಷ್ಟು ಮಾತ್ರ.

ರಚನೆ ಮತ್ತು ವಿನ್ಯಾಸದಲ್ಲಿ ಇದು ಒನ್‌ಪ್ಲಸ್ 3 ಮತ್ತು 3ಟಿಗಿಂತ ಸ್ವಲ್ಪ ಭಿನ್ನ. ಪ್ರಾಥಮಿಕ ಕ್ಯಾಮೆರಾಗಳು ಹಿಂದುಗಡೆ ಮೂಲೆಯಲ್ಲಿವೆ. ಪಕ್ಕದಲ್ಲಿ ಫ್ಲಾಶ್ ಇದೆ. ಕ್ಯಾಮೆರಾ ಎದ್ದು ನಿಂತಿದೆ. ಇದು ನನಗೆ ಇಷ್ಟವಾಗಲಿಲ್ಲ. ಮೇಜಿನ ಮೇಲೆ ಇಟ್ಟಾಗ ಕ್ಯಾಮೆರಾದ ಲೆನ್ಸ್‌ಗೆ ಸ್ವಲ್ಪ ಗೀರುಗಳಾಗುವ ಸಾಧ್ಯತೆ ಇದೆ. ದಪ್ಪದ ಕವಚ ಹಾಕಿಕೊಂಡು ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದು.

ಬೆರಳಚ್ಚು ಸ್ಕ್ಯಾನರ್ ಮುಂಭಾಗದಲ್ಲಿ ಕೆಳಗೆ ಮಧ್ಯದಲ್ಲಿದೆ. ಇದು ಆಂಡ್ರಾಯ್ಡ್‌ನ ಪ್ರಮುಖ ಬಟನ್ ಆಗಿಯೂ ಕೆಲಸ ಮಾಡುತ್ತದೆ. ನನ್ನ ಪ್ರಕಾರ ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿ ಇದ್ದರೆ ಉತ್ತಮ. ಎಂದಿನಂತೆ ಕೈಯಲ್ಲಿ ಹಿಡಿಯುವ ಮತ್ತು ಬಳಸುವ ಅನುಭವ ಚೆನ್ನಾಗಿದೆ. ಒಂದು ಮೇಲ್ದರ್ಜೆಯ ಫೋನನ್ನು ಕೈಯಲ್ಲಿ ಹಿಡಿದ ಭಾವನೆ ಬರುತ್ತದೆ. ಹಿಂಭಾಗ ನಯವಾಗಿದೆ. ಕೈಯಿಂದ ಜಾರಿ ಬೀಳುವ ಭಯವಿದೆ. ಹೆಚ್ಚಿಗೆ ಕವಚ ಹಾಕಿಕೊಂಡರೆ ಒಳ್ಳೆಯದು.

ಇತರೆ ಒನ್‌ಪ್ಲಸ್ ಫೋನ್‌ಗಳಂತೆ ಇದರ ಕೆಲಸದ ವೇಗವೂ ಅತ್ಯುತ್ತಮವಾಗಿದೆ. 8 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಯಾವ ಆಟವನ್ನು ಬೇಕಾದರೂ ಆಡಬಹುದು. ಇದು ವೇದ್ಯವಾಗಬೇಕಾದರೆ ಇದರಲ್ಲಿ ಆಸ್ಫಾಲ್ಟ್8 ಆಟ ಆಡಬೇಕು. ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ ವೀಕ್ಷಣೆ ಕೂಡ ಮಾಡಬಹುದು. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಡ್ಯಾಶ್ ಚಾರ್ಜಿಂಗ್ ಇದೆ. ಸುಮಾರು 45 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಇದರಲ್ಲಿ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ಒಂದು 16 ಮೆಗಾಪಿಕ್ಸೆಲ್‌ನ f/1.7 ಲೆನ್ಸ್ ಮತ್ತು ಇನ್ನೊಂದು 20 ಮೆಗಾಪಿಕ್ಸೆಲ್‌ನ f/2.6 ಲೆನ್ಸ್ ಇರುವಂತದ್ದು. ಒಂದು ಕ್ಯಾಮೆರಾ ವಸ್ತುವಿನ ಮೇಲೆ ಫೋಕಸ್ ಮಾಡುವಾಗ ಇನ್ನೊಂದು ಹಿನ್ನೆಲೆಯ ಮೇಲೆ ಫೋಕಸ್ ಮಾಡುತ್ತದೆ. ವ್ಯಕ್ತಿಚಿತ್ರಣಕ್ಕೆಂದೇ ಪ್ರತ್ಯೇಕ ಪೋರ್ಟ್ರೈಟ್ ಎಂಬ ಆಯ್ಕೆ ಇದೆ. ಈ ಆಯ್ಕೆಯನ್ನು ಮಾಡಿಕೊಂಡಾಗ ವ್ಯಕ್ತಿಗಳ ಚಿತ್ರ ಸ್ಫುಟವಾಗಿದ್ದು ಹಿನ್ನೆಲೆ ಮಸುಕಾಗಿ ಡಿಎಸ್‌ಎಲ್‌ಆರ್ ಕ್ಯಾಮೆರಾದಲ್ಲಿ ಫೋಟೊ ತೆಗೆದಂತೆ ಕಂಡುಬರುತ್ತದೆ. ಇದರಲ್ಲಿ ನೀಡಿರುವ ಮ್ಯಾನ್ಯುವಲ್ ವಿಧಾನ ತುಂಬ ಚೆನ್ನಾಗಿದೆ.

ಕಡಿಮೆ ಬೆಳಕಿನಲ್ಲೂ ತೃಪ್ತಿದಾಯಕವಾಗಿ ಫೋಟೊ ತೆಗೆಯುತ್ತದೆ. ಉತ್ತಮ ಗುಣಮಟ್ಟದ ವಿಡಿಯೊ ಜೊತೆಗೆ 4k ವಿಡಿಯೊ ಕೂಡ ಇದನ್ನು ಬಳಸಿ ತಯಾರಿಸಬಹುದು. ಉತ್ತಮ ಫೋಟೊ, ವಿಡಿಯೊ ಮತ್ತು ಸ್ವಂತೀ ತೆಗೆಯಲು ಸದ್ಯ ಇದಕ್ಕಿಂತ ಉತ್ತಮ ಕ್ಯಾಮೆರಾ ಫೋನ್ ಈ ಬೆಲೆಯಲ್ಲಿ ಇಲ್ಲ. ಆದರೆ ಒನ್‌ಪ್ಲಸ್ 3, 3ಟಿ ಗಳಲ್ಲಿ ಇದ್ದಂತೆ ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. 4k ವಿಡಿಯೊ ತಯಾರಿಸುವಾಗ ಇದು ವೇದ್ಯವಾಗುತ್ತದೆ.

ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ.

ಆದರೆ ಇಯರ್‌ಫೋನ್ ನೀಡಿಲ್ಲ. ಆಂಡ್ರಾಯ್ಡ್ 7.1.1 ಜೊತೆ ಆಕ್ಸಿಜನ್ 4.5.6 ಓಎಸ್ ಇದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಅತ್ಯುತ್ತಮ ಫೋನ್ ಎನ್ನಬಹುದು. ಈಗ ನೀವು ಒಂದು ಪ್ರಶ್ನೆ ಕೇಳಬಹುದು –‘ನನ್ನಲ್ಲಿ ಈಗಾಗಲೇ ಒನ್‌ಪ್ಲಸ್ 3ಟಿ ಇದೆ. ನಾನು ಪುನಃ ಹಣ ಖರ್ಚು ಮಾಡಿ ಒನ್‌ಪ್ಲಸ್ 5 ಕೊಳ್ಳುವ ಅಗತ್ಯವಿದೆಯೇ?’ ಎಂದು. ಅದು ಅಗತ್ಯವಿಲ್ಲ ಎಂಬುದೇ ನನ್ನ ಉತ್ತರ. ಯಾಕೆಂದರೆ ಒನ್‌ಪ್ಲಸ್ 3 ಮತ್ತು 3ಟಿ ಫೋನ್‌ಗಳು ಇನ್ನೂ ಹಳತಾಗಿಲ್ಲ.

***

ಗ್ಯಾಜೆಟ್ ಸಲಹೆ

ಅನಿಲ್ ಹೆಚ್.ಜಿ. ಅವರ ಪ್ರಶ್ನೆ: ಜಂಕ್ ಫೈಲ್‌ಗಳೆಂದರೇನು ಹಾಗೂ ಅವು ಹೇಗೆ ಉಂಟಾಗುತ್ತವೆ ? ಒಂದು ಉತ್ತಮ ಜಂಕ್, ಕ್ಯಾಶ್ ಮೆಮೊರಿ ಹಾಗೂ ಹಿಸ್ಟರಿ ಕ್ಲೀನರ್ ಈ ಮೂರು ಸೌಲಭ್ಯಗಳಿರುವ ಒಂದೇ ಆ್ಯಪ್ ಇದ್ದರೆ ತಿಳಿಸಿ.

ಉ: ಕೆಲವು ಆ್ಯಪ್‌ಗಳನ್ನು ನೀವು ಅನ್‌ಇನ್‌ಸ್ಟಾಲ್ ಮಾಡಿದಾಗ ಅವು ಸೃಷ್ಟಿಸಿದ ಮಾಹಿತಿ (ಡಾಟಾ) ಹಾಗೆಯೇ ಉಳಿದುಕೊಂಡುಬಿಡುತ್ತವೆ. ಇನ್ನು ಕೆಲವು ಆ್ಯಪ್‌ಗಳು ಕೆಲಸ ಮಾಡುವಾಗ ಸ್ವಲ್ಪ ತಾತ್ಕಾಲಿಕ ಮೆಮೊರಿ ಬಳಸುತ್ತವೆ. ಅವು ಹೀಗೆ ಸಂಗ್ರಹವಾಗುತ್ತ ಜಂಕ್ ಫೈಲ್‌ಗಳಾಗುತ್ತವೆ. ಅವುಗಳನ್ನು ಸ್ವಚ್ಛಮಾಡಲು ತುಂಬ ಹಿಂದೆಯೇ ಇದೇ ಅಂಕಣದಲ್ಲಿ ಪರಿಚಯ ಮಾಡಿದ್ದ Clean Master ಆ್ಯಪ್ ಬಳಸಿ.

***

ವಾರದ ಆ್ಯಪ್

ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಕನ್ನಡ ಬಳಸುವ ವಿಷಯಕ್ಕೆ ಬಂದಾಗ ಕನ್ನಡವನ್ನು ಇಂಗ್ಲಿಷ್‌ ಲಿಪಿಯಲ್ಲಿ ಬರೆಯುವವರ ಸಂಖ್ಯೆ ಗಣನೀಯವಾಗಿದೆ. ಈ ರೀತಿ ಬರೆಯುವುದಕ್ಕೆ ನಾನು ಕಂಗ್ಲಿಷ್‌ ಎನ್ನುತ್ತೇನೆ. ಕನ್ನಡದ ಕೀಬೋರ್ಡ್‌ಗಳು ಬೇಕಾದಷ್ಟಿದ್ದರೂ ಅವನ್ನು ಕಲಿಯಲು ಕೆಲವರಿಗೆ ಸೋಮಾರಿತನ.

ಅಂತಹವರಿಗಾಗಿಯೇ ಈಗ ಕನ್ನಡದ ಧ್ವನಿಯಿಂದ ಪಠ್ಯಕ್ಕೆ ಬದಲಾವಣೆ ಮಾಡುವ ಕೀಲಿಮಣೆ ತಂತ್ರಾಂಶ ಬಂದಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Lipikaar Kannada Keyboard ಎಂದು ಹುಡುಕಬೇಕು ಅಥವಾ bit.ly/gadgetloka289 ಜಾಲತಾಣಕ್ಕೆ ಭೇಟಿ ನೀಡಿ.

ಈ ಕೀಲಿಮಣೆಯನ್ನು ಹಾಕಿಕೊಂಡ ನಂತರ ಅದನ್ನು ಆಯ್ಕೆ ಮಾಡಿಕೊಳ್ಳಬೇಕು, ಅದರಲ್ಲಿ ಕನ್ನಡ ಎಂದು ಆಯ್ಕೆ ಮಾಡಿಕೊಂಡು ಅಲ್ಲಿ ಕಾಣಿಸುವ ಮೈಕ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಕನ್ನಡದಲ್ಲಿ ಮಾತನಾಡಬೇಕು. ಆಗ ಅದು ಮಾತನಾಡಿದ್ದನ್ನು ಕನ್ನಡ ಪಠ್ಯಕ್ಕೆ ಬದಲಾವಣೆ ಮಾಡುತ್ತದೆ. ಇದು ಕೆಲಸ ಮಾಡಲು ಉತ್ತಮ ಅಂತರಜಾಲ ಸಂಪರ್ಕ ಅಗತ್ಯ.

***

ಗ್ಯಾಜೆಟ್ ತರ್ಲೆ

ನೀವು ಎಷ್ಟೇ ದುಬಾರಿ ಬೆಲೆಯ ಸ್ಮಾರ್ಟ್‌ವಾಚ್ ಕೊಂಡುಕೊಂಡರೂ ನಿಮಗೆ ದಿವಸಕ್ಕೆ ಇಪ್ಪತ್ತನಾಲ್ಕೇ ಗಂಟೆಗಳು ದೊರೆಯುವುದು.

***

ಉತ್ತಮ ಕಾರ್ಯಕ್ಷಮತೆ ಹಾಗೂ ಗುಣ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಒನ್‌ಪ್ಲಸ್ 5

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry