7

ತಾರೆಯರ ಸೆಲ್ಫಿ ಕ್ರೇಜ್

Published:
Updated:
ತಾರೆಯರ ಸೆಲ್ಫಿ ಕ್ರೇಜ್

ಕುಂತರೆ, ನಿಂತರೆ ಸದಾ ಮೊಬೈಲ್ ಧ್ಯಾನದಲ್ಲೇ ಮುಳುಗಿರುವ ಜನಸಾಮಾನ್ಯರಿಗೆ ಸೆಲ್ಫಿ ಕ್ರೇಜ್ ಹೊಸದೇನಲ್ಲ. ಎಲ್ಲಿಗೇ ಹೋಗಲಿ, ಜತೆಯಲ್ಲಿ ಯಾರೇ ಇರಲಿ ಅವರ ಜತೆಗೊಂದು ಸೆಲ್ಫಿ ತೆಗೆದುಕೊಳ್ಳುವುದು ಈಚೆಗೆ ಸಾಮಾನ್ಯ. ಅಂಥದೊಂದ್ದು ಕ್ರೇಜ್ ಬಾಲಿವುಡ್ ನಟ, ನಟಿಯರನ್ನೂ ಬಿಟ್ಟಿಲ್ಲ. ಕೆಲ ಜಾಣ ನಟ, ನಟಿಯರು ಸೆಲ್ಫಿ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದಾರೆ. ಅಂಥ ಸೆಲ್ಫಿ ಕ್ರೇಜ್‌ ಇರುವ ಕೆಲ ನಟ–ನಟಿಯರ ಕುರಿತು ಇಲ್ಲಿದೆ ಒಂದು ಕಿರುನೋಟ.

ಶಾರುಕ್ ಖಾನ್

‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರೀಕರಣದಲ್ಲಿ  ಬ್ಯುಸಿಯಾಗಿದ್ದ ನಟ ಶಾರುಕ್ ಖಾನ್ ಆ ಸಮಯದಲ್ಲಿ ಮಕ್ಕಳಾದ ಅಬ್ರಮ್, ಆರ್ಯನ್, ಸುಹಾನಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಒಂದು ಸೆಲ್ಫಿ ತೆಗೆದುಕೊಂಡಿದ್ದರು. ಆ ಸೆಲ್ಫಿ ಚಿತ್ರದಲ್ಲಿ ಮೇಕಪ್ ಮಾಡಿಕೊಳ್ಳದ, ಕಿವಿಗೆ ಇಯರ್ ಫೋನ್ ಹಾಕಿಕೊಂಡಿರುವ ಶಾರುಕ್ ಅವರನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ಹೊಸ ಸಿನಿಮಾದಲ್ಲಿ ರೊಮ್ಯಾಂಟಿಕ್ ಹಾಡಿನ ಬಗ್ಗೆಯೂ ಸೆಲ್ಫಿ ಜತೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.

ರಣವೀರ್ ಸಿಂಗ್

‘ಕನ್ನಡಿಯನ್ನು ನೋಡಿ ಅದು ನಿಮ್ಮ ಪ್ರತಿಸ್ಪರ್ಧಿ’ ಎನ್ನುವ ಶೀರ್ಷಿಕೆಯಡಿ ನಟ ರಣವೀರ್ ಸಿಂಗ್ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಬೆತ್ತಲೆ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ಈಚೆಗೆ ವೈರಲ್ ಆಗಿತ್ತು. ಕಟ್ಟುಮಸ್ತಾದ ಮೈಗೆ ರಣವೀರ್ ಎಣ್ಣೆ ಹಚ್ಚಿಕೊಂಡು, ಕನ್ನಡಿ ಮುಂದೆ ನಿಂತು ಸೆಲ್ಫಿ ಕ್ಲಿಕಿಸಿಕೊಂಡಿದ್ದರು. ಈ ಚಿತ್ರ ಹುಡುಗರಿಗಷ್ಟೇ ಅಲ್ಲ ರಣವೀರ್ ಅಭಿಮಾನಿ ಹುಡುಗಿಯರಿಗೆ ಸಖತ್ ಇಷ್ಟವಾಗಿದೆಯಂತೆ.

ಅರ್ಜುನ್ ಕಪೂರ್

‘ಹಾಫ್ ಗರ್ಲ್ ಫ್ರೆಂಡ್‌’ ಸಿನಿಮಾ ಶೂಟಿಂಗ್ ವೇಳೆ ನಟ ಅರ್ಜುನ್ ಕಪೂರ್ ತಮ್ಮ ದಪ್ಪ ಹುಬ್ಬುಗಳನ್ನು ಮೇಲೇರಿಸಿ ಸೆಲ್ಫಿ ತೆಗೆದುಕೊಂಡಿದ್ದರು. ‘ಸೆಟ್‌ನಲ್ಲಿ ಸೆಲ್ಫಿ’ ಎಂಬ ಚಿತ್ರಶೀರ್ಷಿಕೆಯನ್ನೂ ಅವರು ಕೊಟ್ಟಿದ್ದರು. ಈ ಮೂಲಕ ತಮ್ಮ ಸೆಲ್ಫಿ ಪ್ರೀತಿಯನ್ನು ಅರ್ಜುನ್ ಜಗಜ್ಜಾಹೀರು ಮಾಡಿದ್ದರು.

ಆಲಿಯಾ ಭಟ್

ಆಲಿಯಾ ಭಟ್‌ಗೂ ಸೆಲ್ಫಿಗೂ ಎಲ್ಲಿಲ್ಲದ ನಂಟು. ಏನೇ ಮಾಡಿದರೂ ಆಲಿಯಾ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ಮುದ್ದಿನ ನಾಯಿ ಮರಿ, ಬೆಕ್ಕು, ಹೊಸ ಉಡುಪು, ಸಿನಿಮಾ ಚಿತ್ರೀಕರಣ, ಪ್ರೋಮೊ, ಟ್ರೈಲರ್‌, ಸಿನಿ ಪತ್ರಿಕಾಗೋಷ್ಠಿ ಹೀಗೆ ಆಲಿಯಾ ಎಲ್ಲೆಡೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಪರಿಣತಿಯನ್ನೇ ಸಾಧಿಸಿದ್ದಾರೆ.

ಅನುಷ್ಕಾ ಶರ್ಮ

ಅಲ್ಫಾವಧಿಯಲ್ಲೇ ಬಾಲಿವುಡ್‌ನ ದೊಡ್ಡದೊಡ್ಡ ನಟರೊಂದಿಗೆ ನಟಿಸಿದ ಕೀರ್ತಿಗೆ ಪಾತ್ರರಾಗಿರುವ ನಟಿ ಅನುಷ್ಕಾ ಶರ್ಮ,  ಆಗಾಗ ಸೆಲ್ಫಿ ಮೊರೆ ಹೋಗುತ್ತಾರೆ. ಕಣ್ಣಿಗೆ ಕಾಡಿಗೆ ಹಚ್ಚಿ, ತುಟಿಗೆ ತೆಳುವಾಗಿ ಲಿಪ್‌ಸ್ಟಿಕ್ ಹಚ್ಚಿಕೊಂಡು, ಸರಳವಾದ ಟೀಶರ್ಟಿನಲ್ಲಿ ತೆಗೆದುಕೊಂಡ ಸೆಲ್ಫಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಅಮಿಷಾ ಪಟೇಲ್

ಐಫಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ಅಮಿಷಾ ಪಟೇಲ್, ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಜತೆ ತೆಗೆದುಕೊಂಡ ಸೆಲ್ಫಿಯನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಚಿತ್ರದಲ್ಲಿ ಸಂಜಯ್ ಮತ್ತು ಸಲ್ಮಾನ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು.

ಆ್ಯಮಿ ಜಾಕ್ಸನ್

ಹಾಲಿವುಡ್ ನಟಿ ಆ್ಯಮಿ ಜಾಕ್ಸನ್ ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂದಿರನ್ 2.0 ಸಿನಿಮಾದಲ್ಲಿ ರಜನಿ ಮತ್ತು ಅಕ್ಷಯ್ ಕುಮಾರ್ ಜತೆ ನಟಿಸಿರುವ ಆ್ಯಮಿ, ನೆನಪಿಗಾಗಿ ಈ ಸೆಲ್ಫಿ ತೆಗೆದುಕೊಂಡಿದ್ದರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry