7

ವೀರಶೈವ–ಲಿಂಗಾಯತ ಇತಿಹಾಸ ಕಥನ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ವೀರಶೈವ–ಲಿಂಗಾಯತ ಇತಿಹಾಸ ಕಥನ

ಇಂದು ನಡೆಯುತ್ತಿರುವ ವೀರಶೈವ ಮತ್ತು ಲಿಂಗಾಯತ ಸಂಬಂಧಿತ ಚರ್ಚೆಗಳು ಪರಸ್ಪರ ಸಂಬಂಧ ಹೊಂದಿರುವ ಆದರೆ ಭಿನ್ನವೂ ಆದ ಮೂರು ಪ್ರಶ್ನೆಗಳನ್ನು ಜೊತೆಗೆ ಹೆಣೆದಿವೆ. ಹಾಗಾಗಿ ಈ ಕುರಿತಾಗಿ ಇದುವರೆಗೆ ಪ್ರಕಟವಾಗಿರುವ ಲೇಖನಗಳಲ್ಲಿ ಮತ್ತು ಮಂಡಿತವಾಗಿರುವ ವಾದಗಳಲ್ಲಿ ಹಲವು ಗೊಂದಲಗಳು ಮೂಡಿವೆ. ಇವುಗಳ ಸುತ್ತ ಕೆಲವು ಟಿಪ್ಪಣಿಗಳನ್ನು ಓದುಗರ ಮುಂದಿಡಲು ಬಯಸುತ್ತೇನೆ.

ಮೊದಲನೆಯದು ವೀರಶೈವ ಮತ್ತು ಲಿಂಗಾಯತ ಎನ್ನುವುವು ಒಂದೆಯೇ ಅಥವಾ ಬೇರೆಯವುಗಳೇ ಎನ್ನುವ ವಿಚಾರ. ಎರಡನೆಯ ಪ್ರಶ್ನೆ, ವೀರಶೈವ - ಲಿಂಗಾಯತ ಮತ್ತು ಹಿಂದೂ ಧರ್ಮಕ್ಕೆ ಇರುವ ಸಂಬಂಧದ ಕುರಿತಾಗಿದೆ. ಮೂರನೆಯ ಪ್ರಶ್ನೆಯು ಮೇಲಿನ ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಂದರ್ಭದಲ್ಲಿ ಸರ್ಕಾರದ ಪಾತ್ರವೇನು? ಅಸ್ತಿತ್ವ ಮತ್ತು ಅನನ್ಯತೆಗಳನ್ನು ಕುರಿತಾದ ಮೇಲಿನ ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು  ವೀರಶೈವ-ಲಿಂಗಾಯತ ಸಮುದಾಯವು ಸ್ವತಃ ತಾನೇ ಕಂಡುಕೊಳ್ಳದೆ, ಸರ್ಕಾರದ ಬಳಿ, ಪ್ರಭುತ್ವದ ಮನ್ನಣೆಯನ್ನು ಕೋರುತ್ತ, ಕೊಂಡೊಯ್ಯುವುದೇಕೆ ಎನ್ನುವುದಾಗಿದೆ.

ಈ ಚರ್ಚೆ ನಡೆಸುವ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಎನ್ನುವ ಪದವನ್ನು ಇಡೀ ಸಮುದಾಯವನ್ನು ಒಳಗೊಳ್ಳುವ ಹೆಸರೆಂದು ನಾನು ವಿಶ್ಲೇಷಣೆಯ ಅನುಕೂಲಕ್ಕಾಗಿ ಬಳಸುತ್ತಿದ್ದೇನೆ.

ವೀರಶೈವ ಮತ್ತು ಲಿಂಗಾಯತಗಳು ಒಂದೆಯೇ ಅಥವಾ ವಿಭಿನ್ನವೇ ಎನ್ನುವ ಮೊದಲನೆಯ ಪ್ರಶ್ನೆಯನ್ನು ಇದುವರೆಗೆ ಇಂದಿನಷ್ಟು ಸ್ಪಷ್ಟವಾಗಿ ಮತ್ತು ತೀವ್ರತೆಯಿಂದ ಕೇಳಿರಲಿಲ್ಲ. ಈ ಹಿಂದೆ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ, ಸಾದ, ಪಂಚಮಸಾಲಿ, ಬಣಜಿಗ ಮತ್ತಿತರ ಉಪಪಂಗಡಗಳ ನಡುವಿನ ಭಿನ್ನತೆ ಮತ್ತು ಸ್ಪರ್ಧೆಗಳು ಅವುಗಳ ನಾಯಕರ ಆತಂಕಕ್ಕೆ ದಾರಿ ಮಾಡಿದ್ದವು.  ಉಪಪಂಗಡಗಳ ನಡುವಿನ ಭಿನ್ನಾಭಿಪ್ರಾಯಗಳು ವೀರಶೈವ-ಲಿಂಗಾಯತ ಸಮುದಾಯವನ್ನೇ ಒಡೆಯುತ್ತವೆ. ಆ ಮೂಲಕ ಪ್ರಜಾಸತ್ತಾತ್ಮಕ ಚುನಾವಣಾ ರಾಜಕಾರಣದಲ್ಲಿ ಅಗತ್ಯವಿರುವ ಸಂಖ್ಯೆಗಳ ಪಂದ್ಯಾಟದಲ್ಲಿ ಹಿನ್ನಡೆಯಾಗಬಹುದು ಎನ್ನುವುದು ಆತಂಕಕ್ಕೆ ಮೂಲ ಕಾರಣವೂ ಆಗಿತ್ತು. ವಿಪರ್ಯಾಸವೆಂದರೆ,  ಉಪಜಾತಿಗಳು ಮತ್ತು ಅವುಗಳನ್ನು ಪ್ರತಿನಿಧಿಸುವ ಮಠಗಳ ನಡುವಣ ಸ್ಪರ್ಧೆಯನ್ನು ಕಡಿಮೆ ಮಾಡುವ ಮೂಲಕ ವೀರಶೈವ- ಲಿಂಗಾಯತರಲ್ಲಿ ಏಕತೆಯನ್ನು ಹೆಚ್ಚಿಸುವುದು ಪ್ರಾರಂಭದಿಂದಲೂ ಅಖಿಲ ಭಾರತ ವೀರಶೈವ ಮಹಾಸಭಾದ ಬಹುಮುಖ್ಯ ಗುರಿಗಳಲ್ಲಿ ಒಂದಾಗಿತ್ತು.   ಈ ಉದ್ದೇಶ ಸಾಧನೆಗಾಗಿಯೇ  2001ರ ಜನಗಣತಿಗೆ ಮೊದಲು  ‘ವೀರಶೈವ-ಲಿಂಗಾಯತರಿಗೆ ಜನಗಣತಿಯಲ್ಲಿ ಪ್ರತ್ಯೇಕವಾದ ಸಂಖ್ಯೆಯನ್ನು ನೀಡಿ, ಅವರನ್ನು ಬೇರೆಯಾಗಿಯೇ ಎಣಿಕೆ ಮಾಡಬೇಕು’ ಎನ್ನುವ ಬೇಡಿಕೆಯನ್ನು  ಮಹಾಸಭಾ ಮುಂದಿಟ್ಟಿತ್ತು.  ಜನಗಣತಿಯಲ್ಲಿ ಪ್ರತ್ಯೇಕವಾಗಿ ಎಣಿಕೆ ಮಾಡಬೇಕು ಎನ್ನುವ ಬೇಡಿಕೆಯೂ ಹೊಸದೇನಲ್ಲ. 1930ರಿಂದಲೇ ಈ ಕೂಗು ಕೇಳುತ್ತಲೇ ಇದೆ. ಸ್ವಾತಂತ್ರ್ಯಾನಂತರದ ಸಮಯದಲ್ಲಿಯೂ ಜೆ.ಬಿ.ಮಲ್ಲಾರಾಧ್ಯ ಮತ್ತಿತರರು ಈ ಬೇಡಿಕೆಯನ್ನು ಎತ್ತಿದ್ದರು.

ಆದರೆ ಇಂದು ವೀರಶೈವ ಮತ್ತು ಲಿಂಗಾಯತಗಳಲ್ಲಿ ಯಾವುದನ್ನು ತಮ್ಮ ಐಡೆಂಟಿಟಿಯ ಪ್ರಮುಖ ಚಿಹ್ನೆ ಮತ್ತು ಸಿದ್ಧಾಂತಗಳಾಗಿ ಪರಿಗಣಿಸಬೇಕು ಎನ್ನುವ ಪ್ರಶ್ನೆ ವೀರಶೈವ-ಲಿಂಗಾಯತರ ಮುಂದೆ ಎದ್ದಿದೆ. ಇದಕ್ಕೆ ಕಾರಣ ವ್ಯಾವಹಾರಿಕ ಕಾರಣಗಳಿಂದಾಗಿ ಮುಖ್ಯಮಂತ್ರಿ ಎತ್ತಿರುವ ಒಂದು ಪ್ರಶ್ನೆ. ವೀರಶೈವ-ಲಿಂಗಾಯತವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ  ಶಿಫಾರಸು ಮಾಡುವುದಾಗಿ ಘೋಷಿಸಿದ ಮುಖ್ಯಮಂತ್ರಿ, ತಮ್ಮ ಶಿಫಾರಸಿನಲ್ಲಿ ಯಾವ ಪದವನ್ನು ಬಳಸಬೇಕು ಎನ್ನುವ ಪ್ರಶ್ನೆಯನ್ನು ಸಮುದಾಯದ ಮುಂದೆಯೇ ಇಟ್ಟರು. ಒಂದು ಅರ್ಥದಲ್ಲಿ ಈ ಪ್ರಶ್ನೆಯು ಕೇವಲ ಸಮುದಾಯದ ಹೆಸರಿನ ಪ್ರಶ್ನೆಯಷ್ಟೇ ಅಲ್ಲ. ರಾಜ್ಯ ಸರ್ಕಾರವು ತನ್ನ ಶಿಫಾರಸಿನ ಜೊತೆಗೆ ಪ್ರತ್ಯೇಕ ಧರ್ಮವಾಗಿ ಪರಿಗಣಿಸಲು ಇರುವ ಐತಿಹಾಸಿಕ ಮತ್ತು ಧಾರ್ಮಿಕ ತರ್ಕ, ಕಾರಣಗಳನ್ನೂ ಒದಗಿಸಬೇಕಾಗುತ್ತದೆ. 

ಈ ಹಿನ್ನೆಲೆಯಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. ಎಲ್ಲರಿಗೂ ತಿಳಿದಿರುವಂತೆ ವೀರಶೈವ-ಲಿಂಗಾಯತರ ಆಧುನಿಕ ಇತಿಹಾಸದಲ್ಲಿ ಎರಡು ಧರ್ಮಸ್ಥಾಪನೆಯ ಕಥನಗಳು ಮೊದಲಿನಿಂದಲೂ ಅಸ್ತಿತ್ವದಲ್ಲಿವೆ. ಇವುಗಳ ಬಗ್ಗೆ ಹಲವಾರು ಗಂಭೀರ ಚರ್ಚೆಗಳು ಸಹ ಸಂಶೋಧನಾ ಬರಹಗಳಲ್ಲಿ ಮತ್ತು ಜನಪ್ರಿಯ ಮಾಧ್ಯಮಗಳಲ್ಲಿ ಇಪ್ಪತ್ತನೆಯ ಶತಮಾನದುದ್ದಕ್ಕೂ ನಡೆದಿವೆ. ವೀರಶೈವ-ಲಿಂಗಾಯತ ಧರ್ಮ ಸ್ಥಾಪನೆಯ ಎರಡು ಜನಪ್ರಿಯ ಕಥನಗಳಲ್ಲಿ ಭಿನ್ನತೆ ಮೂಡುವುದು, ವಚನಕಾರರನ್ನು ಹೇಗೆ ನೋಡಲಾಗುತ್ತಿದೆ ಎನ್ನುವ ಪ್ರಶ್ನೆಯ ಸಂದರ್ಭದಲ್ಲಿ. ಗುರು ಸಂಪ್ರದಾಯದ ಕಥನಗಳು ವೀರಶೈವವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿತ್ತು, ವಚನಕಾರರು ಇದರ ಪುನರುಜ್ಜೀವನವನ್ನು ಮಾಡಿದರು ಎನ್ನುವ ಚಿತ್ರಣವನ್ನು ಮುಂದಿಡುತ್ತವೆ. ಸಂಸ್ಕೃತ ಮೂಲದ ಆಕರಗಳನ್ನು ಮತ್ತು ಭಾರತೀಯ ದರ್ಶನಗಳ ಜೊತೆಗಿನ ಸಂಬಂಧವನ್ನು ಒತ್ತಿಹೇಳುವ ಈ ಕಥನಗಳು, ವೀರಶೈವ-ಲಿಂಗಾಯತವು ಹಿಂದೂ ಧರ್ಮದ ಹೊರಗಿದೆ ಎನ್ನುವುದನ್ನು ಒತ್ತಿಹೇಳುವುದಿಲ್ಲ. ಇದಕ್ಕೆ ಪ್ರತಿಯಾಗಿ, ವಿರಕ್ತ ಪಂಥದ ಕಥನಗಳು ಬಸವಣ್ಣ ಹಾಗೂ ವಚನಕಾರರನ್ನೇ ವೀರಶೈವ-ಲಿಂಗಾಯತ ಧರ್ಮದ ಸ್ಥಾಪಕರು ಎನ್ನುತ್ತವೆ. ಈ ಕಥನಗಳಿಗೆ ಕನ್ನಡದಲ್ಲಿ ರಚನೆಯಾಗಿರುವ ವಚನಗಳು, ವಚನಗಳನ್ನು ಆಧರಿಸಿರುವ ಶೂನ್ಯಸಂಪಾದನೆಗಳಂತಹ ಶಾಸ್ತ್ರಗ್ರಂಥಗಳು ಹಾಗೂ ವಚನಕಾರರ ಬದುಕಿನ ಮೇಲಿರುವ ಕಾವ್ಯಗಳು ಮೂಲ ಆಕರಗಳಾಗಿವೆ. ವಿರಕ್ತ ಕಥನಗಳು ವೇದ-ಬ್ರಾಹ್ಮಣ ಕೇಂದ್ರಿತ ಹಿಂದೂ ಧರ್ಮದ ಜೊತೆಗೆ ವಚನ ಪರಂಪರೆಗೆ ಮತ್ತು ಅದರಿಂದ ಚಾಲನೆ ಪಡೆಯುತ್ತಿರುವ ವೀರಶೈವ-ಲಿಂಗಾಯತರಿಗೆ ಇರುವ ಭಿನ್ನತೆಗಳನ್ನು ಎತ್ತಿ ಹಿಡಿಯುತ್ತವೆ. ಈ ಕಥನಗಳನ್ನು ಕಟ್ಟಿಕೊಡುತ್ತಿರುವ ಪರಂಪರೆಗಳಿಗೆ ಸೇರಿದ ಎರಡು ಪ್ರಭಾವಿ ಮಠಗಳ ವ್ಯವಸ್ಥೆಗಳು ಸಹ ಇವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ನಾನಿಲ್ಲಿ ಮೇಲೆ ಒದಗಿಸಿದ ಎರಡು ಕಥನಗಳು ತುಂಬ ಸಂಕೀರ್ಣವಾದ ಮತ್ತು ಅಸ್ಪಷ್ಟವಾದ ಚಾರಿತ್ರಿಕ ಮತ್ತು ಸಾಮಾಜಿಕ ವಾಸ್ತವವನ್ನು ಸರಳೀಕರಣಗೊಳಿಸಿ ಹಿಡಿಯಲು ಮಾಡುತ್ತಿರುವ ಪ್ರಯತ್ನಗಳು ಎನ್ನುವುದನ್ನು ನಾವು ಮರೆಯಬಾರದು. ಇದು ಆಶ್ಚರ್ಯದ ವಿಚಾರವೂ ಅಲ್ಲ. ವೀರಶೈವ-ಲಿಂಗಾಯತರೂ ಸೇರಿದಂತೆ ಯಾವುದೇ ಒಂದು ಸಮುದಾಯವೂ ಒಂದು ಐತಿಹಾಸಿಕ ಘಟ್ಟದಲ್ಲಿ ಅಥವಾ ಒಂದು ಸಾಮಾಜಿಕ ಚಳವಳಿಯಿಂದಲೇ ರೂಪುಗೊಂಡಿರುವುದಿಲ್ಲ. ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಂತಹ ವಿಶ್ವಧರ್ಮಗಳು ಸಹ, ಒಬ್ಬ ಐತಿಹಾಸಿಕ ಸ್ಥಾಪಕನನ್ನು ಹೊಂದಿದ್ದರೂ, ಹಲವಾರು ಶತಮಾನಗಳ ಸಂಘರ್ಷ, ಕೊಡು-ಕೊಳ್ಳುವಿಕೆಯ ನಂತರ ತಮ್ಮ ಸಾಮಾಜಿಕ ಸ್ವರೂಪ, ನಂಬಿಕೆ ಮತ್ತು ಆಚಾರ-ವಿಚಾರಗಳನ್ನು ಕಂಡುಕೊಂಡವು. ಅಲ್ಲದೆ ಈ ಧರ್ಮಗಳು ತಮ್ಮ ಸಾಮಾಜಿಕ ಅಡಿಪಾಯವನ್ನು ಪರಿವರ್ತನೆಯ ಮೂಲಕ ವಿಸ್ತರಿಸಿಕೊಳ್ಳುವಾಗ, ತಮ್ಮೊಳಗೆ ಬರುತ್ತಿರುವವರ ಆಚಾರ-ವಿಚಾರಗಳನ್ನು ಸ್ವೀಕರಿಸಿರುವುದೂ  ಇದೆ. ಈ  ಮಾತುಗಳು ವೀರಶೈವ-ಲಿಂಗಾಯತ ಧರ್ಮದ ಹಿನ್ನೆಲೆಯಲ್ಲಿಯೂ ಸತ್ಯ.

ಹಾಗೆ ನೋಡಿದಾಗ, ಇಂದು ನಾವು ಯಾವುದನ್ನು ವೀರಶೈವ-ಲಿಂಗಾಯತರ ಕೇಂದ್ರ ನಂಬಿಕೆಗಳು ಮತ್ತು ಆಚಾರಗಳು ಎಂದು ಪರಿಗಣಿಸುತ್ತೇವೆಯೋ, ಅವುಗಳು ನಮಗೆ ಸ್ಪಷ್ಟವಾಗಿ ದೊರಕುವುದು 15–16ನೆಯ ಶತಮಾನಗಳಲ್ಲಿ ರಚಿತವಾದ ವಿರಕ್ತ ಪರಂಪರೆಗೆ ಸೇರಿದ ಶೂನ್ಯಸಂಪಾದನೆ, ಲಿಂಗಲೀಲಾವಿಲಾಸ ಚಾರಿತ್ರ, ಷಟ್‍ಸ್ಥಲ ಜ್ಞಾನಸಾರಾಮೃತ ಮತ್ತಿತರ ಕೃತಿಗಳಲ್ಲಿ. ಇಲ್ಲಿ ವಚನಕಾರರ ರಚನೆಗಳು ಮತ್ತು ವಿಚಾರಗಳೂ ಇವೆ. ಸಿದ್ಧಾಂತಶಿಖಾಮಣಿಯೂ ಸೇರಿದಂತೆ ಶೈವ ಮತ್ತು ಯೋಗ ಪರಂಪರೆಗಳಿಗೆ ಸೇರಿದ ಕೃತಿಗಳು ಮತ್ತು ಅವುಗಳಲ್ಲಿರುವ ವಿಚಾರಗಳು ಸಹ ವೀರಶೈವ-ಲಿಂಗಾಯತದೊಳಗೆ ಬರುತ್ತವೆ.  ಶೂನ್ಯಸಂಪಾದನೆಯಂತಹ ಕೃತಿ, ಒಂದು ಸಮುದಾಯವು ತನ್ನನ್ನು ತಾನು ರೂಪಿಸಿಕೊಳ್ಳುವಾಗ ನಡೆಸುವ ಚರ್ಚೆಗಳನ್ನು ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತದೆ. ಸಮುದಾಯದ ಚಿಹ್ನೆಗಳಾವುವು, ಅವುಗಳೇಕೆ ಬಹಿರಂಗವಾಗಿರಬೇಕು, ಆಚಾರಗಳು ಫಲದಾಯಕವೇ, ಪರಿವರ್ತನೆಯ ಸ್ವರೂಪವೇನು ಇತ್ಯಾದಿ ಪ್ರಶ್ನೆಗಳನ್ನು ಈ ಪಠ್ಯಗಳು ಗಂಭೀರವಾಗಿ ಚರ್ಚಿಸುತ್ತವೆ.

ಸಮುದಾಯಗಳು ಹೇಗೆ ತಮ್ಮನ್ನು ತಾವು ಕಟ್ಟಿಕೊಳ್ಳುತ್ತವೆ, ಈ ಪ್ರಕ್ರಿಯೆಗಳ ಕಥನಗಳನ್ನು ಹೇಗೆ ನಂತರ ರೂಪಿಸಿಕೊಳ್ಳುತ್ತವೆ ಎನ್ನುವುದರ ಕುರಿತಾಗಿ ನಮಗೆ ಸ್ಪಷ್ಟತೆಯಿರಲಿ ಎಂದು ಮೇಲಿನ ಅಂಶಗಳನ್ನು ಬರೆಯಬೇಕಾಯಿತು. ಜುಲೈ 1ರ ತಮ್ಮ ಲೇಖನದಲ್ಲಿ (ಪ್ರ.ವಾ.) ಎಸ್.ಎಂ. ಜಾಮದಾರ ಅವರು ಹೇಳಿದಂತೆ ‘ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ’ ಎನ್ನಲು ಸಾಕಷ್ಟು ಬೌದ್ಧಿಕ ಸಾಮಗ್ರಿಗಳಿವೆ. ಹಾಗೆಯೇ ಜುಲೈ 19ರಂದು ಪ್ರಕಟವಾದ ಲೇಖನದಲ್ಲಿ (ಪ್ರ.ವಾ.), ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಯವರು ವಾದಿಸಿದಂತೆ ‘ವೀರಶೈವ-ಲಿಂಗಾಯತ ಒಂದೇ, ಹಿಂದೂವೂ ಹೌದು’ ಎಂದು ವಾದಿಸಲೂ ಬೌದ್ಧಿಕ ಸಾಮಗ್ರಿಗಳು ದೊರಕುತ್ತವೆ. ಆದರೆ ಈ ಎರಡೂ ವಾದಗಳು ಐತಿಹಾಸಿಕ ಸತ್ಯದ ಕುರಿತಾದವುಗಳು ಎನ್ನುವುದಕ್ಕಿಂತಲೂ, ತಮಗೆ ಒಪ್ಪಿಗೆಯಾಗುವ ಪರ್ಯಾಯವನ್ನು ಮುಂದಿಡುವ ರಾಜಕೀಯ ವಾದಗಳು ಎಂದೇ ಹೇಳಬೇಕಾಗುತ್ತದೆ. ಅದಕ್ಕಾಗಿಯೇ ಸಮುದಾಯದೊಳಗಷ್ಟೇ ಈ ಚರ್ಚೆಗಳನ್ನು ನಡೆಸದೆ, ಸರ್ಕಾರದ ಮುಂದೆ ವಾದಗಳನ್ನು ಮಂಡಿಸುವ ಅನಿವಾರ್ಯ ಮೂಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry