ಕೊಳವೆ ಬಾವಿಗೆ ಜಲ ಪುನರ್ ಭರಣ

7

ಕೊಳವೆ ಬಾವಿಗೆ ಜಲ ಪುನರ್ ಭರಣ

Published:
Updated:
ಕೊಳವೆ ಬಾವಿಗೆ ಜಲ ಪುನರ್ ಭರಣ

ಬಸವನಬಾಗೇವಾಡಿ: ತೋಟದಲ್ಲಿನ ಕೊಳವೆ ಬಾವಿಯ ನೀರು ಮುಂದಿನ ದಿನಗಳಲ್ಲಿ ಬತ್ತದಿರಲಿ ಎಂಬ ಉದ್ದೇಶದಿಂದ ಬಸವನ ಬಾಗೇವಾಡಿಯ ನಿವೃತ್ತ ಪಿಎಸ್‌ಐವೊಬ್ಬರು ತಮ್ಮ ತೋಟದಲ್ಲಿನ ಕೊಳವೆ ಬಾವಿಗೆ ಜಲ ಪುನರ್‌ ಭರಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ಪಿಎಸ್‌ಐ ಆಗಿದ್ದ ಸಿದ್ದಣ್ಣ ಜಾಲಗೇರಿ ಅವರು ಸೇವಾ ನಿವೃತ್ತಿ ಹೊಂದಿದ ನಂತರ ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ಇವರ ಕೃಷಿ ಕಾರ್ಯಕ್ಕೆ, ವೈದ್ಯ ವೃತ್ತಿಯಲ್ಲಿ ತೊಡಗಿರುವ ಮಗ ಡಾ.ಮಹಾಂತೇಶ  ಸಾಥ್‌ ನೀಡುತ್ತಿದ್ದಾರೆ.

ವೈಜ್ಞಾನಿಕ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ತಮ್ಮ ತೋಟಕ್ಕೆ ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ. ತಮ್ಮ ತೋಟದಲ್ಲಿನ ವಿವಿಧ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಬೆಳೆಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೆಲ ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿದ್ದಾರೆ.

ಕೊಳವೆ ಬಾವಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಇಲ್ಲದೇ ಇರುವುದರಿಂದ ಎಲ್ಲ ಬೆಳೆಗಳನ್ನು ರಕ್ಷಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕೆಲ ಬೆಳೆಗಳಿಗೆ ಹನಿ ನೀರಾವರಿ ಪದ್ದತಿ ಮೂಲಕ ನೀರು ಹರಿಸುತ್ತಿದ್ದಾರೆ. ಮುಂದಿನ ದಿಗಳಲ್ಲಿ ಕೊಳವೆ ಬಾವಿಯ ನೀರು ಬತ್ತಿದರೆ ಹೇಗೆ ಎಂಬ ಚಿಂತೆಯಲ್ಲಿರುವಾಗ ಅವರ ಆಲೋಚನೆಗೆ ಹೊಳೆದದ್ದು ಜಲ ಪುನರ್ ಭರಣ ಯೋಜನೆ.

ಜಲ ಪುನರ್‌ ಭರಣ ಯೋಜನೆ ಅಳವಡಿ ಸುವುದರೊಂದಿಗೆ ನೀರಿನ ಮಹತ್ವ ಕುರಿತು ಜಾಗೃತಿ ಮುಡಿಸುತ್ತಿರುವ ಮಹಾರಾಷ್ಟ್ರದ ನಾನಾಸಾಹೇಬ್‌ ಧರ್ಮಾಧಿಕಾರ ಪ್ರತಿಷ್ಠಾನದ ಸದಸ್ಯರು ಜಾಗೃತಿ ಮೂಡಿಸುವುದರ ಜೊತೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗೊಂಡಿರುವ ಜಲ ಪುನರ್ ಭರಣ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ಓದಿದ ನಂತರ ತಮ್ಮ ತೋಟದಲ್ಲೂ ಈ ಯೋಜನೆ ಅಳವಡಿಸಿ ಕೊಳ್ಳಲು ಮುಂದಾಗಿ ನಾನಾಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನ ಸತ್ಸಂಗ ಸದಸ್ಯರಾದ ಕಾರಜೋಳದ ಅಶೋಕ ಮಲಘಾಣ ಅವರನ್ನು ಸಂಪರ್ಕಿಸಿದ್ದಾರೆ.

ಅಶೋಕ ಮಲಘಾಣ ಸೇರಿದಂತೆ ಆರು ಜನರ ತಂಡ  ಸಿದ್ದಣ್ಣ ಜಾಲಗೇರಿ ಅವರ ತೋಟದಲ್ಲಿನ ಕೊಳವೆ ಬಾವಿಗೆ ಜಲ ಪುನರ್‌ ಭರಣ ಯೋಜನೆಯನ್ನು ಅಳವಡಿಸಿದ್ದಾರೆ.

‘ಮರು ಪೂರಣ ಮಾಡುವುದಕ್ಕೆ ಯಾವುದೇ ರೀತಿಯ ಖರ್ಚನ್ನು ಈ ಸದಸ್ಯರು ಪಡೆದು ಕೊಂಡಿಲ್ಲ. ನೀರಿನ ಮಹತ್ವ ತಿಳಿಸಿ ಕೊಡು ವುದರೊಂದಿಗೆ ಮುಂದಿನ ದಿನಗಳಿಗಾಗಿ ಮಳೆ ನೀರನ್ನು ಕಾಯ್ದಿಡುವ ನಿಟ್ಟಿನಲ್ಲಿ ಜಾಗೃತಿ ಮೂಡಿ ಸುವುದಕ್ಕಾಗಿ ಉಚಿತ ಸೇವೆ ನೀಡು ತ್ತಿದ್ದೇವೆ’ ಎಂದು ತಂಡದ ಸದಸ್ಯರು ಹೇಳಿದರು. 

ಜಲ ಪುನರ್‌ ಭರಣ ಯೋಜನೆ ಹೇಗೆ ಕೊಳವೆ ಬಾವಿಯ ಸುತ್ತಲೂ ಐದು ಅಡಿ ಆಳ ಹಾಗೂ ಐದು ಅಡಿ ಉದ್ದ–ಅಗಲದ ತಗ್ಗು ತೋಡಿ ಕೇಸಿಂಗ್‌ ಪೈಪ್‌ಗೆ ರಂಧ್ರಗಳನ್ನು ಕೊರೆಯಲಾಗುತ್ತದೆ. ಕೇಸಿಂಗ್‌ ಪೈಪ್‌ಗೆ ಪ್ಲಾಸ್ಟಿಕ್‌ ಮಚ್ಚರದಾನಿ ಸುತ್ತಿ ಗಟ್ಟಿಯಾದ ದಾರದಿಂದ ಕಟ್ಟಲಾಗುತ್ತದೆ.

ತಗ್ಗಿನ ತಳಭಾಗದಿಂದ ಮೂರು ಅಡಿಗಳ ವರೆಗೆ ದಪ್ಪನೆ ಕರಿ ಕಲ್ಲು, ನಂತರ ಒಂದು ಅಡಿ ಜಲ್ಲಿ ಕಲ್ಲು ಹಾಕಿದ ನಂತರ ಮೇಲ್ಭಾಗದಲ್ಲಿ ಮರಳನ್ನು ಹಾಕಿ ಮುಚ್ಚಿದರೆ ಒಂದು ಹಂತದಲ್ಲಿ ಜಲ ಪುನರ್ ಭರಣ ಕಾರ್ಯದ ಪ್ರಥಮ ಹಂತ ಪೂರ್ಣಗೊಂಡಂತೆ.

ಇನ್ನು ಜಮೀನಿನಲ್ಲಿ ಬಿದ್ದ ನೀರು ಕೊಳವೆ ಬಾವಿಯ ಕಡೆಗೆ ಹರಿದು ಬರುವಂತೆ ಮಾಡ ಬೇಕಾದ ಅಗತ್ಯ ಇದೆ. ನೀರು ಕೊಳವೆಬಾವಿ ಸುತ್ತಲು ಹರಿದು ಬರುವಂತೆ ಒಂದಷ್ಟು ಚಿಕ್ಕದಾದ ಕಾಲುವೆ ರೀತಿಯ ಇಳಿಜಾರು ಮಾಡಿ ಕೊಳ್ಳಬೇಕು. ಮಳೆ ನೀರು ಸರಾಗವಾಗಿ ಕೊಳವೆ ಬಾವಿಯ ಸುತ್ತಲು ಇಂಗುತ್ತದೆ.

ಇದರಿಂದ ಜಲ ಪುನರ್‌ ಭರಣವಾಗಲು ಪೂರಕವಾಗುತ್ತದೆ. ಮಳೆ ನೀರಿನೊಂದಿಗೆ ಬರುವ ಮಣ್ಣು ಕೊಳವೆ ಬಾವಿಗೆ ಹೋಗುವುದನ್ನು ತಡೆಯಲು ಮೂರು ಹಂತದ ಸೋಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಶೋಕ ಮಲಘಾಣ ತಿಳಿಸಿದರು.

* * 

ಕೊಳವೆಬಾವಿ ಕೈಕೊಟ್ಟಾಗ ಮತ್ತೆ ಕೊರೆಸುವುದಕ್ಕಿಂತ ಮುಂದಿನ ದಿನಗಳಿಗಾಗಿ ನೀರನ್ನು ಕಾಯ್ದಿಡುವ ಸಲುವಾಗಿ ಈ ವ್ಯವಸ್ಥೆ ಸಹಕಾರಿ

ಸಿದ್ದಣ್ಣ ಜಾಲಗೇರಿ

ನಿವೃತ್ತ ಪಿಎಸ್‌ಐ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry