7

ಹಲಸಿನ ಬೀಜದ ಸವಿ ತಿನಿಸು

Published:
Updated:
ಹಲಸಿನ ಬೀಜದ ಸವಿ ತಿನಿಸು

ಈ ಬೀಜಗಳಲ್ಲಿ ಪ್ರೊಟೀನ್ ಹೇರಳವಾಗಿದೆ. ಇವುಗಳಿಂದ, ಮಕ್ಕಳು ಇಷ್ಟಪಟ್ಟು ಸವಿಯುವ ತಿನಿಸುಗಳನ್ನು ತಯಾರಿಸಬಹುದು. ಇನ್ನೇಕೆ ತಡ ನಿಮ್ಮ ಅಡುಗೆಮನೆಯನ್ನು ಹಲಸಿನ ಬೀಜದ ಘಮಕ್ಕೆ ತೆರೆದಿಟ್ಟುಕೊಳ್ಳಿ.

ಚಹಾದ ಜೋಡಿ ವಡೆ

ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ 1 ಕಪ್, ಹಲಸಿನ ಬೀಜ 15, ತೆಂಗಿನ ತುರಿ 1/2 ಕಪ್, ಜೀರಿಗೆ 1 ಚಮಚ, ಅರಿಶಿನ 1 ಚಿಟಿಕೆ, ಕರಿಯಲು ಎಣ್ಣೆ 1/2 ಲೀಟರ್, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹಲಸಿನ ಬೀಜಗಳನ್ನು ಸಿಪ್ಪೆ ತೆಗೆದು ಮೆತ್ತಗೆ ಬೇಯಿಸಿ. ಅಕ್ಕಿಯೊಂದಿಗೆ ತೆಂಗಿನ ತುರಿ, ಹಲಸಿನ ಬೀಜ, ಉಪ್ಪು ಸೇರಿಸಿ ನೀರು ಹಾಕದೆ ಗಟ್ಟಿಯಾಗಿ ನುಣ್ಣಗೆ ರುಬ್ಬಿ. ಕೊನೆ ಹಂತದಲ್ಲಿ ಅರಿಶಿನ-ಜೀರಿಗೆ ಸೇರಿಸಿ ಎರಡು ಸುತ್ತು ತಿರುವಿ. ನಂತರ ವಡೆಯಂತೆ ತಟ್ಟಿ ಕರಿಯಿರಿ. ಸಾಯಂಕಾಲ ಚಹಾದೊಂದಿಗೆ ಸವಿಯಲಯ ಬಿಸಿಬಿಸಿ ವಡೆ ಒಳ್ಳೆಯ ಜೋಡಿ.

*

ಸಿಹಿ ಸವಿ ಲಾಡು

ಬೇಕಾಗುವ ಸಾಮಗ್ರಿ: ಹಲಸಿನ ಬೀಜ 3 ಕಪ್, ಬೆಲ್ಲ 1/4 ಕೆ.ಜಿ., ತೆಂಗಿನ ತುರಿ 1 ಕಪ್, ಉಪ್ಪು ಚಿಟಿಕೆ.‌

ತಯಾರಿಸುವ ವಿಧಾನ: ಹಲಸಿನ ಬೀಜಗಳನ್ನು ಸಿಪ್ಪೆ ತೆಗೆದು ಬಿಳಿ ಮಾಡಿ ಚೆನ್ನಾಗಿ ಬೇಯಿಸಿ. ನೀರು ಇರದಂತೆ ಸೋಸಿ, ರುಬ್ಬಿ. ನುಣ್ಣಗೆ ಆಗುತ್ತಾ ಬರುವಾಗ ತೆಂಗಿನ ತುರಿ, ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಿಂಬೆ ಹಣ್ಣಿನಷ್ಟು ದೊಡ್ಡ ಉಂಡೆಯನ್ನು ಮಾಡಿ. ಪೌಷ್ಟಿಕಾಂಶವುಳ್ಳ ಈ ಸಿಹಿತಿಂಡಿ ಬೆಳೆಯುವ ಮಕ್ಕಳಿಗೆ ಒಳ್ಳೆಯದು.

*

ಆಹಾ... ಹೋಳಿಗೆ!

ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ 1/4 ಕೆ.ಜಿ., ಬೆಲ್ಲ 150 ಗ್ರಾಂ, ಎಣ್ಣೆ 4 ಚಮಚ, ಹಲಸಿನ ಬೀಜ 3 ಕಪ್, ತೆಂಗಿನ ತುರಿ 1 ಕಪ್, ಉಪ್ಪು ಚಿಟಿಕೆ, ಅರಿಶಿನ 1 ಚಿಟಿಕೆ.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ಸಿಪ್ಪೆ ತೆಗೆದು ಬಿಳಿ ಮಾಡಿ ಚೆನ್ನಾಗಿ ಬೇಯಿಸಿ. ತೆಂಗಿನ ತುರಿ, ಬೆಲ್ಲ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಬಾಳೆ ಎಲೆಗೆ ಎಣ್ಣೆ ಸವರಿ ವಡೆಯಂತೆ ತಟ್ಟಿ. ಅಕ್ಕಿಯನ್ನು ಒಂದು ಗಂಟೆ ನೆನೆಸಿ ಚಿಟಿಕೆ ಅರಿಶಿನ, ಉಪ್ಪು ಹಾಕಿಕೊಂಡು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ತಟ್ಟಿ ಇಟ್ಟ ವಡೆಯನ್ನು ಈ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಯಲ್ಲಿ ಎರಡೂ ಬದಿ ಕೆಂಪಗಾಗುವಂತೆ ಬೇಯಿಸಿ. ತುಪ್ಪ ಹಾಕಿ ತಿನ್ನಲು ತುಂಬಾ ರುಚಿ.

*

ಊಟದ ಸವಿ ಹೆಚ್ಚಿಸುವ ಸಾರು

ಬೇಕಾಗುವ ಸಾಮಗ್ರಿ:
ಹಲಸಿನ ಬೀಜ 6–7, ಒಣ ಮೆಣಸು 5, ಕೊತ್ತಂಬರಿ 1 ಚಮಚ, ಜೀರಿಗೆ 1/4 ಚಮಚ, ಉದ್ದಿನ ಬೇಳೆ 1/2 ಚಮಚ, ಮೆಂತ್ಯೆ 1/4 ಚಮಚ, ಇಂಗು ಕಡಲೆ ಗಾತ್ರ, ಅರಸಿನ 1/4 ಚಮಚ, ತೆಂಗಿನ ತುರಿ 1/4 ಕಪ್, ಹುಣಸೆ ಹಣ್ಣು ನೆಲ್ಲಿಕಾಯಿ ಗಾತ್ರ, ಬೆಲ್ಲ 1/2 ಚಮಚ, ಹಸಿಮೆಣಸು 3, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಕರಿಬೇವು 1 ಕಂತೆ, ಸಾಸಿವೆ 1  ಚಮಚ, ಒಣಮೆಣಸು 1, ತೆಂಗಿನೆಣ್ಣೆ 2 ಚಮಚ.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ಕೆಂಡದಲ್ಲಿ ಸುಟ್ಟು ಇಲ್ಲವೇ ನೀರು ಹಾಕಿ ಬೇಯಿಸಿ. ಒಣ ಮೆಣಸು, ಕೊತ್ತಂಬರಿ, ಜೀರಿಗೆ, ಉದ್ದಿನಬೇಳೆ, ಮೆಂತ್ಯೆ, ಎಣ್ಣೆ, ಇಂಗು ಎಲ್ಲ ಒಟ್ಟಿಗೆ ಹಾಕಿ ಕೆಂಪಗೆ ಹುರಿದು ಸ್ವಲ್ಪ ಅರಿಶಿನ, ತೆಂಗಿನ ತುರಿ ಹಾಕಿ ಬೆಂದ ಹಲಸಿನ ಬೀಜ, ಹುಣಸೆಹಣ್ಣು ಹಾಕಿ ರುಬ್ಬಿ. ಬೇಕಷ್ಟು ತೆಳ್ಳಗೆ ಮಾಡಿ ಉಪ್ಪು, ಬೆಲ್ಲ ಹಾಕಿ ಕುದಿಸಿ ಒಗ್ಗರಣೆ ಕೊಡಿ.

*

ಪಾಯಸದ ಹಿಗ್ಗು

ಬೇಕಾಗುವ ಸಾಮಗ್ರಿ:
ಸುಲಿದು ಬಿಳಿ ಮಾಡಿದ ಹಲಸಿನ ಬೀಜ 2 ಕಪ್, ಬೆಲ್ಲ 1/4 ಕೆ. ಜಿ., ತೆಂಗಿನಕಾಯಿ 1, ಉಪ್ಪು ಚಿಟಿಕೆ, ಏಲಕ್ಕಿ ಪುಡಿ 1 ಚಮಚ.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ಚೆನ್ನಾಗಿ ಬೇಯಿಸಿ ನುಣ್ಣಗೆ ರುಬ್ಬಿ. ಅದಕ್ಕೆ ತೆಂಗಿನಕಾಯಿ ಹಾಲು, ಬೆಲ್ಲ, ಉಪ್ಪು ಹಾಕಿ ಬೇಕಾದಷ್ಟು ದಪ್ಪ ಮಾಡಿ ಕುದಿಸಿ ಏಲಕ್ಕಿ ಪುಡಿ ಹಾಕಿ ಇಳಿಸಿ.

*

ಹೊಸ ಬಗೆಯ ಜಾಮೂನು

ಬೇಕಾಗುವ ಸಾಮಗ್ರಿ:
ಹಲಸಿನ ಬೀಜ 1 ಕಪ್, ಮೈದಾ 4 ಚಮಚ, ಹಾಲಿನ ಪುಡಿ 3 ಚಮಚ, ಅಡುಗೆ ಸೋಡಾ 2 ಚಿಟಿಕೆ, ಸಕ್ಕರೆ 2 ಕಪ್, ಏಲಕ್ಕಿ ಪುಡಿ 1/4 ಚಮಚ, ತುಪ್ಪ 1 ಕಪ್.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ಚೆನ್ನಾಗಿ ಬೇಯಿಸಿ. ನೀರು ಬಸಿದು ನುಣ್ಣಗೆ ರುಬ್ಬಿ. ಮೈದಾ, ಹಾಲಿನ ಪುಡಿ ಮತ್ತು ಸೋಡಾ ಬೆರಸಿ ಹದ ಮಾಡಿ. ಕೈಗೆ ತುಪ್ಪದ ಪಸೆ ಮಾಡಿಕೊಂಡು ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿ. ಸಕ್ಕರೆಗೆ ಒಂದು ಕಪ್ ನೀರು ಹಾಕಿ ಒಲೆಯ ಮೇಲಿಟ್ಟು ಎಳೆ ಪಾಕ ಮಾಡಿ, ಏಲಕ್ಕಿ ಪುಡಿ ಹಾಕಿ ಇಳಿಸಿ. ಮಾಡಿಟ್ಟ ಉಂಡೆಗಳನ್ನು ತುಪ್ಪದಲ್ಲಿ ಕಂದು ಬಣ್ಣ ಬರುವಷ್ಟು ಸಣ್ಣ ಉರಿಯಲ್ಲಿ ಕರಿದು ಸಕ್ಕರೆ ಪಾಕಕ್ಕೆ ಹಾಕಿ. ಸ್ವಲ್ಪ ಆರಿದ ಮೇಲೆ ತಿನ್ನಲು ರುಚಿ.

*

ಚಿಣ್ಣರ ನೆಚ್ಚಿನ ಚಕ್ಕುಲಿ

ಬೇಕಾಗುವ ಸಾಮಗ್ರಿ:
ಹಲಸಿನ ಬೀಜ 2 ಕಪ್, ಮೈದಾ 2 ಕಪ್, ಜೀರಿಗೆ 2 ಚಮಚ, ಎಣ್ಣೆ 1/2 ಲೀಟರ್, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ನೀರು ಹಾಕಿ ಚೆನ್ನಾಗಿ ಬೇಯಿಸಿ. ಮೈದಾ ಹಿಟ್ಟನ್ನು ಒಂದು ಬಟ್ಟೆಯಲ್ಲಿ ಗಂಟು ಬಿಗಿದು ಉಗಿಯಲ್ಲಿ ಒಂದು ಗಂಟೆ ಬೇಯಿಸಿ. ಬೆಂದ ಹಲಸಿನ ಬೀಜವನ್ನು ನುಣ್ಣಗೆ ರುಬ್ಬಿ. ಮೈದಾವನ್ನು ಕೈಯಿಂದ ಪುಡಿ ಮಾಡಿ ಗಾಳಿಸಿ, ಹಲಸಿನ ಬೀಜದ ಹಿಟ್ಟಿಗೆ ಹಾಕಿ. ಉಪ್ಪು, ಜೀರಿಗೆ, ಕಾದ ಎಣ್ಣೆ ನಾಲ್ಕು ಚಮಚ ಮತ್ತು ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಷ್ಟು ಗಟ್ಟಿ ಕಲಸಿ ಹದ ಮಾಡಿ. ಎಣ್ಣೆ ಕಾಯಲಿಟ್ಟು ಚಕ್ಕುಲಿ ಒರಳಿನಲ್ಲಿ ಒತ್ತಿ ಕರಿದು ತೆಗೆಯಿರಿ.

*

ಹಲಸಿನ ಬೀಜವನ್ನು ಕಾಪಿಡುವ ವಿಧಾನ

ಹಲಸಿನ ಹಣ್ಣಿನಿಂದ ಬೀಜವನ್ನು ಬೇರ್ಪಡಿಸಿ ತೊಳೆದು ಇಡಿ. ಮಾರನೇ ದಿನ ಮಣ್ಣಿಗೆ ಸ್ವಲ್ಪ ನೀರು ಹಾಕಿ ಕಲಸಿ ಬೀಜಕ್ಕೆ ಉಜ್ಜಿ ತಣ್ಣಗಿನ ಜಾಗದಲ್ಲಿ ಇಟ್ಟರೆ ಒಂದು ವರುಷದವರೆಗೂ ಉಳಿಯುತ್ತದೆ. ಬೇಕಾದಾಗ ತೆಗೆದು ಅಡುಗೆಗೆ ಬಳಸಬಹುದು ಅಥವಾ ಹಲಸಿನ ಬೀಜವನ್ನು ಮಣ್ಣಿನ ಹಂಡೆಯಲ್ಲಿ ಇಲ್ಲವೇ ಪ್ಲಾಸ್ಟಿಕ್ ಡ್ರಂನಲ್ಲಿ ಹಾಕಿ ‘ಎಂಜಿರು ಸೊಪ್ಪು’ ಮಿಶ್ರ ಮಾಡಿ ಇಟ್ಟರೂ ಹಲವು ಸಮಯದವರೆಗೆ ಹಾಳಾಗದೆ ಉಳಿಯುತ್ತದೆ.

*-ಸಹನಾ ಕಾಂತಬೈಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry