7

ವೇದ: ಎಲ್ಲ ಕಾಲದ ತಿಳಿವು

Published:
Updated:
ವೇದ: ಎಲ್ಲ ಕಾಲದ ತಿಳಿವು

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’. ಈ ಗಾದೆಯನ್ನು ನಾವು ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿರುತ್ತೇವೆ, ಅಥವಾ ಆಡಿರುತ್ತೇವೆ.  ದಿಟ, ಮೇಲ್ನೋಟಕ್ಕೆ ಇದು ಗಾದೆಯ ಸಾರ್ವಕಾಲಿಕತೆಯನ್ನು ಎತ್ತಿಹಿಡಿದಿರುವ ಮಾತು ಎನಿಸುವುದು. ಹೌದು, ಇದು ನಿಜ. ಆದರೆ ಇದರ ಜೊತೆಗೆ ಈ ಮಾತು ವೇದದ ಸಾರ್ವಕಾಲಿಕತೆಯನ್ನೂ ಎತ್ತಿಹಿಡಿದಿದೆ. ವೇದದ ಮಾತು ಎಂದಿಗೂ ಸುಳ್ಳಾಗದು ಎಂಬ ನಂಬಿಕೆಯ ಮೇಲೆಯೇ ಈ ಗಾದೆಯ ‘ಸತ್ಯ’ ನಿಂತಿದೆ. ‘ವೇದ’ ಎಂದರೆ ಎಂದಿಗೂ ಬದಲಾಗದ ಅರಿವು, ತಿಳಿವಳಿಕೆ, ಜ್ಞಾನ – ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಗಾಢವಾಗಿದೆ. ಈ ಗಾದೆಯಲ್ಲೂ ಅದು ಸ್ಪಷ್ಟವಾಗಿಯೇ ಇದೆ. ‘ನಿನ್ನ ಮಾತೇನು ವೇದವಾಕ್ಯವಾ?’ – ಎಂಬ ಮಾತನ್ನು ಆಗಾಗ ಬಳಸುವುದುಂಟು.  ವೇದ ಎನ್ನುವುದು ಎಂದಿಗೂ ಉಲ್ಲಂಘಿಸಲಾಗದ ‘ಮಾತು’ ಎನ್ನುವ ಧ್ವನಿ ಈ ವಾಕ್ಯದಲ್ಲಿದೆ. ಅಷ್ಟೆ ಅಲ್ಲ, ಭಾರತದಲ್ಲಿ ನಾವು ಯಾವುದೇ ವಿದ್ಯೆ, ಕಲೆ, ತಿಳಿವಳಿಕೆ, ಆಚರಣೆ ಗಳನ್ನು ಕುರಿತು ಮಾತನಾಡುವಾಗಲೂ ಅವನ್ನು ವೇದದೊಂದಿಗೆ – ನೇರವಾಗಿಯೋ ಬಳಸಾಗಿಯೋ – ಸಂಬಂಧವನ್ನು ಕಲ್ಪಿಸುತ್ತೇವೆ. ಇಷ್ಟಕ್ಕೂ ‘ವೇದ’ ಎಂದರೇನು?‘ವೇದ’ ಎನ್ನುವುದನ್ನು ಸರಳವಾಗಿ ವಿವರಿಸಬೇಕು ಎಂದರೆ ಅದನ್ನು ‘ಜ್ಞಾನ’; ‘ಅರಿವು’; ‘ತಿಳಿವಳಿಕೆ’ – ಎನ್ನಬಹುದು. ಒಂದು ವಿಧದಲ್ಲಿ, ಗಾದೆಯ ತಿಳಿವಳಿಕೆಗೂ ವೇದದ ಅರಿವಿಗೂ ಸಂಬಂಧವಿದೆಯೆನ್ನಿ! ಅದು ಹೇಗೆ? ಹೇಗೆಂದರೆ – ಮೊದಲಿಗೆ ಗಾದೆ ಎಂದರೇನು?  ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು. ಒಂದು ಸಮುದಾಯ ತನ್ನ ಅನುಭವದ ಹಿನ್ನೆಲೆಯಲ್ಲಿ ಪಡೆದುಕೊಳ್ಳುವ ತಿಳಿವಳಿಕೆಯೇ ‘ಗಾದೆ’.  ಉದಾಹರಣೆಗೆ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ – ಈ ಗಾದೆಯನ್ನೇ ನೋಡಬಹುದು. ಹಲವು ಸಂಸಾರಗಳನ್ನೂ, ಹಲವರು ಅತ್ತೆಯಂದಿರನ್ನೂ ಸೊಸೆಯಂದಿರನ್ನೂ, ಹಲವು ವರ್ಷಗಳ ಚಕ್ರದಲ್ಲಿ ಕಂಡು, ಅದು ಒದಗಿಸುವ ಅನುಭವದಲ್ಲಿ ಮೂಡಿದ ತಿಳಿವಳಿಕೆಯೊಂದು ಈ ಗಾದೆಯ ಗರ್ಭದಲ್ಲಿ ಬೀಜರೂಪದಲ್ಲಿ ಅಡಗಿದೆ. ಹೀಗೆಯೇ ವೇದದ ಅರಿವು ಕೂಡ ಅನುಭವದಲ್ಲಿಯೇ ದಕ್ಕಿರುವಂಥದ್ದಾಗಿರುತ್ತದೆ. ಆದರೆ ವೇದದ  ಅರಿವು ಸಮುದಾಯದ ಅರಿವಿಗಿಂತಲೂ ವ್ಯಕ್ತಿನಿಷ್ಠವಾಗಿರುತ್ತದೆ. ವ್ಯಕ್ತಿಯೊಬ್ಬ ಏಕಾಗ್ರತೆಯಿಂದ ಜಗತ್ತಿನ ರಹಸ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅವನೊಳಗೆ ಮೂಡುವ ಅರಿವೇ ‘ವೇದ’ ಎನಿಸಿಕೊಳ್ಳುತ್ತದೆ. ಅವನ ಈ ಏಕಾಗ್ರತೆಯೇ ‘ತಪಸ್ಸು’; ಹೀಗೆ ತಪಸ್ಸಿನಲ್ಲಿ ನಿರತನಾಗಿ ಅರಿವನ್ನು ಪಡೆಯುವ ವ್ಯಕ್ತಿಯೇ ‘ಋಷಿ’ ಎನಿಸಿಕೊಳ್ಳುತ್ತಾನೆ. ಋಷಿಯಾದವನು ತಾನು ಕಂಡ ಅರಿವನ್ನು ಮಾತಿನ ಮೂಲಕ ವ್ಯಕ್ತಪಡಿಸಿದಾಗ ಅದು ‘ಮಂತ್ರ’ ಎನಿಸಿಕೊಳ್ಳುತ್ತದೆ. ಹೀಗೆ ವೇದ, ಜ್ಞಾನ, ಋಷಿ, ತಪಸ್ಸು – ಇವುಗಳ ನಡುವೆ ನೇರ ನಂಟಿದೆಯೆನ್ನಿ!

ವೇದದ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ನೋಡೋಣ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry