7
ಆಳ–ಅಗಲ

ಐಎಸ್‌ನಿಂದ ಪಾರಾದ ಸುಹಯ್ಲಾಳ ಕಥೆ

Published:
Updated:
ಐಎಸ್‌ನಿಂದ ಪಾರಾದ ಸುಹಯ್ಲಾಳ ಕಥೆ

ಷರಿಯಾ ಶಿಬಿರ, ಇರಾಕ್: ಹದಿನಾರು ವರ್ಷ ವಯಸ್ಸಿನ ಆ ಯುವತಿ ನೆಲಹಾಸಿನ ಒಂದು ಕಡೆ ಕುಳಿತಿದ್ದಳು. ಆಕೆಗೆ ತನ್ನ ತಲೆ ಎತ್ತಲು ಆಗುತ್ತಿರಲಿಲ್ಲ. ಆಕೆಯ ಸಂಬಂಧಿ (ತಂದೆಯ ಸಹೋದರ), ನೀರು ಕುಡಿಸಲು ಆಕೆಯನ್ನು ಎತ್ತಿದರು. ಆಕೆಯ ಧ್ವನಿ ಕ್ಷೀಣವಾಗಿತ್ತು. ಆಕೆ ಮಾತನಾಡುವುದನ್ನು ಕೇಳಿಸಿಕೊಳ್ಳಲು ಆ ಸಂಬಂಧಿ ಆಕೆಯ ಬಾಯಿಗೆ ತನ್ನ ಕಿವಿಯಿಡಬೇಕು.

ಸೌಹಾಯ್ಲಾ ಎನ್ನುವ ಹೆಸರಿನ ಈ ಹುಡುಗಿಯು ಮೊಸುಲ್‌ ನಗರದ ಅತಿ ಹೆಚ್ಚು ನಾಶವಾದ ಪ್ರದೇಶದಿಂದ ಇದೇ ತಿಂಗಳಲ್ಲಿ ಬಂಧಮುಕ್ತಳಾಗಿ ಬಂದಿದ್ದಾಳೆ. ಆಕೆಯನ್ನು ಬಂಧನದಲ್ಲಿ ಇರಿಸಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್‌ನ (ಐಎಸ್‌) ವ್ಯಕ್ತಿ ವೈಮಾನಿಕ ದಾಳಿಯಲ್ಲಿ ಹತನಾಗಿದ್ದಾನೆ. ಮೂರು ವರ್ಷಗಳ ಬಂಧನ ಹಾಗೂ ಸರಣಿ ಅತ್ಯಾಚಾರಗಳಿಂದ ಆಕೆ ಮುಕ್ತಳಾಗಿದ್ದಾಳೆ. ಆಕೆ ‘ಆಘಾತಕ್ಕೆ’ ಒಳಗಾದ ಸ್ಥಿತಿಯಲ್ಲಿ ಇದ್ದಾಳೆ ಎಂದು ಆಕೆಯ ತಂದೆಯ ಸಹೋದರ ವಿವರಿಸಿದರು. ಭಯೋತ್ಪಾದಕ ಸಂಘಟನೆ ನಡೆಸುವ ಲೈಂಗಿಕ ದೌರ್ಜನ್ಯವು ತನ್ನ ಸಹೋದರನ ಮಗಳಿಗೆ ಏನು ಮಾಡಿದೆ ಎಂಬುದನ್ನು ಪತ್ರಕರ್ತರು ದಾಖಲಿಸಲಿ ಎಂಬ ಉದ್ದೇಶದಿಂದ ಈತ ವರದಿಗಾರರನ್ನು ಸೌಹಾಯ್ಲಾ ಮಲಗಿದ್ದ ಜಾಗಕ್ಕೆ ಆಹ್ವಾನಿಸಿದ್ದ.

‘ನಮ್ಮ ಜನರಿಗೆ ಅವರು ಇಷ್ಟೆಲ್ಲ ಕಷ್ಟ ಕೊಟ್ಟಿದ್ದಾರೆ’ ಎಂದರು ಖಾಲಿದ್ ಟಾಲೊ (ಸೌಹಾಯ್ಲಾ ತಂದೆಯ ಸಹೋದರ).

ಮೊಸುಲ್ ನಗರವನ್ನು ಮರುವಶ ಮಾಡಿಕೊಳ್ಳುವ ಕಾರ್ಯಾಚರಣೆ ಕಳೆದ ವರ್ಷ ಆರಂಭವಾದ ನಂತರ, ಇಸ್ಲಾಮಿಕ್ ಸ್ಟೇಟ್ ವಶದಲ್ಲಿದ್ದ ಯಾಜಿದಿ ಎಂಬ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯದ ಅಂದಾಜು 180 ಜನ ಮಹಿಳೆಯರು, ಹುಡುಗಿಯರು ಹಾಗೂ ಮಕ್ಕಳು ಬಂಧಮುಕ್ತರಾಗಿದ್ದಾರೆ ಎನ್ನುತ್ತದೆ ಅಪಹರಣಕ್ಕೆ ಒಳಗಾದವರನ್ನು ರಕ್ಷಿಸುವ ಇರಾಕ್‌ನ ವಿಭಾಗದ ದಾಖಲೆಗಳು.

ತಮ್ಮ ಪೂರ್ವಜರಿಂದ ಬಂದ ತಾಯ್ನಾಡನ್ನು ಐಎಸ್‌ ಸಂಘಟನೆಯು ಸ್ವಾಧೀನಕ್ಕೆ ತೆಗೆದುಕೊಂಡ ಮೊದಲ ಎರಡು ವರ್ಷಗಳ ಅವಧಿಯಲ್ಲಿ ರಕ್ಷಿಸಲಾದ ಮಹಿಳೆಯರು ಸೋಂಕುಪೀಡಿತರಾಗಿ, ಕೈಕಾಲು ಮುರಿದ ಸ್ಥಿತಿಯಲ್ಲಿ, ಆತ್ಮಹತ್ಯೆಯ ಆಲೋಚನೆಗಳೊಂದಿಗೆ ಮನೆಗಳಿಗೆ ಮರಳಿದ್ದಾರೆ. ಆದರೆ, ಪತ್ರಕರ್ತರು ಕಳೆದ ವಾರ ಭೇಟಿ ಮಾಡಿದ ಸೌಹಾಯ್ಲಾ ಹಾಗೂ ಇತರ ಇಬ್ಬರು ಹೆಣ್ಣುಮಕ್ಕಳ ಸ್ಥಿತಿ ಇನ್ನೂ ಕೆಟ್ಟದ್ದಾಗಿದೆ. ಅವರ ಮನಸ್ಸಿಗೆ ಅಸಾಮಾನ್ಯ ಎನ್ನುವಂತಹ ಗಾಯಗಳಾಗಿವೆ.

‘ಇವರು ತೀರಾ ಸೋತುಹೋಗಿದ್ದಾರೆ’, ‘ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ’, ‘ತೀರಾ ಆಘಾತಕ್ಕೆ ಒಳಗಾಗಿದ್ದಾರೆ, ಮಾನಸಿಕವಾಗಿ ನೊಂದಿದ್ದಾರೆ’ ಎಂಬ ಪದಗಳನ್ನು ಡಾ. ನಘಂ ನವ್ಜಾತ್ ಹಸನ್ ಅವರು ಈ ಮಹಿಳೆಯರ ಸ್ಥಿತಿ ವಿವರಿಸುವಾಗ ಬಳಸಿದರು. ಹಸನ್ ಅವರು ಯಾಜಿದಿ ಸಮುದಾಯಕ್ಕೆ ಸೇರಿದ ಸ್ತ್ರೀರೋಗತಜ್ಞ, ಇವರು ಅತ್ಯಾಚಾರಕ್ಕೆ ಒಳಗಾದ ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ.

‘ಮೊದಲು ಬಂದ ಪ್ರಕರಣಗಳು ತುಸು ಕಷ್ಟವಾಗಿದ್ದವು ಎಂದು ನಾವು ಭಾವಿಸಿದ್ದೆವು’ ಎಂದರು ಡಾ. ಹಸನ್. ‘ಆದರೆ ಮೊಸುಲ್ ನಗರ ಐಎಸ್‌ ಹಿಡಿತದಿಂದ ಮುಕ್ತವಾದ ನಂತರ ಬಂದ ಪ್ರಕರಣಗಳು ತೀರಾ ಕ್ಲಿಷ್ಟವಾಗಿವೆ’ ಎಂದರು.

ಮಹಿಳೆಯರು ಹಾಗೂ ಬಾಲಕಿಯರು ದಿನಗಳಗಟ್ಟಲೆ ನಿದ್ರೆ ಮಾಡುತ್ತಾರೆ. ಎಚ್ಚರವಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ ಅನಿಸುತ್ತಿದೆ. ಆಘಾತವು ಅವರಲ್ಲಿ ಈ ರೀತಿ ವ್ಯಕ್ತವಾಗುತ್ತಿದೆ ಎಂದರು ಅಪಹರಣಕ್ಕೆ ಒಳಗಾದವರನ್ನು ರಕ್ಷಿಸುವ ವಿಭಾಗದ ನಿರ್ದೇಶಕ ಹುಸೇನ್ ಖೈದಿ. ‘ಉಗ್ರರ ಹಿಡಿತದಿಂದ ಹೊರಬರುತ್ತಿರುವ ಶೇಕಡ 90ರಷ್ಟು ಮಹಿಳೆಯರ ಸ್ಥಿತಿ ಹೀಗಿದೆ. ಕನಿಷ್ಠಪಕ್ಷ, ಬಂಧಮುಕ್ತರಾದ ಕೆಲವು ಸಮಯದವರೆಗೆ ಅವರು ಹೀಗೆಯೇ ಇರುತ್ತಾರೆ’ ಎಂದರು ಅವರು.

ಯಾಜಿದಿ ಸಮುದಾಯ ಅನುಭವಿಸುತ್ತಿರುವ ಸಂಕಟಗಳ ಬಗ್ಗೆ ಬೆಳಕು ಚೆಲ್ಲಲು ನೆರವಾಗಲಿ ಎಂಬ ಉದ್ದೇಶದಿಂದ ತಮ್ಮ ಗುರುತನ್ನು ಇತರರಿಗೆ ತಿಳಿಸುವಂತೆ, ತಮ್ಮ ಭಾವಚಿತ್ರ ತೆಗೆದುಕೊಳ್ಳುವಂತೆ ಸೌಹಾಯ್ಲಾ ಹಾಗೂ ಆಕೆಯ ಕುಟುಂಬ ಸದಸ್ಯರು ಹೇಳಿದರು. ಸೌಹಾಯ್ಲಾ ಅವರಿಗೆ ಐಎಸ್‌ ಸಂಘಟನೆ ಏನು ಮಾಡಿದೆ ಎಂಬುದರ ವಿವರ ಬರೆದು, ಆಕೆಯ ತಂದೆಯ ಸಹೋದರ ಆಕೆಯ ಭಾವಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ತನ್ನ ಸಹೋದರನ ಮಗಳು ಎಲ್ಲಿದ್ದಳು, ಆಕೆಯನ್ನು ಹಿಡಿದಿಟ್ಟುಕೊಂಡಿದ್ದ ಐಎಸ್‌ನ ಹೋರಾಟಗಾರನ ಹೆಸರು ತಮಗೆ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಗೊತ್ತಿತ್ತು ಎಂದರು ಟಾಲೊ. ಟಾಲೊ ಅವರು ಕಳ್ಳಸಾಗಣೆದಾರನೊಬ್ಬನ ಸಹಾಯ ಪಡೆದಿದ್ದರು. ಈ ಕಳ್ಳಸಾಗಣೆದಾರ ದೊಡ್ಡ ಸವಾಲೊಂದನ್ನು ಮೈಮೇಲೆ ಎಳೆದುಕೊಂಡು, ಸೌಹಾಯ್ಲಾಳ ಭಾವಚಿತ್ರವನ್ನು ಆಕೆಯನ್ನು ಸೆರೆಹಿಡಿದು ಇಟ್ಟಿದ್ದ ಮನೆಯಿಂದಲೇ ಕ್ಲಿಕ್ಕಿಸಿ, ಅದನ್ನು ಆಕೆಯ ಕುಟುಂಬದವರಿಗೆ ಕಳುಹಿಸಿದ್ದ.

ಆದರೆ ಆಕೆಯನ್ನು ರಕ್ಷಿಸಿ, ಕರೆತರಲು ಯತ್ನಿಸುವುದು ತೀರಾ ಅಪಾಯಕಾರಿ ಆಗಿತ್ತು.

ಸೌಹಾಯ್ಲಾಳನ್ನು ಬಂಧಿಸಿ ಇಟ್ಟಿದ್ದ ಮನೆಯ ಗೋಡೆ ವೈಮಾನಿಕ ದಾಳಿಯೊಂದರಲ್ಲಿ ಕುಸಿದುಬಿತ್ತು. ಈ ವೇಳೆ ಆಕೆಯ ಜೊತೆಯಿದ್ದ ಇನ್ನೊಬ್ಬಳು ಯಾಜಿದಿ ಬಾಲಕಿ ಹಾಗೂ ಬಂಧನದಲ್ಲಿ ಇಟ್ಟುಕೊಂಡು, ದೌರ್ಜನ್ಯ ನಡೆಸಿದ್ದ ವ್ಯಕ್ತಿ ಜೀವ ಕಳೆದುಕೊಂಡರು. ಇದಾದ ಎರಡು ದಿನಗಳ ನಂತರ, ಅಂದರೆ ಜುಲೈ 9ರಂದು ಸೌಹಾಯ್ಲಾ ಅಲ್ಲಿಂದ ತಪ್ಪಿಸಿಕೊಂಡಳು ಎಂದರು ಟಾಲೊ.

ಆ ಸಂದರ್ಭದಲ್ಲಿ, ಅವಶೇಷಗಳಿಂದ ಎದ್ದು ಹೊರಗೆ ಬರುವಷ್ಟು, ಇರಾಕ್ ವಶದಲ್ಲಿದ್ದ ಮೊದಲ ಚೆಕ್‌ಪೋಸ್ಟ್‌ವರೆಗೆ ಬರುವಷ್ಟು ಶಕ್ತಿ ಸೌಹಾಯ್ಲಾಳಲ್ಲಿ ಇತ್ತು.

ಆಕೆಯನ್ನು ಕರೆದುಕೊಂಡು ಬರಲು ಕುಟುಂಬದ ಸದಸ್ಯರು ಅಲ್ಲಿಗೆ ಹೋದಾಗ, ಆಕೆ ಅವರನ್ನು ಅಪ್ಪಿಕೊಳ್ಳಲು ಓಡಿದಳು.

‘ನಾನು ಅವಳತ್ತ ಓಡಿದೆ. ಅವಳು ನನ್ನತ್ತ ಓಡಿಬಂದಳು. ನಾವಿಬ್ಬರೂ ಅಳಲು ಆರಂಭಿಸಿದೆವು. ನಂತರ ನಾವಿಬ್ಬರೂ ನಗಾಡಲು ಆರಂಭಿಸಿದೆವು’ ಎಂದರು ಟಾಲೊ. ಇವರ ಹುಟ್ಟೂರನ್ನು ಇಸ್ಲಾಮಿಕ್ ಸ್ಟೇಟ್‌ ವಶಪಡಿಸಿಕೊಂಡ ದಿನದಿಂದ ಈಕೆಯ ತಂದೆ ನಾಪತ್ತೆಯಾಗಿದ್ದಾರೆ. ‘ನಾವಿಬ್ಬರೂ ಒಬ್ಬರನ್ನೊಬ್ಬರು ಹಿಡಿದುಕೊಂಡು ಹಾಗೆಯೇ ನಿಂತಿದ್ದೆವು. ಆಗಾಗ ಅಳುತ್ತಿದ್ದೆವು, ನಗಾಡುತ್ತಿದ್ದೆವು. ನಂತರ ನೆಲದ ಮೇಲೆ ಬಿದ್ದೆವು’ ಎಂದರು ಟಾಲೊ. ಆದರೆ ಕೆಲವೇ ಗಂಟೆಗಳ ನಂತರ ಸೌಹಾಯ್ಲಾ ಮಾತನಾಡುವುದನ್ನು ನಿಲ್ಲಿಸಿದಳು.

ಇವರ ಹಳ್ಳಿಯನ್ನು ಐಎಸ್‌ ಉಗ್ರರು ವಶಕ್ಕೆ ಪಡೆದ ನಂತರ ಈಕೆಯ ತಾಯಿ ಹಾಗೂ ಕುಟುಂಬದ ಇತರ ಸದಸ್ಯರು ಶಿಬಿರವೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಗೆ ತಲುಪುವ ವೇಳೆಗೆ ಸೌಹಾಯ್ಲಾ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಳು. ಮೂತ್ರನಾಳ, ಮೂತ್ರಕೋಶದ ಸೋಂಕಿಗೆ ಸಂಬಂಧಿಸಿದ ಔಷಧ ತೆಗೆದುಕೊಳ್ಳುವಂತೆ ಅವಳನ್ನು ಪರೀಕ್ಷಿಸಿರುವ ವೈದ್ಯರು ಸೂಚಿಸಿದ್ದಾರೆ.

ಅವಳಲ್ಲಿ ಅಪೌಷ್ಟಿಕತೆಯ ಲಕ್ಷಣಗಳೂ ಕಾಣಿಸುತ್ತಿವೆ. ಆದರೆ ಇವೆರಡೂ ಆಕೆಯ ಪರಿಸ್ಥಿತಿಯ ತೀವ್ರತೆಯನ್ನು ವಿವರಿಸುವುದಿಲ್ಲ ಎನ್ನುತ್ತಾರೆ ಕುಟುಂಬದ ಸದಸ್ಯರು ಹಾಗೂ ಆಕೆಯನ್ನು ಪರೀಕ್ಷಿಸಿರುವ ವೈದ್ಯರೊಬ್ಬರು.

‘ಮನೆಗೆ ವಾಪಸ್ ಆಗಿರುವುದಕ್ಕೆ ಸಂತೋಷವಾಗಿದೆ’ ಎಂದು ಸೌಹಾಯ್ಲಾ, ಟಾಲೊ ಅವರ ಕಿವಿಯಲ್ಲಿ ಉಸುರಿದಳು – ತೀರಾ ಕಷ್ಟದಿಂದ. ‘ಆದರೆ ನಾನು ಆರೋಗ್ಯದಿಂದ ಇಲ್ಲ’ ಎಂದೂ ಹೇಳಿದಳು.

ಮೊಸುಲ್ ನಗರವು 2014ರಲ್ಲಿ ಎರಡು ತಿಂಗಳ ಕಾಲ ಐಎಸ್‌ ಆಡಳಿತದಲ್ಲಿ ಇತ್ತು. ಆಗ ಆ ಸಂಘಟನೆಯ ನಾಯಕರಿಗೆ 60 ಮೈಲು ಉದ್ದದ ಸಿಂಜಾರ್ ಪಟ್ಟಣದ ಮೇಲೆ ಕಣ್ಣುಬಿತ್ತು. ಅಲ್ಲಿನ ಇಳಿಜಾರು ಪ್ರದೇಶಗಳು, ಬೆಟ್ಟದ ತಪ್ಪಲಿನ ಹಳ್ಳಿಗಳು ಯಾಜಿದಿ ಸಮುದಾಯದ ನೆಲೆಗಳು. ಯಾಜಿದಿ ಎಂಬುದು ತೀರಾ ಸಣ್ಣದಾದ ಒಂದು ಸಮುದಾಯ. ಈ ಸಮುದಾಯದವರ ಸಂಖ್ಯೆ ಇರಾಕ್‌ನ ಒಟ್ಟು ಜನಸಂಖ್ಯೆ 3.8 ಕೋಟಿಯ ಶೇಕಡ 2ರಷ್ಟು ಇದೆ.

ಶತಮಾನಗಳಷ್ಟು ಹಳೆಯದಾಗಿರುವ ಯಾಜಿದಿಗಳ ಧರ್ಮವು ಏಕದೇವತೋಪಾಸನೆ ಆಧರಿಸಿದೆ. ಇವರ ದೇವರು ಏಳು ಜನ ಪವಿತ್ರ ಕಿನ್ನರರನ್ನು ಸೃಷ್ಟಿಸಿದ್ದಾನಂತೆ. ಈ ಕಾರಣದಿಂದಾಗಿ ಐಎಸ್‌ ಉಗ್ರರು ಯಾಜಿದಿಗಳನ್ನು ಬಹುದೇವತೋಪಾಸಕರು ಎಂದು ಕರೆದರು. ಐಎಸ್‌ ಸಂಘಟನೆಯವರಿಂದ ಈ ರೀತಿ ಕರೆಸಿಕೊಳ್ಳುವುದು ತೀರಾ ಅಪಾಯಕಾರಿ.

ಹೆಚ್ಚಿನ ಜನರಿಗೆ ತಿಳಿದಿರದ ಹಾಗೂ ಬಹುತೇಕ ಚಲಾವಣೆಯಲ್ಲಿ ಇಲ್ಲದ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲೇಖಿಸಿ ಐಎಸ್‌ ಸದಸ್ಯರು, ‘ಯಾಜಿದಿಗಳು ತಮ್ಮ ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಗುಲಾಮಗಿರಿಗೆ ಅರ್ಹರಾಗಿದ್ದಾರೆ’ ಎಂದರು.

2014ರ ಆಗಸ್ಟ್‌ 3ರಂದು ಹೋರಾಟಗಾರರ ಗುಂಪುಗಳು ಯಾಜಿದಿಗಳ ನೆಲೆಗಳನ್ನು ವಶಕ್ಕೆ ಪಡೆದವು. ಮೊದಲು ವಶಕ್ಕೆ ಸಿಕ್ಕ ಪಟ್ಟಣ, ತಗ್ಗಾದ ಮೇಲ್ಚಾವಣಿ ಮನೆಗಳಿರುವ, ಹುಲ್ಲಿನ ಪ್ರದೇಶಗಳಿಂದ ಸುತ್ತುವರಿದಿರುವ ಟಿಲ್ ಕಸಬ್.

ಆಗ 13 ವರ್ಷ ವಯಸ್ಸಿನವಳಾಗಿದ್ದ ಸೌಹಾಯ್ಲಾ ಅಲ್ಲಿ ವಾಸವಾಗಿದ್ದಳು.

ಸೌಹಾಯ್ಲಾ ಸೇರಿದಂತೆ ಪರ್ವತ ಪ್ರದೇಶಗಳಲ್ಲಿದ್ದ 6,470 ಯಾಜಿದಿಗಳನ್ನು ಅಪಹರಿಸಲಾಯಿತು ಎನ್ನುತ್ತಾರೆ ಇರಾಕಿನ ಅಧಿಕಾರಿಗಳು. ಮೂರು ವರ್ಷಗಳ ನಂತರ, ಅಂದರೆ ಈ ಹೊತ್ತಿನಲ್ಲಿ, 3,410 ಜನ ಇನ್ನೂ ಬಂಧನದಲ್ಲಿ ಇದ್ದಾರೆ ಅಥವಾ ಅವರು ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ ಎನ್ನುತ್ತಾರೆ ಖೈದಿ.

ಬಂಧನದಲ್ಲಿ ಇದ್ದ ಮೊದಲ ಎರಡು ವರ್ಷಗಳ ಅವಧಿಯಲ್ಲಿ ಸೌಹಾಯ್ಲಾ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿನ ಲೈಂಗಿಕ ಗುಲಾಮಗಿರಿಯನ್ನು ಕಂಡಳು. ಏಳು ಜನ ಆಕೆಯ ಮೇಲೆ ಅತ್ಯಾಚಾರ ನಡೆಸಿದರು. ಈ ಮಾತನ್ನು ಆಕೆ ಮತ್ತು ಟಾಲೊ ಹೇಳಿದರು.

ಮೊಸುಲ್ ನಗರವನ್ನು ಐಎಸ್‌ ಹಿಡಿತದಿಂದ ಬಿಡಿಸುವ ಕಾರ್ಯಾಚರಣೆ ಆರಂಭವಾದ ನಂತರ, ಭದ್ರತಾ ಪಡೆಗಳು ಐಎಸ್‌ ಉಗ್ರರನ್ನು ಒಂದು ಚಿಕ್ಕ ಪ್ರದೇಶದಲ್ಲಿ ಕಟ್ಟಿಹಾಕಿದಾಗ ಸೌಹಾಯ್ಲಾಳನ್ನು ನಗರದ ಒಳಭಾಗಕ್ಕೆ ಕರೆದೊಯ್ಯಲಾಯಿತು. ಸಂಘರ್ಷದಲ್ಲಿ ಅತ್ಯಂತ ಹೆಚ್ಚು ಹಾನಿಗೆ ಒಳಗಾಗಿದ್ದು ಇದೇ ಪ್ರದೇಶ. ಆರ್ಟಿಲ್ಲರಿ, ವೈಮಾನಿಕ ದಾಳಿ, ಕಾರ್‌ ಬಾಂಬುಗಳು ಈ ಪ್ರದೇಶವನ್ನು ಆವರಿಸಿಕೊಂಡಿದ್ದವು.

ನಗರದ ಮೇಲೆ ತಮ್ಮ ಹಿಡಿದ ಸಡಿಲವಾಗುತ್ತಿದ್ದಂತೆಯೇ, ಸೌಹಾಯ್ಲಾಳನ್ನು ಹಿಡಿದಿಟ್ಟುಕೊಂಡಿದ್ದ ಐಎಸ್ ಉಗ್ರ ಆಕೆಯ ತಲೆಗೂದಲನ್ನು ಹುಡುಗರ ಕೂದಲಿನಂತೆ ಕತ್ತರಿಸಿದ. ಈ ಉಗ್ರ ನಿರಾಶ್ರಿತರ ಸೋಗಿನಲ್ಲಿ ಇರಾಕ್‌ನ ಭದ್ರತಾ ಪಡೆಗಳ ಕಣ್ಣುತಪ್ಪಿಸುವ ಆಲೋಚನೆ ಹೊಂದಿದ್ದ ಎಂಬುದು ಆಕೆಗೆ ಗೊತ್ತಾಯಿತು ಎಂದರು ಟಾಲೊ.

ಟಾಲೊ ಅವರು ಈಗ ತಮ್ಮ ಸಹೋದರನ ಮಗಳನ್ನು ಮೊದಲಿನಂತೆ ಆರೋಗ್ಯಪೂರ್ಣ ವ್ಯಕ್ತಿಯನ್ನಾಗಿಸಲು ಯತ್ನಿಸುತ್ತಿದ್ದಾರೆ. ಎದ್ದೇಳುವ ಯತ್ನದಲ್ಲಿ ಸೌಹಾಯ್ಲಾ, ತಾವಿದ್ದ ಟೆಂಟ್‌ನ ಒಂದು ಲೋಹದ ಪಟ್ಟಿಯನ್ನು ಹಿಡಿದು ಕುಳಿತುಕೊಂಡಳು. ಈ ವೇಳೆ ಟಾಲೊ ಆಕೆ ಬೆನ್ನಿಗೆ ಕೈಕೊಟ್ಟರು. ಆದರೆ ಕೆಲವೇ ಸಮಯದಲ್ಲಿ ಆಕೆಯ ಶಕ್ತಿ ಉಡುಗಿತು. ಆಕೆ ಪುನಃ ಮಲಗಿಕೊಂಡಳು.

ಬಟ್ಟೆಯೊಂದನ್ನು ಬಳಸಿ ಟಾಲೊ ಆಕೆಯ ಹಣೆ ಒರೆಸಿದರು. ಆಗ ಆಕೆ ಅವರ ತೊಡೆಯ ಮೇಲೆ ಮಲಗಿಕೊಂಡಿದ್ದಳು. ಆಕೆಯ ಬಾಯಿ ತೆರೆದೇ ಇತ್ತು. ಕಣ್ಣುಗಳು ಪುನಃ ಮುಚ್ಚಿದವು.

ಬಂಧನದಿಂದ ತಪ್ಪಿಸಿಕೊಂಡ ನಂತರ, ಕೆಲವು ನಿಮಿಷಗಳಿಗಿಂತ ಹೆಚ್ಚು ಹೊತ್ತು ನಿಂತುಕೊಳ್ಳಲು ಆಕೆಗೆ ಎರಡು ವಾರಗಳು ಬೇಕಾದವು. ಆಕೆಯ ಕಾಲುಗಳು ದೃಢವಾಗಿರಲಿಲ್ಲ.

ಈಚಿನ ದಿನಗಳಲ್ಲಿ ಬಂಧನದಿಂದ ತಪ್ಪಿಸಿಕೊಂಡು ಬಂದವರು ಅಸಹಜ ಎನ್ನಿಸುವಷ್ಟು ಮಟ್ಟದಲ್ಲಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹಮಾಮ್ ಅಲಿ – 1 ನಿರಾಶ್ರಿತರ ಶಿಬಿರಕ್ಕೆ ಬಂದ 20 ಹಾಗೂ 26 ವರ್ಷ ವಯಸ್ಸಿನ ಇಬ್ಬರು ಯಾಜಿದಿ ಸಹೋದರಿಯರು ಅಲ್ಲಿನ ಅಧಿಕಾರಿಗಳ ಗಮನ ಸೆಳೆದರು. ಈ ಸಹೋದರಿಯರು ಮುಖಕ್ಕೆ ನಿಕಾಬ್ ಸುತ್ತಿಕೊಂಡಿದ್ದರು, ಅದನ್ನು ತೆಗೆಯಲು ಅವರು ಒಪ್ಪುತ್ತಿರಲಿಲ್ಲ. ಯಾಜಿದಿ ಮಹಿಳೆಯರು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವ ಪದ್ಧತಿ ಇಲ್ಲದಿದ್ದರೂ, ಇವರು ಹೀಗೆ ಮಾಡಿದ್ದರು.

ತಮ್ಮ ಮೇಲೆ ಅತ್ಯಾಚಾರ ಎಸಗಿದ ಇಸ್ಲಾಮಿಕ್ ಸ್ಟೇಟ್‌ನ ಹೋರಾಟಗಾರರನ್ನು ಇವರು ‘ಪತಿ’ ಎಂದು, ‘ಹುತಾತ್ಮರು’ ಎಂದು ಕರೆಯುತ್ತಾರೆ ಎಂದರು ಶಿಬಿರದ ಅಧಿಕಾರಿ ಮುಂತಾಜಾಬ್ ಇಬ್ರಾಹಿಂ.

ಬಂಧನದಲ್ಲಿ ಇದ್ದ ಅವಧಿಯಲ್ಲಿ ಜನ್ಮನೀಡಿದ ಮೂರು ಪುಟ್ಟ ಮಕ್ಕಳು ಸಹೋದರಿಯರ ಕೈಯಲ್ಲಿ ಇದ್ದವು. ಅತ್ಯಾಚಾರಿಗಳಿಗೆ ಜನಿಸಿದ ಮಕ್ಕಳು ಇವು. ಆದರೆ ಮಕ್ಕಳ ಪಾಲನೆಯ ಹೊಣೆ ತಮ್ಮಿಂದಾಗದು ಎಂದು ಸಹೋದರಿಯರು ಹೇಳಿರುವುದಾಗಿ ಅವರನ್ನು ವಾಪಸ್ ಕರೆತರಲು ಅವರ ಕುಟುಂಬದವರು ಕಳುಹಿಸಿದ್ದ ಕಳ್ಳಸಾಗಣೆದಾರ ಹೇಳಿದ.

ಈ ಮಕ್ಕಳನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಲು ಅನುವು ಮಾಡಿಕೊಡುವ ಕೆಲವು ದಾಖಲೆಗಳನ್ನು ತಾನು ಮತ್ತು ಶಿಬಿರದ ಅಧಿಕಾರಿಗಳು ಸಿದ್ಧಪಡಿಸಿರುವುದಾಗಿ ಕಳ್ಳಸಾಗಣೆದಾರ ಹೇಳಿದ.

ಬಂಧನದಿಂದ ಹೊರಬಂದ ನಂತರ ಮೊದಲ ಬಾರಿಗೆ ಸಹೋದರಿಯರು ತಮ್ಮ ಕುಟುಂಬದ ಸದಸ್ಯರನ್ನು ಕಂಡಾಗ ಏನಾಯಿತು ಎಂಬುದನ್ನು ಕಳ್ಳಸಾಗಣೆದಾರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಸೊರಗಿಹೋಗಿದ್ದ ಸಹೋದರಿಯರನ್ನು ಅಪ್ಪಿಕೊಳ್ಳಲು ಕುಟುಂಬದ ಸದಸ್ಯರು ಧಾವಿಸಿದರು. ಅವರು ಕಣ್ಣೀರು ಸುರಿಸಿದರು.

ತೀರಾ ನೊಂದಿದ್ದ ಇವರ ತಾಯಿ, ತಮ್ಮನ್ನು ಸಹಜ ಸ್ಥಿತಿಗೆ ತಂದುಕೊಳ್ಳಲು ಟೆಂಟ್‌ನ ಹಿಂದೆ ಸರಿದರು.

ಈ ದೃಶ್ಯ ಸೆರೆಹಿಡಿದ ಒಂದು ದಿನದ ನಂತರ ಪತ್ರಕರ್ತರು ಆ ಸಹೋದರಿಯರನ್ನು ನೋಡಲು ತೆರಳಿದರು. ಆಗ ಆ ಸಹೋದರಿಯರಿಗೆ ನಿಲ್ಲಲೂ ಆಗುತ್ತಿರಲಿಲ್ಲ. ಟೆಂಟ್‌ನ ಪ್ಲಾಸ್ಟಿಕ್ ಗೋಡೆಗಳ ನಡುವಿನ ನೆಲಹಾಸಿನ ಮೇಲೆ ಅವರು ಮಲಗಿದ್ದರು.

ತಮ್ಮ ಸುತ್ತ ಗಟ್ಟಿ ಧ್ವನಿಗಳು ಕೇಳುತ್ತಿದ್ದರೂ, ತಮ್ಮನ್ನು ಕಾಣಲು ಜನ ಬರುತ್ತಿದ್ದರೂ, ತಾಯಿ ಅಳುತ್ತಿದ್ದರೂ, ಸಹೋದರಿಯರು ಮಾತನಾಡಲಿಲ್ಲ.

ಹೊರಗಡೆ ಕಾರುಗಳು ಬಂದು ನಿಂತವು. ಕಾರಿನಲ್ಲಿ ಬಂದ ಸಂಬಂಧಿಕರು ಕಿತ್ತಳೆ ರಸದ ಸೋಡಾ ತಂದುಕೊಟ್ಟರು. ಅಳು ತಡೆಯಲು ಬಾಯಿಯ ಮೇಲೆ ಕೈ ಇಟ್ಟುಕೊಂಡು ಅವರು ಟೆಂಟ್‌ನಿಂದ ಹೊರನಡೆದರು.

ವಾರಕ್ಕೂ ಹಿಂದೊಮ್ಮೆ ತುಸು ಹೊತ್ತು ಎಚ್ಚರವಾಗಿದ್ದನ್ನು ಹೊರತುಪಡಿಸಿದರೆ, ಸಹೋದರಿಯರು ಮತ್ತೆ ಎಚ್ಚರಗೊಂಡಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದರು.

**

ಶತಮಾನಗಳಷ್ಟು ಹಳೆಯದಾಗಿರುವ ಯಾಜಿದಿಗಳ ಧರ್ಮವು ಏಕದೇವೋಪಾಸನೆ ಆಧರಿಸಿದೆ. ಇವರ ದೇವರು ಏಳು ಜನ ಪವಿತ್ರ ಕಿನ್ನರರನ್ನು ಸೃಷ್ಟಿಸಿದ್ದಾನಂತೆ. ಈ ಕಾರಣದಿಂದಾಗಿ ಐಎಸ್‌ ಉಗ್ರರು ಯಾಜಿದಿಗಳನ್ನು ಬಹುದೇವೋಪಾಸಕರು ಎಂದು ಕರೆದರು. ಐಎಸ್‌ ಸಂಘಟನೆಯವರಿಂದ ಈ ರೀತಿ ಕರೆಸಿಕೊಳ್ಳುವುದು ತೀರಾ ಅಪಾಯಕಾರಿ.

–ರುಕ್ಮಿಣಿ ಕಲಿಮಾಕಿ

(ದಿ ನ್ಯೂಯಾರ್ಕ್‌ ಟೈಮ್ಸ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry