ಕತ್ತಲಲ್ಲಿ ಕಂಡ ಬಾವಿಗೆ ಹಗಲಲ್ಲಿ ಬಿದ್ದ ನವಾಜ್

7
ವ್ಯಕ್ತಿ

ಕತ್ತಲಲ್ಲಿ ಕಂಡ ಬಾವಿಗೆ ಹಗಲಲ್ಲಿ ಬಿದ್ದ ನವಾಜ್

Published:
Updated:
ಕತ್ತಲಲ್ಲಿ ಕಂಡ ಬಾವಿಗೆ ಹಗಲಲ್ಲಿ ಬಿದ್ದ ನವಾಜ್

ಕಳೆದ ಮೂರು ದಶಕಗಳಿಂದ ಅಧಿಕಾರದಲ್ಲಿ ಇದ್ದರೂ ಇಲ್ಲದಿದ್ದರೂ, ದೇಶದಲ್ಲಿದ್ದರೂ ದೇಶಭ್ರಷ್ಟವಾಗಿದ್ದರೂ ಪಾಕಿಸ್ತಾನದ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದ ಅಲ್ಲಿನ ಮಾಜಿ ಪ್ರಧಾನಿ ಮಿಯಾ ಮುಹಮ್ಮದ್ ನವಾಜ್ ಷರೀಫ್ (67) ಅತ್ಯಂತ ಚಾಣಾಕ್ಷ ರಾಜಕಾರಣಿ ಎಂದೇ ಎಲ್ಲರೂ ಭಾವಿಸಿದ್ದರು.

ಹಾಗೆ ಅಂದುಕೊಳ್ಳುವುದಕ್ಕೆ ಕಾರಣಗಳಿದ್ದವು. ಅವರ ರಾಜಕೀಯ ಜೀವನದಲ್ಲಿ ಉದ್ದಕ್ಕೂ ಎದುರಾದ ಭಾರಿ ಸವಾಲುಗಳನ್ನು ಅವರು ಬುದ್ಧಿವಂತಿಕೆ ಮತ್ತು ದಿಟ್ಟತನದಿಂದಲೇ ನಿಭಾಯಿಸಿದ್ದರು.

1990ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನವಾಜ್ ಅವರನ್ನು ಅಧ್ಯಕ್ಷ ಗುಲಾಂ ಇಸಾಕ್ ಖಾನ್ ಅವರು 1993ರಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ವಜಾಗೊಳಿಸಿದರು. ನವಾಜ್ ಅಧಿಕಾರದಿಂದ ಕೆಳಗಿಳಿದರು. ಅದರೆ ತಮ್ಮನ್ನು ಪದಚ್ಯುತಗೊಳಿಸಿದ ಗುಲಾಂ ಅವರೂ ಹುದ್ದೆಯಿಂದ ಇಳಿಯುವಂತೆ ಮಾಡಿದರು. ಮತ್ತೆ ಅಧಿಕಾರಕ್ಕೆ ಬರಲು ಅವರು 1997ರ ವರೆಗೆ ಕಾಯಬೇಕಾಯಿತು. ಅಧಿಕಾರಕ್ಕೆ ಬಂದ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಧಾನಿಯನ್ನು ವಜಾ ಮಾಡುವ ಅಧ್ಯಕ್ಷರ ಅಧಿಕಾರವನ್ನು ರದ್ದುಪಡಿಸಿದರು.

1998ರಲ್ಲಿ ಜನರಲ್ ಪರ್ವೇಜ್ ಮುಷರಫ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದರು. ಆದರೆ ಸೇನೆಯ ಮೇಲೆ ಮುಷರಫ್ ಅವರು ಹೊಂದಿದ್ದ ಬಿಗಿ ಹಿಡಿತದಿಂದ ಬೆದರಿ 1999ರ ಅಕ್ಟೋಬರ್‍ನಲ್ಲಿ ಅವರನ್ನು ವಜಾ ಮಾಡಿದರು. ಆದರೆ ರಕ್ತರಹಿತ ಕ್ರಾಂತಿಯ ಮೂಲಕ ನವಾಜ್ ಅವರನ್ನು ಪದಚ್ಯುತಗೊಳಿಸಿದ ಮುಷರಫ್, ಅವರನ್ನು ಬಂಧಿಸಿದರು. ನವಾಜ್ ಮೇಲೆ ಮುಷರಫ್ ಹೊರಿಸಿದ್ದ ವಿಮಾನ ಅಪಹರಣ ಮತ್ತು ದೇಶದ್ರೋಹದ ಆರೋಪಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು. ಜೀವಾವಧಿ ಶಿಕ್ಷೆ ನೀಡಿತು. ನವಾಜ್ ಅವರನ್ನು ಕ್ಷಮಿಸಿದ ಮುಷರಫ್ ದೇಶ ಬಿಟ್ಟು ಸೌದಿಯಲ್ಲಿ ಹೋಗಿ ನೆಲೆಸಲು ಅನುಮತಿ ಕೊಟ್ಟರು. ಸೌದಿ ದೊರೆಗಳು ಮುಷರಫ್ ಮೇಲೆ ಹೇರಿದ ಒತ್ತಡದಿಂದ 2007ರಲ್ಲಿ ನವಾಜ್ ಮರಳಿ ಪಾಕಿಸ್ತಾನಕ್ಕೆ ಬರುವುದು ಸಾಧ್ಯವಾಯಿತು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ನವಾಜ್ ಗೆದ್ದು ಮೂರನೇ ಬಾರಿಗೆ ಪ್ರಧಾನಿಯಾದರು. ಅಧಿಕಾರಕ್ಕೆ ಬಂದ ಕೂಡಲೇ ಮುಷರಫ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಸೇಡು ತೀರಿಸಿಕೊಂಡರು.

ಕಳೆದ ನಾಲ್ಕು ವರ್ಷಗಳಲ್ಲಿ ನವಾಜ್ ಅವರ ಆಡಳಿತದ ಬಗ್ಗೆ ಹೆಚ್ಚಿನ ದೂರುಗಳೇನೂ ಇಲ್ಲ. ಬದಲಿಗೆ ಮೆಚ್ಚುಗೆಯೇ ಹೆಚ್ಚು. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ ಚಾಲನೆ ಸಿಕ್ಕಿದೆ. 10 ಸಾವಿರ ಮೆಗಾವಾಟ್ ವಿದ್ಯುತ್ ಯೋಜನೆಗಳು ಶೀಘ್ರವೇ ಪೂರ್ಣಗೊಳ್ಳಲಿವೆ. ಹತ್ತಾರು ಮೂಲಸೌಕರ್ಯ ಯೋಜನೆಗಳನ್ನು ನವಾಜ್ ಆರಂಭಿಸಿದ್ದಾರೆ. 2016-17ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕ ಪ್ರಗತಿಯ ಪ್ರಮಾಣ ಶೇ 5.3ರಷ್ಟಿತ್ತು. ಇದು ಕಳೆದ ದಶಕದಲ್ಲಿಯೇ ಅತಿ ಹೆಚ್ಚು. ಉಗ್ರರ ಉಪಟಳದಿಂದ ನಲುಗಿ ಹೋಗಿದ್ದ ಪಾಕಿಸ್ತಾನ ಶಾಂತಿಯತ್ತ ನಿಧಾನವಾಗಿ ಸಾಗತೊಡಗಿತ್ತು. ಇದಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸಿದ್ದ ನವಾಜ್ ಭಯೋತ್ಪಾದಕರ ಹುಟ್ಟಡಗಿಸಲು ಪಣ ತೊಟ್ಟಂತೆ ಕಾಣಿಸುತ್ತಿತ್ತು. 2018ರ ಮಧ್ಯ ಭಾಗದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನವಾಜ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಗೆಲ್ಲುವುದು ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಭ್ರಷ್ಟಾಚಾರದ ಕಾರಣಕ್ಕೆ ನವಾಜ್ ಅವರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದೆ. ಶಿಖರದ ತುತ್ತ ತುದಿಯಿಂದ ನವಾಜ್ ಅವರು ಪ್ರಪಾತಕ್ಕೆ ಬಿದ್ದಂತಾಗಿದೆ. ಚತುರ ರಾಜಕಾರಣಿಯನ್ನು ಈಗ ಮಾಜಿ ರಾಜಕಾರಣಿ ಎನ್ನುವಂತಾಗಿದೆ. ಯಾವುದೇ ಪರಿಸ್ಥಿತಿಯನ್ನು ದಕ್ಷವಾಗಿ ನಿಭಾಯಿಸಬಲ್ಲ ನವಾಜ್ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಅತ್ಯಂತ ಬಾಲಿಶವಾಗಿ ನಿಭಾಯಿಸಿದರು.

ಪನಾಮಾದ ಮೊಸಾಕ್ ಫೊನ್ಸೆಕಾ ಹಣಕಾಸು ಸಲಹಾ ಸಂಸ್ಥೆಯ ರಹಸ್ಯ ದಾಖಲೆಗಳು ‘ಪನಾಮಾ ಪೇಪರ್ಸ್’ ಎಂಬ ಹೆಸರಿನಲ್ಲಿ 2016ರಲ್ಲಿ ಸೋರಿಕೆಯಾಗುವುದರೊಂದಿಗೆ ನವಾಜ್ ಅವರ ಕಷ್ಟಕಾಲ ಆರಂಭವಾಯಿತು. ನವಾಜ್ ಅವರ ಕುಟುಂಬ ವಿದೇಶಿ ಕಂಪೆನಿಗಳ ಮೂಲಕ ಲಂಡನ್‍ನಲ್ಲಿ ಆಸ್ತಿ ಖರೀದಿ ಮಾಡಿದೆ ಎಂಬುದು ಬಹಿರಂಗವಾಯಿತು. ಈ ಯುಗದ ಮಾಹಿತಿ ಸ್ಫೋಟದ ವ್ಯಾಪ್ತಿ ಎಷ್ಟಿದೆ ಎಂಬ ಅಂದಾಜು ನವಾಜ್ ಅವರಿಗೆ ಇರಲಿಲ್ಲ. ಒಂದು ಸುಳ್ಳು ಅವರ ರಾಜಕೀಯ ಜೀವನವನ್ನೇ ಕೊನೆಯ ಹಂತಕ್ಕೆ ತಂದು ನಿಲ್ಲಿಸಿದೆ. 1990ರ ದಶಕದಲ್ಲಿ ನವಾಜ್ ಅವರ ಮಕ್ಕಳ ಹೆಸರಿನಲ್ಲಿ ಲಂಡನ್‍ನಲ್ಲಿ ಆಸ್ತಿ ಖರೀದಿಸಲಾಗಿದೆ. ಆಗ ಅವರಿನ್ನೂ ಪ್ರೌಢ ವಯಸ್ಸಿಗೆ ಬಂದಿರಲಿಲ್ಲ. ಹಾಗಾಗಿ ನವಾಜ್ ಅವರೇ ಆಸ್ತಿ ಖರೀದಿ ಮಾಡಿದ್ದರು ಎಂಬ ಆರೋಪದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ.

ಪಾಕಿಸ್ತಾನದ ರಾಜಕಾರಣ ಅತ್ಯಂತ ಸಂಕೀರ್ಣವಾದುದು. ಸರಿಯಾದ ದಿಕ್ಕಿನಲ್ಲಿ ಇಡುವ ಹೆಜ್ಜೆಗಳೂ ಅಲ್ಲಿ ತಪ್ಪು ಅನಿಸಿಬಿಡುತ್ತವೆ. ಅಂತಹ ಸ್ಥಿತಿಯಲ್ಲಿ ನವಾಜ್ ಅವರು 2013ರಲ್ಲಿ ಅಧಿಕಾರಕ್ಕೆ ಬಂದ ನಂತರ ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತಾ ಬಂದರು.

ಅಧಿಕಾರಕ್ಕೆ ಬಂದ ಕೂಡಲೇ ಮುಷರಫ್ ಅವರ ಮೇಲೆ ಸೇಡು ತೀರಿಸಿಕೊಂಡ ಕ್ರಮ ಸೇನೆಗೆ ಸಿಟ್ಟು ತರಿಸಿದೆ. ಭಾರತದ ಜತೆಗಿನ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂಬ ಬಯಕೆ ಸೇನೆಯನ್ನು ಇನ್ನಷ್ಟು ಕೆರಳಿಸಿತು.

ವಿದೇಶದಲ್ಲಿ ಆಸ್ತಿ ಇದೆ ಎಂಬ ವಿಚಾರವನ್ನು ಮುಚ್ಚಿಟ್ಟ ಬಗ್ಗೆ ನವಾಜ್ ಮತ್ತು ಅವರ ಕುಟುಂಬ ನ್ಯಾಯಾಲಯದಲ್ಲಿಯೇ ತಪ್ಪೊಪ್ಪಿಕೊಂಡಿದೆ. ಆದರೆ ಇದು ತಾವು ರಾಜಕಾರಣಕ್ಕೆ ಬರುವ ಮೊದಲೇ ಮಾಡಿದ ಆಸ್ತಿ ಎಂಬುದು ನವಾಜ್ ಅವರ ವಾದ. ಅದರ ಜತೆಗೆ, ನವಾಜ್ ಮಗಳು ಮರಿಯಮ್ ಪ್ರಮಾದವನ್ನೇ ಎಸಗಿದರು. ಲಂಡನ್‍ನಲ್ಲಿ ಆಸ್ತಿ ಖರೀದಿಸಿದ ಟ್ರಸ್ಟ್‌ನಲ್ಲಿ ತಾವೊಬ್ಬ ಟ್ರಸ್ಟಿ ಮಾತ್ರ ಎಂಬ ದಾಖಲೆಯನ್ನು ತನಿಖಾ ತಂಡಕ್ಕೆ ನೀಡಿದರು. ಈ ದಾಖಲೆ ಪತ್ರವನ್ನು ಕ್ಯಾಲಿಬರಿ ಎಂಬ ಫಾಂಟ್‍ನಲ್ಲಿ ಟೈಪ್ ಮಾಡಲಾಗಿತ್ತು. ಅದು 2006ರಲ್ಲಿ ಮಾಡಿಕೊಂಡ ದಾಖಲೆ. ಆದರೆ ಕ್ಯಾಲಿಬರಿ ಫಾಂಟ್ ಸಾರ್ವಜನಿಕ ಬಳಕೆಗೆ ಬಿಡುಗಡೆಯಾದದ್ದೇ 2007ರಲ್ಲಿ.

ಪ್ರಕರಣದ ವಿಚಾರಣೆ ಆರಂಭವಾದ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ನವಾಜ್ ಮಾಡಿದರು. 2016ರ ಜೂನ್‍ನಿಂದ 2017ರ ಏಪ್ರಿಲ್ ಒಳಗೆ ಎರಡು ಬಾರಿ ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ನ್ಯಾಯಮೂರ್ತಿಗಳು ಬದಲಾದರು. ಐವರು ನ್ಯಾಯಮೂರ್ತಿಗಳ ಪೀಠ ಏಪ್ರಿಲ್‍ನಲ್ಲಿ ತೀರ್ಪು ನೀಡಿತು. ನವಾಜ್ ಭ್ರಷ್ಟ ಎಂದವರು ಇಬ್ಬರು ನ್ಯಾಯಮೂರ್ತಿಗಳು ಮಾತ್ರ. ಇತರ ಮೂವರು ನ್ಯಾಯಮೂರ್ತಿಗಳು ಇನ್ನಷ್ಟು ಸಾಕ್ಷ್ಯ ಬೇಕು ಎಂದರು. ಸೇನೆಯ ಅಧಿಕಾರಿಗಳೂ ಇದ್ದ ಜಂಟಿ ತನಿಖಾ ಸಮಿತಿ ಮಿಂಚಿನ ವೇಗದಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕಬಹುದು ಎಂದು ಯಾರೂ ಭಾವಿಸಿರಲಿಲ್ಲ. ಅಷ್ಟೊಂದು ದಾಖಲೆಗಳು ಮತ್ತು ಸಾಕ್ಷ್ಯಗಳು ದೊರೆಯಬಹುದು ಎಂದು ತನಿಖಾ ತಂಡವೂ ಭಾವಿಸಿರಲಿಲ್ಲ.

ಇನ್ನೊಂದೆಡೆ ನವಾಜ್ ಅವರಲ್ಲಿ ಯಾವ ಕಾರ್ಯತಂತ್ರವೂ ಇರಲಿಲ್ಲ. ತಾವೇನು ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಇರಲಿಲ್ಲ. ಪದೇ ಪದೇ ಸಲಹೆಗಾರರನ್ನು, ವಕೀಲರನ್ನು ಬದಲಾಯಿಸಿದರು. ಹತಾಶರಾದಂತೆ ಕಂಡರು. ಹಾಗಾಗಿ ಎಲ್ಲವೂ ಅವರಿಗೆ ಪ್ರತಿಕೂಲವಾಗಿಯೇ ಪರಿಣಮಿಸಿತು. ನವಾಜ್ ಅವರನ್ನು ಪ್ರಧಾನಿ ಹುದ್ದೆಯಿಂದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿತು.

ಬೆನಜೀರ್ ಭುಟ್ಟೊ, ನರೇಂದ್ರ ಮೋದಿ, ಖಲೀದಾ ಜಿಯಾ ಅವರಂತೆ ಜನರನ್ನು ಸೆಳೆಯುವ ವ್ಯಕ್ತಿತ್ವ ನವಾಜ್ ಅವರದ್ದಲ್ಲ. ಆದರೆ ದಕ್ಷ ಆಡಳಿತಗಾರ ಎಂಬುದನ್ನು ಅವರು ಈಗಾಗಲೇ ಸಾಬೀತು ಮಾಡಿದ್ದಾರೆ. ಭಾರತ ಎರಡನೇ ಅಣು ಬಾಂಬ್ ಪರೀಕ್ಷೆ ನಡೆಸಿದ ಬಳಿಕ 1998ರಲ್ಲಿ ನವಾಜ್ ಅವರೂ ಅಣುಬಾಂಬ್ ಪರೀಕ್ಷೆ ನಡೆಸಿದರು. ಪಾಕಿಸ್ತಾನದ ರಾಜಕಾರಣದಲ್ಲಿ ಅವರ ನೆಲೆ ಗಟ್ಟಿಮಾಡಿಕೊಳ್ಳಲು ಅದು ಅವರಿಗೆ ಅನಿವಾರ್ಯವಾಗಿತ್ತು. ಇಂತಹ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಅವರು ಬಹಳ ಜಾಣ ಕೂಡ. ಈ ಜಾಣ್ಮೆಯೇ ಅವರ ಪಾಲಿಗೆ ಮುಳುವಾದಂತೆ ಕಾಣಿಸುತ್ತಿದೆ. ಪಾಕಿಸ್ತಾನದ ಇತಿಹಾಸ ಗಮನಿಸಿದರೆ ಅಲ್ಲಿ ಸೇನೆಯ ಹಿಡಿತ ಬಹಳ ಬಿಗಿ. ಪ್ರಜಾಸತ್ತಾತ್ಮಕ ಸರ್ಕಾರ ಇದ್ದಾಗಲೂ ಇದು ನಿಜ. ಅದನ್ನು ಮೀರಿ ಹೋದವರು ಹಿಂದೆಯೂ ಅದರ ಫಲ ಅನುಭವಿಸಿದ್ದಾರೆ. ಹಿಂದೆ ಹಲವು ಪ್ರಧಾನಿಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ನವಾಜ್ ಅದೃಷ್ಟವಂತ.

ಈಗ ನವಾಜ್ ಅವರ ಅನರ್ಹತೆಯ ನಿರ್ಧಾರದ ಬಗ್ಗೆಯೂ ಹಲವು ಪ್ರಶ್ನೆಗಳಿವೆ. ಆದರೆ ವಿದೇಶದಲ್ಲಿ ಮಾಡಿಕೊಂಡ ಆಸ್ತಿಯನ್ನು ಅವರು ಮುಚ್ಚಿಟ್ಟಿದ್ದರು ಎಂಬುದರಲ್ಲಿ ಯಾವುದೇ ಅನುಮಾನ ಕಾಣಿಸುತ್ತಿಲ್ಲ. ತಮ್ಮ ಈ ಸ್ಥಿತಿಗೆ ನವಾಜ್ ಅವರು ಈಗ ಯಾರನ್ನೂ ದೂರುವಂತಿಲ್ಲ. ದೇಶದೊಳಗೆ ಸರ್ವಶಕ್ತವಾದ ಸೇನೆ ಈ ಅವಕಾಶವನ್ನು ಬಿಟ್ಟುಕೊಡದು. ಹಾಗಾಗಿ ನವಾಜ್ ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿಯಾಗುವುದು ಕಷ್ಟವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry