7

ಉತ್ತಮ ಸಾಧನೆ; ಲಾಭಾಂಶ ವಿರಳ

ಕೆ. ಜಿ. ಕೃಪಾಲ್
Published:
Updated:
ಉತ್ತಮ ಸಾಧನೆ; ಲಾಭಾಂಶ ವಿರಳ

ಪೇಟೆಯ ಏರಿಳಿತಗಳು ರಭಸವಾಗಿರದೆ ಸೀಮಿತ ಮಟ್ಟದಲ್ಲಿದ್ದು, ಅನಿಶ್ಚಿತತೆ ಕಾಣುತ್ತಿದೆ. ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳು ದಣಿದಿರುವಂತೆ ಭಾಸವಾಗುತ್ತಿದೆ.

ಫಾರ್ಮಾ ವಲಯದ ಷೇರುಗಳು ಹೆಚ್ಚು ಒತ್ತಡ ಎದುರಿಸುತ್ತಿವೆಯಾದರೂ, ಲಾಭ ಗಳಿಕೆಯ ಹೆಚ್ಚಿನ ಅವಕಾಶಗಳನ್ನು ಅಲ್ಪಾವಧಿಯಲ್ಲೇ ಒದಗಿಸುತ್ತಿವೆ.  ಗ್ಲೇನ್ ಮಾರ್ಕ್ ಫಾರ್ಮಾ, ಬಯೋಕಾನ್, ಸಿಪ್ಲಾ,  ಲುಪಿನ್ ಕಂಪೆನಿ ಷೇರುಗಳು ಹೆಚ್ಚಿನ ಏರಿಳಿತ ಪ್ರದರ್ಶಿಸಿವೆ.  ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ದಾಖಲೆ ಮಟ್ಟ ತಲುಪಿದರೂ ಸ್ಥಿರತೆ ಕಾಣದೆ ಮಾರಾಟದ ಒತ್ತಡಕ್ಕೊಳಗಾಗಿವೆ.

ಪ್ರತಿ ಷೇರಿಗೆ ₹21 ರ ಲಾಭಾಂಶ ವಿತರಣೆಗೆ ಈ ತಿಂಗಳ 24 ನಿಗದಿತ ದಿನಾಂಕವನ್ನಾಗಿಸಿರುವ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿ ಷೇರಿನ ಬೆಲೆಯು ₹385ರ ಸಮೀಪದಿಂದ ₹419 ರವರೆಗೂ ಜಿಗಿತ ಕಂಡಿತಾದರೂ, ನಿಗದಿತ ದಿನ ದೂರವಿರುವಾಗಲೇ ಮತ್ತೊಮ್ಮೆ ಇಳಿಕೆಯಿಂದ ₹394 ರ ಸಮೀಪಕ್ಕೆ ತಲುಪಿ ನಂತರ ₹404 ರ ಸಮೀಪಕ್ಕೆ ಚೇತರಿಸಿಕೊಂಡಿದೆ.

ಸಿಯೆಟ್ ಲಿ ಕಂಪೆನಿಯ ಷೇರಿನ ಬೆಲೆಯು ₹1,940ರ ಸಮೀಪದಿಂದ ₹1,725ರವರೆಗೂ ಕುಸಿದು ನಂತರ ₹1,740ಕ್ಕೆ ಚೇತರಿಕೆ ಕಂಡಿತು.  ಕಂಪೆನಿಯ ಫಲಿತಾಂಶದ ನೆಪದಿಂದ ಕುಸಿತ ಕಂಡಿತು.  ಇದೇ ಕಾರಣಕ್ಕಾಗಿ ವಲಯದ ಎಂಆರ್‌ಎಫ್‌ ಷೇರಿನ ಬೆಲೆಯು ಒಂದು ಹಂತದಲ್ಲಿ  ಮೂರು  ಸಾವಿರ ರೂಪಾಯಿಗಳ ಇಳಿಕೆಯನ್ನು ಮಾರಾಟದ ಒತ್ತಡದಿಂದ ಕಂಡು ನಂತರ ಚೇತರಿಕೆ ಪಡೆದುಕೊಂಡಿದೆ.  ವಿಭಿನ್ನ ಕಾರಣಗಳಿಂದ ಏರಿಕೆಯಲ್ಲಿದ್ದ ಭಾರತ್ ಫೈನಾನ್ಶಿಯಲ್ ಇನ್‌ಕ್ಲ್ಯೂಷನ್‌,  ಮಣಪುರಂ ಫೈನಾನ್ಸ್, ಕಮ್ಮಿನ್ಸ್ ಇಂಡಿಯಾ, ಕೋಲ್ ಇಂಡಿಯಾ ಮುಂತಾದವು ಹೆಚ್ಚಿನ ಇಳಿಕೆಗೊಳಗಾದವು.  ಇತ್ತೀಚಿಗೆ ಮಾರುತಿ ಸುಜುಕಿ, ಲಾರ್ಸನ್ ಆ್ಯಂಡ್ ಟೊಬ್ರೊ, ಎಚ್‌ಡಿಎಫ್‌ಸಿ ಕಂಪೆನಿಗಳು  ತಮ್ಮ ಚಲನೆಯಿಂದ ಸಂವೇದಿ ಸೂಚ್ಯಂಕದ ಏರಿಳಿತಗಳನ್ನು ನಿಯಂತ್ರಿಸುತ್ತಿವೆ.

ಪೇಟೆಯು ವರ್ತಿಸುತ್ತಿರುವ ರೀತಿಯು ಸಹ ವಿಸ್ಮಯಕಾರಿಯಾಗಿದೆ. ಎಷ್ಟು ತೀಕ್ಷ್ಣವಾದ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದಕ್ಕೆ ಶುಕ್ರವಾರ ಫಾರ್ಮಾ ವಲಯದ ದಿವೀಸ್ ಲ್ಯಾಬೊರೇಟರೀಸ್ ಷೇರಿನ ಬೆಲೆಯು ₹ 665 ರ ಸಮೀಪದಲ್ಲಿದ್ದಾಗ ದಿಢೀರ್ ಏರಿಕೆಯತ್ತ ಸಾಗಿ ಒಂದು ಹಂತದಲ್ಲಿ ₹700ನ್ನು ತಲುಪಿ ₹681 ರ ಸಮೀಪದಲ್ಲಿ ಕೊನೆಗೊಂಡಿತು. ಇದಕ್ಕೆ ಕಾರಣ  ಕಂಪೆನಿಯ ವಿಶಾಖಪಟ್ಟಣದ ಘಟಕವು  ಐರ್ ಲ್ಯಾನ್ಡ್ ಮತ್ತು ಸ್ಲೊವೇನಿಯಾದ ತನಿಖಾಧಿಕಾರಿಗಳಿಂದ ಪರಿಶೀಲನೆ ನಡೆದು ಅವರುಗಳು ಕ್ಲಿನ್ ಚಿಟ್ ನೀಡಿರುವುದಾಗಿದೆ. ಅಂದರೆ ಒಂದೇ ದಿನ ₹660 ರಿಂದ ₹700 ರ ವರೆಗೆ ಜಿಗಿತ ಪ್ರದರ್ಶಿತವಾಗಿದ್ದು, ಇಂತಹ ರಭಸದ ತ್ವರಿತ ಮತ್ತು ಹರಿತವಾದ ಚಲನೆಯು ಪದೇ ಪದೇ ಕಂಡುಬರುತ್ತಿದೆ.

ಕಮ್ಮಿನ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯು ಗುರುವಾರ ನಡೆಯಿತು. ಇದಕ್ಕೆ ಮುನ್ನಾ ದಿನಗಳಲ್ಲಿ ಷೇರಿನ ಬೆಲೆಯು ₹1,000ರ ಗಡಿ ದಾಟಿತ್ತು.  ಆದರೆ, ಶುಕ್ರವಾರ ಷೇರಿನ ಬೆಲೆಯು ₹912 ರವರೆಗೂ ಇಳಿಕೆ ಕಂಡು ₹935 ರ ಸಮೀಪ ವಾರಾಂತ್ಯ ಕಂಡಿತು. ಷೇರುಪೇಟೆಯು ಹೊಸ ಹೊಸ ಸುದ್ದಿ ಸಮಾಚಾರಗಳಿಗೆ ಸ್ಪಂದಿಸುವ ವಿಚಿತ್ರ ರೀತಿಯನ್ನು ನಾವು ಶುಕ್ರವಾರ ದಿನದ ವಹಿವಾಟಿನ ಕೊನೆಯ ಗಂಟೆಯಲ್ಲಿ ಕಾಣುವಂತಾಯಿತು.  ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್  ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಕೋಲ್ ಇಂಡಿಯಾ, ಪವರ್ ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್, ಐಟಿಸಿ, ಒಎನ್‌ಜಿಸಿ, ಎನ್‌ಟಿಪಿಸಿ,  ಎಸ್‌ಬಿಐ ಮುಂತಾದ  ಕಂಪೆನಿಗಳನ್ನೊಳಗೊಂಡ ‘ಭಾರತ್ 22’ ಹೆಸರಿನ ಇಟಿಎಫ್ (ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸುವ ನಿಧಿ ) ಯೋಜನೆಯನ್ನು ಕೇಂದ್ರ ಹಣಕಾಸು ಸಚಿವರು ಪ್ರಾರಂಭ ಮಾಡಿದ ಸುದ್ದಿಯು  ಸಾರ್ವಜನಿಕ ತೈಲ ಕಂಪೆನಿಗಳಲ್ಲಿ ಚೈತನ್ಯ ಮೂಡಿಸಿತು.  ಹಿಂದುಸ್ಥಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗಳ  ಷೇರು ಶೇ10 ರಷ್ಟು ಜಿಗಿತ ಕಂಡರೆ  ಭಾರತ್ ಪೆಟ್ರೋಲಿಯಂ ಶೇ6ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿತು.

ಒಟ್ಟಾರೆ ಸುಮಾರು 15 ಅಂಶಗಳ ಬದಲಾವಣೆ ಕಂಡ ಸಂವೇದಿ ಸೂಚ್ಯಂಕವು ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 107 ಅಂಶಗಳ ಏರಿಕೆ ಕಾಣುವಂತೆ ಮಾಡಿದರೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ ವಿಭಿನ್ನತೆಯಿಂದ 144 ಅಂಶಗಳ ಕುಸಿತಕ್ಕೊಳಗಾಯಿತು.

ವಿದೇಶಿ ವಿತ್ತೀಯ ಸಂಸ್ಥೆಗಳು ₹2,498 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹3,553 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿ ಪೇಟೆಯನ್ನು ಬೆಂಬಲಿಸಿದವು. ಪೇಟೆಯ ಬಂಡವಾಳ ಮೌಲ್ಯ ₹232.59ಲಕ್ಷ ಕೋಟಿಗೆ ಏರಿಕೆ ಕಂಡಿತು.

ಹೊಸ ಷೇರು: ಸಿಂಟೆಕ್ಸ್ ಲಿ.,ಕಂಪೆನಿಯ ಪುನರ್ ರಚನೆಯ ಯೋಜನೆಯಂತೆ ವಿತರಿಸಲಾದ ಸಿಂಟೆಕ್ಸ್ ಪ್ಲಾಸ್ಟಿಕ್ ಟೆಕ್ನಾಲಜಿ ಲಿ. ಕಂಪೆನಿ ಷೇರುಗಳು ಆಗಸ್ಟ್ 8 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು: ಪವರ್ ಫೈನಾನ್ಸ್ ಕಾರ್ಪೊರೇಷನ್ ಕಂಪೆನಿಯು ಆಗಸ್ಟ್ 10 ರಂದು ಷೇರುದಾರರಿಗೆ ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ. ಈ ಕಂಪೆನಿಯು 2016 ರಲ್ಲೂ 1:1ರ ಅನುಪಾತದ ಬೋನಸ್ ಷೇರು ವಿತರಿಸಿದೆ.

ಲಾಭಾಂಶ : ಅವಂಟೆಲ್ ಪ್ರತಿ ಷೇರಿಗೆ ₹2, ಮೆಜೆಸ್ಕೊ ಪ್ರತಿ ₹5 ರ ಮುಖಬೆಲೆ  ಷೇರಿಗೆ ₹1

ಮುಖಬೆಲೆ ಸೀಳಿಕೆ:

ದ್ವಾರಿಕೇಶ್ ಷುಗರ್ ಇಂಡಸ್ಟ್ರೀಸ್ ಲಿ., ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1ಕ್ಕೆ ಸೀಳಲು ಆಗಸ್ಟ್ 12 ನಿಗದಿತ ದಿನವಾಗಿದೆ.  ಈ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದೇ  ವಾರದಲ್ಲಿ ₹475 ರಿಂದ ₹679ರವರೆಗೂ ಏರಿಕೆ ಕಾಣುವಂತೆ ಮಾಡಲಾಗಿದೆ. ವಹಿವಾಟುದಾರರು ತಮ್ಮ ಇಚ್ಛೆಗನುಗುಣವಾಗಿ ಪೇಟೆಯಲ್ಲಿ ಏರುಪೇರು ಉಂಟುಮಾಡುವರು ಎಂಬುದಕ್ಕೆ ಸಕ್ಕರೆ ವಲಯದ ಷೇರು ಈ ಪ್ರಮಾಣದ ಏರಿಕೆ ಕಂಡಿರುವುದು ಅಚ್ಚರಿ ಮೂಡಿಸುವಂತಹುದಾಗಿದೆ.

ಪ್ರೀಮಿಯರ್ ಪೈಪ್ಸ್ ಲಿಮಿಟೆಡ್ ಕಂಪೆನಿಯು ಆಗಸ್ಟ್ 10 ರಂದು ಷೇರಿನ ಬೆಳೆಯನ್ನು ₹10 ರಿಂದ ₹5ಕ್ಕೆ ಸೀಳಲು ಪರಿಶೀಲಿಸಲಿದೆ.

(ಮೊ: 9886313380 ಸಂಜೆ 4.30 ರನಂತರ).

ವಾರದ ವಿಶೇಷ

ಭಾರತೀಯ ಸ್ಟೇಟ್ ಬ್ಯಾಂಕ್ ಆರ್‌ಬಿ ಐ ಕ್ರೆಡಿಟ್ ಪಾಲಿಸಿ ಪ್ರಕಟಣೆಗೆ ಮುಂಚೆಯೇ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಶೇ 0.5ರಷ್ಟು ಕಡಿತಗೊಳಿಸಿ ತನ್ನ ಜಾಣ್ಮೆ ಪ್ರದರ್ಶಿಸಿದೆ. ಆರ್‌ಬಿಐ ಪಾಲಿಸಿಯಲ್ಲಿ ಶೇ0.25 ರಷ್ಟು ಬಡ್ಡಿ ದರವನ್ನು ಮೊಟಕುಗೊಳಿಸುವ ವಿಚಾರವು ನಿರೀಕ್ಷಿತವಾಗಿದ್ದು, ಪಾಲಿಸಿ ಪ್ರಕಟಿಸಿದ ನಂತರ ಕಡಿತಕ್ಕೂ ಹೆಚ್ಚಿನ ಇಳಿಕೆಯು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿರಬಹುದು.  ಸಾಮಾನ್ಯವಾಗಿ ಆರ್‌ಬಿಐ ಕಡಿತಗೊಳಿಸಿದ ಬ್ಯಾಂಕ್ ಬಡ್ಡಿದರವನ್ನಾಧರಿಸಿ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಬದಲಾಯಿಸುತ್ತವೆ  ಆದರೆ, ಈ ಬಾರಿ ಉಳಿತಾಯ ಖಾತೆ ಮೇಲೆ ಮಾತ್ರ ಬಡ್ಡಿದರ ಕಡಿತಗೊಳಿಸಿದೆ.

ಕಂಪೆನಿಗಳು ಉತ್ತಮ ಸಾಧನೆಯ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದರೂ ಲಾಭಾಂಶ ಘೋಷಣೆ ಮಾತ್ರ ವಿರಳವಾಗಿದೆ.  ಹೆಚ್ಚಿನ ಕಂಪೆನಿಗಳು ಮಧ್ಯಂತರ  ಲಾಭಾಂಶವನ್ನು ಕೈಬಿಟ್ಟಿವೆ. ಎಲ್ಲರಿಗೂ ಅವರದೇ ಅದ ಶೈಲಿಯ ನಿರ್ಧಾರಗಳು.  ಹೆಚ್ಚಿನ ಕಂಪೆನಿಗಳು ಈಗಲೂ ಹೆಚ್ಚಿನ ಸಂಪನ್ಮೂಲ ಸಂಗ್ರಹಣೆಯತ್ತ ಗಮನಹರಿಸಿವೆ.  ಪೇಟೆಯಲ್ಲಿ ಕಂಪೆನಿಗಳ ಸಾಧನೆಯು ನಗಣ್ಯವಾಗಿದ್ದು ಷೇರಿನ ಚಲನೆಯ ಬಗ್ಗೆ ಮುಂಚಿತವಾಗಿ ನಿಖರವಾಗಿ ನಿರ್ಧರಿಸುವುದು  ನಿಷ್ಪ್ರಯೋಜನ.

ಬುಧವಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದ ತನ್ನ ತ್ರೈಮಾಸಿಕ ಫಲಿತಾಂಶವು ಹಿಂದಿನ ವರ್ಷದ ಇದೇ ಅವಧಿಯ ಅಂಕಿ ಅಂಶಗಳಿಗೆ ಹೋಲಿಸಿದರೆ ಲಾಭಗಳಿಕೆ ಪ್ರಮಾಣ ಕುಸಿದಿದೆ. ಆದರೆ, ವಿಭಿನ್ನ ಕಾರಣಗಳಿಂದ ಈ ಷೇರಿನ ಬೆಲೆಯು ಹೆಚ್ಚಿನ ಏರಿಕೆ ಕಂಡಿದೆ.  ಒಂದು ವಾರದಲ್ಲಿ ₹366ರಿಂದ ₹425ರವರೆಗೂ ಜಿಗಿತ ಕಂಡಿದೆ.

ಷೇರಿನ ಬೆಲೆಯು ಕೇವಲ ಆರು ತಿಂಗಳಲ್ಲಿ ಒಂದೂವರೆಪಟ್ಟು ಹೆಚ್ಚಾಗಿದೆ ಎಂಬ ಸುದ್ದಿಗೆ ಸ್ಪಂದಿಸುವ ಮುನ್ನ ಇಷ್ಟು ಕ್ಷಿಪ್ರವಾಗಿ ಏರಿಕೆ ಕಂಡಿರುವುದು ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಇಳಿಕೆ ಕಂಡಿರುವ ಉದಾಹರಣೆಗಳು ಉಂಟು ಎಂಬುದು ನೆನಪಿರಲಿ.   ಬಾಟಾ ಇಂಡಿಯಾ ಕಂಪೆನಿಯ ಷೇರನ್ನು ಎರಡುವರ್ಷಗಳ ಹಿಂದೆ ಖರೀದಿಸಿದ ಬೆಲೆ ಈಗ ಬಂದಿದೆ.

ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಬೆಲೆ ಇನ್ನೂ ತಲುಪಲೇ ಇಲ್ಲ.  ಕೋಲ್ ಇಂಡಿಯಾ ಷೇರಿನ ಬೆಲೆ ಐಪಿಒ ಬೆಲೆಗಿಂತ ಕಡಿಮೆಗೆ ಇಳಿದಿದೆ.  ಟಾಟಾ ಸ್ಟೀಲ್ ಷೇರಿನ ಬೆಲೆಯು ಏಳು ವರ್ಷಗಳ ಹಿಂದೆ ವಿತರಿಸಿದ ಬೆಲೆಯನ್ನು ಇಂದಿಗೂ ತಲುಪಿಲ್ಲ. ಹೀಗಾಗಿ   ಷೇರಿನ ಬೆಲೆಗಳು  ಗರಿಷ್ಠದಲ್ಲಿದ್ದಾಗ ಕೊಳ್ಳುವ ಆತುರ ಸರಿಯಲ್ಲ.  ಉತ್ತಮ ಷೇರಿನ ಬೆಲೆಗಳು ಕುಸಿದಲ್ಲಿದ್ದಾಗ ಹೂಡಿಕೆಗೆ ಅವಕಾಶ. ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಯಶಸ್ಸಿಗೆ ಸರಳ ಸಮೀಕರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry