7

ಪಿಕ್‌ ಅಂಡ್‌ ಪೇ ತೋಟ

Published:
Updated:
ಪಿಕ್‌ ಅಂಡ್‌ ಪೇ ತೋಟ

* ವಿಜಯಕುಮಾರ ಗಾಣಿಗೇರ

ಹುಬ್ಬಳ್ಳಿ–ಸೊಲ್ಲಾಪುರ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ತುಂಬಾ ಇಷ್ಟಪಡುವ ಜಾಗವೊಂದಿದೆ. ಅದೇ ನವಲಗುಂದ ಹತ್ತಿರದ ತಾಜಾ ಹಾಗೂ ಸಾವಯವ ಪೇರಲ ಹಣ್ಣಿನ ತೋಟ.

ನವಲಗುಂದದ ಸಾಯಿಬಾಬಾ ಆನೆಗುಂದಿ ತಮ್ಮ ಐದು ಎಕರೆ ಜಮೀನನ್ನು ಪಿಕ್‌ ಅಂಡ್‌ ಪೇ ತೋಟವಾಗಿ ಮಾರ್ಪಡಿಸಿದ್ದು, ಪೇರಲದ ಜೊತೆಗೆ ಕಳೆದ ವರ್ಷದಿಂದ ಮೊಸಂಬಿ, ಕಿತ್ತಳೆ, ಸೀತಾಫಲ, ಬಾರಿ, ಮಾವು, ನಿಂಬೆ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಗ್ರಾಹಕರು ತಮಗೆ ಬೇಕಾದ ಹಣ್ಣುಗಳನ್ನು ಕಿತ್ತುಕೊಂಡು, ಅವುಗಳ ಬೆಲೆ ಪಾವತಿಸಿ ಒಯ್ಯುವ ವ್ಯವಸ್ಥೆಯನ್ನು ಈ ರೈತ ಮಾಡಿದ್ದಾರೆ.

2013ರಲ್ಲಿ ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಸಾಯಿಬಾಬಾ ಅವರ ತೋಟದ ಪಪ್ಪಾಯಿ ಪ್ರಥಮ ಸ್ಥಾನ ಪಡೆದಿತ್ತು. ಅಲ್ಲಿಂದ ಅವರಲ್ಲಿ ತೋಟಗಾರಿಕೆ ಒಲವು ಹೆಚ್ಚತ್ತಲೇ ಹೋಯಿತು. 2014ರಲ್ಲಿ ಪೇರಲು ಬೆಳೆಯುವ ಉದ್ದೇಶದಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿತಜ್ಞರಿಂದ ಸಲಹೆ ಪಡೆದು ಲಖನೌ 47, ವಿ2 ತಳಿ ಸಸಿಗಳನ್ನು ನೆಟ್ಟಿದ್ದರು.

ಪ್ರಾರಂಭದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದ ಅವರು ನಂತರ ತೋಟದಿಂದ ಒಂದು ಕಿ.ಮೀ. ದೂರದ ಬೆಣ್ಣೆ ಹಳ್ಳದಿಂದ ಕೆರೆಗೆ ನೀರು ಸಂಗ್ರಹಿಸಿ ನಂತರ ಗಿಡಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಈ ವಿಧಾನದಿಂದ ಭೂಮಿ ಸವಳುಗಟ್ಟುವುದನ್ನು ತಡೆಯಬಹುದು ಎಂದು ಅವರು ವಿವರಿಸುತ್ತಾರೆ.

ಸುಮಾರು 6ರಿಂದ 7 ತಿಂಗಳು ಫಲ ನೀಡುವ ಗಿಡಗಳಿಂದ 2016ರಲ್ಲಿ ಅವರು ₹3 ಲಕ್ಷ ಲಾಭ ಪಡೆದುಕೊಂಡಿದ್ದಾರೆ. ಪ್ರತಿ ವರ್ಷ ನವಲಗುಂದ, ಬೆಳವಟಗಿ ರೈತರಿಂದ ಸಾವಯವ ಗೊಬ್ಬರ ಪಡೆದು ಗಿಡಗಳಿಗೆ ಪೂರೈಕೆ ಮಾಡುತ್ತಾರೆ. ‘ಪೇರಲ ಗಿಡಗಳ ಮಧ್ಯದಲ್ಲಿ ಮುಂಗಾರು ಬೆಳೆ ಬೆಳೆದರೆ ಕಳೆ ನಿಯಂತ್ರಣ ಕಷ್ಟ. ಆದ್ದರಿಂದ ಹಿಂಗಾರು ಬೆಳೆಯಾಗಿ ಕಡಲೆ ಬೆಳೆಯಲಾಗುತ್ತದೆ. ಹಸಿ ಕಡಲೆಯನ್ನು ಮಾರಾಟ ಮಾಡುವುದರಿಂದ ಉತ್ತಮ ಲಾಭ ಸಿಗುತ್ತದೆ’ ಎನ್ನುತ್ತಾರೆ.

ಹೆದ್ದಾರಿ ಪ್ರವಾಸಿಗರು ಹಣ್ಣುಕೊಳ್ಳುವ ಮೊದಲೇ ಅದರ ರುಚಿ ಸವಿಯಬೇಕು ಎನ್ನುವ ಉದ್ದೇಶದಿಂದ ಅವರು ಕೇಳಿದ ಹಣ್ಣನ್ನು ತಿನ್ನಲು ಕೊಡುತ್ತಾರೆ. ನಿತ್ಯ ಬೆಳಿಗ್ಗೆ 7 ರಿಂದ 11 ರವರೆಗೆ ಹಣ್ಣು ಕೀಳಲು ಒಬ್ಬರನ್ನು ನೇಮಕ ಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ತೋಟದ ಮುಂದಿನ ಹೆದ್ದಾರಿ ಪಕ್ಕದಲ್ಲಿ ನಾಲ್ಕು ಕೌಂಟರ್‌ ಮಾಡಿ ಹಣ್ಣು ಮಾರುತ್ತಿದ್ದಾರೆ.

ಒಂದು ವರ್ಷದ ಪೇರಲ ಗಿಡಗಳು ಕಾಂಡ ಭಾಗದಿಂದಲೇ 20ಕ್ಕೂ ಹೆಚ್ಚು ಹಣ್ಣುಗಳನ್ನು ಬಿಡುತ್ತಿವೆ. ಸಾಯಿಬಾಬಾ ಅವರು ತಮ್ಮ ತೋಟವನ್ನೆ ಪ್ರಯೋಗಶಾಲೆಯಾಗಿ ಮಾಡಿ ಕೊಂಡಿದ್ದಾರೆ. ಹಣ್ಣಿನ ಗಿಡಗಳನ್ನು ಸಣ್ಣ ಪ್ರಮಾಣದಲ್ಲಿ ಬೆಳೆದು ಅವುಗಳು ತಮ್ಮ ತೋಟದಲ್ಲಿ ಉತ್ತಮ ಫಲ ನೀಡುತ್ತಿವೆಯೇ ಎಂಬುದನ್ನು ಪರೀಕ್ಷಿಸಿ ನಂತರ ಹೆಚ್ಚು ಗಿಡ ಗಳನ್ನು ಬೆಳೆಯುವ ಪ್ರಯೋಗ ನಡೆಸಿದ್ದಾರೆ.

ಸಂಪರ್ಕಕ್ಕೆ ಮೊ. 92424 03279

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry