3

ಬೇರೆಡೆ ಬಾಳುವುದೇ ಈ ರಸಬಾಳೆ?

Published:
Updated:
ಬೇರೆಡೆ ಬಾಳುವುದೇ ಈ ರಸಬಾಳೆ?

ಜನಗೂಡು ರಸಬಾಳೆ’ ರಾಜ್ಯದ ವಿಶಿಷ್ಟ ಹಣ್ಣಿನ ತಳಿ. ಅನನ್ಯ ರುಚಿ ಹಾಗೂ ಸುವಾಸನೆಯಿಂದಾಗಿ ಇದು ವಿಶ್ವ ಪ್ರಸಿದ್ಧಿ ಪಡೆದಿದೆ. ಹೇರಳ ಪೌಷ್ಟಿಕಾಂಶ ಹೊಂದಿರುವ ಈ ಹಣ್ಣಿಗೆ ವ್ಯಾಪಕ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ.

ರಾಜನಂತೆ ಮೆರೆದಿದ್ದ ರಸಬಾಳೆಗೆ ಪನಾಮಾ ಸೊರಗು ರೋಗ ಮಾರಕವಾಗಿ ಪರಿಣಮಿಸಿತ್ತು. ಬ್ಯಾಕ್ಟೀರಿಯಾದಿಂದ ಬರುವ ಈ ರೋಗದಿಂದ ಗಿಡಗಳು ಸೊರಗಿ ಹೋಗುತ್ತಿದ್ದವು. ಗಿಡಗಳಿಗೆ ಪದೇಪದೇ ರೋಗ ಬರುವುದು, ಇಳುವರಿ ಹಾಗೂ ಆದಾಯ ಕಡಿಮೆ ಎಂಬ ಕಾರಣಕ್ಕೆ ರೈತರು ರಸಬಾಳೆಯನ್ನು ಕೈಬಿಟ್ಟು, ಆರ್ಥಿಕವಾಗಿ ಲಾಭ ತರುವ ಏಲಕ್ಕಿ ಬಾಳೆಯನ್ನು ನೆಚ್ಚಿಕೊಂಡರು. ಇದರ ಪರಿಣಾಮ ನೂರಾರು ಎಕರೆಗಳಲ್ಲಿ ಬೆಳೆಯುತ್ತಿದ್ದ ರಸಬಾಳೆ, ನಾಲ್ಕೈದು ಎಕರೆಗಳಿಗೆ ತಗ್ಗಿತು.

ಇದು ಹೀಗೇ ಮುಂದುವರಿದರೆ ಭೌಗೋಳಿಕ ಮಹತ್ವ ಹೊಂದಿರುವ ಈ ಹಣ್ಣಿನ ತಳಿಯೇ ನಶಿಸಿಹೋಗುವ ಅಪಾಯವಿದೆ ಎಂಬ ಆತಂಕ ಕೃಷಿ ತಜ್ಞರದ್ದು.ರಸಬಾಳೆಗೆ ಕಾಯಕಲ್ಪ ನೀಡಿ, ಮುಂದಿನ ಪೀಳಿಗೆಗೆ ಅದರ ರುಚಿ ಹಾಗೂ ಸುವಾಸನೆಯನ್ನು ದಾಟಿಸುವ ಸಾಮೂಹಿಕ ಪ್ರಯತ್ನಗಳೂ ನಡೆಯುತ್ತಿವೆ. ಕೆಲ ತೋಟಗಾರಿಕಾ ತಜ್ಞರು ಹಾಗೂ ರೈತರು ನಂಜನಗೂಡು ರಸಬಾಳೆಯನ್ನು ಸಂರಕ್ಷಿಸಿ, ಬೆಳೆಸಲು ಪಣ ತೊಟ್ಟಿದ್ದಾರೆ.

ರಸಬಾಳೆಗೆ ಮತ್ತೊಮ್ಮೆ ಕಾಯಕಲ್ಪ ನೀಡಲು ಮುಂದಾದವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ಮುಖ್ಯಸ್ಥ ಡಾ.ಬಿ.ಎನ್. ಸತ್ಯನಾರಾಯಣ. ಅವರ ಆಸಕ್ತಿಯ ಫಲವಾಗಿ 2007ರಲ್ಲಿ ಕೇಂದ್ರ ಸರ್ಕಾರದ ₹1 ಕೋಟಿ ಧನಸಹಾಯದೊಂದಿಗೆ ‘ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ’ವನ್ನು (ಟಿಶ್ಯೂ ಕಲ್ಚರ್ ಲ್ಯಾಬ್) ಸ್ಥಾಪಿಸಲಾಯಿತು. ಪ್ರಯೋಗಾಲಯದ ಉಸ್ತುವಾರಿ ವಹಿಸಿದ್ದ ಅವರು, ಅವನತಿಯ ಅಂಚಿನಲ್ಲಿರುವ ವಿಶ್ವ ಪ್ರಸಿದ್ಧ ನಂಜನಗೂಡು ರಸಬಾಳೆಯನ್ನು ಅಂಗಾಂಶ ಕೃಷಿ ಪದ್ಧತಿ ಮೂಲಕ ಅಭಿವೃದ್ಧಿಪಡಿಸಿದ್ದರು.

ರಸಬಾಳೆ ಬೆಳೆಯುವ ತೋಟಗಳಿಗೆ ಹೋಗಿ ಬಾಳೆಯ ಕಾಂಡಗಳನ್ನು ತಂದು ಸಣ್ಣ ಭಾಗಗಳನ್ನಾಗಿ ಮಾಡಲಾಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಟಲಿಗಳಲ್ಲಿ ಸಸಿಗಳಿಗೆ ಅಗತ್ಯ ಇರುವ ಆಹಾರವನ್ನು (ಉದಾ-ನೈಟ್ರೋಜನ್, ಫಾಸ್ಪರಸ್, ಪೊಟ್ಯಾಶಿಯಂ, ಆಕ್ಸಿನ್ಸ್) ತುಂಬಲಾಗುತ್ತದೆ. ಕಾಂಡದಿಂದ ಪಡೆದ ಚಿಕ್ಕ ಭಾಗವನ್ನು ಬಾಟಲಿಯಲ್ಲಿಟ್ಟು ಕೆಲವು ದಿನಗಳ ನಂತರ ಹೊರತೆಗೆದು ಇನ್ನೊಂದು ಬಾಟಲಿಯಲ್ಲಿ ಹಾಕುತ್ತಾರೆ. ಹೀಗೆ ಸಸಿಯನ್ನು ಪೋಷಿಸಿ ಬೆಳೆಸಲಾಗುತ್ತದೆ.

‘ಒಂದು ಬಾಳೆಯ ಕಾಂಡವನ್ನು ಪಡೆದು ಅದರಿಂದ ಲಕ್ಷ ಸಸಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಸಂಖ್ಯೆ ಹೆಚ್ಚಿದಂತೆಲ್ಲ ಬಾಳೆಯ ಗಿಡದ ಗುಣಮಟ್ಟ ಕುಸಿದು ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು 800 ಸಸಿಗಳನ್ನು ಮಾತ್ರ ಮಾಡುತ್ತೇವೆ’ ಎಂದು ಹೇಳುತ್ತಾರೆ ಡಾ.ಸತ್ಯನಾರಾಯಣ.

ರಸಬಾಳೆಗೆ ಈ ಹಿಂದೆ ಇದ್ದ ಪ್ರಸಿದ್ಧಿಯನ್ನು ಮರುಕಳಿಸುವಂತೆ ಮಾಡುವುದು ಸತ್ಯನಾರಾಯಣ ಅವರ ಮಹತ್ವಾಕಾಂಕ್ಷೆಗಳಲ್ಲಿ ಒಂದು. ಆದರೆ, ಅದಕ್ಕೆ ರೈತರಿಂದ ನಿರೀಕ್ಷಿತ ಬೆಂಬಲ, ಪ್ರೋತ್ಸಾಹ, ಸಹಕಾರ ದೊರೆತಿಲ್ಲ ಎಂಬುದು ಅವರ ಅನಿಸಿಕೆ. ‘ನಂಜನಗೂಡು ರಸಬಾಳೆ ತಿನ್ನಲು ಮೃದುವಾಗಿರುತ್ತದೆ. ಈ ಹಣ್ಣನ್ನು ತಿಂದಾಗ ಸಿಗುವ ತೃಪ್ತಿ, ಪಚ್ಚ ಬಾಳೆ ತಿಂದಾಗ ಸಿಗುವುದಿಲ್ಲ. ನಂಜನಗೂಡು ಭಾಗದಲ್ಲಿ

1965ರಲ್ಲಿ 400–500 ಎಕರೆ ಪ್ರದೇಶದಲ್ಲಿ ರಸಬಾಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ, ಈಗ 3–4 ಎಕರೆಯಷ್ಟು ಪ್ರದೇಶದಲ್ಲೂ ರಸಬಾಳೆ ಗಿಡಗಳು ಸಿಗುವುದು ಕಷ್ಟ’ ಎನ್ನುತ್ತಾರೆ ಅವರು.

ರೈತರು ಕಬಿನಿ ನದಿ ನೀರನ್ನು ಬಳಸಿ ಬಾಳೆಯನ್ನು ಬೆಳೆಯುತ್ತಿದ್ದರು. ಇಲ್ಲಿನ ಮಣ್ಣು, ನದಿ ನೀರಿನಲ್ಲಿರುವ ವಿಶಿಷ್ಟ ಸತ್ವದಿಂದಾಗಿ ರಸಬಾಳೆ ಅನನ್ಯ ರುಚಿ ಹಾಗೂ ಸುವಾಸನೆ ಹೊಂದಿದೆ ಎಂದು ರೈತರು ಭಾವಿಸಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪನಾಮಾ ಸೊರಗು ರೋಗ ಕಾಣಿಸಿಕೊಂಡಿತ್ತು. ಇದರಿಂದ ರೈತರು ಬೆಳೆ ಬೆಳೆಯುವುದನ್ನೇ ಕಡಿಮೆ ಮಾಡಿದ್ದರು.

‘ರಸಬಾಳೆಯ ರೋಗನಿರೋಧಕ ಗುಣವನ್ನು ಹೆಚ್ಚಿಸುವುದು, ಉತ್ತಮ ಇಳುವರಿ ನೀಡುವ ಸಸಿಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಒಂದೇ ಕಾಂಡದಿಂದ ಹೆಚ್ಚಿನ ಸಸಿಗಳನ್ನು ಬೆಳೆಸಲು ಸಂಶೋಧನೆ ನಡೆಸಿದೆವು. ಇದಕ್ಕೆ ಪೂರಕವಾದ ಆಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಿದೆವು. 1 ಲಕ್ಷ ಸಸಿಗಳನ್ನು ಬೆಳೆಸುವಂತಹ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿದೆ. ಆದರೆ, ರೈತರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸತ್ಯನಾರಾಯಣ.

‘ಈವರೆಗೆ ರಸಬಾಳೆಯ 70 ಸಾವಿರ ಸಸಿಗಳನ್ನು ರೈತರಿಗೆ ವಿತರಿಸಿದ್ದೇವೆ. ಆರಂಭದಲ್ಲಿ ನಂಜನಗೂಡು ತಾಲ್ಲೂಕಿನ ರೈತರಿಗೆ ಮಾತ್ರ ಈ ಸಸಿಗಳನ್ನು ವಿತರಿಸಲು ನಿರ್ಧರಿಸಿದ್ದೆವು. ಬೇರೆ ಭಾಗದಲ್ಲಿ ಬೆಳೆದರೆ ಅದು ತನ್ನ ಗುಣವನ್ನು ಕಳೆದುಕೊಳ್ಳಬಹುದು ಎಂಬ ಆತಂಕ ನಮ್ಮದಾಗಿತ್ತು. ಮುಂದೆ ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಕನಕಪುರ ತಾಲ್ಲೂಕಿನ ರೈತರಿಗೆ ಸಸಿಗಳನ್ನು ನೀಡಿದ್ದೇವೆ. ನಂಜನಗೂಡು ಭಾಗದಲ್ಲಿ ಬೆಳೆದ ಬೆಳೆಗೂ, ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಬೆಳೆದ ರಸಬಾಳೆಯ ರುಚಿ ಹಾಗೂ ಸುವಾಸನೆಗೂ ಗಮನಾರ್ಹ ವ್ಯತ್ಯಾಸವೇನೂ ಕಂಡುಬಂದಿಲ್ಲ’ ಎಂದು ಹೇಳುತ್ತಾರೆ.

‘ರೈತರಿಂದ ಬರುವ ಬೇಡಿಕೆಯನ್ನು ನೋಡಿಕೊಂಡು ನಾವು ಸಸಿಗಳನ್ನು ಬೆಳೆಸುತ್ತೇವೆ. ನರ್ಸರಿಗಳಲ್ಲಿ ಇರುವಂತೆ ಸಸಿಗಳನ್ನು ಮೊದಲೇ ಬೆಳೆಸಿ ಇಟ್ಟುಕೊಂಡಿರುವುದಿಲ್ಲ. ಆರು ತಿಂಗಳ ಮೊದಲೇ ಹೇಳಿದರೆ, ಅವರ ಬೇಡಿಕೆಯಷ್ಟು ಸಸಿಗಳನ್ನು ಬೆಳೆಸಿ, ವಿತರಣೆ ಮಾಡುತ್ತೇವೆ. ಕೆಲವರು 10 ಸಾವಿರ ಸಸಿಗಳನ್ನು ಬೆಳೆಸುವಂತೆ ಹೇಳಿರುತ್ತಾರೆ. ಬಳಿಕ ಮನಸು ಬದಲಿಸಿರುತ್ತಾರೆ. ಇದರಿಂದ ಸಸಿಗಳನ್ನು ಬೆಳೆಸಲು ತಗುಲಿದ ವೆಚ್ಚ, ಮಾನವ ಸಂಪನ್ಮೂಲ ಹಾಗೂ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ನಾವು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದು ವಿವರಿಸುತ್ತಾರೆ.

20 ಸಾವಿರ ಸಸಿಗಳು ಕಸದ ಬುಟ್ಟಿಗೆ

‘ಬಾಳೆಯ ಸಸಿಗಳನ್ನು ಬೆಳೆಸಿದ ಬಳಿಕ ಹೆಚ್ಚೆಂದರೆ 2–3 ವಾರಗಳವರೆಗೆ ಇಟ್ಟುಕೊಳ್ಳಬಹುದು. ಬಳಿಕ ಅವುಗಳಿಗೆ ವಯಸ್ಸಾಗುತ್ತದೆ. ಅಂತಹ ಸಸಿಗಳನ್ನು ನೆಟ್ಟರೂ ಸರಿಯಾಗಿ ಬೆಳೆಯುವುದಿಲ್ಲ. ಬೆಳೆದರೂ ಹೆಚ್ಚಿನ ಇಳುವರಿ ನೀಡುವುದಿಲ್ಲ. ಎರಡು ವರ್ಷಗಳ ಹಿಂದೆ 20 ಸಾವಿರ ಸಸಿಗಳನ್ನು ಬೆಳೆಸಿದ್ದೆವು. ಆದರೆ, ಅವುಗಳನ್ನು ತೆಗೆದುಕೊಂಡು ಹೋಗಲು ರೈತರು ಮುಂದೆ ಬರಲಿಲ್ಲ. ಇದರಿಂದ ಸಸಿಗಳನ್ನು ಬಿಸಾಡಬೇಕಾಯಿತು’ ಎಂದು ನೋವಿನಿಂದ ಹೇಳುತ್ತಾರೆ.

ರಸಬಾಳೆ ಆರ್ಥಿಕವಾಗಿ ಲಾಭದಾಯಕ

ಒಂದು ಎಕರೆಗೆ 6x6 ಅಡಿ ಅಳತೆಯಲ್ಲಿ 1,200 ಸಸಿಗಳನ್ನು ನೆಡಬಹುದು. ಎಲ್ಲ ಬಾಳೆಯಂತೆ ಇದನ್ನೂ ಬೆಳೆಸಬಹುದು. 12–14 ತಿಂಗಳಲ್ಲಿ ಫಸಲು ಬರುತ್ತದೆ. ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ₹30 ಸಾವಿರದಿಂದ ₹50 ಸಾವಿರ ಬೇಕಾಗುತ್ತದೆ. ಫಸಲು ಚೆನ್ನಾಗಿ ಬಂದರೆ ಒಂದು ಗೊನೆಯಲ್ಲಿ 10–12 ಕೆ.ಜಿ.ಯಷ್ಟು ಹಣ್ಣು ಇರುತ್ತದೆ. ಈಗ ಒಂದು ಡಜನ್‌ ಹಣ್ಣಿನ ಬೆಲೆ ಸುಮಾರು ₹120 ಇದೆ.

ಸರ್ಕಾರದ ಪ್ರೋತ್ಸಾಹ ಅಗತ್ಯ

‘ರಸಬಾಳೆಯ ತಳಿಯನ್ನು ಉಳಿಸಲು ಸರ್ಕಾರ ಮುಂದಾಗಬೇಕು. ರೈತರಿಗೆ ಸಬ್ಸಿಡಿ ದರದಲ್ಲಿ ಸಸಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಒಮ್ಮೆಲೆ 2–3 ಲಕ್ಷ ಸಸಿಗಳನ್ನು ಬೆಳೆಸಿಕೊಡಲು ನಾವು ಸಿದ್ಧರಿದ್ದೇವೆ. ಬಾಳೆಗೆ ತಗಲುವ ಪನಾಮಾ ಸೊರಗು ರೋಗ ಬರದಂತೆ ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯದ ರೋಗಶಾಸ್ತ್ರ ವಿಭಾಗದ ತಜ್ಞರು ನೀಡುತ್ತಾರೆ. ಇದರ ಉಪಯೋಗಗಳನ್ನು ರೈತರು ಪಡೆದು ಕೊಳ್ಳಬೇಕು. ಕರಾರುವಾಕ್ಕಾಗಿ ಕೃಷಿ ಮಾಡುವುದರಿಂದ ಲಾಭ ಗಳಿಸಬಹುದು. ಇದರಿಂದ ಪಾರಂಪರಿಕ ಹಿನ್ನೆಲೆ ಹೊಂದಿರುವ ಬಾಳೆಯನ್ನು ಉಳಿಸಿದಂತೆಯೂ ಆಗುತ್ತದೆ’ ಎಂದು ಸತ್ಯನಾರಾಯಣ ಸಲಹೆ ನೀಡುತ್ತಾರೆ.

ಸಂಪರ್ಕಕ್ಕೆ: 080 23330153.

***

ಭರಮಸಾಗರದ ರಸಬಾಳೆ

‘ಅಂಗಾಂಶ ಕೃಷಿ ಪ್ರಯೋಗಾಲಯದಿಂದ ನಂಜನಗೂಡು ರಸಬಾಳೆಯ ಸಾವಿರ ಗಿಡಗಳನ್ನು ತೆಗೆದುಕೊಂಡು ಚಿತ್ರದುರ್ಗದ ಭರಮಸಾಗರದಲ್ಲಿ ನಾಟಿ ಮಾಡಿದ್ದೆ. ನಾನು ಬೆಳೆದ ರಸಬಾಳೆಯು ಮೂಲ ಹಣ್ಣಿನ ರುಚಿ, ಸುವಾಸನೆಯನ್ನೇ ಹೊಂದಿತ್ತು. ಆದರೆ, ಗಾತ್ರದಲ್ಲಿ ಸ್ವಲ್ಪ ಜಾಸ್ತಿ ದಪ್ಪ ಇತ್ತು’ ಎನ್ನುತ್ತಾರೆ ಭರಮಸಾಗರದ ರೈತ ಶಾಂತವೀರಪ್ಪ.

‘ಸಾವಯವ ಪದ್ಧತಿಯಲ್ಲಿಯೇ ಹಣ್ಣು ಬೆಳೆದಿದ್ದೆ. ಹೀಗಾಗಿ ಫಸಲು ಚೆನ್ನಾಗಿ ಬಂದಿತ್ತು. ಮಾರುಕಟ್ಟೆ ವಿಷಯಕ್ಕೆ ಬಂದಾಗ, ದುಬಾರಿ ಬೆಲೆ ಕೊಟ್ಟು ರಸಬಾಳೆಯನ್ನು ಖರೀದಿಸಲು ಮಧ್ಯವರ್ತಿಗಳು ಹಿಂದೇಟು ಹಾಕಿದ್ದರು. ಅವರು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದನ್ನು ಮನಗಂಡು, ಹಾಪ್‌ಕಾಮ್ಸ್ ಮಳಿಗೆಗಳಿಗೆ ಸರಬರಾಜು ಮಾಡಿದ್ದೆ’ ಎಂದು ವಿವರಿಸುತ್ತಾರೆ.

‘ರಸಬಾಳೆಗೆ ರೋಗ ಬರದಂತೆ ತಡೆಗಟ್ಟಲು ಹಲವು ಕ್ರಮಗಳನ್ನು ಅನುಸರಿಸಬೇಕು. 6 ಅಡಿ ಅಂತರದಲ್ಲಿ ಗಿಡ ನೆಡಬೇಕು. 3 ಅಡಿ ಆಳ ತೆಗೆದು 4 ಬುಟ್ಟಿ ಬೇವಿನ ಹಿಂಡಿ, ಕೆರೆಯ ಮಣ್ಣನ್ನು ಹಾಕಬೇಕು. ಆಗಾಗ ಔಷಧೋಪಚಾರ ಮಾಡಬೇಕು. ಇದಕ್ಕೆಲ್ಲ ಸಾವಧಾನ ಇರಬೇಕು. ನಮ್ಮ ರೈತರಿಗೆ ಸಾವಧಾನ ಇಲ್ಲ. ನಾಟಿ ಮಾಡಿದ ತಕ್ಷಣ ಅದರಲ್ಲಿ ಹಣ್ಣು ಬಿಡಬೇಕು, ಆದಾಯ ಬರಬೇಕು ಎಂದು ಬಯಸುತ್ತಾರೆ. ಆದರೆ, ರಸಬಾಳೆಯನ್ನು ಚೆನ್ನಾಗಿ ಉಪಚರಿಸಿದರೆ, ಅದರಿಂದ ಉತ್ತಮ ಫಸಲು, ಆದಾಯವನ್ನು ನಿರೀಕ್ಷೆ ಮಾಡಬಹುದು’ ಎಂದು ಅವರು ಹೇಳುತ್ತಾರೆ.

‘ಬೇರೆ ಬಾಳೆಗಿಂತ ರಸಬಾಳೆಗೆ ಬೇಗ ರೋಗ ಬರುತ್ತದೆ. ಆದರೆ, ಕೆಲ ಕ್ರಮಗಳನ್ನು ಕೈಗೊಳ್ಳುವುದರಿಂದ ಇದನ್ನು ತಡೆಗಟ್ಟಬಹುದು. ಕಾಲುವೆ ಅಥವಾ ಕೊಳವೆಬಾವಿಯ ನೀರನ್ನು ಹರಿಸುವುದರಿಂದ ರೋಗಾಣುಗಳು ಬೇಗ ಹರಡುತ್ತವೆ. ಹೀಗಾಗಿ ಹನಿ ನೀರಾವರಿ ಪದ್ಧತಿ ಅನುಸರಿಸಬೇಕು. ಯಾವುದೇ ಭೂಮಿಯಲ್ಲಿ ರಸಬಾಳೆಯನ್ನು ಎರಡು ವರ್ಷಗಳು ಬೆಳೆದ ಬಳಿಕ, ಆ ಜಾಗದಲ್ಲಿ ಬೇರೆ ಬೆಳೆ ಹಾಕಬೇಕು.ಇಲ್ಲದಿದ್ದರೆ ರೋಗ ಬೇಗ ಬರುತ್ತದೆ. ಒಂದರೆಡು ವರ್ಷಗಳ ಬಳಿಕ ರಸಬಾಳೆಯನ್ನು ಬೆಳೆಯಬಹುದು’ ಎಂದು ಅವರು ಸಲಹೆ ನೀಡುತ್ತಾರೆ.

***

70ಸಾವಿರ ಬೆಂಗಳೂರು ಕೃಷಿ ವಿವಿ ಅಭಿವೃದ್ಧಿಪಡಿಸಿದ ರಸಬಾಳೆ ಸಸಿಗಳು

₹20 ಪ್ರತಿ ಸಸಿಗೆ ನಿಗದಿಪಡಿಸಿದ ಬೆಲೆ

5ಎಕರೆ ನಂಜನಗೂಡಿನಲ್ಲಿ ಉಳಿದಿರುವ ರಸಬಾಳೆ ಪ್ರದೇಶ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry