7

ಅತ್ಯುತ್ತಮ ಆಗಬಹುದಾಗಿದ್ದ ಫೋನ್ – ಹೋನರ್ 8 ಪ್ರೊ

ಯು.ಬಿ. ಪವನಜ
Published:
Updated:
ಅತ್ಯುತ್ತಮ ಆಗಬಹುದಾಗಿದ್ದ ಫೋನ್ – ಹೋನರ್ 8 ಪ್ರೊ

ಹೋನರ್ (Honor) ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು. ಇತರೆ ಕಂಪೆನಿಗಳಂತೆ ಹೋನರ್ ಕೂಡ ಹಲವು ನಮೂನೆಯ ಮತ್ತು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಇದೇ ಅಂಕಣದಲ್ಲಿ ಹೋನರ್ 6 ಎಕ್ಸ್, ಹೋನರ್ 8 ಮತ್ತು ಹೋನರ್ 8 ಲೈಟ್ ಫೋನ್‌ಗಳ ವಿಮರ್ಶೆಯನ್ನು ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಹೋನರ್ 8 ಪ್ರೊ (Honor 8 Pro) ಎಂಬ ಸ್ಮಾರ್ಟ್‌ಫೋನನ್ನು.

ಇದನ್ನು ಬಹುತೇಕ ಸುಮಾರು 6 ತಿಂಗಳುಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದ ಹೋನರ್ 8ರ ಉತ್ತರಾಧಿಕಾರಿ ಎನ್ನಬಹುದು. ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಹೋನರ್ 8ನ್ನೇ ಹೋಲುತ್ತದೆ. ಇದು 5.7 ಇಂಚು ಗಾತ್ರದ ಪರದೆಯನ್ನು ಒಳಗೊಂಡಿದೆ. ದಪ್ಪವೂ ಕಡಿಮೆ ಇದೆ. 5.0 - 5.5 ಇಂಚು ಗಾತ್ರದ ಪರದೆ ಸಾಲದು ಎನ್ನುವವರಿಗೆ ಇದು ಉತ್ತಮ ಆಯ್ಕೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಲೋಹದ ದೇಹವಿದೆ ಹಾಗೂ ಇದರ ಹಿಂಭಾಗ ಸ್ವಲ್ಪ ನುಣುಪಾಗಿದೆ. ಗಾತ್ರ ದೊಡ್ಡದಾಗಿರುವುದರಿಂದ ಮತ್ತು ದೇಹ ಸ್ವಲ್ಪ ನುಣುಪಾಗಿರುವುದರಿಂದ ಕೈಯಿಂದ ಜಾರಿ ಬೀಳುವ ಭಯವಿದೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ-ಸಿ ನಮೂನೆಯ ಕಿಂಡಿಗಳಿವೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಬಳಸಲು ನೀವು ಯುಎಸ್‌ಬಿ-ಸಿ ನಮೂನೆಯ ಓಟಿಜಿ ಕೇಬಲ್ ಅಥವಾ ಅಡಾಪ್ಟರ್ ಕೊಳ್ಳಬೇಕು. ಫ್ರೇಂನ ಕೆಳಭಾಗದಲ್ಲಿ ಒಂದು ಗ್ರಿಲ್‌ ಇದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದಲ್ಲಿ ಕ್ಯಾಮೆರಾ ಇದೆ ಹಾಗೂ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಮೇಲ್ಭಾಗದಲ್ಲಿ ಅವಕೆಂಪು ದೂರನಿಯಂತ್ರಕ (infrared remote control) ಕಿಂಡಿಯಿದೆ.

ಹೋನರ್ 8 ಫೋನಿನಂತೆ ಇದರಲ್ಲೂ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ಒಂದು ಬಣ್ಣದಲ್ಲಿ ಮತ್ತು ಇನ್ನೊಂದು ಕಪ್ಪು ಬಿಳುಪಿನಲ್ಲಿ ದೃಶ್ಯವನ್ನು ಗ್ರಹಿಸಿ ಅವುಗಳನ್ನು ಸಂಯೋಜಿಸಿ ಅಂತಿಮ ಚಿತ್ರ ನೀಡುತ್ತದೆ. ಒಂದು ಕ್ಯಾಮೆರಾ ಹತ್ತಿರದ ವಸ್ತುವನ್ನು ನಿಖರವಾಗಿ ಫೋಕಸ್ ಮಾಡುವಾಗ ಇನ್ನೊಂದು ಕ್ಯಾಮೆರಾ ಅದರ ಹಿನ್ನೆಲೆಯನ್ನು ಫೋಕಸ್ ಮಾಡುತ್ತದೆ. ಹೋನರ್ 8 ಮತ್ತು ಇದರ ಕ್ಯಾಮೆರಾಗಳಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಇವರ ಕ್ಯಾಮೆರಾ ಕಿರುತಂತ್ರಾಂಶದಲ್ಲಿ (ಆ್ಯಪ್) ಒಂದು ವಿಶೇಷ ಸವಲತ್ತಿದೆ. ಅದು ವೈಡ್ ಅಪೆರ್ಚರ್. ಅದನ್ನು ಬಳಸಿ ಫೋಟೊ ತೆಗೆದರೆ ನಂತರ ಫೋಟೊದ ಬೇರೆ ಬೇರೆ ಜಾಗಗಳ ಮೇಲೆ ಬೆರಳಿಟ್ಟು ಆಯಾ ಜಾಗಕ್ಕೆ ಫೋಕಸ್ ಮಾಡಬಹುದು. ಅಂದರೆ ನಿಮಗೆ ವ್ಯಕ್ತಿ ಮಾತ್ರ ಬೇಕಿದ್ದರೆ ಹಿನ್ನೆಲೆಯನ್ನು ಮಸುಕಾಗಿಸಬಹುದು ಮತ್ತು ಅಗತ್ಯವಿದ್ದಾಗ ಹಿನ್ನೆಲೆಯನ್ನು ಸ್ಪಷ್ಟಮಾಡಬಹುದು.

ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಆದರೆ ಅತಿ ಕಡಿಮೆ ಬೆಳಕಿನಲ್ಲಿ ಒಂದು ಮಟ್ಟಿಗೆ ಉತ್ತಮ ಎನ್ನಬಹುದಾದ ಫೋಟೊ ಮಾತ್ರ ಬರುತ್ತದೆ. ಇನ್ನೂ ಸ್ವಲ್ಪ ಚೆನ್ನಾಗಿ ಮೂಡಿಬಂದಿದ್ದರೆ ಒಳ್ಳೆಯದಿತ್ತು ಎಂದು ನನ್ನ ಅಭಿಪ್ರಾಯ. ಇದು 4k ವಿಡಿಯೊ ಚಿತ್ರೀಕರಣ ಮಾಡುತ್ತದೆ. ಆದರೆ ಹಾಗೆ ಮಾಡುವಾಗ ಕ್ಯಾಮೆರಾ ತಿರುಗಿಸಿದರೆ ಬೇಗ ಬೇಗ ಫೋಕಸ್ ಮಾಡುವುದಿಲ್ಲ. ಇದರ ಕ್ಯಾಮೆರಾದ ಒಂದು ಪ್ರಮುಖ ಬಾಧಕ ಎಂದರೆ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು.

ಇದರಲ್ಲಿರುವುದು 5.7 ಇಂಚು ಗಾತ್ರದ

1440 x 2560 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ಚೆನ್ನಾಗಿದೆ. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ಉತ್ತಮವಾಗಿವೆ. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಎಂಜಿನ್ ಪರವಾಗಿಲ್ಲ. ಬಹುಶಃ ಇಯರ್‌ಫೋನ್ ನೀಡಿಲ್ಲ. ಇದರ ಇನ್ನೂ ಒಂದು ಪ್ರಮುಖ ಬಾಧಕ ಎಂದರೆ ಫೋನ್ ಬಿಸಿಯಾಗುವುದು. ತುಂಬ ಹೊತ್ತು ಆಟ ಆಡಿದರೆ ಅಥವಾ ಕ್ಯಾಮೆರಾ ಬಳಸಿದರೆ ಫೋನ್ ಬಿಸಿಯಾಗುತ್ತದೆ. ಅದರಲ್ಲೂ ವಿಡಿಯೊ ಚಿತ್ರೀಕರಣ ಮಾಡಿದರೆ ಕ್ಯಾಮೆರಾ ನಿಜಕ್ಕೂ ತುಂಬ ಬಿಸಿಯಾಗುತ್ತದೆ.

ಇವರು ಆಂಡ್ರಾಯ್ಡ್  7.0ರ ಮೇಲೆ ತಮ್ಮದೇ ಹೊದಿಕೆ (EMUI 5.1) ಸೇರಿಸಿದ್ದಾರೆ. ಇದರ ಬಳಕೆ ಅಭ್ಯಾಸವಾಗುವ ತನಕ ಸ್ವಲ್ಪ ಕಿರಿಕಿರಿ ಅನ್ನಿಸಬಹುದು. ಇದರಲ್ಲಿ ಭಾರತೀಯ ಪಂಚಾಂಗವೂ ಇದೆ. ತಮ್ಮದೇ ಕೆಲವು ಅಧಿಕ ಕಿರುತಂತ್ರಾಂಶಗಳನ್ನು (bloatware) ಸೇರಿಸಿದ್ದಾರೆ. ಅವುಗಳನ್ನು ಬೇಡವಾದರೆ ತೆಗೆಯಬಹುದು.

ಬ್ಯಾಟರಿ ಸುಮಾರು ಒಂದೂವರೆ ದಿನ ಬಾಳಿಕೆ ಬರುತ್ತದೆ. ಈ ಫೋನಿನಲ್ಲಿ ವೇಗವಾಗಿ ಚಾರ್ಜ್ (quick charge) ಆಗುವ ಸವಲತ್ತು ಇದೆ ಎಂದು ಕಂಪೆನಿ ಮತ್ತು ಹಲವು ವಿಮರ್ಶೆಗಳು ಹೇಳುತ್ತಿವೆ. ಆದರೆ ನನಗೆ ವಿಮರ್ಶೆಗೆ ಕಳುಹಿಸಿದ್ದು ಫೋನ್ ಮಾತ್ರ. ಅದರ ಪೆಟ್ಟಿಗೆ, ಚಾರ್ಜರ್, ಇಯರ್‌ಫೋನ್ ಏನೂ ನೀಡಿಲ್ಲ. ಆದುದರಿಂದ ಇದು ನಿಜಕ್ಕೂ ವೇಗವಾಗಿ ಚಾರ್ಜ್ ಆಗುತ್ತದೆಯೋ ಎಂದು ತಿಳಿದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಮೇಲೆ ತಿಳಿಸಿದ ಒಂದೆರಡು ಚಿಕ್ಕಪುಟ್ಟ ಬಾಧಕಗಳನ್ನು ಸರಿಪಡಿಸಿಕೊಂಡಿದ್ದರೆ ಇದು ನಿಜಕ್ಕೂ ನೀಡುವ ಬೆಲೆಗೆ ಅತ್ಯುತ್ತಮ ಫೋನ್ ಅನ್ನಿಸಿಕೊಳ್ಳಬಹುದಿತ್ತು ಎಂದು ನನ್ನ ಅಭಿಪ್ರಾಯ.

***

ವಾರದ ಆ್ಯಪ್ (App)

ಚಡಪಡಿಕೆ ಕಳೆಯಿರಿ

ನೀವು ತುಂಬ ಚಡಪಡಿಸುತ್ತಿದ್ದೀರಾ? ಇತ್ತೀಚೆಗೆ ಈ ಟೆನ್ಶನ್ ಅನ್ನೋ ಪದ ತುಂಬ ಸಾಮಾನ್ಯವಾಗಿಬಿಟ್ಟಿದೆ. ಯಾಕೆ ಟೆನ್ಶನ್ ಮಾಡ್ಕೊತ್ತಿದ್ದೀರಾ ಎಂದು ಕೇಳುವುದು ಅತಿ ಸಾಮಾನ್ಯವಾಗಿದೆ. ಈ ಟೆನ್ಶನ್ ಕಳೆಯಲು ಹಲವು ನಮೂನೆಯ ಸಾಧನಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಉದಾಹರಣೆಗೆ ರಬ್ಬರ್ ಚೆಂಡು. ಇತ್ತೀಚೆಗೆ ಇದ್ದಕ್ಕಿದ್ದಂತೆ ಜನಪ್ರಿಯವಾಗುತ್ತಿರುವುದು Fidget Spinner. ಇದು ತುಂಬ ಸರಳ ಸಾಧನ. ಮಧ್ಯದಲ್ಲಿ ಬಾಲ್ ಬೇರಿಂಗ್ ಇದ್ದು ಮೂರು ಅಲಗುಗಳಿವೆ. ಇದನ್ನು ತಿರುಗಿಸುತ್ತ ಇದ್ದರೆ ನಿಮ್ಮ ಚಡಪಡಿಕೆ ಕಡಿಮೆಯಾಗುತ್ತದೆ! ಈ ಸಾಧನ ಇಲ್ಲದಿದ್ದಲ್ಲಿ ಚಿಂತೆಯಿಲ್ಲ. ಈಗ ಅದೇ ನಿಮಗೆ ಆಂಡ್ರಾಯ್ಡ್ ಕಿರುತಂತ್ರಾಂಶ (ಆ್ಯಪ್) ಆಗಿಯೂ ಲಭ್ಯವಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ Fidget Spinner ಎಂದು ಹುಡುಕಬೇಕು ಅಥವಾ bit.ly/gadgetloka290 ಜಾಲತಾಣಕ್ಕೆ ಭೇಟಿ ನೀಡಬೇಕು.

***

ಗ್ಯಾಜೆಟ್ ಸುದ್ದಿ: ಒಂದು ಫಾಂಟಿನ ಕಥೆ

ಪಾಕಿಸ್ತಾನ ದೇಶದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರನ್ನು ಅಲ್ಲಿಯ ಸರ್ವೋಚ್ಚ ನ್ಯಾಯಾಲಯ ಭ್ರಷ್ಟಾಚಾರದ ಆರೋಪದಲ್ಲಿ ಅಪರಾಧಿ ಎಂದು ಘೋಷಿಸಿದ್ದು ನಂತರ ಅವರು ರಾಜೀನಾಮೆ ನೀಡಬೇಕಾಗಿ ಬಂದುದು ಎಲ್ಲರಿಗೂ ತಿಳಿದಿದೆಯಷ್ಟೆ? ಇದರ ಹಿಂದೆ ಒಂದು ಫಾಂಟಿನ ಕಥೆಯಿದೆ ಎಂದರೆ ಆಶ್ಚರ್ಯವಾಗುತ್ತದೆಯೇ? ವಿದೇಶದಲ್ಲಿ ನವಾಜ್ ಷರೀಫ್ ಮತ್ತು ಅವರ ಕುಟುಂಬದವರು ಬೇನಾಮಿ ಕಂಪೆನಿಗಳಲ್ಲಿ ಒಡೆತನ ಹೊಂದಿದ್ದಾರೆ ಎಂಬುದು ಆರೋಪವಾಗಿತ್ತು. 2006ನೆಯ ಇಸವಿಯಲ್ಲಿ ನೋಂದಣಿಯಾದುದು ಎಂಬ ಒಂದು ಕಡತವನ್ನು ನವಾಜ್ ಷರೀಫರ ಮಗಳು ಬಿಡುಗಡೆ ಮಾಡಿ ನಾವು ತಪ್ಪಿತಸ್ಥರಲ್ಲ ಎಂದು ವಾದಿಸಿದ್ದರು. ಆದರೆ ಆ ಕಡತವನ್ನು ತಯಾರಿಸಿದ್ದು ಮೈಕ್ರೋಸಾಫ್ಟ್‌ನವರು 2007ರಲ್ಲಿ ಬಿಡುಗಡೆ ಮಾಡಿದ್ದ ಕ್ಯಾಲಿಬ್ರಿ ಎಂಬ ಫಾಂಟನ್ನು ಬಳಸಿ. ಅಂದರೆ ಆ ಕಡತವೂ ಸುಳ್ಳು ಎಂದು ಸಾಬೀತಾಯಿತು. ನವಾಜ್ ಷರೀಫ್ ತಮ್ಮ ಪ್ರಧಾನ ಮಂತ್ರಿ ಪದವಿಯನ್ನು ಒಂದು ಫಾಂಟಿನಿಂದಾಗಿ ಕಳೆದುಕೊಳ್ಳಬೇಕಾಯಿತು!

***

ಗ್ಯಾಜೆಟ್ ಸಲಹೆ

ಬಸವರಾಜರ ಪ್ರಶ್ನೆ: ನನ್ನ ಜಿಮೇಲ್ ಖಾತೆಯನ್ನು ನಿಷ್ಕ್ರಿಯೆ ಮಾಡುವುದು ಹೇಗೆ?

ಉ:  myaccount.google.com/preferences#deleteservices ಪುಟಕ್ಕೆ ಭೇಟಿ ನೀಡಿ ಅಲ್ಲಿ ಜಿಮೇಲ್ ಅನ್ನು ಆಯ್ಕೆ ಮಾಡಿ ಅಳಿಸಿಹಾಕಬಹುದು. ಎಚ್ಚರಿಕೆ, ಒಮ್ಮೆ ಅಳಿಸಿದರೆ ನಿಮಗೆ ಇಮೇಲ್ ಮತ್ತು ಗೂಗಲ್ ಖಾತೆ ಜೊತೆ ಸಂಪರ್ಕ ಹೊಂದಿರುವ ಎಲ್ಲ ಮಾಹಿತಿಗಳೂ ನಾಶವಾಗುತ್ತವೆ. ಅಳಿಸುವ ಮೊದಲು ಎಲ್ಲವನ್ನೂ ಡೌನ್‌ಲೋಡ್ ಮಾಡಿಕೊಳ್ಳುವ ಸವಲತ್ತೂ ಅಲ್ಲೇ ಇದೆ.

***

ಗ್ಯಾಜೆಟ್ ತರ್ಲೆ

ನವಾಜ್ ಷರೀಫರು ತಮ್ಮ ರಾಜೀನಾಮೆ ಪತ್ರವನ್ನು ಮೈಕ್ರೊಸಾಫ್ಟ್‌ನವರ ಕ್ಯಾಲಿಬ್ರಿ ಫಾಂಟ್ ಉಪಯೋಗಿಸಿ ತಯಾರಿಸಬೇಕಿತ್ತು ಎಂದು ಪಾಕಿಸ್ತಾನದ ಪತ್ರಿಕಾಕರ್ತರೊಬ್ಬರು ಗೇಲಿ ಮಾಡಿದ್ದಾರೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry