ಬುಧವಾರ, ಡಿಸೆಂಬರ್ 11, 2019
22 °C

ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

Published:
Updated:
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

ಮಹಿಳೆಯನ್ನು ದುರುದ್ದೇಶದಿಂದ ಹಿಂಬಾಲಿಸುವುದೂ ಅಪರಾಧ. ಈ ತಪ್ಪಿಗೆ ಐಪಿಸಿ 354ಡಿ ಅಡಿ ಪ್ರಕರಣ ದಾಖಲಿಸಬೇಕು. ಆರೋಪ ಸಾಬೀತಾದರೆ ಮೂರು ವರ್ಷ ಸೆರೆವಾಸ ಹಾಗೂ ದಂಡದ ಶಿಕ್ಷೆ ಇರುತ್ತದೆ. ಎರಡನೇ ಬಾರಿಗೆ ಇದೇ ಆರೋಪದಡಿ ಸಿಕ್ಕಿಬಿದ್ದರೆ ಐದು ವರ್ಷ ಜೈಲು ಹಾಗೂ ದಂಡವಿರುತ್ತದೆ.

ಆದರೆ, ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ಹಾವೇರಿ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಈವರೆಗೂ 354ಡಿ ಅಡಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

‘354ಡಿ ಕಲಂನ ಗಂಭೀರತೆ ಬಗ್ಗೆ ರಾಜ್ಯ ಪೊಲೀಸರಲ್ಲಿ ಅರಿವಿನ ಕೊರತೆ ಇದೆ. ವ್ಯಕ್ತಿಯೊಬ್ಬ ಹಿಂಬಾಲಿಸಿಕೊಂಡು ಹೋಗಿ ಮಹಿಳೆ ಮೇಲೆ ಹಲ್ಲೆ ನಡೆಸಿದನೆಂದರೆ, ಪೊಲೀಸರು ಹಲ್ಲೆ ಆರೋಪದಡಿ ಮಾತ್ರ ಪ್ರಕರಣ ದಾಖಲಿಸುತ್ತಿದ್ದಾರೆ. ಹಿಂಬಾಲಿಸಿ ಬಂದಿದ್ದಕ್ಕೂ 354ಡಿ ಅಡಿ ಪ್ರಕರಣ ದಾಖಲಿಸಬೇಕೆಂಬ ಕುರಿತು ಅವರು ಯೋಚಿಸುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದಲೇ ಕಾನೂನುಗಳನ್ನು ರೂಪಿಸುವಾಗ, ಅವುಗಳನ್ನು ಅವರ ಮೇಲೆ ಹೇರುವುದಕ್ಕೇಕೆ ಹಿಂದೇಟು ಹಾಕಬೇಕು’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

‘ಕೊಲೆ, ಅತ್ಯಾಚಾರ, ಸುಲಿಗೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲೆ ನಡೆಯುವ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಹಿಂಬಾಲಿಸಿಕೊಂಡೇ ಬಂದಿರುತ್ತಾರೆ. ಪೊಲೀಸರು ಕಾನೂನಿನ ಪ್ರಕಾರವೇ ನಡೆದುಕೊಂಡಿದ್ದರೆ, 354ಡಿ ಅಡಿ ಈಗಾಗಲೇ ಸಾವಿರಾರು ಪ್ರಕರಣಗಳು ದಾಖಲಾಗಬೇಕಿತ್ತು. ಬಳಕೆಯಾಗದೆ ಉಳಿದಿರುವ ಇಂಥ ಕಾಯ್ದೆ–ಕಲಂಗಳ ಬಗ್ಗೆ ಮೊದಲು ಅವರಿಗೆ ಜಾಗೃತಿ ಮೂಡಿಸಬೇಕಿದೆ’ ಎನ್ನುತ್ತಾರೆ ಅವರು.

‘2014ರಲ್ಲಿ ಈ ಕಲಂನಡಿ 64 ಪ್ರಕರಣಗಳು ದಾಖಲಾಗಿದ್ದವು. ಮರುವರ್ಷವೇ ಆ ಸಂಖ್ಯೆ ದುಪ್ಪಟ್ಟಾಯಿತು. ಇದರರ್ಥ ಪೊಲೀಸರೂ ಕಲಂನ ಮಹತ್ವ ತಿಳಿದುಕೊಳ್ಳುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಈ ಕಲಂ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಸಂಬಂಧಿಸಿದ ಕಲಂಗಳ ಬಗ್ಗೆ ಜಿಲ್ಲಾ ಮಟ್ಟದ ಪೊಲೀಸರ ಪೈಕಿ ಬಹುತೇಕರಿಗೆ ಈಗಲೂ ಮಾಹಿತಿ ಇಲ್ಲ’ ಎಂದು ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)