ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿಗೆ ಸವಿ ತಿನಿಸು

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಚಕ್ಕುಲಿ
ಬೇಕಾದ ಪದಾರ್ಥಗಳು: ತೊಳೆದ ಅಕ್ಕಿಯ ಹಿಟ್ಟು 1 ಲೋಟ, ಉದ್ದಿನ ಬೇಳೆ ಹಿಟ್ಟು 1/4 ಲೋಟ, ಉಪ್ಪು ರುಚಿಗೆ ತಕ್ಕಷ್ಟು, ನೀರು 1/3 ಲೋಟ, ಚಿಟಿಕೆ ಇಂಗು, ತುಪ್ಪ 1/4 ಲೋಟ, ಬೇಯಿಸಲು ಸಾಕಷ್ಟು ಎಣ್ಣೆ

ಮಾಡುವ ವಿಧಾನ: ಉದ್ದಿನಬೇಳೆಯನ್ನು ಕೈಬಿಸಿಯಾಗುವ ತನಕ ಹುರಿದು ಹಿಟ್ಟು ಮಾಡಿಸಬೇಕು. ನೀರನ್ನು ಒಲೆಯ ಮೇಲಿಟ್ಟು, ಇಂಗು, ತುಪ್ಪ, ಉಪ್ಪು ಹಾಕಿ ಮರಳಿದ ಮೇಲೆ ಅಕ್ಕಿಹಿಟ್ಟು ಹಾಗೂ ಉದ್ದಿನ ಹಿಟ್ಟನ್ನು ಬೆರೆಸಿ ನೀರಿಗೆ ಸುರಿದು ಒಲೆ ಆರಿಸಿ. ಹಿಟ್ಟನ್ನು ಮಗುಚುವ ಕೈಯಲ್ಲಿ ಕೆದಕಿ ತಣಿದ ನಂತರ ಹಿಟ್ಟನ್ನು ಮೇದಿಸಿ ಉಂಡೆ ಮಾಡಿ. ಆ ಉಂಡೆಗಳನ್ನು ಚಕ್ಕುಲಿ ಒತ್ತುವ ಒರಳಿನಲ್ಲಿ ಹಾಕಿ ಪ್ಲಾಸ್ಟಿಕ್‌ ಹಾಳೆಯ ಮೇಲೆ ಚಕ್ಕುಲಿ ತರಹ ಒತ್ತಿ, ಕಾದ ಎಣ್ಣೆಯಲ್ಲಿ ಎರಡೂ ಬದಿ ಬೇಯಿಸಿದರೆ ರುಚಿಯಾದ ಚಕ್ಕುಲಿ ಸವಿಯಲು ಸಿದ್ಧ.

***

ನಿಪ್ಪಟ್ಟು
ಬೇಕಾದ ಪದಾರ್ಥಗಳು: ತೊಳೆದ ಅಕ್ಕಿಯ ಹಿಟ್ಟು 1 ಕಪ್, ಹುರಿಗಡಲೆ ಹಿಟ್ಟು 1/4 ಕಪ್, ಹುರಿದ ಕಡ್ಲೆಕಾಯಿಬೀಜ 1/4 ಕಪ್‌, ಚಿಲುಕಿದ ಅವರೆ ಕಾಳು 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೆಂಪುಮೆಣಸಿನ ಪುಡಿ 1ಚಮಚ, ಎಣ್ಣೆ 1/4 ಕಪ್, ಬಿಳಿ ಎಳ್ಳು 1/4 ಚಮಚ, ಒಣಗಿದ ಕೊಬ್ಬರಿ ತುರಿ 1/4 ಕಪ್, ಚಿಟಿಕೆ ಇಂಗು

ಮಾಡುವ ವಿಧಾನ: ಕೊಬ್ಬರಿ ತುರಿಯನ್ನು ಪುಡಿ ಮಾಡಬೇಕು, ಕಡ್ಲೆಕಾಯಿಬೀಜ ತರಿತರಿಯಾಗಿ ಪುಡಿಮಾಡಬೇಕು. ಅಕ್ಕಿಹಿಟ್ಟಿಗೆ ಎಣ್ಣೆ ಹೊರತು ಮೇಲೆ ತಿಳಿಸಿದ ಸಾಮಗ್ರಿಗಳನ್ನು ಬೆರೆಸಿ ಎಣ್ಣೆ ಕಾಯಿಸಿ ನೀರಿನಲ್ಲಿ ಗಟ್ಟಿಯಾಗಿ ಹಿಟ್ಟನ್ನು ಕಲೆಸಿ. ಕಾದ ಎಣ್ಣೆಗೆ ಹಿಟ್ಟನ್ನು ನಿಪ್ಪಟ್ಟಿನಂತೆ ಪ್ಲಾಸ್ಟಿಕ್‌ ಹಾಳೆಯ ಮೇಲೆ ತಟ್ಟಿ ಎರಡೂ ಬದಿ ಬೇಯಿಸಿದರೆ ರುಚಿಯಾದ ನಿಪ್ಪಟ್ಟು ಸಿದ್ಧ.

***

ಕೋಡುಬಳೆ

ಬೇಕಾದ ಪದಾರ್ಥಗಳು: ತೊಳೆದ ಅಕ್ಕಿಯ ಹಿಟ್ಟು 1 ಕಪ್‌, ರುಚಿಗೆ ಉಪ್ಪು, ಎಣ್ಣೆ 1/4 ಕಪ್‌, ಎಳ್ಳು ಅರ್ಧ ಚಮಚ, ಇಂಗು ಸ್ವಲ್ಪ, ಒಣಕೊಬ್ಬರಿ ತುರಿ 1/4 ಕಪ್‌, ಕೆಂಪುಮೆಣಸಿನಪುಡಿ 1 ಚಮಚ, ಹುರಿಗಡಲೆಹಿಟ್ಟು 1/4 ಕಪ್‌, ಬೇಯಿಸಲು ಸಾಕಷ್ಟು ಎಣ್ಣೆ.

ಮಾಡುವ ವಿಧಾನ: ಕೊಬ್ಬರಿಯನ್ನು ಪುಡಿಮಾಡಿ, ಎಣ್ಣೆ ಹೊರತು ಮೇಲೆ ತಿಳಿಸಿದ ಸಾಮಗ್ರಿಗಳನ್ನು ಬೆರೆಸಿ ಎಣ್ಣೆ ಕಾಯಿಸಿ ಹಾಕಿ ನೀರಿನಲ್ಲಿ ಗಟ್ಟಿಯಾಗಿ ಕಲೆಸಿ, ಮೇದಿಸಿ ಉಂಡೆ ಕಟ್ಟಿ. ಆ ಉಂಡೆಗಳನ್ನು ಕೋಡುಬಳೆಯ ತರಹ ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಬಿಡಿ. ಎರಡೂ ಬದಿ ಬೇಯಿಸಿದರೆ ರೆಡಿ.

***

ಟೇಪ್‌
ಬೇಕಾದ ಪದಾರ್ಥಗಳು: ತೊಳೆದ ಅಕ್ಕಿಯ ಹಿಟ್ಟು 1 ಕಪ್‌, ಹುರಿಗಡಲೆಹಿಟ್ಟು 1/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಸ್ವಲ್ಪ, ಎಣ್ಣೆ 1/4 ಕಪ್‌, ಕೆಂಪು ಮೆಣಸಿನಪುಡಿ 1 ಚಮಚ, ಬೇಯಿಸಲು ಸಾಕಷ್ಟು ಎಣ್ಣೆ, ಎಳ್ಳು 1 ಚಮಚ

ಮಾಡುವ ವಿಧಾನ: ಎಣ್ಣೆ ಹೊರತು ಮೇಲೆ ತಿಳಿಸಿದ ಸಾಮಗ್ರಿಗಳನ್ನು ಬೆರೆಸಿ. ನೀರಿನಲ್ಲಿ ಗಟ್ಟಿಯಾಗಿ ಇರುವಂತೆ ಕಲೆಸಿ. ಒರಳಿಗೆ ಟೇಪ್‌ ತರಹ ಪ್ಲೇಟ್‌ನ್ನು ಹಾಕಿ, ಕಾದ ಎಣ್ಣೆಯಲ್ಲಿ ಒತ್ತಿ. ಎರಡೂ ಬದಿ ಕಾಯಿಸಿದರೆ ಸಿದ್ಧ.

***

ಮಜ್ಜಿಗೆ ಖಾರಾಶೇವ್‌
ಬೇಕಾದ ಪದಾರ್ಥಗಳು: ತೊಳೆದ ಅಕ್ಕಿಯ ಹಿಹಿಟ್ಟು 1/4 ಕಪ್‌, ಕೆಂಪುಮೆಣಸಿನಪುಡಿ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಸ್ವಲ್ಪ, ಕಡ್ಲೆಹಿಟ್ಟು 1 ಕಪ್‌, ಬೇಯಿಸಲು ಸಾಕಷ್ಟು 1/4 ಕಪ್‌ ಎಣ್ಣೆ, ಬೇಕಾದರೆ ಓಮ ಅಕ್ಕಿ ಸ್ವಲ್ಪ

ಮಾಡುವ ವಿಧಾನ: ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಕೆಂಪು ಮೆಣಸಿನಪುಡಿ ಹಾಗೂ ಇಂಗನ್ನು ಬೆರೆಸಿ, ಎಣ್ಣೆಯನ್ನು ಬಿಸಿಮಾಡಿ ಹಾಕಿ ನೀರಿನಲ್ಲಿ ಗಟ್ಟಿಯಾಗಿ ಕಲೆಸಿ. ಒರಳಿನಲ್ಲಿ ದೊಡ್ಡ ರಂಧ್ರ ಇರುವ ಪ್ಲೇಟನ್ನು ಹಾಕಿ ಹಿಟ್ಟನ್ನು ಸೇರಿಸಿ ಪ್ರೆಸ್‌ ಮಾಡಿ. ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ರುಚಿಯಾದ ಖಾರಾಶೇವ್‌ ಸಿದ್ಧ.

***

ಬಾಳೆಹಣ್ಣಿನ ಬರ್ಫಿ
ಬೇಕಾದ ಪದಾರ್ಥಗಳು: ಸಿಹಿ ಇರುವ ಬಾಳೆಹಣ್ಣಿನ ಚೂರುಗಳು 2 ಕಪ್‌, ಸಕ್ಕರೆ 1/2 ಕಪ್‌, ಏಲಕ್ಕಿಪುಡಿ ಸ್ವಲ್ಪ, ತುಪ್ಪ 1/4 ಕಪ್‌ಗಿಂತ ಜಾಸ್ತಿ, ಗೋಡಂಬಿ ಸ್ವಲ್ಪ

ಮಾಡುವ ವಿಧಾನ: ತುಪ್ಪದಲ್ಲಿ ಬಾಳೆಹಣ್ಣಿನ ಚೂರುಗಳನ್ನು ಹುರಿದು, ಸಕ್ಕರೆ ಹಾಕಿ ಕರಗಿದ ನಂತರ ತುಪ್ಪಹಾಕಿ ಕೆದಕುತ್ತಿರಬೇಕು. ಕೊನೆಗೆ ಏಲಕ್ಕಿಪುಡಿಯನ್ನು ಹಾಕಿ ಕೆದಕುತ್ತಿರಬೇಕು. ತುಪ್ಪ ತಳಬಿಟ್ಟಾಗ ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ ಸಮಮಾಡಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಅಲಂಕರಿಸಿ. ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಯಾದ ಬರ್ಫಿ ರೆಡಿ (ಸ್ವಲ್ಪ ತೆಳ್ಳಗೆ ಇದ್ದರೆ ಹಲ್ವ ಆಗುತ್ತದೆ).

***

ಪಂಗನ
ಬೇಕಾದ ಪದಾರ್ಥಗಳು: ಮೈದಾಹಿಟ್ಟು 1 ಕಪ್‌, ಸಕ್ಕರೆ 1/3 ಕಪ್‌, ಏಲಕ್ಕಿಪುಡಿ ಸ್ವಲ್ಪ, ಬೇಯಿಸಲು ಸಾಕಷ್ಟು ಎಣ್ಣೆ.

ಮಾಡುವ ವಿಧಾನ: ಮೈದಾಹಿಟ್ಟು, ಸಕ್ಕರೆ, ಏಲಕ್ಕಿ ಪುಡಿಯನ್ನು ಸೇರಿಸಿ ನೀರಿನಲ್ಲಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿ. ಎಣ್ಣೆಯನ್ನು ಕಾಯಿಸಿ ಸೌಟಿನಲ್ಲಿ ಸ್ವಲ್ಪ ಸ್ವಲ್ಪವೇ ಬಿಟ್ಟು ಎರಡೂ ಬದಿ ಕಾಯಿಸಿ. ಸ್ವಲ್ಪ ಪ್ರೆಸ್‌ ಮಾಡಿ ಸವಿಯಲು ರುಚಿಯಾದ ಪಂಗನ ಸಿದ್ಧ.

***

ಪುರಿ ಉಂಡೆ
ಬೇಕಾದ ಪದಾರ್ಥಗಳು: ಪುರಿ 2 ಕಪ್‌, ಬೆಲ್ಲ 1/3 ಕಪ್‌, ಉರಿಗಡ್ಲೆ 1 ಚಮಚ, ಹುರಿದ ಕಡ್ಲೆಕಾಯಿಬೀಜ 1 ಚಮಚ, ಒಣಕೊಬ್ಬರಿ ಚೂರು 1 ಚಮಚ.

ಮಾಡುವ ವಿಧಾನ: ಬೆಲ್ಲದ ಪಾಕ ಸಿದ್ಧಪಡಿಸಿಕೊಳ್ಳಿ. ಹದವಾದ ಪಾಕದಲ್ಲಿ ಪುರಿ ಸುರಿದು ಕಲೆಸಿ. ಸ್ವಲ್ಪ ಬಿಸಿಯಿರುವಾಗಲೇ ಉಂಡೆ ಕಟ್ಟಿದರೆ ಪುರಿ ಉಂಡೆ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT