7

ಯಕ್ಷಗಾನ ಹೋಯ್ತು ಹಿಂದುಸ್ತಾನಿ ಬಂತು

Published:
Updated:
ಯಕ್ಷಗಾನ ಹೋಯ್ತು ಹಿಂದುಸ್ತಾನಿ ಬಂತು

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಥೈ ಥೈ ಎಂಬ ಯಕ್ಷಗಾನದ ಗಂಡು ಧ್ವನಿ ಬದಲು ಸ ರಿ ಗ ಮ ಪ ಎಂಬ ಶಾಸ್ತ್ರೀಯ ಧ್ವನಿ ಕೇಳತೊಡಗಿದೆ. ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಬಯಲಾಟ ಹೋಗಿ, ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಹೆಚ್ಚಾಗತೊಡಗಿವೆ. 20–25 ವರ್ಷಗಳ ಹಿಂದೆ ಜಿಲ್ಲೆಯ ಯಾವುದೇ ಗ್ರಾಮಕ್ಕೆ ಹೋದರೂ 4–5 ಮಂದಿ ಯಕ್ಷಗಾನ ಕಲಾವಿದರು ಸಿಗುತ್ತಿದ್ದರು.

ಗದ್ದೆ ನಾಟಿ ಮಾಡುವಾಗ, ಅಡಿಕೆ ಸುಲಿಯುವಾಗ ಯಕ್ಷಗಾನದ ಪದ್ಯಗಳು ಜನರ ಬಾಯಲ್ಲಿ ಮೊಳಗುತ್ತಿದ್ದವು. ಈಗ ಯಾವುದೇ ಗ್ರಾಮಕ್ಕೆ ಹೋದರೂ 4–5 ಮಂದಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರು ಸಿಗುತ್ತಾರೆ.

ಹಿಂದುಸ್ತಾನಿ ಗಾಯಕರು; ಹಾರ್ಮೋನಿಯಂ, ತಬಲಾ, ಸಿತಾರ್, ಶಹನಾಯಿ, ವಯೊಲಿನ್, ಬಾನ್ಸುರಿ, ಜಲತರಂಗ, ರುದ್ರವೀಣೆ, ಸಂತೂರ್ ವಾದಕರು ಜಿಲ್ಲೆಯ ತುಂಬಾ ತುಂಬಿ ಹೋಗಿದ್ದಾರೆ. ನೂರಕ್ಕೂ ಹೆಚ್ಚು ಹಿಂದುಸ್ತಾನಿ ಗಾಯಕರು ಇದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರು ಜಿಲ್ಲೆಯ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಯುವ ಕಲಾವಿದರೂ ಮಿಂಚುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ವೃತ್ತಿ ಮೇಳಗಳೂ ಬಾಗಿಲು ಮುಚ್ಚಿವೆ. ಮೊದಲು ಗ್ರಾಮ ಗ್ರಾಮಗಳಲ್ಲಿ ಯಕ್ಷಗಾನ ಮೇಳಗಳಿದ್ದವು. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳ, ಕರ್ಕಿ, ಪಂಚಲಿಂಗೇಶ್ವರ, ಬಚ್ಚಗಾರು, ಶಿರಸಿ ಮಾರಿಕಾಂಬ ಯಕ್ಷಗಾನ ಮೇಳಗಳು ಜನಮಾನಸದಲ್ಲಿ ಅಚ್ಚುಒತ್ತಿದ್ದವು.

ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ, ಕುಮಟಾ ಗೋವಿಂದ ನಾಯ್ಕ, ಜಲವಳ್ಳಿ ವೆಂಕಟೇಶ, ಮೂರೂರು ದೇವರು ಹಗಡೆ, ಗೋಡೆ ನಾರಾಯಣ ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮುಂತಾದ ಯಕ್ಷಗಾನ ಕಲಾವಿದರು ತಮ್ಮದೇ ಛಾಪು ಮೂಡಿಸಿದ್ದರು.

ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಆದರೆ ಈಗ ಜಿಲ್ಲೆಯಲ್ಲಿ ಒಂದೇ ಒಂದು ವೃತ್ತಿ ಯಕ್ಷಗಾನ ಮೇಳ ಇಲ್ಲ. ಕಲಾವಿದರು ಇದ್ದರೂ ಶಾಸ್ತ್ರೀಯ ಸಂಗೀತಕ್ಕೆ ಮನಸೋತ ಪ್ರೇಕ್ಷಕರನ್ನು ಮತ್ತೆ ಯಕ್ಷಗಾನದತ್ತ ಕರೆತರುವ ಪ್ರಸಿದ್ಧ ಕಲಾವಿದರ ಕೊರತೆಯೂ ಕಾಡುತ್ತಿದೆ.

20–25 ವರ್ಷದಲ್ಲಿ ಈ ಸಾಂಸ್ಕೃತಿಕ ಪಲ್ಲಟಕ್ಕೆ ಕಾರಣ ಏನು ಎಂದು ಹುಡುಕುತ್ತಾ ಹೋದರೆ ಸಿಗುವುದು ಕೆಲವು ಅಪರೂಪದ ಉತ್ತರಗಳು. ಯಕ್ಷಗಾನ ಮತ್ತು ಹಿಂದುಸ್ತಾನಿ ಕಲಾವಿದರಲ್ಲಿ ಬಹುಮುಖ್ಯ ವ್ಯತ್ಯಾಸ ಎಂದರೆ ಗುರು ಶಿಷ್ಯ ಪರಂಪರೆ. ಯಕ್ಷಗಾನ ಕಲಾವಿದರು ಶಿಷ್ಯರನ್ನು ತಯಾರು ಮಾಡಲಿಲ್ಲ. ಶಿಷ್ಯರನ್ನು ತಯಾರು ಮಾಡಿದ್ದರೂ ಅವರ ಸಂಖ್ಯೆ ಅತ್ಯಲ್ಪ. ಆದರೆ ಹಿಂದುಸ್ತಾನಿ ಕಲಾವಿದರು ತಾವು ಸಂಗೀತ ಕಲಿತಿದ್ದೇ ಅಲ್ಲದೆ ಹಲವಾರು ಶಿಷ್ಯರಿಗೆ ಸಂಗೀತ ಕಲಿಸಿದರು.

ಶಿರಸಿ, ಹೊನ್ನಾವರ, ಯಲ್ಲಾಪುರ ಮತ್ತು ಕುಮಟಾಗಳಲ್ಲಿ ಹಿಂದುಸ್ತಾನಿ ಶಾಲೆಗಳು ಹೆಚ್ಚಾದವು. ಜಿ.ಎಸ್.ಹೆಗಡೆ ಬೆಳ್ಳೇಕೇರಿ, ಎಂ.ಪಿ.ಹೆಗಡೆ ಪಡಿಗೇರಿ, ಬಿಂದು ಮಾಧವ ಪಾಠಕ್, ಚಂದ್ರಶೇಖರ ಪುರಾಣಿಕಮಠ, ಸಂಜೀವ ಪೋತದಾರ, ಶೇಷಗಿರಿ ಹಾನಗಲ್ ಮುಂತಾದವರು ಮುಂಬೈ, ಪುಣೆ ಮುಂತಾದ ಕಡೆಗೆ ಹೋಗಿ ಹಿಂದುಸ್ತಾನಿ ಸಂಗೀತ ಕಲಿತು ಬಂದು ಶಿರಸಿ, ಹೊನ್ನಾವರದಲ್ಲಿ ಸಂಗೀತ ಶಾಲೆಯನ್ನು ತೆರೆದರು. ಜಿಲ್ಲೆಯ ಶಿರಸಿ ಮತ್ತು ಹೊನ್ನಾವರದ ಕಾಲೇಜುಗಳಲ್ಲಿ ಮಾತ್ರ ಸಂಗೀತ ವಿಭಾಗಗಳು ಇದ್ದವು.

ಕಾಲೇಜುಗಳು ಸಂಗೀತಗಾರರನ್ನು ಹುಟ್ಟು ಹಾಕದಿದ್ದರೂ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರಾಗಿದ್ದವರು ಮನೆಯಲ್ಲಿ ಸಂಗೀತ ಪಾಠಶಾಲೆಯನ್ನು ನಡೆಸಿ ಹೊಸ ಹೊಸ ಶಿಷ್ಯರನ್ನು ರೂಪಿಸಿದರು. ಅಶೋಕ ಹುಗ್ಗಣ್ಣ, ಆರ್.ಟಿ.ಹೆಗಡೆ ಮುಂತಾದವರು ಶಿಷ್ಯರ ದೊಡ್ಡ ಪಡೆಯನ್ನೇ ಸೃಷ್ಟಿಸಿದರು.

ಈಗಂತೂ ಶಿರಸಿಯಲ್ಲಿಯೇ 25ಕ್ಕೂ ಹೆಚ್ಚು ಸಂಗೀತ ಶಾಲೆಗಳಿವೆ. ಆದರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಇರುವುದು ಹೊನ್ನಾವರ ತಾಲ್ಲೂಕಿನ ಗುಣವಂತೆಯಲ್ಲಿ ಮಾತ್ರ. ಅದೂ ಕುಂಟುತ್ತಾ ಸಾಗಿದೆ. ಕೆರೆಮನೆ ಶಿವಾನಂದ ಹೆಗಡೆ ಅವರು ಕಷ್ಟಪಟ್ಟು ಅದನ್ನು ಮುನ್ನಡೆಸುತ್ತಿದ್ದಾರೆ. ಆದರೆ ಯಕ್ಷಗಾನ ಕಲಿಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.

ಮೊದಲೆಲ್ಲಾ ಗ್ರಾಮ ಗ್ರಾಮಗಳಲ್ಲಿ ಯಕ್ಷಗಾನ ತರಬೇತಿ ನೀಡಲಾಗುತ್ತಿತ್ತು. ದೇವಾಲಯಗಳ ಪ್ರಾಂಗಣಗಳಲ್ಲಿ ಯಕ್ಷಗಾನದ ನೃತ್ಯ ರಿಂಗಣಿಸುತ್ತಿತ್ತು. ಶಾಲಾ ವಾರ್ಷಿಕೋತ್ಸವಗಳಲ್ಲಿ ಒಂದು ಯಕ್ಷಗಾನ ಇರಲೇಬೇಕಿತ್ತು. ಮದುವೆ, ಮುಂಜಿ ಮುಂತಾದ ಶುಭ ಸಂದರ್ಭಗಳಲ್ಲಿಯೂ, ಶ್ರಾದ್ಧದ ಸಂದರ್ಭದಲ್ಲಿಯೂ ಜನರು ಯಕ್ಷಗಾನ ಅಥವಾ ತಾಳಮದ್ದಲೆ ಏರ್ಪಡಿಸುತ್ತಿದ್ದರು. ಈಗ ಆ ಜಾಗದಲ್ಲಿ ಹಿಂದುಸ್ತಾನಿ ಸಂಗೀತ ಕಛೇರಿ ಬಂದು ಕುಳಿತಿದೆ.

ಖ್ಯಾತ ಯಕ್ಷಗಾನ ಅರ್ಥಧಾರಿ, ವಿದ್ವಾಂಸ ಕೆರೆಕೈ ಉಮಾಕಾಂತ ಭಟ್ಟ ಈ ಪಲ್ಲಟವನ್ನು ಗುರುತಿಸುವುದು ಹೀಗೆ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ವೃತ್ತಿ ನಾಟಕಗಳು ಪ್ರಸಿದ್ಧವಾಗಿದ್ದವು. ಅವುಗಳ ಜಾಗವನ್ನು ಯಕ್ಷಗಾನ ಕಸಿದುಕೊಂಡಿತು. ಈಗ ಯಕ್ಷಗಾನವನ್ನು ಹಿಂದುಸ್ತಾನಿ ಸಂಗೀತ ಬದಿಗೆ ಸರಿಸಿದೆ. ಇವೆಲ್ಲ ಕಾಲದ ಮಹಿಮೆ’.

ಆದರೆ ಅವರ ಮಾತನ್ನು ಇನ್ನೊಬ್ಬ ಖ್ಯಾತ ಅರ್ಥಧಾರಿ, ವಿದ್ವಾಂಸ ಪ್ರೊ.ಎಂ.ಎ.ಹೆಗಡೆ ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಅವರ ದೃಷ್ಟಿಯಲ್ಲಿ ಈಗಲೂ ಯಕ್ಷಗಾನವೇ ಉತ್ತರ ಕನ್ನಡದ ನಂಬರ್ ಒನ್ ಕಲೆ. ‘ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯೂ ಇಲ್ಲ. ಯಕ್ಷಗಾನವನ್ನು ಹಿಂದುಸ್ತಾನಿ ಸಂಗೀತ ಬದಿಗೆ ಸರಿಸಿಯೂ ಇಲ್ಲ. ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಯಕ್ಷಗಾನ ನೋಡುವವರು ಯಕ್ಷಗಾನ ನೋಡುತ್ತಾರೆ. ಹಿಂದುಸ್ತಾನಿ ಕೇಳುವವರು ಅದನ್ನು ಕೇಳುತ್ತಾರೆ ಅಷ್ಟೆ. ಜಿಲ್ಲೆಯಲ್ಲಿ ಯಕ್ಷಗಾನ ತನ್ನ ನೆಲೆಯನ್ನು ಕಳೆದುಕೊಂಡಿಲ್ಲ’ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ.

“ಯಕ್ಷಗಾನ ಕಲಿಕಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ, ವೃತ್ತಿ ಮೇಳಗಳು ಇಲ್ಲವೇ ಇಲ್ಲ. ಇದಕ್ಕೆಲ್ಲಾ ಏನಂತೀರಿ’ ಎಂದು ಕೇಳಿದರೆ, ಎಂ.ಎ.ಹೆಗಡೆ ‘ಅದೆಲ್ಲಾ ಆಧುನಿಕ ತಂತ್ರಜ್ಞಾನದ ಫಲ. ಕಾಲ ಬದಲಾಗಿದೆ. ಜನರ ಮನರಂಜನೆಗೆ ಈಗ ಬೇರೆ ಬೇರೆ ಅವಕಾಶಗಳಿವೆ. ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇದ್ದರೆ ಶಾಸ್ತ್ರೀಯ ಸಂಗೀತಕ್ಕೂ ಕೇಳುಗರ ಕೊರತೆ ಇದೆ.

ಈಗಲೂ ಅತ್ಯುತ್ತಮ ಯಕ್ಷಗಾನ ಪ್ರದರ್ಶನ ಏಪರ್ಡಿಸಿದರೆ ಸಾವಿರ ಸಾವಿರ ಮಂದಿ ಪ್ರೇಕ್ಷಕರು ಬರುತ್ತಾರೆ. ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರುವ ಉದಾಹರಣೆಯನ್ನು ತೋರಿಸಿ ನೋಡೋಣ’ ಎಂದು ಸವಾಲು ಹಾಕುತ್ತಾರೆ.

ಅಂತರರಾಷ್ಟ್ರೀಯ ಮಟ್ಟದ ಹಿಂದುಸ್ತಾನಿ ಗಾಯಕ ಹಾಸಣಗಿ ಗಣಪತಿ ಭಟ್ ಅವರ ವ್ಯಾಖ್ಯಾನವೇ ಬೇರೆ. ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಹಿಂದಕ್ಕೆ ಹೋಗಿ ಹಿಂದುಸ್ತಾನಿ ಸಂಗೀತ ಮುಂದಕ್ಕೆ ಬಂದಿದೆ. ಅದರಲ್ಲಿ ಅನುಮಾನವೇ ಬೇಡ. ಇದು ಯಕ್ಷಗಾನದ ಹಿನ್ನಡೆ ಅಲ್ಲ. ಆದರೆ ಜನರು ಹಿಂದುಸ್ತಾನಿ ಸಂಗೀತದ ಕಡೆಗೆ ಒಲವು ತೋರಿದ್ದಾರೆ. ಅದು ಸುಳ್ಳಲ್ಲ. ಸಂಗೀತ ಆಲಿಸುವುದಕ್ಕೆ ಸೂಕ್ಷ್ಮ ಮನಸ್ಸು ಬೇಕು. ಸಂಗೀತ ಕಲಿಯಲು ಕನಿಷ್ಠ 10 ವರ್ಷ ಬೇಕು. ನಿರಂತರ ಅಭ್ಯಾಸ ಇರಬೇಕು. ಸಂಗೀತದ ಶಾಸ್ತ್ರೀಯತೆಯೇ ಅದರ ಜನಪ್ರಿಯತೆಗೆ ಕಾರಣ’ ಎಂದು ಅವರು ಗುರುತಿಸುತ್ತಾರೆ.

ಇದೇ ಮಾತನ್ನು ತಬಲಾ ವಾದಕ ಪಂಡಿತ್ ಮೋಹನ ಹೆಗಡೆ ಅವರೂ ಸಮರ್ಥಿಸುತ್ತಾರೆ. ‘ಯಕ್ಷಗಾನದಲ್ಲಿ ಶಾಸ್ತ್ರೀಯತೆ ಕಡಿಮೆ. ಅಲ್ಲಿ ಮಟ್ಟುಗಳೇ ಜಾಸ್ತಿ. ಅಲ್ಲದೆ ನಿರಂತರ ಕಲಿಕೆ ಅನಗತ್ಯ. ಅಲ್ಪಸ್ವಲ್ಪ ಕಲಿತವರೂ ಯಕ್ಷಗಾನ ರಂಗಕ್ಕೆ ಬರಬಹುದು. ಆದರೆ ಸಂಗೀತದಲ್ಲಿ ಹಾಗಲ್ಲ. ನಿರಂತರ ಕಲಿಕೆ ಬೇಕು. ಗುರು ಶಿಷ್ಯ ಸಂಬಂಧ ಇಲ್ಲಿ ಬಹಳ ಮುಖ್ಯ. ಯಕ್ಷಗಾನಕ್ಕೆ ಸೀಮಿತ ಮಾರುಕಟ್ಟೆ. ಅದೊಂದು ಪ್ರಾದೇಶಿಕ ಕಲೆ. ಆದರೆ ಹಿಂದುಸ್ತಾನಿ ಸಂಗೀತಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಹಿಂದುಸ್ತಾನಿಯಲ್ಲಿ ಒಂದು ರಾಗವನ್ನು ಒಂದೇ ರೀತಿಯಲ್ಲಿ ಹಾಡಬೇಕು. ಅದು ಶಿರಸಿಯಲ್ಲಿಯೂ ಒಂದೆ, ಆಗ್ರಾದಲ್ಲಿಯೂ ಒಂದೆ. ಪುಣೆಯಲ್ಲಿಯೂ ಒಂದೆ. ಆದರೆ ಯಕ್ಷಗಾನದಲ್ಲಿ ಹಾಗಲ್ಲ. ರಾಗ ಒಂದೇ ಆದರೂ ಮಟ್ಟುಗಳು ಬೇರೆ ಬೇರೆ. ಅದಕ್ಕೇ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ’ ಎಂದು ಅವರು ನಿಖರವಾಗಿ ಹೇಳುತ್ತಾರೆ.

ವಿದ್ವಾನ್ ಉಮಾಕಾಂತ ಭಟ್ಟ ಅವರೂ ಇದಕ್ಕೆ ದನಿಗೂಡಿಸುತ್ತಾರೆ. ‘ಯಕ್ಷಗಾನ ಭಾಗವತರ ಮಕ್ಕಳು ಶಾಸ್ತ್ರೀಯ ಸಂಗೀತ ಕಲಿತರು. ಜೊತೆಗೆ ಅಪ್ಪ ಹೇಳುವ ಪದ್ಯ ಸರಿ ಇಲ್ಲ. ರಾಗ, ತಾಳ ಹೊಂದಾಣಿಕೆ ಇಲ್ಲ ಎಂದು ಟೀಕಿಸತೊಡಗಿದರು. ಅದಕ್ಕೇ ಅಪ್ಪ ಹಾಡುವುದನ್ನೇ ಬಿಟ್ಟುಬಿಟ್ಟ. ಇಂತಹ ಹಲವಾರು ಉದಾಹರಣೆಗಳನ್ನು ನಾನು ಕೊಡಬಲ್ಲೆ’ ಎಂದು ಅವರು ಹೇಳುತ್ತಾರೆ.

‘ಯಕ್ಷಗಾನ ಎನ್ನುವುದು ಸಂಸ್ಕೃತ, ಗ್ರಾಮ ಜೀವನದಂತೆ ಒಂದು ಆದರ್ಶದ ಪರಿಕಲ್ಪನೆಯಾಗಿಬಿಟ್ಟಿದೆ. ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದು ಎಲ್ಲರೂ ಕೊಂಡಾಡುತ್ತಾರೆ. ಆದರೆ ಕಲಿಯಲು ಯಾರೂ ಮುಂದೆ ಬರುತ್ತಿಲ್ಲ. ಗ್ರಾಮೀಣ ಜೀವನವನ್ನೂ ಎಲ್ಲರೂ ಹೊಗಳುತ್ತಾರೆ. ಆದರೆ ಗ್ರಾಮದಲ್ಲಿ ವಾಸ ಮಾಡಲು ಯಾರಿಗೂ ಮನಸ್ಸಿಲ್ಲ. ಅದೇ ರೀತಿ ಯಕ್ಷಗಾನವನ್ನೂ ಎಲ್ಲರೂ ಅತ್ಯಂತ ಶ್ರೇಷ್ಠ ಕಲೆ ಎಂದೇ ಗುರುತಿಸುತ್ತಾರೆ. ಇದರಲ್ಲಿ ಸಂಗೀತ ಇದೆ. ನೃತ್ಯ ಇದೆ. ಮಾತು ಇದೆ. ಇದೊಂದು ಪರಿಪೂರ್ಣ ಕಲೆ ಎಂದು ಬಣ್ಣಿಸುತ್ತಾರೆ. ಆದರೆ ಯಕ್ಷಗಾನ ಕಲಿಯಲು ಮುಂದಾಗುವುದಿಲ್ಲ’ ಎಂದು ಅವರು ವಿಷಾದಿಸುತ್ತಾರೆ.

ಒಂದೆಡೆ ಮನರಂಜನಾ ಸಾಮಗ್ರಿ ಹೆಚ್ಚಿತು. ಇನ್ನೊಂದೆಡೆ ಖ್ಯಾತ ಯಕ್ಷಗಾನ ಕಲಾವಿದರು ನಿವೃತ್ತಿಯ ಅಂಚಿಗೆ ಬಂದರು. ಕೆಲವು ಪ್ರಸಿದ್ಧ ಕಲಾವಿದರು ನಿಧನರಾದರು. ಅವರ ಜಾಗವನ್ನು ತುಂಬುವ ಸಮರ್ಥ ಕಲಾವಿದರ ಕೊರತೆಯೂ ಕಾಡತೊಡಗಿತು. ಇದೇ ಹೊತ್ತಿನಲ್ಲಿ ಶಾಸ್ತ್ರೀಯ ಸಂಗೀತ ಶಾಲೆಗಳು ಹೆಚ್ಚತೊಡಗಿದವು. ಜೊತೆಗೆ ಈ ಶಾಲೆಗಳು ವಾರ್ಷಿಕೋತ್ಸವದ ಹೆಸರಿನಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಿಂದುಸ್ತಾನಿ ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸಿದವು. ಇದೇ ಸಂದರ್ಭದಲ್ಲಿ ಹಾಸಣಗಿ ಗಣಪತಿ ಭಟ್, ಪಂಡಿತ್ ಪರಮೇಶ್ವರ ಹೆಗಡೆ ಮುಂತಾದವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರು.

ಹೀಗೆ ಅವರು ದೇಶ ವಿದೇಶಗಳಲ್ಲಿ ಹೆಸರು ಮಾಡುವ ಮೂಲಕ ಜಿಲ್ಲೆಯ ಬೆಟ್ಟಗುಡ್ಡಗಳ ನಡುವೆ ಹುದುಗಿರುವ ಚಿಕ್ಕಪುಟ್ಟ ಗ್ರಾಮಗಳ ಯುವಕರ ಹೃದಯದಲ್ಲಿ ಕನಸುಗಳನ್ನು ಬಿತ್ತಿದರು. ಜೊತೆಗೆ ಉತ್ತರ ಕನ್ನಡ ಜಿಲ್ಲೆ ಮುಂಬೈ ಕರ್ನಾಟಕಕ್ಕೆ ಸೇರಿದ್ದು. ಮೊದಲಿನಿಂದಲೂ ಇಲ್ಲಿ ಹಿಂದುಸ್ತಾನಿ ಸಂಗೀತ ಇತ್ತು. ಪಕ್ಕದ ಜಿಲ್ಲೆ ಧಾರವಾಡ. ಅಲ್ಲಿ ಖ್ಯಾತ ಗಾಯಕರು ಇದ್ದರು. ಅವರ ಪ್ರಭಾವ ಉತ್ತರ ಕನ್ನಡದ ಮೇಲೂ ಆಯಿತು. ಅದಕ್ಕೇ ಈಗ ಉತ್ತರ ಕನ್ನಡ ಹಿಂದುಸ್ತಾನಿ ಸಂಗೀತದ ಪ್ರಮುಖ ಕೇಂದ್ರವಾಗಿದೆ.

‘ನಾನೂ ಯಕ್ಷಗಾನ ಕಲಿಯಬೇಕು ಎಂದು ಪ್ರೇಕ್ಷಕನೊಬ್ಬನ ಮನದಾಳದಲ್ಲಿ ಆಸೆಯ ಚಿಗುರನ್ನು ಮೂಡಿಸುವ ಕಲಾವಿದರು ಕಡಿಮೆಯಾಗಿದ್ದೇ ಯಕ್ಷಗಾನ ಬದಿಗೆ ಸರಿಯಲು ಕಾರಣ. ಜೊತೆಗೆ ಹಿಂದುಸ್ತಾನಿ ಕಲಾವಿದರು ಅಂತ ಸಾಧ್ಯತೆಗಳನ್ನು ತೋರಿಸಿದ್ದೂ ಸಂಗೀತ ಕ್ಷೇತ್ರ ಹೆಚ್ಚು ಜನಪ್ರಿಯವಾಗಲು ಕಾರಣ’ ಎಂದು ಪಂಡಿತ್ ಪರಮೇಶ್ವರ ಹೆಗಡೆ ಹೇಳುತ್ತಾರೆ.

ಗುಣವಂತೆಯ ಯಕ್ಷಗಾನ ಕಲಿಕಾ ಕೇಂದ್ರದ ಹಜಾರದಲ್ಲಿ ಕುಳಿತು ಯಕ್ಷಗಾನ ಪರಂಪರೆ ಮತ್ತು ತಮ್ಮದೇ ಯಕ್ಷಗಾನ ಮೇಳದ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾ ಬಣ್ಣ ಕಳೆದುಕೊಂಡ ಯಕ್ಷಗಾನದ ಗತಿಯನ್ನು ವಿವರಿಸಿದವರು ಕೆರೆಮನೆ ಶಿವಾನಂದ ಹೆಗಡೆ. ಕಲಿಸುವವರು ಮತ್ತು ಕಲಿಯಲೇಬೇಕು ಎಂಬ ಕನಸನ್ನು ಬಿತ್ತುವವರು ಕಡಿಮೆಯಾಗಿದ್ದೇ ಯಕ್ಷಗಾನ ಜನಮಾನಸದಿಂದ ಹಿಂದೆ ಸರಿಯಲು ಕಾರಣ ಎನ್ನುವುದು ಅವರ ಸ್ಪಷ್ಟ ಅಭಿಮತ. ಯಕ್ಷಗಾನಗಳು ವ್ಯಕ್ತಿ ಕೇಂದ್ರಿತವಾಗಿದ್ದೂ ಇದಕ್ಕೆ ಮತ್ತೊಂದು ಮುಖ್ಯ ಕಾರಣ.

‘ಗದಾಯುದ್ಧ ಪ್ರಸಂಗದಲ್ಲಿ ಕೇವಲ ಕೌರವ ಚೆನ್ನಾಗಿ ಆದರೆ ಸಾಲದು. ಭೀಮ, ಅರ್ಜುನ, ಕೃಷ್ಣ, ಬೇವಿನಚರ ಎಲ್ಲ ಪಾತ್ರಗಳೂ ಚೆನ್ನಾಗಿ ಆಗಬೇಕು. ಅದೇ ರೀತಿ ಕೃಷ್ಣ ಸಂಧಾನ ಪ್ರಸಂಗದಲ್ಲಿ ಕೃಷ್ಣ ಅಥವಾ ಕೌರವ ಪಾತ್ರಗಳು ಅದ್ಭುತವಾಗಿ ಬಂದರೆ ಸಾಲದು. ಧರ್ಮರಾಯ, ವಿದುರ, ಭೀಮ, ದ್ರೌಪದಿ ಪಾತ್ರಗಳೂ ಚೆನ್ನಾಗಿ ಆಗಬೇಕು. ಕೆರೆಮನೆ ಮೇಳದಲ್ಲಿ ಈ ಎಲ್ಲ ಪಾತ್ರಗಳೂ ಚೆನ್ನಾಗಿರುತ್ತಿದ್ದವು.

ಅದಕ್ಕೇ ಕೆರೆಮನೆ ಮೇಳ ಪ್ರಸಿದ್ಧಿಯಾಗಿತ್ತು. ಅದೇ ರೀತಿ ಕರ್ಕಿ ಮೇಳ ಕೂಡ ವ್ಯಕ್ತಿ ಕೇಂದ್ರಿತವಾಗದೇ ಇಡೀ ಯಕ್ಷಗಾನವನ್ನು ಗೆಲ್ಲಿಸುವ ಮೇಳವಾಗಿತ್ತು. ಆಗ ಪಾತ್ರಗಳ ಜೊತೆಗೆ ಪ್ರಸಂಗವೂ ಗೆಲ್ಲುತ್ತಿತ್ತು. ಈಗ ಪಾತ್ರ ಗೆಲ್ಲುತ್ತಿದೆ. ಪ್ರಸಂಗ ಸೋಲುತ್ತಿದೆ. ಯಕ್ಷಗಾನ ಹಿಂದಕ್ಕೆ ಸರಿಯಲು ಇದೇ ಕಾರಣ’ ಎಂದು ಅವರು ಗುರುತಿಸುತ್ತಾರೆ.

‘ಯಕ್ಷಗಾನ ಗಂಡು ಕಲೆ. ಅಲ್ಲಿ ಮಹಿಳೆಯರಿಗೆ ಅವಕಾಶ ಇಲ್ಲ. ಅಲ್ಲೊಂದು ಇಲ್ಲೊಂದು ಮಹಿಳಾ ಯಕ್ಷಗಾನ ತಂಡಗಳು ಇದ್ದರೂ ಈಗಲೂ ಯಕ್ಷಗಾನ ಕ್ಷೇತ್ರದಲ್ಲಿ ಪುರುಷರದ್ದೇ ಪಾರುಪತ್ಯ. ಹಿಂದುಸ್ತಾನಿ ಕ್ಷೇತ್ರದಲ್ಲಿ ಹಾಗಿಲ್ಲ. ಇಲ್ಲಿ ಪುರುಷರು, ಮಹಿಳೆಯರಿಗೆ ಸಮಾನ ಅವಕಾಶ ಇದೆ. ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರು ಪ್ರೇಕ್ಷಕರು ಮಾತ್ರ. ಆದರೆ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಮಹಿಳೆಯರು ಕಲಾವಿದರೂ ಹೌದು.

ಅದಕ್ಕೇ ಮಹಿಳೆಯರು ಹೆಚ್ಚು ಹೆಚ್ಚಾಗಿ ಸಂಗೀತ ಕಲಿತರು, ಅದು ಅವರ ಅಭಿವ್ಯಕ್ತಿಗೆ ಹೊಸ ಸಾಧ್ಯತೆಯನ್ನು ಸೃಷ್ಟಿಸಿತು’ ಎಂದು ಹೇಳುವ ಕಲಾವಿದರೂ ಇದ್ದಾರೆ. ಆದರೆ ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದನ್ನೂ ಮರೆಯಬಾರದು. ಯಕ್ಷಗಾನದಲ್ಲಿ ತಾರಾ ಪಟ್ಟವನ್ನು ಅಲಂಕರಿಸಿದ ಮಹಿಳಾ ಕಲಾವಿದರೂ ಇದ್ದಾರೆ ಎಂದು ಕೆಲವರು ಕೈತೋರುತ್ತಾರೆ.

ಮಹಿಳಾ ಯಕ್ಷಗಾನ ಮೇಳವನ್ನು ಕಟ್ಟಿ ಬೆಳೆಸಿದ ಪ್ರೊ.ವಿಜಯನಳಿನಿ ರಮೇಶ್ ಕೂಡ ಯಕ್ಷಗಾನದಲ್ಲಿ ಮಹಿಳೆಯರು ಕಡಿಮೆಯಾಗಿದ್ದೇ ಹಿಂದುಸ್ತಾನಿ ಬೆಳೆಯಲು ಕಾರಣ ಎನ್ನುವುದನ್ನು ಸಂಪೂರ್ಣ ಒಪ್ಪುವುದಿಲ್ಲ.

ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯೆಯೂ ಆಗಿರುವ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ವಿಜಯನಳಿನಿ ರಮೇಶ್ ಅವರ ಪ್ರಕಾರ ಜಿಲ್ಲೆಯಲ್ಲಿ ಯಕ್ಷಗಾನ ಹಿಂದಕ್ಕೆ ಸರಿಯಲು ಸೂಕ್ತ ತರಬೇತಿ ಕೇಂದ್ರ ಇಲ್ಲದೇ ಇರುವುದೇ ಕಾರಣ. ರಂಗಾಯಣ, ನೀನಾಸಂನಂತಹ ತರಬೇತಿ ಕೇಂದ್ರಗಳನ್ನು ಯಕ್ಷಗಾನಕ್ಕೂ ವಿಸ್ತರಿಸಿದ್ದರೆ ಯಕ್ಷಗಾನ ಇಷ್ಟೊಂದು ಹಿಂದಕ್ಕೆ ಬೀಳುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಇಂತಹ ಪ್ರಯತ್ನಕ್ಕೆ ಮುಂದಾಗಬೇಕು. ಪ್ರಾದೇಶಿಕ ಕಲೆಯನ್ನು ಬೆಳೆಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

ವೃತ್ತಿನಾಟಕ, ಹರಿಕತೆ, ಗಮಕಗಳು ಹೋಗಿ ಯಕ್ಷಗಾನ ಬಂತು. ಈಗ ಯಕ್ಷಗಾನ ಬದಿಗೆ ಸರಿದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮುನ್ನೆಲೆಗೆ ಬಂದಿದೆ. ಮತ್ತೊಂದು ದಿನ ಶಾಸ್ತ್ರೀಯ ಸಂಗೀತ ಹೋಗಿ ಮತ್ತೆ ಯಾವುದೋ ಒಂದು ಕಲೆ ಮುಂದಕ್ಕೆ ಬರಬಹುದು. ಆದರೆ ಜನ ಮಾನಸದಲ್ಲಿ ಆಳವಾಗಿ ಬೇರು ಬಿಟ್ಟ ಯಕ್ಷಗಾನ ಅಥವಾ ಯಾವುದೇ ಕಲೆ ಸಂಪೂರ್ಣ ಹಿಂದಕ್ಕೆ ಸರಿಯುವುದಿಲ್ಲ. ಅವಕಾಶ ಸಿಕ್ಕಾಗ ಮತ್ತೆ ವಿಜೃಂಭಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry