7

ಹಿಂಬಾಲಿಸುವಿಕೆ: ಹಾಗೆಂದರೇನು? ಅದು ಅಪರಾಧ ಅಲ್ಲವೇ ?

Published:
Updated:
ಹಿಂಬಾಲಿಸುವಿಕೆ: ಹಾಗೆಂದರೇನು? ಅದು ಅಪರಾಧ ಅಲ್ಲವೇ ?

ಮಂಗಳೂರು ನಗರದ ಹೊರವಲಯಕ್ಕೆ ತಳಕು ಹಾಕಿಕೊಂಡ ಗ್ರಾಮವೊಂದರ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಳು. ಓದಿನಲ್ಲಿ, ಆಟೋಟದಲ್ಲಿಯೂ ಚುರುಕಾಗಿದ್ದ ಆಕೆಯನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಕಿಯರು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಮನೆಗೆ ತೆರಳಿ ಸಾವಧಾನವಾಗಿ ಮಾತನಾಡಿಸಿದ ಮೇಲೆ ಆಕೆ ತನ್ನ ಅನುಭವಗಳನ್ನು ಹೇಳಿಕೊಂಡಳು.

ಆ ಹುಡುಗಿಯ ಶಾಲೆಗೂ ಮನೆಗೂ ಒಂದೂವರೆ ಕಿ.ಮೀ. ದೂರ. ಪ್ರತಿದಿನ ಶಾಲೆಗೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಕೆಲವು ಹುಡುಗರು ಅವಳನ್ನು ಚುಡಾಯಿಸುತ್ತಿದ್ದರು. ಅವಳನ್ನೇ ಹಿಂಬಾಲಿಸುತ್ತಾ ಶಾಲೆಯ ಗೇಟಿನವರೆಗೂ ಬರುತ್ತಿದ್ದರು. ಏಳನೇ ತರಗತಿಯ ಆ ಬಾಲಕಿ, ತನ್ನನ್ನು ತಾನು ಅರಿಯುವ ಹಂತದಲ್ಲಿದ್ದಳಷ್ಟೆ. ಚುಡಾಯಿಸುವಿಕೆಯ ಮಾತುಗಳು ಆಕೆಯಲ್ಲಿ ಗಾಬರಿ ಹುಟ್ಟಿಸುತ್ತಿದ್ದವು.

ಹುಡುಗರ ಹಿಂಬಾಲಿಸುವಿಕೆಯಿಂದ ಕಂಗಾಲಾಗಿದ್ದಳು. ಅಮ್ಮ ತೀರಿಕೊಂಡಿದ್ದರಿಂದ ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆಯುತ್ತಿದ್ದ ಅವಳಿಗೆ ಮನೆಯಲ್ಲಿ ಕಿಶೋರಾವಸ್ಥೆಯ ಬಗ್ಗೆ ತಿಳಿವು ಹೇಳುವವರೂ ಇರಲಿಲ್ಲ. ಹುಡುಗರ ಚುಡಾಯಿಸುವಿಕೆಯಿಂದ ಕೀಳರಿಮೆ, ಖಿನ್ನತೆಯನ್ನು ಬೆಳೆಸಿಕೊಂಡು ಶಾಲೆಗೆ ಹೋಗದೇ ಇರಲು ನಿರ್ಧರಿಸಿದ್ದಳು.

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನ ಆರಂಭವಾದ ಕೂಡಲೇ ಅವಳ ಮನೆಗೆ ಶಿಕ್ಷಕಿಯರು ಭೇಟಿ ನೀಡಿದಾಗ, ಈ ವಿಷಯ ದೊಡ್ಡ  ಸುದ್ದಿಯಾಯಿತು. ಆದರೆ, ಮನೆಗೆ ಶಿಕ್ಷಕಿಯರು, ಮಾಧ್ಯಮದವರು ಬರುತ್ತಿರುವುದನ್ನು ಕಂಡ ಅಪ್ಪ, ಅವಳನ್ನು ಬೇರೆ ಊರಿಗೆ ಸ್ಥಳಾಂತರಿಸಿಬಿಟ್ಟರು. ಹುಡುಗಿಯನ್ನು ಹಿಂಬಾಲಿಸುತ್ತ ತೊಂದರೆ ಕೊಟ್ಟವರು ಆರಾಮವಾಗಿ ಓಡಾಡಿಕೊಂಡಿದ್ದರೆ, ಹಿಂಬಾಲಿಸುವಿಕೆಗೆ ಒಳಗಾದ ಹುಡುಗಿ ಶಿಕ್ಷಣದಿಂದಲೇ ವಂಚಿತಳಾಗಬೇಕಾಯಿತು.

ಚೇಷ್ಟೆ ಅಲ್ಲ, ಅಪರಾಧ

ವಯೋಸಹಜ ಚೇಷ್ಟೆಯಿಂದ ಹುಡುಗರು ಚುಡಾಯಿಸುತ್ತಾರೆ ಎಂಬ ಬಹುಸಾಮಾನ್ಯ ಅಭಿಪ್ರಾಯ ಸಮಾಜದಲ್ಲಿದೆ. ಆದರೆ ಚುಡಾಯಿಸುವಿಕೆಗೆ ಒಳಗಾದವರ ಜೀವನದ  ಗತಿಯನ್ನೇ ಇದು ಬದಲಾಯಿಸುತ್ತದೆ ಎಂಬುದನ್ನು ಇತ್ತೀಚಿನ ವರ್ಷಗಳಲ್ಲಷ್ಟೇ ಕಾನೂನು ವಿಶ್ಲೇಷಕರು ಅರ್ಥ ಮಾಡಿಕೊಂಡಿದ್ದಾರೆ.

ಹಿಂಬಾಲಿಸುವಿಕೆಯ (stalking) ಉದ್ದೇಶ ಎಂದೂ ಉತ್ತಮವಾಗಿರುವುದು ಸಾಧ್ಯವಿಲ್ಲ. ಅಂತಹ ವ್ಯಕ್ತಿಯ ಉದ್ದೇಶ ಕೊಲೆಯೋ, ಅತ್ಯಾಚಾರವೋ ಆಗಿರಬಹುದು. ಕೊಲೆ ಅಥವಾ ಅತ್ಯಾಚಾರದ ಉದ್ದೇಶ ಆಗಿಲ್ಲದೇ ಇದ್ದರೂ, ಅದು ಮಹಿಳೆಯ ಮೇಲೆ ಬೀರುವ ಪರಿಣಾಮವನ್ನು ಗಮನಿಸಬೇಕು.

ಮಹಿಳೆ ಹೊಸ್ತಿಲು ದಾಟಲು ಹಿಂಜರಿಯುತ್ತಿದ್ದ ಕಾಲದಲ್ಲಿ ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದ ಬಳಿಕ ಕೇಂದ್ರ ಸರ್ಕಾರ ಮಹಿಳಾ ಕಾನೂನುಗಳಿಗೆ ತಿದ್ದುಪಡಿ ಮಾಡಲು ನಿರ್ಧರಿಸಿದಾಗ, ಇಂತಹ ವಿಚಾರಗಳು ಚರ್ಚೆಗೆ ಒಳಗಾದವು. ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಪ್ರಕ್ರಿಯೆ ನಡೆಯಿತು. ಈಗ ‘ಹಿಂಬಾಲಿಸುವಿಕೆ’ ಅಪರಾಧ.

ಹಿಂಬಾಲಿಸಿದ್ದಕ್ಕೆ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸುವುದು ಹಿಂದೆಲ್ಲ ಹಾಸ್ಯಾಸ್ಪದ ಎನಿಸುತ್ತಿತ್ತು. ಆದರೆ ಕಾನೂನು ತಿದ್ದುಪಡಿ ಆದ ಬಳಿಕ, ಮಹಿಳೆಯರಲ್ಲಿ ಕೊಂಚಮಟ್ಟಿಗೆ ಧೈರ್ಯ ತುಂಬುವುದು ಸಾಧ್ಯವಾಗಿದೆ.

ಹಿಂಬಾಲಿಸುವಿಕೆಯಿಂದಾಗಿ ಆತಂಕಕ್ಕೊಳಗಾಗುವ ಮಹಿಳೆ ರಸ್ತೆಯಲ್ಲಿ ಯದ್ವಾ ತದ್ವಾ ವಾಹನ ಓಡಿಸಿ ಅಪಘಾತಕ್ಕೆ ತುತ್ತಾಗಬಹುದು. ಡ್ರೈವಿಂಗ್‌ ಮಾಡುತ್ತಿರುವಾಕೆಯ ಗಮನ ವಿಚಲಿತವಾಗಿಯೂ ಅಪಘಾತವಾಗಬಹುದು.

ತನ್ನನ್ನು ಸದಾ ಯಾರೋ ಹಿಂಬಾಲಿಸುತ್ತಿರುವುದರಿಂದ, ಹೆಚ್ಚು ಪ್ರಯಾಣ ಮಾಡದೇ ಇರುವುದು ಒಳ್ಳೆಯದು ಎಂಬ ನಿರ್ಧಾರವನ್ನು ಆಕೆ ತಳೆಯಬೇಕಾಗಬಹುದು. ಇದು ಜೀವನದ ಏಳಿಗೆಯನ್ನೇ ಚಿವುಟುವ ಸಾಧ್ಯತೆಯಿದೆ. ದೂರದ ಒಂಟಿ ಪ್ರಯಾಣವನ್ನು ತಿರಸ್ಕರಿಸುವುದರಿಂದ ಅವಕಾಶಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಸೈಬರ್‌ ಸ್ಟಾಕಿಂಗ್‌

ಇ–ಮೇಲ್‌ ಕಳಿಸಿ ಕಿರುಕುಳ ನೀಡುವುದು, ವಾಟ್ಸ್‌ಆ್ಯಪ್‌ ಅಥವಾ ಫೇಸ್‌ಬುಕ್‌ನಲ್ಲಿ ಪದೇ ಪದೇ ಕಿರುಕುಳ ನೀಡುವುದು ಕೂಡ ಹಿಂಬಾಲಿಸುವಿಕೆಯ ಇನ್ನೊಂದು ಮುಖ. ಇದನ್ನು ‘ಸೈಬರ್‌ ಸ್ಟಾಕಿಂಗ್‌’ ಎಂದು ಗುರುತಿಸಲಾಗುತ್ತದೆ. ನಿರಂತರ ಎಸ್‌ಎಂಎಸ್‌ ಕಳಿಸುವುದು, ಕರೆ ಮಾಡಿ ಕಾಡಿಸುವುದು ಕೂಡ ಅಪರಾಧ.

ಮಾನಸಿಕ ಕಿರುಕುಳದಿಂದಾಗಿ ಖಿನ್ನತೆ, ಕೀಳರಿಮೆಯೂ ಆಕೆಯನ್ನು ಕಾಡಬಹುದು. ಸಾಮಾಜಿಕವಾಗಿ ವಿಶ್ವಾಸದಿಂದ ವರ್ತಿಸಲು ಆಕೆ ಹಿಂದೇಟು ಹಾಕುವ ಪರಿಸ್ಥಿತಿ ಸೃಷ್ಟಿಯಾಗುವುದೂ ಇದೆ.

ಕೆಲವು ಪ್ರಕರಣಗಳು

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಮಹಿಳೆಯ ಮೇಲೆ ನಡೆದ ಹಿಂಸಾ ಪ್ರಕರಣಕ್ಕೆ ಮುನ್ನ ಆಕೆಯನ್ನು ಆರೋಪಿಗಳು ಹಿಂಬಾಲಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. 2016ರಲ್ಲಿ ದೆಹಲಿಯಲ್ಲಿ ನಡೆದ 21 ವರ್ಷದ ಮಹಿಳೆಯ ಹತ್ಯೆಗೂ ಮುನ್ನ ಆಕೆಯನ್ನು ಆರೋಪಿ ತಿಂಗಳುಗಟ್ಟಲೆ ಹಿಂಬಾಲಿಸಿದ್ದ. ಚೆನ್ನೈನ ಸ್ವಾತಿ ಕೊಲೆ ಪ್ರಕರಣವೂ ಹಿಂಬಾಲಿಸುವಿಕೆಯ ಬಳಿಕ ನಡೆದಿರುವುದು. ಹೀಗೆ ಉದಾಹರಣೆಗಳು ನೂರಾರು. ಆದ್ದರಿಂದಲೇ ಹಿಂಬಾಲಿಸುವಿಕೆಯು ಯಾವುದೋ ಗಂಭೀರ ಅಪರಾಧದ ಮುನ್ಸೂಚನೆಯೂ ಆಗಿರಬಹುದು.

ಇತ್ತೀಚೆಗೆ ಮುಂಬೈಯಲ್ಲಿ ಫ್ಯಾಷನ್‌ ವಿನ್ಯಾಸಕಾರ್ತಿ ಅದಿತಿ ನಾಗ್‌ಪಾಲ್‌ ಅವರು, ತಮ್ಮನ್ನು ಟೆಕಿಯೊಬ್ಬ ಹಿಂಬಾಲಿಸಿದ್ದಾಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂಬಾಲಿಸುವಿಕೆಯನ್ನು ವಿರೋಧಿಸಿ ವರ್ಣಿಕಾ ಚಂಡೀಗಡದಲ್ಲಿ ದೂರು ದಾಖಲಿಸಿದ್ದು, ವಿಕಾಸ್‌ ಮತ್ತು ಆಶೀಷ್‌ ಕುಮಾರ್‌ ಆರೋಪ ಎದುರಿಸುತ್ತಿದ್ದಾರೆ.

ಹಿಂಬಾಲಿಸುವಿಕೆ ಅರಿವಿಗೆ ಬಂದ ಕೂಡಲೇ ಮಹಿಳೆಯರು ತಕ್ಷಣ ದೂರು ದಾಖಲಿಸಬೇಕು. ‘ಹುಡುಗರು ತೊಂದರೆ ಕೊಡುವುದನ್ನು ನಿಲ್ಲಿಸಿದರೆ ಸಾಕು, ದೂರು ದಾಖಲು ಮಾಡುವುದು ಬೇಡ’ ಎಂದು ಪೋಷಕರು ಸಾಮಾನ್ಯವಾಗಿ ಹೇಳುತ್ತಾರೆ ಎಂಬುದು ಪೊಲೀಸರ ಅಸಮಾಧಾನ. ಆದರೆ ಮಹಿಳೆಯರು ಹಿಂಬಾಲಿಸುವಿಕೆಯ ತೊಂದರೆಯನ್ನು ಅನುಭವಿಸುವುದು ನಿಲ್ಲಬೇಕಾದರೆ ದೂರು ದಾಖಲಿಸುವುದು ಅಗತ್ಯ.

ದೂರು ಕೊಡದೇ ಇದ್ದಾಗ ಅಥವಾ ಪ್ರತಿರೋಧ ಇಲ್ಲದೇ ಇದ್ದಾಗ ಅದನ್ನು ಮಹಿಳೆಯ ದೌರ್ಬಲ್ಯ ಎಂದು ಆರೋಪಿಯು ಪರಿಗಣಿಸುವ ಸಾಧ್ಯತೆ ಹೆಚ್ಚು. ಇದು ಪುಂಡರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಆತ ಮುಂದುವರೆದಂತೆ ಆಕೆಯ ವಿಶ್ವಾಸ ಕುಂದುತ್ತಾ ಸಾಗಿ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದ್ದರಿಂದ ದೂರು ದಾಖಲಿಸುವುದು ಅತ್ಯಂತ ಅಗತ್ಯ ಪ್ರಕ್ರಿಯೆ.‌

ಸಾಕ್ಷ್ಯ ಸಂಗ್ರಹ

ಯಾರೋ ಹಿಂಬಾಲಿಸುತ್ತಿರುವ ವಿಷಯ ಗೊತ್ತಾದ ತಕ್ಷಣ ಮಹಿಳೆಯರು ತಮ್ಮ ಬೆನ್ನು ಬಿದ್ದಿರುವ ವ್ಯಕ್ತಿಯ ಮಾಹಿತಿಯನ್ನು ಚುರುಕಾಗಿ ದಾಖಲಿಸಬೇಕು. ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸುವುದು, ವಾಹನವಿದ್ದರೆ ನಂಬರ್‌ ಬರೆದುಕೊಳ್ಳುವುದು, ಇ–ಮೇಲ್‌ ಇದ್ದರೆ ಅದನ್ನು ಗುರುತು ಮಾಡುವುದು, ಫೇಸ್‌ಬುಕ್‌ ಅಥವಾ ವಾಟ್ಸ್‌ಅ್ಯಪ್‌ನಲ್ಲಿ ತೊಂದರೆ ಕೊಡುತ್ತಿದ್ದರೆ ಸ್ಕ್ರೀನ್‌ ಶಾಟ್‌ಗಳನ್ನು ತೆಗೆದಿಟ್ಟುಕೊಳ್ಳುವುದು– ಇವುಗಳನ್ನೆಲ್ಲ ದೂರು ದಾಖಲಿಸುವ ಸಂದರ್ಭದಲ್ಲಿ ಸಾಕ್ಷ್ಯಗಳಾಗಿ ಲಗತ್ತಿಸಬಹುದು. ಈ ಮಾಹಿತಿಗಳಿಂದ ಆರೋಪಿಗಳನ್ನು ಗುರುತಿಸಲು ನೆರವಾಗುತ್ತದೆ.

ಪರಿಚಿತರು ಹಿಂಬಾಲಿಸಿರುವ ಪ್ರಕರಣಗಳೂ ಬಹಳಷ್ಟಿವೆ. ಆದರೆ ‘ಗೊತ್ತಿರುವವರೇ’ ಎಂಬ ಸಲಿಗೆಯಿಂದ ಸುಮ್ಮನಿರುವುದು ಸರಿಯಲ್ಲ. ಹಿಂಬಾಲಿಸುವಿಕೆಯನ್ನು ಸಂತ್ರಸ್ತರು ಮಾತ್ರ ಗುರುತಿಸಬೇಕೆಂದಿಲ್ಲ. ಹಿಂಬಾಲಿಸುವ ವ್ಯಕ್ತಿಯ ಆಪ್ತರು, ಮನೆಯವರು ಆ ವ್ಯಕ್ತಿಗೆ ಬುದ್ಧಿ ಹೇಳುವುದು ಅಥವಾ ಪರಿಣಾಮಗಳನ್ನು ತಿಳಿಸಿಹೇಳುವುದು ಒಳ್ಳೆಯದು.

ಗೀಳು (obssession compulsive disorder– OCD) ರೋಗದಿಂದ ಹುಡುಗ ಹಿಂಬಾಲಿಸುವಿಕೆಯ ಖಯಾಲಿಗೆ ಬಿದ್ದಿದ್ದಾನೆ ಎಂದು ಹೆಚ್ಚಿನ ಸಂದರ್ಭಗಳಲ್ಲಿ ಆರೋಪಿಯ ಪರ ವಾದ ಮಂಡಿಸುವುದುಂಟು. ಆದರೆ ಮಂಗಳೂರಿನ ‘ಡೀಡ್ಸ್‌’ ಸಂಸ್ಥೆಯ ಮರ್ಲಿನ್‌ ಮಾರ್ಟಿಸ್‌ ಹೇಳುವ ಪ್ರಕಾರ - ಒಸಿಡಿ, ಪುರುಷರಿಗೆ ಮಾತ್ರ ಸೀಮಿತವಾದ ಕಾಯಿಲೆ ಅಲ್ಲ. ಆದ್ದರಿಂದ ಹಿಂಬಾಲಿಸುವಿಕೆಯನ್ನು ಅಪರಾಧ ಎಂದೇ ಪರಿಗಣಿಸಬೇಕು. ಕುಂಟುನೆಪಗಳಿಗೆ ಅವಕಾಶ ಸಲ್ಲ.

ಗಂಡುಮಕ್ಕಳಿಗೆ ಶಿಕ್ಷಣ

ಮಾನವೀಯವಾದ ದೃಷ್ಟಿಕೋನವೊಂದನ್ನು ಹೊಂದಿದ್ದಾಗ, ‘ಮಹಿಳಾ ಪರ’ ಎಂಬ ಧೋರಣೆಯ ಅಗತ್ಯವೇ ಇರುವುದಿಲ್ಲ. ಆದರೆ ಸಾಮಾಜಿಕ ಬದಲಾವಣೆ ನಿಧಾನಗತಿಯಲ್ಲಿ ಸಾಗುತ್ತದೆ. ಬದಲಾವಣೆಗೆ ಪೂರಕವಾಗಿ ಈ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎನ್ನುವುದನ್ನು ಮರೆಯುವಂತಿಲ್ಲ. ಬದಲಾವಣೆಯ ಪ್ರಕ್ರಿಯೆಗೆ ಸಮಾಜವೂ ಕೈ ಜೋಡಿಸಬೇಕು. ಅಂದರೆ ಗಂಡುಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಹಾಗೂ ಶೈಕ್ಷಣಿಕ ವಲಯದಲ್ಲಿ ಅವರಲ್ಲಿ ‘ಸಮಾನ ದೃಷ್ಟಿಕೋನ’ವೊಂದನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಅಗತ್ಯ. ಮನೆಯಲ್ಲಿಯೂ ಶಾಲೆಯಲ್ಲಿಯೂ ಸಾಮಾಜಿಕವಾಗಿಯೂ ಇಂತಹ ಪ್ರಯತ್ನಗಳ ಅಗತ್ಯವಿದೆ. ತಾನು ಹೇಗೆ ವರ್ತಿಸಿದರೆ ಅದರಿಂದ ಸಹಚರ ವ್ಯಕ್ತಿಗೆ ತೊಂದರೆಯಾಗುತ್ತದೆ ಎಂಬುದನ್ನು ಗಂಡುಮಕ್ಕಳು ಹಾಗೂ ಹೆಣ್ಮಕ್ಕಳು ಅರ್ಥ ಮಾಡಿಕೊಳ್ಳಬೇಕಿದೆ.

ಆ್ಯಪ್‌ಗಳ ನೆರವು

ಹಿಂಬಾಲಿಸುವಿಕೆ ಅರಿವಿಗೆ ಬಂದಾಗ ಮಹಿಳಾ ಸುರಕ್ಷತೆಯ ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ತಾನಿರುವ ಜಾಗವನ್ನು, ಪರಿಸ್ಥಿತಿಯನ್ನು ತಕ್ಷಣವೇ ತನ್ನವರಿಗೆ ತಿಳಿಸಲು ಪೂರಕವಾದ ಹಲವು ಆ್ಯಪ್‌ಗಳಿವೆ. ಅವುಗಳನ್ನು ಮೊಬೈಲ್‌ನಲ್ಲಿ ಆದ್ಯತೆಯ ಐಕಾನ್‌ ಆಗಿ ಇರಿಸಿಕೊಳ್ಳಬಹುದು. ಹತ್ತಿರದ ಪೊಲೀಸ್ ಠಾಣೆಯ ನಂಬರ್‌ಗಳನ್ನು ಕೂಡ ಹೋಮ್‌ಸ್ಕ್ರೀನ್‌ ಮೇಲೆ ತಕ್ಷಣ ಸಿಗುವಂತೆ ಸೇವ್‌ ಮಾಡಿಕೊಂಡಿರುವುದು ಒಳ್ಳೆಯದು.

ವ್ಯಾಖ್ಯಾನ

ಪುರುಷನೊಬ್ಬ ಮಹಿಳೆಯನ್ನು ಅವಳೊಡನೆ ಸಂಬಂಧಿವಿರಿಸುವ ಉದ್ದೇಶದಿಂದ ಅವಳಿಗೆ ಇಷ್ಟವಿಲ್ಲದಿದ್ದರೂ, ಅವನ ಬಗ್ಗೆ ನಿರಾಸಕ್ತಿ ತೋರಿಸಿದಾಗಲೂ ಹಿಂಬಾಲಿಸಿದರೆ ಅಥವಾ ಅಂತರ್ಜಾಲದ ಮೂಲಕ ಇಲ್ಲವೇ ಇ–ಮೇಲ್‌ ಮೂಲಕ ಸಂಪರ್ಕಿಸಿದರೆ ‘ಹಿಂಬಾಲಿಸುವಿಕೆ’ (ಸ್ಟಾಕಿಂಗ್‌) ಎನ್ನಲಾಗುವುದು. ಹೀಗೆ ಹಿಂಬಾಲಿಸುವುದು ಅಪರಾಧ ಎನಿಸಿಕೊಳ್ಳುತ್ತದೆ.

ಇಂತಹ ಹಿಂಬಾಲಿಸುವಿಕೆಯು ಅಪರಾಧ ತಡೆಯುವ ಉದ್ದೇಶದಿಂದ ಮತ್ತು ಅದಕ್ಕೆ ಅಧಿಕೃತವಾಗಿ ಸರ್ಕಾರದ ಒಪ್ಪಿಗೆ ಇದ್ದಾಗ ನಡೆದರೆ ಅದು ಅಪರಾಧ ಆಗುವುದಿಲ್ಲ. ಹಿಂಬಾಲಿಸುವಿಕೆಯ ಮೊದಲ ಅಪರಾಧಕ್ಕೆ ಮೂರು ವರ್ಷ ಮತ್ತು ಅದನ್ನು ಪುನರಾವರ್ತಿಸಿದಾಗ ಐದು ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಹಿಂಬಾಲಿಸುವಿಕೆಯಂತೆಯೇ ವಾಯರಿಸಮ್‌ ಅಥವಾ ಲೈಂಗಿಕಾಸಕ್ತಿಯಿಂದ ದಿಟ್ಟಿಸುವಿಕೆ ಕೂಡ ಅಪರಾಧ. 2014ರಲ್ಲಿ ಮೊತ್ತ ಮೊದಲ ಬಾರಿಗೆ ‘ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೊ’ (ಎನ್‌ಸಿಆರ್‌ಬಿ) ಸ್ಟಾಕಿಂಗ್‌ ಮತ್ತು ವಾಯರಿಸಮ್‌ ಕುರಿತು ಪ್ರತ್ಯೇಕ ದಾಖಲೀಕರಣ ಆರಂಭಿಸಿದೆ.

ಕಾನೂನು ರೂಪುಗೊಂಡ ಹಿನ್ನೆಲೆ

2012ರ ಡಿಸೆಂಬರ್‌ ತಿಂಗಳಲ್ಲಿ ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ವಿರೋಧಿಸಿ ತೀವ್ರ ಹೋರಾಟ ನಡೆಯಿತು. ಇದನ್ನು ಗಮನಿಸಿದ  ಕೇಂದ್ರ ಸರ್ಕಾರ, ಮಹಿಳೆಯರ ಬಗೆಗಿನ ಹಲವು ಕಾನೂನುಗಳ ಪುನರ್‌ವಿಮರ್ಶೆ ಮಾಡಲು ನಿರ್ಧರಿಸಿತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜೆ.ಎಸ್‌. ವರ್ಮಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿ, ಯಾವೆಲ್ಲಾ ಕಾನೂನುಗಳ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂದು ಪರಿಶೀಲಿಸುವಂತೆ ಸರ್ಕಾರ ಸೂಚಿಸಿತು. ಈ ಸಮಿತಿಯು ಅಧ್ಯಯನದ ಬಳಿಕ ಮಹಿಳಾ ಕಾನೂನುಗಳ ಬದಲಾವಣೆಗೆ ಹಲವಾರು ಶಿಫಾರಸುಗಳನ್ನು ಮಾಡಿತು. ಇದರಲ್ಲಿ ಪ್ರಮುಖವಾದುದು ಅತ್ಯಾಚಾರ ಕಾನೂನಿನ ತಿದ್ದುಪಡಿ.

2013ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಸಾಕ್ಷ್ಯ ಕಾಯ್ದೆಗಳಿಗೆ ತಿದ್ದುಪಡಿ ತರಲಾಯಿತು. ತಿದ್ದುಪಡಿಯಾದ ಕಾನೂನು 2013ರ ಏಪ್ರಿಲ್‌ನಿಂದ ಜಾರಿಯಾಗಿದೆ. ಇದರ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 100, 166, 326 354, 370, 375, 376ಕ್ಕೆ ಅನೇಕ ಉಪಸೆಕ್ಷನ್‌ಗಳನ್ನು ಸೇರಿಸಲಾಗಿದೆ.

ಈ ಸೆಕ್ಷನ್‌ಗಳಲ್ಲಿ ಮಹಿಳೆಯರ ಮೇಲಾಗುವ ಆ್ಯಸಿಡ್‌ ದಾಳಿ, ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಕ್ಕೆ ಪ್ರತ್ಯೇಕವಾದ ಹಾಗೂ ಸ್ಪಷ್ಟವಾದ ಸೆಕ್ಷನ್‌ಗಳನ್ನು ಸೇರಿಸುವ ಮೂಲಕ ಅವುಗಳನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ಅಧಿಕಾರಿಗಳು ಕೂಡ ಕಾನೂನಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಅವರನ್ನು ಹೊಣೆಗಾರರನ್ನಾಗಿಸ ಲಾಗಿದೆ.  ಸೆಕ್ಷನ್‌ 354 ಡಿ ಅಡಿಯಲ್ಲಿ ಸ್ಟಾಕಿಂಗ್‌ ಅಥವಾ ‘ಹಿಂಬಾಲಿಸುವಿಕೆ’ಯನ್ನು ಅಪರಾಧ ಎಂಬುದಾಗಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry