‘ಜಿಕಾ’ ಸೋಂಕು ತಡೆಗೆ ಲಸಿಕೆ ಅಭಿವೃದ್ಧಿ: ಡೆಂಗ್ಯು, ಕಾಮಾಲೆ ಜ್ವರಕ್ಕೂ ಪರಿಣಾಮಕಾರಿ

ವಾಷಿಂಗ್ಟನ್: ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಲು ಸಸ್ಯ ಮೂಲ ಬಳಸಿ ತಯಾರಿಸಬಹುದಾದ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ಉಳಿದ ಲಸಿಕೆಗಳಿಗಿಂತ ಕಡಿಮೆ ಬೆಲೆ, ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತವೆನಿಸಿದೆ.
ಜಿಕಾ ವೈರಸ್‌ನಿಂದ ಉಂಟಾಗುವ ಸೋಂಕು ತಡೆಗಟ್ಟಲು ಸಂಶೋಧನೆ ಕೈಗೊಂಡಿರುವ ಅಮೆರಿಕದ ‘ಆರಿಜೋನಾ ಸ್ಟೇಟ್ ವಿಶ್ವವಿದ್ಯಾಲಯ’ದ ವಿಜ್ಞಾನಿಗಳು ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಇನ್ನೂ ಪರವಾನಗಿ ದೊರೆತಿಲ್ಲ.
ಜಿಕಾ ವೈರಾಣುಗಳು ಪ್ರೊಟಿನ್‌ನಿಂದ ಕೂಡಿದ ಹೊದಿಕೆಗಳನ್ನು ಹೊಂದಿದ್ದು ರಾಸಾಯನಿಕಗಳಿಗೆ ಪ್ರತಿಯಾಗಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ. ವೈರಾಣುಗಳ ಈ ವಿಶೇಷ ಸಾಮರ್ಥ್ಯವನ್ನು ತಿಳಿದ ವಿಜ್ಞಾನಿಗಳು ಮೊದಲು ಬ್ಯಾಕ್ಟೀರಿಯಾಗಳಲ್ಲಿ ಪ್ರೊಟೀನ್ ಹೊದಿಕೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಂತರ ತಂಬಾಕು ಸಸ್ಯಗಳಲ್ಲಿ ‘ಡೊಮೇನ್3’ ಕಾರ್ಯವ್ಯಾಪ್ತಿ ರೂಪಿಸಿ ಪ್ರಯೋಗ ನಡೆಸಿದ್ದಾರೆ.
ಇದರಿಂದ ಲಸಿಕೆ ಸಿದ್ಧಪಡಿಸಲು ಸಹಕಾರಿಯಾಗಿದೆ. ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದಾರೆ. ಪ್ರತಿಕಾಯ ಹಾಗೂ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸಿರುವ ಲಸಿಕೆ ಇಲಿಗಳ ದೇಹದಲ್ಲಿ ಜಿಕಾ ವೈರಸ್ ವಿರುದ್ಧ ಯಶಸ್ವಿಯಾಗಿರುವುದು ಕಂಡುಬಂದಿದೆ.
‘ಲಸಿಕೆಯು ಜೀಕಾ ವೈರಸ್ ವಿರುದ್ಧ ಪ್ರಬಲವಾಗಿ ಕಾರ್ಯನಿರ್ವಹಿಸುವ ಜತೆಗೆ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ’ ಎಂಬುದನ್ನು ಖಚಿತ ಪಡಿಸಿಕೊಂಡಿದ್ದೇವೆ. ಜತೆಗೆ ಇದು ಡೆಂಗ್ಯು, ಕಾಮಾಲೆ ಜ್ವರದ ಚಿಕಿತ್ಸೆಗೂ ಪೂರಕ’ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.
2015ರಲ್ಲಿ ಜಿಕಾ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿತ್ತು. ಅಮೆರಿಕದಲ್ಲಿ ಲಕ್ಷಾಂತರ ಜನರಿಗೆ ಹರಡಿ ಆತಂಕ ಸೃಷ್ಟಿಯಾಗಿತ್ತು. ಜಿಕಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಗರ್ಭಿಣಿಯರು ಮಿದುಳು ತೊಂದರೆಗೆ ಒಳಗಾದ ಮಕ್ಕಳನ್ನು ಹೆರುವಂತಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.