ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

7

ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

Published:
Updated:
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

ಅದು ಒಂದು ಅವಕಾಶವಾಗಿತ್ತು. ಅದು ವಿವೇಕವಾಗಿ ಒದಗಿ ಬಂದಿತ್ತು. ಆ ವಿವೇಕ, ತಜ್ಞರ ಸಮಿತಿಯ ಶಿಫಾರಸಿನ ರೂಪದಲ್ಲಿ ಇತ್ತು. ಸರ್ಕಾರ ಅದನ್ನು ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಂಡಿದ್ದರೆ ದೇಶದಲ್ಲಿ ಒಂದು ಮಾದರಿಯನ್ನು ಹಾಕಿಕೊಟ್ಟಂತೆ ಆಗುತ್ತಿತ್ತು. ಈಗ ಸರ್ಕಾರ ಮತ್ತೆ ಹಳೆಯ ಜಾಡಿನಲ್ಲಿಯೇ ನಡೆದುಕೊಂಡಿದೆ. ಹೆಸರು ಮಾಡುವ ಅವಕಾಶ ಕೈ ತಪ್ಪಿ ಹೋಗಿದೆ.

ರಾಜ್ಯಕ್ಕೆ ಒಂದು ಸಾಂಸ್ಕೃತಿಕ ನೀತಿ ರೂಪಿಸಲು ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಅಕಾಡೆಮಿಗಳ ಸ್ವಾಯತ್ತತೆ ಕುರಿತಂತೆ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿತ್ತು. ಸರ್ಕಾರ ಅದರಲ್ಲಿ ಕೆಲವನ್ನು ಒಪ್ಪಿದೆ, ಮುಖ್ಯವಾದ ಶಿಫಾರಸುಗಳನ್ನು ಕೈ ಬಿಟ್ಟಿದೆ.

ಕೈ ಬಿಟ್ಟ ಶಿಫಾರಸುಗಳಲ್ಲಿ ಮೊದಲನೆಯದು, ಶೋಧನಾ ಸಮಿತಿಗಳ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವುದು. ಎರಡನೆಯದು, ಶಿಷ್ಟಾಚಾರಗಳ ಕಟ್ಟಳೆಯಿಂದ ಅಕಾಡೆಮಿಗಳನ್ನು ಮುಕ್ತಗೊಳಿಸುವುದು.

ಸರ್ಕಾರದ ಹಿಡಿತದಿಂದ ಅಕಾಡೆಮಿಗಳನ್ನು ಬಿಡಿಸುವ ದೃಷ್ಟಿಯಿಂದ ಈ ಎರಡೂ ಶಿಫಾರಸುಗಳು ಬಹಳ ಮಹತ್ವದ್ದಾಗಿದ್ದುವು. ಆಗಲೂ ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಪ್ರತಿಭೆಗೆ ಅವಕಾಶ ಇತ್ಯಾದಿ ಮಾನದಂಡಗಳನ್ನು ಅನುಸರಿಸಲು ಅವಕಾಶವಿತ್ತು. ಆಗ ಅಕಾಡೆಮಿಗಳ ಅಧ್ಯಕ್ಷ ಹುದ್ದೆಗೆ ಒಂದು ಘನತೆ ಬರುತ್ತಿತ್ತು. ಎಲ್ಲ ಸಂದರ್ಭದಲ್ಲಿಯೂ ರಂಗೋಲಿ ಕೆಳಗೆ ನುಸುಳುವವರು ಇರುವ ಹಾಗೆ ಆಗಲೂ ಕೆಲವರು ನುಸುಳಿ ಬರಬಹುದಿತ್ತು. ಅದು ಬೇರೆ ಮಾತು.

ಆ ಶಿಫಾರಸನ್ನು ಕೈ ಬಿಡುವ ಮೂಲಕ ತನ್ನ ಸುತ್ತ ಸಾಹಿತಿಗಳು, ಕಲಾವಿದರು ಮತ್ತು ಮಾಧ್ಯಮದವರು ಪ್ರದಕ್ಷಿಣೆ ಹಾಕುತ್ತಿರಬೇಕು ಎಂದು ಸರ್ಕಾರ ಬಯಸುವಂತೆ ಕಾಣುತ್ತದೆ. ಅನೇಕ ಸಾಹಿತಿಗಳು, ಕಲಾವಿದರು ಮತ್ತು ಮಾಧ್ಯಮದವರು ಅಕಾಡೆಮಿಗಳ ಅಧ್ಯಕ್ಷತೆಗೆ ಅಥವಾ ಸದಸ್ಯತ್ವಕ್ಕೆ ಶಾಸಕರ ಅಥವಾ ಸಚಿವರ ದುಂಬಾಲು ಬಿದ್ದು ಅವರಿಂದ ಪತ್ರ ಪಡೆದು ಅದನ್ನು ಹೇಗಾದರೂ ಮಾಡಿ ಸಂಬಂಧಪಟ್ಟ ಸಚಿವರಿಗೆ ತಲುಪಿಸಿ ಅಪೇಕ್ಷಿತ ಹುದ್ದೆಯನ್ನು ಪಡೆಯಲು ಪ್ರಯತ್ನ ಮಾಡುತ್ತಾರೆ.

ಅಕ್ಷರ ಲೋಕದ ಮಂದಿ ಹೀಗೆ ತಮ್ಮ ಹಿಂದೆ ಮುಂದೆ ಅಡ್ಡಾಡುವುದು ರಾಜಕಾರಣಿಗಳ ಅಹಂಕಾರವನ್ನು ತೃಪ್ತಿಪಡಿಸುತ್ತದೆ. ಬರೀ ಹಳ್ಳಿಯ ಜನರು ಏಕೆ? ಸಾಹಿತಿಗಳು, ಕಲಾವಿದರು ಕೂಡ ತಮ್ಮ ಮನೆ ಬಾಗಿಲಿಗೆ ಬಂದು ಕಾಯುವುದು ಒಂದು ಅಕ್ಷರವನ್ನೂ ಬರೆಯದ, ಒಂದು ಅಕ್ಷರವನ್ನೂ ಓದದ ರಾಜಕಾರಣಿಗಳಿಗೆ ಎಂಥ ಪುಳಕವನ್ನು ಮೂಡಿಸಬಹುದು ಎಂದು ಯಾರಾದರೂ ಊಹಿಸಬಹುದು. ಅದು ಅಧಿಕಾರ ತಂದುಕೊಡುವ ಅವಕಾಶ. ಅಂಥ ಒಂದು ಅವಕಾಶವನ್ನು ಬಿಟ್ಟುಕೊಡುವುದು ಯಾರಿಗೇ ಆಗಲಿ ಬಹಳ ಕಷ್ಟ.

ಒಂದು ಸಾರಿ ಅಕಾಡೆಮಿಗಳ ನೇಮಕಾತಿ ಅಧಿಕಾರ ತಮ್ಮ ಕಡೆಗೆ ಇದೆ ಎಂದ ಕೂಡಲೇ ಅಕಾಡೆಮಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲೂ ತಮಗೆ ಅಧಿಕಾರವಿದೆ ಎಂದು ಅವರು ಅಂದುಕೊಳ್ಳುವುದು ಸಹಜವಿದೆ. ಅದು ಶಿಷ್ಟಾಚಾರ. ಅದು ಸಾಹಿತ್ಯ ಅಕಾಡೆಮಿಯೇ ಇರಲಿ, ಲಲಿತ ಕಲಾ ಅಕಾಡೆಮಿಯೇ ಇರಲಿ; ಅದರ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಸಂಬಂಧಪಟ್ಟ ಎಲ್ಲ ರಾಜಕಾರಣಿಗಳ ಹೆಸರು ಇರಲೇಬೇಕು.

ಗ್ರಾಮಪಂಚಾಯ್ತಿ ಸದಸ್ಯರಿಂದ ಹಿಡಿದು ಲೋಕಸಭೆ ಸದಸ್ಯರವರೆಗೆ ಎಲ್ಲರ ಹೆಸರು ಮುದ್ರಿತ ಆಗಲೇಬೇಕು. ಇಲಾಖೆಯ ಸಚಿವರನ್ನಂತೂ ಕರೆಯಲೇಬೇಕು. ಅಕಾಡೆಮಿಯ ಅಧ್ಯಕ್ಷರು ಅವರಿಗೆ ಪತ್ರ ಬರೆಯಬೇಕು. ಆಮಂತ್ರಣ ಕೊಡಬೇಕು. ಸಾಧ್ಯವಾದರೆ ಅವರ ಮನೆಗೆ ಹೋಗಿ ಕರೆಯಬೇಕು. ಹಾಗೆಂದು ಅವರು ಬಂದೇ ಬರುತ್ತಾರೆ ಎಂಬ ಖಾತ್ರಿಯಿಲ್ಲ.

ಹೆಸರು ಹಾಕುವುದು ಅಕಾಡೆಮಿಗಳ ಅಧ್ಯಕ್ಷರ ಕರ್ತವ್ಯ. ಬರುವುದು, ಬಿಡುವುದು ಜನಪ್ರತಿನಿಧಿಗಳಿಗೆ ಬಿಟ್ಟ ಆಯ್ಕೆ. ಶಿಷ್ಟಾಚಾರಕ್ಕೆ ಅನುಸಾರವಾಗಿ ಹೆಸರು ಹಾಕದೇ ಇದ್ದರೆ ಹಕ್ಕುಚ್ಯುತಿಯ ಅಸ್ತ್ರವನ್ನು ಅವರು ಅಕಾಡೆಮಿ ಅಧ್ಯಕ್ಷರ ವಿರುದ್ಧ ಬಳಸಬಹುದು. 1990ರ ದಶಕದಲ್ಲಿ ಹೀಗೆ ಶಾಸಕರನ್ನು ಬಿಟ್ಟು ಕಾರ್ಯಕ್ರಮ ಮಾಡಿದ ಆಗಿನ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರು ಭಾರಿ ಸಂಕಟದಲ್ಲಿ ಸಿಲುಕಿದ್ದರು.

ದುರಂತ ಎಂದರೆ, ದ.ರಾ.ಬೇಂದ್ರೆಯವರು ನಿಧನರಾದ ನಂತರವೂ, ‘ಅವರ ಮನೆಗೆ ಹೋಗೋಣ’ ಎನ್ನುವ, ‘ಮಹಾಭಾರತವನ್ನು ವಾಲ್ಮೀಕಿ ಬರೆದ’ ಎನ್ನುವ ಸಂಸ್ಕೃತಿ ಸಚಿವರನ್ನು ನಾವು ನೋಡಿದ್ದೇವೆ!

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಖಂಡಿತ ಭಾಗವಹಿಸಲಿ. ಅದರಿಂದ ಅವರಿಗೆ ಮತ ಗಳಿಸಲು ಅನುಕೂಲವೂ ಆಗಬಹುದು. ಆದರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರಿಗೆ ಏನು ಕೆಲಸ? ಅಲ್ಲಿಗೂ ಅವರು ಬರಲಿ. ‘ನಾವು ಕೆಳಗೆ ಕುಳಿತುಕೊಳ್ಳುತ್ತೇವೆ.

ತಿಳಿದವರು ಮೇಲೆ ಕುಳಿತೋ, ನಿಂತೋ ನಾಲ್ಕು ಮಾತನಾಡಲಿ. ಕೇಳಿಸಿಕೊಂಡು ಹೋಗುತ್ತೇವೆ’ ಎಂದು ಅವರು ಹೇಳಬಹುದಲ್ಲ? ಈ ವಿನಯವನ್ನು ನಮ್ಮ ರಾಜಕಾರಣಿಗಳು ಏಕೆ ಬೆಳೆಸಿಕೊಳ್ಳುವುದಿಲ್ಲ? ಅವರು ಹೀಗೆಲ್ಲ ಮಾಡಿದರೆ, ವೇದಿಕೆ ಮೇಲೆ ನಿಂತು ಒಂದಕ್ಕೆ ಒಂದು ಸಂಬಂಧವಿಲ್ಲದಂಥ ಮಾತು ಆಡಿ ಪಡೆಯಬಹುದಾದುದಕ್ಕಿಂತ ಹೆಚ್ಚಿನ ಪ್ರಚಾರವನ್ನು ಅವರು ಪಡೆಯಬಹುದು.

ಕರ್ನಾಟಕದ ಒಬ್ಬ ರಾಜಕಾರಣಿಯೂ ಹೀಗೆ ಮಾಡಿದ ನೆನಪು ನನಗೆ ಇಲ್ಲ. ಇದೇ ಅಂಕಣದಲ್ಲಿ ಹಲವು ಸಾರಿ ಬರೆದ ಹಾಗೆ ಮಹಾರಾಷ್ಟ್ರದಲ್ಲಿ ಇಂಥ ರೂಢಿ ಇದೆ. ಅಲ್ಲಿನ ಘಟಾನುಘಟಿ ರಾಜಕಾರಣಿಗಳು ಸಾಹಿತ್ಯದ ವೇದಿಕೆಯನ್ನು ಏರುವುದಿಲ್ಲ. ಯಾವಾಗಲೋ ಎಲ್ಲಿಂದಲೋ ಬಂದು ವೇದಿಕೆ ಮುಂಭಾಗದಲ್ಲಿ ಕುಳಿತು ಸಾಹಿತಿಗಳ ಭಾಷಣ ಕೇಳಿ ಯಾವ ಸದ್ದು ಗದ್ದಲವಿಲ್ಲದೇ ಎದ್ದು ಹೋಗುತ್ತಾರೆ.

ಸಮಸ್ಯೆ ಇರುವುದು ಎಲ್ಲಿ ಎಂದರೆ ಯಾವ ಅಕಾಡೆಮಿಗಳೂ, ಯಾವ ಸಾಂಸ್ಕೃತಿಕ ಸಂಸ್ಥೆಗಳೂ ಆರ್ಥಿಕವಾಗಿ ಸ್ವಾಯತ್ವವಾಗಿಲ್ಲ. ಅವುಗಳೆಲ್ಲ ಸರ್ಕಾರದ ಮರ್ಜಿಯಲ್ಲಿ ಇವೆ. ಎಲ್ಲ ಅಕಾಡೆಮಿಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಅನುದಾನ ಸಿಗುತ್ತದೆ. ತಾನು ಹಣಕಾಸಿನ ಸಹಾಯ ಕೊಡುತ್ತೇನೆ ಎಂಬ ಕಾರಣಕ್ಕಾಗಿಯೇ ಸರ್ಕಾರ ಇಂಥ ಸಂಸ್ಥೆಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಬಯಸುತ್ತದೆ. ತಾನು ಹಣ ಕೊಡುವ ಸಂಸ್ಥೆಗಳಿಗೆ ತನಗೆ ಬೇಕಾದವರನ್ನು ನೇಮಿಸುತ್ತೇನೆ ಎಂದು ಕೂಡ ಸರ್ಕಾರ ಹೇಳುತ್ತದೆ.

ನೇಮಕದ ಅಧಿಕಾರ ಯಾರ ಬಳಿ ಇದೆ ಎಂದು ಆಕಾಂಕ್ಷಿಗಳಿಗೆ ಸುಳಿವು ಸಿಕ್ಕರೆ ಸಾಕು ಅವರ ಸುತ್ತಲೇ ‘ಗ್ರಹ’ಗಳ ಹಾಗೆ ಅವರು ಸುತ್ತಲು ತೊಡಗುತ್ತಾರೆ. ಅರ್ಹತೆ ಇಲ್ಲದವರು ಸುತ್ತುತ್ತಾರೆ ಎಂದು ಅರ್ಹತೆ ಇದ್ದವರೂ ಸುತ್ತಲು ತೊಡಗುತ್ತಾರೆ. ಇದು ಸತ್ತರೂ ತನಗೆ ಸಾಧ್ಯ ಇಲ್ಲ ಎನ್ನುವವರ ಹೆಸರು ಪರಿಗಣನೆಗೇ ಬರುವುದಿಲ್ಲ! ಇದೆಲ್ಲ ಒಂದಕ್ಕೆ ಒಂದು ಸಂಬಂಧ ಇರುವ ವರ್ತುಲ. ಇದು ಈ ಸರ್ಕಾರದಲ್ಲಿ ಆದ ಲೋಪ ಎಂದು ಅಲ್ಲ. ಹಿಂದಿನ ಸರ್ಕಾರಗಳಲ್ಲಿಯೂ ಇದೇ ಆಗಿತ್ತು. ಈ ಸರ್ಕಾರದ ಅವಧಿಯಲ್ಲಿ ಇದನ್ನು ತಪ್ಪಿಸಲು ಅವಕಾಶವಿತ್ತು.

ವಿಶ್ವವಿದ್ಯಾಲಯಗಳಿಗೆ ಕುಲಪತಿಯ ಹೆಸರು ಶಿಫಾರಸು ಮಾಡಲು ನೇಮಿಸುವ ತಜ್ಞರ ಸಮಿತಿಯನ್ನು ರಚಿಸಿದ ಹಾಗೆಯೇ ಅಕಾಡೆಮಿಗಳ ಅಧ್ಯಕ್ಷ ಹುದ್ದೆಗೂ ಹೆಸರು ಶಿಫಾರಸು ಮಾಡಲು ಸಮಿತಿ ರಚಿಸಬೇಕು ಎಂದು ಬರಗೂರು ಸಮಿತಿ ಸಲಹೆ ಮಾಡಿತ್ತು. ಅಂಥ ಶೋಧನಾ ಸಮಿತಿ ರಚಿಸಿದ್ದರೆ ಇನ್ನೂ ಒಂದು ಅನುಕೂಲ ಆಗುತ್ತಿತ್ತು. ಸರ್ಕಾರ ಬದಲಾದ ಹಾಗೆ ಅಕಾಡೆಮಿಗಳ ಅಧ್ಯಕ್ಷರೂ ಈಗ ಬದಲಾಗಬೇಕಾಗುತ್ತದೆ.

ಈ ಸರ್ಕಾರಕ್ಕೆ ಇನ್ನೂ ಎಂಟು ತಿಂಗಳ ಅಧಿಕಾರ ಇದೆ. ಮುಂಬರುವ ಚುನಾವಣೆಯಲ್ಲಿ ಇದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ನೇಮಕ ಆಗಿರುವ ಅಧ್ಯಕ್ಷರು ಮತ್ತು ಸದಸ್ಯರು ಮುಂದುವರಿಯಬಹುದು. ಇನ್ನೊಂದು ಪಕ್ಷದ ಸರ್ಕಾರ ಬಂದರೆ ಅದು ಇವರಿಗೆಲ್ಲ ರಾಜೀನಾಮೆ ಕೊಡಲು ಸೂಚಿಸುತ್ತದೆ ಅಥವಾ ಇವರೇ ಮುಂದಾಗಿ ರಾಜೀನಾಮೆ ಕೊಡಬಹುದು.

ಒಂದು ವೇಳೆ ಇದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೊಬ್ಬರು ಮುಖ್ಯಮಂತ್ರಿಯಾದರೂ ಅಕಾಡೆಮಿಗಳ ಅಧ್ಯಕ್ಷರಿಗೆ ರಾಜೀನಾಮೆ ಕೊಡುವಂತೆ ಸೂಚಿಸಲು ಅವಕಾಶ ಇದೆ. ಏಕೆಂದರೆ ಹೊಸ ಮುಖ್ಯಮಂತ್ರಿ ಸುತ್ತ ಸುತ್ತುವ ‘ಗ್ರಹ’ಗಳಿಗೆ ಏನು ಕೊರತೆ ಇರುತ್ತದೆಯೇ?

ಹಿಂದೆ ಕೂಡ, ಅದೇ ಪಕ್ಷದ ಸರ್ಕಾರ ಇದ್ದಾಗಲೂ ಮುಖ್ಯಮಂತ್ರಿ ಬದಲಾದರು ಎಂದು ಇಬ್ಬರು ಅಧ್ಯಕ್ಷರು ರಾಜೀನಾಮೆ ನೀಡಿದ್ದರು. ಆದರೆ, ಕುಲಪತಿಗಳಿಗೆ ಈ ಸಂಕಟ ಇರುವುದಿಲ್ಲ. ಅವರು ಒಂದು ಸಾರಿ ನೇಮಕವಾದರು ಎಂದರೆ ಬೇರೆ ಪಕ್ಷದ ಸರ್ಕಾರ ಬಂದರೂ ತಮ್ಮ ಅವಧಿ ಪೂರೈಸುತ್ತಾರೆ.

ಹೀಗೆ ವ್ಯವಸ್ಥೆಯ ಪಾವಿತ್ರ್ಯ ಮತ್ತು ನಿರಂತರತೆ ಕಾಪಾಡಲು ಶೋಧನಾ ಸಮಿತಿ ರಚಿಸಿ ಅಕಾಡೆಮಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಪದ್ಧತಿಯನ್ನು ಸರ್ಕಾರ ಅನುಸರಿಸಬೇಕಾಗಿತ್ತು. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ಇರುತ್ತಿತ್ತು ಮತ್ತು ಆಯ್ಕೆ ಕ್ರಮವನ್ನು ಹೆಚ್ಚು ಪಾರದರ್ಶಕವಾಗಿ ಮಾಡುತ್ತಿತ್ತು. ಆಗ, ಸರ್ಕಾರಗಳು ಬದಲಾದ ಹಾಗೆ ಅಕಾಡೆಮಿಗಳ ಅಧ್ಯಕ್ಷರೂ ಬದಲಾಗಬೇಕು ಎಂಬ ಧೋರಣೆ ನಿಲ್ಲಬಹುದಿತ್ತು.

ಒಂದು ಸಾರಿ ತನಗೆ ಅಧಿಕಾರ ಇದೆ ಎಂದು ಅಧಿಕಾರದಲ್ಲಿ ಇದ್ದವರಿಗೆ ಅನಿಸಿದ ಕೂಡಲೇ ಅದನ್ನು ಎಗ್ಗಿಲ್ಲದೆ ಬಳಸಲು ಆರಂಭಿಸುತ್ತಾರೆ. ‘ಇಂಥವರಿಗೇ ಪ್ರಶಸ್ತಿ ಕೊಡಬೇಕು’ ಎಂದು ಆದೇಶಿಸುತ್ತಾರೆ. ಅವರಿಗೆ ಕೇಳದೆ ಬೇರೆ ಯಾರಿಗೋ ಕೊಟ್ಟುಬಿಟ್ಟರೆ ಆ ಪ್ರಶಸ್ತಿ ಕೊಟ್ಟ ಅಕಾಡೆಮಿ ಅಧ್ಯಕ್ಷರ ಕಥೆ ಕೇಳುವುದೇ ಬೇಡ ಎನ್ನುವಂತೆ ಆಗುತ್ತದೆ.

ಕೆಲವು ಅಕಾಡೆಮಿಗಳ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮುಖ್ಯಮಂತ್ರಿಯೇ ಭಾಗವಹಿಸಬೇಕು ಎಂದು ಅಕಾಡೆಮಿ ಅಧ್ಯಕ್ಷರೂ ಬಯಸುತ್ತಾರೆ, ತಾನೇ ಹೋಗಬೇಕು ಎಂದು ಮುಖ್ಯಮಂತ್ರಿಯೂ ಇಚ್ಛಿಸಬಹುದು. ತಮ್ಮ ಸರ್ಕಾರದ ಧೋರಣೆಗಳಿಗೆ ವಿರುದ್ಧವಾಗಿದ್ದವರಿಗೆ ಪ್ರಶಸ್ತಿ ಕೊಡಲಾಯಿತು ಎಂದು ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬರಲು ನಿರಾಕರಿಸಬಹುದು.

ಅವರು ಬಾರದೇ ಕಾರ್ಯಕ್ರಮ ನಡೆಯುವಂತಿಲ್ಲ, ಅವರು ಬರುವುದೂ ಇಲ್ಲ. ಕೆಲವು ವರ್ಷಗಳ ಹಿಂದೆ ಒಂದು ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೀಗೆಯೇ ನನೆಗುದಿಗೆ ಬಿದ್ದಿತ್ತು. ಕೊನೆಗೂ ಆ ಮುಖ್ಯಮಂತ್ರಿ ಬರಲೇ ಇಲ್ಲ. ಅಂತೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು. ಒಂದು ರೀತಿ ಒಳ್ಳೆಯದೇ ಆಯಿತು!

1990ರ ದಶಕದ ಮಧ್ಯಭಾಗದಲ್ಲಿ ಟಿಎಸ್ಸಾರ್‌ ಪ್ರಶಸ್ತಿ ಪ್ರದಾನ ಮಾಡಲೂ ಆಗಿನ ಸರ್ಕಾರ ಸಿದ್ಧವಿರಲಿಲ್ಲ. ಏಕೆಂದರೆ ಆ ಪ್ರಶಸ್ತಿ ಪಡೆದವರು ಆಗಿನ ಮುಖ್ಯಮಂತ್ರಿ ವಿರುದ್ಧ ನ್ಯಾಯವಾಗಿಯೋ, ಅನ್ಯಾಯವಾಗಿಯೋ ನಿರಂತರವಾಗಿ ಬರೆದಿದ್ದರು. ಕೊನೆಗೂ ಆ ಮುಖ್ಯಮಂತ್ರಿ ತಮ್ಮ ಹಟವನ್ನೇ ಸಾಧಿಸಿದರು. ಅವರ ನಂತರ ಬಂದ ಮುಖ್ಯಮಂತ್ರಿ ಆ ಪ್ರಶಸ್ತಿಯನ್ನು ಕೊಟ್ಟರು. ಸರ್ಕಾರದಲ್ಲಿ ಇದ್ದವರು ಹೇಗೆ ಹಟ ಮಾಡುತ್ತಾರೆ ಎನ್ನುವುದಕ್ಕೆ ಇದು ಒಂದು ನಿದರ್ಶನ. ಅಷ್ಟು ಹಟ ಸಾಧಿಸುವವರು ಸ್ವಾಯತ್ತತೆ ಕೊಡಲು ಸಿದ್ಧರಾಗುತ್ತಾರೆಯೇ?

ಸ್ವಾಯತ್ತತೆ ಕೊಡುವುದು ಒಂದು ಕಡೆ. ಇನ್ನೊಂದು ಕಡೆ ಪ್ರಾತಿನಿಧ್ಯ ಕೊಡುವುದು. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಈ ಸರ್ಕಾರದಲ್ಲಿ ಒಬ್ಬ ಮಹಿಳೆ ಇದ್ದಾರೆ. ಇಡೀ ಸಂಪುಟದಲ್ಲಿ ಇರುವ ಏಕೈಕ ಮಹಿಳೆ ಅವರು. ಈಚೆಗೆ ಏಳು ಅಕಾಡೆಮಿಗಳಿಗೆ ಹಾಗೂ ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಅವರ ಇಲಾಖೆಯೇ ನೇಮಕ ಮಾಡಿತು. ಅದರಲ್ಲಿ ಒಬ್ಬ ಮಹಿಳೆಗೆ ಮಾತ್ರ ಅಧ್ಯಕ್ಷ ಹುದ್ದೆ ಲಭಿಸಿದೆ.

ಕನಿಷ್ಠ ನಾಲ್ವರು ಮಹಿಳೆಯರಿಗೆ ಅವಕಾಶ ಕೊಡಲು ಸಂಸ್ಕೃತಿ ಸಚಿವೆ ಪಟ್ಟು ಹಿಡಿಯಬೇಕಿತ್ತು. ‘ಒಬ್ಬ ಹೆಣ್ಣುಮಗಳಾಗಿ ಖಾತೆಯ ಜವಾಬ್ದಾರಿ ನಾನು ವಹಿಸಿಕೊಂಡಿರುವಾಗಲಾದರೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುವೆ. ಗಂಡಸರು ಖಾತೆ ನೋಡಿಕೊಳ್ಳುವಾಗ ಏನಾದರೂ ಮಾಡಿಕೊಳ್ಳಲಿ’ ಎಂದು ಅವರು ಹಟ ಮಾಡಬೇಕಿತ್ತು. ವಾಸ್ತವದಲ್ಲಿ ಗಂಡಸರು ಖಾತೆಯ ಉಸ್ತುವಾರಿ ನೋಡಿಕೊಳ್ಳುವಾಗಲೂ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಸಿಗಲೇಬೇಕು. ಇದೆಲ್ಲ ಅವರು ಕಾಡಿಬೇಡಿ ಪಡೆಯುವ ಅವಕಾಶವಲ್ಲ. ಅವರ ಹಕ್ಕಾಗಿ ಅವರಿಗೆ ಸಿಗಬೇಕಾದ ಅವಕಾಶ.

ಕರ್ನಾಟಕ ಮಾಧ್ಯಮ ಅಕಾಡೆಮಿಗೂ ಸಂಸ್ಕೃತಿ ಸಚಿವರಿಗೂ ಸಂಬಂಧವಿಲ್ಲ. ಅದು ವಾರ್ತಾ ಇಲಾಖೆಯ ಅಡಿಯಲ್ಲಿ ಇರುವ ಏಕೈಕ ಅಕಾಡೆಮಿ. ಈಚೆಗೆ ಆ ಅಕಾಡೆಮಿಗೂ, ಬಾಕಿಯಿದ್ದ, ಸದಸ್ಯರನ್ನು ನೇಮಿಸಲಾಯಿತು. ಆದಾಗ್ಯೂ ಒಟ್ಟು 16 ಸದಸ್ಯರು ಇರುವ ಇಡೀ ಅಕಾಡೆಮಿಯಲ್ಲಿ ಒಬ್ಬ ಮಹಿಳೆಗೂ ಪ್ರಾತಿನಿಧ್ಯ ಸಿಕ್ಕಿಲ್ಲ.

ಹೀಗೆ ಏಕೆ ಆಗುತ್ತದೆ? 32 ಮಂದಿ ಇರುವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಸಿಗುತ್ತದೆ. 10–15 ಜನ ಇರುವ ಅಕಾಡೆಮಿಗಳಲ್ಲಿ ಒಬ್ಬ ಮಹಿಳೆಗೂ ಸದಸ್ಯತ್ವದ ಅವಕಾಶ ಸಿಗುವುದಿಲ್ಲ. ಈಚೆಗೆ ರಚಿತವಾಗಿರುವ ಅಕಾಡೆಮಿಗಳಲ್ಲಿಯೂ 15 ಜನ ಸದಸ್ಯಬಲದ ಅಕಾಡೆಮಿಗಳಲ್ಲಿ ಗರಿಷ್ಠವೆಂದರೆ ಕೇವಲ ನಾಲ್ವರು ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿದೆ.

ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರು ಅನೇಕ ವರ್ಷಗಳಿಂದ ಪುರುಷರಿಗೆ ಸರಿಸಮವಾಗಿ, ಕೆಲವು ಸಾರಿ ಅವರಿಗಿಂತ ಹೆಚ್ಚು ಎನ್ನುವ ರೀತಿಯಲ್ಲಿ ಕೆಲಸ ಮಾಡಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟಿದ್ದಾರೆ, ಬಿಡುತ್ತಿದ್ದಾರೆ. ಮನೆ, ಮಕ್ಕಳು, ಗಂಡ ಎಲ್ಲವನ್ನೂ ಬಿಟ್ಟು ಅವರು ವೃತ್ತಿನಿಷ್ಠೆ ಮೆರೆದಿದ್ದಾರೆ. ಆದರೂ ಅವರನ್ನು ಗುರುತಿಸಲು ಸರ್ಕಾರಕ್ಕೆ ಕಷ್ಟವಾಗುತ್ತದೆ.

‘ಸಾಂಸ್ಕೃತಿಕ ನೀತಿ’ ರೂಪಿಸಿದ ಸಮಿತಿಯು ಎಲ್ಲ ಅಕಾಡೆಮಿಗಳಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಇರಬೇಕು ಎಂದು ಸಲಹೆ ಮಾಡಿದೆ. ಅದನ್ನು ಸರ್ಕಾರ ಒಪ್ಪಿಕೊಂಡಿದೆ. ಒಪ್ಪಿಕೊಳ್ಳುವುದಕ್ಕಿಂತ ಮುಂಚೆಯೇ ಈ ಸಾರಿಯ ನೇಮಕಗಳು ಆದಂತಿದೆ. ಆದರೆ, ಇಂಥ ಸಂಗತಿಗಳು ಯಾವುದೇ ಶಿಫಾರಸುಗಳನ್ನು ಅಥವಾ ಮೀಸಲಾತಿಯನ್ನು ಆಧರಿಸಿರಬಾರದು.

ಅದು ಸರ್ಕಾರದಲ್ಲಿ ಇದ್ದವರ ಪ್ರಜ್ಞೆಯ ಭಾಗವಾಗಿ ಇರಬೇಕು. ಅದು ಪ್ರಜ್ಞೆಯ ಭಾಗವಾಗಿ ಇಲ್ಲ ಎಂಬ ಕಾರಣಕ್ಕಾಗಿಯೇ ಮಾಧ್ಯಮ ಅಕಾಡೆಮಿಯ ನೇಮಕದಲ್ಲಿ ಲೋಪವಾಯಿತು. ಇದು ಅಕಸ್ಮಾತ್ತಾಗಿ ಆದ ಲೋಪವೇನೂ ಅಲ್ಲ. ಅದು ಮತ್ತೆ ಮತ್ತೆ ಆಗುತ್ತ ಇರುತ್ತದೆ ಹಾಗೂ ಅದಕ್ಕೆ ಒಂದು ಕೊನೆ ಇರುವಂತೆ ಕಾಣುವುದಿಲ್ಲ.

ನಿಯಂತ್ರಿತವಾದ ಒಂದು ವ್ಯವಸ್ಥೆಯ ಲೋಪಗಳು ಇವು. ಶಿಕ್ಷಣ ಮತ್ತು ಸಂಸ್ಕೃತಿಯಂಥ ಕ್ಷೇತ್ರಗಳು ಹೆಚ್ಚು ಸ್ವಾಯತ್ತವಾಗಿ ಇರಬೇಕು. ಸ್ವಾಯತ್ತವಾಗಿ ಇರುವ ಕ್ಷೇತ್ರಗಳು ಸೃಜನಶೀಲವಾಗಿ ಇರುತ್ತವೆ.

ಸೃಜನಶೀಲತೆ ಬೇಡ ಎಂದೋ ಏನೋ, ವಿಶ್ವವಿದ್ಯಾಲಯಗಳಿಗೆ ಮೂಗುದಾರ ಹಾಕಲು ಮಸೂದೆ ಸಿದ್ಧಪಡಿಸಿ ಅದನ್ನು ವಿಧಾನಸಭೆಯಲ್ಲಿ ಅಂಗೀಕರಿಸಿಯೇ ಬಿಟ್ಟ ಸರ್ಕಾರ ಅಕಾಡೆಮಿಗಳಿಗೆ ಅಂಥ ಮಸೂದೆಯ ನೆರವು ಇಲ್ಲದೆ ಮೂಗುದಾರ ಹಾಕಿದೆ. ಒಂದು ಸಾರಿ ಹಾಕಿಸಿಕೊಂಡ ಮೂಗುದಾರದಿಂದ ಬಿಡಿಸಿಕೊಳ್ಳುವುದು ಯಾವಾಗಲೂ ಬಹಳ ಕಷ್ಟ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry