ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದಾಯಕ್ಕೆ ಗಾಯದ ನೋವು

ಅಥ್ಲೆಟಿಕ್ಸ್‌ ಅಂಗಳದಿಂದ ನಿರ್ಗಮಿಸಿದ ಜಮೈಕಾದ ಚಿರತೆ ಉಸೇನ್ ಬೋಲ್ಟ್
Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಲಂಡನ್: ಅಥ್ಲೆಟಿಕ್ಸ್‌ ಅಂಗಳದ ದಿಗ್ಗಜ ಉಸೇನ್ ಬೋಲ್ಟ್ ಅವರು ಚಿನ್ನದ ಪದಕ ಗೆದ್ದು  ಕೊನೆಯ ಬಾರಿಗೆ ಬಾಣದ ಗುರುತಿನ ಸಂಕೇತ ತೋರಿಸಿ ವಿದಾಯ ಹೇಳುತ್ತಾರೆಂಬ ನಿರೀಕ್ಷೆ ಹುಸಿಯಾಯಿತು.

ಭಾನುವಾರ ಬೆಳಗಿನ ಜಾವ ನಡೆದ ಪುರುಷರ 4X100 ಮೀಟರ್ಸ್‌ ಸ್ಪರ್ಧೆಯ ಕೊನೆಯ ಲ್ಯಾಪ್‌ನಲ್ಲಿ ಓಡುವಾಗ ಸ್ನಾಯುಸೆಳೆತದಿಂದಾಗಿ ಬೋಲ್ಟ್‌ ಕುಸಿದು ಬಿದ್ದರು. ಗಾಯದ ನೋವಿನ ಜೊತೆಗೆ ಅಂತಿಮ ಓಟದಲ್ಲಿ ಗುರಿ ಮುಟ್ಟಲಿಲ್ಲವಲ್ಲವೆಂಬ ಯಾತನೆ ಅವರ ಮುಖದಲ್ಲಿ ಮನೆಮಾಡಿತ್ತು. ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ 2012ರ ಒಲಿಂಪಿಕ್ಸ್‌ನಲ್ಲಿ ಬೋಲ್ಟ್‌ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. ಅದೇ ಅಂಗಳದಲ್ಲಿ ಅವರು ನೆಲಕಚ್ಚಿ ಹತಾಶರಾದಾಗ ಅಭಿಮಾನಿಗಳ ಕಣ್ಣುಗಳೂ ತೇವಗೊಂಡವು.

ಹೋದ ವಾರ ನಡೆದಿದ್ದ 100 ಮೀಟರ್ಸ್‌ ಓಟದಲ್ಲಿ ಕಂಚಿನ ಪದಕ ಅವರು ಪಡೆದಿದ್ದರು. ಅದರೊಂದಿಗೆ ವೈಯಕ್ತಿಕ ವಿಭಾಗಕ್ಕೆ ಅವರು ವಿದಾಯ ಹೇಳಿದ್ದರು. ತಂಡ ವಿಭಾಗದಲ್ಲಿ ಇದು ಅವರ ಕೊನೆಯ ರಿಲೆ ಓಟವಾಗಿತ್ತು. ಆ ಸ್ಪರ್ಧೆಯ ಮೊದಲೆರಡು ಲ್ಯಾಪ್‌ಗಳಲ್ಲಿ  ಜೂಲಿಯನ್ ಫೋರ್ಟ್ ಮತ್ತು ಒಮರ್ ಮೆಕ್ಲಾಯ್ಡ್‌ ಓಡಿದ್ದರು. ಮೂರನೇ ಲ್ಯಾಪ್‌ನಲ್ಲಿ ಓಡಿದ ಜಮೈಕಾದ ಯೋಹಾನ್ ಬ್ಲೇಕ್ ಅವರು ಯಶಸ್ವಿಯಾಗಿ ಗುರಿ ಮುಟ್ಟಿದರು. ಅವರಿಂದ ಬೇಟನ್ ಪಡೆದ ಬೋಲ್ಟ್‌ ದೊಡ್ಡ ಸ್ಟ್ರೈಡ್‌ಗಳೊಂದಿಗೆ ಓಟ ಆರಂಭಿಸಿದರು. ಈ ಹಂತದಲ್ಲಿ ಬ್ರಿಟನ್‌ನ ಮೈಕೆಲ್ ಬ್ಲೇಕ್ ಎಲ್ಲರಿಗಿಂತ ಮುಂದಿದ್ದರು.   ಬೋಲ್ಟ್ ಬ್ರಿಟನ್‌ ಓಟಗಾರನಿಂದ ಕೇವಲ ಮೂರು ಮೀಟರಿನಷ್ಟು ಹಿಂದಿದ್ದರು.

ಪ್ರೇಕ್ಷಕರ ಗ್ಯಾಲರಿಯಲ್ಲಿ ಚಪ್ಪಾಳೆ, ಕೇಕೆ, ವಿಜಯಘೋಷಗಳು ಮೊಳಗಿದವು. ಆದರೆ ಕೆಲವೇ ಕ್ಷಣಗಳಲ್ಲಿ ಎಡತೊಡೆಯ ಸ್ನಾಯುವಿನಲ್ಲಿ ನೋವು ಅನುಭವಿಸಿದ ಬೋಲ್ಟ್‌ ವೇಗ ಕುಂಠಿತವಾಯಿತು. ಆದರೂ ಓಡುವ ಪ್ರಯತ್ನ ಮಾಡಿದರು.  ಒಂದೆರಡು ಹೆಜ್ಜೆ ಓಡಿದ ಅವರು ಕುಸಿದರು. ಅವರಿಗಿಂತ ಹಿಂದಿದ್ದ ಅಮೆರಿಕ. ಜಪಾನ್ ಓಟಗಾರರು ಗುರಿಯತ್ತ ನುಗ್ಗಿದರು. ಇತ್ತ ಜಮೈಕಾ ತಂಡದ ಸಹ ಓಟಗಾರರು ಟ್ರ್ಯಾಕ್‌ಗೆ ಧಾವಿಸಿ ಬೋಲ್ಟ್ ಅವರಿಗೆ ಆಸರೆ ನೀಡಿ ಎತ್ತಿನಿಲ್ಲಿಸಿದರು. ತಮ್ಮ ಸ್ಫೂರ್ತಿಯ ತಾರೆಯನ್ನು ತಬ್ಬಿಕೊಂಡು ಸಂತೈಸಿದರು.

‘ಕಳೆದ ಮೂರು ವಾರಗಳಲ್ಲಿ ಉಸೇನ್ ಬಹಳಷ್ಟು ಶ್ರಮಪಟ್ಟು ಅಭ್ಯಾಸ ಮಾಡಿದ್ದಾರೆ. ಅವರು ಚಿನ್ನದ ಪದಕದೊಂದಿಗೆ ವಿದಾಯ ಹೇಳುವುದು ಖಚಿತವಿತ್ತು. ಆದರೆ,  ಸ್ನಾಯುಸೆಳೆತದಿಂದಾಗಿ ವಿಪರೀತ ನೋವು ಅನುಭವಿಸಿದ್ದಾರೆ. ಸೋಲಿನ ಹತಾಶೆಯು ನೋವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಜಮೈಕಾ ತಂಡದ ವೈದ್ಯ ಕೆವಿನ್ ಜೋನ್ಸ್ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ, ವಿಶ್ವದಾಖಲೆಗಳನ್ನು ಬರೆದಿರುವ 30 ವರ್ಷದ ಬೋಲ್ಟ್‌ ತಮ್ಮ ನೋವಿನಲ್ಲಿಯೂ ಅಭಿಮಾನಿಗಳತ್ತ ಕೈಬೀಸಿ ಕೃತಜ್ಞತೆ ಅರ್ಪಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪದಕವಿಲ್ಲದ ಕೊರಳಲ್ಲಿ ಕ್ರೀಡಾಂಗಣದಿಂದ ಹೊರನಡೆದರು.

ಬ್ರಿಟನ್‌ಗೆ ಚಿನ್ನ

ಈ ರಿಲೆ ಸ್ಪರ್ಧೆಯಲ್ಲಿ ಬ್ರಿಟನ್ ತಂಡವು 37.47 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದಿತು. ಆ್ಯಡಮ್ ಗೆಮಿಲಿ, ಡೇನಿಯಲ್ ಟಾಲ್ಬೋಟ್, ಚಿಜಿಂದು ಉಜಾ ಮತ್ತು ನೆತಾನೀಲ್ ಮೈಕೆಲ್ ಬ್ಲೇಕ್ ತಂಡದಲ್ಲಿದ್ದರು.  ಅಮೆರಿಕ (38.01ಸೆ) ಮತ್ತು ಜಪಾನ್ ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದವು.

ಸ್ಪರ್ಧೆ ವಿಳಂಬವೇ ಬೋಲ್ಟ್‌ ಗಾಯಕ್ಕೆ ಕಾರಣ: ಬ್ಲೇಕ್

ಪುರುಷರ 4X100 ಮೀಟರ್ಸ್‌ ರಿಲೆಯ ಫೈನಲ್ ಸ್ಪರ್ಧೆಯನ್ನು ತಡವಾಗಿ ಆರಂಭಿಸಿದ್ದು ಉಸೇನ್ ಬೋಲ್ಟ್‌ ಗಾಯಗೊಳ್ಳಲು ಪ್ರಮುಖ ಕಾರಣ ಎಂದು ಜಮೈಕಾದ ಅಥ್ಲೀಟ್ ಯೋಹಾನ್ ಬ್ಲೇಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಸೇನ್ ಬೋಲ್ಟ್‌ ಜೊತೆಗೆ ಬ್ಲೇಕ್ ಅವರು ತಂಡದಲ್ಲಿದ್ದರು. ಸ್ಪರ್ಧೆಯ ನಂತರ ಸುದ್ದಿಗಾರರೊಂದಿಗೆ ಮಾತನಡಿದ ಅವರು ಆಯೋಜಕರ ವಿರುದ್ಧ  ಕಿಡಿಕಾರಿದ್ದಾರೆ.

‘ರಿಲೆ ಫೈನಲ್ ಸ್ಪರ್ಧೆಗೂ ಮುನ್ನ ಎರಡು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಲ್ಲಿ ಸುಮಾರು 40 ನಿಮಿಷಗಳ ಕಾಲ ವ್ಯರ್ಥವಾಯಿತು. ಇಲ್ಲಿ ಹೆಚ್ಚು ತಂಪು ವಾತಾವರಣ ಇದ್ದ ಕಾರಣ, ನಮ್ಮ ದೇಹದ ಶಾಖವನ್ನು ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಅದಕ್ಕಾಗಿ ವಾರ್ಮ್‌ ಅಪ್ ವ್ಯಾಯಾಮಗಳನ್ನು ಮಾಡುತ್ತಲೇ ಇದ್ದೆವು. ಬೋಲ್ಟ್‌ ಕೂಡ ಸಾಕಷ್ಟು ಪ್ರಯತ್ನಪಟ್ಟು ಸ್ಪರ್ಧೆಯವರೆಗೂ ದೇಹದ ಶಾಖ ಕಾಪಾಡಿಕೊಂಡಿದ್ದರು. ಆದರೂ ಸ್ಪರ್ಧೆಯಲ್ಲಿಯೇ ಅವರಿಗೆ ತೊಂದರೆ ಎದುರಾಯಿತು’ ಎಂದು ಬ್ಲೇಕ್ ವಿವರಿಸಿದ್ದಾರೆ.

‘ಕ್ರೀಡೆಯ ದಿಗ್ಗಜ ಬೋಲ್ಟ್ ಅವರಿಗೆ ಇಂತಹದೊಂದು ವಿದಾಯ ಸಿಗುತ್ತಿರುವುದು ಅತ್ಯಂತ ದುಃಖಕರ. ಅವರಂತಹ ಮಹಾನ್ ಅಥ್ಲೀಟ್ ಸ್ಪರ್ಧಿಸುತ್ತಿರುವಾಗಲೇ ನೆಲಕ್ಕುರುಳಿ ಹತಾಶರಾಗಿದ್ದನ್ನು ನೋಡಿ ನನಗಾಗಿರುವ ಸಂಕಟ ಸಣ್ಣದಲ್ಲ’ ಎಂದು ಬ್ಲೇಕ್ ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT