ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನಾಡು ಕಾಡಾನೆಗಳ ಬೀಡು...

ರಾಜ್ಯದಲ್ಲಿ 6000ಕ್ಕೂ ಹೆಚ್ಚು ಗಜಗಳು– ದೇಶಕ್ಕೆ ಮೊದಲ ಸ್ಥಾನ: ಕೇಂದ್ರದ ಗಣತಿ ವರದಿ
Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲೇ ಕರ್ನಾಟಕ ದಲ್ಲಿ ಅತ್ಯಂತ ಹೆಚ್ಚು ಆನೆಗಳಿವೆ ಎಂದು ಪರಿಸರ ಸಚಿವಾಲಯ ನಡೆಸಿರುವ ಹೊಸ ಗಣತಿ ವರದಿ ಹೇಳಿದೆ.

ಕರ್ನಾಟಕದ ಕಾಡುಗಳಲ್ಲಿ 6,049 ಗಜಗಳು ಆಶ್ರಯ ಪಡೆದಿವೆ. ಅಸ್ಸಾಂ ಮತ್ತು ಕೇರಳ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ರಾಜ್ಯದ ಸಂರಕ್ಷಿತ ಅರಣ್ಯಗಳಾದ ನಾಗರಹೊಳೆ, ಭದ್ರಾ ಮತ್ತು ಬಂಡೀಪುರಗಳಲ್ಲಿ ಅತ್ಯಂತ ಹೆಚ್ಚು ಆನೆಗಳಿವೆ ಎಂದು ಸಮೀಕ್ಷೆ ವಿವರಿಸಿದೆ.

ಗಣತಿ ವರದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ ಆದರೆ, 2012ರ ಅಂಕಿ ಅಂಶಗಳಿಗೆ ಹೋಲಿಸಿದರೆ ಈಗ ದೇಶದಲ್ಲಿರುವ ಆನೆಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಎರಡೂ ಗಣತಿ
ಗಳಲ್ಲಿ ಬೇರೆ ವಿಧಾನಗಳನ್ನು ಅನುಸರಿಸಿರುವುದರಿಂದ ಈ ರೀತಿ ಆಗಿದೆ ಎಂದು ಹೇಳಲಾಗುತ್ತಿದೆ.

2012ರ ಗಣತಿ ಪ್ರಕಾರ ದೇಶದಲ್ಲಿ 29,391–30,711ರಷ್ಟು ಆನೆಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದರಲ್ಲಿ ಲೋಪಗಳಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಈಗ ಹೇಳುತ್ತಿದ್ದಾರೆ.

‘2012ರ ಅಂಕಿ ಅಂಶಗಳಿಗೆ ಹೋಲಿಸಿ ನೋಡಿದರೆ, ಆನೆಗಳ ಸಂಖ್ಯೆ ಸ್ಥಿರವಾಗಿದೆ ಎಂದು ನಾನು ಹೇಳುತ್ತೇನೆ’ ಎಂದು ಹೊಸ ಗಣತಿ ವರದಿ ಸಿದ್ಧಪಡಿಸುವಲ್ಲಿ ತಾಂತ್ರಿಕ ನೆರವು ನೀಡಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ರಮಣ್‌ ಸುಕುಮಾರ್‌ ಹೇಳಿದ್ದಾರೆ.

ಎಲ್ಲೆಲ್ಲಿ ಸಮೀಕ್ಷೆ: ಕರ್ನಾಟಕದ 33 ಅರಣ್ಯ ವಿಭಾಗಗಳ 645 ಬ್ಲಾಕ್‌ಗಳಲ್ಲಿ ಕಳೆದ ವರ್ಷ ಗಣತಿ ಆರಂಭಿಸಲಾಗಿತ್ತು. ಪ್ರತಿ ಚದರ ಕಿ.ಮೀಗೆ ಆನೆಗಳ ಸಾಂದ್ರತೆ 0.67ರಷ್ಟಿದೆ. 8976
ಚದರ ಕಿ.ಮೀ ವ್ಯಾಪ್ತಿಯಲ್ಲಿ ಆನೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಅಂದಾಜಿನ ಆಧಾರದಲ್ಲಿ ರಾಜ್ಯದಲ್ಲಿ 6,049 ಆನೆಗಳಿವೆ ಎಂದು ಲೆಕ್ಕ ಹಾಕಲಾಗಿದೆ.‌

ಅಳಿವಿನಂಚಿನಲ್ಲಿ: ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ (ಐಯುಸಿಎನ್‌) ಪ್ರಕಾರ, ಏಷ್ಯಾದ ಆನೆಗಳು ಅಳಿವಿನಂಚಿನಲ್ಲಿವೆ. ಅದು ಸಿದ್ಧಪಡಿಸಿರುವ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಈ ಆನೆಗಳೂ ಇವೆ.
*
101 ಆನೆದಾರಿಗಳು
ದೇಶದಲ್ಲಿ 101 ಆನೆ ಕಾರಿಡಾರ್‌ಗಳಿವೆ (ಆನೆ ದಾರಿ). 2010ರಲ್ಲಿ ಆನೆ ಕಾರ್ಯ ಪಡೆ ವರದಿ ಬಂದ ನಂತರ ಏಳು ವರ್ಷಗಳಲ್ಲಿ ಕಾರಿಡಾರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 201ರ ವರದಿಯು 88 ಕಾರಿಡಾರ್‌ಗಳನ್ನು ಗುರುತಿಸಿತ್ತು (27 ಮೊದಲ ಆದ್ಯತೆಯ ಮತ್ತು 61 ಎರಡನೇ ಆದ್ಯತೆ). ಈ ಪೈಕಿ ಏಳು ಕಾರಿಡಾರ್‌ಗಳಲ್ಲಿ ಆನೆಗಳು ಸಂಚರಿಸುತ್ತಿಲ್ಲ. 18 ರಿಂದ 20ರಷ್ಟು ಹೊಸ ಕಾರಿಡಾರ್‌ಗಳನ್ನು ಅವು ಬಳಸುತ್ತಿವೆ.

*
ಯಾವ ರಾಜ್ಯದಲ್ಲಿ ಎಷ್ಟು?

ಕರ್ನಾಟಕ  6,049

ಅಸ್ಸಾಂ  5,719

ಕೇರಳ  3,054

ತಮಿಳುನಾಡು 2,761

ಒಡಿಶಾ  1,976

ಉತ್ತರಾಖಂಡ 1,839

ಮೇಘಾಲಯ 1,754

ಅರುಣಾಚಲ ಪ್ರದೇಶ 1,614

ಪಶ್ಚಿಮ ಬಂಗಾಳ 682

ಜಾರ್ಖಂಡ್‌  679
*
ಮಾನವ–ಪ್ರಾಣಿ ಸಂಘರ್ಷಕ್ಕೆ ಅಂತ್ಯ ಹಾಡಲು ಪ್ರಯತ್ನಿಸಲೇ ಬೇಕು. ಆನೆಗಳು ಮತ್ತು ಇತರ ವನ್ಯಜೀವಿಗಳನ್ನು ಬೇಟೆಯಾಡುವವರ ವಿರುದ್ಧ ಯುದ್ಧ ಸಾರಲೇಬೇಕಿದೆ.
ಹರ್ಷವರ್ಧನ್‌
ಕೇಂದ್ರ ಪರಿಸರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT