ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಭೂಮಿಯ ನಡುವೆ ಬೆರಗು

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹೈಬ್ರೀಡ್ ಬೆಳೆಗಳ ಭರಾಟೆಯ ಮಧ್ಯೆ ಕಳೆದೇ ಹೋಗಿದ್ದ ತೃಣಧಾನ್ಯಗಳನ್ನು ಕೊಪ್ಪಳ ಜಿಲ್ಲೆಯಲ್ಲೀಗ ಸಾಕಷ್ಟು ರೈತರು ಬೆಳೆಯುತ್ತಿದ್ದಾರೆ. ಅದರಲ್ಲೂ ಬರಗು ಧಾನ್ಯದ ಭರಾಟೆ ಹೆಚ್ಚಾಗಿದೆ.

ಬರಗಿನ ಅನ್ನ ಬೇಯುವಾಗಲೇ ಮನೆತುಂಬ ಘಮ-ಘಮ ಪರಿಮಳ ತುಂಬುತ್ತದೆ. ನಂತರ ಉಂಡವರ ಒಡಲೂ ತಣಿಯುತ್ತದೆ. ಇಂತಹ ಗುಣಮಟ್ಟದ ಹಾಗೂ ಆರೋಗ್ಯಕರ ತೃಣಧಾನ್ಯ ಹೈಬ್ರೀಡ್ ಬೆಳೆಗಳ ಅಬ್ಬರದ ಮಧ್ಯೆ ಹೇಳ ಹೆಸರಿಲ್ಲದೇ ಹೊರಟು ಹೋಗಿತ್ತು. ಈಗ ಮತ್ತೆ ಊಟದ ತಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

ಹಾಗೆ ನೋಡಿದರೆ ಸುಮಾರು ನಲ್ವತ್ತು ವರ್ಷಗಳ ಹಿಂದೆ ಕೃಷ್ಣಾ ಹಾಗೂ ತುಂಗಭದ್ರಾ ತೀರದ ರೈತರನ್ನು ಹೊರತುಪಡಿಸಿದರೆ ಉತ್ತರ ಕರ್ನಾಟಕ ಭಾಗದ ಬಹುತೇಕ ರೈತರಿಗೆ ಬರಗು ಅಕ್ಕಿ ಬಿಟ್ಟರೆ ನೆಲ್ಲಕ್ಕಿಯ ಪರಿಚಯವೇ ಇದ್ದಿಲ್ಲ. ಅವರಿಗೆ ಅಕ್ಕಿ ಅನ್ನ ಎಂದರೆ ಅದೇನಿದ್ದರೂ ನಿತ್ಯ ಬೇಯಿಸುವ ಬರಗು ಅನ್ನ, ಅದು ತಪ್ಪಿದರೆ ಹಬ್ಬಕ್ಕೊಮ್ಮೆ ಮಾಡುವ ಸಾವೆ ಅನ್ನ, ಇನ್ನು ರಟ್ಟೆ ಗಟ್ಟಿ ಇದ್ದವರು ಕುಟ್ಟಿ ಮಾಡುತ್ತಿದ್ದ ಹಾರಕ ಅನ್ನ. ಅತಿಥಿಯಂತೆ ಆಗಾಗ ನವಣೆ ಅನ್ನ ಸಹ ಊಟದ ತಟ್ಟೆಯಲ್ಲಿ ಇರುತ್ತಿತ್ತು. ಈ ನಾಲ್ಕು ವಿಧದ ಅಕ್ಕಿ ಬಿಟ್ಟರೆ ಮತ್ತಾವ ಅಕ್ಕಿಗಳ ಬಳಕೆ ಈ ಭಾಗದಲ್ಲಿ ಇರಲಿಲ್ಲ.

ಪೋಷಕಾಂಶದ ಗಣಿ: ಶ್ರಮದ ಕೆಲಸ ಮಾಡುವ ರೈತರು ಒಂದು ಹೊತ್ತು ಬರಗದ ಅನ್ನ ಉಂಡರೆ ಎರಡನೇ ಹೊತ್ತಿಗೆ ಬೇಗ ಹಸಿವೆ ಆಗದಷ್ಟು ಗಟ್ಟಿ ಹಾಗೂ ಅಧಿಕ ಪೋಷಕಾಂಶಗಳನ್ನು ಹೊಂದಿದ ಆಹಾರ. ಆದ್ದರಿಂದಲೇ ಇದು ರೈತರ ಮುಖ್ಯ ಆಹಾರ ಬೆಳೆಯಾಗಿತ್ತು. ‘ಬರಗದ ಬಿಸಿ ಅನ್ನಕ್ಕ ತುಪ್ಪ ಹಾಕ್ಕೊಂಡು ನುಂಗಿದರ, ಆಹಾ... ಅದೆಂತಹ ರುಚಿರೀ! ಅದು ಅನ್ನವಲ್ಲ, ಪರಮಾನ್ನವೇ ಸರಿ’ ಎನ್ನುತ್ತಾರೆ ಬಾಲ್ಯದಲ್ಲಿ ನಿತ್ಯ ಈ ಧಾನ್ಯದ ಅನ್ನ ಸವಿಯುತ್ತಿದ್ದ ಕೊಪ್ಪಳ ಜಿಲ್ಲೆಯ ಶಾಖಾಪುರ ಗ್ರಾಮದ ವೃದ್ಧ ಬಸಪ್ಪಜ್ಜ. ಬರಗಿನೂಟದ ಬಣ್ಣನೆಯನ್ನು ಅವರಿಂದ ಕೇಳಿದವರ ಬಾಯಿಯಲ್ಲಿ ನೀರೂರಲೇಬೇಕು. ಬರಗದ ಬಿಸಿ ಅನ್ನದ ಮೇಲೆ ಒಂದಿಷ್ಟು ತುಪ್ಪ, ಮಜ್ಜಿಗೆ, ಇಲ್ಲದಿದ್ದರೆ ಗೊಜ್ಜು ಹಾಕಿಕೊಂಡು ಸವಿದರಂತೂ ಆಹಾ ಅದೆಂತಹ ಪಕ್ವಾನ್ನ! ಇನ್ನು ಬಾಣಂತಿಯರಿಗೆ ಹಾಗೂ ಶೀತದಿಂದ ಬಳಲುವವರಿಗಂತೂ ಈ ಬರಗದ ಅನ್ನ ಹೇಳಿ ಮಾಡಿಸಿದ ಔಷಧಿ.

(ಭರಪೂರ ಕೊರಲೆ ಬೆಳೆದ ಈರಪ್ಪಯ್ಯ)

ಬರಗದ ಅನ್ನಕ್ಕೆ ಮೊಸರು ಹಾಗೂ ಖಾರದ ಪುಡಿ ಇದ್ದರೆ ಬೇರೇನೂ ಬೇಡ. ಅದರ ರುಚಿಯೇ ವಿಶಿಷ್ಟ ಎಂದು ರೈತರು ಬಣ್ಣಿಸುತ್ತಾರೆ.

ಸಿರಿಧಾನ್ಯಗಳು ಭೂಮಿಗೆ, ನೀರಿಗೆ, ವಾತಾವರಣಕ್ಕೆ ಯಾವುದೇ ಹಾನಿ ಮಾಡುವುದಿಲ್ಲ, ತ್ರಾಸದಾಯಕ ಪರಿಸ್ಥಿತಿ ತಂದೊಡ್ಡುವುದಿಲ್ಲ. ನೀರಿನ ಕೊರತೆಯಾದಾಗ, ಪ್ರತಿಕೂಲ ಹವಾಮಾನದ ಪರಿಸ್ಥಿತಿ ಎದುರಾದಾಗ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಬೆಳೆಯಿದು.

ಕೊಪ್ಪಳ ತಾಲ್ಲೂಕಿನ ಶಿವಪುರ ಗ್ರಾಮದ ಶಿವಬಾಬು ತಮ್ಮ ಗದ್ದೆಯಲ್ಲಿ ಬರಗು ಬೆಳೆದಿದ್ದಾರೆ. ‘ಈ ಫಸಲು ಉತ್ತಮವಾಗಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಕೃಷಿ ಇಲಾಖೆಯವರು ಪ್ರೇರೇಪಿಸಿದರು, ಒಂದು ಎಕರೆಯಲ್ಲಿ ಬೆಳೆದೆ, ಉತ್ತಮ ಇಳುವರಿ ಬಂದಿದೆ. ಸಾಕಷ್ಟು ಬೇಡಿಕೆ ಬರುತ್ತಿದ್ದು ಬೇಡಿಕೆಗೆ ತಕ್ಕಂತೆ ಬರಗು ಪೂರೈಸಲಾಗುತ್ತಿಲ್ಲ’ ಎಂದು ಖುಷಿಯಿಂದ ಹೇಳುತ್ತಾರೆ ಶಿವಬಾಬು. ಕೃಷಿ ಇಲಾಖೆ ಉಚಿತವಾಗಿ ಸಿರಿಧಾನ್ಯ ಬಿತ್ತನೆ ಬೀಜ ಒದಗಿಸಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ.ಎಂ.ಬಿ.ಪಾಟೀಲ ಮತ್ತು ಅವರ ತಂಡ ರೈತರಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದೆ.

ಸಂಸ್ಕರಿಸುವುದು ಹೇಗೆ?: ನೆಲ್ಲಕ್ಕಿ, ನವಣೆಯಂತೆಯೇ ಈ ಬರಗು ಅಕ್ಕಿಯನ್ನು ಸಂಸ್ಕರಿಸಬೇಕು. ಹಿಟ್ಟಿನ ಗಿರಣಿಯಲ್ಲಿಯೇ ರವೆಯ ಹಾಗೆ ಬೀಸಿದರೆ ಅಕ್ಕಿ ಬರುತ್ತದೆ. ನಂತರ ಒರಳಿನಲ್ಲಿ ಹಾಕಿ ಒಂದಿಷ್ಟು ಥಳಿಸಿದರೆ ಮುಗಿಯಿತು ಬೆಳ್ಳನೆ ಅಕ್ಕಿ ಸಿದ್ಧ. ಹಿಂದೆ ಗಿರಣಿ ಇಲ್ಲದ ಸಮಯದಲ್ಲಿ ಹಳ್ಳಿಗರ ಪ್ರತಿಯೊಬ್ಬರ ಮನೆಯಲ್ಲಿ ಬರಗು ಬೀಸುವ ಕಲ್ಲುಗಳು ಇರುತ್ತಿದ್ದವು.

‘ಬರಗು ಬೀಜ ಬಿತ್ತೋಕೆ ಕೊಡ್ರಿ ಎಂದು ಹಿರಿಯರು ಬೆಳೆ ನೋಡಿದಾಗ ಕೇಳುತ್ತಾರೆ. ಹಾಗೆ ಕೇಳಿದವರಿಗೆ ರಾಶಿ ಮಾಡಿದ ನಂತರ ಬಂದು ತೊಗೊಂಡು ಹೋಗ್ರಿ, ಅದು ಉಣ್ಣೋಕ್ಕಲ್ಲ ಬಿತ್ತಿ ಬೆಳೆಯೋಕೆ ಅಂತ ಹೇಳ್ತೀನಿ’ ಎಂದು ಪ್ರತಿವರ್ಷ ತಪ್ಪದೆ ಬರಗು ಬಿತ್ತನೆ ಮಾಡುತ್ತಿರುವ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ದುರಗಪ್ಪ ಕುರಿ ಹೇಳುತ್ತಾರೆ.

ಅತ್ಯಂತ ಕಡಿಮೆ ಮಳೆಯ ಮಧ್ಯೆ ಎಂತಹ ನೆಲದಲ್ಲೂ ಬೆಳೆಯುವ ಸಿರಿಧಾನ್ಯಗಳದ್ದು ಬೆರಗಿನ ಲೋಕ.

(ಭರಪೂರ ಬರಗು ಬೆಳೆಯಲ್ಲಿ ಕೊಪ್ಪಳ ತಾಲ್ಲೂಕಿನ ಶಿವಪುರ ಗ್ರಾಮದ ಶಿವಬಾಬು)

ಸಿಕ್ಕಷ್ಟು ಮಳೆನೀರಿನಲ್ಲಿ ವಾತಾವರಣದ ತೇವಾಂಶ ಬಳಸಿಕೊಂಡು ಸಿರಿಧಾನ್ಯಗಳು ಬೆಳೆಯುತ್ತವೆ. ಸಾವಿರಾರು ವರ್ಷಗಳಿಂದ ವಾತಾವರಣಕ್ಕೆ ಹೊಂದಿಕೊಂಡು ಬೆಳೆದ ಈ ಸಿರಿಧಾನ್ಯಗಳಲ್ಲಿ ಕೀಟ-ರೋಗ ನಿರೋಧಕ ಶಕ್ತಿಯಿದೆ. ಹೀಗಾಗಿ ಬಹುತೇಕ ರೋಗಗಳು ಈ ಬೆಳೆಯತ್ತ ಸುಳಿಯದಿರುವುದರಿಂದ ಬೇಸಾಯಕ್ಕೆ ಹೆಚ್ಚಿನ ಖರ್ಚು ಇಲ್ಲ ಎಂದು ಕೃಷಿ ವಿಜ್ಞಾನಿ ಪ್ರದೀಪ ಬಿರಾದಾರ ಹೇಳುತ್ತಾರೆ.

ಬರಗದ ಬೇಸಾಯ: ಶಿವಬಾಬು, ದುರಗಪ್ಪ ಅವರಂತಹ ಕೆಲವೇ ಕೆಲವು ರೈತರು ಹಳೆಯ ಆಹಾರ ಧಾನ್ಯಗಳ ಮೇಲಿನ ಒಲವಿನಿಂದ ಈಗಲೂ ಇಂತಹ ಬೀಜಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ‘ಅಕ್ಕಿ ಅನ್ನ ತಿಂದ್ರ ಕೆಲಸ ಮಾಡ್ಲಿಕ್ಕ ಆಗಂಗಿಲ್ರಿ. ಬರಗದ ಅನ್ನ ಊಟ ಮಾಡಿದ್ರ ನಾಕ್ ತಾಸು ಹೆಚ್ಚು ಕೆಲಸ ಮಾಡ್‌ಭೌದು’ ಎನ್ನುತ್ತಾರೆ ದುರಗಪ್ಪ. ತೊಗರಿ, ನವಣಿ ಜತೆಗೆ ಮನೆ ಬಳಕೆಗೆಂದು ಈ ಬರಗು ಬೆಳೆಯುತ್ತಿದ್ದಾರೆ. ರೋಹಿಣಿ, ಮೃಗಶಿರಾ ಮಳೆ ನಕ್ಷತ್ರದ ಅವಧಿಯಲ್ಲಿ (ಮೇ ಹಾಗೂ ಜೂನ್) ಬರಗು ಬಿತ್ತನೆ ನಡೆಯುತ್ತದೆ. ಉಸುಕು ಮಿಶ್ರಿತ, ಸವುಳು, ಗಟ್ಟಿ... ಹೀಗೆ ಯಾವುದೇ ಮಣ್ಣಿನಲ್ಲೂ ಬರಗು ಬೆಳೆಯಬಲ್ಲದು. ಬಿತ್ತನೆಯಾದ ಬಳಿಕ ನಾಲ್ಕಾರು ಸಲ ಅಲ್ಪ ಪ್ರಮಾಣದ ಮಳೆಯಾದರೂ ಸಾಕು. ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಬರಗು, ಎಕರೆಗೆ ಎಂಟರಿಂದ ಹತ್ತು ಕ್ವಿಂಟಲ್‌ ಇಳುವರಿ ಕೊಡುತ್ತದೆ.

ಹರಡಿದ ಬೀಜದ ಐಸಿರಿ: ದುರಗಪ್ಪ ಅವರಿಂದ ಬೀಜ ಕಡ ಪಡೆದವರ ಪೈಕಿ ಯಲಬುರ್ಗಾ ತಾಲ್ಲೂಕಿನ ಹಿರೇಅರಳಿಹಳ್ಳಿಯ ರೈತ ನಾರಾಯಣರಾವ್ ಕುಲಕರ್ಣಿ ತಮ್ಮ ವ್ಯವಸಾಯಕ್ಕೆ ನಿರುಪಯುಕ್ತ ಎಂದು ಹಲವು ವರ್ಷಗಳಿಂದ ಖಾಲಿ ಬಿಟ್ಟಿದ್ದ ಒಂದು ಎಕರೆ ಜವಳು ಭೂಮಿಯಲ್ಲಿ ಬರಗು ಬಿತ್ತನೆ ಮಾಡಿದ್ದರು. ‘ಆರಂಭದಲ್ಲಿ ಸ್ವಲ್ಪ ಮಳೆ ಬಂತು. ನಂತರ ಕಡಿಮೆ ಸುರಿಯಿತು. ಆದರೆ ನಮಗೆ ಅಚ್ಚರಿಯಾಗುವಂತೆ ಬರಗು ಪೈರು ಬೆಳೆದು ನಿಂತಿತು, ಕಾಳುಗಳಂತೂ ನೋಡಲು ಚೆಂದ’ ಎಂದು ಅವರು ಬರಗು ಬೆಳೆದ ಪರಿಯನ್ನು ಬಣ್ಣಿಸುತ್ತಾರೆ. ಮೇಲುಗೊಬ್ಬರ ಹಾಕಿಲ್ಲ, ಕೀಟ ಬಾಧೆಯಿಲ್ಲ, ರೋಗ ಬಂದಿಲ್ಲ ಎಂಬುದು ಇದರ ಮತ್ತೊಂದು ವಿಶೇಷ. ಹೊಸ ತಲೆಮಾರಿನ ರೈತರು ಇದರ ಬಗ್ಗೆ ಕುತೂಹಲ ತಾಳಿದ್ದರೆ, ಹಳೆಯ ರೈತರಿಗೆ ಬರಗು ಬೀಜದ ನೆನಪು ಕಣ್ಮುಂದೆ ಬರುತ್ತಿದೆ.

ತೆರೆದ ಮಾರುಕಟ್ಟೆ: ‘ಬೇಸಿಗೆಯಲ್ಲಿ ಬಿತ್ತಿದ್ದೇನೆ. ಮೂರು ತಿಂಗಳಲ್ಲಿ ಕೇವಲ ಮೂರು ಬಾರಿ ನೀರು ಹಾಯಿಸಿದ್ದೇನೆ. ಕಳೆಯನ್ನೂ ಕಿತ್ತಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಂತೂ ದೂರದ ಮಾತು. ಭೂಮಿ ವಿಷವಾಗುವುದೂ ಇಲ್ಲ. ಯಾವುದೇ ನಿರ್ವಹಣೆ ಇಲ್ಲದೆ ಪ್ರತಿ ಎಕರೆಗೆ 8 ಕ್ವಿಂಟಲ್ ಬೆಳೆ ಪಡೆದಿದ್ದೇನೆ’ ಎಂದು ಶಿವಬಾಬು ವಿವರಿಸುತ್ತಾರೆ. ಸದ್ಯ ಬರಗಿನ ಬೆಲೆ ಕ್ವಿಂಟಲ್‌ಗೆ ₹ 2,500 ಇದೆ. ಇದೇ ರೀತಿ ಎಲ್ಲೆಡೆ ಬರಗು ಬಳಕೆ ಬಗ್ಗೆ ಜಾಗೃತಿ ಮೂಡಿದರೆ ಈ ಬೆಲೆ ₹ 4 ಸಾವಿರ ತಲುಪಲೂಬಹುದು ಎಂದು ಅವರು ಅಂದಾಜು ಮಾಡುತ್ತಾರೆ.

ಈ ಕೃಷಿಗೆ ಮಾರ್ಗದರ್ಶನ ನೀಡಿದ ವಿಸ್ತರಣಾ ಮುಂದಾಳು ಪಾಟೀಲ, ‘ಇದು ಸಿರಿಧಾನ್ಯಗಳ ವರ್ಷ. ಎಲ್ಲ ರೈತರು ಸಿರಿಧಾನ್ಯಗಳನ್ನು ಬೆಳೆದು, ಅದರಿಂದ ತಯಾರಿಸಿದ ಆಹಾರ ಸೇವಿಸುವುದು ಒಳ್ಳೆಯದು. ನೀರಿನ ಕೊರತೆ, ಪ್ರತಿಕೂಲ ಹವಾಮಾನದ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು’ ಎಂದು ಸಲಹೆ ನೀಡುತ್ತಾರೆ.
ಮಾಹಿತಿಗೆ: 94486 90684, 99453 63677.

**

ಪೌಷ್ಟಿಕಾಂಶದ ಕಣಜ

ಸಿರಿಧಾನ್ಯಗಳಲ್ಲಿ ಒಂದಾದ ಬರಗದ ವೈಜ್ಞಾನಿಕ ಹೆಸರು ‘ಪ್ಯಾನಿಕಮ್ ಮಿಲೇಸಿಯಮ್’. ಇಂಗ್ಲಿಷ್‌ನಲ್ಲಿ ‘ಪ್ರೊಸೊ ಮಿಲೆಟ್’ ಎನ್ನುತ್ತಾರೆ. ಚೀನಾ ಹಾಗೂ ಪಶ್ಚಿಮ ಯೂರೋಪ್‌ನಲ್ಲಿ ಕೆಲ ಪ್ರದೇಶಗಳಲ್ಲಿ ಈಗಲೂ ಬರಗು ಬೆಳೆಯಲಾಗುತ್ತದೆ. ಭಾರತದ ಬಿಹಾರ, ಆಂಧ್ರ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಈಗ ಆ ಪ್ರಮಾಣ ತಗ್ಗಿದೆ. ಕರ್ನಾಟಕದಲ್ಲಿ ಇದು ಬೇರೂರಿದ್ದು ತುಂಬಾ ಕಡಿಮೆ ಪ್ರದೇಶದಲ್ಲಿ. ತೆಳುಹಳದಿ ಬಣ್ಣದ ಬರಗದ ಕಾಳುಗಳು ಫಳಫಳ ಹೊಳೆಯುತ್ತಾ ಕಣ್ಣಿಗೆ ಹಬ್ಬ ಉಂಟುಮಾಡುತ್ತವೆ. ಇನ್ನು ಪೌಷ್ಟಿಕಾಂಶದ ವಿಷಯಕ್ಕೆ ಬಂದರೆ, ಅಕ್ಕಿಗಿಂತ ಅಧಿಕ ಪ್ರಮಾಣದ ಪೌಷ್ಟಿಕಾಂಶ, ನಾರು, ಖನಿಜಾಂಶ ಹಾಗೂ ಕ್ಯಾಲ್ಸಿಯಂ ಈ ಬರಗು ಅಕ್ಕಿಯಲ್ಲಿ ಇದೆ. ಭತ್ತದ ಅಕ್ಕಿಯಿಂದ ಮಾಡುವ ಎಲ್ಲ ಪದಾರ್ಥಗಳನ್ನು ಬರಗಿನಿಂದಲೂ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT