ಹಿರಿಯರಿಗೆ ಆ್ಯಪ್‌ ರೂಪಿಸಿದ ವಯೋವೃದ್ಧೆ!

7

ಹಿರಿಯರಿಗೆ ಆ್ಯಪ್‌ ರೂಪಿಸಿದ ವಯೋವೃದ್ಧೆ!

Published:
Updated:
ಹಿರಿಯರಿಗೆ ಆ್ಯಪ್‌ ರೂಪಿಸಿದ ವಯೋವೃದ್ಧೆ!

ವಯಸ್ಸಾದಂತೆ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವವರ ಸಂಖ್ಯೆಯೇ ಹೆಚ್ಚು. ಕೆಲಸದಿಂದ ನಿವೃತ್ತರಾದ ಹಲವರು ದಿನ ಕಳೆಯಲು ಹೆಣಗಾಡುತ್ತಾರೆ. ‘ನಮ್ಮದು ಇನ್ನೇನಿದೆ. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ’ ಎಂಬ ಮಾತು ಹಿರಿಯರ ಬಾಯಿಂದ ಹೊರಡುವುದು ಸಾಮಾನ್ಯ. ಆದರೆ, ಜಪಾನ್‌ನಲ್ಲಿ ಅಜ್ಜಿ ಒಬ್ಬರಿದ್ದಾರೆ. ಅವರ ವಯಸ್ಸಿಗೂ ಅವರ ಉತ್ಸಾಹಕ್ಕೂ ಸಂಬಂಧವೇ ಇಲ್ಲ. ವಯಸ್ಸಾದ ಮೇಲೆ ಕಂಪ್ಯೂಟರ್‌ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಈ ಅಜ್ಜಿ ಇಂದು ಜಪಾನಿನ ಹಿರಿಯರಿಗಾಗಿ ಐಒಎಸ್‌ ಆ್ಯಪ್‌ ರೂಪಿಸಿ ಜಗತ್ತಿನ ಗಮನ ಸೆಳೆದಿದ್ದಾರೆ. ‘ಹಿನದನ್‌’ (Hinadan) ಎಂಬ ಆ್ಯಪ್‌ ಅಭಿವೃದ್ಧಿ ಪಡಿಸಿರುವ ಮಸಾಕೊ ವಕಮಿಯಾ ಎಂಬ ಈ ಅಜ್ಜಿಯ ವಯಸ್ಸು ಕೇವಲ 82!

ಸರಳ ಲೆಕ್ಕಾಚಾರ ಮಾಡಲೂ ಕಷ್ಟಪಡುತ್ತಿದ್ದ ಮಸಾಕೊ, ಈಗ ಜಗತ್ತೇ ಅಚ್ಚರಿಪಡುವಂತೆ ಆ್ಯಪ್‌ ರೂಪಿಸಿ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಆ್ಯಪ್‌ ಡೆವಲಪರ್‌ ಎನಿಸಿದ್ದಾರೆ.

‘ಉತ್ಸಾಹ, ಪರಿಶ್ರಮ ಇದ್ದರೆ ಸಾಕು, ಎಂತಹ ಕ್ಲಿಷ್ಟ ಕೆಲಸವನ್ನು ಬೇಕಾದರೂ ಮಾಡಿ ಮುಗಿಸಬಹುದು. ಸಾಧನೆಗೆ ವಯಸ್ಸು ಲೆಕ್ಕಕ್ಕಿಲ್ಲ’ ಎನ್ನುತ್ತಿದ್ದಾರೆ ಈಗ ಅವರು.

ತಮ್ಮ 60ನೇ ವಯಸ್ಸಿನಲ್ಲಿ ತಂತ್ರಜ್ಞಾನ ಕೌಶಲಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಮಸಾಕೊ, ಮೊದಲ ಬಾರಿಗೆ ಕಂಪ್ಯೂಟರ್‌ ಬಳಸಿದ್ದು ಕೆಲಸದಿಂದ ನಿವೃತ್ತರಾದ ಮೇಲೆಯೇ. ಬ್ಯಾಂಕ್‌ ಗುಮಾಸ್ತರಾಗಿದ್ದ ಮಸಾಕೊ ನಿವೃತ್ತರಾದ ಬಳಿಕ ಕಂಪ್ಯೂಟರ್‌ ಕಲಿಯಲು ಮುಂದಾದರು. ಇದಕ್ಕಾಗಿ ಅವರು ಸಾಕಷ್ಟು ಕಷ್ಟಪಡಬೇಕಾಯಿತು. ಕಂಪ್ಯೂಟರ್‌ ವ್ಯವಸ್ಥೆಗೆ ಹೊಂದಿಕೊಳ್ಳಲು, ಅಂತರ್ಜಾಲ ಬಳಕೆಯ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಕೆಲವು ತಿಂಗಳುಗಳೇ ಬೇಕಾಯಿತು. ಕಲಿಯುತ್ತಾ ಹೋದಂತೆ ತಂತ್ರಜ್ಞಾನ ಅವರಿಗೆ ಎಷ್ಟು ಸುಲಭವಾಯಿತೆಂದರೆ ಅವರು ಸ್ವತಃ ಆ್ಯಪ್ ನ‌ ಪ್ರೋಗ್ರಾಮಿಂಗ್‌‌ ಬರೆಯುವಂತಾದರು.

‘ವಯಸ್ಸಾದಂತೆ ನಾವು ಜೀವನದಲ್ಲಿ ಹಲವನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಗಂಡ, ಕೆಲಸ, ಕೂದಲು, ಕಣ್ಣಿನ ದೃಷ್ಟಿ – ಹೀಗೆ ನಾವು ಕಳೆದುಕೊಳ್ಳುವುದೇ ಹೆಚ್ಚು. ಆದರೆ, ಕಲಿಯುವ ಮನಸ್ಸು ಮಾಡಿದರೆ ವಯಸ್ಸಾದ ಮೇಲೂ ಸಾಕಷ್ಟು ಗಳಿಸಿಕೊಳ್ಳಲು ಸಾಧ್ಯವಿದೆ. ಅದು ಕಂಪ್ಯೂಟರ್‌ನ ಪ್ರೋಗ್ರಾಮಿಂಗ್‌ ಇರಬಹುದು, ಇಲ್ಲವೇ ಪಿಯಾನೊ ಇರಬಹುದು. ಕಲಿಯುವ ಉತ್ಸಾಹ, ಶ್ರದ್ಧೆ ಇದ್ದರೆ ಎಲ್ಲವೂ ಸಾಧ್ಯ’ ಎನ್ನುತ್ತಾರೆ ಮಸಾಕೊ.

‘ವೃತ್ತಿ ಜೀವನದ ಸಾಧನೆ ಮುಗಿದ ಮೇಲೂ ಕಲಿಕೆ ಮುಂದುವರಿಸುವುದರಿಂದ ವೃದ್ಧಾಪ್ಯವನ್ನು ಉಲ್ಲಸಿತಗೊಳಿಸಿಕೊಳ್ಳಬಹುದು. ಇಂದಿನ ಅಂತರ್ಜಾಲ ಯುಗದಲ್ಲಿ ನೀವು ನಿರಂತರವಾಗಿ ಕಲಿಯುತ್ತಲೇ ಇರಬೇಕು. ಇಲ್ಲವಾದರೆ ನಿತ್ಯ ಜೀವನದ ಮೇಲೆ ಅದು ಪರಿಣಾಮ ಬೀರುತ್ತದೆ’ ಎಂಬುದು ಮಸಾಕೊ ಅವರ ಕಿವಿಮಾತು.

ಹಿರಿಯರಿಗೆ ಅನುಕೂಲವಾಗುವಂತಹ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವಂತೆ ಮಸಾಕೊ ಹಲವು ಮಂದಿ ಸಾಫ್ಟ್‌ವೇರ್‌ ಡೆವಲಪರ್‌ಗಳಲ್ಲಿ ಕೇಳಿಕೊಂಡಿದ್ದರು. ಆದರೆ, ಅವರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಇದರಿಂದ ಮಸಾಕೊ ಅವರು ಸ್ವತಃ ಆ್ಯಪ್‌ ರೂಪಿಸಲು ಮುಂದಾದರು. ತಂತ್ರಜ್ಞಾನದ ಅಭಿವೃದ್ಧಿಯು ಯುವ ಜನತೆಯನ್ನು ಕೇಂದ್ರವಾಗಿರಿಸಿಕೊಂಡಿರುವುದೇ ಹೆಚ್ಚು. ತಂತ್ರಜ್ಞಾನದ ಓಟದಲ್ಲಿ ಹಿರಿಯರ ಬಗ್ಗೆ ಗಮನ ಕಡಿಮೆಯೇ. ಈ ವಿಷಯ ಮಸಾಕೊ ಅವರನ್ನು ಬಹುವಾಗಿ ಕಾಡಿತ್ತು. ಹಿರಿಯರಿಗೆ ಅನುಕೂಲವಾಗುವಂಥ ಏನನ್ನಾದರೂ ಕಂಡುಹಿಡಿಯಬೇಕೆಂಬ ಅವರ ಆಲೋಚನೆಯ ಫಲ ‘ಹಿನದನ್‌’ ಆ್ಯಪ್‌.

ಜಪಾನಿನ ಗೊಂಬೆ ಉತ್ಸವ ‘ಹಿನ ಮಸೂರಿ’ಯಿಂದ ಸ್ಫೂರ್ತಿ ಪಡೆದ ಅವರು, ‘ಹಿನದನ್‌’ ಆ್ಯಪ್‌ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯರಿಗಾಗಿ ರೂಪಿಸಿರುವ ಈ ಗೇಮಿಂಗ್‌ ಆ್ಯಪ್‌ಗೆ ಈಗ ಜಪಾನ್‌ನಲ್ಲಿ ಹೆಚ್ಚು ಬೇಡಿಕೆ ಇದೆ. ಅಷ್ಟುಮಾತ್ರವಲ್ಲ. ಈ ಆ್ಯಪ್‌ ಅಭಿವೃದ್ಧಿ ಪಡಿಸಿದ ಮಸಾಕೊ ಅವರನ್ನು ಆ್ಯಪಲ್‌ ಕಂಪೆನಿ ಆಯೋಜಿಸಿದ್ದ ವಿಶ್ವದ ತಂತ್ರಜ್ಞಾನ ಅಭಿವೃದ್ಧಿಕಾರರ ಸಮಾವೇಶಕ್ಕೂ (ವರ್ಲ್ಡ್‌ ವೈಡ್‌ ಡೆವಲಪರ್ಸ್‌ ಕಾನ್ಫರೆನ್ಸ್‌) ಆಮಂತ್ರಿಸಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ್ದ ಅತ್ಯಂತ ಹಿರಿಯ ವಯಸ್ಸಿನ ಆ್ಯಪ್‌ ಡೆವಲಪರ್‌ ಮಸಾಕೊ!

ಗೊಂಬೆಗಳ ಆಟದಂತಹ ಗೇಮಿಂಗ್‌ ಆ್ಯಪ್‌ ಆಗಿರುವ ‘ಹಿನದನ್‌’ ಹಿರಿಯರಿಗಾಗಿಯೇ ರೂಪಿಸಿರುವಂಥದ್ದು. ಸದ್ಯ ಈ ಆ್ಯಪ್‌ ಜಪಾನಿ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. 42 ಸಾವಿರಕ್ಕೂ ಹೆಚ್ಚು ಬಾರಿ ಈ ಆ್ಯಪ್‌ ಡೌನ್‌ ಲೋಡ್‌ ಆಗಿದೆ. ಈ ಆ್ಯಪ್‌ಗೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಮುಂದಿನ ವರ್ಷದ ಹೊತ್ತಿಗೆ ಈ ಆ್ಯಪ್‌ ಅನ್ನು ಇಂಗ್ಲಿಷ್‌, ಚೈನೀಸ್‌ ಹಾಗೂ ಸಾಧ್ಯವಾದರೆ ಫ್ರೆಂಚ್‌ ಆವೃತ್ತಿಯಲ್ಲಿ ಬಿಡುಗಡೆ ಮಾಡುವ ಕನಸು ಮಸಾಕೊ ಅವರದ್ದು.

ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರದಲ್ಲಿ 40 ವರ್ಷ ವಯಸ್ಸಿನವರನ್ನೇ ‘ಹಿರಿಯರು’ ಕರೆಯುವುದು ಸಾಮಾನ್ಯ. ಆದರೆ, ಇದಕ್ಕಿಂತ ಎರಡು ಪಟ್ಟು ಹೆಚ್ಚು ವಯಸ್ಸಾಗಿರುವ ಮಸಾಕೊ ಅವರ ಕೌಶಲ ಹಾಗೂ ಕನಸುಗಳ ಬಗ್ಗೆ ತಂತ್ರಜ್ಞಾನ ವಲಯದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಸಾಕೊ ಅವರ ಈ ಕಾರ್ಯಕ್ಕೆ ಆ್ಯಪಲ್‌ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಕೂಡಾ ಬೆರಗಾಗಿದ್ದಾರೆ.

‘ವಯಸ್ಸಾದವರನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಅವರಲ್ಲೂ ಉತ್ಸಾಹ ತುಂಬುವ ಕೆಲಸ ಆಗಬೇಕು. ಅದಕ್ಕಾಗಿ ಈ ಆ್ಯಪ್‌ ರೂಪಿಸಿದೆ’ ಎನ್ನುವ ಮಸಾಕೊ ತಮ್ಮ 75ನೇ ವಯಸ್ಸಿನಿಂದ ಪಿಯಾನೊ ಕಲಿಯುತ್ತಿದ್ದಾರೆ.ಪ್ರತಿನಿತ್ಯ ನನಗೆಷ್ಟು ಕೆಲಸವಿರುತ್ತದೆ ಎಂದರೆ ನನ್ನ ಕಾಯಿಲೆಗಳ ಕಡೆ ಗಮನ ಕೊಡಲೂ ನನ್ನ ಬಳಿ ಸಮಯವಿಲ್ಲ’ ಎನ್ನುವುದು ಮಸಾಕೊ ಅವರ ಉತ್ಸಾಹದ ಮಾತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry