ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೆ ನಿಮ್ಮ ಪಾಸ್‌ವರ್ಡ್ ಆದರೆ...

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇದು ಪಾಸ್‌ವರ್ಡ್‌ಗಳ ಯುಗ. ಕಂಪ್ಯೂಟರ್‌ಗೆ, ಮೇಲ್‌ಗೆ, ಸ್ಮಾರ್ಟ್‌ಫೋನ್‌ಗೆ, ಫೇಸ್‌ಬುಕ್‌ಗೆ, ಟ್ವಿಟರ್‌ಗೆ, ಹೀಗೆ ಎಲ್ಲದಕ್ಕೂ ರಹಸ್ಯಪದಗಳ ರಕ್ಷಣೆ ಇರಲೇಬೇಕು.

ಇಷ್ಟೊಂದು ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಡುವುದು ಕಷ್ಟ. ಇದರ ಜತೆ ಹ್ಯಾಕರ್‌ಗಳ ಕಾಟ ಬೇರೆ. ಅವರಿಂದ ತಪ್ಪಿಸಿಕೊಳ್ಳಲು ಪಾಸ್‌ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಇಷ್ಟೆಲ್ಲಾ ಸಮಸ್ಯೆಗಳನ್ನು ಪರಿಹರಿಸಲೆಂದೇ, ಮನುಷ್ಯನನ್ನೇ ಪಾಸ್‌ವರ್ಡ್‌ ಮಾಡಲು ಸಂಶೋಧನೆಗಳು ನಡೆಯುತ್ತಿವೆ.

ಈಗಾಗಲೇ ಬೆರಳಚ್ಚು, ಧ್ವನಿ ಅನುಕರಣೆಯನ್ನು, ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳುವಂತಹ ತಂತ್ರಜ್ಞಾನ ಬಂದಿದೆ. ಇದಲ್ಲದೆ, ಅನುಕರಣೆ ಮಾಡಲು ಸಾಧ್ಯವಿಲ್ಲದ ತುಟಿಗಳ ಚಲನೆ, ನಡೆಯುವ ರೀತಿ, ಎದೆ ಬಡಿತವನ್ನು ಭವಿಷ್ಯದಲ್ಲಿ ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳುವ ಕಾಲ ಬರಲಿದೆ.

ತುಟಿಗಳ ಚಲನೆಮುಖವನ್ನೇ ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳುವಂತಹ ತಂತ್ರಜ್ಞಾನ ಈಗ ಲಭ್ಯವಿದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಹ್ಯಾಕರ್‌ಗಳು ನಿಮ್ಮ ಮುಖವನ್ನು ಕಂಪ್ಯೂಟರ್‌ನಲ್ಲಿ ಪುನಃಸೃಷ್ಟಿಸಿ ನಿಮ್ಮ ಖಾತೆಯನ್ನು ತೆರೆಯಬಲ್ಲರು.

ಹೀಗಾಗಿ ತುಟಿಗಳ ಚಲನೆಯನ್ನು ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳಲು ನೆರವಾಗುವಂತಹ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಬೆರಳಚ್ಚಿನಂತೆ ತುಟಿಗಳ ಚಲನೆ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಹಾಂಕಾಂಗ್‌ನ ಬ್ಯಾಪ್ಟಿಸ್ಟ್‌ ವಿಶ್ವವಿದ್ಯಾಲಯದ ಸಂಶೋಧಕರು ತುಟಿಗಳ ಚಲನೆ ಆಧರಿಸಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ ತೆರೆಯುವ ಹಾಗೆ ಪಾಸ್‌ವರ್ಡ್ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಇದಕ್ಕೆ ಲಿಪ್‌ಮೋಷನ್‌ ಪಾಸ್‌ವರ್ಡ್ ಎನ್ನುತ್ತಾರೆ. ಇದನ್ನು ಮೂಕರೂ ಬಳಸಿಕೊಳ್ಳಬಹುದು

ಈಸಿಜಿ ಗ್ರಾಫ್‌

ಎಲೆಕ್ಟ್ರೊಕಾರ್ಡಿಯೊಗ್ರಾಫ್... ಇದನ್ನೇ ಸಂಕ್ಷಿಪ್ತವಾಗಿ ಇಸಿಜಿ ಎನ್ನುತ್ತಾರೆ. ಹೃದಯ ಬಡಿದುಕೊಳ್ಳುವ ಮತ್ತು ಹೃದಯ ಲಯದ ರೀತಿಯನ್ನು ನಕ್ಷೆ (ಗ್ರಾಫ್‌) ರೀತಿಯಲ್ಲಿ ಇಸಿಜಿ ಮೂಲಕ ನೋಡಬಹುದು. ಇದನ್ನೂ ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳಲು ಸಂಶೋಧನೆಗಳು ನಡೆಯುತ್ತಿವೆ.

ಅಮೆರಿಕದ ಕೆಲವು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಸುರಕ್ಷಿತವಾಗಿ ಇಡಲು, ಅವರ ಇಸಿಜಿಯನ್ನೇ ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳಲು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ.

ನ್ಯೂಯಾರ್ಕ್‌ನ ಬಿಂಗ್‌ಹ್ಯಾಮ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜಾನ್‌ಪೆಂಗ್‌ ಜಿನ್‌ ನೇತೃತ್ವದ ತಂಡ ಇದಕ್ಕಾಗಿ ಶ್ರಮಿಸುತ್ತಿದೆ. ಇಲ್ಲಿ ಡೇಟಾ ಎನ್‌ಸ್ಕ್ರಿಪ್ಷನ್‌ಗಾಗಿ ಇಸಿಜಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಇದು ಪೂರ್ಣಪ್ರಮಾಣದಲ್ಲಿ ಇನ್ನೂ ಯಶಸ್ವಿಯಾಗಿಲ್ಲ.

ಹೊಟ್ಟೆಯಲ್ಲಿ ಬಚ್ಚಿಡಿ...

ಈವರೆಗೆ ನೀವು ಕೇಳಿರುವ ಪಾಸ್‌ವರ್ಡ್‌ಗಳಿಗಿಂತ ಇದು ತುಂಬಾ ಭಿನ್ನ. ನಿಮ್ಮ ಪಾಸ್‌ವರ್ಡ್‌ ಅನ್ನು ನುಂಗಿ ನಿಮ್ಮ ಹೊಟ್ಟೆಯಲ್ಲೇ ಸುರಕ್ಷಿತವಾಗಿ ಬಚ್ಚಿಡಬಹುದಂತೆ! ಈ ಸಂಶೋಧನೆಗಳೂ ಪೂರ್ಣಗೊಂಡಿವೆ.

ವಿಶ್ವದಾದ್ಯಾಂತ ಆನ್‌ಲೈನ್‌ನ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ಪೇಪಾಲ್‌ ಸಂಸ್ಥೆ ಈ ರೀತಿಯ ಪಾಸ್‌ವರ್ಡ್‌ಗಳನ್ನು ರೂಪಿಸುವ ಕೆಲಸದಲ್ಲಿ ಒಂದು ವರ್ಷದಿಂದ ನಿರತವಾಗಿದೆ. ಇಲ್ಲಿ, ಕ್ಯಾಪ್ಸೂಲ್‌ (ಗುಳಿಗೆ) ರೂಪದಲ್ಲಿ ಪಾಸ್‌ವರ್ಡ್‌ ಅನ್ನು ತಯಾರಿಸಲಾಗುತ್ತೆ. ಇದರಲ್ಲಿ ಅತಿ ಸೂಕ್ಷ್ಮ ಮೈಕ್ರೊಚಿಪ್‌ ಅನ್ನು ಅಳವಡಿಸಲಾಗುತ್ತೆ.

ನೀವು ಪಾಸ್‌ವರ್ಡ್‌ ಅನ್ನು ಟೈಪ್‌ ಮಾಡುವ ಅಗತ್ಯವಿಲ್ಲ. ಈ ಗುಳಿಗೆಯನ್ನು ನುಂಗಿ, ಕಂಪ್ಯೂಟರ್ ಮುಂದೆ ಕುಳಿತರೆ ಸಾಕು, ದೇಹದಲ್ಲಿ ಉತ್ಪತ್ತಿಯಾಗುವ ಆಮ್ಲಗಳ ಶಕ್ತಿಯಿಂದ ಈ ಚಿಪ್‌ ಕಾರ್ಯೋನ್ಮಖವಾಗುತ್ತದೆ. ಆಗ ಚಿಪ್‌ ಅನ್ನು ಕಂಪ್ಯೂಟರ್‌ ಗ್ರಹಿಸುತ್ತದೆ. ಆದರೆ ಈ ಚಿಪ್‌ನ ಜೀವಿತಾವಧಿ ಎರಡರಿಂದ ಮೂರು ದಿನ ಮಾತ್ರ. ಮತ್ತೆ ಗುಳಿಗೆ ನುಂಗಬೇಕಾಗುತ್ತದೆ. ಹೀಗೆ ನಿಮ್ಮ ಹೊಟ್ಟೆಯಲ್ಲೇ ಪಾಸ್‌ವರ್ಡ್‌ ಬಚ್ಚಿಟ್ಟುಕೊಂಡರೆ ಹ್ಯಾಕರ್‌ಗಳ ಕಾಟ ಇರುವುದಿಲ್ಲ ಎನ್ನುತ್ತಾರೆ. ಪೇಪಾಲ್‌ ಸಂಶೋಧಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT