7

ಜನಸಾಮಾನ್ಯರ ಗ್ರಹಿಕೆಯಲ್ಲಿ ಪ್ರಜಾಪ್ರಭುತ್ವ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ಜನಸಾಮಾನ್ಯರ ಗ್ರಹಿಕೆಯಲ್ಲಿ ಪ್ರಜಾಪ್ರಭುತ್ವ

ಈ ಸ್ವಾತಂತ್ರ್ಯೋತ್ಸವ ದಿನದ ಸಂದರ್ಭದಲ್ಲಿ ವಾರಪೂರ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಸಂಭ್ರಮಾಚರಣೆ ನಡೆಯುತ್ತಿದ್ದು, ಸ್ವತಂತ್ರ ದೇಶ ಅಸ್ತಿತ್ವಕ್ಕೆ ಬಂದ ಏಳು ದಶಕಗಳಲ್ಲಿನ ಸಾಧನೆಗಳನ್ನು ಪರಾಮರ್ಶಿಸಲಾಗುತ್ತಿದೆ. ರಾಜಕೀಯ ಮುಖಂಡರ ಭಾಷಣ, ಪತ್ರಿಕೆಗಳ ಸಂಪಾದಕೀಯ ಮತ್ತು ಟೆಲಿವಿಷನ್‌ ಚಾನೆಲ್‌ಗಳಲ್ಲಿನ ಚರ್ಚೆಗಳೆಲ್ಲ, ಪ್ರಜಾಪ್ರಭುತ್ವದ ಆಶಯ ಮತ್ತು ಸಂವಿಧಾನದ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ಗುರಿಗಳನ್ನು ಸಾಧ್ಯಮಾಡುವ ನಿಟ್ಟಿನಲ್ಲಿನ ಪ್ರಗತಿಯ ಪರಾಮರ್ಶೆ ಸುತ್ತ ಕೇಂದ್ರೀಕೃತಗೊಂಡಿವೆ.

ನ್ಯಾಯ ಒದಗಿಸುವ ಭರವಸೆ, ಸಮಾನತೆಯ ಪರಿಪಾಲನೆ, ಸ್ವಾತಂತ್ರ್ಯದ ರಕ್ಷಣೆ ಮತ್ತು ಭ್ರಾತೃತ್ವ ಬಲಪಡಿಸುವ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಜಾಪ್ರಭುತ್ವ ಸಾಗಿರುವುದರ ಮೌಲ್ಯಮಾಪನ ನಡೆಯುತ್ತಿದೆ. ಭಾರತದಲ್ಲಿನ ಪ್ರಜಾಪ್ರಭುತ್ವದ ಪ್ರಯೋಗ, ಅದರ ಯಶಸ್ಸು ಮತ್ತು ಎದುರಾಗಿರುವ ಸವಾಲುಗಳೂ ಪ್ರಮುಖವಾಗಿ ಚರ್ಚೆಗೆ ಒಳಪಟ್ಟಿವೆ.

ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಮರುದಿನ, ಭಾರತದ ಪ್ರಜಾಪ್ರಭುತ್ವದ ಚಿತ್ರಣ ಹೇಗೆ ಇದೆ ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ. ನಾವು ಪ್ರಜಾಪ್ರಭುತ್ವವಾದಿಗಳು ಎಂದು ಭಾರತದ ಪ್ರಜೆಗಳು ಸಂಭ್ರಮಪಡುವರೇ, ಕೆಲವರು ಹೇಳಿಕೊಳ್ಳುವ ಸಾಧನೆಗಳು ಜನರ ನಿರೀಕ್ಷೆಗೆಗಿಂತ ಕಡಿಮೆ ಇವೆಯೇ. ಆಕಾಂಕ್ಷೆಗಳು ಮತ್ತು ಸಾಧನೆಗಳು, ಭರವಸೆ ಮತ್ತು ಅವುಗಳ ಜಾರಿ, ವಾಕ್ಚಾತುರ್ಯ ಮತ್ತು ವಾಸ್ತವದ ಮಧ್ಯೆ ದೊಡ್ಡ ಮಟ್ಟದ ಕಂದರ ಇರುವುದು ಸ್ಪಷ್ಟಗೊಳ್ಳುತ್ತದೆ.

ಸಂವಿಧಾನದಲ್ಲಿ ಉಲ್ಲೇಖಿಸಿರುವ ಉದಾತ್ತ ಆದರ್ಶಗಳಿಗೆ ಎಳ್ಳು ನೀರು ಬಿಟ್ಟಿರುವುದು ಮತ್ತು ವಾಸ್ತವ ನೆಲೆಗಟ್ಟಿನಲ್ಲಿ ಕಂಡು ಬರುತ್ತಿರುವ ರಾಜಕೀಯದ ನಿಜರೂಪಗಳು ಕಣ್ಣಿಗೆ ರಾಚುತ್ತವೆ. ಪ್ರಜಾಪ್ರಭುತ್ವ ಕುರಿತ ಪರಿಕಲ್ಪನೆಯು ವ್ಯಾಪಕ ನೆಲೆಯಲ್ಲಿ ಪ್ರಜಾಪ್ರಭುತ್ವದ ಆಲೋಚನೆಯಾಗಿ ಕಾರ್ಯಗತಗೊಂಡಿಲ್ಲದಿರುವುದು ಕಂಡು ಬರುತ್ತದೆ.

ಭಾರತದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಗತಿ ಕುರಿತು ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲಪಿಂಗ್ ಸೊಸೈಟೀಸ್‌ (ಸಿಎಸ್‌ಡಿಎಸ್)– ಲೋಕನೀತಿ  ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಪ್ರಜಾಪ್ರಭುತ್ವ ಮತ್ತು ಅದರ ಕಾರ್ಯನಿರ್ವಹಣೆ ಕುರಿತು ಜನಸಾಮಾನ್ಯರು ತಳೆದಿರುವ ಅಭಿಪ್ರಾಯ ಕುರಿತು ಆಸಕ್ತಿದಾಯಕ ಸಂಗತಿಗಳು ಬೆಳಕಿಗೆ ಬಂದಿವೆ.

‘ನಿಮ್ಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವ ಎಂದರೆ ಏನು’ ಎನ್ನುವ ಪ್ರಶ್ನೆಗೆ ವ್ಯಕ್ತವಾದ ಅಭಿಪ್ರಾಯದಲ್ಲಿ, ಜನರ ಕನಿಷ್ಠ ಆದ್ಯತೆಗಳನ್ನು ಈಡೇರಿಸುವುದೇ ಪ್ರಜಾಪ್ರಭುತ್ವ ಎನ್ನುವುದು ಸಾಮಾನ್ಯ ಪ್ರತಿಕ್ರಿಯೆಯಾಗಿತ್ತು. ಸಮಾನತೆ, ಸ್ವಾತಂತ್ರ್ಯ, ಚುನಾವಣೆ ಮತ್ತು ನೆಲದ ಕಾನೂನು ಎಂದು ಅನೇಕರು ಉತ್ತರಿಸಿದ್ದಾರೆ. ಅರ್ಧಕ್ಕಿಂತ ಹೆಚ್ಚು ಜನರು, ಪ್ರಜಾಪ್ರಭುತ್ವವನ್ನು ಜನಕಲ್ಯಾಣ ಮತ್ತು ನ್ಯಾಯಪಾಲನೆ ಎಂದು ವ್ಯಾಖ್ಯಾನಿಸಿದ್ದಾರೆ.

ಜನರ ಬದುಕಿನ ನಿಜವಾದ ಅನುಭವ ಮತ್ತು ನಿರೀಕ್ಷೆಗಳು, ಪ್ರಜಾಪ್ರಭುತ್ವ ಕುರಿತ ಅವರ ದೃಷ್ಟಿಕೋನವನ್ನು ಸ್ಪಷ್ಟವಾಗಿ ಪ್ರತಿಫಲಿಸಿವೆ. ಜನಸಾಮಾನ್ಯರ ಅಭಿಪ್ರಾಯದಲ್ಲಿ, ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯುವ ಹಕ್ಕು ಮತ್ತು ನ್ಯಾಯದಾನವು ಪ್ರಜಾಪ್ರಭುತ್ವದ ಮಹತ್ವದ ತಿರುಳಾಗಿದೆ. ಪ್ರಜಾಪ್ರಭುತ್ವದಿಂದ ಬಹುತೇಕ ಜನರು ಇದನ್ನೇ ಬಹುವಾಗಿ ನಿರೀಕ್ಷಿಸುತ್ತಾರೆ.

ಸರ್ಕಾರ ಮತ್ತು ಅದರ ಪ್ರಜಾಸತ್ತಾತ್ಮಕ ಸಂಸ್ಥೆಗಳಿಂದ ಜನರು ಏನನ್ನು ಬಯಸುತ್ತಾರೆ ಎನ್ನುವುದನ್ನೂ ಇದು ಧ್ವನಿಸುತ್ತದೆ. ದೇಶದಲ್ಲಿನ ಜನಸಾಮಾನ್ಯರ ಪಾಲಿಗೆ ಸರ್ಕಾರ ಬರೀ ಅನುಕೂಲಗಳನ್ನು ಕಲ್ಪಿಸುವ ವ್ಯವಸ್ಥೆಯಾಗಿ ಉಳಿದಿಲ್ಲ. ಸುಸ್ಥಿರ ನ್ಯಾಯ ಒದಗಿಸುವ ಮತ್ತು ಎಲ್ಲರ ಅಭಿವೃದ್ಧಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಕನಿಷ್ಠ ಅಗತ್ಯಗಳ ಸೇವೆ ಮತ್ತು ಸೌಕರ್ಯಗಳನ್ನು ಒದಗಿಸಿಕೊಡುವ ಸಂಸ್ಥೆಯೂ ಆಗಿದೆ ಎನ್ನುವುದು ಅಧ್ಯಯನದಲ್ಲಿ ದೃಢಪಟ್ಟಿದೆ.

ಬಹುಸಂಖ್ಯಾತ ನಾಗರಿಕರು ಪ್ರಜಾಪ್ರಭುತ್ವ ವ್ಯವಸ್ಥೆಯ ಪರ ಬೆಂಬಲ ವ್ಯಕ್ತಪಡಿಸಿದ್ದರೂ, ಪ್ರಜಾಪ್ರಭುತ್ವ ಕುರಿತ ಆಲೋಚನೆ ಮತ್ತು ಪ್ರಜಾಪ್ರಭುತ್ವದ ಸಾಂಸ್ಥೀಕರಣದ

ಪರಿಕಲ್ಪನೆ ಮಧ್ಯೆ ಅಂತರ ದೊಡ್ಡದಾಗಿಯೇ ಇರುವುದು ಖಚಿತವಾಗುತ್ತದೆ. ಪ್ರಮುಖ ಸಾರ್ವಜನಿಕ ಅಥವಾ ರಾಜಕೀಯ ಸಂಸ್ಥೆಗಳಲ್ಲಿ ಜನರು ಇರಿಸಿರುವ ವಿಶ್ವಾಸವನ್ನು ಪರೀಕ್ಷಿಸುವ ಮೂಲಕ, ಪ್ರಜಾಪ್ರಭುತ್ವದ ಸಾಂಸ್ಥಿಕ ಪ್ರಕ್ರಿಯೆಯನ್ನು ದೇಶದ ನಾಗರಿಕರು ಅಂದಾಜಿಸಿರುವುದನ್ನೂ ನಾವು ಈ ಅಧ್ಯಯನದಲ್ಲಿ ಸುಸ್ಪಷ್ಟವಾಗಿ ನೋಡಬಹುದಾಗಿದೆ.

ದೇಶದ ಆರು ಪ್ರಮುಖ ಸಂಸ್ಥೆಗಳಾದ ಸಂಸತ್ತು, ರಾಜಕೀಯ ಪಕ್ಷಗಳು, ನ್ಯಾಯಾಂಗ, ನಾಗರಿಕ ಸೇವೆ, ಪೊಲೀಸ್‌ ಮತ್ತು ಸೇನೆಯ ಬಗ್ಗೆ ನಾಗರಿಕರು ನೀಡಿರುವ ಶ್ರೇಯಾಂಕಗಳ ಬಗ್ಗೆಯೂ ಈ ಅಧ್ಯಯನ ಒಳನೋಟ ನೀಡುತ್ತದೆ. ಸೇನೆ ಮತ್ತು ನ್ಯಾಯಾಂಗಗಳ ಬಗ್ಗೆ ಗರಿಷ್ಠ ವಿಶ್ವಾಸ ಹೊಂದಿರುವ ಜನರು, ರಾಜಕೀಯ ಪಕ್ಷಗಳ ಬಗ್ಗೆ ವಿಶ್ವಾಸ ಮತ್ತು ಭರವಸೆ ಕಳೆದುಕೊಂಡಿದ್ದಾರೆ.

ಚುನಾಯಿತ ಸಂಸ್ಥೆಗಳಿಗೆ ಹೋಲಿಸಿದರೆ, ಚುನಾಯಿತವಲ್ಲದ ಸಂಸ್ಥೆಗಳಲ್ಲಿ ಗರಿಷ್ಠ ಮಟ್ಟದ ವಿಶ್ವಾಸವನ್ನು ಜನರು ಇರಿಸಿದ್ದಾರೆ. ಇದಕ್ಕೆ ಹಲವಾರು ವಿರೋಧಾಭಾಸಗಳ ಸಂಘರ್ಷವೇ ಕಾರಣ ಎನ್ನುವ ನಿಲುವಿಗೆ ಬರಬೇಕಾಗುತ್ತದೆ. ಚುನಾಯಿತವಲ್ಲದ ಸೇನೆ ಮತ್ತು ನ್ಯಾಯಾಂಗದ ಬಗ್ಗೆ ಗರಿಷ್ಠ ಮಟ್ಟದ ವಿಶ್ವಾಸ ಹೊಂದಿರುವುದಕ್ಕೆ ಅವುಗಳ ಕಾರ್ಯನಿರ್ವಹಣೆಯೇ ಕಾರಣವಾಗಿರಬಹುದು. ಇವುಗಳ ಮೋಡಿ ಮಾಡುವಂತಹ, ಪಾರದರ್ಶಕವಲ್ಲದ ಕಾರ್ಯವೈಖರಿಯನ್ನು ನಾಗರಿಕರು ಸಾಕಷ್ಟು ಅಂತರ ಕಾಯ್ದುಕೊಂಡೇ ಭಯಾಶ್ಚರ್ಯದಿಂದ ಗಮನಿಸುತ್ತಿರುತ್ತಾರೆ.

ಇವೆರಡೂ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ವಿಶಿಷ್ಟ ಪರಿಣತಿಯೂ ಒಳಗೊಂಡಿರುತ್ತದೆ. ಅವುಗಳ ಕಾರ್ಯವೈಖರಿ ಬಗ್ಗೆ ಸೀಮಿತ ಮಾಹಿತಿ ದೊರೆಯುವುದರಿಂದ ಅವುಗಳ ಬಗ್ಗೆ ಜನರಲ್ಲಿ ಗೌರವ, ಮೆಚ್ಚುಗೆ ಭಾವನೆ ಜತೆಗೆ ವಿಸ್ಮಯ ಭಾವವೂ ಮನೆ ಮಾಡಿದೆ.ರಾಜಕೀಯ ಪಕ್ಷಗಳಂತಹ ರಾಜಕೀಯ ಸಂಸ್ಥೆಗಳು ಮತ್ತು ಸಂಸತ್ತಿನ ಕಾರ್ಯವೈಖರಿಯು ಬಹಿರಂಗವಾಗಿ ಎಲ್ಲರ ಗಮನಕ್ಕೆ ಬರುವುದರಿಂದ ಜನಮಾನಸದಿಂದ ತೀವ್ರ ಟೀಕೆ ಕೇಳಿ ಬರುತ್ತದೆ. ಜತೆಗೆ ಸಿನಿಕತನವೂ ಕಂಡು ಬರುತ್ತದೆ. ಚುನಾಯಿತ ರಾಜಕೀಯ ಸಂಸ್ಥೆಗಳಲ್ಲಿನ ಉತ್ಸಾಹದಾಯಕವಲ್ಲದ ವಿಶ್ವಾಸವು ಜನರಲ್ಲಿನ ‘ವಿಮರ್ಶಾತ್ಮಕ ನಾಗರಿಕ ಪ್ರಜ್ಞೆ’ಯ ಪ್ರತೀಕವಾಗಿದೆ. ನಾಗರಿಕರನ್ನು ಬೆದರಿಸುವುದು ಚುನಾಯಿತ ಸಂಸ್ಥೆಗಳ ಕೆಲಸವಲ್ಲ ಎನ್ನುವ ಪ್ರಜ್ಞೆ ಈಗ ಜನರಲ್ಲಿ ಜಾಗೃತವಾಗಿದೆ. ಇಂತಹ ಸಂಸ್ಥೆಗಳು ತಮ್ಮ ಬಳಿ ಇರುವ ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರಲ್ಲಿ ಭಯಭೀತಿ ಮೂಡಿಸುವುದೂ ತರವಲ್ಲ.

ನಾಗರಿಕರು ಮತ್ತು ಅವರು ಚುನಾಯಿಸಿದ ಜನಪ್ರತಿನಿಧಿಗಳ ನಡುವಣ ಸಂಬಂಧವು, ಸಂಸ್ಥೆಗಳು ಹೊಂದಿರುವ ಅಧಿಕಾರವನ್ನು ಪ್ರಜಾಸತ್ತಾತ್ಮಕವಾಗಿ ಪ್ರಶ್ನಿಸುವ ಮತ್ತು ಅದರ ಬಗ್ಗೆ ಸಂದೇಹ ತಳೆಯುವುದನ್ನು ದೃಢವಾಗಿ ಆಧರಿಸಿದೆ. ಇಂತಹ ಸಾಧ್ಯತೆಯು ದೇಶದ ಪ್ರಜಾಪ್ರಭುತ್ವವನ್ನು ಇನ್ನೊಂದು ವಿರೋಧಾಭಾಸದತ್ತ ಕೊಂಡೊಯ್ಯಲಿದೆ. ಅತಿಯಾದ ನಿರೀಕ್ಷೆಗಳ ಭಾರಕ್ಕೂ ಇದು ಅನ್ವಯಿಸುತ್ತದೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯು ಪ್ರಜಾಪ್ರತಿನಿಧಿಗಳ ಬಗ್ಗೆ ಗರಿಷ್ಠ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಇದರ ಫಲವಾಗಿ ವಿಶ್ವಾಸದ ಕೊರತೆ, ಅತಿಯಾದ ನಿರೀಕ್ಷೆಗಳೂ ಕಂಡು ಬರುತ್ತವೆ.  ಅಂತಿಮವಾಗಿ, ಚುನಾಯಿತ ಮತ್ತು ಚುನಾಯಿತ ಅಲ್ಲದ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿನ ವ್ಯತ್ಯಾಸವೂ ಸಾಕಷ್ಟು ವಿರೋಧಾಭಾಸದಿಂದ ಕೂಡಿದೆ. ನಾಗರಿಕರ ಜತೆ ನಿಯಮಿತವಾಗಿ ನಿರಂತರ ಸಂಪರ್ಕದಲ್ಲಿ ಇರುವ ಸಂಸ್ಥೆಗಳ ಕಾರ್ಯವೈಖರಿಯು ಅವರಿಗೆ ತೀವ್ರ ನಿರಾಶೆ ಉಂಟು ಮಾಡುತ್ತಿದೆ.

ಸಾರ್ವಜನಿಕರ ನಿರಂತರ ಸಂಪರ್ಕಕ್ಕೆ ಒಳಪಡದ ಸಂಸ್ಥೆಗಳು ಗರಿಷ್ಠ ಮಟ್ಟದ ವಿಶ್ವಾಸಕ್ಕೆ ಪಾತ್ರವಾಗಿವೆ. ನಾಗರಿಕರಿಗೆ ಪ್ರಜಾಪ್ರಭುತ್ವದ ಆಡಳಿತವನ್ನು ಕಡ್ಡಾಯವಾಗಿ ನೀಡಬೇಕಾದ ಸಂಸ್ಥೆಗಳು ಜನರಿಗೆ ತೃಪ್ತಿದಾಯಕ ಸೇವೆ ನೀಡುವಲ್ಲಿ ವಿಫಲವಾಗಿವೆ. ಸ್ವಾತಂತ್ರ್ಯದ 70 ವರ್ಷಗಳನ್ನು ದಾಟಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಾಮರ್ಶೆ ಮಾಡಿದಾಗ ಅದರ ಒಟ್ಟು ಪರಿಣಾಮಗಳನ್ನು ಕಾಣಬಹುದಾಗಿದೆ.

ಈ ಮೇಲಿನ ವಿವರಣೆಯು ದೇಶದಲ್ಲಿನ ಪ್ರಜಾಪ್ರಭುತ್ವವನ್ನು ಇನ್ನೊಂದು ಆಯಾಮದತ್ತ ಕೊಂಡೊಯ್ಯುತ್ತದೆ. ನಾಗರಿಕರ ಪಾಲಿಗೆ, ಕಲ್ಯಾಣ ಕಾರ್ಯಕ್ರಮಗಳು ಮತ್ತು ನ್ಯಾಯದಾನವೇ ಪ್ರಜಾಪ್ರಭುತ್ವ ಆಗಿರುವಾಗ, ಸೇವೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದೇ ಪ್ರಜಾಪ್ರಭುತ್ವದ ಯಶಸ್ಸಿನ ಅಳತೆಗೋಲು ಕೂಡ ಆಗಿರುತ್ತದೆ. ದೇಶದಲ್ಲಿನ ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಇರುವ ಭಿನ್ನಾಭಿಪ್ರಾಯವನ್ನೂ ಇದು ಸೂಚಿಸುವುದೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ನಾಗರಿಕರಿಗೆ ಆಗುವ ಅನುಭವವು ಸರ್ಕಾರದ ಜವಾಬ್ದಾರಿ ಕುರಿತ ಜನರ ಗ್ರಹಿಕೆಗಳ ಸ್ವರೂಪವನ್ನೂ ನಿರ್ಧರಿಸುತ್ತದೆ. ಇದು ಪ್ರಜಾಪ್ರಭುತ್ವವನ್ನು ದೀರ್ಘಾವಧಿಯಲ್ಲಿ ಬೆಂಬಲಿಸುವುದರ ಮೇಲೂ ಪರಿಣಾಮ ಬೀರುತ್ತದೆ. ದೇಶದಲ್ಲಿನ ಬಹುತೇಕರಿಗೆ ತಮ್ಮೆಲ್ಲ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಸರ್ಕಾರವನ್ನೇ ಹೆಚ್ಚಾಗಿ ಅವಲಂಬಿಸುವುದು ಅನಿವಾರ್ಯ. ಅವರಿಗೆ ಲಭ್ಯ ಇರುವ ಏಕೈಕ ಆಯ್ಕೆಯೂ ಇದಾಗಿದೆ. ಇಂತಹ ಸಂದರ್ಭದಲ್ಲಿ, ನ್ಯಾಯದಾನ ಪ್ರಕ್ರಿಯೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹೊಸ ಅರ್ಥ ನೀಡುವುದು ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ.

ನಾವೀಗ ಸ್ವಾತಂತ್ರ್ಯದ 71ನೇ ವರ್ಷದಲ್ಲಿ ಕಾಲಿಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ನಾಗರಿಕರು ಬಯಸುವ ನಿರೀಕ್ಷೆಗಳಿಗೆ ಇನ್ನಷ್ಟು ಹೊಸ ಅರ್ಥ ನೀಡುವ ಪಥದಲ್ಲಿ ದೇಶ ಮುನ್ನಡೆಯಲಿ ಎಂದು ಹಾರೈಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry