3

ನೃತ್ಯವೇ ನನಗೆ ಟಾನಿಕ್

Published:
Updated:
ನೃತ್ಯವೇ ನನಗೆ ಟಾನಿಕ್

ಒತ್ತಡ ಯಾರಿಗಿಲ್ಲ ಹೇಳಿ? ಯಾವುದೇ ಕೆಲಸದಲ್ಲಿರಲಿ ಒತ್ತಡ ಎಂಬುದೂ ಖುಷಿಯಷ್ಟೇ ಸಹಜವಾಗಿ ಹಾಸುಹೊಕ್ಕಾಗಿರುತ್ತದೆ. ಆದರೆ ಅದನ್ನು ಸ್ವೀಕರಿಸುವುದರ ಮೇಲೆಯೇ ಎಲ್ಲವೂ ನಿಂತಿರುತ್ತದೆ.

ನಮ್ಮ ಸಹನಾಮಟ್ಟಕ್ಕಿಂತ ಹೆಚ್ಚು ಕೆಲಸ ಅಥವಾ ಬೇಸರ, ನೋವು ಕಾಣಿಸಿಕೊಂಡರೆ ಅದನ್ನು ಒತ್ತಡ ಎಂದುಕೊಳ್ಳಬಹುದೇನೋ. ನಮ್ಮ ಕೈಗೆಟುಕುವ ಹಂತವನ್ನು ಮೀರಿದರೆ, ಯಾವುದೇ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿಲ್ಲ ಎಂಬ ಭಾವ ಶುರುವಾಗುತ್ತಿದ್ದಂತೆ ಒತ್ತಡವೂ ಆವರಿಸುತ್ತದೆ.

ನಾನು ಒತ್ತಡವನ್ನು ಎರಡು ರೀತಿಯಿಂದ ನೋಡುತ್ತೇನೆ. ಒಂದು ತಾತ್ವಿಕವಾಗಿ, ಮತ್ತೊಂದು ಪ್ರಾಯೋಗಿಕವಾಗಿ. ತಾತ್ವಿಕ ವಿಷಯಕ್ಕೆ ಬಂದರೆ, ನಮಗೆ ತಡೆದುಕೊಳ್ಳುವ ಶಕ್ತಿ ಇದೆ ಎನ್ನುವ ಕಾರಣಕ್ಕೇ ಒತ್ತಡವೂ ನಮ್ಮ ಬಳಿ ಬರುತ್ತದೆ. ಅದನ್ನು ಎದುರಿಸುವುದೂ ನಮ್ಮ ಕೈಯಲ್ಲೇ ಇದೆ ಎಂದುಕೊಳ್ಳುವುದು. ಇದು ನಮ್ಮ ಸಾಮರ್ಥ್ಯ ಹೆಚ್ಚಿಸುವ ಒಂದು ದಾರಿಯಾಗಿಯೂ ತೆರೆದುಕೊಳ್ಳಬಹುದು. ಹಾಗೆಯೇ ನಮ್ಮನ್ನು ಗಟ್ಟಿಗೊಳಿಸಬಹುದು. ನಾನೂ ಅಷ್ಟೆ. ಒತ್ತಡವೆನಿಸಿದಾಗ, ಏಕೆ ಹೀಗಾಯಿತು ಎಂದು ಹಲುಬುತ್ತಾ ಕೂರುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಪರಿಹಾರಕ್ಕಾಗಿ ಪ್ರಯತ್ನ ಪಡುತ್ತೇನೆ. ನಮ್ಮ ಗಟ್ಟಿತನದ ಪರೀಕ್ಷೆ ನಡೆಯುವುದೂ ಈ ಸಮಯದಲ್ಲೇ.

ಎರಡನೆಯದು ಪ್ರಾಯೋಗಿಕತೆ. ಅಂದರೆ, ‘ಒತ್ತಡ ಮನುಷ್ಯನಿಗೆ ಬರದೇ ಮತ್ತಾವ ಪ್ರಾಣಿಗೆ ಬರುತ್ತದೆ’ ಎಂದುಕೊಂಡು ಬಂದ ಒತ್ತಡವನ್ನು ನಿಭಾಯಿಸಲು ಕಲಿಯುವುದು.

ಒತ್ತಡವನ್ನು ತಂದುಕೊಳ್ಳುವುದು ನಾವೇ ಆಗಿರುತ್ತೇವೆ. ಉದಾಹರಣೆಗೆ, ಕಾಲುನೋವು ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷಿಸಿ, ಪರಿಸ್ಥಿತಿ ಮಿತಿ ಮೀರಿದಾಗ ಯೋಚಿಸಿದರೆ ಏನು ಪ್ರಯೋಜನ? ನೋವು ಹೆಚ್ಚಾದಾಗ ಒತ್ತಡವೂ ಹೆಚ್ಚಾಗುತ್ತದೆ. ಇದು ಎಲ್ಲಾ ಕೆಲಸಕ್ಕೂ ಅನ್ವಯಿಸುತ್ತದೆ. ಆರಂಭದಲ್ಲೇ ಸರಿಯಿದ್ದರೆ ಎಲ್ಲವೂ ಸಹಜವಾಗೇ ನಡೆಯುತ್ತದೆ. ಅಸಹಜವಾದರೂ ತೊಂದರೆಯಿಲ್ಲ. ಪರಿಸ್ಥಿತಿಗಳು ಅನುಭವಗಳಾಗುತ್ತವೆ ಅಷ್ಟೆ.

ಎಂಥ ಮನುಷ್ಯನಿಗೂ ನೋವು ಜಾಸ್ತಿಯಾದಷ್ಟು ಬುದ್ಧಿವಂತಿಕೆ, ಪ್ರಬುದ್ಧತೆಯೂ ಬರುತ್ತದೆ. ಒತ್ತಡವನ್ನು ತೆಗೆದುಕೊಳ್ಳುವ ಶಕ್ತಿ ನಿಮ್ಮಲ್ಲಿರುತ್ತದೆ. ಅದನ್ನು ಕಂಡುಕೊಳ್ಳುವಲ್ಲಿ ಸೋಲುತ್ತೇವೆ.

ಚಿತ್ರರಂಗದಲ್ಲೂ ಅಷ್ಟೆ. ಒತ್ತಡ ಸಹಜ. ಅಲ್ಲಿ ದಿನವೂ ಕಲಿಕೆಯಿರುತ್ತದೆ. ಹೊಸತನ್ನು ಮಾಡಬೇಕೆನ್ನುವ ಒತ್ತಡ. ‘ಅಮೆರಿಕ ಅಮೆರಿಕ’ ಸಿನಿಮಾ ನಂತರ ನಾನು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆ ಸಿನಿಮಾದಿಂದ ನನಗೆ ತುಂಬಾ ಜನಪ್ರಿಯತೆ ಸಿಕ್ಕಿತು. ನಂತರ ಅವಕಾಶಗಳು ಬಂದರು, ಕೆಲವು ಕಾರಣಗಳು ಚಿತ್ರರಂಗದಿಂದ ದೂರವುಳಿಸಿದವು. ಜನಪ್ರಿಯತೆಯೂ ಒತ್ತಡವನ್ನೂ ತರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಆದರೆ ನೃತ್ಯ ನನಗೆ ಬದಲಿ ಅವಕಾಶವಾಗಿತ್ತು. ಚಿತ್ರರಂಗವೇ ಜೀವನ ಎಂದಿರಲಿಲ್ಲ. ನೃತ್ಯ ನನ್ನ ಆದ್ಯತೆ.

ಎಲ್ಲಾ ಕ್ಷೇತ್ರಗಳಂತೆ ಇಲ್ಲೂ ಒತ್ತಡಗಳಿವೆ. ದಿನೇ ದಿನೇ ಅಪ್‍ಡೇಟ್ ಆಗಲಿಲ್ಲ ಎಂದರೆ ಒತ್ತಡಗಳು ಎದುರಾಗುತ್ತವೆ. ಹಳೆಯದ್ದು ಎಂದು ಅದನ್ನೇ ಹಿಡಿದು ಕೂತರೆ ಆಗುವುದಿಲ್ಲ. ಪ್ರತಿದಿನವೂ ಸೃಷ್ಟಿಸಬೇಕು. ಪ್ರತಿದಿನವೂ ಹೊಸತನ್ನು ಕಲಿಯುತ್ತಲೇ ಇರಬೇಕು. ನೃತ್ಯ ಎನ್ನುವುದು ಐಟಿ ಕ್ಷೇತ್ರದಂತೆ. ನಿನ್ನೆ ಮಾಡಿದ್ದನ್ನು ಇಂದು ಮಾಡಿದರೆ, ‘ನಿನ್ನೆಯೇ ಇದನ್ನು ಮಾಡಿದ್ದೀಯಲ್ಲ’ ಎಂದು ಅಸಡ್ಡೆ ತೋರುತ್ತಾರೆ. ಆದ್ದರಿಂದ ಸೃಷ್ಟಿಸುವುದು ತುಂಬಾ ಒತ್ತಡದ ಕೆಲಸ. ಆದರೆ ನನಗೆ ಆ ಒತ್ತಡ ತೆಗೆದುಕೊಳ್ಳಲು ಇಷ್ಟ. ಅದು ಕ್ರಿಯಾಶೀಲ ಒತ್ತಡ. ಒತ್ತಡವನ್ನು ಧನಾತ್ಮಕವಾಗಿ ತೆಗೆದುಕೊಳ್ಳುವುದರಲ್ಲೇ ಅಲ್ಲವೇ ಯಶಸ್ಸು ಅಡಗಿರುವುದು? ಆದ್ದರಿಂದ ಬಿಡದೇ ಹೋರಾಡಬೇಕು.

ಈ ವಿಷಯದಲ್ಲಿ ಜೇಡ ನನಗೆ ಸ್ಫೂರ್ತಿ. ಅದು ಬಿಟ್ಟುಕೊಡಲ್ಲ. ಸೋತೆ, ಸೋತೆ, ಆದರೂ ಗೆಲ್ಲುತ್ತೇನೆ ಎಂದು ಪ್ರಯತ್ನಪಡುತ್ತಲೇ ಇರುತ್ತದೆ. ಇದು ಒತ್ತಡವನ್ನು ನಿಭಾಯಿಸುವ ಒಂದು ಕಲೆ.

ಹೀಗೆ ಒಮ್ಮೆ ಆಡಿಷನ್ ಒಂದಕ್ಕೆ ಹೋಗಿದ್ದೆ. ನನಗೆ ಫೋಟೊಜೆನಿಕ್ ಫೇಸ್ ಇಲ್ಲ ಎಂದು ಹೇಳಿ ವಾಪಾಸ್ಸು ಕಳಿಸಿದರು. ಒತ್ತಡ ಅನ್ನಿಸಿತ್ತು. ಆ ಕ್ಷಣಕ್ಕೆ ಸುಮ್ಮನೆ ಇದ್ದುಬಿಟ್ಟೆ. 6 ತಿಂಗಳ ಒಳಗೆ ಮತ್ತೆ ಕರೆದರು. ಆಗ ಒಂದು ಸಿನಿಮಾ ಮಾಡಿದ್ದೆ. ಅದು ಹೇಗೆ ಫೋಟೊಜೆನಿಕ್ ಫೇಸ್ ಬಂತು ಈಗ ಎಂದೂ ಕೇಳಿದೆ. ಹೀಗೆ ಒತ್ತಡವನ್ನೇ ಸವಾಲಾಗಿ ತೆಗೆದುಕೊಂಡು ಕೆಲಸ ಮಾಡುತ್ತೇನೆ.

ಇವೆಲ್ಲಾ ಮೀರಿಯೂ ಒತ್ತಡಗಳು ಬರುತ್ತವೆ. ನನಗೆ ಒತ್ತಡ ಕಾಡಿದಾಗ ಮನಸ್ಸು ತುಡಿಯುವುದು ನೃತ್ಯಕ್ಕೆ. ಒತ್ತಡ ಬಂದಾಗ ಡಾನ್ಸ್ ಮಾಡುತ್ತೇನೆ ಅಷ್ಟೆ. ನನಗೆ ಖುಷಿ ಕೊಡುವುದು ನೃತ್ಯ. ಸಂತೋಷ ಆದರೂ, ದುಃಖ ಆದರೂ ನನ್ನ ಮೊದಲ ಆಯ್ಕೆ ನೃತ್ಯವೇ ಆಗಿರುತ್ತದೆ. ನೃತ್ಯ ಮಾಡುತ್ತಿದ್ದರೆ ಎಲ್ಲವನ್ನೂ ಮರೆತುಬಿಡುತ್ತೇನೆ. 5 ನಿಮಿಷ, 10 ನಿಮಿಷ, 15 ನಿಮಿಷ ಹೀಗೆ ನನಗೆ ಆರಾಮ ಎನ್ನಿಸುವವರೆಗೂ ನೃತ್ಯ ಮಾಡುತ್ತೇನೆ. ನನ್ನ ಒತ್ತಡಕ್ಕೆ ನೃತ್ಯವೇ ಆರೋಗ್ಯಕರ ಔಷಧ. ನೃತ್ಯ ಹೊರತುಪಡಿಸಿದರೆ, ಒತ್ತಡವಾದರೆ, ಶಾಪಿಂಗ್ ಮಾಡುತ್ತೇನೆ. ಆದರೆ ಒಬ್ಬಳೇ ಶಾಪಿಂಗ್ ಮಾಡುತ್ತೇನೆ. ಅದು ಸ್ಟ್ರೆಸ್ ಬಸ್ಟರ್.

ಇನ್ನೂ ಒಂದು ದಾರಿ ಇದೆ. ಅದು ಚಾಕೊಲೇಟ್. ಬೇಸರ ಆದಾಗ ಚೆನ್ನಾಗಿ ಚಾಕೊಲೇಟ್ ತಿಂದುಬಿಡುತ್ತೇನೆ. ಚಾಕೊಲೇಟ್ ತಿಂದು ಜಾಸ್ತಿ ಡಾನ್ಸ್ ಮಾಡುತ್ತೇನೆ. ಒತ್ತಡ ಇದೆ ಎಂದರೆ ಅದರಿಂದ ಹೊರಬರಲೂ ಸಾಧ್ಯವಿದೆ ಎಂದರ್ಥ. ಅದಕ್ಕೇ ನನಗೆ ನಾನು, ‘ನನ್ನಿಂದ ಇದು ಸಾಧ್ಯವಿದೆ’ ಎಂದು ಸದಾ ಹೇಳಿಕೊಳ್ಳುತ್ತಲೇ ಇರುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry