7

ಸ್ವಾತಂತ್ರ್ಯ ಎಂಬ ಪರಿಕಲ್ಪನೆಯ ಸುತ್ತ...

Published:
Updated:
ಸ್ವಾತಂತ್ರ್ಯ ಎಂಬ ಪರಿಕಲ್ಪನೆಯ ಸುತ್ತ...

* ರಾಜಾರಾಮ ತೋಳ್ಪಾಡಿ / ನಿತ್ಯಾನಂದ ಬಿ ಶೆಟ್ಟಿ

ಸ್ವತಂತ್ರ ಭಾರತಕ್ಕೆ ಈಗ ಎಪ್ಪತ್ತರ ಹರೆಯ. ಸುದೀರ್ಘ ವಯಸ್ಸಿನ ಈ ದೇಶದ ನಾಗರಿಕರಾಗಿರುವ ನಾವು, ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಯ ಕುರಿತು ಆಳವಾಗಿ ಯೋಚಿಸಿದ್ದು ಕಡಿಮೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಸ್ವಾತಂತ್ರ್ಯ ಎಂಬ ಯೋಚನೆಯ ಬಗ್ಗೆ ನಡೆದಷ್ಟು ಬೌದ್ಧಿಕ ಚಿಂತನೆ ನಮ್ಮಲ್ಲಿ ನಡೆದಿಲ್ಲ. ಹಾಗಾಗಿ ಸ್ವಾತಂತ್ರ್ಯದ ಬಗ್ಗೆ ಪಶ್ಚಿಮದಲ್ಲಿ ಬಂದಿರುವ ಹಲವು ಬಗೆಯ ಚಿಂತನೆಗಳಲ್ಲಿ ನಮಗೆ ಆಸಕ್ತಿದಾಯಕವೆಂದು ಅನ್ನಿಸಿದ ಇಬ್ಬರು ಚಿಂತಕರ ಚಿಂತನೆಗಳಲ್ಲಿರುವ ಭಿನ್ನ ಆಯಾಮಗಳನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ.

ಸ್ವಾತಂತ್ರ್ಯಕ್ಕಾಗಿ ಹಂಬಲಿಸುವುದು, ಸ್ವಾತಂತ್ರ್ಯವನ್ನು ಪಡೆಯುವುದು ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಮನುಷ್ಯ ಸಮಾಜದ ಪ್ರಮುಖ ಸಮಸ್ಯೆಗಳಲ್ಲಿ ಒಂದು. ನಾಗರಿಕಗೊಳ್ಳುವ ತನ್ನ ನಡಿಗೆಯಲ್ಲಿ ಮನುಷ್ಯ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದಾನೆ ಮತ್ತು ಅದನ್ನು ಪಡೆಯಲು ಅಪರಿಮಿತವಾದ ಕಷ್ಟನಷ್ಟಗಳನ್ನು ಅನುಭವಿಸಿದ್ದಾನೆ. ಈ ಸಾಮಾಜಿಕ ಅನುಭವವನ್ನು ಹೊಂದಿರುವ ಪಶ್ಚಿಮದ ಸಮಾಜಗಳಲ್ಲಿ ಸಹಜವಾಗಿಯೇ ಸ್ವಾತಂತ್ರ್ಯದ ಕುರಿತು ಅನೇಕ ತತ್ವಜ್ಞಾನಿಗಳು ಗಂಭೀರವಾಗಿ ಚರ್ಚಿಸಿದ್ದಾರೆ. ಅವರು ಸ್ವಾತಂತ್ರ್ಯದ ಕುರಿತು ಕೆಲವು ಮುಖ್ಯವಾದ ಮಾತುಗಳನ್ನೂ ಹೇಳಿದ್ದಾರೆ. ಮೊದಲಿಗೆ ಅವುಗಳನ್ನು ಗಮನಿಸೋಣ.ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್, ‘ಮಾನವ ಮೂಲತಃ ಒಬ್ಬ ವಿಚಾರಜೀವಿ. ಆತ ಸಹಜವಾಗಿ ಚಿಂತನೆ ನಡೆಸಬೇಕಿದ್ದರೆ ಆತನಿಗೆ ಸ್ವಾತಂತ್ರ್ಯ ಬಹು ಮುಖ್ಯ. ಅದು ಮಾನವ ಬದುಕಿನ ಮೂಲಭೂತ ಆದ್ಯತೆಗಳಲ್ಲಿ ಒಂದು’ ಎನ್ನುತ್ತಾನೆ. ಫ್ರೆಂಚ್‌ ತತ್ವಜ್ಞಾನಿ ರೂಸೋ, ‘ಮಾನವ ಹುಟ್ಟಿನಿಂದ ಸ್ವತಂತ್ರನಾಗಿದ್ದರೂ ಬೇರೆ ಬೇರೆ ಬಗೆಯ ಸಂಕೋಲೆಗಳಿಂದ ಬಂಧಿತನಾಗಿದ್ದಾನೆ’ ಎನ್ನುತ್ತಾ ಮನುಷ್ಯ ಬದುಕಿನ ಸಂಕಟದ ಪಾಡನ್ನು ವಿವರಿಸಿದ್ದಾನೆ.ಇನ್ನೋರ್ವ ಚಿಂತಕ ಹೆಗೆಲ್, ‘ಚರಿತ್ರೆ ಸ್ವಾತಂತ್ರ್ಯ ಸಾಧನೆಯ ಮಾರ್ಗ’ ಎಂದು ಹೇಳಿದರೆ, ಕಾರ್ಲ್‌ಮಾರ್ಕ್ಸ್‌, ‘ಸಮಾಜವಾದಿ ಕ್ರಾಂತಿಯೇ ಸಂಪೂರ್ಣ ಸ್ವಾತಂತ್ರ್ಯದ ತಳಹದಿಯಾಗಿದೆ’ ಎಂದು ಭಾವಿಸುತ್ತಾನೆ. 20ನೆಯ ಶತಮಾನದ ಸಾರ್ತ್ರೆ ಸ್ವಾತಂತ್ರ್ಯದ ಅನಿವಾರ್ಯತೆಯಿಂದ ಉದ್ಭವಿಸುವ ಮಾನವನ ಅಸ್ತಿತ್ವವಾದೀ ಸಮಸ್ಯೆಗಳನ್ನು ವಿಶ್ಲೇಷಿಸಿದರೆ, ಮನೋವಿಜ್ಞಾನಿ ಎರಿಕ್ ಫ್ರಾಮ್ ಸ್ವಾತಂತ್ರ್ಯ ಮನುಷ್ಯನಿಗೆ ತಂದೊಡ್ಡುವ ಭೀತಿಯ ಬಗ್ಗೆ ಮಾತಾಡುತ್ತಾನೆ. - ಈ ಹೇಳಿಕೆಗಳು ಸ್ವಾತಂತ್ರ್ಯದ ಸ್ವರೂಪ ಹಾಗೂ ಮಹತ್ವದ ಬಗ್ಗೆ ಕೆಲವು ಒಳನೋಟಗಳನ್ನು ಕೊಟ್ಟಿವೆ.ಮೊದಲನೆಯದಾಗಿ, ಸ್ವಾತಂತ್ರ್ಯ ಅನ್ನುವುದು ಮನುಷ್ಯನಿಗೆ ಸ್ವಂತಿಕೆಯ ಹುಡುಕಾಟದ ಪರಿಕರವೂ ಹೌದು. ಅಂತೆಯೇ, ಸ್ವಂತಿಕೆಯ ಸಾಕ್ಷಾತ್ಕಾರವೂ ಹೌದು. ಎರಡನೆಯ

ದಾಗಿ, ಸ್ವಾತಂತ್ರ್ಯ ಮನುಷ್ಯನ ಮೇಲೆ ಗುರುತರವಾದ ಜವಾಬ್ದಾರಿಗಳನ್ನು ಹೊರಿಸುತ್ತದೆ. ಮನುಷ್ಯ ಮೂಲಭೂತವಾಗಿ ಒಬ್ಬ ಬುದ್ಧಿಜೀವಿಯಾಗಿರುವುದರಿಂದ ಆತನ ಬಾಳ್ವೆಗೆ ಬೇಕಾದ ಬೆಳಕನ್ನು ಕಂಡುಕೊಳ್ಳುವ ಜವಾಬ್ದಾರಿಯನ್ನು ಸ್ವಾತಂತ್ರ್ಯ ಅವನಿಗೆ ಹೊರಿಸುತ್ತದೆ. ಹಾಗಾಗಿ ತಾನು ಏನು, ಏನಾಗಿದ್ದೇನೆ ಮತ್ತು ತಾನು ಏನಾಗಬೇಕು ಎನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಅನಿವಾರ್ಯತೆ ಸ್ವಾತಂತ್ರ್ಯದಿಂದಾಗಿ ಮನುಷ್ಯನಿಗೆ ಒದಗುತ್ತದೆ.ಮೂರನೆಯದಾಗಿರುವ ಆದರೆ ವಿಲಕ್ಷಣವಾಗಿರುವ ಸಂಗತಿಯೇನೆಂದರೆ ಸ್ವಾತಂತ್ರ್ಯದ ತುಡಿತವನ್ನು ಹೊಂದಿರುವ ಮನುಷ್ಯ ತನ್ನ ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂಸ್ಥೆಗಳನ್ನೂ ಸೃಷ್ಟಿಸಿಕೊಂಡಿದ್ದಾನೆ. ಪಾಶ್ಚಿಮಾತ್ಯ ಬೌದ್ಧಿಕ ಪರಂಪರೆಯ ಅನಧಿಪತ್ಯವಾದವು (ಅನಾರ್ಕಿಸಂ) ‘ಕುಟುಂಬ, ಧರ್ಮ, ಸಮಾಜ, ವರ್ಗ ಹಾಗೂ ಪ್ರಭುತ್ವಗಳು ಸ್ವಾತಂತ್ರ್ಯವನ್ನು ತಡೆಹಿಡಿಯುವ ಸಂರಚನೆಗಳು’- ಎಂದು ಪ್ರತಿಪಾದಿಸಿದೆ. ಹಾಗಿದ್ದರೂ ಮನುಷ್ಯ ಈ ಸಂಸ್ಥೆಗಳನ್ನು ಅನಿವಾರ್ಯವೆಂದು ಭಾವಿಸುತ್ತಾನೆ ಮತ್ತು ಇವುಗಳಿಂದ ಮಾತ್ರ ತನ್ನ ಕ್ಷೇಮಾಭಿವೃದ್ಧಿ ಸಾಧ್ಯ ಎಂದು ನಂಬಿದ್ದಾನೆ. ಸ್ವಾತಂತ್ರ್ಯ ಮನುಷ್ಯನ ಕ್ರಿಯೆಗಳಿಗೆ ಆತನನ್ನೇ ಹೊಣೆಯನ್ನಾಗಿಸುವುದರಿಂದ ಭೀತಿಗೊಂಡ ಆತ, ಸ್ವಾತಂತ್ರ್ಯಕ್ಕೆ ವ್ಯತಿರಿಕ್ತವಾದ ಸ್ಥಿರತೆ ಮತ್ತು ಸೌಖ್ಯಾರಾಮಗಳನ್ನು ಒದಗಿಸುವ ಸಂರಚನೆಗಳಿಗೆ ಸುಲಭವಾಗಿ ಬಲಿ ಬೀಳುತ್ತಾನೆ ಎಂದು ಅನಧಿಪತ್ಯವಾದ ವಾದಿಸುತ್ತದೆ.ಸ್ವಾತಂತ್ರ್ಯದ ಕುರಿತು ಪಶ್ಚಿಮದಲ್ಲಿ ನಡೆದ ವಾಗ್ವಾದಗಳನ್ನು ವಿಶ್ಲೇಷಿಸುವುದು ಈ ಲೇಖನದ ವ್ಯಾಪ್ತಿಗೆ ಮೀರಿದ್ದು. ಅದರ ಬದಲಿಗೆ ಸ್ವಾತಂತ್ರ್ಯದ ಪ್ರಶ್ನೆಯನ್ನೇ ಪ್ರಧಾನವಾಗಿ ಚರ್ಚಿಸಿದ ಜೆ.ಎಸ್. ಮಿಲ್ ಮತ್ತು ಇಸಾಯ್ ಬರ್ಲಿನ್ ಎಂಬ ಇಬ್ಬರು ತತ್ವಜ್ಞಾನಿಗಳ ಚಿಂತನೆಗಳನ್ನು ನಾವು ಇಲ್ಲಿ ಪರಿಶೀಲಿಸುತ್ತೇವೆ. ಮಿಲ್, ಆಧುನಿಕತೆಯ ಸಾಧನೆಗೆ ಬೀಗುವ ಲಿಬರಲ್‌ವಾದೀ ಬೌದ್ಧಿಕ ಪರಂಪರೆಯ ಪ್ರತಿಪಾದಕರಲ್ಲೊಬ್ಬ. ಈತ ತನ್ನ ‘ಆನ್ ಲಿಬರ್ಟಿ’ ಎನ್ನುವ ಕೃತಿಯಲ್ಲಿ ‘ವೈಯಕ್ತಿಕವಾದ ಸ್ವಾತಂತ್ರ್ಯ ಮಾತ್ರ ಇರಲು ಸಾಧ್ಯ. ವ್ಯಕ್ತಿ ಸ್ವಾತಂತ್ರ್ಯವೆನ್ನುವುದು ವ್ಯಕ್ತಿಯ ಸ್ವಾಯತ್ತತೆಯ, ಸ್ವಂತಿಕೆಯ ಹಾಗೂ ಅಸ್ಮಿತೆಯ ಅಭಿವ್ಯಕ್ತಿ’ ಎನ್ನುತ್ತಾನೆ. ಮಿಲ್‍ನ ಪ್ರಕಾರ ವ್ಯಕ್ತಿ, ಪ್ರಭುತ್ವಕ್ಕೆ ಎದುರಾಗಿ ಆದರೆ ಪ್ರಭುತ್ವದ ನಿಯಂತ್ರಣದ ಒಳಗೆ ತನ್ನ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಪ್ರಭುತ್ವ ವಿನಾಶಕಾರಿ ಪ್ರವೃತ್ತಿಗಳಲ್ಲಿ ತೊಡಗಿದ್ದರೂ ಅದರ ಅನುಪಸ್ಥಿತಿಯಲ್ಲಿ ವ್ಯಕ್ತಿಗೆ ಸ್ವಾತಂತ್ರ್ಯ ಸಾಧ್ಯವಿಲ್ಲ. ಹಾಗಾಗಿ ಪ್ರಭುತ್ವ ಒಂದು ‘ಅವಶ್ಯಕವಾದ ಕೆಡುಕು’ ಎನ್ನುವುದು ಮಿಲ್‍ನ ನಿಲುವು.ವ್ಯಕ್ತಿ ಸ್ವಾತಂತ್ರ್ಯದ ತನ್ನ ಪಾಂಡಿತ್ಯಪೂರ್ಣ ವಿಶ್ಲೇಷಣೆಯಲ್ಲಿ ಮಿಲ್, ವ್ಯಕ್ತಿಗೆ ಪೂರ್ಣ ಮುಕ್ತತೆ ಇರಬೇಕು ಎಂದೂ; ವ್ಯಕ್ತಿಯ ಯಾವ ಚಟುವಟಿಕೆಗಳು ಪರರನ್ನು ಬಾಧಿಸುತ್ತವೆಯೋ ಆಗ ಮಾತ್ರ ರಾಜ್ಯ, ವ್ಯಕ್ತಿಯ ಅಂತಹ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದೂ ಹೇಳುತ್ತಾನೆ. ಮನುಷ್ಯ ಚಟುವಟಿಕೆಗಳನ್ನು ವ್ಯಕ್ತಿಯ ಸ್ವಕೀಯ ಕ್ರಿಯೆಗಳು ಹಾಗೂ ಪರರನ್ನು ಬಾಧಿಸುವ ಕ್ರಿಯೆಗಳು ಎಂದು ವಿಭಜಿಸಿ ನೋಡುವ ಮಿಲ್ ‘ಸ್ವ’ಕ್ಕೆ ಸಂಬಂಧಿಸಿದ ಕ್ರಿಯೆಗಳನ್ನು ಸ್ವಾತಂತ್ರ್ಯದ ಕ್ಷೇತ್ರ ಎಂದು ಕರೆಯುತ್ತಾನೆ.

ಮಿಲ್ ಮುಖ್ಯನಾಗುವುದು ಆತ ವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಡುವ ಆದ್ಯತೆಯಿಂದಾಗಿ ಮಾತ್ರ ಅಲ್ಲ. ಬದಲಾಗಿ ಯಾವ ಯಾವ ಸಂಗತಿಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗಬಲ್ಲವು ಎಂಬುದನ್ನು ಗುರುತಿಸಿದ್ದಕ್ಕಾಗಿ ಕೂಡ. ಆತನ ಪ್ರಕಾರ ಮನುಷ್ಯರು ವ್ಯಕ್ತಿ ಸ್ವಾತಂತ್ರ್ಯವನ್ನು ಪರಿಣಾಮಕಾರಿಯಾಗಿ ಅನುಭವಿಸುವುದು ಲಿಬರಲ್ ಪ್ರಭುತ್ವದ ದಯೆಯಿಂದಲ್ಲ. ಆ ಲಿಬರಲ್ ರಾಜ್ಯಕ್ಕೆ ಅಡಿಪಾಯವಾಗಿರುವ ಮುಕ್ತಚಿಂತನೆಗಳನ್ನು ಹೊಂದಿರುವ, ವಿರೋಧವನ್ನೂ ಗೌರವದಿಂದ ಕಾಣುವ ಸಹನಶೀಲ ಸಮಾಜವೊಂದರ ಅಸ್ತಿತ್ವದಿಂದ. ಅಸಹನಶೀಲ ಸಮಾಜದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಸಾಕ್ಷಾತ್ಕಾರಗೊಳ್ಳಲು ಸಾಧ್ಯವಿಲ್ಲ. ನೂರು ಜನರಿರುವ ಸಮಾಜದಲ್ಲಿ ತೊಂಬತ್ತೊಂಬತ್ತು ಜನರು ಒಂದು ಬಗೆಯಾಗಿ ಅಭಿಪ್ರಾಯಪಟ್ಟು ಒಬ್ಬ ಮಾತ್ರ ಭಿನ್ನಬಗೆಯಲ್ಲಿ ಯೋಚಿಸಿದರೂ, ಆ ಭಿನ್ನಮತವನ್ನು ಗೌರವಿಸುವ ಸದ್ಗುಣ ಉಳಿದ ತೊಂಬತ್ತೊಂಬತ್ತು ಜನರಿಗೆ ಇದ್ದರೆ ಮಾತ್ರ ವ್ಯಕ್ತಿ ಸ್ವಾತಂತ್ರ್ಯ ಉಳಿದುಕೊಳ್ಳಬಹುದು. ಹಾಗಾಗಿ ಮಿಲ್‍ನ ಪ್ರಕಾರ ಬಹುಸಂಖ್ಯಾತರ ಜಬರ್‌ದಸ್ತಿನ ಆಳ್ವಿಕೆಯನ್ನು ಹೊಂದಿರುವ ದೇಶದಲ್ಲಿ ಸ್ವಾತಂತ್ರ್ಯ ಇರಲು ಸಾಧ್ಯವೇ ಇಲ್ಲ.ಸ್ವಾತಂತ್ರ್ಯದ ಬಗ್ಗೆ ಇಷ್ಟೇ ಪ್ರಮುಖವಾದ ಇನ್ನೊಂದು ವ್ಯಾಖ್ಯಾನ ಇಸಾಯ್ ಬರ್ಲಿನ್‍ನದ್ದು. ಬರ್ಲಿನ್ ತನ್ನ ‘ಫೋರ್ ಎಸ್ಸೇಸ್ ಆನ್ ಲಿಬರ್ಟಿ’ ಎನ್ನುವ ಕೃತಿಯಲ್ಲಿ ಸ್ವಾತಂತ್ರ್ಯದ ಜಿಜ್ಞಾಸೆಯನ್ನು ನಡೆಸಿದ್ದಾನೆ. ಬರ್ಲಿನ್, ಮಿಲ್‍ನಂತೆಯೇ ಲಿಬರಲ್‍ವಾದೀ ಬೌದ್ಧಿಕ ಪರಂಪರೆಯಿಂದ ಪ್ರಭಾವಿತನಾಗಿದ್ದರೂ ಆತ ಸ್ವಾತಂತ್ರ್ಯ ಎಂಬ ಚಿಂತನೆಯ ಅರ್ಥವಿಸ್ತಾರಕ್ಕೆ ಪ್ರಯತ್ನಿಸುತ್ತಾನೆ. ಬರ್ಲಿನ್‍ನ ಪ್ರಕಾರ ‘ಸ್ವಾತಂತ್ರ್ಯ ಎಂದರೆ ಪ್ರಭುತ್ವಕ್ಕೆ ಎದುರಾಗಿ ವ್ಯಕ್ತಿ ತನ್ನ ಪ್ರತ್ಯೇಕತೆಯಲ್ಲಿ ಪಡೆಯಬೇಕಾದ ಸಂಗತಿ. ಹಾಗೆಯೇ ಸ್ವಾತಂತ್ರ್ಯ ಎನ್ನುವುದು ಸಮುದಾಯಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆಗಳ ಮೂಲಕ ತಮ್ಮತಮ್ಮ ಸ್ವಾಯತ್ತತೆಯಲ್ಲಿ ಕಂಡುಕೊಳ್ಳುವ ನಿಜರೂಪಗಳೂ ಹೌದು’.

ಬರ್ಲಿನ್ ಹೇಳುವಂತೆ ‘ಪ್ರತಿಯೊಬ್ಬ ವ್ಯಕ್ತಿಯೂ ಒಂದು ನಿರ್ದಿಷ್ಟ ಸಾಂಸ್ಕೃತಿಕ ವಿಶ್ವದ ಪ್ರತಿನಿಧಿ. ಆತ ತಾನು ಯಾವ ಸಾಂಸ್ಕೃತಿಕ ಸನ್ನಿವೇಶದಿಂದ ಬಂದಿರುತ್ತಾನೋ ಅದರ ಎಲ್ಲ ಅಂಶಗಳನ್ನೂ ತನ್ನಲ್ಲಿ ಒಳಗೊಂಡಿರುತ್ತಾನೆ. ವ್ಯಕ್ತಿಗಳು ಹಾಗೂ ಅವರು ಪ್ರತಿನಿಧಿಸುವ ಸಾಂಸ್ಕೃತಿಕ ರೂಪಗಳು ಅವಷ್ಟಕ್ಕೇ ವಿಶಿಷ್ಟವಾದವುಗಳು. ಈ ವಿಭಿನ್ನ ಸಾಂಸ್ಕೃತಿಕ ರೂಪಗಳ ವಿಶೇಷತೆಗಳನ್ನು ಹಾಗೂ ಅನನ್ಯತೆಗಳನ್ನು ಇನ್ನೊಬ್ಬರು ಪ್ರಶ್ನಿಸುವಂತಿಲ್ಲ. ಯಾಕೆಂದರೆ ಯಾವುದೇ ಸಾಂಸ್ಕೃತಿಕ ಬದುಕಿನ ಬಗ್ಗೆ ಅದರಿಂದ ಹೊರಗಿರುವವರು ಕೊಡುವ ತೀರ್ಮಾನಗಳು ಅವರು ಯಾವ ಸಾಂಸ್ಕೃತಿಕ ಬದುಕಿನ ಹಿನ್ನೆಲೆಯಿಂದ ಬಂದಿರುತ್ತಾರೋ ಅದರಿಂದ ಬಾಧಿತವಾದವುಗಳಾಗಿರುತ್ತವೆ. ಹಾಗಾಗಿ ಒಂದು ಸಂಸ್ಕೃತಿಯನ್ನು ಇನ್ನೊಂದು ಸಂಸ್ಕೃತಿಯ ಮೌಲ್ಯಗಳ ನೆಲೆಯಿಂದ ವಿಮರ್ಶಿಸುವುದು ಅಸಮಂಜಸವಾದುದು. ಪ್ರತಿಯೊಂದು ಸಂಸ್ಕೃತಿಯೂ ತನ್ನಷ್ಟಕ್ಕೆ ತಾನೇ ಸ್ವಾಯತ್ತ ಮತ್ತು ವಿಶಿಷ್ಟ. ಅದರ ವಿಮರ್ಶೆ ಆ ಸಂಸ್ಕೃತಿಯ ಒಳಗಿನಿಂದಲೇ ನಡೆಯುತ್ತದೆ ಹಾಗೂ ನಡೆಯಬೇಕು. ಎರಡು ಭಿನ್ನ ಸಂಸ್ಕೃತಿಗಳನ್ನು ತುಲನಾತ್ಮಕವಾಗಿ ತೂಗಿ ನೋಡುವ ಯಾವುದೇ ಮಾನದಂಡಗಳು ಈ ಜಗತ್ತಿನಲ್ಲಿ ಇಲ್ಲ’ ಎಂದು ಬರ್ಲಿನ್ ಪ್ರತಿಪಾದಿಸುತ್ತಾನೆ. ಈ ಹೊಸಬಗೆಯ ಸ್ವಾತಂತ್ರ್ಯದ ಚಿಂತನೆಯನ್ನೇ ವಿದ್ವಾಂಸರು ‘ಸಾಂಸ್ಕೃತಿಕ ಸಾಪೇಕ್ಷವಾದ’ (ಕಲ್ಚರಲ್ ರಿಲೇಟಿವಿಸಮ್) ಎಂದು ಕರೆಯುತ್ತಾರೆ. ಈ ಚಿಂತನೆ ಲಿಬರಲ್ ನೆಲೆಯ ಪ್ರಜಾತಂತ್ರವಾದೀ ರಾಜಕೀಯವನ್ನು ಪ್ರೇರೇಪಿಸುತ್ತದೆ.ಸ್ವಾತಂತ್ರ್ಯದ ಕುರಿತು ಮಿಲ್ ಹಾಗೂ ಬರ್ಲಿನ್ ಮಂಡಿಸಿದ ವಿಚಾರಗಳು ಪರಿಪೂರ್ಣ ಎಂದು ವಾದಿಸುವುದು ನಮ್ಮ ಉದ್ದೇಶವಲ್ಲ. ಈ ಚಿಂತನೆಗಳಲ್ಲೂ ಮಿತಿಗಳಿವೆ. ಅದೇನಿದ್ದರೂ ಸ್ವಾತಂತ್ರ್ಯದ ಬಗೆಗಿನ ಮಹಾನ್ ಜಿಜ್ಞಾಸಾ ಪರಂಪರೆಯಲ್ಲಿ ಈ ಇಬ್ಬರ ಚಿಂತನೆಗಳು ಪಡೆದುಕೊಳ್ಳುವ ಸ್ಥಾನಮಾನಗಳನ್ನು ಯಾರೂ ನಿರಾಕರಿಸುವಂತಿಲ್ಲ.

ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯದ ಕುರಿತ ಪಶ್ಚಿಮದ ವಿದ್ವಾಂಸರ ಚಿಂತನೆಗಳನ್ನು ಯಾಕೆ ಹೇಳುತ್ತಿದ್ದೀರಿ? ನಮ್ಮಲ್ಲಿ ಇಂತಹ ಚರ್ಚೆಗಳು ನಡೆದಿಲ್ಲವೇ? ಎಂದು ಯಾರಾದರೂ ನಮ್ಮನ್ನು ಕೇಳಬಹುದು. ಹೌದು. ಈ ಪ್ರಶ್ನೆ ಸರಿಯಾದುದೇ. ಆದರೆ ಭಾರತದಲ್ಲಿ ಸ್ವಾತಂತ್ರ್ಯದ ಕುರಿತು ನಡೆದ ಜಿಜ್ಞಾಸೆ ಸ್ವಲ್ಪ ವಿಭಿನ್ನ ಪ್ರಕೃತಿಯದ್ದು. ಅದು ಪಶ್ಚಿಮದ ವಸಾಹತುಶಾಹಿ ನಡುಪ್ರವೇಶದಿಂದ ನಮ್ಮೊಳಗೆ ಅಂಕುಡೊಂಕಾಗಿ ಬಂದ ಆಧುನಿಕತೆಗೆ ಪ್ರತಿಕ್ರಿಯಾತ್ಮಕವಾಗಿ ಬಂದದ್ದು. ಅಂದರೆ ನಮ್ಮಲ್ಲಿನ ಸ್ವಾತಂತ್ರ್ಯದ ಸಂಕಥನ ವಸಾಹತುಶಾಹೀ ಆಧುನಿಕತೆಯ ನಿರ್ದಿಷ್ಟ ಚಾರಿತ್ರಿಕತೆಯಲ್ಲಿ ಸ್ಪುಟಗೊಂಡದ್ದು. ಹಾಗಾಗಿ, ಭಾರತದಲ್ಲಿನ ಸ್ವಾತಂತ್ರ್ಯದ ಜಿಜ್ಞಾಸೆಗಳಿಗೆ ಅವುಗಳದ್ದೇ ಆದ ನಿರ್ದಿಷ್ಟತೆ ಮತ್ತು ವಿಶಿಷ್ಟತೆಗಳಿವೆ.

ಸ್ವಾತಂತ್ರ್ಯದ ಕುರಿತು ನಮ್ಮಲ್ಲಿ ನಡೆದ ವಾಗ್ವಾದದ ಒಂದು ಮಹತ್ವದ ಅಧ್ಯಾಯ ಗಾಂಧೀಜಿಯವರ ಚಿಂತನೆಯಲ್ಲಿದೆ. ಗಾಂಧಿಗೆ ಸ್ವಾತಂತ್ರ್ಯವೇ ಸ್ವರಾಜ್ಯ ಅಥವಾ ಸ್ವರಾಜ್ಯವೇ ಸ್ವಾತಂತ್ರ್ಯ. ಈ ಸ್ವಾತಂತ್ರ್ಯ ಅಥವಾ ಸ್ವರಾಜ್ಯ ಹೊರಗಿನ ಸಂಸ್ಥೆ-ಸಂರಚನೆಗಳಿಂದ ರೂಪುಗೊಳ್ಳುವುದಿಲ್ಲ. ಬದಲಿಗೆ ವ್ಯಕ್ತಿಯ ಒಳಗಿನ ನೈತಿಕ ಸಂವೇದನಾಶೀಲತೆಯಿಂದ ನಿಯಂತ್ರಣಗೊಳ್ಳುತ್ತದೆ. ಸ್ವರಾಜ್ಯವನ್ನು ಸ್ವ-ನಿಯಂತ್ರಣವೆಂದು ಕರೆಯುವ ಗಾಂಧಿ, ಈ ಸ್ವ-ನಿಯಂತ್ರಣಗಳ ಇತಿಮಿತಿಯಲ್ಲಿ ಸ್ವರಾಜ್ಯವನ್ನು ಗುರುತಿಸುತ್ತಾರೆ. ಈ ಅರ್ಥದಲ್ಲಿ ರಾಜ್ಯ, ಕಾನೂನು, ನಾಗರಿಕ ಸಮಾಜ ಮೊದಲಾದ ಬಾಹ್ಯ ವಿದ್ಯಮಾನಗಳಿಂದ ರೂಪುಗೊಳ್ಳುವ ಪಾಶ್ಚಾತ್ಯರ ಸ್ವಾತಂತ್ರ್ಯದ ಪರಿಕಲ್ಪನೆಗೂ, ಗಾಂಧೀಜಿಯವರಿಂದ ರೂಪುಗೊಳ್ಳುವ ನೀತ್ಯಾತ್ಮಕ ಸ್ವರಾಜ್ಯದ ಪರಿಕಲ್ಪನೆಗೂ ಮಹತ್ವದ ವ್ಯತ್ಯಾಸವಿದೆ.ಆದರೆ ಇಂದಿನ ಜಾಗತೀಕರಣ ಮತ್ತು ರಾಷ್ಟ್ರಪ್ರಭುತ್ವ, ಮನುಷ್ಯನನ್ನು ಯಃಕಶ್ಚಿತ್ ಅನುಭೋಗ ಜೀವಿಯಾಗಿ ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದ ಅನುಮಾನಾಸ್ಪದ ನಾಗರಿಕನಾಗಿ ಕಾಣುತ್ತಿರುವ ಸನ್ನಿವೇಶದಲ್ಲಿ ಸ್ವಾತಂತ್ರ್ಯಕ್ಕೆ ಬಂದಿರುವ ಬಿಕ್ಕಟ್ಟನ್ನು ವಿವರಿಸಲು ಮಿಲ್ ಮತ್ತು ಬರ್ಲಿನ್‍ನಂಥ ಚಿಂತಕರು ನಮ್ಮ ನೆರವಿಗೆ ಹೆಚ್ಚು ಬರಲಾರರು. ಅನ್ಯರ ಹತೋಟಿಯೇ ಕಾಲಧರ್ಮವಾಗಿರುವ ಇಂದಿನ ನಮ್ಮ ನಾಗರಿಕ ಸಮಾಜದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಮನುಷ್ಯರ ನಡೆ-ನುಡಿಗಳನ್ನು ನಿಯಂತ್ರಿಸುತ್ತಿವೆ. ಅದರ ವ್ಯಕ್ತರೂಪಗಳಾಗಿರುವ ಬಯೋಮೆಟ್ರಿಕ್, ಆಧಾರ್‌ ಕಾರ್ಡ್‌, ಸಿಸಿ ಟಿ.ವಿ ಕ್ಯಾಮೆರಾಗಳು ಮನುಷ್ಯರನ್ನು ನಾಗರಿಕಗೊಳಿಸುತ್ತವೆ ಎಂದು ಪ್ರಭುತ್ವ ನಮ್ಮನ್ನು ನಂಬಿಸಿದೆ. ಇವುಗಳನ್ನು ನಂಬುವ ರಭಸದಲ್ಲಿ, ನಮ್ಮ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತಿದ್ದೇವೆಯೋ ಎಂಬುದರ ಕುರಿತು ನಾವು ಯೋಚಿಸುತ್ತಿಲ್ಲ. ಈ ಎಲೆಕ್ಟ್ರಾನಿಕ್ ವಸ್ತುವಿಶೇಷಗಳು ನಮ್ಮ ಸ್ವಾತಂತ್ರ್ಯವನ್ನು ಹರಣಗೊಳಿಸುತ್ತವೆ ಎಂದರೆ ಅದು ದೇಶದ್ರೋಹವೂ ಆಗಬಹುದಾದ ಒಂದು ಬಿಕ್ಕಟ್ಟನ್ನು ನಾಗರಿಕ ಸಮಾಜ ಎದುರಿಸುತ್ತಿದೆ. ವ್ಯಕ್ತಿಗೆ ಸಮಸ್ಯೆಯೂ ಪ್ರಭುತ್ವಕ್ಕೆ ಪರಿಹಾರವೂ ಆಗಿರುವ ಈ ಆಧುನಿಕ ನಿಯಂತ್ರಣಾ ವ್ಯವಸ್ಥೆಯಲ್ಲಿ ಮನುಷ್ಯ ಸ್ವಾತಂತ್ರ್ಯದ ಪ್ರಶ್ನೆ ಮತ್ತು ಮನುಷ್ಯ ನಾಗರಿಕತೆಯ ಪ್ರಶ್ನೆ ಇನ್ನಷ್ಟು ಜಟಿಲವಾಗಿದೆ.

(ಲೇಖಕರು: ಅನುಕ್ರಮವಾಗಿ ಮಂಗಳೂರು ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry