ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಲಿ’ ಇಲ್ಲದ ಬೆಂಗಳೂರಲ್ಲಿ ಬೋಂಡಾ ತಿಂದ ವಿನಯ್‌

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿದರೂ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದೀರಿ.

ನಾನು ಹಾಸ್ಯ ನಟನಾಗಿ ಅಭಿನಯಿಸಿದ ಎಲ್ಲಾ ಸಿನಿಮಾಗಳಲ್ಲೂ ಹಾಸ್ಯಪಾತ್ರ ಬರೀ ಪಾತ್ರವಷ್ಟೇ ಅಲ್ಲ. ಅಲ್ಲಿ ಆ ಪಾತ್ರ ಗಂಭೀರವಾಗಿರುತ್ತದೆ.  ಸಿನಿಮಾ ನಟ ಹಾಸ್ಯ ಪಾತ್ರ, ಪೋಷಕ ಪಾತ್ರ ಎಂದು ಹಿಂಜರಿಯಬಾರದು. ಅದು ಸಿನಿಮಾದ ಒಂದು ಭಾಗ. ಆ ಪಾತ್ರಕ್ಕೆ ತಕ್ಕಂತೆ ನಟಿಸಬೇಕು. ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ನಾನು ಇಷ್ಟಪಡುವುದಿಲ್ಲ. ವಿಭಿನ್ನ ಪಾತ್ರಗಳಲ್ಲಿ ನಟಿಸಲು ನನಗಿಷ್ಟ. ಇಲ್ಲಿತನಕ ನಟನೆಗೆ ಹೆಚ್ಚು ಅವಕಾಶ ಇರುವ ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬಂದಿವೆ.

* ನಿಮ್ಮ ಸಿನಿ ಬದುಕಿನ ಬಗ್ಗೆ ಹೇಳಿ.

ನಾನೊಬ್ಬ ಸಾಮಾನ್ಯ ನಟ. ನಾಯಕ, ಹಾಸ್ಯ, ಪೋಷಕ ಹೀಗೆ ಎಲ್ಲಾ ಪಾತ್ರಗಳಲ್ಲಿ ನಟಿಸಿದ್ದೇನೆ. 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಂದಕ್ಕೊಂದು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಮಲಯಾಳಂ ಸಿನಿಮಾಗಳಲ್ಲಿ ನಾಯಕ, ವಿಲನ್‌ ಹೀಗೆ ಒಂದು ಸೀಮಿತ ಚೌಕ್ಕಟ್ಟು ಇಲ್ಲ. ಅಂತಹ ಆರೋಗ್ಯಕರ ವಾತಾವರಣ ಮಲಯಾಳಂನಲ್ಲಿದೆ.

* ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ನಿಮ್ಮ ಚಿತ್ರಗಳ ಬಗ್ಗೆ...
‘ಕಿಸ್ಮತ್‌’ನಲ್ಲಿ ನನ್ನದು ಖಳನಾಯಕನ ಛಾಯೆ ಇರುವ ಪೊಲೀಸ್‌ ಅಧಿಕಾರಿ ಪಾತ್ರ. ‘ಗಾಡ್‌ ಸೇ’ನಲ್ಲಿ ಕುಡುಕನೊಬ್ಬ ಗಾಂಧಿ ತತ್ವವನ್ನು ತನಗರಿವಿಲ್ಲದಂತೆ ಪಾಲಿಸಿ, ಗಾಂಧಿ ಮಾರ್ಗ ಅನುಸರಿಸುವ ವ್ಯಕ್ತಿಯ ಪಾತ್ರ. ಈ ಸಿನಿಮಾಗಳು ಕಮರ್ಷಿಯಲ್‌ ಸಿನಿಮಾಗಳು. ಆದ್ರೆ ಕಲಾತ್ಮಕ ಚಿತ್ರದ ಚೌಕಟ್ಟಿನಲ್ಲಿಯೇ ನಿರ್ಮಾಣ ಮಾಡಲಾಗಿದೆ.

* ಈಗಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದೀರಾ?

ಸದ್ಯಕ್ಕೆ ರಂಗಭೂಮಿಯಲ್ಲಿ ನಾನು ತೊಡಗಿಸಿಕೊಂಡಿಲ್ಲ. ನಟನೆಯಲ್ಲೇ ಬ್ಯುಸಿ. ಪುಣೆ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಹೋಗುವ ಮುಂಚೆ ಐದು ವರ್ಷ ರಂಗಭೂಮಿ ನಟನೆಯಲ್ಲಿ ಸಕ್ರಿಯನಾಗಿದ್ದೆ. ಕೊಚ್ಚಿಯಲ್ಲಿ ನಮ್ಮದೇ ಆದ ‘ಲೋಕಧರ್ಮಿ’ ಎಂಬ ರಂಗತಂಡವಿದೆ. ಈಗ ವಾಪಸ್‌ ರಂಗಭೂಮಿಯಲ್ಲಿ ತೊಡಗಿಸಿಕೊಂಡು ನಮ್ಮ ತಂಡದಿಂದ ಉತ್ತಮ ನಾಟಕಗಳನ್ನು ಮಾಡಿ, ದೇಶದಾದ್ಯಂತ ಪ್ರದರ್ಶನ ನೀಡಬೇಕು ಎಂಬ ಕನಸಿದೆ. ಸದ್ಯಕ್ಕೆ ಅದು ಈಡೇರಲಿದೆ. ಸಿನಿಮಾ, ರಂಗಭೂಮಿ ಎರಡೂ ನನಗೆ ಎರಡು ಕಣ್ಣುಗಳಿದ್ದಂತೆ.

* ನೀವು ಸಿನಿಮಾಗೆ ಸಹಿ ಮಾಡುವಾಗ ಪ್ರಾಮುಖ್ಯತೆ ನೀಡುವ ಅಂಶಗಳೇನು?

ನಾನು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ತಂಡ ಅಂದಾಗ ಅದರಲ್ಲಿ ಕತೆ, ನಿರ್ದೇಶನ, ಸಿನಿಮಾಟೊಗ್ರಾಫರ್‌ ಎಲ್ಲವೂ ಬರುತ್ತದೆ.

* ನಿಮ್ಮ ಶಕ್ತಿ?

ನಾನು ಪರಿಶ್ರಮ ಹಾಕುತ್ತೇನೆ. ಉತ್ತಮ ಪಾತ್ರ, ಸಿನಿಮಾಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ. ‘ಕಿಸ್ಮತ್‌’ ಚಿತ್ರಕ್ಕಾಗಿ ನಾನು  8 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೆ. ‘ಲಡ್ಡು’ ಸಿನಿಮಾಕ್ಕೆ ಸಣ್ಣಗಾಗಿದ್ದೇನೆ.

* ಅಂದ ಹಾಗೆ ‘ಲಡ್ಡು’ ಬಗ್ಗೆ ಹೇಳಿ?

ಅದು ಹಾಸ್ಯ ಚಿತ್ರ. ನಾನು ನಾಯಕ ನಟನಾಗಿ ನಟಿಸಿದ್ದೇನೆ. ಸಾಮಾನ್ಯ ವ್ಯಕ್ತಿಯೊಬ್ಬ ತಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗಲು ಪಡುವ ಪಡಿಪಾಟಲು ಚಿತ್ರದಲ್ಲಿದೆ.

* ಕನ್ನಡ ಸಿನಿಮಾ ನೋಡಿದ್ದೀರಾ?

ಲೂಸಿಯಾ, ಯೂ ಟರ್ನ್‌ ನೋಡಿದ್ದೇನೆ. ನಟಿ ಶ್ರದ್ಧಾ ಶ್ರೀನಾಥ್‌ ನನ್ನ ಆತ್ಮೀಯ ಗೆಳತಿ.

* ಫ್ಯಾಷನ್‌ ಬಗ್ಗೆ ನಿಮ್ಮ ಅಭಿಪ್ರಾಯ?

ನಟರಾಗಿರುವುದು ನಮಗೆ ಲಾಭದಾಯಕ. ನಾವು ಯಾವ ಉಡುಗೆ ತೊಟ್ಟರೂ ಏನೇ ಫ್ಯಾಷನ್‌ ಐಟಂಗಳನ್ನು ಹಾಕಿಕೊಂಡರೂ ಜನರು ಅದನ್ನು ಫ್ಯಾಷನ್‌ ಅಂದುಕೊಳ್ಳುತ್ತಾರೆ. ಫ್ಯಾಷನ್‌ ಅಂದ್ರೆ ನನಗೆ ಆ ಬಟ್ಟೆ ತೊಟ್ಟಾಗ ಕಂಫರ್ಟ್‌ ಆಗಿರಬೇಕು. ಫ್ಯಾಷನ್‌ ಯಾವತ್ತೂ ನಮಗೆ ಕಿರಿಕಿರಿಯಾಗಬಾರದು.

* ಮಲಯಾಳಂನಲ್ಲಿ ಕಲಾತ್ಮಕ ಚಿತ್ರಗಳಿಗೆ ಹೆಚ್ಚು ಬೇಡಿಕೆಯಿದೆ ಅಂತಾರೆ. ಇದು ನಿಜವೇ?

ಮಲಯಾಳಂ ಭಾಷೆಯಲ್ಲಿ ಅನೇಕ ಕಲಾತ್ಮಕ ಚಿತ್ರಗಳು ಬಿಡುಗಡೆಯಾಗಿವೆ. ಕೆಲವೊಂದು ಚಿತ್ರಗಳು ಹಿಟ್‌ ಆಗಿವೆ. ಇನ್ನು ಕೆಲವು ಪ್ರಚಾರವಿಲ್ಲದೆ ಹಾಗೇ ಮೂಲೆಗುಂಪಾಗಿದೆ. ಕಲಾತ್ಮಕ ಚಿತ್ರಗಳನ್ನು ಒಂದು ವರ್ಗದ ಜನರು ಮಾತ್ರ ವೀಕ್ಷಿಸುತ್ತಾರೆ. ಥಿಯೇಟರ್‌ಗಳಿಗೆ ಬಂದು ಕಲಾತ್ಮಕ ಸಿನಿಮಾಗಳನ್ನು ಜನರು ಹೆಚ್ಚು ನೋಡುವಂತಾಗಬೇಕು. ಆಗ ಕಮರ್ಷಿಯಲ್‌ ಚಿತ್ರದಂತೆ ಕಲಾತ್ಮಕ ಸಿನಿಮಾಗಳು ಜನರಿಗೆ ಆಪ್ತವಾಗುತ್ತವೆ.

* ಬೆಂಗಳೂರು ಹೇಗನ್ನಿಸುತ್ತಿದೆ?

ನಾನು ಅನೇಕ ಬಾರಿ ಇಲ್ಲಿ ಬಂದಿದ್ದೇನೆ. ಐಟಿ ಬಿಟಿ ವಲಯದಲ್ಲಿ ನನ್ನ ಅನೇಕ ಸ್ನೇಹಿತರು ಇಲ್ಲಿದ್ದಾರೆ. ಫ್ಯಾಷನ್‌ ಡಿಸೈನರ್‌ ಸ್ನೇಹಿತರಿದ್ದಾರೆ. ನಾನು ಬೆಂಗಳೂರಿಗೆ ಬಂದಾಗಲೆಲ್ಲಾ ಹೊಸ ಹೊಸ ತಿನಿಸು ರುಚಿ ನೋಡುತ್ತೇನೆ. ವಸಂತನಗರದ ಲೋಕಲ್‌ ಹೋಟೆಲ್‌ನಲ್ಲಿ ವಡಾ, ಬೋಂಡಾ ತಿಂದೆ. ತುಂಬಾ ರುಚಿಯಾಗಿತ್ತು. ಇನ್ನು ಏನಾದರೂ ಹೊಸ ರುಚಿ ಸವಿಯಬೇಕು. ಬೆಂಗಳೂರಿನಲ್ಲಿ ನನಗೆ ಯಾವುದಕ್ಕೂ ಬೇಲಿಗಳಿಲ್ಲ. ಹೀಗಾಗಿ ಬೆಂಗಳೂರು ನನಗಿಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT