ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನೂ ತುಳಸಿಯೂ

ಜಿಜ್ಞಾಸೆ
Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗಣೇಶನ್ನು ತುಳಸಿಯಿಂದ ಪೂಜಿಸಬಾರದು ಎನ್ನುತ್ತಾರೆ, ಹೌದೆ?
ತ್ರಿವಿಕ್ರಮ್‌, ತಿಪ್ಪಗೊಂಡನಹಳ್ಳಿ

ಹೌದು, ಗಣೇಶನಿಗೆ ತುಳಸಿಯಿಂದ ಪೂಜೆ ಮಾಡುವ ಕ್ರಮ ಇಲ್ಲ. ‘ನ ತುಲಸ್ಯಾ ಗಣೇಶ್ವರಮ್‌’ ಎನ್ನುವ ಶಾಸ್ತ್ರದ ಮಾತಿದೆ. ಹೀಗೆಯೇ ಗರಿಕೆಯಿಂದ ದುರ್ಗೆಯನ್ನೂ, ಕೇದಗೆಯಿಂದ ಶಿವನನ್ನೂ ಪೂಜಿಸಬಾರದೆಂಬ ವಿಧಿಯಿದೆ. ಆದರೆ ಗಣೇಶನ ಇಪ್ಪತ್ತೊಂದು ಹೆಸರುಗಳನ್ನು ಹೇಳಿ ಪತ್ರಪೂಜೆಯನ್ನು ಮಾಡುವಾಗ ತುಳಸಿಯಿಂದಲೂ ಅರ್ಚಿಸುವ ಕ್ರಮ ಉಂಟು.

ಯಾವ ದೇವರನ್ನು ಯಾವ ಹೂವಿನಿಂದ ಮತ್ತು ಯಾವ ಕ್ರಮದಿಂದ ಪೂಜಿಸಬೇಕು ಎನ್ನುವುದು ಸಂಪ್ರದಾಯದಲ್ಲಿ ಹಲವು ಕಾರಣಗಳಿಂದ ಸಾವಿರಾರು ವರ್ಷಗಳಿಂದ ರೂಢಿಗೆ ಬಂದಿರುತ್ತದೆ. ಹೀಗಿರುವಾಗ ನಾವು ಹಟಕ್ಕೆ ಬಿದ್ದವರಂತೆ ಕ್ರಮವನ್ನು ಬಿಟ್ಟು ಪೂಜಿಸುವುದರಿಂದ ಏನನ್ನು ಪಡೆಯುತ್ತೇವೆ ಎನ್ನುವುದನ್ನು ಯೋಚಿಸಬೇಕು. ನಮಗಿರುವ ಸ್ವಾತಂತ್ರ್ಯದ ಮರ್ಯಾದೆಯನ್ನು ನಾವೇ ಕಳೆಯಬಾರದಲ್ಲವೆ? ಒಂದೊಂದು ಆಟಕ್ಕೂ ಒಂದೊಂದು ವಿಧದ ನಿಯಮಗಳಿರುತ್ತವೆ. ಆ ಪ್ರಕಾರ ಆಡಿದರಷ್ಟೆ ಆಟದ ಸೊಗಸು.  ಉದಾಹರಣೆಗೆ, ಕ್ರಿಕೆಟ್‌. ಏಕದಿನ ಕ್ರಿಕೆಟ್‌ ಪಂದ್ಯಕ್ಕೂ ಟೆಸ್ಟ್‌ ಮ್ಯಾಚಿಗೂ ಟ್ವೆಂಟಿ–ಟ್ವೆಂಟಿಗೂ ವ್ಯತ್ಯಾಸ ಇರುವುದಿಲ್ಲವೆ? ಅಂತೆಯೇ ಪ್ರತಿ ವ್ರತಾಚರಣೆಗೂ ದೇವತಾಪೂಜೆಗೂ ಕೆಲವೊಂದು ನಿಯಮಗಳಿರುತ್ತವೆ. ಅವನ್ನು ಪಾಲಿಸುವುದರಲ್ಲಿಯೇ ಪೂಜೆಯ ಸಾರ್ಥಕತೆ.

ಹೀಗೆಂದು ‘ಅದು ಶ್ರೇಷ್ಠ, ಇದು ಕನಿಷ್ಠ’ ಎಂದು ಹೊಡೆದಾಟಕ್ಕೆ ಹೋಗುವುದೂ ಸಲ್ಲದು. ಇಲ್ಲಿ ನಾವು ಗಮನಿಸಬೇಕಾದದ್ದು ಪೂಜೆಯ ನಿಜವಾದ ಆಶಯ ಏನು ಎನ್ನುವುದನ್ನು. ಈಶಾವಾಸ್ಯ ಉಪನಿಷತ್ತಿನ ಪ್ರಸಿದ್ಧವಾದ ಮಂತ್ರ ‘ಈಶಾವಾಸ್ಯಮಿದಂ ಸರ್ವಂ’. ಈ ಸೃಷ್ಟಿಯಲ್ಲಿ ಏನೆಲ್ಲ ಇದೆಯೋ ಅದೆಲ್ಲವೂ ದೇವರೇ; ಅಥವಾ ದೇವರಿಗೇ ಸೇರಿದ್ದು. ಶಿವನಾಗಲೀ ವಿಷ್ಣುವಾಗಲೀ ಗಣೇಶನಾಗಲೀ ದುರ್ಗೆಯಾಗಲೀ – ಹೆಸರಿನಿಂದ ಬೇರೆ ದೇವರೇ ಹೊರತು ದೈವತ್ವದಿಂದ ಪ್ರತ್ಯೇಕ ಅಲ್ಲ. ‘ಏಕಂ ಸತ್‌ ವಿಪ್ರಾ ಬಹುಧಾ ವದಂತಿ’ – ‘ಇರುವುದು ಒಂದೇ ಸತ್ಯ, ತಿಳಿದವರು ಅದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ’. ಈ ಮಾತಿಗೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಮನ್ನಣೆ.

ಆದುದರಿಂದ ತುಳಸಿ, ಬಿಲ್ವಪತ್ರೆ, ದೇವರು, ಪೂಜೆ, ಹೂವು – ಇವೆಲ್ಲವೂ ಕಲಹದ ವಿವರಗಳಲ್ಲ ಎನ್ನುವುದನ್ನು ನೆನಪಿಡಬೇಕು. ದೇವರ ಪೂಜೆ ಮಾಡುವುದು ಮನಸ್ಸಿನ ಸಂತೋಷಕ್ಕಾಗಿ, ಸಮಾಧಾನಕ್ಕಾಗಿ ಅಲ್ಲವೆ? ಆದ ಕಾರಣ ಮನಸ್ಸನ್ನು ಉದ್ವೇಗಕ್ಕೆ ಒಳಪಡಿಸಿಕೊಂಡು ಯಾವ ಕೆಲಸವನ್ನು ಮಾಡಿದರೂ ಪ್ರಯೋಜನವಿರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT