ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ: ವಿಶ್ವರೂಪದ ಅನಂತತತ್ವ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಯಾವುದೇ ಕಾರ್ಯ ಮಾಡುವಾಗಲೂ ತೊಂದರೆಗಳು ಎದುರಾಗುವುದು ಸಹಜ. ಈ ತೊಂದರೆಗಳನ್ನು ನಿವಾರಿಸಿಕೊಳ್ಳದಿದ್ದರೆ ಆ ಕಾರ್ಯ ಮುಂದುವರೆದು, ಯಶಸ್ಸನ್ನು ಕಾಣದು. ಹೀಗೆ ಎದುರಾಗಬಹುದಾದ ಎಲ್ಲ ವಿಧದ ವಿಘ್ನಗಳನ್ನು ದೇವರಲ್ಲದೆ ಬೇರೆ ಯಾರು ತಾನೆ ಅನಾಯಾಸವಾಗಿ ಪರಿಹರಿಸಿಯಾರು? ನಮ್ಮ ಎಲ್ಲ ಸಂಕಷ್ಟಪರಂಪರೆಯನ್ನು ಕಾಪಾಡ ಬಲ್ಲ ದೇವತೆಯಾಗಿ ನಮ್ಮ ಸಂಸ್ಕೃತಿಯಲ್ಲಿ ತೋರಿಕೊಂಡ ದೇವರೇ ಗಣೇಶ.

ಗಣೇಶನಿಗೆ ಅಸಂಖ್ಯ ಹೆಸರುಗಳು; ವಿಘ್ನ ನಾಯಕ, ವಿಘ್ನನಾಶಕ, ವಿನಾಯಕ, ಗಣಪತಿ, ಲಂಬೋದರ, ಪಾರ್ವತಿತನಯ, ಏಕದಂತ, ಗಜಾನನ, ಮೂಷಿಕವಾಹನ, ಈಶಪುತ್ರ, ವಕ್ರತುಂಡ, ಗಣನಾಯಕ, ಗೌರೀಪುತ್ರ, ಮೋದಕಪ್ರಿಯ – ಹೀಗೆ ಎಷ್ಟೋ ಹೆಸರುಗಳು. ಅವನ ರೂಪಗಳೂ ಅಸಂಖ್ಯ. ಗಣಪತಿಗೆ ಆನೆಯ ಮುಖ, ಅಗಲವಾದ ಕಿವಿಗಳು; ದೊಡ್ಡ ಹೊಟ್ಟೆ; ಇಲಿಯನ್ನು ವಾಹನ ಮಾಡಿಕೊಂಡ ದಪ್ಪ ದೇಹದವನು ಅವನು. ಹೀಗೆ ಅವನ ಆಕಾರ ಮೇಲ್ನೋಟಕ್ಕೆ ಅಸಹಜ ಎನ್ನುವಂತಿದೆ, ದಿಟ. ಆದರೆ ಈ ವಿವರಗಳಿಂದ ‘ಸೃಷ್ಟಿ’ಯಾಗುವ ಅವನ ರೂಪಗಳು ಅನಂತ. ಯಾವುದೇ ರೇಖೆ, ಯಾವುದೇ ನೋಟ, ಯಾವುದೇ ಆಕಾರವೂ ಗಣಪತಿಯಾಗಿ ಕಾಣಲು ಸಾಧ್ಯ.

ಎಲೆಯ ಸುರುಳಿ, ಹೂವಿನ ಎಸಳು, ಮಣ್ಣಿನ ಮುದ್ದೆ, ಕಲ್ಲಿನ ಮಾಟ, ನೀರಿನ ಅಲೆ, ಕಬ್ಬಿನ ಜಲ್ಲೆ, ಹುಲ್ಲಿನ ಚಿಗುರು, ಹಣ್ಣಿನ ಮೈ, ಆನೆಯ ಸೊಂಡಿಲು  – ಹೀಗೆ ಪ್ರಕೃತಿಯ ರೂಪಗಳೆಲ್ಲವೂ ಯಾವುದೋ ಒಂದು ಪಾರ್ಶ್ವದಲ್ಲಿ ಗಣೇಶನಾಗಿಯೇ ತೋರುವುದು. ಪ್ರಕೃತಿಯ ಸಹಜ ದೈವವೇ ಗಣೇಶ. ಪ್ರಕೃತಿಯ ಅನಂತತತ್ತ್ವಕ್ಕೆ ಸಂಕೇತವೇ ಅವನು.
ಗಣಪತಿಯ ಬಗ್ಗೆ ವೇದದಲ್ಲಿಯೇ ಉಲ್ಲೇಖ ವಿದೆ. ಗಣೇಶನ ಹೆಸರಿನಲ್ಲಿ ಪುರಾಣ–ಉಪನಿ ಷತ್ತುಗಳೂ ಇವೆ; ಅಸಂಖ್ಯ ಸ್ತೋತ್ರಗಳೂ ಕೀರ್ತನೆಗಳೂ ಇವೆ. ಗಣಪತಿಯ ಚಿತ್ರ, ಶಿಲ್ಪಗಳಿಗೂ ಕೊರತೆಯಿಲ್ಲ. ಅವನ ಆರಾಧನೆ ಕೇವಲ ನಮ್ಮ ದೇಶಕ್ಕಷ್ಟೆ ಸೀಮಿತವಾಗಿಲ್ಲ; ಸಾವಿರಾರು ವರ್ಷಗಳಿಂದ ಹತ್ತಾರು ವಿದೇಶಗಳಲ್ಲೂ ಹರಡಿದ್ದ ಅವನ ಪ್ರಭಾವಕ್ಕೆ ಸಾಕ್ಷ್ಯಗಳು ಈಗಲೂ ಇವೆಯೆನ್ನಿ.

ಗಣಪತಿಯ ಕಲ್ಪನೆಯೆಲ್ಲವೂ ಸಾಂಕೇತಿಕ ವಾದುದು. ಪುರಾಣದ ಕಲ್ಪನೆಗಳನ್ನು ಅವುಗಳ ಮೇಲ್ಪದರದ ಅರ್ಥದ ಜಾಡನ್ನು ಹಿಡಿದು ವ್ಯಾಖ್ಯಾನಿಸುವುದು ಅಪಾರ್ಥಗಳಿಗೆ ಆಹ್ವಾನವಾಗುತ್ತದೆಯಷ್ಟೆ. ಉದಾಹರಣೆಗೆ ಗಣಪತಿಯ ಹುಟ್ಟಿನ ವಿವರವನ್ನೇ ನೋಡಬಹುದು. ಪಾರ್ವತಿ–ಪರಮೇಶ್ವರರ ಪುತ್ರನೇ ಗಣಪತಿ. ಆದರೆ ಅವನು ಪಾರ್ವತಿಯ ಮೈಮಣ್ಣಿನಿಂದ ರೂಪುಗೊಂಡವನು. ಇದರ ಅರ್ಥ: ಗಣಪತಿತತ್ತ್ವ ಎನ್ನುವುದು ಕಾಮಾತೀತವೂ ಲೋಕವ್ಯವಹಾರಕ್ಕೆ ಅತೀತವೂ ಆದುದು. ಹೀಗೆ ಅವನ ಹುಟ್ಟು–ಆಕಾರ–ಪುರಾಣಕಥೆಗಳು – ಎಲ್ಲವೂ ಅಪಾರ ಸಂಕೇತಗಳಿಂದ ಕೂಡಿರುವಂಥದ್ದು. 

ಗಣಪತಿ ಬ್ರಹ್ಮಚಾರಿ; ಆದರೆ ಅವನಿಗೆ ಸಿದ್ಧಿ–ಬುದ್ಧಿ ಎಂಬ ಹೆಂಡಂದಿರು ಇಬ್ಬರಿದ್ದಾರೆ ಎಂಬ ಒಕ್ಕಣೆಯೂ ಉಂಟು. ಈ ವಿರೋಧದ ಮಾತನ್ನು ಹೇಗೆ ಅರ್ಥೈಸುವುದು? ಇಂಥ ಪರಸ್ಪರ ವಿರೋಧ ಎನಿಸುವಂಥ ಮಾತುಗಳು ಎಲ್ಲ ದೇವತೆಗಳ ಕಲ್ಪನೆಯಲ್ಲೂ ಕಾಣಲು ಸಾಧ್ಯವೆನ್ನಿ! ಪುರಾಣಲೋಕದ ಸಾಂಕೇತಿಕತೆ ನಮಗೆ ಅರಿವಾಗದಿದ್ದರೆ ನಮಗೆ ಅವುಗಳ ಅರ್ಥಸ್ವಾರಸ್ಯ ಗೊತ್ತಾಗದು. ಗಣಪತಿಯು ವಿದ್ಯೆಗೆ ಅಧಿಪತಿ.

ಕಲಿಕೆ ಮತ್ತು ಬ್ರಹ್ಮಚರ್ಯಕ್ಕೂ, ಬುದ್ಧಿ ಮತ್ತು ಸಿದ್ಧಿಗೂ ಇರುವ ನಂಟು ನಮಗೆ ಅರ್ಥವಾಗಬೇಕು; ಆಗ ಮಾತ್ರವೇ, ಬ್ರಹ್ಮಚಾರಿಯಾಗಿದ್ದೂ ಗಣಪತಿ ಹೇಗೆ ಇಬ್ಬರು ಹೆಂಡಿರನ್ನು ಪಡೆದಿದ್ದಾನೆ ಎನ್ನುವ ‘ಗುಟ್ಟು’ ರಟ್ಟಾಗಬಲ್ಲದು.

ಗಣಪತಿಯ ‘ವಿಚಿತ್ರ’ ಆಕಾರ ಪ್ರಕಟಿಸುವ ಹಲವು ಸಾಂಕೇತಿಕತೆಗಳಲ್ಲಿ ಒಂದು ಹಾಸ್ಯ. ಹೌದು, ಗಣಪತಿ ಹಾಸ್ಯರಸದ ಒಡೆಯ. ಅದು ಬೇರೊಬ್ಬರನ್ನು ಅಣಕಿಸಿ ತಾನು ಸಂತೋಷಿಸುವ ವಿಕೃತಹಾಸ್ಯವಲ್ಲ; ತನ್ನನ್ನು ತಾನೇ ಹಾಸ್ಯಕ್ಕೆ ವಸ್ತುವಾಗಿಸಿಕೊಂಡು ಎಲ್ಲರನ್ನೂ ನಗಿಸಿ, ಮನಸ್ಸನ್ನು ಹಗುರವಾಗಿಸಬಲ್ಲ ಶಾಂತಿತಂತ್ರ ಅವನದ್ದು. ಇತರರ ಅವಸ್ಥೆಯನ್ನು ಕಂಡು ಅಪಹಾಸ್ಯ ಮಾಡಿದ ಚಂದ್ರನನ್ನು ಗಣಪತಿ ಶಪಿಸಿದ ಕಥೆಯನ್ನು ಇಲ್ಲಿ ಮೆಲುಕು ಹಾಕಬಹುದು.

ಗಣಪತಿಯ ಸಂಸಾರ, ಎಂದರೆ ಶಿವನ ಕುಟುಂಬವೇ ಒಂದು ಅಪೂರ್ವ ರೂಪಕವಾಗಿದೆ. ಶಿವನ ಕೊರಳ ಹಾರ ಹಾವು; ಗಣಪತಿಯ ವಾಹನ ಇಲಿ. ಎರಡಕ್ಕೂ ವೈರ! ಪಾರ್ವತಿಯ ವಾಹನ ಸಿಂಹ; ಶಿವನ ವಾಹನ ಎತ್ತು; ಎರಡಕ್ಕೂ ವೈರ! ಶಿವ–ಪಾರ್ವತಿಯರ ಇನ್ನೊಬ್ಬ ಮಗ ಸುಬ್ರಹ್ಮಣ್ಯ. ಅವನ ವಾಹನ ನವಿಲು. ನವಿಲಿಗೂ ಹಾವಿಗೂ ವೈರ! ಇಷ್ಟೆಲ್ಲ ವೈರಗಳ ನಡುವೆಯೂ ಶಿವ–ಪಾರ್ವತಿಯರದ್ದು ಆದರ್ಶ ಕುಟುಂಬ; ಸಾಮರಸ್ಯದ ಕುಟುಂಬ. ಹೀಗೆ ಗಣಪತಿಯ ತಾತ್ತ್ವಿಕತೆಗೆ ಹಲವು ಆಯಾಮಗಳು ಅನಾವರಣವಾಗುತ್ತಲೇ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT