ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಚಳವಳಿಗಳ ಪೂರ್ವೋತ್ತರ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಡಾ. ರವಿಕುಮಾರ್ ಬಾಗಿ ಅವರು ಕರ್ನಾಟಕದ ಸಾಂಸ್ಕೃತಿಕ ಜಾಥಾಗಳು ಮತ್ತು ಸಾಮಾಜಿಕ ಚಳವಳಿಗಳು ಎಂಬ ವಿಷಯದ ಕುರಿತಾದ ತಮ್ಮ ಸಂಶೋಧನಾ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವರು ನಮ್ಮ ಸಮಾಜದ ಸಾಂಸ್ಕೃತಿಕ - ಸಾಮಾಜಿಕ ಯಾಜಮಾನ್ಯಗಳಿಗೆ ಪ್ರತಿರೋಧ ತೋರಿದ ನಾಲ್ಕು ಚಳವಳಿಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಅಧ್ಯಯನವನ್ನು ನಡೆಸಿದ್ದಾರೆ. ಅವುಗಳೆಂದರೆ: ಸಮುದಾಯ ರಂಗಭೂಮಿ ಚಳವಳಿ, ದಲಿತ ಚಳವಳಿ, ರೈತ ಚಳವಳಿ ಮತ್ತು ಕೋಮುವಾದ ವಿರೋಧಿ ಚಳವಳಿ. ಸ್ಥೂಲವಾಗಿ ಸುಮಾರು 1975ರಿಂದ 1995ರವರೆಗೆ ಹೆಚ್ಚು ಪ್ರಖರವಾಗಿದ್ದ ಈ ಚಳವಳಿಗಳು ನಂತರ ಮಂಕಾಗಿವೆ. ಅದರ ಬಗ್ಗೆ ಕೊನೆಯ ಅಧ್ಯಾಯದಲ್ಲಿ ಚಿಂತನೆಯನ್ನು ನಡೆಸಿದ್ದಾರೆ. (ಈ ಸಂಶೋಧನಾ ಪ್ರಬಂಧವನ್ನು ಬರೆಯಲ್ಪಡುವ ಕಾಲಘಟ್ಟದಲ್ಲಿ, ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿರುವ ಚಳವಳಿಗಳ ಪ್ರಭಾವ ಮತ್ತು ಪರಿಣಾಮ ಇಳಿಮುಖಗೊಂಡಿದೆ. ಹಾಗಾಗಿ ಪ್ರಭಾವಶಾಲಿ ಜಾಥಾಗಳು ಕೂಡ ಕಂಡುಬರುತ್ತಿಲ್ಲ. ಸಮುದಾಯ ರಂಗಚಟುವಟಿಕೆಗಳ ವೇದಿಕೆ, ದಲಿತ ಚಳವಳಿ, ರೈತ ಚಳವಳಿ ಮುಂತಾದ ಚಳವಳಿಗಳಲ್ಲಿ ಮೂಡಿಬಂದಿರುವ ಬಿರುಕುಗಳು ಇದಕ್ಕೆ ಮುಖ್ಯ ಕಾರಣ.)

ಜಾಥಾ ಎಂಬ ಶಬ್ದಕ್ಕೆ ಮೆರವಣಿಗೆ, ದೀರ್ಘ ನಡಿಗೆ, ಸಾಮೂಹಿಕ ನಡಿಗೆ ಎಂಬ ಅರ್ಥವನ್ನು ಹೇಳಲಾಗಿದೆ. ಡಾ. ಬಂಜಗೆರೆ ಜಯಪ್ರಕಾಶ್ ಅವರು ಮೂರು ಬಗೆಯ ಜಾಥಾಗಳನ್ನು ಗುರುತಿಸುತ್ತಾರೆ: ತಾವಿರುವ ಜಾಗದಿಂದ ಅಧಿಕಾರ ಕೇಂದ್ರಸ್ಥಾನವನ್ನು ತಲುಪಲು ಹೊರಟ ಜಾಥಾ; ಸಾಂಸ್ಕೃತಿಕವಾದ ಸಂದೇಶಗಳನ್ನು ಪ್ರಚುರಪಡಿಸಲು ನಡೆಸುವ ಜಾಥಾ ಮತ್ತು ಜನಜಾಗೃತಿಗಾಗಿ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ನಡೆಸುವ ಜಾಥಾ.

ಕರ್ನಾಟಕದಲ್ಲಿ ಸಾಮಾಜಿಕ ಚಳವಳಿಗಳ ಭಾಗವಾಗಿ ನಡೆದ ಸಾಂಸ್ಕೃತಿಕ ಜಾಥಾಗಳು ಈ ಅಧ್ಯಯನದಲ್ಲಿ ಸಾಮಾಜಿಕ ಮತ್ತು ಸಾಹಿತ್ಯಿಕ ಚಳವಳಿಗಳೇ ಆಗಿವೆ ಎಂದು ಹೇಳುವ ಬಾಗಿಯವರು ಇದಕ್ಕಾಗಿ ಡಾ. ಅಂಬೇಡ್ಕರ್, ಲೋಹಿಯಾ, ಗಾಂಧೀಜಿ, ಅಂಟೋನಿಯೋ ಗ್ರಾಮ್ಷಿ ಮುಂತಾದ ಚಿಂತಕರ ವೈಚಾರಿಕತೆಯನ್ನು ಸ್ವೀಕರಿಸಿ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಂಡಿದ್ದಾರೆ. ಸಾಮಾಜಿಕ - ಸಾಹಿತ್ಯಿಕ ಚಳವಳಿಗರಾಗಿರುತ್ತ ಈ ಚಳವಳಿಗಳು ಸಾಂಸ್ಕೃತಿಕ ಎನ್ನುವುದು ಯಾವ ಅರ್ಥದಲ್ಲಿ ಎಂದರೆ ಇನ್ನೊಂದೆಡೆ ಅವರು ಹೀಗೆ ವಿವರಿಸಿದ್ದಾರೆ: ಇಲ್ಲಿ ಸಾಂಸ್ಕೃತಿಕತೆ ಎನ್ನುವುದನ್ನು ಮನುಷ್ಯವಿರೋಧಿಯಾದ ನೆಲೆಗಳನ್ನು ಧಿಕ್ಕರಿಸಿ ಸಾಮಾಜಿಕ ಸಮಾನತೆಯನ್ನು ಸ್ಥಾಪಿಸುವ ವೈಚಾರಿಕತೆಯ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ಹೀಗಾಗಿ ಸಾಂಸ್ಕೃತಿಕತೆಯನ್ನು ಕಂಡುಕೊಳ್ಳುವುದು ಎಂದರೆ ಈಗಿರುವ ಯಾಜಮಾನ್ಯ ಮೌಲ್ಯಗಳನ್ನು ಧಿಕ್ಕರಿಸಿ, ಜಾತ್ಯತೀತ ಮೌಲ್ಯಗಳ ಹಾಗೂ ಸಮಾಜಮುಖಿ ಆಶಯಗಳ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳುವುದೇ ಆಗಿದೆ (ಪುಟ 4).

ಚಳವಳಿಗಳ ಆಶೋತ್ತರಗಳನ್ನು ಜನಸಮುದಾಯಕ್ಕೆ ತಲುಪಿಸಲು ಜಾಥಾಗಳು ನೆರವಾಗಿವೆ. ಆ ಕಾರಣಕ್ಕೆ ಇವೆರಡನ್ನು ಜತೆಯಾಗಿ ಚರ್ಚಿಸಲಾಗಿದೆ.

ಬಾಗಿಯವರ ಅಧ್ಯಯನದಲ್ಲಿ ಈ ನಾಲ್ಕು ಚಳವಳಿಗಳ ಕುರಿತು ವಿಸ್ತೃತವಾದ ಚರ್ಚೆ ಮತ್ತು ಮಾಹಿತಿಗಳಿರುವುದು ಈ ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ. ಸ್ವತಃ ಜಾಥಾಗಳಲ್ಲಿ ಭಾಗವಹಿಸಿ, ಬೀದಿ ನಾಟಕಗಳ ಮೂಲಕ ಪಡೆದುಕೊಂಡ ಗಟ್ಟಿ ಅನುಭವಗಳ ಹಿನ್ನೆಲೆಯಿರುವ ಬಾಗಿಯವರು ದಾಖಲಿಸಿರುವ ವಿಚಾರಗಳೆಲ್ಲ ಬಹಳ ಮುಖ್ಯವಾಗಿವೆ. ಇದರಿಂದ ದಶಕಗಳ ನಂತರ ಸಿಗದೆ ಹೋಗಬಹುದಾದ ದಾಖಲೆಗಳು ದಾಖಲಾಗಿರುವಂತಾಗಿದೆ. ಜತೆಗೆ ಲೇಖಕರು ವಿರೋಧಿ ನೆಲೆಗಳ ಕುರಿತು ಒಂದು ಖಚಿತವಾದ ನಿಲುವನ್ನಿಟ್ಟುಕೊಂಡೇ ಅಧ್ಯಯನ ನಡೆಸುವುದು ಅನಿವಾರ್ಯವಾಗುತ್ತದೆ. ಅಲ್ಲದೆ, ಮುನ್ನುಡಿಯಲ್ಲಿ ಡಾ. ಬಂಜಗೆರೆ ಜಯಪ್ರಕಾಶ್ ಅವರು ವಿಶ್ಲೇಷಿಸಿರುವಂತೆ ನಾವು ಈ ಚಳವಳಿಗಳ ಕಾಲಘಟ್ಟದವರಾಗಿಯೇ ಇರುವಾಗ, ಮತ್ತು ಅವುಗಳಲ್ಲಿ ಭಾಗವಹಿಸಿರುವವರು ನಮ್ಮ ನಡುವೆಯೇ ಇರುವಾಗ ಇವುಗಳ ಕುರಿತು ನೂರಕ್ಕೆ ನೂರು ನಿಷ್ಪಕ್ಷಪಾತದ ಚರ್ಚೆಗಳನ್ನು ನಿರೀಕ್ಷಿಸುವುದು ಕಷ್ಟವಾದೀತು. ಹಾಗಾಗಿ ಬಾಗಿಯವರ ಕೆಲವು ನಿಲುವುಗಳು ಹೆಚ್ಚಿನ ಚರ್ಚೆಗೆ ದಾರಿಮಾಡಿಕೊಡುವುದು ಸಹಜ.

ಈ ನಾಲ್ಕು ಚಳವಳಿಗಳನ್ನು ಒಂದು ಚೌಕಟ್ಟಿನಲ್ಲಿ ಗ್ರಹಿಸಿರುವುದು ಈ ಅಧ್ಯಯನದ ಹೆಚ್ಚುಗಾರಿಕೆ. ಈ ಕೃತಿಯ ಮೂಲಕ ಡಾ. ರವಿಕುಮಾರ್ ಬಾಗಿಯವರು ಸಾಕಷ್ಟು ಸಾಮಗ್ರಿಗಳ ಸಹಿತ ಅಧ್ಯಯನಕ್ಕೆ ಒಂದು ವಿನ್ಯಾಸವನ್ನು ರೂಪಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT