ಉಬ್ಬು ರೊಟ್ಟಿಯೂ ಪಾಪುಟ್ಟೂ..

7

ಉಬ್ಬು ರೊಟ್ಟಿಯೂ ಪಾಪುಟ್ಟೂ..

Published:
Updated:
ಉಬ್ಬು ರೊಟ್ಟಿಯೂ ಪಾಪುಟ್ಟೂ..

ಶ್ರುತಿ ಶರ್ಮಾ, ಬೆಂಗಳೂರು.

**

ತುಂಬಾ ದಿನಗಳಿಂದ ನಮಗೆ ಚಿಕ್ಕಮಗಳೂರಿಗೆ ಹೋಗಬೇಕು ಎಂಬ ಆಲೋಚನೆ ಇತ್ತು. ಹಾಗೆಯೇ ಜುಲೈ ತಿಂಗಳ ಹವಾಮಾನಕ್ಕೂ ನಮ್ಮ ಲಿಸ್ಟಿನಲ್ಲಿ ಬಹಳ ದಿನದಿಂದ ಇದ್ದ ಚಿಕ್ಕಮಗಳೂರಿಗೂ ಚೆನ್ನಾಗಿ ತಾಳೆಯಾದಾಗ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಯೋಚನೆ ಕಾರ್ಯರೂಪಕ್ಕೆ ಬರಲು ಒಂದು ಸೋಮವಾರ ರಜೆ ಹಾಕಿದ್ದೂ ಆಯಿತು. ಶನಿವಾರ ಬೆಳಗ್ಗೆಯೇ ಬೆಂಗಳೂರು ಬಿಟ್ಟ ನಾವು ಮಧ್ಯಾಹ್ನ ತಂಗಬೇಕಿದ್ದ ಸ್ಥಳ ತಲುಪಿದೆವು.

ಬೆಂಗಳೂರಿನಿಂದ ಹೊರಟು ಚಿಕ್ಕಮಗಳೂರು ತಲುಪಿ ನಮ್ಮ ವಸತಿಯತ್ತ ಸಾಗುತ್ತಿದ್ದಾಗ ಮುಂದೆಲ್ಲಾ ದಟ್ಟ ಮಂಜು, ಮಳೆ ವಾತಾವರಣವಿದ್ದು ಕಾರಿನಿಂದ ಒಂದು ಮೀಟರ್ ಮುಂದಕ್ಕೆ ಕೂಡಾ ಏನೂ ಕಾಣಿಸದಂತಹ ಸ್ಥಿತಿ. ಮಧ್ಯಾಹ್ನ ಮೂರು ಗಂಟೆ ಹೊತ್ತಿಗಿನ ಈ ವಾತಾವರಣವನ್ನು ನೋಡಿ ಒಳಗೊಳಗೆ ಭಯವಾಗಿದ್ದೂ ಹೌದು. ’ರುದ್ರ ರಮಣೀಯ’ ಎಂಬ ಪದಕ್ಕೆ ಇಂಥಾ ಕೆಲವು ಕಡೆ ಪ್ರಕೃತಿ ಸ್ಪಷ್ಟ ಉದಾಹರಣೆಯಾಗುತ್ತದೆ. ಮಂಜು ಕವಿದ ಗುಡ್ಡ ಬೆಟ್ಟಗಳ ಅತ್ಯಂತ ಕಿರಿಯ ರಸ್ತೆಯಲ್ಲಿ ವಾಹನ ಚಲಾಯಿಸುವುದು ಖುಷಿಯನ್ನೂ ತ್ರಾಸವನ್ನೂ ಒಂದೇ ಬಾರಿಗೆ ಕೊಡುತ್ತದೆ.

ಮುಂಚೆಯೇ ಕಾಯ್ದಿರಿಸಿದಂತೆ ಚಿಕ್ಕಮಗಳೂರಿನಲ್ಲಿ ಟಾಟಾ ಕಾಫಿ ಎಸ್ಟೇಟ್ ನ ಅರಬಿಡಾಕೂಲ್ ಬಂಗಲೆಯಲ್ಲಿ ನಮ್ಮ ವಾಸ್ತವ್ಯಕ್ಕೆ ಅಟ್ಟಣೆಯಾಗಿತ್ತು. ಯಾಕೆ ಈ ಸ್ಥಳದ ಹೆಸರನ್ನು ಪ್ರತ್ಯೇಕವಾಗಿ ಹೇಳಿದೆನೆಂದರೆ ಇಲ್ಲಿಯ ಸ್ಥಳ, ಉದ್ಯಾನ, ವಾಸ, ಸೌಕರ್ಯ ಇತ್ಯಾದಿ ಮುಖ್ಯವಾಗಿ ಹೇಳಬೇಕೆಂದರೆ ಹೆಚ್ಚಾಗಿ ಆಹಾರ ಅತ್ಯುತ್ತಮವೆನಿಸಿತ್ತು ನಮಗೆ. ಎಲ್ಲೇ ಹೋಗಲಿ ಅಲ್ಲಿಯ ವಿಶೇಷ ಅಡುಗೆಗಳನ್ನೇ ತಿನ್ನುವುದು, ಅಲ್ಲಿಯ ಜನರಂತೆ ಓಡಾಡುವುದು, ವಾಕ್ ಹೋಗುವುದು, ಅಲ್ಲಿ ಪ್ರಾದೇಶಿಕ ಬಸ್ ಸೌಲಭ್ಯವಿದ್ದರೆ ಅದರಲ್ಲಿ ಕಡೇ ಸ್ಟಾಪ್ ವರೆಗೆ ಟಿಕೆಟ್ ಪಡೆದು, ಎಲ್ಲಾದರೂ ಇಳಿದು ಹೋಗಿ ಅಲ್ಲೊಂದಿಷ್ಟು ಓಡಾಡಿ, ಶುಚಿಯಾಗಿದೆ ಎನಿಸಿದರೆ ಅಲ್ಲಿಯ ತಿನಿಸುಗಳನ್ನು ಸವಿಯುವುದು ನನ್ನ ಮತ್ತು ನನ್ನ ತಿಂಡಿಪ್ರಿಯನಾದ ಪತಿದೇವರ ಪ್ರಿಯ ಹವ್ಯಾಸ. ಎರಡು ತಿಂಗಳ ಹಿಂದೆ ದಕ್ಷಿಣ ಭಾರತದ ಪ್ರವಾಸೀ ಸ್ಥಳವೊಂದರಲ್ಲೇ ನಾವು ಉಳಕೊಂಡಿದ್ದ ಹೋಮ್ ಸ್ಟೇಯಲ್ಲಿ ಉತ್ತರ ಭಾರತದ ಆಲೂ ಪರಾಠ ಬೆಳಗಿನ ಉಪಾಹಾರಕ್ಕೆ ಲಭಿಸಿ ನಮಗೆ ನಿರಾಶೆಯಾಗಿದ್ದೂ ಇದೆ. ಈ ಬಾರಿ ಅಂತಹ ಯಾವುದೇ ಪ್ರಮೇಯವಿಲ್ಲದೆ ಅಪ್ಪಟ ಚಿಕ್ಕಮಗಳೂರಿನದೇ ಆದ ಆಹಾರಕ್ರಮವನ್ನು ಪರಿಚಯಿಸಿದ ಇಲ್ಲಿಯ ರೀತಿ ನಮಗೆ ತುಂಬಾ ಆಪ್ತವೆನಿಸಿತ್ತು.

ಮೇಲಾಗಿ ಚಿಕ್ಕಮಗಳೂರಿನ ಒಳ್ಳೆಯ ಹಬೆಯಾಡುವ ಕಾಫಿಯೊಂದಿಗಿನ ಸ್ವಾಗತ, ಹಿತವಾದ ಆದರಾತಿಥ್ಯ ಇನ್ನೂ ಬೆಚ್ಚಗೆ.

ಚಳಿಗೆ ನೀವು ಹಲ್ಲು ಕಡಿಯುತ್ತಿರಬೇಕಾದರೆ ಯಾರಾದರೂ ಬಿಸಿ ಬಿಸಿ, ರುಚಿಯಾದ, ಹಿತವಾದ ಅಡುಗೆ ಬಡಿಸಿದರೆ ಹೇಗಿರಬೇಡ ಹೇಳಿ! ಅಂದು ರಾತ್ರಿಯೂಟಕ್ಕೆ ಚಿಕ್ಕಮಗಳೂರು ಶೈಲಿಯ ಬಿಸಿ ಬಿಸಿ ಉಬ್ಬು ರೊಟ್ಟಿ, ಒಲೆಯಿಂದ ಆಗಷ್ಟೇ ಇಳಿಸಿದ ಅದ್ಭುತ ರುಚಿಯ ಸಿಹಿಕುಂಬಳಕಾಯಿ ಗೊಜ್ಜೊಂದು ತಯಾರಾಗಿತ್ತು. ಒಂದು ತುಂಡು ರೊಟ್ಟಿ ಮುರಿದು ಗೊಜ್ಜಿನಲ್ಲಿ ಅದ್ದಿ ಬಾಯಿಗಿಡುತ್ತಿದ್ದಂತೇ ಅದ್ಯಾವುದೋ ಲೋಕಕ್ಕೇ ಹೋಗಿ ಬಿಡುತ್ತೀರಿ. ಅಲ್ಲಿನ ಅಡುಗೆಯವರ ಕೈರುಚಿ ಅಷ್ಟು ಅದ್ಭುತವಾಗಿತ್ತು! ನಾವಂತೂ ನಾಲ್ಕೈದು ರೊಟ್ಟಿಗಳನ್ನು ಒಳಗಿಳಿಸಿದ್ದಾಯಿತು.

ಅಕ್ಕಿ ಹಿಟ್ಟನ್ನು ಸ್ವಲ್ಪ ಎಣ್ಣೆ ಸೇರಿಸಿದ ಕುದಿವ ನೀರಿಗೆ ಹಾಕಿ ಮುಚ್ಚಿಟ್ಟು, ಬಿಸಿ ಬಿಸಿಯಾಗಿಯೇ ಕಲಸಿ, ಲಟ್ಟಿಸಿ ಹೆಂಚಿನಲ್ಲಿ ಸ್ವಲ್ಪ ಬಿಸಿ ಮಾಡಿ ಕೆಂಡದಲ್ಲಿ ಸುಟ್ಟರೆ ಅದುವೇ ಉಬ್ಬು ರೊಟ್ಟಿ. ಕೆಂಡದಲ್ಲಿ ಬೇಯುತ್ತಾ ಉಬ್ಬಿದ ಅಂಗೈಯಗಲದ ಈ ರೊಟ್ಟಿಗಳನ್ನು ಅಲ್ಲಿನ ಸಿಹಿಗುಂಬಳಕಾಯಿ ಗೊಜ್ಜಿನೊಂದಿಗೆ ಸವಿಯುವುದೇ ಸ್ವರ್ಗ. ತುಂಬಾ ಕಡಿಮೆ ಸಂಖ್ಯೆಯ ಸಂಬಾರ ಪದಾರ್ಥಗಳನ್ನು ಬಳಸಿ ತೆಂಗಿನಕಾಯಿಯ ಜೊತೆ ಅರೆದು ಬೆರೆಸಿ ಮಾಡಿದ, ಹದವಾದ ಖಾರದ, ಹೊಟ್ಟೆಗೂ ಮನಸ್ಸಿಗೂ ಹಿತ ಕೊಡುವ ಒಂದು ಸಿಂಪಲ್ ಗೊಜ್ಜು ಅದು.

ಚಿಕ್ಕಮಗಳೂರು ಶೈಲಿಯ ರಸಂ, ಸಾಂಬಾರ್, ಅಲ್ಲೇ ಬೆಳೆದ ಎಳೆಯ ಕದಳಿ ಬಾಳೆಕಾಯಿಯ ಪಲ್ಯ ಇತ್ಯಾದಿಗಳ ರುಚಿ ಅಲ್ಲಿಯ ಪರಿಸರಕ್ಕೂ ಹವಾಮಾನಕ್ಕೂ ನಮ್ಮ ಶರೀರ ಮನಸ್ಸುಗಳಿಗೆ ಅತ್ಯಂತ ಆಪ್ತವಾಗುವ ಆಹಾರವೆನಿಸತೊಡಗಿತ್ತು.

ಬೆಳಗಿನ ಉಪಾಹಾರಕ್ಕೆ ತಯಾರಿಸಲಾದ ‘ಪಾಪುಟ್ಟು’ ಕೊಡಗು, ಚಿಕ್ಕಮಗಳೂರು ಭಾಗಗಳಲ್ಲಿ ತಯಾರಿಸಲಾಗುವ, ಅಲ್ಲಿನ ಜನಪ್ರಿಯ ತಿಂಡಿ. ಇದು ರುಚಿಯಲ್ಲಿ ಹೆಚ್ಚೂ ಕಡಿಮೆ ಕೇರಳದ ‘ಪುಟ್ಟು’ವನ್ನು ಹೋಲುತ್ತಿದ್ದು, ಹಾಲಿನಿಂದ ತಯಾರಿಸುವ ‘ಪುಟ್ಟು’ ಎಂಬರ್ಥದಲ್ಲಿ ‘ಪಾಲ್-ಪುಟ್ಟು’ ಎಂಬ ಹೆಸರು ಪಡೆದು ಕಾಲಕ್ರಮೇಣ ಈಗ ‘ಪಾಪುಟ್ಟು’ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಾ ಇದೆ ಎಂದು ಪ್ರತೀತಿ.

ಬಟ್ಟಲಿನಲ್ಲಿ ದಪ್ಪಕ್ಕೆ ಇಡ್ಲಿ ಹಿಟ್ಟನ್ನು ಎರೆದು ಬೇಯಿಸಿ ಬೆಂದ ನಂತರ ಕತ್ತರಿಸಿ ಬಡಿಸುವ ಸ್ವರೂಪದ ಇಡ್ಲಿಯನ್ನು ನೀವು ಸವಿದಿದ್ದರೆ ಕೇಳಿ, ಪಾಪುಟ್ಟು ಕೂಡಾ ಇದೇ ರೀತಿಯಲ್ಲಿ ಬಟ್ಟಲಿನಲ್ಲಿ ಹಬೆಯಲ್ಲಿ ಬೇಯಿಸಿ ಕತ್ತರಿಸಿ ಬಡಿಸಲಾಗುವ ‘ರೈಸ್ ಕೇಕ್’.

ಎರಡು ಗಂಟೆಗಳ ಕಾಲ ನೆನೆಸಿದ ಅಕ್ಕಿ ತರಿ, ತಾಜಾ ತೆಂಗಿನ ತುರಿ, ದಪ್ಪ ಹಾಲು, ರುಚಿಗೆ ಸಕ್ಕರೆ, ಉಪ್ಪು ಇವಿಷ್ಟನ್ನು ಬೆರೆಸಿ ಘಮಕ್ಕೆ ಬೇಕಾದಲ್ಲಿ ಏಲಕ್ಕಿ ಪುಡಿಯನ್ನೂ ಸೇರಿಸಿ ಈ ಹಿಟ್ಟನ್ನು ಸ್ವಲ್ಪ ಆಳವಿರುವ ಎರಡು ಪಾತ್ರೆಗಳಲ್ಲಿ ಸಮಭಾಗ ಮಾಡಿ ದಪ್ಪ ಪದರವಾಗಿ ಹರಡಿ ಹಬೆಯಲ್ಲಿ ಬೇಯಲು ಇಡುವುದು. ಬೆಂದ ಬಳಿಕ ಸ್ವಲ್ಪ ಆರಲು ಬಿಟ್ಟು ನಂತರ ಚೆಂದಕ್ಕೆ ಎಂಟು ಭಾಗಗಳಾಗಿ ಕತ್ತರಿಸಿದರೆ ಪಾಪುಟ್ಟು ಸವಿಯಲು ಸಿದ್ಧ. ಇದಕ್ಕೆ ಅಕ್ಕಿ ತರಿ, ಹಾಲು ಸಮ ಪ್ರಮಾಣದಲ್ಲಿ ಹಾಗೂ ತೆಂಗಿನ ತುರಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದನ್ನು ಮಾಂಸಾಹಾರಿಗಳು ಚಿಕನ್ ಜೊತೆ ಸವಿಯಲು ಇಷ್ಟಪಟ್ಟರೆ, ಸಸ್ಯಾಹಾರಿಗಳಿಗೆ ಕಡಲೆ ಸಾರು ಒಳ್ಳೆಯ ಸಾಥ್!

ಉಬ್ಬು ರೊಟ್ಟಿಯಾಗಲೀ, ಪಾಪುಟ್ಟು ಆಗಲೀ, ಎಣ್ಣೆ, ಬೆಣ್ಣೆ ಏನೇನೂ ಉಪಯೋಗಿಸದೆ ತಯಾರಿಸುವ ಆಹಾರವಾಗಿದ್ದು ಕಡಿಮೆ ಕ್ಯಾಲೊರಿಯಿಂದ ಕೂಡಿದೆ. ಅತಿಯಾದ ಸಿಹಿಯಿಲ್ಲದೇ, ಹೊಟ್ಟೆಗೂ ಮನಸ್ಸಿಗೂ ಆಹ್ಲಾದ ಕೊಡುವ ಇಲ್ಲಿಯ ಆಹಾರಗಳನ್ನು ಆರೋಗ್ಯದ ಸಮಸ್ಯೆಯ ಯೋಚನೆಯಿಲ್ಲದೆ ಯಾರು ಬೇಕಾದರೂ ತಿನ್ನಬಹುದೆಂದು ಅನಿಸಿತ್ತು.

ಪಾಪುಟ್ಟು ರುಚಿ ಹತ್ತಿಸಿಕೊಂಡಿದ್ದಾಯಿತು, ಒಳ್ಳೆಯ ಉಪಾಹಾರವೊಂದನ್ನು ಕಲಿತಿದ್ದೂ ಆಯಿತು. ಮನೆಯಲ್ಲಿ ಪ್ರಯೋಗ ಮಾಡಿ ಯಶಸ್ವಿಯೂ ಆದೆವು. ನೀವೂ ಅಷ್ಟೇ, ಚಿಕ್ಕಮಗಳೂರು ಅಥವಾ ಕೊಡಗಿಗೆ ಭೇಟಿ ಕೊಟ್ಟಾಗ ಅಲ್ಲಿಯ ಉಬ್ಬು ರೊಟ್ಟಿ, ಪಾಪುಟ್ಟುಗಳನ್ನು ಸವಿಯಲು ಮರೆಯದಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry