3

ಕೋರ್ಟ್‌ ಕಣ್ಣಲ್ಲಿ ಯಾವುದು ಪ್ರಾಪ್ತ ವಯಸ್ಸು?

ಶೇಖರ್‌ ಗುಪ್ತ
Published:
Updated:
ಕೋರ್ಟ್‌ ಕಣ್ಣಲ್ಲಿ ಯಾವುದು ಪ್ರಾಪ್ತ ವಯಸ್ಸು?

ಬಹುತೇಕ ಭಾರತೀಯರಿಗೆ ಜೂಡಿ ಶೈಂಡ್ಲಿನ್‌ ಹೆಸರು ಅಷ್ಟೇನೂ ಪರಿಚಿತವಲ್ಲ. ಜೂಡಿ ಶೈಂಡ್ಲಿನ್‌ ಬದಲಿಗೆ ಜಡ್ಜ್‌ ಜೂಡಿ ಎಂದು ಬಳಸಿದರೆ, ಕೆಲವರಿಗೆ ಅವರು ಅಮೆರಿಕದಲ್ಲಿ ಟೆಲಿವಿಷನ್‌ ಚಾನೆಲ್‌ವೊಂದರಲ್ಲಿ ನಡೆಸಿ ಕೊಡುವ ಜನಪ್ರಿಯ ಕಾರ್ಯಕ್ರಮ ನೆನಪಾಗಬಹುದು. ಅಮೆರಿಕದಲ್ಲಿ ನೆಲೆಸಿರುವವರು ಮತ್ತು ಭಾರತದಲ್ಲಿ ಅಮೆರಿಕದ ಜೀವನ ಶೈಲಿ ಪಾಲಿಸುವ ಅನೇಕರು ಮ್ಯಾನ್‌ಹಟನ್‌ ಕೌಟುಂಬಿಕ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಶೈಂಡ್ಲಿನ್‌ ಅವರು ನಡೆಸಿಕೊಡುವ ವಿಶಿಷ್ಟ ರಿಯಾಲಿಟಿ ಷೋ ಅನ್ನು ತಪ್ಪದೇ ವೀಕ್ಷಿಸುತ್ತಾರೆ. ಸಣ್ಣ ಪುಟ್ಟ ಕಲಹಗಳನ್ನು ಟೆಲಿವಿಷನ್‌ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನ್ಯಾಯ ಪಂಚಾಯ್ತಿ ಮೂಲಕ ಬಗೆಹರಿಸುವ ಜನಪ್ರಿಯ ರಿಯಾಲಿಟಿ ಷೋ ಇದಾಗಿದೆ. ನಿರಂತರವಾಗಿ 21 ವರ್ಷಗಳಿಂದ ಈ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಸಣ್ಣ ಪುಟ್ಟ ಕಲಹಗಳ ಅಹವಾಲುಗಳನ್ನು ಶೈಂಡ್ಲಿನ್‌ ಮುಂದೆ ಮಂಡಿಸುವವರು ಶೈಂಡ್ಲಿನ್‌ ನೀಡುವ ತೀರ್ಪನ್ನು ಒಪ್ಪಿಕೊಳ್ಳುವ ಕರಾರು ಪತ್ರಕ್ಕೆ ಸಹಿ ಹಾಕಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅಮೆರಿಕನ್ನರ ಪಾಲಿಗೆ ಇದೆಲ್ಲ ಸಹಜ. ಆದರೆ, ಇಂತಹ ಸಾಮಾನ್ಯ ಸಂಗತಿಗಳನ್ನು ಈ ಅಂಕಣದಲ್ಲಿ ಚರ್ಚಿಸುವ ಅಗತ್ಯ ಏನಿದೆ ಎಂಬ ಸಂದೇಹ ಓದುಗರ ಮನದಲ್ಲಿ ಸಹಜವಾಗಿಯೇ ಮೂಡಬಹುದು.ಈ ರಿಯಾಲಿಟಿ ಷೋಗೆ ಸಂಬಂಧಿಸಿದ ಮನಸ್ಸು ಕಲಕುವಂತಹ ಮತ್ತು ನಗೆ ಉಕ್ಕಿಸುವ ವಿಡಿಯೊ ತುಣುಕೊಂದು ಇತ್ತೀಚೆಗೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮುದ್ದಿನ ನಾಯಿ ಮರಿಯೊಂದು ತಮಗೇ ಸೇರಿದ್ದು ಎಂದು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ನ್ಯಾಯ ಕೇಳಿ ಸಲ್ಲಿಸಿದ್ದ ದೂರು ಅದಾಗಿತ್ತು. ನಾಯಿ ಮರಿ ಚಿಕಿತ್ಸೆಗೆ ಪಶುವೈದ್ಯ ನೀಡಿದ್ದ ವಿವರಗಳನ್ನು ಮಹಿಳೆಯು ತನ್ನ ಪರವಾಗಿ ದಾಖಲೆ ರೂಪದಲ್ಲಿ ಸಲ್ಲಿಸಿದ್ದಳು. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಶೈಂಡ್ಲಿನ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಚಾಣಾಕ್ಷತೆ ಮೆರೆದರು. ದಾಖಲೆ, ಹೇಳಿಕೆ ಬದಿಗಿಟ್ಟ ಅವರು, ಷೋ ತಾಣದಲ್ಲಿ ನಾಯಿ ಮರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನು ಕರೆಯಿಸಿ ನಾಯಿ ಮರಿಯನ್ನು ಕೆಳಗೆ ಇಳಿಸಿ ಬಿಟ್ಟು ಬಿಡಿ ಎಂದು ಆದೇಶಿಸಿದರು. ಕೆಳಗೆ ಇಳಿಯುತ್ತಿದ್ದಂತೆ ನಾಯಿ ಮರಿಯು ಪುರುಷನ ಬಳಿ ಓಡಿ ಹೋಗಿ ಸಂತಸದಿಂದ ಕುಣಿದಾಡತೊಡಗಿತು. ಆತನೂ ಖುಷಿಯಿಂದ ತನ್ನೆರಡೂ ಕೈಗಳನ್ನು ಚಾಚಿ ನಾಯಿ ಮರಿಯನ್ನು ಎದೆಗವಚಿಕೊಂಡ. ಕಾರ್ಯಕ್ರಮದಲ್ಲಿ ನೆರೆದವರ ಕಣ್ಣಂಚು ತೇವಗೊಂಡಿದ್ದವು. ತೀರ್ಪಿನ ಬಗ್ಗೆ ಅವರೆಲ್ಲ ಪ್ರಶಂಸೆಯನ್ನೂ ವ್ಯಕ್ತಪಡಿಸಿದರು.ಕಳೆದ ವಾರ ಪತ್ರಿಕೆಗಳಲ್ಲಿ ಪ್ರಕಟವಾದ ಗಮನ ಸೆಳೆಯುವ ವರದಿಗೂ ಈ ನಾಯಿ ಮರಿಯ ಮಾಲೀಕತ್ವ ಕುರಿತ ಸರಳ ತೀರ್ಪಿಗೂ ಏನೋ ಸಂಬಂಧ ಇದೆ ಎಂದು ಅನೇಕರು ಚಿಂತಿಸಿರಲಿಕ್ಕೂ ಸಾಕು. ನಿಮಗೆ ತಕ್ಷಣ ಹೊಳೆಯದಿದ್ದರೆ ನಾನು ಕೆಲ ಸುಳಿವುಗಳನ್ನು ನೀಡುವೆ. ನಮ್ಮ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಶಿಷ್ಟ ಪ್ರಕರಣದ ವಿಚಾರಣೆ ಅದಾಗಿತ್ತು. ನಿಮಗೆ ಯಾವ ಪ್ರಕರಣ ಎಂದು ನೆನಪಾಗದಿದ್ದರೆ ನಾನು ಇನ್ನಷ್ಟು ವಿವರಗಳನ್ನು ನೀಡಬೇಕಾಗುತ್ತದೆ. 24 ವರ್ಷದ ಯುವತಿಯು ಯಾರಿಗೆ ಸೇರಬೇಕು, ಆಕೆ ಯಾರ ಸ್ವತ್ತು ಎಂದು ನಿರ್ಧರಿಸುವ ಕುರಿತ ವಿಚಾರಣೆ ಅದಾಗಿತ್ತು. ಆಕೆಯ ಪಾಲಕರು ಮಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಪ್ರತಿಪಾದಿಸಿದ್ದರೆ, ‘ಆಕೆ ನನ್ನ ಹೆಂಡತಿ. ಹೀಗಾಗಿ ಆಕೆ ನನಗೆ ಸೇರಿದವಳು’ ಎಂದು ಆಕೆಯ ಗಂಡ ವಾದಿಸಿದ್ದ. ಅಮೆರಿಕದಲ್ಲಿ ನಾಯಿ ಮರಿಯ ಮಾಲೀಕತ್ವ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರೆ, ಇಲ್ಲಿ ನಮ್ಮಲ್ಲಿ ಯುವತಿಯೊಬ್ಬಳ ಮೇಲೆ ಹಕ್ಕು ಸ್ಥಾಪಿಸುವುದು ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣ ಮೂಲತಃ ಕೇರಳದ್ದು. ಯುವತಿಯು ಮುಸ್ಲಿಂ ಯುವಕನನ್ನು ಮದುವೆಯಾಗಿರುವುದನ್ನು ಅಲ್ಲಿನ ಹೈಕೋರ್ಟ್‌ ಅನೂರ್ಜಿತಗೊಳಿಸಿತ್ತು. ಈ ತೀರ್ಪಿನ ವಿರುದ್ಧ ಆಕೆಯ ಗಂಡ ಸುಪ್ರೀಂಕೋರ್ಟ್‌ ಮೆಟ್ಟಲು ಏರಿದ್ದ.ನಮ್ಮ ಗೌರವಾನ್ವಿತ ಸುಪ್ರೀಂಕೋರ್ಟ್‌, ಯುವತಿ ಅಖಿಲಾಳನ್ನು ನೀನು ಯಾರ ಬಳಿ ಹೋಗಲು ಇಷ್ಟಪಡುವೆ, ಯಾವ ಧರ್ಮದ, ಯಾರ ಮನೆಗೆ ಹೋಗಲು ನಿನಗಿಷ್ಟ ಎಂದು ಪ್ರಶ್ನಿಸಲೇ ಇಲ್ಲ. ಅದರ ಬದಲಿಗೆ ಪೀಠವು, ಭಯೋತ್ಪಾದನೆ ನಿಗ್ರಹ ತನಿಖಾ ಸಂಸ್ಥೆಗೆ (ಎನ್‌ಐಎ) ವಾಸ್ತವಾಂಶ ಕಲೆ ಹಾಕಲು ಸೂಚಿಸಿತು. ಈ ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಒಬ್ಬರ ಮೇಲುಸ್ತುವಾರಿಗೂ ಅವಕಾಶ ಮಾಡಿಕೊಟ್ಟಿದೆ. ತನಿಖಾ ಸಂಸ್ಥೆಯು ತನ್ನ ವರದಿ ನೀಡಿದ ನಂತರವೇ ಯಾರ ಬಳಿಗೆ ಹೋಗಲು ನಿನಗಿಷ್ಟ ಎಂದು ಮಹಿಳೆಯನ್ನು ಪ್ರಶ್ನಿಸಬೇಕು ಎಂದೂ ಕೋರ್ಟ್‌ ತಾಕೀತು ಮಾಡಿದೆ. ಶೈಂಡ್ಲಿನಾ ರಿಯಾಲಿಟಿ ಷೋನಲ್ಲಿ ತಾನು ಯಾರ ಬಳಿಗೆ ಹೋಗಬೇಕು ಎನ್ನುವ ಸ್ವಾತಂತ್ರ್ಯವನ್ನು ನಾಯಿ ಮರಿಯ ವಿವೇಚನೆಗೆ ಬಿಟ್ಟುಕೊಟ್ಟಂತಹ ಸರಳ ನ್ಯಾಯದಾನ ಅನುಸರಿಸದ ನಮ್ಮ ಕೋರ್ಟ್‌, ತಾನು ಯಾರ ಬಳಿಗೆ ಹೋಗಬೇಕು ಎನ್ನುವ ಮುಕ್ತ ಸ್ವಾತಂತ್ರ್ಯವನ್ನು ಯುವತಿಗೆ ಕೊಡಲು ಮನಸ್ಸು ಮಾಡಲಿಲ್ಲ.ಕೋರ್ಟ್‌ನಲ್ಲಿ ನಡೆದ ಈ ಪ್ರಕರಣದ ವಿಚಾರಣೆಯಲ್ಲಿ ಹುಡುಗಾಟಿಕೆಗೆ ಅವಕಾಶ ಇಲ್ಲ. ಈ ಪ್ರಕರಣದ ಗಂಭೀರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಪೀಠದಲ್ಲಿ ಕುಶಾಗ್ರಮತಿಯ ಮತ್ತು ಯುವ ಮನಸ್ಸಿನ ಮುಖ್ಯ ನ್ಯಾಯಮೂರ್ತಿ ಜೆ. ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರು ಇದ್ದಾರೆ ಎನ್ನುವುದೂ ಇಲ್ಲಿ ಗಮನಿಸಬೇಕಾದ ಸಂಗತಿ. ಪ್ರಕರಣದಲ್ಲಿ ಘಟಾನುಘಟಿ ನ್ಯಾಯವಾದಿಗಳಾದ ಕಪಿಲ್‌ ಸಿಬಲ್‌, ಇಂದಿರಾ ಜೈಸಿಂಗ್‌ ಒಂದೆಡೆ ಇದ್ದರೆ, ಶ್ಯಾಮ್‌ ಮತ್ತು ಮಾಧವಿ ದಿವಾನ್‌ ಇನ್ನೊಂದೆಡೆ ಇದ್ದಾರೆ. ಇದೊಂದು ತುಂಬ ಮಹತ್ವದ ಪ್ರಕರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಪೀಠವು ನೀಡಿದ ಆದೇಶಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಪೀಠ ತಳೆದಿರುವ ನಿಲುವನ್ನು ಟೀಕಿಸಿದ್ದರೆ, ಇನ್ನೂ ಹಲವರು ಅದನ್ನು ಶ್ಲಾಘಿಸಿದ್ದಾರೆ. ಕೋರ್ಟ್‌, ನ್ಯಾಯೋಚಿತ ನಿರ್ಧಾರಕ್ಕೆ ಬರಲು, ಕೆಲ ಸಂಗತಿಗಳು ಸ್ಪಷ್ಟಗೊಳ್ಳಬೇಕಾಗಿದೆ. ನ್ಯಾಯಮೂರ್ತಿಗಳು ಇನ್ನೂ ಈ ಪ್ರಕರಣದ ಕಾನೂನಾತ್ಮಕ ಅರ್ಹತೆಯನ್ನು ನಿರ್ಧರಿಸಬೇಕಾಗಿದೆ. ವಾಸ್ತವ ಅಂಶಗಳನ್ನು ಕಲೆ ಹಾಕಲು ಒಂದು ಪುಟದ ಆದೇಶವನ್ನಷ್ಟೇ ನೀಡಲಾಗಿದೆ. ‘ಎನ್‌ಐಎ’ದ ತನಿಖೆಯು ನಿಷ್ಪಕ್ಷಪಾತತನದಿಂದ ಕೂಡಿದ್ದರೆ ಯುವತಿಯ ಪರವಾಗಿರುವ ಫಿರ್ಯಾದಿದಾರರು ಅದನ್ನು ಒಪ್ಪಿಕೊಳ್ಳಬಹುದು. ಅದನ್ನು ಅವರು ನಿರಾಕರಿಸಲೂಬಹುದು. ತನಿಖಾ ವರದಿ ಸಲ್ಲಿಕೆಯಾದ ನಂತರ ನ್ಯಾಯಮೂರ್ತಿಗಳು ಮಹಿಳೆಯ ಅಹವಾಲನ್ನು ಗೋಪ್ಯವಾಗಿ ಆಲಿಸಬೇಕು. ಇದಾದ ನಂತರವೇ ಪೀಠವು ತನ್ನ ಅಂತಿಮ ತೀರ್ಪನ್ನು ನೀಡಬೇಕು.ಈ ಪ್ರಕರಣದ ಇಲ್ಲಿಯವರೆಗಿನ ವಿವರಗಳು ಹೀಗಿವೆ. ಈ ಪ್ರಕರಣದ ಕೇಂದ್ರಬಿಂದುವಾಗಿರುವ ಯುವತಿ ಅಖಿಲಾ, ಈಗ ತನ್ನನ್ನು ಹದಿಯಾ ಎಂದು ಕರೆಯಿಸಿಕೊಳ್ಳಲು ಇಷ್ಟಪಡುತ್ತಾಳೆ. ಕೊಟ್ಟಾಯಂನ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಾಳೆ. ಮುಸ್ಲಿಂ ಸಂಪ್ರದಾಯವಾದಿ ಸಂಘಟನೆಗಳತ್ತ ಒಲವು ಬೆಳೆಸಿಕೊಂಡ ಮಗಳ ವರ್ತನೆಯಿಂದ ವ್ಯಾಕುಲಗೊಂಡ ಪಾಲಕರು, ತಮ್ಮ ವಶದಲ್ಲಿ ಇದ್ದರೆ ಮಾತ್ರ ಆಕೆ ಸುರಕ್ಷಿತವಾಗಿ ಇರಲಿದ್ದಾಳೆ. ಹೀಗಾಗಿ ಆಕೆಯನ್ನು ನಮ್ಮ ಸುಪರ್ದಿಗೆ ಒಪ್ಪಿಸಿ ಎಂದು ಕೇರಳ ಹೈಕೋರ್ಟ್‌ನ ಮೆಟ್ಟಿಲು ಏರಿದ್ದರು. 2016ರ ಜನವರಿಯಲ್ಲಿ ಹೈಕೋರ್ಟ್‌ ಪೀಠವು ಪಾಲಕರ ಅರ್ಜಿಯನ್ನು ತಿರಸ್ಕರಿಸಿತ್ತು. ಯುವತಿ ವಯಸ್ಕಳಾಗಿದ್ದು, ಆಕೆ ತನ್ನ ಬದುಕನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಹೊಂದಿದ್ದಾಳೆ ಎಂದು ಅಭಿಪ್ರಾಯಪಟ್ಟಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ ಪಾಲಕರು ಹೈಕೋರ್ಟ್‌ನಲ್ಲಿ ಹೊಸ ಮೊಕದ್ದಮೆ ದಾಖಲಿಸಿದ್ದರು. ಈ ಮಧ್ಯೆ ಅಖಿಲಾ, ನಿಷೇಧಕ್ಕೆ ಒಳಗಾಗದ ಮುಸ್ಲಿಂ ಸಂಘಟನೆ ಸೇರಿಕೊಂಡಿದ್ದಳು. ಈ ಬಾರಿ, ಹೈಕೋರ್ಟ್‌ನ ಇನ್ನೊಂದು ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ವಿಚಾರಣೆ ನಡೆಯುವ ಒಂದು ಹಂತದಲ್ಲಿ ಅಖಿಲಾ, ಶೆಫಿ ಖಾನ್‌ ಎಂಬಾತನ ಕೋರ್ಟ್‌ ಕಲಾಪಕ್ಕೆ ಹಾಜರಾಗಿ ತಾನು ಆತನನ್ನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು.ಇದೊಂದು ನಕಲಿ ಮದುವೆಯಾಗಿದೆ ಎನ್ನುವ ನಿಲುವಿಗೆ ಬಂದಿದ್ದ ಪೀಠವು ಅದನ್ನು ಅನೂರ್ಜಿಗೊಳಿಸಿತ್ತು. ಯುವತಿಯು, ತನಗೆ ಯಾವುದು ಒಳಿತು ಎನ್ನುವುದನ್ನು ನಿರ್ಧರಿಸುವಷ್ಟು ಪ್ರಬುದ್ಧೆಯಾಗಿಲ್ಲ. ಹೀಗಾಗಿ ಆಕೆಯನ್ನು ಪಾಲಕರ ಸುಪರ್ದಿಗೆ ಒಪ್ಪಿಸುವುದೇ ಒಳಿತು ಎಂದು ಪೀಠ ಅಭಿಪ್ರಾಯಪಟ್ಟಿತ್ತು. ಜತೆಗೆ, ಪರಿತ್ಯಕ್ತ ಮಕ್ಕಳ ಪಾಲನೆ – ಪೋಷಣೆ ಹೊಣೆಯನ್ನು ಸರ್ಕಾರಕ್ಕೆ ಒಪ್ಪಿಸುವ ನಿಯಮವನ್ನು ಈ ಪ್ರಕರಣದಲ್ಲಿಯೂ ಅನ್ವಯಿಸಿತು. 24 ವರ್ಷದ ವೈದ್ಯೆಯ ಪಾಲನೆಯ ಹೊಣೆಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿತ್ತು.

ಇನ್ನೊಂದು ಆಸಕ್ತಿದಾಯಕ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಮೊದಲ ಬಾರಿಗೆ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಕೇರಳ ಹೈಕೋರ್ಟ್‌ನ ಇಬ್ಬರು ಸದಸ್ಯರ ಪೀಠದಲ್ಲಿ ಹಿಂದು ಮತ್ತು ಮುಸ್ಲಿಂ ನ್ಯಾಯಮೂರ್ತಿಗಳು ಇದ್ದರು. ಎರಡನೆ ಬಾರಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಪೀಠದಲ್ಲಿನ ಇಬ್ಬರೂ ನ್ಯಾಯಮೂರ್ತಿಗಳು ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಿಬ್ಬರು ನೀಡಿದ್ದ ತೀರ್ಪನ್ನು, ಅಖಿಲಾ (ಹದಿಯಾ) ಮತ್ತು ಆಕೆ ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿರುವ ವ್ಯಕ್ತಿ ಈಗ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿಗಳು, ದೇಶಿ ನ್ಯಾಯಾಂಗದ ಮಾನದಂಡಗಳ ಪ್ರಕಾರ, ಹೈಕೋರ್ಟ್‌ ಆದೇಶವನ್ನು ಇದುವರೆಗೂ ಪರಾಮರ್ಶೆ ನಡೆಸಿಲ್ಲ. ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಮತ್ತು ಕೆಲ ಸಮಸ್ಯಾತ್ಮಕ ಸಂಗತಿಗಳನ್ನು ಆಧರಿಸಿ ನೀಡಿರುವ ಆದೇಶದ ಕುರಿತು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಆಲೋಚನೆ ಏನು ಇರಬಹುದು ಎನ್ನುವುದು ಈ ಪ್ರಕರಣದಲ್ಲಿ ತುಂಬ ಮಹತ್ವ ಪಡೆದಿದೆ. ಅಂತಹ ಕೆಲ ಗೊಂದಲಕಾರಿ ಸಂಗತಿಗಳು ಇಲ್ಲಿವೆ.

* ತನ್ನ ಬದುಕು ಮತ್ತು ಭವಿಷ್ಯದ ಬಗ್ಗೆ ಅಖಿಲಾ ಖಚಿತ ನಿಲುವನ್ನೇ ಹೊಂದಿಲ್ಲವೆ? ಆಕೆಯ ಪಾಲಕರಿಂದ ದೂರ ಮಾಡಲು ಹವಣಿಸಿದ ಇತರರ ಅಣತಿಯಂತೆ ಆಕೆ ವರ್ತಿಸುತ್ತಿರುವಳೇ?

* ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವವರು ತಮ್ಮ ಮಗಳನ್ನು ವಿದೇಶಕ್ಕೆ ಸಾಗಿಸಲಿದ್ದಾರೆ ಎಂದು ಫಿರ್ಯಾದಿದಾರರು ದೂರಿದ್ದಾರೆ. ತಮ್ಮ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಎನ್ನುವ ಭೀತಿ ಪಾಲಕರನ್ನು ಕಾಡುತ್ತಿದೆ. ಮುಸ್ಲಿಂ ಯುವಕನ ಫೇಸ್‌ಬುಕ್‌ ಪೋಸ್ಟ್‌ ಆಧರಿಸಿ ಹೇಳುವುದಾದರೆ, ತೀವ್ರಗಾಮಿಗಳ ಬಗ್ಗೆ ಆತನಲ್ಲಿ ಒಲವು ಇರುವುದು ಸ್ಪಷ್ಟಗೊಳ್ಳುತ್ತದೆ.

* ಬದುಕಿನಲ್ಲಿ ತನಗೇನು ಬೇಕು ಎನ್ನುವುದನ್ನು ನಿರ್ಧರಿಸುವ ಸ್ವಾತಂತ್ರ್ಯನೀಡುವುದರಿಂದ ಯುವತಿ ಸುರಕ್ಷಿತವಾಗಿ ಇರುತ್ತಾಳೆ ಎನ್ನುವ ವಾದ ತಮಗೆ ಸಮಾಧಾನ ತಂದಿಲ್ಲ. ಆಕೆಗೆ ಪಾಲಕರ ರಕ್ಷಣೆ, ಮಾರ್ಗದರ್ಶನ ಮತ್ತು ಕಾಳಜಿಯ ಅಗತ್ಯ ಇದೆ.

* ಆಕೆ ಇನ್ನೂ 24 ವರ್ಷದವಳು ಎನ್ನುವುದನ್ನು ಪರಿಗಣಿಸಿ ಹೇಳುವುದಾದರೆ, ಆಕೆ ತನ್ನ ಪಾಲಕರ ಬಳಿ ಮಾತ್ರ ಸುರಕ್ಷಿತವಾಗಿ ಇರಲಿದ್ದಾಳೆ.

* 24 ವರ್ಷದವಳನ್ನು ಅನ್ಯರು ಹಲವಾರು ಬಗೆಯಲ್ಲಿ ಶೋಷಿಸಬಹುದಾಗಿದೆ.

* ಮದುವೆಯಾಗುವುದು ಆಕೆಯ ಬದುಕಿನಲ್ಲಿನ ಅತ್ಯಂತ ಮಹತ್ವದ ನಿರ್ಧಾರ. ಮದುವೆ ಸಮಾರಂಭದಲ್ಲಿ ಆಕೆಯ ಪಾಲಕರು ಸಕ್ರಿಯವಾಗಿ ಭಾಗವಹಿಸಿದ್ದರೆ ಮಾತ್ರ ಅದನ್ನು ಪರಿಗಣಿಸಬಹುದು.

* ಈ ಎಲ್ಲ ಕಾರಣಗಳಿಗಾಗಿ ಆಕೆಯನ್ನು ಪಾಲಕರ ವಶಕ್ಕೆ ಒಪ್ಪಿಸುವುದೇ ಹೆಚ್ಚು ಸೂಕ್ತವಾದ ನಿರ್ಧಾರವಾಗಿರಲಿದೆ. ಇದರಿಂದ ಪಾಲಕರು ಆಕೆಯ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗಲಿದೆ. ಪಾಲಕರ ಆಶ್ರಯದಲ್ಲಿ ಇದ್ದುಕೊಂಡೇ ಆಕೆ ಹೌಸ್ ಸರ್ಜನ್ಸಿ ಕೋರ್ಸ್‌ ಪೂರ್ಣಗೊಳಿಸಿ ವೈದ್ಯಕೀಯ ವೃತ್ತಿಗೆ ಸಂಪೂರ್ಣವಾಗಿ ಅರ್ಹಳಾಗಲಿದ್ದಾಳೆ. ಇದರಿಂದ ಆಕೆ ತನ್ನ ಸ್ವಂತ ಕಾಲುಗಳ ಮೇಲೆ ನಿಲ್ಲಲು ನೆರವಾಗಲಿದೆ. ಇವಿಷ್ಟು ಈ ಪ್ರಕರಣ ಕುರಿತ ಆಸಕ್ತಿದಾಯಕ ಸಂಗತಿಗಳಾಗಿವೆ.ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಸುವುದೇ ಸೂಕ್ತ ಎನ್ನುವುದು ಮನದಟ್ಟಾದರೆ ಸುಪ್ರೀಂಕೋರ್ಟ್‌ ಆ ಬಗ್ಗೆ‌, ತನಗಿಷ್ಟದ ಸಂಸ್ಥೆಯಿಂದ ವಿಚಾರಣೆ ನಡೆಸಲು ಆದೇಶಿಸಬಹುದು.24 ವರ್ಷದ ಯುವತಿಯಲ್ಲಿ ತನ್ನ ಭವಿಷ್ಯವನ್ನು ನಿರ್ಧರಿಸುವಷ್ಟು ಪ್ರಬುದ್ಧತೆ ಬೆಳೆದಿರುವುದಿಲ್ಲವೇ. ನ್ಯಾಯಮೂರ್ತಿಗಳು ಪ್ರಾಪ್ತ ವಯಸ್ಸನ್ನು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿ ನಿರ್ಧರಿಸುವರೇ. ಹಿರಿಯರು ನಿರ್ಧರಿಸುವ ಮದುವೆಗಳಿಗೆ (ಅರೇಂಜ್ಡ್‌ ಮ್ಯಾರೇಜ್‌) ಸಂಬಂಧಿಸಿದಂತೆ ನ್ಯಾಯಾಂಗವು ಹೊಸ ಕಟ್ಟಳೆಗಳನ್ನು ಘೋಷಿಸುವುದೇ. ಮದುವೆಗೆ ಪಾಲಕರ ಪೂರ್ವಭಾಗಿ ಸಮ್ಮತಿ ಅನಿವಾರ್ಯವೇ. 24 ವರ್ಷದ ಯುವತಿಗೆ ಬರೀ ಪಾಲಕರಿಂದ ಮಾತ್ರ ರಕ್ಷಣೆ, ಮಾರ್ಗದರ್ಶನ ಮತ್ತು ಕಾಳಜಿ ದೊರೆಯುವುದೇ. ವ್ಯಕ್ತಿಯೊಬ್ಬನನ್ನು ಅಪಾಯಕಾರಿ ತೀವ್ರಗಾಮಿ ಎಂದು ಘೋಷಿಸಲು ಫೇಸ್‌ಬುಕ್‌ ಪೋಸ್ಟ್‌ ಒಂದೇ ಸಾಕಾಗುವುದೇ– ಇಂತಹ ಹತ್ತಾರು ಪ್ರಶ್ನೆಗಳಿಗೆ ಈ ಪ್ರಕರಣದಲ್ಲಿ ಉತ್ತರ ಸಿಗಬೇಕಾಗಿದೆ.ಇಷ್ಟೆಲ್ಲ ವಿವರಗಳ ನಂತರ, ನಾಯಿ ಮರಿ ಪ್ರಕರಣದಲ್ಲಿ ಜಡ್ಡ್‌ ಜೂಡಿ ನೀಡಿದ ತೀರ್ಪನ್ನು ನಾವಿಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ. ನಾಯಿ ಮರಿ ತನ್ನ ನಾಲ್ಕು ಕಾಲುಗಳ ಮೇಲೆ ನಿಂತು ತನ್ನ ಬಗ್ಗೆ ನಿಜವಾದ ಕಾಳಜಿ ತೋರುವವರು ಯಾರು, ತಾನು ಯಾರ ಆಶ್ರಯದಲ್ಲಿ ಸುರಕ್ಷಿತವಾಗಿ ಇರಬಲ್ಲೆ ಎನ್ನುವುದನ್ನು ಸ್ವತಂತ್ರವಾಗಿ ನಿರ್ಧರಿಸಿರುತ್ತದೆ. ಆದರೆ ನಾವು ಮಾತ್ರ , 24 ವರ್ಷದ ಯುವತಿಗೆ ತನ್ನೆರಡು ಕಾಲಗಳ ಮೇಲೆ ಸ್ವತಂತ್ರವಾಗಿ ನಿಲ್ಲಲು ಸಾಧ್ಯ ಎನ್ನುವುದನ್ನು ನಂಬಲೂ ಸಿದ್ಧರಿಲ್ಲ.(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry